ಸೂಳೆಯ ಸಮೀಕ್ಷೆ
ಸೂಳೆಯ ಸಮೀಕ್ಷೆ
ನಿನ್ನ ಹೆಂಡತಿಯದಾಗಬೇಕಿದ್ದ
ಈ ಮುತ್ತು, ಈ ಅಪ್ಪುಗೆ, ಈ ಉದ್ರೇಕ
ನನ್ನ ಸೆರಗ ಸರಿಸಿ ಒರೆಸಿ ಹೋಗುವೆ.
ನನ್ನದೋ, ಒಪ್ಪತ್ತಾದರೂ ಉಣ್ಣಲು ಮೈಯೊಡ್ಡುವ ಹಸಿವು
ನಿನ್ನ ಹಸಿವು ಎಂಥಹದೋ.....
ನನ್ನ ಸೂಳೆಗಾರಿಕೆಯ ಮೇಲಾಣೆ
ನಿನ್ನ ಮುತ್ತಿನಲಿ ಪ್ರೀತಿ ಇದೆ
ನಿನ್ನ ಅಪ್ಪುಗೆಯಲಿ ಪ್ರೀತಿ ಇದೆ
ನಿನ್ನ ಉದ್ರೇಕದಲಿ ಪ್ರೀತಿ ಇದೆ
ಹಣಕ್ಕಾಗಿ ಹೆಣದಂತೆ ಬೀಳುವ ನನ್ನಲ್ಲಿಯೂ
ಪ್ರೀತಿಯ ಹಸಿವು ಹಚ್ಚಿಸುವ
ನಿನ್ನ ಹಸಿವು ಎಂಥಹದೋ.....
ಹೀಗೆಯೇ ಒಮ್ಮೊಮ್ಮೆ ಯೋಚಿಸುತ್ತೇನೆ ನಾನೂ
ಎಲ್ಲವೂ ಇದ್ದು ಎಲ್ಲ ಕಳೆದುಕೊಂಡವರಂತಿರುವ
ನಿನ್ನಂತಹ ಕೆಲವರ ಬಗ್ಗೆ.
ದಿನವೂ ಸಿಗುವ,
ಆ ನಿನ್ನ ಮುತ್ತಿನಲಿ, ನಿನ್ನ ಅಪ್ಪುಗೆಯಲಿ, ನಿನ್ನ ಉದ್ರೇಕದಲಿ
ಉತ್ತರ ಸಿಗುತ್ತಿದೆ ನನಗೆ.
ನಿನ್ನ ಹಸಿವು ಕಾಮದಲ್ಲವೆಂದು
ನಿನ್ನ ಜೊತೆಗಿದ್ದ ಕ್ಷಣ ಹೇಳುತ್ತದೆ.
ಮನೆಯಲ್ಲಿ ಮನಸುಗಳು ಮಸಣ ಮಾಡಿಕೊಂಡು,
ಅದರ ಸನಿಹ ಸಹಿಸದೆ,
ನಾನು ಸೂಳೆಯಾದರೂ, ಸುಳ್ಳಾದರೂ, ಕ್ಷಣಿಕವಾದರೂ
ನಿನ್ನ ಹೃದಯ, ಕಳೆದ ಪ್ರೀತಿಯ ಹುಡುಕುತ್ತ
ನಿನಗೆ ನನ್ನಲ್ಲಿಗೆ ತರುತ್ತದೆ.
ರಾಜೇಂದ್ರಕುಮಾರ್ ರಾಯಕೋಡಿ
Copyright©