ನೂರು ದಿನಗಳ ನಂತರ...
ಇಂದಿಗೆ ಸರಿಯಾಗಿ ನೂರು ದಿನಗಳು. ನೂತನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಧಿಕಾರ ವಹಿಸಿ ಕೊಂಡಲ್ಲ. ಪಾಪ ಇನ್ನೂರು ಘಂಟೆಗಳೂ ಕಳೆದಿಲ್ಲ ಅವರಿಗೆ. ನಮ್ಮ ದೇಶದ hottest ಕುರ್ಚಿ ಮೇಲೆ ಕೂತು. ನೂರು ದಿನಗಳು ಕಳೆದಿದ್ದು ನನ್ನ ಹಳೆ ಸೇತುವೆ ಮೇಲೆ ಓಡಾಡಿ. ಮೇ ಐದಕ್ಕೆ ನನ್ನ ಕೊನೆಯ ಬ್ಲಾಗು. ನಾನು ಬ್ಲಾಗ್ ಅನ್ನ ಅಪ್ಡೇಟ್ ಮಾಡದೇ ಇದ್ದರೆ ಆಗಸವೇನೂ ಕಳಚಿ ಬೀಳೋಲ್ಲ ಅನ್ನಿ, ಆದರೂ ಅಲ್ಲಿ ಇಲ್ಲಿ ಅಂತ ಕೆಲವು "ರವಿ" ಯವರಂಥ ಸಹೃದಯಿಗಳು ನನ್ನ "ಭಾರತ ಬಂದ್" ಗೆ ಬಿಕೋ ಎನ್ನುವ ಬೀದಿಗಳ ಥರ ನನ್ನ ಸೇತುವೆಯೂ ಬರಿದಾದದ್ದರ ಕುರಿತು ಕಾಳಜಿಯಿಂದ ಬರೆದು ಕೇಳುತ್ತಾರೆ. ಏನ್, ಅಬ್ದುಲ್, ಸೇತುವೆ ಮೇಲೆ ಕಲರವ ಕೇಳಿಸ್ತಾ ಇಲ್ವಲ್ಲಾ ಎಂದು. ಈ ನೂರು ದಿನಗಳ ಅವಧಿಯಲ್ಲಿ ಸೇತುವೆ ಅಡಿ ಸಾಕಷ್ಟು ಕಬ್ಬಿಣ, ಉಕ್ಕು, ಸಕ್ಕರೆ, ಕಾರ್ಖಾನೆಗಳ ಹೊಲಸು ತುಂಬಿ ಕೊಂಡಿದೆ. ಸಾಲದೆಂಬಂತೆ ಸಾಕಷ್ಟು ಮೊಸಳೆಗಳೂ ಮರಿ ಹಾಕಿವೆ. ಹಾಂ, ಮೊಸಳೆ? ಭದ್ರಾ ನದಿಯಲ್ಲಿ? ಎಂದಿರಾ. ಹೌದಂತೆ. ಕಳೆದ ತಿಂಗಳ ಭಾರತ ಪ್ರವಾಸ ದ ವೇಳೆ ಸಿಕ್ಕ ಮಾಹಿತಿ ಇದು. ವೆರಿ ವೆರಿ ಥಾಟ್ ಪ್ರೊವೋಕಿಂಗ್. ಸಾರಿ, ಸಾರಿ ವೆರಿ ವೆರಿ ಫ್ರೈಟನಿಂಗ್. ಅಲ್ವಾ ಮತ್ತೆ. ಇದೇ ಭದ್ರಾ ನದಿಯಲ್ಲಿ ನಾನೆಷ್ಟು ಸಲ ಮನೆಯವರ ಕಣ್ತಪ್ಪಿಸಿ ನದೀ ಮಧ್ಯದ ಆಮೆ ಕಲ್ಲಿನ ಮೇಲೆ ಹಾಯಾಗಿ ಬಿದ್ದು ಕೊಂಡಿರಲಿಕ್ಕಿಲ್ಲ? ನಮ್ಮ ಹೆಂಗಳೆಯರೂ ಬಟ್ಟೆ, ಪಾತ್ರೆ ಪಗಡಿ ತೊಳೆಯಲು ಎಂದು ಹೋಗಿಲ್ಲ? ಈಗ ನೋಡಿದರೆ ಮೊಸಳೆಗಳ ಅಡ್ಡಾ ಆಗಿದೆಯಂತೆ ಭದ್ರಾ. ಒಂದು ಕಡೆ ನಮ್ಮ ದೇಶ ಲಂಚಗಡುಕ ಮೊಸಳೆಗಳ ಅಡ್ಡಾ ಆಗುತ್ತಿದ್ದರೆ ಮತ್ತೊಂದು ಕಡೆ ನನ್ನ ಪ್ರೀತಿಯ ಭದ್ರಾ ನದಿ ಮೊಸಳೆಗಳ ಅಡ್ಡಾ. ಅಬ್ಬಾ! ಆದರೂ ಈ ಸಲ ಹೋದಾಗ ಅಲ್ಲಿ ಇಲ್ಲಿ ಎಂದು ಹೆಣ್ಣು ಮಕ್ಕಳು ಈಗಲೂ ಬಟ್ಟೆ ಒಗೆಯುತ್ತಿದ್ದರು. ಇಲ್ಲದಿದ್ದರೂ ನಮ್ಮ ಜನರಿಗೆ ಭಂಡ ಧೈರ್ಯ ಸ್ವಲ್ಪ ಹೆಚ್ಚೆಂದೇ ಹೇಳಬೇಕು. ಈ ಸಲ ಭಾರತಕ್ಕೆ ಬರೋ ಮೊದಲು ನದಿಯ ಮೇಲೆ ತೆಪ್ಪದ ಮೇಲೆ ತೆವಳುವ ಆಸೆ ಉಟ್ಕಂತು. ತೆಪ್ಪ ಗೊತ್ತಲ್ಲ? ದುಂಡಗಿನ, ಯಾವುದೋ ಒಂದು ಗಡುಸಾದ ಪ್ರಾಣಿಯ ಚರ್ಮ ವನ್ನು ಮರದ ಫ್ರೇಮ್ ಗೆ ಅಂಟಿಸಿ ತಯಾರಿಸಿದ ವೆರಿ ಸಿಂಪಲ್ ದೋಣಿ. ಅದೇ ತೆಪ್ಪ. ಆಂಗ್ಲ ಭಾಷೆಯಲ್ಲಿ ತೆಪ್ಪಕ್ಕೆ coracle ಎನ್ನುತ್ತಾರೆ. ಸರಿ ನನ್ನ ತೆಪ್ಪದ ಮೇಲಿನ ತೆವಳುವಿಕೆಯ ಆಸೆ ಮೊಸಳೆ ಬಾಯಿ ಸೇರಿ ಕೊಂಡಿತು. ತೆಪ್ಪದ ಮೇಲೆ ಪಯಣಿಸುವ ಆಸೆ ನನ್ನ ಮಿತ್ರರಿಗೆ ಹೇಳಿದಾಗ ಯಾಕಪ್ಪಾ, ಸಾಯೋಕೆ ಸೌದಿ ಯಲ್ಲಿ ಜಾಗ ಸಿಗ್ಲಿಲ್ವಾ ಎಂದು ಹೇಳುತ್ತಾ ಮೊಸಳೆ ಕತೆ ಕೇಳಿಸಿದರು. ಅಲ್ಲಿಗೆ ಆ ಆಸೆ ಮುದುರಿಕೊಂಡಿತು.
ಈ ನೂರು ದಿನಗಳ ಅವಧಿಯಲ್ಲಿ ನಮ್ಮ ರಾಜ್ಯದಲ್ಲಿ ನಿತ್ಯಾನಂದನ ರಾಸ ಲೀಲೆಯಿಂದ ಹಿಡಿದು ಯಡ್ಡಿ, ಸದಾನಂದರ ರಾಜಕೀಯ ದಾಳದಾಟ, ರಾಷ್ಟ್ರಪತಿ ಹುದ್ದೆಗೆ ಇದ್ದಕ್ಕಿದ್ದಂತೆ ಯೋಗ್ಯರ ಬರ ನಮ್ಮ ದೇಶದ ಮೇಲೆ ಮಗುಚಿ ಬಿದ್ದಿದ್ದು (ಭಾರತದ ಕ್ರಿಕೆಟ್ ಗೆ ಸಚಿನ್ ಬಿಟ್ಟರೆ ಬೇರೊಬ್ಬ ಹುಟ್ಟಿಲ್ಲ, ರಾಷ್ಟ್ರ ಪತಿ ಹುದ್ದೆಗೆ ಕಲಾಮ್ ಬೇರೆ ಯಾರನ್ನೂ ಭಾರತ ಮಾತೆ ಹೆತ್ತಿಲ್ಲ, ಎಂಥ ದಿವಾಳಿತನ ನೋಡಿ), ಸಿರಿಯಾ ದೇಶದ ಹಸನ್ಮುಖಿ ಸರ್ವಾಧಿಕಾರಿ ಎಗ್ಗಿಲ್ಲದೆ ತನ್ನ ಜನರನ್ನ ಕೊಲ್ಲುತ್ತಿರುವುದು.. ಹೀಗೆ ಹತ್ತು ಹಲವು ಸಂಗತಿಗಳು, ಬೆಳವಣಿಗೆಗಳು ನನ್ನನ್ನ ಕೀಲಿ ಮಣೆ ಕಡೆ ಮುಸುಡಿ ತಿರುಗಿಸಲು ವಿಫಲವಾಗಿದ್ದು god particle ನಷ್ಟೇ ರೋಚಕ. ನನ್ನ ಭಾರತದ ಪ್ರವಾಸ ಸಮಯದ ಒಂದೆರಡು ಕತೆ ಒಂದೆರಡು ದಿನಗಳಲ್ಲಿ ಹೇಳುತ್ತೇನೆ. ಒಂದೆರಡು ಚಿತ್ರಾ ನೂ ಆಕ್ತೀನಿ. ವಸಿ ತಡ್ಕಳಿ.
Comments
ಉ: ನೂರು ದಿನಗಳ ನಂತರ...@ ಅಬ್ದುಲ್ಲ ಅವ್ರೆ