ಹಳ್ಳಿಕಟ್ಟೆ--ಬೆಂಗಳೂರುನಾಗೆ ಒಂದು ರೌಂಡ್(ಭಾಗ-೧)
*** ಹಳ್ಳಿ ರಮ್ಮಿ ಅಲಿಯಾಸ್ ರಮೇಶ , ಸಿಟಿ ಸೀನಿ ಅಲಿಯಾಸ್ ಶ್ರೀನಿವಾಸ ಮತ್ತು ಮೆಂಟಲ್ ಅಬ್ದುಲ್ಲ ಅಲಿಯಾಸ್ ಮಹಮ್ಮದ್ ಅಬ್ದುಲ್ಲ ***
[ಊರಿಂದ ಬಂದು ಬಸ್ ಇಳಿದು]
ಹಳ್ಳಿ ರಮ್ಮಿ : ಅಲ್ಲೋ ಸೀನಿ, ಈ ಊರಾಗೇ ಬಸ್, ಜನ ಇಬ್ಬರು ನಿಂತಲ್ಲಿ ನಿಲ್ಲೋದಿಲ್ಲಲೋ....ಒಳ್ಳೆ ಕುದುರೆ ಓಡಿದಂಗ ಓಡ್ತಾ ಇರ್ತವೆ.....
ಸಿಟಿ ಸೀನಿ : ಅದುಕ್ಕೆ ಕಣ್ಲ, ಇದುನ್ನ ಬೆಂಗಳೂರು ಅನ್ನೋದು. ಬಸ್ ಬೆಳಗ್ಗೆ ಎಲ್ಲ ತಿರುಗಾಡಿ ಬಂದು, ರಾತ್ರಿಯಾದರೆ ಮೆಜಸ್ಟಿಕ್ ಸೇರ್ಕೊಂತವೆ, ಈ ಸಾಫ್ಟ್‌ವೇರ್ ಜನ ಬೆಳಗ್ಗೆಲ್ಲ ದುಡಿದು ಬಂದು ರಾತ್ರಿ ಜ್ಞಾನ ಇಲ್ದಂಗೆ ಮಲ್ಕೊಂತವೆ. ತಲೆ ಮ್ಯಾಲೆ ಕಲ್ಲು ಎತ್ತಕಿದ್ರು ಬೆಳಗ್ಗೆತಂಕ ಎಚ್ಹ್ರಗಲ್ಲ ಈ ಜನಕ್ಕೆ.
ಹಳ್ಳಿ ರಮ್ಮಿ : ಓ ಅಂಗೆನು . ಅಂದಂಗೆ ಈ ಮೆಜಸ್ಟಿಕ್ ಅಂದಲ್ಲ ಆಗಂದ್ರೆ ಏನೋ, ಆ ದರ್ಶನ್ ಸಿನ್ಮ ಬಂದಿತಲ್ಲ ನಮ್ಮೂರ ಟೆಂಟ್ನಾಗೆ ಅದೇನು ?
ಸಿಟಿ ಸೀನಿ : ಅಲ್ಲಲೇ ಮಂಗ್ಯ, ಮೆಜಸ್ಟಿಕ್ ಅಂದ್ರೆ ಇಲ್ಲೇ ನಾವು ಬಸ್ಸಿಳಿದು ಬಂದವಲ್ಲ ಅದ್ರು ಪಕ್ಕದಾಗೆ ಐತಾಲ್ಲೋ ಅದೇಯಾ....
ಹಳ್ಳಿ ರಮ್ಮಿ : ಒಹೊಹೊಹ್!!! ಇದೆನ್ಲ ಮೆಜಸ್ಟಿಕ್ ಅಂದ್ರೆ, ಏಟು ದೊಡ್ದದಗಯ್ತಲ್ಲೋ. ನಮ್ಮ ಹೈಕುಳ್ನ ಇಲ್ಲಿ ತಂದು ಬಿಟ್ಟಿದ್ರೆ ಚಿನ್ನಿ-ದಾಂಡು, ಗೋಲಿ ಎಲ್ಲ ಆಡಿಕೊಂಡಿರ್ತಿದ್ವಾಲೋ...
ಸಿಟಿ ಸೀನಿ : ಉ, ಹಂಗೆ ಬಸ್ ಕೇಳ್ಳಗೆ ಅಪ್ಪಚಿ ಆಗೋಗ್ತ ಇದ್ವು !!! ಲೇ, ಇದು ಬಸ್ ನಿಲ್ಲೋಕೆ ಅಂತ ಮಾಡಿರೋದು ಕಣ್ಲ. ನಮ್ಮುರಗೆ ಬಸ್ ಸ್ಟ್ಯಾಂಡ್ ಅಂತ ಮರದ ಕೆಳಗೆ ನಿಲ್ತಿವಲ್ಲ.. ಹಂಗೆಯ ಇದು.
ಹಳ್ಳಿ ರಮ್ಮಿ : ಅದು ಸರಿ ಕಣ್ಲ, ಅವ್ಯವೋ ಕೆಂಪುಗೆ ಕಾಣ್ತವಲೋ ಬಸ್ ...ಒಳ್ಳೆ ಇಂದ್ರನ ವಾಹನ ಇದ್ದಗಿದವೇ ....ಆದ್ರೆ ಏನೋ ಹಿಂದುಗಡೆ ಇಂದ ಗುಯ್ಯಿ...ಗುಯ್ಯಿ.. ಅಂತ ಒಂದೇ ಸಮನೆ ಸಬ್ದ ಮಾಡ್ತವಲೋ
ಸಿಟಿ ಸೀನಿ: ಅವುನ್ನ ವೋಲ್ವೋ ಬಸ್ ಅಂತರ ಕಣ್ಲ. ಆಫಿಸ್ಸಿನಾಗೆ ತಲೆ ಕೆಡುಸ್ಕೊಂಡು ಕೆಲಸ ಮಾಡಿ ಬಂದಿರ್ತರಲ್ವೋ ಅವುರೆಲ್ಲ ತಣ್ಣಗೆ ಕೂತುಕೊಂಡು ಮನೆ ಸೇರ್ಕೊಳ್ಳಿ ಅಂತ ಎ.ಸೀ ಅಂತ ಹಾಕಿರ್ತಾರೆ ಅದ್ರಾಗೆ ...ಗುಯ್ಯಿ ಅಂತ ಶಬ್ದ ಅಂದಲ್ಲ ..ಅದೇ ಎ.ಸೀ ಶಬ್ದ .
ಹಳ್ಳಿ ರಮ್ಮಿ : ನಡೀಲ, ನಾವು ಹತ್ತಿ ನೋಡೇಬಿಡೋಣ....
ಸಿಟಿ ಸೀನಿ : ನಮ್ಮೊಂತರಿಗೆ ಅಲ್ಲ ಕಣ್ಲ ಅವು...ಚೆನ್ನಾಗೆ ಜೆಬಿನಾಗೆ ದುಡ್ಡು ಮಡಗಿರ್ತರಲ್ಲ ಅವುರಿಗೆ .... ಇನ್ನು ನಾವು ತಂದಿರೋ ದುಡ್ಡಿನಾಗೆ ಈ ದಿನ ಕಳಿಬೇಕು.
ಹಳ್ಳಿ ರಮ್ಮಿ : ನಡೀಲ, ನಾವು ಒಂದು ಸಲ ಹತ್ತೇ ಬಿಡೋಣ. ಹೇಗಿದ್ರು ನಮ್ಮೂರ ಎಂ.ಎಲ್.ಎ ಸಾಯೇಬ್ರು ನೋಡಕ್ಕೆ ಅದೆಂತದೋ ಅಂದಲೋ..ಓ ವಿಧಾನಸೌಧಕ್ಕೆ ಹೋಗಬೇಕಲ್ಲ..... ಇದ್ರಾಗೆ ಹೋಗೋಣ ನಡಿ....
ಸಿಟಿ ಸೀನಿ: ಸರಿಯಪ್ಪ್, ನಿನ್ನ ಅಸೆ ಯಾಕೆ ಬೇಡ ಅನ್ನೋಣ ಹತ್ತಿಕೊ. ಇಲ್ಲೇ ಕೂತ್ಕೋ.
[ಬಸ್ಸಿನೊಳಗೆ]
ಹಳ್ಳಿ ರಮ್ಮಿ : ಏನ್ಲಾ ಸೀಟು ಒಳ್ಳೆ ಮೆತ್ತುಗೆ ಸಿಂಹಾಸನ ಇದ್ದಂಗೈತೆ ....ಆದರೆ ಏನೋ ಇದು ಇಸ್ಟೊಂದು ಚಳಿ ಶುರುವಾಗ್ಯತೆ. ನನ್ನ ಕಂಬ್ಳಿ ಇತ್ಲಾಗ್ ಕೊಡ್ಲ...... ಯಾವನ್ ಕುಂತನು ಈ ಮೈ ಕೊರೆಯೋ ಚಳಿಯಾಗೆ, ಅದು ಬೇರೆ ಗಾಳಿ ಬರೋಕೆ ಒಂದು ಕಿಟ್ಟಕಿನು ಇಲ್ವಲ್ಲೂ. ಯಾವನಾದ್ರು ಉಸಿರು ಕಟ್ಟಿ ಸತ್ತುಗಿತ್ತನು...
ಸಿಟಿ ಸೀನಿ : ಹಂಗೇನು ಹಾಗಲ್ಲ ನೀ ಸುಮ್ಕಿರ್ಲಾ.... ಅಲ್ಲೋ ರಮ್ಮಿ ,ಅದ್ಯಾಕ್ಲ ಮುಂದಿನು ಸೀಟ್ ಬಿಗ್ಯಾಗಿ ಹಿಡುಕೊಂಡಿಯಾ..... ಆರಾಮಾಗಿ ಕುರ್ಲಾ..ಕೈ ಬಿಟ್ಟು.
ಹಳ್ಳಿ ರಮ್ಮಿ : ನಮ್ಮುರ್ನಗೆ "ಮಹಾದೇವ" ಬಸ್ ಡ್ರೈವರ್ ಹಾಕ್ತನಲ್ಲ ಅಂಗೆ ಒಂದೇ ಸಲ ಬ್ರೇಕ್ ಹಾಕಿದ್ರೆ ಏನ್ಲಾ ಮಾಡೋದು... ಆಮೇಲೆ ಬೆಂಗಳೂರು ಅಣ್ಣಮ್ಮನ ಪಾದವೇ ಗತಿ ...ಅದುಕ್ಕೆ ಬೀಗ್ಯಾಗೆ ಹಿಡುಕೊಂಡು ಕುಂತೀನಿ....ಆ ಕಡೆ ನೋಡ್ಲ , ಯಾವನೋ ಇಷ್ಟುದ್ದ ಜಡೆ ಬಿಟ್ಟುಕೊಂಡು ಕುನ್ತಾನೆ
ಸಿಟಿ ಸೀನಿ : ಲೇ, ಅದು ಹುಡುಗ ಅಲ್ಲ ಕಣೋ ಹುಡುಗಿ. ಹೊಸಿ ಮೆತ್ತುಗೆ ಮಾತಾಡು
ಹಳ್ಳಿ ರಮ್ಮಿ : ಒಹ್ .. ಆ ಪ್ಯಾಂಟು-ಶರ್ಟ್ ನೋಡಿ ಅನ್ಗಂದೆ ಕಣ್ಲ
ಸಿಟಿ ಸೀನಿ : ಅದು ಈಗಿನ ಫ್ಯಾಶನ್ ಕಣ್ಲ. ಅದೆಲ್ಲ ಮಾಮೂಲಿಯಾಗಿದೆ ಇಲ್ಲಿ.... ಬಿಡು.
ಹಳ್ಳಿ ರಮ್ಮಿ : ಅಗದ್ರೆ , ಒಂದು ಸಲ ತಪಯ್ತು ಕಣ್ಣಕ್ಕೋ ಅಂತ ಕೇಳಲಾ .
ಸಿಟಿ ಸೀನಿ : ಹಂಗೇನು ಕೆಳ್ಳೋದು ಬ್ಯಾಡ ....ನೀನು ಸುಮ್ನೆ ಕೂತ್ಕೋ ಮಾರಾಯ, ನೀನು ಕ್ಷಮೆ ಕೇಳೋ ಭಾಷೆ, ನಿನ್ನ ವೇಷ ನೋಡಿ.ಬಿಕ್ಷುಕ ಇರಬೇಕು ಅಂತ ಚಿಲ್ದ್ರೆ-ಗಿಲ್ದ್ರೆ ಕೊಡೋಕೆ ಬಂದುಗಿನ್ದಾಳು....
ಹಳ್ಳಿ ರಮ್ಮಿ : ಸರಿ ಕಣಪ್ಪ , ಸುಮ್ನೆ ಕುರ್ತೀನಿ. ಅದಿರ್ಲಿ ಏನ್ಲ ಇದು ಗಮಗಮ ಶ್ರೀಗಂದದ ವಾಸನೆ. ಆ ಹೆಣ್ಣು ಮಗಳು ಇತ್ಲಗೊದ್ರೆ ಒಂತರ ವಾಸನೆ .... ಈ ಹುಡುಗ ಅತ್ಲಾಗೊದ್ರೆ ಒಂತರ ಗಮಗಮ ವಾಸನೆ ಹೊಡೆಯುತ್ತಲ್ಲೋ ...ಒಂತರ ಚೆನ್ನಗಯ್ತೆ ಕಣ್ಲ...
ಸಿಟಿ ಸೀನಿ : ಅದು ಸೆಂಟ್ ಕಣ್ಲ ...
ಹಳ್ಳಿ ರಮ್ಮಿ : ಏನು ಸೆಂಟ್ ಏನೋ. ನಮ್ಮುರಗೆ ಆತ್ಲಾಗಿಂದ ಇತ್ಲಾಗೊದ್ರು, ಇತ್ಲಾಗಿಂದ ಆತ್ಲಾಗೊದ್ರು ಒಂದೇ ವಾಸನೆ ..... ಅದು ಸಗಣಿ ವಾಸನೆ...ಅದ್ರು ಈ ಗಾಟೂ ಬಹಳ ಒತ್ತು ತಡೆಯೋದಕ್ಕೆ ಆಗೋದಿಲ್ಲ ಮಾರಾಯ..ನಮ್ಮಿಗೆನಿದ್ರು ಹಳ್ಳಿನೆ ಚೆಂದ
ಸಿಟಿ ಸೀನಿ : ನೀನು ಸುಮ್ನೆ ಕುಂತ್ರೆ ಸಾಕು ರಮ್ಮಿ...ಇಲ್ಲ ಅಂದ್ರೆ ನೋಡಿದೋರು ನಮ್ಮ ಬಗ್ಗೆ ತಪ್ಪಾಗಿ ತಿಲ್ಕೊಂತಾರೆ....
ಹಳ್ಳಿ ರಮ್ಮಿ : ಏನೋ ಗೊತ್ತಿಲ್ದನ್ನ ಹೇಗಿದ್ರು ನೀನು ಪ್ಯಾಟೆ ನೋಡಿದವನು ಅಂತ ಹೊಸಿ ಕೇಳಿ ತಿಳ್ಕೊಂತಿವಪ್ಪ ಅಷ್ಟಕ್ಕೇ ನೀನು ಬೇಜಾರ ಮಾಡ್ಕೊಂಡ್ರೆ !!! ಆದರು ಏನೇ ಅನ್ನು, ಈ ಸಿಟಿ ಅವುರಿಗ ನಮ್ಮೊಷ್ಟು ತಾಳ್ಮೆ ಬರಲ್ಲ ಕಣ್ಲ. ಅದೇ ನಮ್ಮೂರ್ನಾಗೆ ಬಂದು ಬೆಳೆ ಬೆಳೆಯೋದ್ಯಂಗೆ ಅಂತ ಒಂದು ಪ್ರಶ್ನೆ ಕೇಳು ....ಬಿಜ, ಗೊಬ್ಬರ ಹಾಕಿ, ಕಳೆ ತೆಗುದು. ನೀರು ಬಿಟ್ಟು, ಕೊಯ್ಲು ಕೊಯ್ದು, ಕಸ ಕಡ್ಡಿ ತೆಗೆದು...ಮಾರಾಟ ಮಾಡ್ಕೊಂಡು ಬರವರೆಗೂ ಹೇಳ್ತಾರೆ...ಆದ್ರೆ ಈ ಪ್ಯಾಟೆ ಜನ...ಹಳ್ಳಿಯವರನ್ನ ಕಂಡು ಮಾತಾಡಿದ್ರೆ ಎಲ್ಲಿ ಮುತ್ತು ಕೆಳಗಡೆ ಉದುರುತ್ತೋ ಅಂತ ಓಡ್ತಾರೆ ಕಣ್ಲ ...ಚೂರು ನಿನ್ನತರನೇ
ಸಿಟಿ ಸೀನಿ : ನನೀಗೆನು ಬೇಜಾರೇನೂ ಇಲ್ಲ ಮಾರಾಯ, ಏನು ಬೇಕೋ ಕೇಳ್ಕೋ...
ಹಳ್ಳಿ ರಮ್ಮಿ : ಅದೇನ್ಲ, ಅವುನ್ಯವನೋ ಸಣ್ಣ ಸೂಟುಕೇಸು ಇಂದ ಕಬ್ಬಿಣ್ಣದ ಪೆಟ್ಟಿಗೆ ತಗದು ಏನೋ ನೋಡ್ತಾನೆ
ಸಿಟಿ ಸೀನಿ : ಅದು ಲ್ಯಾಪ್ಟಾಪ್ ಅಂತ ಕಣ್ಲ..ನಿನಿಗೆನು ಅರ್ತ ಆಗುತ್ತೆ ಬಿಡು. ಸದ್ಯಕ್ಕೆ ಸಣ್ಣ ಟಿ.ವಿ ಇದ್ಹಂಗೆ ಅನ್ಕೋ....
ಹಳ್ಳಿ ರಮ್ಮಿ : ಅಂದ್ರೆ ಯಾವ್ದೋ ಸಿನ್ಮ ನೋಡ್ತಾನೆ ಅನ್ನು .
ಸಿಟಿ ಸೀನಿ : ಸಿನ್ಮ ಅಲ್ಲ ಕಣ್ಲ..ಏನೋ ಕೆಲಸ ಮಾಡ್ತಾನೆ ಅದ್ರಾಗೆ..ಅವುನು ಸಾಫ್ಟ್‌ವೇರ್ ಇಂಜಿನಿಯರ್.
ಹಳ್ಳಿ ರಮ್ಮಿ : ಒಹ್ . ಇವುರೆ ಏನು ಸಾಫ್ಟ್‌ವೇರ್ನರು ಅಂದ್ರೆ...ನಾನೇನು ಅನ್ಕೊಂಡಿದ್ದೆ ....ಅದ್ರು ಕೆಳಗಿಂದ ಮೇಲಿನವರೆಗೂ ಬಟ್ಟೆ ಇಸ್ತ್ರಿ ಮಾಡ್ಕೊಂಡು ಉಟ್ಟುಕೊಂಡು ಬಂದು ಫಿಲಂ ಸ್ಟಾರ್ ಇದ್ದಂಗೆ ಇದಾನೆ....ಸರಿ ಅಲ್ಲಿ ನೋಡ್ಲ ಸೀನಿ !!! .....ಈ ಮನೆ-ಮಹಡಿ ನೋಡ್ಲ ... ನಮ್ಮುರಗೆ ಮನೆ ಕಟ್ಟಿ ಆಟ ಆಡೋದಕ್ಕೆ ...ಹುಡುಗರು ಬೆಂಕಿ ಪೊಟ್ಟಣ, ಸಿಗರೇಟು ಪ್ಯಾಕ್ ಒಂದ್ರು ಮೇಲೆ ಇನ್ನೊಂದು ಜೋಡುಸ್ತರಲ್ಲೋ ಅಂಗೆ ಕಾಣ್ತವೆ ಈ ಮಹಡಿಗಳು.
ಸಿಟಿ ಸೀನಿ : ಸರಿ ಸರಿ . ವಿಧಾನಸೌಧ ಬಂತು ನಡಿ ಕೆಳಗೆ ಇಲ್ಲಿಯೋಣ ....
ಹಳ್ಳಿ ರಮ್ಮಿ : ಇದೆನ್ಲ ವಿಧಾನಸೌಧ ..ಅಬ್ಬಬ ಏನು ಹಾಲಿನಾಗೆ ಸ್ನಾನ ಮಾಡಿಸ್ದನ್ಗಯ್ತಲ್ಲೋ ..ಇಲ್ಲೇ ಅಲ್ವೇನೂ...ನಮ್ಮ ಗೌಡ್ರು, ಕೃಷ್ಣಪ್ಪ,ಕುಮಾರಣ್ಣನ, ಯೆಡಾವೀರಪ್ಪ ಎಲ್ಲ ರಾಜ್ಯಭಾರ ಮಾಡಿದ್ದೂ...ಈಗ ಆವಯಂದು ಹೆಸರೆನಪ್ಪ ಯಾವಾಗಲು ನಗ್ತಾ ಇರ್ತರಲ್ಲೋ ಅವುರು ಆದ ಮೇಲೆ ಶೆಟ್ಟರು ರಾಜ್ಯಭಾರ ಮಾಡ್ತಾ ಇರೋದು.
ಸಿಟಿ ಸೀನಿ : ಅವುರ ಸದಾನಂದ ಗೌಡ್ರು, ಪಾಪ ಏನೇ ಕಷ್ಟ ಕೊಟ್ಟರು ನಗ್ತಾ ಇರ್ತಾರೆ ಬಿಡು....
ಹಳ್ಳಿ ರಮ್ಮಿ : ಅವುರು ಹೆಸರ್ನಗೆ ಆನಂದ ಐತೆ ಬಿಡು ಪಾಪ.. ಇದೆನ್ಲ ವಿಧಾನಸೌಧ ಎದುರ್ಗಡೆ ಕೆಂಪುದು ಒಂದು ಮನೆ ಅಯ್ತಲ್ಲೋ
ಸಿಟಿ ಸೀನಿ : ಅದೇ ಕಣ್ಲ ಹೈ-ಕೋರ್ಟು ಅಂದ್ರೆ.
ಹಳ್ಳಿ ರಮ್ಮಿ : ಒಹ್...ಕೇಳಿದ್ದೆ, ವಿಧಾನಸೌಧದಾಗೆ ಆಳಿದೋರೆಲ್ಲ ...ಮನೆಗೆ ಹೋಗಕ್ಕಿಂತ ಮುಂಚೆ ಇಲ್ಲಿಗೂ ಹೋಗಿ ಬರ್ತಾರೆ ಅಂತ
ಸಿಟಿ ಸೀನಿ : ಅದು ಹಾಗಲ್ಲ !!!, .......ಅದ್ರು ನೀನು ಹೇಳ್ಳಿದ್ದು ಮಾತು ಇಲ್ಲಿವರೆಗೂ ಸತ್ಯ ಆಗೈತೆ ಬಿಡು!!! ನಿನ್ನತ್ರ ಮಾತಾಡ್ತಾ ನಮ್ಮ ಸಾಹೇಬರು ಕಾಣೋದೆ ಮರೆತು ಬಿಟ್ಟಿದೆ ನಡಿಯಪ್ಪಾ ...
ಹಳ್ಳಿ ರಮ್ಮಿ : ಏನೋ ಇದು ....ಸಾಯೇಬ್ರು ಕಚೇರಿಗೆ ಬೀಗ ಹಾಕಿದರೆ
ಸಿಟಿ ಸೀನಿ : ತಡಿ ನಾನು ವಿಚಾರುಸ್ತಿನಿ...ಬೇರೆಯವರತ್ರ..ನೀನು ಇಲ್ಲೇ ಇರು ....
ಹಳ್ಳಿ ರಮ್ಮಿ : ಏನಂತ್ಲ, ಬರ್ತರಂತ ಸಾಯೇಬ್ರು ಇವತ್ತು.
ಸಿಟಿ ಸೀನಿ : ಇಲ್ಲ ಅಂತ ಕಣ್ಲ ...ಅವುರೆನೋ ಮಿನಿಸ್ತ್ರಗ್ಬೇಕು ಅಂತ ದಿಲ್ಲಿಗೆ ಹೊಗ್ಯರಂತೆ
ಹಳ್ಳಿ ರಮ್ಮಿ : ಅಲ್ಲೋ, ಈ ಯಪ್ಪಾ ಮಿನಿಸ್ತ್ರಗ್ದೆ ..ನಮ್ಮೂರಿಗೆ ಕರೆಂಟು ಕೊಡೋದಕ್ಕೆ ಅಗಲ್ವೇನೂ ....ಕರೆಂಟು ಇಲ್ದೆ ...ಹೊಲ್ಲಕ್ಕೆ ನೀರಿಲ್ಲ...ಓದೋ ಮಕ್ಳಿಗೆ ರಾತ್ರಿ ಓದೋಕ್ಕೆ ಬೆಳಕ್ಕಿಲ್ಲ ..ಬುಡ್ಡಿ ದೀಪದಾಗೆ ಓದಿಕೊಳ್ತವೆ ಪಾಪ ...ಮಳೆ ಬೇರೆ ಈ ಸಲ ಕೈ ಕೊಟ್ಟು ಬಿಟ್ಯಾತೆ.....
ಸಿಟಿ ಸೀನಿ : ಮಿನಿಸ್ತ್ರಾದ್ರೆ..ನಮ್ಮ ಸಾಯೇಬ್ರಿಗೆ ಪವರ್ ಬರುತ್ತೆ ಕಣ್ಲ , ನಮ್ಮೂರಿಗೆ ಕರ್ರೆಂಟು ಕೇಳೋದಕ್ಕೆ.....
ಹಳ್ಳಿ ರಮ್ಮಿ : ಪವರ್ ಅಂದ್ರೆ ಕರೆಂಟೇ ಅಲ್ವೆನ್ಲ...ನಾನು ತಿಳ್ಕೊಂಡಿದಿನಿ ...ಈಯಪ್ಪಂಗೆ ಪವರ್ ಬರದೆ ನಮಿಗು ಪವರ್ ಬರಲ್ ಅನ್ನು ...
ಸಿಟಿ ಸೀನಿ : ಏನು ಮಾಡೋಕಾಗುತ್ತೆ, ಬಂದಿದು ಕೆಲ್ಸನು ಆಗ್ಲಿಲ್ಲ. ಬೆಳ್ಳಗೆ ಎದ್ದು ನಿನ್ನ ಮುಖ ನೋಡಿದ್ದಾಗ್ಲೆ ಅನ್ಕೊಂಡೆ..ಏನೋ ಎಡವಟ್ಟು ಆಗುತ್ತೆ ಅಂತ....
ಹಳ್ಳಿ ರಮ್ಮಿ : ಅದುಕ್ಕೆ ನಿನ್ನ ದಡ್ಡ ಅನೋದು ಕಣ್ಲ ,ಊರಿಂದ ಬರೋಕಿಂತ ಮುಂಚೆ.....ಸಾಯೇಬ್ರತ್ರ ಏನೋ ಇತ್ತಲೋ ...ಸಿಗರೇಟು ಪ್ಯಾಕ್ ಅಂಗೆ. ನಮ್ಮೂರಿಗೆ ಬಂದಾಗೆಲ್ಲ ಕಿವಿಯಾಗೆ ಇಟ್ಟುಕೊಂಡ್ತಿದ್ರು.
ಸಿಟಿ ಸೀನಿ : ಒಹ್ ಅದ........ ಮೊಬೈಲ್
ಹಳ್ಳಿ ರಮ್ಮಿ : ಊ ಅದೇ ಕಣ್ಲ ...ಅದುಕ್ಕೆ ಕಾಲ್ ಮಾಡಿ ತಿಳ್ಕೊನೋ ಬಿಟ್ಟು...ಇಲ್ಲೇ ಇರ್ತೀರಾ ಇಲ್ಲ ಪವರ್ ತಗೊಂಡು ಬರೋಕೆ ದಿಲ್ಲಿಗೆ ಹೋಗ್ತಿರ ಅಂತ...
ಸಿಟಿ ಸೀನಿ : ಏ, ಅದು ದೊಡ್ದು ದೊಡ್ಡೋರು ಜೊತೆ ಮಾತಾಡೋಕ್ಕೆ ಅಂತ ಇಟ್ಟುಕೊಂಡಿರ ಮೊಬೈಲ್...ನಮಿಗೆಲ್ಲ ನಂಬರ್ ಕೊಡಕಿಲ್ಲ ಅವ್ರು .... ನಡಿ ನಡಿ ಊರುಕಡೆ ಕಾಲಾಕೋಣ ..
ಹಳ್ಳಿ ರಮ್ಮಿ : ಬೆಳ್ಳಗ್ಗೆ ಇಂದ ಹೊಟ್ಟೆ ಖಾಲಿ ಆಗಿ ಒಂದೇ ಸಮನೆ ಆ ವೋಲ್ವೋ ಬಸ್ ಎ.ಸೀ ತರ..ಶಬ್ದ ಮಾಡ್ತಾ ಐತಿ ಕಣ್ಲ ..ಇಲ್ಲೇ ಏನಾದ್ರು ತಿನ್ನೋಣ...ಆಗೋ ... ನೋಡೋ ಅಲ್ಲಿ ಯಾವ್ದೋ ಹೋಟೆಲ್ ಕಾಣ್ತದೆ... ನಡಿ ಹೋಗೋಣ ...
[ಹೋಟೆಲ್ ಒಳಗಡೆ]
ಸಿಟಿ ಸೀನಿ : ನೋಡೋ ಎರಡು ಪ್ಲೇಟು ಇಡ್ಲಿ, ಎರಡು ಟೀ ಹೇಳಿದೀನಿ.
ಹಳ್ಳಿ ರಮ್ಮಿ : ಎಷ್ಟು ದುಡ್ಡು ತಗೊಂಡ ?
ಸಿಟಿ ಸೀನಿ : ಮೂವತ್ತಾರು ರುಪಾಯಿ ಇಡ್ಲಿಗೆ...ಇಪ್ಪತು ರುಪಾಯಿ ಟೀ ಗೆ ತಗೊಂಡ ನೋಡ್ಲ....
ಹಳ್ಳಿ ರಮ್ಮಿ : ಅಲ್ಲ ಅಷ್ಟೊಂದು ತಗೊಂಡು ಎರಡೆರಡು ಇಡ್ಲಿ ಕೊಟ್ಟನಲ್ಲೋ ..ನಮ್ಮುರಾಗಗಿದ್ರೆ ಮೂವತ್ತಾರು ರುಪಾಯಿಗೆ ಒಂದು ಡಜನ್ ಇಡ್ಲಿ ಬಂದಿರ್ತಿದ್ವು .....ಎರಡೇ ಗುಕ್ಕಿಗೆ ಅಗೊದ್ವಲೋ .....ನಡಿ ಮಾರಾಯ...ಊರೂ ಕಡೆ ಹೋಗಿ ಮುದ್ದೆ ಮುರಿಯೋಣ...ಈ ಬೆಂಗಳೂರು ಇಡ್ಲಿ ನಮ್ಮ ಹೊಟ್ಟೆಗೆ ಸಾಲಕಿಲ್ಲ....
ಸಿಟಿ ಸೀನಿ : ನಡಿ ಹೋಗ್ತಾ ಆಟೋದಲ್ಲಿ ಮೆಜಸ್ಟಿಕ್ ಗೆ ಹೋಗಿ..ನಮ್ಮೂರ ಬಸ್ ಅತ್ಕೊಳ್ಳೋಣ..
ಹಳ್ಳಿ ರಮ್ಮಿ : ನಡಿ ನಡಿ...ಈ ಸಲ ಕೆಲಸ ಆಗ್ಲಿಲ್ಲ....ನಾನು ಕೂಡ...ಕಬ್ಬಿನ್ ಪಾರ್ಕು, ಲಾಲಿ ಬ್ಯಾಗು ...ನೋಡಬೇಕಿತ್ತು ..ಮುಂದಿನಸಲ ನೋಡ್ಕೊಳ್ಳೋಣ
ಸಿಟಿ ಸೀನಿ : ಅಲ್ಲಿಗ್ಯಕಪ್ಪ ...ಅಲ್ಲಿ ಏನು ಕೆಲಸ ನಿಂದು ?..ಅದು ಕಬ್ಬನ್ ಪಾರ್ಕ್ ಮತ್ತೆ ಲಾಲ್ಬಾಗ್ ...ಉದ್ಯಾನವನ ಕಣ್ಲ .....ಕಬ್ಬಿನ್ ಪಾರ್ಕು, ಲಾಲಿ ಬ್ಯಾಗು ಅಲ್ಲ.
ಹಳ್ಳಿ ರಮ್ಮಿ : ಒಹ್ ...ನಾನ್ನ್ಕೊಂಡೆ ಕಬ್ಬಿನ್ ಪಾರ್ಕ್ ನ ಗೆ ಕಬ್ಬು ಜಾಸ್ತಿ ಬೆಳೆದಿರ್ತರೆ ಅದುಕ್ಕೆ ಅದುನ ಹಂಗಂತಾರೆ.....ಹೋಗ್ತಾ ಒಂದೆರಡು ಕಬ್ಬು ಕಿತ್ತುಕೊಂಡು ಹೋಗೋಣ ಅಂತ ಇದ್ದೆ....ಲಾಲಿ ಬ್ಯಾಗ್ ಅಂದ್ರೆ ನಮ್ಮಾಕೆ ಹೇಳ್ತಾ ಇದ್ಲು..ಮಗು ತೊಟ್ಲಲ್ಲಿ ಮಲ್ಗೊಕಿಲ್ಲ..ಏನು ಮಾಡೋದು ಅಂತ...ಅದುಕ್ಕೆ ಆ ಲಾಲಿ ಬ್ಯಾಗ ಅಲ್ಲಿ ಅಕಿದ್ರೆ...ಲಾಲಿ ಅಡಿದಂಗೆ ಆಗಿ....ಸುಮ್ನೆ ಮಲಗುತ್ತೆನೂ ಅಂತ ಅನ್ಕೊಂಡಿದ್ದೆ...
ಸಿಟಿ ಸೀನಿ : ಒಳ್ಳೆ ಆಸಾಮಿ ನೀನು !!!...ನಡಿ ಆಟೋ ಬಂತು.....ಆಟೋ....ನಿಲ್ಸಪ್ಪ..ಮೆಜಸ್ಟಿಕ್ ಕಡೆ ನಡಿ...ಆಗೇ ಮೀಟರು ಹಾಕು.... ನೀನು ಹೆಲ್ದೊಷ್ಟು ಕೊಡೋದಕ್ಕೆ ಆಗೋದಿಲ್ಲ...
ಆಟೋ ಡ್ರೈವರ್ : ಆಯಿತು ಬನ್ನಿ...ಮೀಟರ್ ಹಾಕಿಬಿಟ್ಟೆ ಕರೆದುಕೊಂಡು ಹೋಗ್ತೀನಿ...
ಹಳ್ಳಿ ರಮ್ಮಿ : ಅದೇನೋ ...ನಮ್ಮೂರ ಕಡೆ...ಯಾರದ್ರು ಜಾಸ್ತಿ ತಲೆ ತಿನ್ತಿದ್ರೆ...ಒಳ್ಳೆ ಮೀಟರ್ ಹಾಕಿದನಲ್ಲಪ್ಪ ಮಾರಾಯ....ತಪ್ಪುಸ್ಕೋ ಬೇಕು ಅಂತ ಇರ್ತಿವಿ...ಇಲ್ಲಿ ನೋಡಿದ್ರೆ...ನೀನೆ ಆಟೋ ಡ್ರೈವರ್ ಗೆ ಹೇಳಿ ಮೀಟರ್ ಹಾಕು ಅಂತಿಯಾ ?
ಸಿಟಿ ಸೀನಿ : ಮೀಟರ್ ಅಂದ್ರೆ..ಇಲ್ಲಿ ಆಟೋದಲ್ಲಿ ಕಾಣುತ್ತಲ್ಲ ಅದು...ಎಷ್ಟು ಮೈಲಿ ಓಡುತ್ತೆ ಆಟೋ ಅಂತ ತೋರ್ಸುತ್ತೆ ....ಅದ್ರು ಮೇಲೆ ...ದುಡ್ಡು ಕೊಡಬೇಕು..
ಹಳ್ಳಿ ರಮ್ಮಿ : ಒಹ್ ಹಂಗನ್ನು ಮತ್ತೆ.....ಅಲ್ಲಿ ನೋಡ್ಲ...ಹೆಣ್ಣು ಮಗಳು ...ಬೈಕ್ ಓಡುಸ್ತ ಇದಾಳೆ ..ಅದ್ರು ಪಕ್ಕದಲ್ಲಿ ನೋಡು ...ಇನ್ನೊಂದು ಹೆಣ್ಣುಮಗಳು ಕಾರ್ ಓಡುಸ್ತಿದಲೇ .....ಬೆಂಗಳೂರು ಬಹಳ ಮುಂದೊರ್ದಯ್ತಿ ಬಿಡ್ಲ.....ನಮ್ಮ ಹೆಂಡರಿಗೆ ಇನ್ನು ಎತ್ತಿನ
ಗಾಡಿನು ಓಡಿಸೋದ್ದಿಕ್ಕೆ ಬರಲ್ಲ...ಪಾಪ ! ಮದುವೆಯಾಗಿ ಹೋಸದ್ರಲ್ಲಿ ಕೇಳಿದ್ಲು...ಎತ್ತಿನಗಾಡಿ ಕಲಿಸಿ ಅಂತ ...ನಾನೇ...ಜನ ..ಗಂಡುಬೀರಿ ಅಂತಾರೆ ಸುಮ್ನಿರಮ್ಮಿ ಅಂತ ಹೇಳಿದ್ದೆ ..ಈಗ ಉರೀಗೊದಮೇಲೆ ಕಲ್ಲಿಸ್ಕೊಡ್ತೀನಿ...
ಸಿಟಿ ಸೀನಿ : ಸರಿ...ಈಗ ಮೆಜಸ್ಟಿಕ್ ಬಂತು ಇಳ್ಕೋ...ಅಮಲೇ ನೀನು ನಿನ್ನ ಹೆಂಡರಿಗೆ ಎತ್ತಿನ ಗಾಡಿನದ್ರು ಕಲಿಸು....ಇಲ್ಲ ಕುದುರೆ ಗಾಡಿನದ್ರು ಕಲ್ಲಿಸುವಂತೆ....
ಹಳ್ಳಿ ರಮ್ಮಿ : ಆಯಿತು. ಅದ್ರು ಈ ಸಾಹೇಬ್ರು ಮೇಲೆ ನಂಗೆ ಶಾನೆ ಕೋಪ ಬಂದೈತೆ ಬಿಡು....ವೋಟು ಹಾಕೊಬೇಕದ್ರೆ, ನಮ್ಮುನ್ನ ದೇವರು ಕಂಡಂಗೆ ಕಾಣ್ತಾರೆ...ಆಮೇಲೆ ನಾವು ಅವುರು ಕಣ್ಣಿಗೆ ಕಾಣಿಸೋಕಿಲ್ಲ...ಅವುರು ನೋಡಿದ್ರೆ.....ದರ್ಶನ ಕೊಡ್ರಪ್ಪ ಅಂದ್ರು ಈಗ ಆಗೋದಿಲ್ಲ..ಎಲೆಕ್ಷನ್ ಟೈಮ್ನಾಗೆ ಸಿಗೋಣ ಅಂತಾರೆ......ರಾಜ ಯಾರೇ ಅದ್ರು ..ನಮಿಗೆ ಕೂಲಿ ಮಾಡೋದು ತಪ್ಪಕಿಲ್ಲ ನಡಿ ... ಇನ್ನೇನು ಪಕ್ಕದಗೆ ಇರೋದೇ ಅಲ್ವಾ....ನಮ್ಮುರಿಗೊಗೋ ಬಸ್ ನಿಲ್ಲೋ ಜಾಗ....
ಸಿಟಿ ಸೀನಿ : ನೋಡು ನಮ್ಮೂರ ಬಸ್ ಅಲ್ಲೇ ನಿಂತತೆ....
ಹಳ್ಳಿ ರಮ್ಮಿ : ಒಹ್....ಇದೇನಪ್ಪ..ಬೆಂಗಳುರ್ನಗೆ ಮಳೆ ಶುರುವಾಯ್ತು ..ಯಾವಾಗ...ಏನಾಗುತ್ತೆ ಅಂತಾನೆ ಹೇಳೋಕಾಗಲ್ಲ ಇಲ್ಲಿ...ನಮ್ಮ ಜನಕ್ಕೆ ಮಳೆ ಇಲ್ಲ ಅಲ್ಲಿ ...ಜೊತೆಗೆ ಬೆಳೆನು ಇಲ್ಲ.....ಈ ಸಲ ಮುಂಗಾರು ಕೈಕೊಟ್ಟಂತೆ . ...ನಾನು ಮೋಡ ಬಿತ್ನೆ ಯಾವಾಗ ಮಾಡ್ತಾರೆ ಅಂತ ಆಕಾಶದ ಕಡೆ ನೋಡ್ಕೊಂಡು ನಿಂತಿರ್ತೀನಿ....ಇನ್ನು ಇವುರು ನಂಬೋದಕ್ಕೆ ಹಾಗಲ್ಲ .....ಊರಿಗೆ ಹೋಗಿ ಕತ್ತೆ ಮೆರೆವಣಿಗೆನೋ ಇಲ್ಲ ಕಪ್ಪೆಗಳ ಮದುವೇನಾ ಮಾಡೋಣ ನಡಿ....ದೇವ್ರು ನಮ್ಮೇಲೆ ಕಣ್ಣು ಬಿಟ್ಟರು ಬಿಡಬಹುದು.......
--ಚಿತ್ರದುರ್ಗ ಚೇತನ್