ಸುಡುಗಾಡು ದರ್ಶನ

ಸುಡುಗಾಡು ದರ್ಶನ

ಕವನ

ಸುಡುಗಾಡು ದರ್ಶನ

ಬಾ ಒಮ್ಮೆ ಹೀಗೆ ಸುತ್ತಿ ಬರೋಣ ಸುಡುಗಾಡಿಗೆ
ನಾಳೆ ಇಲ್ಲಿಯೇ ತರುತ್ತಾರಂತೆ ನನ್ನ ನಿನ್ನ ಬೊಡಿಗೆ (Bodyಗೆ)
ಎಲ್ಲಿ ಯಾವಾಗ ಕೇಳುತ್ತೇವೆ ಬದುಕಿದ್ದಾಗ,
ಈ ಹೆಣ ಹೂಳುವವನ ಕುಶಲೋಪಚಾರ,
ಅವನ ಸೌಖ್ಯ, ಹೆಂಡತಿ ಮಕ್ಕಳು ಸಂಸಾರ.
ಬಂದರೂ ನಿನಗಿಲ್ಲಿ ಭಯ ಭೀತಿ ವಾಂತಿ,
ಸಿಕ್ಕರೂ ಸಿಗಬಹುದು ನಾಳೆ ನಿನ್ನ ಆತ್ಮಕ್ಕೆ ಶಾಂತಿ.
ಪ್ರೇತ ಪಿಶಾಚಿಗಳ ಭಯ ಇಲ್ಲಿಬೇಡ,
ಅವುಗಳೆನಿದ್ದರೂ ಸುಡುಗಾಡಿನ ಹೊರಗೇ.
ಎರಡು ಕ್ಷಣ ಬದುಕಿನ ಜಂಜಡಗಳನು ಇಲ್ಲಿ ತರಬೇಡ
ಹುಟ್ಟಿದುದರ ಅರ್ಥ ಹುಡುಕು, ಇಲ್ಲಿಯೇ ಬರುವುದಿದೆ ಹೇಗಿದ್ದರೂ ಕೊನೆಗೆ.
ನೋಡು ಪಿಂಡಕ್ಕೆ ಕಾಯುತ್ತಿವೆ ಕಾಗೆಗಳ ದಂಡು,
ಮೊದಲೇ ಆದಂತೆ ಸಾಯುವವರ ಬುಕ್ಕಿಂಗು ಬೆಟ್ಟಿಂಗು.
ಮುಸು ಮುಸು ಅಳುವವರು ಕೆಲವರು
ಗುಸು ಗುಸು ಎನ್ನುವವರು ಕೆಲವರು.
ನೂರು ಜನರಲಿ ದುಃಖ ಒಬ್ಬರಿಬ್ಬರಿಗೆ
ಉಳಿದವರು ಬಂದಿದ್ದು ಬರೀ ಹಾಜರಿಗೆ.
ಬೇಗ ಸುಡದಿದ್ದರೆ ಹೆಣಕೆ ದುರ್ನಾತ
ದಕ್ಷಿಣೆ ಇಡದಿದ್ದರೆ ಪುರೋಹಿತನೆ ಭೂತ, ಪ್ರೇತ
ಇಲ್ಲಿ ಸುಟ್ಟು ಹೋಗಲು, ಮಣ್ಣಲ್ಲಿ ಮಣ್ಣಾಗಲು,
ತರುವ ಹೆಣಗಳು ಬರೀ ಕೆಲವಾರು
ಆದರೆ ಹೊರಗೆ, ಸತ್ತ ಪ್ರೀತಿಯ ಹೆಣ ಮನದಲಿ ಹೊತ್ತು
ತಿರುಗಾಡುವ ಜನ ಸಾವಿರಾರು.

ರಾಜೇಂದ್ರಕುಮಾರ್ ರಾಯಕೋಡಿ - Copyright©

Comments