ಪರಾವಲಂಬನೆ !

ಪರಾವಲಂಬನೆ !

ಅಪ್ಪಯ್ಯ ಹೇಳಿದ್ದ ಕತೆ – ೦೬

ಪರಾವಲಂಬನೆ!

ಒಂದು ಊರಿನಲ್ಲಿ ಒಬ್ಬರು ಆಯುರ್ವೇದ ವೈದ್ಯರಿದ್ದರು. ಅವರ ಮನೆಯ ಆವರಣದಲ್ಲೇ, ಬೀದಿಯ ಕಡೆಗೆ ತೆರೆದಿರುವ ಕೋಣೆಯಲ್ಲಿ ತಮ್ಮ ಚಿಕಿತ್ಸಾಲಯವನ್ನು ಹೊಂದಿದ್ದರು. ಮನೆಯಲ್ಲಿಯೇ ಆಯುರ್ವೇದ ಕಷಾಯಗಳ, ಲೇಹಗಳ ತಯಾರಿ ನಡೆಯುತ್ತಿತ್ತು. ಅವರ ಈ ಎಲ್ಲಾ ಕೆಲಸಗಳಲ್ಲಿ ಹಾಗೂ ಮನೆಯ ಇನ್ನಿತರ ಕೆಲಸಗಳಲ್ಲಿ ಅವರಿಗೆ ಸದಾ ಸಹಕಾರಿಯಾಗಿ ಇರುತ್ತಿದ್ದವನು ಆ ವೈದ್ಯರ ಚಿಕ್ಕಮ್ಮನ ಮಗ. ವಯಸ್ಸಿನಲ್ಲಿ ಹತ್ತು ಹನ್ನೆರಡು ವರುಷ ಕಿರಿಯನಾದ ಆತ ಎಲ್ಲದರಲ್ಲೂ ನಿಸ್ಸೀಮ. ಚಿಕಿತ್ಸಾಲಯದ ಕೆಲಸವಾಗಲೀ, ಮನೆಯೊಳಗಿನ ಹಾಗೂ ಅಡುಗೆ ಮನೆಯಲ್ಲಿನ ಕೆಲಸವಾಗಲೀ, ಏನೇ ಆದರೂ ಅಚ್ಚುಕಟ್ಟಾಗಿ ಮಾಡುವವನಾಗಿದ್ದ. ಮಾಂಸಾಹಾರಿಗಳಾದ ಅವರ ಮನೆಯಲ್ಲಿ ಮೀನು ಕೋಳಿಯ ಅಡುಗೆ ಆಗಬೇಕಾದರೂ, ತನ್ನ ಅತ್ತಿಗೆಗೆ, ಎಲ್ಲಾ ತಯಾರಿ ಮಾಡಿಕೊಡುತ್ತಿದ್ದದು ಆತನೇ. ಕೋಳಿಯ ಪುಕ್ಕಗಳನ್ನು ತೆಗೆದು, ಕತ್ತರಿಸಿ, ತಯಾರಿ ಮಾಡಿಕೊಡುವುದೂ ಆತನ ಕೆಲಸವಾಗಿತ್ತು. ತನ್ನ ಕೆಲಸ ಕಾರ್ಯಗಳಿಂದ ತನ್ನ ಅಣ್ಣನ ಮೆಚ್ಚುಗೆಗೂ ಪಾತ್ರನಾಗಿದ್ದ. ಎಲ್ಲದಕ್ಕೂ ಮಿಗಿಲಾಗಿ ಈರ್ವರಲ್ಲೂ ವಿಮರೀತ ಹಾಸ್ಯ ಪ್ರಜ್ಞೆ ಇತ್ತು. ಅದು ಅವರೀರ್ವರನ್ನು ಯಾವುದೇ ಭಿನ್ನಭಿಪ್ರಾಯಗಳಿಗೆ ಆಸ್ಪದ ಮಾಡಿಕೊಡದಂತೆ ಆಪ್ತ ಬಂಧದಲ್ಲಿ ಕಟ್ಟಿಹಾಕಿದಂತಿತ್ತು.

ಆದರೆ, ಒಂದು ವಿಷಯ ಮಾತ್ರ ತಮ್ಮನ ಮನಸ್ಸನ್ನು ಯಾವಾಗಲೂ ಕೊರೆಯುತ್ತಿತ್ತು. “ನನ್ನ ಈ ಅಣ್ಣ, ಎಲ್ಲದಕ್ಕೂ ನನ್ನನ್ನೇ ಅವಲಂಬಿಸಿರುತ್ತಾನಲ್ಲಾ? ನಾಳೆ ನಾನು ವಿವಾಹವಾಗಿ, ಬೇರೆ ಮನೆಮಾಡಿಕೊಂಡು, ಹೋದರೆ ಏನು ಮಾಡಿಯಾನು? ಈತ ಇಷ್ಟೊಂದು ಪರಾವಲಂಬಿ ಆಗಿರುವುದು ಒಳ್ಳೆಯಯದಲ್ಲ. ಈತನಿಗೆ ಒಂದು ಪಾಠ ಕಲಿಸಬೇಕು” ಎಂದು ನಿರ್ಧರಿಸುತ್ತಾನೆ.

ಒಂದು ದಿನ ಸಾಯಂಕಾಲದ ಸಮಯ ಆ ವೈದ್ಯರು ತಮ್ಮ ಚಿಕಿತ್ಸಾಲಯದಲ್ಲಿ ಕೂತಿರುವಾಗ, ಅವರ ಚಿಕಿತ್ಸಾಲಯದ ಮುಂದಿನ ಬೀದಿಯಲ್ಲಿ ಒಂದು ಕೋಳಿ ಅತ್ತಿಂದ ಇತ್ತ, ಇತ್ತಿಂದ ಅತ್ತ ತಿರುಗಾಡುತ್ತಾ ಇರುವುದನ್ನು ನೋಡುತ್ತಾರೆ. ನೋಡಿದವರು, ಮತ್ತೆ ಮತ್ತೆ ಕೋಳಿಯನ್ನೇ ನೋಡುತ್ತಾರೆ. ಕೂಡಲೇ ತನ್ನ ತಮ್ಮನನ್ನು ಕರೆದು “ಏನೋ ಇದು? “ಡ್ರೆಸ್” ಮಾಡಿದ ಕೋಳಿಯ ಫ್ಯಾಷನ್ ಪರೇಡ್ ನಡೀತಿದೆ ಇಲ್ಲಿ, ಇದು ನಿನ್ನದೇ ಕೆಲಸ ಇರಬೇಕು ಅಂತ ನನಗೆ ಚೆನ್ನಾಗಿ ಗೊತ್ತು, ಏನಿದು? ಆ ಕೋಳಿಯ ಮೈಮೇಲೆ ಒಂದು ಪುಕ್ಕವೂ ಇಲ್ಲ. ಹೀಗೆ ಜೀವಂತ ಕೋಳಿಯ ಪುಕ್ಕ ತೆಗೆದು ಬಿಟ್ಟಿರುವುದಾದರೂ ಏಕೆ?” ಎಂದು ಕೇಳುತ್ತಾರೆ. 

ಆಗ ಅವರ ತಮ್ಮ ನಗುತ್ತಾ “ಹೂಂ... ಅಣ್ಣಾ... ಅದು ನಾನೇ ಮಾಡಿರೋದು. ಒಂದು ವೇಳೆ ನಾನು ಮನೆಯಲ್ಲಿ ಇಲ್ಲದಾಗ, ನಿಮಗೆ ಕೋಳಿ ಪಲ್ಯ ತಿನ್ನಬೇಕು ಅಂತ ಮನಸ್ಸಾದರೆ, ಇರಲಿ ಅಂತ ಕೋಳಿಯ ಪುಕ್ಕಗಳನ್ನೆಲ್ಲಾ ತೆಗೆದು ತಯಾರು ಮಾಡಿ ಇಟ್ಟಿದ್ದೇನೆ. ಪುಕ್ಕಗಳನ್ನು ತೆಗೆಯುವ ಕೆಲಸವೇ ಇರುವುದಿಲ್ಲ ನಿಮಗೆ” ಅನ್ನುತ್ತಾನೆ.

ತನ್ನ ತಮ್ಮನ ಮೇಲೆ ಕಿಂಚಿತ್ತೂ ಕೋಪಗೊಳ್ಳದ ಆ ವೈದ್ಯರು ನಗುತ್ತಲೇ “ಬಹಳ ಘಾಟಿ ಕಣೋ ನೀನು, ನಿನ್ನಿಂದ ಒಳ್ಳೆಯ ಪಾಠ ಕಲಿತು ಬಿಟ್ಟೆ ನಾನು, ಸರಿ ಅತ್ತಿಗೆಗೆ ಹೇಳಿ ಕೋಳಿ ಸಾರು ಮಾಡಿಸು, ಇನ್ನು ಮುಂದೆ ನಾನೂ ಸಹಕರಿಸುತ್ತೇನೆ ಅಂತ ಹೇಳು ಅತ್ತಿಗೆಗೆ” ಎಂದು ಮೆಚ್ಚುಗೆಯಿಂದ ಸೂಚಿಸುತ್ತಾರೆ. 

ನಾವು ಎಂದಿಗೂ ಸಂಪೂರ್ಣವಾಗಿ ಅನ್ಯರ ಮೇಲೆ ಅವಲಂಬಿತರಾಗಿರಬಾರದು. ಅಲ್ಲದೇ ಯಾವನೇ ಒಬ್ಬ ವ್ಯಕ್ತಿ, ತಾನು ಇಲ್ಲದೇ ಇದ್ದರೆ, ಇಲ್ಲಿ ಯಾವ ಕೆಲಸವೂ ನಡೆಯದು, ಅನ್ನುವ ಅಹಂ ಕೂಡಾ ಹೊಂದಿರಬಾರದು. ಈ ಎರಡೂ ಕೂಡ ಮಾನವನಿಗೆ ಕೇಡನ್ನೇ ಉಂಟು ಮಾಡುತ್ತವೆ.

*****

Rating
No votes yet

Comments