ಕವಿತೆ ಬರದ ದಿನ
ಕವನ
ಕವಿತೆ ಬರದ ದಿನ
ಕವಿತೆ ಬಂದಾಗ
“ಬಾ” ಎಂದು ಕರೆದು
ಚಾಪೆ ಹಾಕಿ, ಕೂಡಿಸಿ,
ಟೀಯನ್ನೋ, ಕಾಫಿಯನ್ನೋ ಕೊಟ್ಟು,
ಏನು ಸೌಖ್ಯವೇ?,
ನಿನ್ನ ಸಾಲುಗಳು,
ನಿನ್ನ ಪದಗಳು,
ನಿನ್ನ ಭಾವ,
ನಿನ್ನ ಉದ್ದೇಶ,
ನಿನ್ನ ಸಂದೇಶ,
ಎಲ್ಲವೂ ಕ್ಷೆಮವೇ? ಕುಶಲವೇ? ಎಂದು ವಿಚಾರಿಸುತ್ತೇನೆ.
ಚಿಕ್ಕವಳಾಗಿದ್ದರೆ ರಮಿಸುತ್ತೇನೆ
ಪ್ರೇಯಸಿಯಂತಿದ್ದರೆ ಮುದ್ದಿಸುತ್ತೇನೆ
ಹಿರಿಯಳಾಗಿದ್ದರೆ ನಮಿಸುತ್ತೇನೆ.
ಒಲಿಸಿ, ಕೈ ಹಿಡಿದು, ನನ್ನ ಜೊತೆಗೆ ಕರೆದುಕೊಂಡು ಬಂದು
ನಿಮ್ಮೆಲ್ಲರಿಗೂ ಪರಿಚಯಿಸುತ್ತೇನೆ.
ಕವಿತೆ ಬರದ ದಿನ
ಅಳುವೂ ಬಾರದೆ, ನಗುವೂ ಬಾರದೆ
ನಿರ್ಲಿಪ್ತವಾಗಿ ಮೂಕನಂತೆ ಕುಳಿತಿರುತ್ತದೆ ಮನ.
ಸೂರ್ಯೋದಯದಂತೆ
ಉದಯಯಿಸುತ್ತಿರುವ ನಿಮ್ಮೆಲ್ಲರ
ಕವಿತೆಗಳನು ಓದಿ, ಸವಿದು, ನಲಿದಾಡಿ,
ನನ್ನ ಕವಿತೆಯೂ ಸಂಜೆಯವರೆಗೆ ಬರುವಳೆಂದು
ಸಮಾಧಾನದಿಂದ ಕಾಯುತ್ತೇನೆ …..
ರಾಜೇಂದ್ರಕುಮಾರ್ ರಾಯಕೋಡಿ
Copyright©