ಬಿ.ವಿ ಕಕ್ಕಿಲಾಯರ ನೆನಪು

ಬಿ.ವಿ ಕಕ್ಕಿಲಾಯರ ನೆನಪು

ತ್ತೀಚೆಗೆ ನಮ್ಮನ್ನು ಅಗಲಿದ ಕಾಮ್ರೇಡ್ ಬೇವಿಂಜೆ ವಿಷ್ಣು ಕಕ್ಕಿಲಾಯ ಅವರ ನೆನಪಿನಲ್ಲಿ ಈ ಲೇಖನ.

ಕನ್ನಡಿಗರ ಏಳಿಗೆಗಾಗಿ ಶ್ರಮಿಸಿದ ಕಕ್ಕಿಲಾಯರ ಜೀವನದ ಕುರಿತು ಪರಿಚಯ ನೀಡಬೇಕಿಲ್ಲ.

ಕಕ್ಕಿಲಾಯರು ಅಗಲಿದ ಸಮಯ ತೊಂಬತ್ತೊಂದರ ಪ್ರಾಯದ ಕ್ಲಿಷ್ಟತೆಯನ್ನೂ ಮರೆತು ಪೆನ್ನು ಹಿಡಿದು ಮಾನ್ಯರು, ಹಿರಿಯರೂ ಆದ ಅಡ್ಡೂರು ಶಿವಶಂಕರರಾಯರು ಕಕ್ಕಿಲಾಯರ ಆತ್ಮೀಯ ನೆನಪುಗಳನ್ನು ಬರೆದಿಟ್ಟಿದ್ದರು. ಈ ಆತ್ಮೀಯ ನೆನಪುಗಳಲ್ಲಿ ಚಿತ್ರಿತವಾಗಿರುವ ಕಕ್ಕಿಲಾಯರ ಬದುಕಿನ ಕ್ಷಣಗಳು ಓದುಗರಿಗೆ ಮಹತ್ವದ ಪ್ರೇರಣೆಯಾಗಬಹುದೆಂಬ ಆಶಯದಿಂದ ಈ ಬರಹವನ್ನು ಪಡೆದು ಅನುವಾದಿಸಿ ಇಲ್ಲಿ ಪ್ರಕಟಿಸುತ್ತಿದ್ದೇವೆ. - ಸಂಪದ

ಕನ್ನಡಕ್ಕೆ ಅನುವಾದಃ ಎ ಕೃಷ್ಣರಾವ್.


ಬಿ.ವಿ ಕಕ್ಕಿಲಾಯರು ಇನ್ನಿಲ್ಲ. ೪ ಜೂನ್ ೨೦೧೨ ರಂದು ನಮ್ಮನ್ನು ಅಗಲಿದರು.
ಅವರೊಡನೆ ನನ್ನ ಗೆಳೆತನದ ಆರಂಭ ೧೯೪೧ ರ ಫೆಬ್ರವರಿಯಲ್ಲಿ ಮಂಗಳೂರು ವಿದ್ಯಾರ್ಥಿ ಯೂನಿಯನ್ನಿನ ವಾರ್ಷಿಕ ಸಮ್ಮೇಳನದ ಸಂದರ್ಭದಲ್ಲಿ. ಕಕ್ಕಿಲಾಯರು ೧೯೪೧-೪೨ ರ ಅವಧಿಗೆ ವಿದ್ಯಾರ್ಥಿ ಯೂನಿಯನ್ನಿನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ನಮ್ಮ ಕಚೇರಿ ಕೊಡಿಯಾಲಬೈಲಿನಲ್ಲಿತ್ತು. ಕಮ್ಯೂನಿಸಂನ ತತ್ವಗಳನ್ನು ನಾವು ಪ್ರಚಾರ ಮಾಡಿದ್ದು ಅಲ್ಲಿಂದಲೇ. ಆ ಸಮಯದಲ್ಲಿ ಮಂಗಳೂರಿನಲ್ಲಿ ರಾಜಕೀಯವಾಗಿ ಸಕ್ರಿಯವಾಗಿದ್ದದ್ದು ನಮ್ಮ ಗುಂಪು ಮಾತ್ರ.


ಆಗ ಎರಡನೆಯ ಜಾಗತಿಕ ಮಹಾಯುದ್ಧದ ಕಾಲ. ಜೀವನಾವಶ್ಯಕ ವಸ್ತುಗಳ ಬೆಲೆಗಳು ಏರುತ್ತಿದ್ದಂತೆ ಕಾಳಸಂತೆ ವ್ಯವಹಾರವೂ ಹೆಚ್ಚುತ್ತಿತ್ತು. ಅಂತಹ ಸನ್ನಿವೇಶದಲ್ಲಿ ಕಾರ್ಮಿಕರನ್ನು ಸಂಘಟಿಸಲು ನಾವು ನಿರ್ಧರಿಸಿದೆವು. ಅದರಂತೆ ಬೀಡಿ ಮತ್ತು ಕೈ ಮಗ್ಗ ಘಟಕಗಳ, ಹಂಚಿನ ಮತ್ತು ಗೇರು ಕಾರ್ಖಾನೆಯ ಮಂಗಳೂರಿನ ಹಳೆ ಬಂದರಿನ ಕೂಲಿಕಾರರನ್ನು ಸಂಘಟಿಸಲು ಶಕ್ತರಾದೆವು.
ವಿದ್ಯಾರ್ಥಿ ಯೂನಿಯನಿನಲ್ಲಿ ನಾವು ಸಕ್ರಿಯವಾಗಿದ್ದೆವು. ಹಾಗಾಗಿ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳನ್ನು ಸೇರಿಸಿಕೊಂಡು ಜನ ಸಂಘಟನೆಗೆ ತೊಡಗಿದೆವು. ಆಹಾರ ಧಾನ್ಯಗಳ ಕೊರತೆಯಿಂದಾಗಿ ಜನಸಾಮಾನ್ಯರು ಬಳಲುತ್ತಿದ್ದಾಗ, ರೇಷನ್ ಕಾರ್ಡ್ ನೀಡಬೇಕೆಂಬ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟೆವು. ರೇಷನ್ ಕಾರ್ಡ್ ಎಂದರೇನು? ಅದನ್ನು ಪಡೆಯಲು ಅರ್ಹರಾದವರ ಪಟ್ಟಿ ತಯಾರಿಸುವುದು ಹೇಗೆ? ಇವೆಲ್ಲ ಆಗ ಯಾರಿಗೂ ತಿಳಿದಿರಲಿಲ್ಲ. ಹಾಗಾಗಿ ರೇಷನ್ ಕಾರ್ಡ್ ಬರೆದು, ಅರ್ಹ ವ್ಯಕ್ತಿಗಳಿಗೆ ವಿತರಿಸುವ ಕೆಲಸವನ್ನು ಮುಖ್ಯವಾಗಿ ಕಮ್ಯೂನಿಸ್ಟ್ ಪಾರ್ಟಿಯ ಸದಸ್ಯರೇ ಮಾಡಬೇಕಾಯಿತು. ಇದರಿಂದಾಗಿ ಜನಸಮುದಾಯದಲ್ಲಿ ಕಮುಯುನಿಸ್ಟ್ ಪಾರ್ಟಿಯ ಬಗ್ಗೆ ವಿಶ್ವಾಸ ಬೆಳೆಯಿತು.
ದಕ್ಷಿಣ ಕನ್ನಡದ ಕಾರ್ಕಳ, ಬಂಟ್ವಾಳ, ಪುತ್ತೂರು, ಉಡುಪಿ, ಮತ್ತು ಕುಂದಾಪುರಗಳಲ್ಲಿ ಕಾರ್ಮಿಕರ ಯೂನಿಯನ್ ಗಳನ್ನು ಆರಂಭಿಸಿದೆವು. ಬೀಡಿ, ಹಂಚು ಮತ್ತು ಗೇರು ಕಾರ್ಖಾನೆಯ ಕಾರ್ಮಿಕರನ್ನು ಸಂಘಟಿಸಿ, ತುಟ್ಟಿಭತ್ತೆ ಮತ್ತು ಬೋನಸ್ ಪಾವತಿಗಾಗಿ ಹೋರಾಟ ಆರಂಭಿಸಿದೆವು. ಈ ಎಲ್ಲ ಕೆಲಸ ಕಾರ್ಯಗಳನ್ನು ಮುಂದೊತ್ತಲು ಹೊಸ ರೀತಿಯ ಚಿಂತನೆ ಮಾಡಬಲ್ಲ ನಾಯಕರ ಅಗತ್ಯವಿತ್ತು. ಆಯಾ ಕೈಗಾರಿಕೆಗಳ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಅವರಿಗೆ ಬೇಕಾಗಿತ್ತು.
ಅಂತಹ ಸಮಯದಲ್ಲಿ ಕಾರ್ಮಿಕ ಸಂಘಟನೆಗಳ ಮುಂದಾಳುತನ ವಹಿಸಿದವರು ಬಿ.ವಿ ಕಕ್ಕಿಲಾಯರು ಮತ್ತು ಶಾಂತಾರಾಮ್ ಪೈ. ಅವರಿಗೆ ಬಿ.ಎಸ್ ಮುಂಡ್ಕೂರು, ಎಸ್.ಆರ್ ಭಟ್, ಐ.ಎಂ ನಾರಾಯಣ ಮೂರ್ತಿ, ಸಿಂಪ್ಸನ್ ಸೋನ್ಸ್ , ಕೇಶವ ಕಾಮತ್ ಮತ್ತು  ಮೋನಪ್ಪ ಶೆಟ್ಟಿ ಇವರ ಸಮರ್ಥ ಬೆಂಬಲ. ಪ್ರತಿಭಟನಾ ಕಾರ್ಯಕ್ರಮಗಳ ಜೊತೆಗೆ ಜನಸಮುದಾಯದ ಸಂಘಟನೆಯನ್ನು ಬಲಪಡಿಸಬೇಕಾಗಿತ್ತು. ಈ ಕಾಯಕದಲ್ಲಿ ಮುಂಚೂಣಿಗೆ ನಿಂತವರು ಬಿ.ವಿ ಕಕ್ಕಿಲ್ಲಾಯರು ಮತ್ತು ಶಾಂತಾರಾಮ ಪೈ.
ಬಿ.ವಿ ಕಕ್ಕಿಲ್ಲಾಯರು ಉತ್ತಮ ಭಾಷಣಕಾರ. ಕಾರ್ಮಿಕರಿಗೆ ಅವರ ಬಗ್ಗೆ ತುಂಬ ಅಭಿಮಾನ. ಅವರ ಲೇಖನಿಯಿಂದ ಕಾರ್ಮಿಕರ ಹಕ್ಕೊತ್ತಾಯದ ಪತ್ರಗಳು ಹರಿತವಾಗಿ ಮೂಡಿ ಬರುತ್ತಿದ್ದವು. ಕಾರ್ಮಿಕರ ಹಕ್ಕುಮಂಡನೆ ಬಗ್ಗೆ ಕರಪತ್ರಗಳನ್ನು ರೂಪಿಸುತ್ತಿದ್ದರು. ಎಲ್ಲ ರೀತಿಯಿಂದಲೂ ಉತ್ತಮ ನಾಯಕರಾಗಿದ್ದ ಅವರು, ಕಮ್ಯುನಿಸ್ಟ್ ಪಕ್ಷವನ್ನು ಕರಾವಳಿ ಕರ್ನಾಟಕದಲ್ಲಿ ಬಲಪಡಿಸುವ ಜವಬ್ದಾರಿ ವಹಿಸಿಕೊಂಡರು.
ಅನಂತರ ೧೯೫೨ ರಲ್ಲಿ ಚುನಾವಣೆಯಲ್ಲಿ ಅವರ ಯೋಗ್ಯತೆಯನ್ನು ಕಮ್ಯೂನಿಸ್ಟ್ ಪಕ್ಷ ಗುರುತಿಸಿತು. ಅವರು ರಾಜ್ಯ ಸಭೆಯ ಸದಸ್ಯರಾಗಿ ಚುನಾಯಿತರಾದರು, ಸಂಸದಿಗನಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಅವರಿಂದಾಗಿ ಕರ್ನಾಟಕಕ್ಕೆ ಸಹಾಯವಾಯಿತು.
ಕರ್ನಾಟಕದ ಕರಾವಳಿಯಲ್ಲಿ ಕಮ್ಯುನಿಸ್ಟ್ ಪಕ್ಷದ ಚಟುವಟಿಕೆಗಳನ್ನು ಮುನ್ನಡೆಸುತ್ತಿದ್ದ ಬಿ.ವಿ ಕಕ್ಕಿಲಾಯರನ್ನು ೧೯೪೨ ರಲ್ಲಿ ಬಂಧಿಸಲಾಯಿತು. ಆಗ ವಿಚಾರಣಾಧೀನ ಖೈದಿಯಾಗಿ ಕೆಲವು ತಿಂಗಳು ಸೆರೆಮನೆಯಲ್ಲಿದ್ದರು. ೧೯೪೬ ರಲ್ಲಿ ಪುನ: ಅವರನ್ನು ಇತರ ನಾಲ್ವರೊಂದಿಗೆ ಬಂಧಿಸಿ ಕಣ್ಣನೂರು ಜೈಲಿನಲ್ಲಿ ಇರಿಸಲಾಯಿತು. ಮತ್ತೆ ಮತ್ತೆ ಬಂಧನಕ್ಕೆ ಒಳಗಾಗುತ್ತಿದ್ದ ಬಿ.ವಿ ಕಕ್ಕಿಲಾಯರು ಪ್ರತಿಭಟನೆಗಳಲ್ಲಿ ಭಾಗವಹಿಸಬಾರದೆಂದು ಅವರಿಗೆ ಅಣ್ಣಂದಿರಿಂದ ಬಹಳ ಒತ್ತಾಯವಿತ್ತು. ಆದರೆ ಕ್ರಮೇಣ ಈ ವಿಚಾರದಲ್ಲಿ ಅವರ ಅಣ್ಣಂದಿರು ಕೈಚೆಲ್ಲಿದರು ಯಾಕೆಂದರೆ ಆಂದೋಲನಕ್ಕೆ ಪ್ರಬಲ ನಿಷ್ಟೆ ಹೊಂದಿದ್ದ ಬಿ.ವಿ ಕಕ್ಕಿಲಾಯರು ತಮ್ಮ ಧೋರಣೆ ಬದಲಾಯಿಸಲು ತಯಾರಿರಲಿಲ್ಲ. ಗೋವಾ ಬಿಡುಗಡೆ ಸತ್ಯಾಗ್ರಹದಲ್ಲಿ ಅವರು ಪಾಲ್ಗೊಂಡರು. ೧೯೪೮ ರಿಂದ ೧೯೫೧ ರ ವರೆಗೆ ಕಮ್ಯುನಿಸ್ಟ್ ಪಕ್ಷದ ಚಟುವಟಿಕೆಗಳಿಗೆ ನಿಷೇಧವಿದ್ದಾಗ ಅವರು ಭೂಗತರಾಗಿ ಚಟುವಟಿಕೆಯಿಂದಿದ್ದರು - ಮೊದಲು ದಕ್ಷಿಣ ಕನ್ನಡದಲ್ಲಿ, ಅನಂತರ ದಾವಣಗೆರೆಯಲ್ಲಿ.
ದಕ್ಷಿಣ ಕನ್ನಡದಲ್ಲಿ ಅವರ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದರು. ಅವರೊಮ್ಮೆ ರೈಲ್ವೇ ಹಳಿಯ ಗುಂಟ ನಡೆದು ಹೋಗುತ್ತಿದ್ದಾಗ, ಕೆಲವು ಪೊಲೀಸರು ಅವರ ಬೆನ್ನು ಹತ್ತಿದರು. ಕಕ್ಕಿಲಾಯರು ಬೇಗ ಬೇಗ ಹೆಜ್ಜೆ ಹಾಕತೊಡಗಿದಾಗ ಪೊಲೀಸರು ಚುರುಕಾಗಿ ಮುಂದೊತ್ತಿದರು. ಪೊಲೀಸರು ಹತ್ತಿರ ಬರುತ್ತಿದ್ದಂತೆ ಕಕ್ಕಿಲಾಯರು ರೈಲ್ವೇ ಹಳಿಗಳ ಪಕ್ಕದ ಇಳಿಜಾರಿನಲ್ಲಿ ಜಿಗಿದರು. ಅಲ್ಲಿ ಕೆಳಗೆ ಬಯಲಿನಲ್ಲಿ ಬಯಲಾಟ ನಡೆಯುತ್ತಿತ್ತು. ಅಲ್ಲಿದ್ದ ಕಮ್ಯೂನಿಸ್ಟ್ ಪಾರ್ಟಿಯ ಹಲವು ಕಾರ್ಯಕರ್ತರು ಜಿಗಿದು ಗಾಯಗೊಂಡಿದ್ದ ಕಕ್ಕಿಲಾಯರನ್ನು ಗುರುತಿಸಿದರು. ಅವರೆಲ್ಲ ಸೇರಿ ಕಕ್ಕಿಲಾಯರನ್ನು ಪಕ್ಕಕ್ಕೆ ಕರೆದೊಯ್ದು ಅವಿತಿಟ್ಟರು. ಪೊಲೀಸರು ಅಲ್ಲಿಗೆ ಬಂದು ಹುಡುಕಾಡಿದರೂ ಅವರಿಗೆ ಕಕ್ಕಿಲಾಯರನ್ನು ಪತ್ತೆಮಾಡಲು ಸಾಧ್ಯವಾಗಲಿಲ್ಲ. “ ರೈಲ್ವೇ ಹಳಿಯಿಂದ ಕೆಳಗೆ ಹಾರಿದವರು ಕಕ್ಕಿಲಾಯರೇ, ಬೇರಾರೂ ಅಲ್ಲ” ಎಂದು ಮಾತನಾಡಿಕೊಳ್ಳುತ್ತಾ ಪೊಲೀಸರು ಅಲ್ಲಿಂದ ಹೊರಟುಹೋದರು.
ಭೂಗತರಾಗಿದ್ದ ದಿನಗಳಲ್ಲಿ ಕಕ್ಕಿಲಾಯರು ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರೊಂದಿಗೆ ವಾಸಮಾಡುತ್ತಿದ್ದರು. ಆಗ ಅವರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ನಡೆದೇ ಹೋಗುತ್ತಿದ್ದರು. ಒಮ್ಮೆ ಕೊಡಗಿನ ಗಡಿಯವರೆಗೆ ಕಾಲ್ನಡಿಗೆಯಲ್ಲಿಯೇ ಹೋಗಿದ್ದರು.
ನಾನು ದಾವಣಗೆರೆಯಲ್ಲಿ ಭೂಗತನಾಗಿದ್ದು ಕಮ್ಯುನಿಸ್ಟ್ ಪಕ್ಷವನ್ನು ಬಲಪಡಿಸುವ ಕೆಲಸದಲ್ಲಿ ತೊಡಗಿದ್ದೆ. ಅಲ್ಲಿ ನಾನು ವಡ್ಡರ ಮನೆಯಲ್ಲಿ ವಾಸಿಸುತ್ತಿದ್ದೆ. ಕಕ್ಕಿಲಾಯರು ಅಲ್ಲಿಂದ ನನ್ನನ್ನು ಭದ್ರಾವತಿಗೆ ಕಳಿಸಿದರು.
ನಾನು ಭದ್ರಾವತಿಯಲ್ಲಿ ಕಾರ್ಮಿಕ ಸಂಘಟನೆಗೆ ಅಡಿಪಾಯ ಹಾಕತೊಡಗಿದೆ. ಬಿ.ವಿ ಕಕ್ಕಿಲಾಯರು ದಾವಣಗೆರೆಯಲ್ಲಿ ಸಂಘಟನೆ ಬಲಪಡಿಸುವ ಕೆಲಸ ಮುಂದುವರೆಸಿದರು.
ಅವರು ಅಲ್ಲೊಂದು ಮನೆಯಲ್ಲಿ ಭೂಗತವಾಗಿದ್ದು ಪಕ್ಷದ ಕೆಲಸ ಮಾಡುತ್ತಿದ್ದರು. ಅವರಿಗೆ ಪತ್ರಗಳು ಬರುತ್ತಿದ್ದವು. ಅಂಚೆ ಇಲಾಖೆಯ ನೆರವಿನಿಂದ ಆ ಪತ್ರಗಳ ಜಾಡು ಹಿಡಿದು ಪೊಲೀಸರು ಅವರ ನೆಲೆಯನ್ನು ಪತ್ತೆಮಾಡಿ ಅವರನ್ನು ಪುನ: ಬಂಧಿಸಿದರು. ಆಗ ದಾವಣಗೆರೆಯ ಸಬ್ ಜೈಲಿನಲ್ಲಿ ಬೆಂಗಳೂರಿನ ಶ್ರೀಕಾಂತೇಶ್ವರ ಜೊತೆ ಕಕ್ಕಿಲಾಯರಿಗೆ ಜೈಲುವಾಸ.
ಆ ಸಬ್ ಜೈಲಿನಿಂದ ತಪ್ಪಿಸಿಕೊಂಡದ್ದು ಬಿ.ವಿ ಕಕ್ಕಿಲಾಯರ ಸಾಹಸ ಪ್ರವೃತ್ತಿಗೆ ನಿದರ್ಶನ. ಕಿಟಕಿಯ ಸರಳುಗಳನ್ನು ಕತ್ತರಿಸಿ ಅವರು ಸಬ್ ಜೈಲಿನಿಂದ ಸಂಗಾತಿಯ ಜೊತೆ ಹೊರ ಬಂದರು. ಅವರಿಗೆ ಜೈಲಿನ ಹೊರಗಡೆಯಿಂದ ಯಾರು ಸಹಾಯ ಮಾಡಿರಲಿಲ್ಲ. ಅವರಿಬ್ಬರು ರೈಲು ಹಳಿಯ ಪಕ್ಕದಲ್ಲೇ ನಡೆದುಕೊಂಡು ಹೋಗಿ, ತುಂಗಭದ್ರಾ ನದಿ ದಾಟಿದರು. ಅನಂತರ ತೆಲಗಿಯಲ್ಲಿ ರೈಲು ಹತ್ತಿದಾಗ ಪೊಲೀಸರು ಅವರನ್ನು ಪುನ: ಬಂಧಿಸಿ ರಾಣಿಬೆನ್ನೂರು ಸಬ್ ಜೈಲಿಗೆ ಒಯ್ದರು.
ಅಲ್ಲಿಂದ ಅವರನ್ನು ಬೆಂಗಳೂರಿನ ಜೈಲಿಗೆ ಒಯ್ದು ಬಂಧನದಲ್ಲಿ ಇರಿಸಲಾಯಿತು. ಅಂತೂ ೧೯೫೧ ರಲ್ಲಿ ಮಹಾಚುನಾವಣೆಯ ಸಂದರ್ಭದಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು.
ಜೈಲಿನಿಂದ ಬಿಡಿಗಡೆಯಾದ ಬಳಿಕ ಅವರು ದಕ್ಷಿಣ ಕನ್ನಡಕ್ಕೆ ಹಿಂತಿರುಗಿ, ಕಮ್ಯುನಿಸ್ಟ್ ಪಕ್ಷ ಬಲಪಡಿಸುವ ಜವಾಬ್ದಾರಿ ವಹಿಸಿದರು. ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದರು, ಅನಂತರ ಹಿಂತೆಗೆದುಕೊಂಡರು. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪ್ರಚಾರದ ಹೊಣೆಹೊತ್ತರು. ಮಂಗಳೂರು, ಬಂಟ್ಟಾಳ ಮತ್ತು ಮಂಜೇಶ್ವರ ತಾಲೂಕುಗಳಲ್ಲಿ ತಳಮಟ್ಟದಲ್ಲಿ ಚುನಾವಣಾ ಪ್ರಚಾರ ನಿರ್ವಹಿಸಿದರು.
ಆ ಚುನಾವಣೆಯಲ್ಲಿ ಕಮ್ಯೂನಿಸ್ಟ್ ಪಕ್ಷಕ್ಕೆ ಹಿನ್ನೆಡೆ ಉಂಟಾಯಿತು. ಆದರೆ ಬಿ.ವಿ ಕಕ್ಕಿಲಾಯರ ಉತ್ಸಾಹ ಕುಗ್ಗಲಿಲ್ಲ. ಅವರು ಕಮ್ಯೂನಿಸ್ಟ್ ಪಕ್ಷದ ಚಟುವಟಿಕೆಗಳನ್ನು ನಿರಂತರವಾಗಿ ಮುಂದುವರಿಸಿದರು.
ಅನಂತರ ಅವರು ರಾಜ್ಯಸಭೆಗೆ ಆಯ್ಕೆಯಾಗಿ, ಅಲ್ಲಿ ಕರ್ನಾಟಕವನ್ನು ಸಮರ್ಥವಾಗಿ ಪ್ರತಿನಿಧಿಸಿದ್ದು ಈಗ ಇತಿಹಾಸ. ಎರಡು ವರುಷ ರಾಜ್ಯಸಭಾ ಸದಸ್ಯರಾಗಿದ್ದಾಗ, ಕರ್ನಾಟಕದಲ್ಲಿ ಕಮ್ಯುನಿಸ್ಟ್ ಪಕ್ಷದ ಪ್ರಭಾವ ಹೆಚ್ಚಿಸಲು ಕಾರಣರಾದರು.
೧೯೬೦-೬೧ ರ ಭಾರೀ ಮಳೆಯಲ್ಲಿ ಮಂಗಳೂರಿನ ಕಮ್ಯೂನಿಸ್ಟ್ ಪಕ್ಷದ ಕಚೇರಿ ಬಿದ್ದು ಹೋಯಿತು. ಅನಂತರ ಪಕ್ಷದ ಕಚೇರಿಯನ್ನು ಉರ್ವ ಮಾರ್ಕೆಟಿನ ಹತ್ತಿರದ ಕಂಪೌಂಡಿಗೆ ಸ್ಥಳಾಂತರಿಸಲಾಯಿತು.
ಅದರ ಪಕ್ಕದ ಮನೆಯಲ್ಲಿ ನನ್ನ ಪತ್ನಿ ಸುಶೀಲಳ ತಂಗಿ ಅಹಲ್ಯ ಮತ್ತು ತಮ್ಮಂದಿರು ವಾಸವಾಗಿದ್ದರು. ಕ್ರಮೇಣ ಅವರಿಗೆ ಪರಿಚಯವಾಗಿ ೧೯೬೪ ರಲ್ಲಿ ಬಿ.ವಿ ಕಕ್ಕಿಲಾಯ ಮತ್ತು ಅಹಲ್ಯ ವಿವಾಹವಾದರು.
ಅನಂತರ ಅವರು ಮಂಗಳೂರಿನಲ್ಲಿ, ಮುಂದೆ ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ಕಮ್ಯೂನಿಸ್ಟ್ ಪಕ್ಷದ ಚಟುವಟಿಕೆಯನ್ನು ಮುಂದುವರಿಸಿದರು. ತದನಂತರ, ಕೇರಳದ ಬದಿಯಡ್ಕದಲ್ಲಿ ತಮ್ಮ ಮಿಂಚಿಪದವಿನ ಜಮೀನಿನ ಹತ್ತಿರ ವಾಸವಾಗಿದ್ದರು. ಅಷ್ಟರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಿಗದಿಯಾಯಿತು.
ಬಂಟ್ಟಾಳ ಕ್ಷೇತ್ರದಿಂದ ಬಿ.ವಿ ಕಕ್ಕಿಲಾಯರು ಸ್ಪರ್ಧಿಸಿ (ಕಾಂಗ್ರೆಸ್ ಪಾರ್ಟಿ ಸಹಯೋಗದಲ್ಲಿ) ಗೆದ್ದರು.
ಶಾಸಕರಾಗಿ ಚುನಾಯಿತರಾದ ಬಳಿಕ ಬಿ.ವಿ ಕಕ್ಕಿಲಾಯರು ಹೊಸ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದರು.

ನನ್ನ ಪ್ರಕಾರ, ನಮ್ಮ ಸಮಾಜಕ್ಕೆ ಬಿ.ವಿ.ಕಕ್ಕಿಲಾಯರ ಅತಿ ದೊಡ್ಡ್ ಕೊಡುಗೆ ನವಕರ್ನಾಟಕ ಪ್ರಕಾಶನ ಸಂಸ್ಥೆಯ ಸ್ಥಾಪನೆ. ಡಾ. ಸುಬ್ಬರಾವ್, ಡಾ. ಶಾಸ್ತ್ರಿ ಹಾಗು ಇತರ ಸಮಾನ ಮನಸ್ಕರ ಜೊತೆಗೂಡಿ ಅವರು ಸ್ಥಾಪಿಸಿದ ಆ ಸಂಸ್ಥೆ ಕನ್ನಡ ಪುಸ್ತಕ ಪ್ರಕಾಶನ ಪ್ರಪಂಚದಲ್ಲಿ ಇಂದು ಹೆಮ್ಮೆರವಾಗಿ ಬೇರೂರಿದೆ.

ಕನ್ನಡದಲ್ಲಿ, ಒಂದು ಸಾವಿರಕ್ಕೂ ಹೆಚ್ಚು ಮೌಲಿಕ ಪುಸ್ತಕಗಳನ್ನು ಪ್ರಕಟಿಸಿದೆ. ಪ್ರಗತಿಪರ ಪುಸ್ತಕಗಳ ಪ್ರಕಟಣೆಯಲ್ಲಂತೂ ಮಂಚೂಣಿಯಲ್ಲಿದೆ. ತನ್ನ ಶಾಖೆಗಳ ಹಾಗು ಪುಸ್ತಕ ಪ್ರದರ್ಶನಗಳ ಮೂಲಕ ನಿರಂತರವಾಗಿ ಜ್ಞಾನ ಪ್ರಸಾರದ ಕೆಲಸ ಮಾಡುತ್ತಿದೆ.

ಬಿ.ವಿ. ಕಕ್ಕಿಲಾಯರು ನಮ್ಮನ್ನು ಅಗಲಿದ್ದಾರೆ. ಆದರೆ ಅವರು ಮಾಡಿದ ಮೌಲಿಕ ಕೆಲಸಗಳಿಗೆ ಅಳಿವಿಲ್ಲ. ತನ್ನ ಪುಸ್ತಕಗಳ ಮೂಲಕ ಅವರು ಬಹುಕಾಲ ಬಾಳುತ್ತಾರೆ.

ಚಿತ್ರ ಕೃಪೆಃ ಕಕ್ಕಿಲಾಯ.com

Comments