ಅಮರ..ಮಧುರ..ಪ್ರೇಮ = ಭಾಗ 8
ದಿನಗಳು ಉರುಳುತ್ತಿದ್ದ ಹಾಗೆ ಮಧುರ ಹಾಗೂ ಅಮರನ ಗೆಳೆತನ ಗಟ್ಟಿಯಾಗುತ್ತಿತ್ತು. ಹೋಗಿ ಬನ್ನಿ ಮಾಯವಾಗಿ ಆ ಜಾಗದಲ್ಲಿ ಹೋಗೋ ಬಾರೋ ಸಲಿಗೆ ಬಂದಿತ್ತು. ಮುಂಚಿನ ಹಾಗೆ ಅಮರ್ ಪ್ರೇಮಗೆ ಫೋನ್ ಮಾಡುವುದನ್ನು ನಿಲ್ಲಿಸಿದ್ದ. ಕಾಲೇಜಿನಲ್ಲಿ ಸಿಕ್ಕಿದಾಗ ಎಷ್ಟು ಮಾತೋ ಅಷ್ಟೇ. ಮಧುರಳ ಜೊತೆ ಬರೀ ಫೇಸ್ ಬುಕ್ ನಲ್ಲಿ ಇಲ್ಲವಾದರೆ ಪ್ರೇಮ ಜೊತೆಯಲ್ಲಿ ಇಲ್ಲದಿದ್ದಾಗ ಫೋನ್ ನಲ್ಲಿ ನಡೆಯುತ್ತಿತ್ತು ಇವರ ಸಂಭಾಷಣೆ. ಅಮರನಿಗೆ ಪ್ರೇಮಗಿಂತ ಮಧುರಳ ಸಾಂಗತ್ಯ ಬಹಳ ಹಿತವೆನಿಸುತ್ತಿತ್ತು.
ಎಂದಿನಂತೆ ಅಂದು ರಾತ್ರಿ ಊಟ ಮುಗಿಸಿ ಚಾಟ್ ಮುಂದೆ ಕುಳಿತಾಗ ಆಗಲೇ ಮಧುರ ಆನ್ಲೈನ್ ಬಂದಿದ್ದಳು. ತಕ್ಷಣ ಅಮರ್ ಹಾಯ್ ಎಂದ. ಹಾಯ್ ಅಮರ್. ಊಟ ಆಯ್ತಾ?
ಆಯ್ತು ಮಧು, ನಿಂದು ಆಯ್ತಾ?
ಆಯ್ತು ಕಣೋ..
ಮಧು ಇವತ್ತು ಮಧ್ಯಾಹ್ನ ಪ್ರೇಮ ಕ್ಯಾ೦ಟೀನ್ ನಲ್ಲಿ ಸಿಕ್ಕಿ ಏನೋ ಅವಳು ಒಂದು ವಾರ ಊರಿಗೆ ಹೋಗ್ತಾ ಇದ್ದೀನಿ ಎಂದು ಹೇಳಿದಳು. ಹೌದ? ಯಾವ ಊರಿಗೆ ಹೋಗ್ತಾ ಇದಾಳೆ?
ಹೌದು ಕಣೋ, ಯಾಕೋ ಗೊತ್ತಿಲ್ಲ ಈ ನಡುವೆ ಎಲ್ಲ ಒಂಥರಾ ಇರುತ್ತಾಳೆ. ನೀನು ಬೇರೆ ಅವಳ ಜೊತೆ ಸರಿಯಾಗಿ ಮಾತಾಡ್ತಾ ಇಲ್ಲವಂತೆ? ಅದಕ್ಕೆ ಅವಳಿಗೆ ಬೇಸರ ಆಗಿದ್ಯಂತೆ ಒಂದು ವಾರ ಊರಿಗೆ ಹೋಗಿ ಅಪ್ಪ ಅಮ್ಮನ ಜೊತೆ ಇದ್ದು ಬರುತ್ತೇನೆ ಎಂದಿದ್ದಾಳೆ. ಹೋಗಿ ಬರಲಿ ಅವಳಿಗೂ ಸ್ವಲ್ಪ ಸಮಾಧಾನ ಆಗುತ್ತದೆ. ಮತ್ತೆ ಇನ್ನೇನು ಸಮಾಚಾರ?
ಏನಿಲ್ಲ ಮಧು, ನಾನು ನಮ್ಮ ಕ್ಲಾಸ್ ಮೇಟ್ಸ್ ಜೊತೆ ಟ್ರಿಪ್ ಹೋಗೋಣ ಎಂದುಕೊಂಡಿದ್ದೇನೆ.
ಹೌದ, ಯಾವಾಗ? ಯಾವ ಊರಿಗೆ? ನನ್ನ ಹತ್ತಿರ ಹೇಳಲೇ ಇಲ್ಲ?
ಅಯ್ಯೋ ಹಾಗಲ್ಲಪ್ಪ, ನನಗೆ ಹೋಗಲು ಇಷ್ಟ ಇಲ್ಲ, ಆದರೆ ಹುಡುಗರು ಬಲವಂತ ಮಾಡ್ತಾ ಇದಾರೆ. ನೋಡಬೇಕು ಇನ್ನೂ ನಿರ್ಧರಿಸಿಲ್ಲ
ಯಾವ ಊರಿಗೋ?
ಭದ್ರಾವತಿ ಹತ್ತಿರ ಭದ್ರ ಹಿನ್ನೀರು, ಅಭಯಾರಣ್ಯ ಇದೆ ಅಲ್ಲಿಗಂತೆ..
ಹೇ ಹೌದಾ...ಸೂಪರ್ ಜಾಗ ಕಣೋ, ನಾನು ಹಿಂದೊಮ್ಮೆ ಅಲ್ಲಿಗೆ ಹೋಗಿದ್ದೆ. ಅದ್ಭುತ ಜಾಗ. ನನಗಂತೂ ಆ ಜಾಗ ಅಂದರೆ ಅಚ್ಚುಮೆಚ್ಚು. ಕಳೆದ ಬಾರಿ ಹೋದಾಗ ಬಹಳ ಮಜಾ ಮಾಡಿದ್ದೆ. ಆಗ ಮತ್ತೊಮ್ಮೆ ಹೋಗಬೇಕೆಂದು ಮನಸು ಮಾಡಿದ್ದೆ. ಆದರೆ ಅದು ಸಾಧ್ಯ ಆಗಲೇ ಇಲ್ಲ ಕಣೋ. ಈಗ ನೀನು ಹೋಗ್ತೀನಿ ಅಂತಿದ್ದೀಯ. ನನಗೂ ಬರಬೇಕು ಎಂದು ಬಹಳ ಆಸೆ ಆಗುತ್ತಿದೆ. ಪ್ರೇಮ ಕೂಡ ಊರಲ್ಲಿ ಇಲ್ಲ ಆದರೆ ನೀನು ನಿನ್ನ ಸ್ನೇಹಿತರ ಜೊತೆ ಹೋಗುತ್ತಿದ್ದೀಯ ನನಗೆ ಅವರ ಜೊತೆ ಎಲ್ಲ ಸರಿ ಹೋಗಲ್ಲ...ಹ್ಮ್....ಏನೂ ಮಾಡಕ್ಕಾಗಲ್ಲ, ನೀನಾದರೂ ಹೋಗಿ ಮಜಾ ಮಾಡು.
ಮಧು ನಿಜವಾಗಿಯೂ ನಿನಗೆ ಅಲ್ಲಿಗೆ ಹೋಗಬೇಕಾ? ಹೀಗೆ ಹೇಳುತ್ತೀನಿ ಎಂದು ತಪ್ಪು ತಿಳಿಯಬೇಡ. ನಾನು ನೀನು ಇಬ್ಬರೂ ಹೋಗೋಣವೆ?
ನೋ ಛಾನ್ಸ್ ಮಧು. ಅಯ್ಯೂ ನಾನು ನೀನು ಇಬ್ಬರೇ? ಬೇಡಪ್ಪ...ಅಪ್ಪಿ ತಪ್ಪಿ ಕಾಲೇಜಲ್ಲಿ ವಿಷಯ ಗೊತ್ತಾದರೆ ಅಷ್ಟೇ ಆಮೇಲೆ ನನ್ನ ಮರ್ಯಾದೆ ಮೂರು ಕಾಸಿಗೆ ಹರಾಜಾಗಿ ಬಿಡತ್ತೆ. ಅದೂ ಅಲ್ಲದೆ ಪ್ರೇಮಗೆ ಏನಾದರೂ ವಿಷಯ ತಿಳಿದರೆ ಅಂತೂ ನನ್ನ ಕಥೆ ಮುಗಿದೇ ಹೋಯಿತು. ಮೊದಲೇ ನೀನು ಅವಳ ಪ್ರೀತಿಯನ್ನು ತಿರಸ್ಕರಿಸಿ ಅವಳ ಜೊತೆ ಸರಿಯಾಗಿ ಮಾತಾಡುತ್ತಿಲ್ಲ. ನನ್ನ ಜೊತೆ ಹೆಚ್ಚು ಸಲಿಗೆ ಇಂದ ಇರುವುದಕ್ಕೆ ಅವಳಿಗೆ ಬಹಳ ಕೋಪ ಇದೆ. ಇನ್ನು ಇಬ್ಬರೇ ಊರಿಗೆ ಹೋದರೆ ಅಷ್ಟೇ ಆಮೇಲೆ. ನೀನು ಹೋಗಿ ಬಾ, ನಾನು ಇನ್ನೊಮ್ಮೆ ಯಾವಾಗಲಾದರೂ ಹೋಗುತ್ತೇನೆ.
ಮಧು ನಿನಗೇನೂ ಕಾಲೇಜಲ್ಲಿ ವಿಷಯ ತಿಳಿಯಬಾರದು, ಪ್ರೇಮಗೆ ತಿಳಿಯಬಾರದು ಅಷ್ಟೇ ತಾನೇ. ಅದು ನನ್ನ ಜವಾಬ್ದಾರಿ. ಅದೂ ಅಲ್ಲದೆ ನಮ್ಮ ಕ್ಲಾಸ್ ಮೇಟ್ಸ್ ಹೋಗುತ್ತಿರುವುದು ವಾರಾಂತ್ಯದಲ್ಲಿ, ನಾವಿಬ್ಬರೂ ಅದಕ್ಕೆ ಮೊದಲೇ ಹೋಗಿ ಬಂದು ಬಿಡೋಣ. ಯಾರಿಗೂ ತಿಳಿಯದಂತೆ ನಿನ್ನನ್ನು ಕರೆದುಕೊಂಡು ಹೋಗುವುದು ನನ್ನ ಜವಾಬ್ದಾರಿ. ಪ್ಲೀಸ್ ಮಧು ಇಲ್ಲ ಎನ್ನಬೇಡ?
ಬೇಡ ಅಮರ್ ನನಗೆ ರಿಸ್ಕ್ ತೆಗೆದುಕೊಳ್ಳಲು ಇಷ್ಟ ಇಲ್ಲ. ನೀನು ಹೋಗಿ ಬಾ...ಸರಿ ನನಗೆ ನಿದ್ದೆ ಬರುತ್ತಿದೆ ನಾಳೆ ಕಾಲೇಜಿನಲ್ಲಿ ಸಿಗೋಣ ಬೈ..
ಓಕೆ ಬೈ ಮಧು...ಇನ್ನೊಮ್ಮೆ ಯೋಚಿಸಿ ನೋಡು..ಮಧು ಆಮೇಲೆ ಇನ್ನೊಂದು ವಿಷಯ
ಏನಪ್ಪಾ?
ಹೇಗಿದ್ದರೂ ಪ್ರೇಮ ಊರಲ್ಲಿ ಇಲ್ಲವಲ್ಲ ಈ ಒಂದು ವಾರ ನಾನು ನಿನ್ನನ್ನು ಪೀಜೀಯಿಂದ ಪಿಕಪ್ ಅಂಡ್ ಡ್ರಾಪ್ ಮಾಡಲ??
ಹಲೋ ಮಿಸ್ಟರ್ ಅಮರ್ ದಯವಿಟ್ಟು ಮಲಗಿಕೊಳ್ಳಿ...ನಿನಗೆ ಸಲುಗೆ ಕೊಟ್ಟಿದ್ದೆ ತಪ್ಪಾಯಿತು. ಗುಡ್ ನೈಟ್.
ಹ್ಮ್...ಓಕೆ ಗುಡ್ ನೈಟ್.
ಮರುದಿನ ಇಬ್ಬರಿಗೂ ಕಾಲೇಜಿನಲ್ಲಿ ಬೆಳಗ್ಗಿನಿಂದ ಮುಖ್ಯವಾದ ತರಗತಿಗಳು ಇದ್ದದ್ದರಿಂದ ಒಬ್ಬರೊನ್ನಬರು ನೋಡಿರಲಿಲ್ಲ, ಮಾತಾಡಿರಲಿಲ್ಲ. ಅಮರನಿಗೆ ಹೇಗಾದರೂ ಮಾಡಿ ಮಧುರಳನ್ನು ಒಪ್ಪಿಸಬೇಕು ಎಂಬ ಚಿಂತೆ ಕಾಡುತ್ತಿತ್ತು. ಊಟದ ಸಮಯಕ್ಕೆ ಕ್ಯಾಂಟೀನ್ ಗೆ ಬಂದು ಮಧುರಗೆ ಕರೆ ಮಾಡೋಣ ಎಂದು ಫೋನ್ ತೆಗೆದ ಅಷ್ಟರಲ್ಲಿ ಪ್ರೇಮ ಇಂದ ಕರೆ ಬಂದಿತು. ಹಾಯ್ ಪ್ರೇಮ ಹೇಗಿದ್ದೀಯ? ಯಾಕೆ ಊರಿಗೆ ಹೋಗಿದ್ದೀಯ? ನೀನಿಲ್ಲದೆ ಎಷ್ಟು ಬೇಸರ ಆಗುತ್ತಿದೆ ಗೊತ್ತ?
ಹಲೋ ಅಮರ್ ನಾಟಕ ಆಡಬೇಡ, ನಿಜ ಹೇಳು ನಾನಿಲ್ಲದೆ ನಿಜವಾಗಿಯೂ ಬೇಸರ ಆಗುತ್ತಿದೆಯ? ನಾನಿಲ್ಲದೆ ಇದ್ದಾರೆ ನೀನೆಷ್ಟು ಆರಾಮಾಗಿ ಇರುತ್ತೀಯ ಎಂದು ನನಗೆ ಗೊತ್ತು. ಹೇಳು ಏನು ಸಮಾಚಾರ? ಏನಿಲ್ಲ ಪ್ರೇಮ ನಾನೇ ನಿನಗೆ ಕರೆ ಮಾಡೋಣ ಎಂದುಕೊಂಡಿದ್ದೆ. ಆದರೆ ನೀನು ಫೋನ್ ಎತ್ತುವ ಪರಿಸ್ಥಿತಿಯಲ್ಲಿ ಇರುತ್ತೀಯೋ ಇಲ್ಲವೋ ಎಂದು ಗೊತ್ತಿಲ್ಲ ಅದಕ್ಕೆ ಮಾಡಿಲ್ಲ ಅಷ್ಟೇ. ಮೊನ್ನೆ ಕ್ಯಾಂಟೀನ್ ನಲ್ಲಿ ನಿಮ್ಮಕ್ಕ ಸಿಕ್ಕಿದಾಗ ಹೇಳಿದಳು ನೀನು ಊರಿಗೆ ಹೋಗಿದ್ದೀಯ ಎಂದು. ನಿನ್ನ ಮನಸು ಸರಿ ಇಲ್ಲವೆಂದು ಹೇಳಿದಳು, ಯಾಕೆ ಏನಾಯ್ತು? ಇನ್ನೂ ನನ್ನ ಬಗ್ಗೆಯೇ ಚಿಂತೆ ಮಾಡುತ್ತಿದ್ದೀಯ?
ಅಯ್ಯೋ ಹಾಗೆಲ್ಲ ಏನೂ ಇಲ್ಲ ಕಣೋ, ಅಷ್ಟು ಸುಲಭವಾಗಿ ನಿನ್ನ ಪ್ರೀತಿ ಮರೆಯಲು ಆಗುವುದಿಲ್ಲ, ಸ್ವಲ್ಪ ಸಮಯ ಬೇಕು. ನೀನೇನೂ ಚಿಂತೆ ಮಾಡಬೇಡ ನಿಮ್ಮಿಬ್ಬರ ಮಧ್ಯೆ ನಾನೇನು ಬರುವುದಿಲ್ಲ.ಹ್ಹ ಹ್ಹ ಹ್ಹ...., ಹೇ ಹೌದು ನಿನಗೊಂದು ವಿಷಯ ಗೊತ್ತ?
ಏನೇ? ನಾಡಿದ್ದು ಮಧುರಳ ಹುಟ್ಟಿದ ಹಬ್ಬ ಕಣೋ. ಅವಳಿಗೆ ಚಾಕೋಲೆಟ್ ಕೇಕ್ ಎಂದರೆ ಪಂಚಪ್ರಾಣ. ನಾನು ಊರಲ್ಲಿ ಇದ್ದಿದ್ದರೆ ನಾನೇ ಸೆಲೆಬ್ರೇಟ್ ಮಾಡುತ್ತಿದ್ದೆ. ನಾನಿಲ್ಲದಿದ್ದರೆ ಏನಂತೆ ನೀನಿದ್ದೀಯಲ್ಲ ಅಮರ ಪ್ರೇಮಿ, ಆದರೆ ನಾನು ಹೇಳಿದೆ ಎಂದು ಮಾತ್ರ ಅಪ್ಪಿ ತಪ್ಪಿ ಹೇಳಬೇಡ ಆಯ್ತಾ..ಸರಿ ನಾನು ಆಮೇಲೆ ಮಾಡ್ತೀನಿ ಬೈ..
ಓಕೆ ತುಂಬಾ ಥ್ಯಾಂಕ್ಸ್ ಪ್ರೇಮ ಮಾಹಿತಿಗೆ, ಬೈ...
ವೌ ಇದೊಂದು ಒಳ್ಳೆಯ ಅವಕಾಶ ಮಧುರಗೆ ನಾನು ಇನ್ನಷ್ಟು ಹತ್ತಿರವಾಗಲು. ಮೊದಲು ಹೇಗಾದರೂ ಮಾಡಿ ಅವಳನ್ನು ಊರಿಗೆ ಕರೆದೊಯ್ಯಬೇಕು ಅಲ್ಲೇ ಅವಳಿಗೆ ಹುಟ್ಟಿದ ಹಬ್ಬದ ಸರ್ಪ್ರೈಸ್ ಕೊಡಬೇಕು. ಎಸ...
ಅಷ್ಟರಲ್ಲಿ ಹಿಂದಿನಿಂದ ಅಮರ್ ಎಂದು ಕರೆದಂತಾಯಿತು, ತಿರುಗಿ ನೋಡಿದರೆ ಮಧುರ ನಿಂತಿದ್ದಳು. ಹಾಯ್ ಮಧು ನಿನಗೆ ನೂರು ವರ್ಷ ಆಯಸ್ಸು. ಇಷ್ಟು ಹೊತ್ತು ನಿನ್ನ ಬಗ್ಗೆಯೇ ಯೋಚಿಸುತ್ತಿದೆ ಅಷ್ಟರಲ್ಲಿ ನೀನೆ ಬಂದೆ. ಬಾ ಆಚೆ ಹೋಗಿ ಮಾತಾಡೋಣ.
ಏನಪ್ಪಾ ಅಂತ ಪರಿ ಯೋಚನೆ ಮಾಡುತ್ತಿದ್ದೆ ನನ್ನ ಬಗ್ಗೆ, ಸರ್ ಈ ವರ್ಷ ನಿಮ್ಮ ಕಾಲೇಜ್ ಕೊನೆ ವರ್ಷ ಅದು ನೆನಪಿದೆಯ ತಮಗೆ. ಈ ರೀತಿ ಹುಡುಗಿಯರ ಬಗ್ಗೆ ಯೋಚನೆ ಮಾಡುವುದು ಬಿಟ್ಟು ಸ್ವಲ್ಪ ಓದಿನ ಕಡೆ ಗಮನ ಕೊಡಿ. ಇನ್ನು ಬರಿ ಐದು ತಿಂಗಳು ಮಾತ್ರ ಇದೆ ಅಷ್ಟೇ ನಿಮ್ಮ ಪರೀಕ್ಷೆಗೆ. ಅದೂ ಅಲ್ಲದೆ ಈ ಬಾರಿ ಕ್ಯಾಂಪಸ್ ಇಂಟರ್ವ್ಯೂಗೆಂದು ೧೬ ಕಂಪನಿ ಗಳು ಬರುತ್ತಿವೆ. ಮೊದಲು ಚೆನ್ನಾಗಿ ಓದಿ ಯಾವುದಾದರೂ ಒಳ್ಳೆ ಕಂಪನಿ ಯಲ್ಲಿ ಕೆಲಸ ಗಿಟ್ಟಿಸಿ ಆಮೇಲೆ ಹುಡುಗಿಯರ ಬಗ್ಗೆ ಯೋಚನೆ ಮಾಡಿ.
ಮಧು...ಅದಕ್ಕೆ ನೀನೆ ಸಹಾಯ ಮಾಡಬೇಕು. ಹಲೋ..ಸರ್ ನೀವು ಇಡೀ ಕಾಲೇಜ್ ಗೆ ಬ್ರಿಲಿಯಂಟ್ ಸ್ಟುಡೆಂಟ್ ನಿಮಗೆ ನನ್ನ ಸಹಾಯ ಬೇಕೇ...ಜೋಕ್ ಮಾಡ್ತಾ ಇದ್ದೀರಾ?
ಹಾಗಲ್ಲ ಮಧು...ಇನ್ನು ಉಳಿದಿರುವುದು ಕೇವಲ ಐದು ತಿಂಗಳು ಎಂದು ನೀನೆ ಹೇಳಿದೆ. ಆಮೇಲೆ ನೀನೆಲ್ಲೋ ನಾನೆಲ್ಲೋ...ಅದಕ್ಕೆ ಒಂದೇ ಒಂದು ಸಲ ನನ್ನ ಜೊತೆ ಊರಿಗೆ ಬಂದು ಬಿಡು. ಆಮೇಲೆ ನಾನು ಕಟ್ಟು ನಿಟ್ಟಾಗಿ ಓದುತ್ತೇನೆ. ಇಲ್ಲದಿದ್ದರೆ ನನಗೆ ತಲೆಯಲ್ಲಿ ಅದೇ ಕೊರೆಯುತ್ತಿರುತ್ತದೆ. ಪ್ಲೀಸ್ ಮಧು ಪ್ಲೀಸ್ ಇಲ್ಲ ಎನ್ನಬೇಡ...ಇದೊಂದು ಸಲ..ನಿನಗೆ ಯಾವುದೇ ತೊಂದರೆ ಆಗದಂತೆ ನಾನು ನೋಡಿಕೊಳ್ಳುತ್ತೇನೆ...
ಅಯ್ಯೋ..ಅಮರ್, ನನಗೆ ನಿನ್ನ ಜೊತೆ ಬರಲು ಇಷ್ಟ ಇಲ್ಲ ಅಂತಲ್ಲ....ಆದರೆ....ಹ್ಮ್...ಸರಿ ಹೋಗೋಣ ಆದರೆ ಒಂದೇ ದಿನ ಬೆಳಿಗ್ಗೆ ಹೋಗಿ ಸಂಜೆ ಬಂದು ಬಿಡಬೇಕು...ಹಾಗಿದ್ದರೆ ಬರುತ್ತೇನೆ.
ವೌ...ದಟ್ಸ್ ಗ್ರೇಟ್...ಮಧು ಬರೀ ೨೫೦ ಕಿಮೀ ಅಷ್ಟೇ ಇರುವುದು. ಬೆಳಿಗ್ಗೆ ಬೇಗನೆ ಬಿಟ್ಟು ರಾತ್ರಿಯ ಒಳಗೆ ಬಂದು ಬಿಡಬಹುದು. ನಾಡಿದ್ದು ಬೆಳಿಗ್ಗೆ ೪ ಗಂಟೆಗೆ ನಿನ್ನ ಪೀಜೀ ಬಳಿ ಬರುತ್ತೇನೆ. ರೆಡಿಯಾಗಿರು ಓಕೆನ...ತುಂಬಾ ಥ್ಯಾಂಕ್ಸ್ ಮಧು...ಐ ಆಮ್ ಸೊ ಹ್ಯಾಪಿ ಟುಡೆ..ಥಾಂಕ್ ಯೂ ವೆರಿ ಮಚ್