ನನ್ನ ಇತ್ತೀಚಿನ ಓದು- ಒಂದು ಅಪ್ಡೇಟ್

ನನ್ನ ಇತ್ತೀಚಿನ ಓದು- ಒಂದು ಅಪ್ಡೇಟ್

ನಾನು ಓದನ್ನು ನಿಲ್ಲಿಸ್ಬೇಕು ಅಂತ ಅಂದ್ಕೊಳ್ತಲೇ ಈ ಮೂರು ತಿಂಗಳಲ್ಲಿ ವಿಶ್ವಕಥಾಕೋಶದ ೨೧ ಸಂಪುಟ ಓದಿದೆ.

ಅಲ್ಲಿನ ಕಥೆಗಳು ಕೆಲವು ತುಂಬಾ ಚೆನ್ನಾಗಿದ್ದವು. ಜೀವಮಾನ ಮರೆಯದಂತಹ ಕತೆಗಳು ಕೆಲವು. ಈಗಾಗಲೇ ಕನ್ನಡಕ್ಕೆ ಅನುವಾದವಾಗಿ ಓದಿದ್ದ ಕೆಲವು ಕತೆಗಳು -   ಫ್ರೆಂಚ್ ಭಾಶೆಯ 'ಕೊನೆಯ ಪಾಠ', 'ನಿಗೂಢ ಸೌಧ'  ಮತ್ತೆ ಭೆಟ್ಟಿಯಾದವು.  'ಕತ್ತಲಲ್ಲಿ ಹುಟ್ಟಿತೊಂದು ಭಾಶೆ'  ಬಹುಕಾಲ ನೆನಪಿನಲ್ಲಿ ಉಳಿವ ಚಮತ್ಕಾರೀ ಕತೆ .  ಈ ವಿಶ್ವಕಥಾಕೋಶದೊಂದಿಗಿನ ಬೋನಸ್ ಎಂದರೆ ಜಗತ್ತಿನ ಬೇರೆ ಬೇರೆ ಭಾಗಗಳ ರಾಜಕೀಯ , ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿಕ ಇತಿಹಾಸದ ಪರಿಚಯ ಕೊಡುವ ಮುನ್ನುಡಿಗಳು! . ಇಪ್ಪತ್ತೈದು ವರ್ಷದ ಹಿಂದಿನ ಈ ಸಂಪುಟವನ್ನು  ಮರುಮುದ್ರಣ ಮಾಡುವಾಗ ಈ ನಡುವೆ ಆದ ಬೆಳವಣಿಗೆಗಳನ್ನು ಸೇರಿಸಿ ( ಉದಾ ಬರ್ಲಿನ್ ಗೋಡೆ ಕೆಳಗುರುಳಿದ್ದು, ಅಮೇರಿಕದೊಂದಿಗೆ ಸೆಣೆಸುತ್ತಿದ್ದ ಬಲಾಢ್ಯ ಸೋವಿಯತ್ ಒಕ್ಕೂಟ ಒಡೆದು ನುಚ್ಚುನೂರಾದದ್ದು) ಅಪ್ಡೇಟ್ ಮಾಡಿದ್ದರೆ ಚೆನ್ನಾಗಿರುತ್ತಿತ್ತು.

 'ಪಾಚಿ ಕಟ್ಟಿದ ಪಾಗಾರ' ಎಂಬ ದೊಡ್ಡ ಗಾತ್ರದ ಕಾದಂಬರಿ , ಗಣೇಶಯ್ಯನವರ ಕನಕಮುಸುಕು,ಕರಿಸಿರಿಯಾನ , ಆ ಟೇಲ್ ಅಫ್ ಟು ಸಿಟೀಸ್ ನ ಕನ್ನಡ ಸಂಗ್ರಹಾನುವಾದ  ಓದಿದ್ದಾಯಿತು.

(ಅಂದ ಹಾಗೆ ಒಂದು ಸಣ್ಣ ಅನಿಸಿಕೆ- ಬಾಲಿಶ ಅನ್ನಬಹುದೇನೋ, ಈ 'ಟೇಲ್ ಅಫ್ ಟು ಸಿಟೀಸ್', ಹಿಂದೆ ಓದಿದ ಸುಮಾರು ಸಾವಿರ ಪುಟದ 'ಗಾನ್ ವಿಥ್ ದ  ವಿಂಡ್' ಮತ್ತು ೩೦೦ ಪುಟಗಳ ಗ್ರಾಮಾಯಣ ಓದುವದು ಸ್ವಲ್ಪ ಕಠಿಣವೇ ಆಯಿತು . ಪಾತ್ರಗಳ ಸ್ವಭಾವ , ವೇಶಭೂಷಣಗಳಾಗಲೀ ,  ಅವುಗಳ ಮನಸ್ಸಿನ ಒಳತೋಟಿಯಾಗಲೀ  ಇಲ್ಲ, A , B , C ಯಂತಹ ಏನನ್ನೂ ಬಿಟ್ಟು ಕೊಡದ ಪಾತ್ರಗಳ ಹೆಸರು ಬೇರೆ! A ಯು ಹೀಗೆ ಮಾಡಿದನು, Bಯು ಅಲ್ಲಿಗೆ ಹೋದನು , C ಯು ಹೀಗೆ ಎಂದನು . ಮತ್ತೆ B ಯು ಹೀಗೆ , ಮತ್ತೆ ಅದಾವನೋ X ಹಾಗೆ . ಆ A ಯು   ಹೀಗೆ ... ಎಂದೆಲ್ಲ ಕತೆ ಇದ್ದರೆ ಓದುವವರ ಕಷ್ಟ ಹೇಳಲಾಗದು. )

ಸೀಡೀಯಿಂದ ಎರಡು ವರ್ಷಗಳ ಅಪರಂಜಿ, ಮೂರು ವರ್ಷಗಳ ಕೊರವಂಜಿ ಹಾಸ್ಯ ಪತ್ರಿಕೆಗಳ ಸಂಚಿಕೆಗಳನ್ನು  ಓದಿದ್ದಾಯಿತು.

ಆರಂಭಿಕ ಕೊರವಂಜಿ ಸಂಚಿಕೆಗಳು ೧೯೪೨-೪೫ ಕ್ಕೆ ಸೇರಿದ್ದವು . ಅದರಲ್ಲಿ  ಸುವಿಖ್ಯಾತ  ವ್ಯಂಗ್ಯ ಚಿತ್ರಕಾರ , ಹೆಮ್ಮೆಯ ಕನ್ನಡಿಗ ಆರ್ ಕೆ ಲಕ್ಷ್ಮಣ್ ಅವರ ಆರಂಭಿಕ ವ್ಯಗ್ಯಚಿತ್ರಗಳನ್ನು , ಅಂದಿನ ಕಾಲದ ಜಾಹಿರಾತುಗಳನ್ನು , ಸಿನಿಮಾ ಜಾಹಿರಾತುಗಳನ್ನು ನೋಡಬಹುದು , ಜತೆ ಜತೆಗೇ ಅಂದಿನ ಸಮಾಜ , ಎರಡನೇ ಮಹಾಯುದ್ಧ , ರೇಷನ್ ಯುಗ , ಅಭಾವ ಯುಗದ ಪರಿಚಯ   ಹೊಂದಬಹುದು!  

ಸದ್ಯಕ್ಕೆ ಕಣ್ಣ ಮುಂದೆ 'ಶೋಧ' ಪತ್ತೇದಾರಿ ಕಥೆಗಳ  ಸಂಕಲನ , ಚಾರ್ಮಿನಾರ್, ಸತ್ಯಜಿತ್ ರೇ ಕಥೆಗಳು, ಗಣೇಶಯ್ಯನವರದೇ ಚಿತಾದಂತ , ೪೦ ವರ್ಶಗಳ ಅಪರಂಜಿ ಮತ್ತು ಕೊರವಂಜಿ ಇವೆ !

ಬಹುದಿನಗಳಿಂದ  ನನ್ನ ಓದಿನ ಅಪ್ಡೇಟ್ ಕೊಟ್ಟಿರಲಿಲ್ಲ. ಈಗ ಸಮಯ ಕೂಡಿ ಬಂತು. ಕೊಟ್ಟಿದ್ದೇನೆ!

 

 

Rating
No votes yet

Comments