ಓಶೋ ನಲ್ನುಡಿ 1: ಪ್ರೀತಿಯಲ್ಲಿ ಉಸಿರಾಡುತ್ತ...
ಪ್ರೀತಿ ಯಾವಾಗಲೂ ಹೊಸತು. ಏಕೆಂದರೆ, ಪ್ರೀತಿ ಕೂಡಿ ಹಾಕಿ ಗುಡ್ಡೆ ಮಾಡುವಂತದ್ದಲ್ಲ.
ಪ್ರೀತಿಗೆ ಹಿಂದಿನದು ತಿಳಿದಿಲ್ಲ; ಅದು ಯಾವಾಗಲೂ ತಾಜಾ, ಮಂಜಿನ ಹನಿಗಳಶ್ಟು ತಾಜಾ. ಪ್ರೀತಿ ಕ್ಷಣದಿಂದ ಕ್ಷಣಕ್ಕೆ ಜೀವಿಸುತ್ತಾ ಹೋಗುತ್ತದೆ, ಪ್ರೀತಿ ಪರಮಾಣು. ಪ್ರೀತಿಗೆ ಮುಂದುವರಿಕೆಯಿಲ್ಲ, ಸಂಪ್ರದಾಯದ ಹಂಗಿಲ್ಲ. ಪ್ರೀತಿ ಈ ಕ್ಷಣ ಸತ್ತು, ಮರುಕ್ಷಣ ಮತ್ತೊಮ್ಮೆ ಹುಟ್ಟುತ್ತದೆ. ಪ್ರೀತಿ ಉಸಿರಿನ ಹಾಗೆ. ನೀವು ಉಸಿರು ಒಳಗೆಳೆದುಕೊಳ್ಳುತ್ತೀರಿ, ಹೊರಗೆ ಬಿಡುತ್ತೀರಿ; ನೀವು ಮತ್ತೆ ಉಸಿರು ಒಳಗೆಳೆದುಕೊಂಡು ಹೊರಗೆ ಬಿಡುತ್ತೀರಿ. ನೀವು ಒಳಗೆ ಅದನ್ನು ಕೂಡಿಹಾಕುವುದಿಲ್ಲ. ಅಲ್ಲವೇ?
ಯಾಕೆಂದರೆ ಹಾಗೇನಾದರೂ ನೀವು ಉಸಿರನ್ನು ಕೂಡಿಹಾಕಿದರೆ ಸಾಯುವಿರಿ. ಏಕೆಂದರೆ, ಉಸಿರು ಹಳೆಯದಾಗುತ್ತದೆ, ನಿರ್ಜೀವವಾಗುತ್ತದೆ. ಉಸಿರು ತನ್ನ ಜೀವಂತಿಕೆಯನ್ನು, ಜೀವನದ ಕಸುವನ್ನು ಕಳೆದುಕೊಳ್ಳುತ್ತದೆ. ಹಾಗೆಯೇ ಪ್ರೀತಿ ಕೂಡ. ಪ್ರೀತಿ ಉಸಿರಾಟದ ಹಾಗೆ; ಪ್ರತಿ ಕ್ಷಣ ತನ್ನನ್ನು ತಾನು ಹೊಸದಾಗಿಸಿಕೊಳ್ಳುತ್ತದೆ. ಆದ್ದರಿಂದಲೇ, ಯಾರಾದರೂ ಪ್ರೀತಿಯಲ್ಲಿ ನಿಂತುಬಿಟ್ಟರೆ, ಉಸಿರಾಟ ನಿಲ್ಲಿಸಿದರೆ, ಜೀವನ ತನ್ನ ಮಹತ್ವ ಕಳೆದುಕೊಳ್ಳುತ್ತದೆ. ನಮ್ಮ ಜನರಿಗೆ ಆಗುತ್ತಿರುವುದೂ ಹಾಗೆಯೇ. ನಮ್ಮ ಮನಸ್ಸು ಎಶ್ಟು ಪ್ರಬಲವಾದುದೆಂದರೆ, ಅದು ಹೃದಯದ ಮೇಲೂ ತನ್ನ ಪ್ರಭಾವ ಬೀರಿ, ಹೃದಯದ ಮೇಲೂ ಒಡೆತನ ಸಾಧಿಸುತ್ತದೆ!ಈ ಹೃದಯಕ್ಕೆ ಒಡೆತನ ಸಾಧಿಸುವುದೆಂದರೆ ಏನು ಎನ್ನುವುದೇ ತಿಳಿದಿಲ್ಲ. ಆದರೆ, ಮನಸ್ಸು ಇದೆಯಲ್ಲ, ಅದು ಹೃದಯವನ್ನು ಹಾಳುಮಾಡುತ್ತದೆ, ನಂಜುಗೊಳಿಸುತ್ತದೆ.
ಆದ್ದರಿಂದಲೇ, ಇರುವಿಕೆಯೊಂದಿಗೆ ಪ್ರೀತಿಯಲ್ಲಿರಿ! ಪ್ರೀತಿ ಉಸಿರಾಟದಂತಿರಲು ಬಿಡಿ. ಉಸಿರು ಒಳಗೆಳೆದುಕೊಂಡು ಹೊರಗೆ ಬಿಡಿ. ಆ ಉಸಿರು ಪ್ರೀತಿಯಾಗಿರಲಿ, ಆ ಪ್ರೀತಿ ಒಳಹೋಗಿ ಹೊರಬರಲಿ. ಕೆಲ ಕ್ಷಣದಲ್ಲಿಯೇ, ಪ್ರತಿಯೊಂದು ಉಸಿರಿನೊಂದಿಗೆ ನೀವು ಪ್ರೀತಿಯ ಜಾದೂವನ್ನು ಸೃಷ್ಟಿಸಬೇಕು. ಪ್ರೀತಿಯನ್ನು ಧ್ಯಾನವಾಗಿಸಿ. ನೀವು ಉಸಿರು ಹೊರಗೆ ಬಿಡುವಾಗ ಹೇಗಿರಬೇಕೆಂದರೆ, ನೀವು ನಿಮ್ಮ ಪ್ರೀತಿಯನ್ನು ಇರುವಿಕೆಗೆ ಸುರಿಯುತ್ತಿರುವಿರೇನೋ ಎಂದೆನಿಸಬೇಕು. ಆಗ ನಿಮಗೆ ನಿಮ್ಮ ಉಸಿರಿನ ಗುಣ ಬದಲಾಗುತ್ತಿರುವಂತೆ ಭಾಸವಾಗುತ್ತದೆ. ಆಗ ಆ ಉಸಿರು ನೀವು ಇದುವರೆಗೆ ತಿಳಿದಿರುವುದಕ್ಕಿಂತ ಸಂಪೂರ್ಣವಾಗಿ ಬೇರೇನೋ ಆಗಿಬಿಡುತ್ತದೆ. ಆದ್ದರಿಂದಲೇ, ಭಾರತದಲ್ಲಿ ಉಸಿರನ್ನು ನಾವು ‘ಪ್ರಾಣ’ ಎಂದು ಕರೆಯುತ್ತೇವೆ. ಅದು ಕೇವಲ ಉಸಿರಾಟವಲ್ಲ, ಕೇವಲ ಆಕ್ಸಿಜನ್ ಅಲ್ಲ. ಬೇರೇನೋ, ಅದು ಜೀವನವೇ!
- ಓಶೋ, ತೆರೆದ ಬಾಗಿಲು, 13ನೇ ನುಡಿ
(Osho, The Open Door, Talk #13)