ಕಮಲೇ ಕಮಲೋತ್ಪತ್ತಿಃ....

ಕಮಲೇ ಕಮಲೋತ್ಪತ್ತಿಃ....

ಮೊನ್ನೆ ನನ್ನ ಹಳೆಯ ಮಿತ್ರ ಪ್ರಶಾಂತ ಗಾಂಧೀ-ಬಜಾರಿನಲ್ಲಿ ಭೇಟಿಯಾದ, ಅವನನ್ನು ನಾವೆಲ್ಲರೂ ಪ್ರಳಯಾಂತಕ ಅಥವಾ ಪ್ರಣಯಾoತಕ ಎಂದು ಸಂಭೋದಿಸುತ್ತಿದ್ದೆವು. ನಮ್ಮ ಮಂಜ ಕೂಡ ಅವನಿಗೆ ಹೆದರುತ್ತಿದ್ದ.ಎಲ್ಲ ಕ್ಷೇಮ ಸಮಾಚಾರ ಅದ ಮೇಲೆ, ನಾನು ಬ್ಲಾಗ್,ಕಥೆ ಕವನ ಬರೆಯುತ್ತ ಇರುತ್ತೇನೆ ಎಂದಾಗ, ನನ್ನ ಗೆಳೆಯ ಪ್ರಶಾಂತ ಅಪಾದಮಸ್ತಕ ವಿಚಿತ್ರವಾಗಿ ನೋಡಿ, ನಗಲಾರಂಬಿಸಿದ. ಏಕೆ? ಎಂದು ಕೇಳಿದೆ. ನಿನಗೆ ಬರಹಗಾರರಿಗೆ ಇರಬೇಕಾದ ಆಭೂಷಣವೆ ಇಲ್ಲ ಎಂದ. ಏನಪ್ಪಾ? ಇರಬೇಕು ಎಂದು ಕೇಳಿದಾಗ, ನಿನಗೆ ಮೊದಲು ಒಂದು ಕನ್ನಡಕ ಇರಬೇಕು. ಅದು ಇಲ್ಲದಿದ್ದರೆ ಯಾರು ನೀನು ಒಬ್ಬ ಬರಹಗಾರ ಎಂದು ನಂಬುವುದಿಲ್ಲ ಎಂದ. ಕನ್ನಡಕದಲ್ಲಿ ಕನ್ನಡ ಅಡಕವಾಗಿದೆ ಗೊತ್ತ? ಎಂದು ಹಿಯಾಳಿಸಿದ. ಕಣ್ಣ ಸನ್ನೆಗಳನ್ನೇ ಅರ್ಥ ಮಾಡಿಕೊಳ್ಳೋ ಈ ಕಣ್ಣಿಗೆ, ಇಷ್ಟೊಂದು ಜೋರಾಗಿ ಹೇಳಿದರೆ ತಿಳಿಯದೆ ಇದ್ದೀತೆ?. ಒಂದೇ ಸಮನೆ ನಖರಾ ಮಾಡಹತ್ತಿದವು.


ಸಂಜೆ ಮನೆಗೆ ಹೋಗಿ, ಮಡದಿಗೆ ವಿಷಯ ತಿಳಿಸಿದೆ. ನೋಡೇ ನಾನು ಗಣೇಶನ ಮಂತ್ರ "ವಂದೇ ದೃಷ್ಟಿ ಗಣೇಶಂ ದೃಷ್ಟಿ ದೋಷಕಂ ನಾಶಕಂ ಸಮಸ್ತ ಸಿದ್ಧಿ ನಾಯಕಂ ನಮೋ ನಮೋ ವಿನಾಯಕ" ಎಂದು ಗಣೇಶನಿಗೆ ದಿನವು ಪ್ರಾರ್ಥನೆ ಮಾಡುತ್ತೇನೆ ಆದರೂ ಈ ದೃಷ್ಟಿ ದೋಷ ಏಕೆ? ಬಂತು ಎಂದೆ. ರೀ ನಿಮ್ಮದೊಂದು ಕಥೆ ಆಯಿತು. ಇನ್ನೊಬ್ಬರ ದೃಷ್ಟಿ ನಿಮ್ಮ ಮೇಲೆ ಬೀಳದಿರಲಿ ಎಂಬುದಕ್ಕಾಗಿ ಇರುವ ಮಂತ್ರ ಅದು. ನಿಮಗೆ ದೃಷ್ಟಿ ದೋಷ ಬರದಿರಲಿ ಎಂದು ಅಲ್ಲ ಎಂದಳು. ನೀವು ಹೇಳುವುದಾದರೆ ಸಂಸ್ಕಾರ ಇರುವವರು ಎಂದರೆ Some ಕಾರಗಳು ಇರುವವರು ಅಥವಾ ಸಾವುಕಾರರು ಎನ್ನುವ ಹಾಗಿತ್ತು ನಿಮ್ಮ ಧಾಟಿ ಎಂದಳು. ಲೇ ನಾನು ಅದನ್ನೇ ಹೇಳಿದ್ದು, ನನಗೆ ಸಂಸ್ಕೃತ ಅರ್ಥ ಆಗುತ್ತೆ,ಅವನ ದೃಷ್ಟಿ ನನ್ನ ಕಣ್ಣು ಮೇಲೆ ಬಿದ್ದು ನನಗೆ ಕಣ್ಣು ನೋವು ಶುರು ಆಗಿದ್ದು ತಾನೇ? ಎಂದೆ. ಅದು ಸರಿ ಎನ್ನಿ ಎಂದಳು. ಬನ್ನಿ ಡಾಕ್ಟರ ಬಳಿ ಹೋಗೋಣ ಎಂದು ಹೇಳಿದಳು.


ತುಂಬಾ ಸುತ್ತಾಡಿದರು ಒಂದು ಕಣ್ಣಿನ ವೈದ್ಯರು ಸಿಗಲಿಲ್ಲ, ಎಲ್ಲಿ ನೋಡಿದರು ಬರಿ ದಂತ ವೈದ್ಯರು. ೩೨ ಇರುವ ದಂತಗಳಿಗೆ ಸಿಗುವ ಆಧ್ಯತೆ ಬರಿ ಎರಡು ಇರುವ ನಮ್ಮ ಕಣ್ಣುಗಳಿಗೆ ಹೇಗೆ ತಾನೇ ಸಿಕ್ಕಿತು?. ಕಡೆಗೆ ಒಂದು ಮೆಡಿಕಲ್ ಅಂಗಡಿಯವರಿಗೆ ಒಬ್ಬ ಡಾಕ್ಟರ ವಿಳಾಸ ಕೇಳಿ ವೈದ್ಯರ ಬಳಿ ಹೋದೆವು.


ಡಾಕ್ಟರರು ಒಬ್ಬ ಮನುಷ್ಯನ ಜೊತೆ ಜಗಳ ಮಾಡುತ್ತಿದ್ದರು. ನಾನು ಬೇಡ ಎಂದು ಹೊರಗೆ ಹೋಗುತ್ತಿದ್ದಾಗ, ಅಲ್ಲೇ ಇದ್ದ ರಿಸೆಪ್ಶನಿಷ್ಟ್ ತನ್ನ ನಿಷ್ಠೆ ಮೆರೆದು ಕರೆದು ಕೂಡಿಸಿದಳು. ವಿಧಿ ಇಲ್ಲದೆ ಕುಳಿತೆ. ನನ್ನ ಸರದಿ ಬಂದಾಗ ಒಳಗಡೆ ಹೋದೆ. ಡಾಕ್ಟರ ಜಗಳ ಮುಗಿಸಿ ಶಾಂತವಾಗಿದ್ದರು. ಆದರೂ ನಾನೇ ಕೆಣಕಿ ಕೇಳಿದೆ ಏನು? ಆಯಿತು ಎಂದು. ಡಾಕ್ಟರ ನಿಮ್ಮ ಕಣ್ಣಲ್ಲಿ ಹೊಳಪು ಇದೆ ಎಂದೆ. ಅದಕ್ಕೆ ನನ್ನ ಜೊತೆ ಜಗಳ ಮಾಡುತ್ತಿದ್ದರು ಎಂದರು. ನಾನು ಅದಕ್ಕೆ ಏನು? ತಪ್ಪು ಎಂದೆ. ಅವರು ತಪ್ಪು ತಿಳಿದು ನನ್ನನ್ನು ಏನು? ನಾಯಿ, ಬೆಕ್ಕಿಗೆ ಹೊಲಿಸುತ್ತಿ ಎಂದು ತಿಳಿದು ಜಗಳ ಮಾಡಲು ಶುರು ಮಾಡಿದ್ದರು. ನಾನು ಮತ್ತೆ ಸುಧಾರಿಸಿ ನಿಮ್ಮ ಕಣ್ಣಲ್ಲಿ ಕಾಂತಿ ಇದೆ ಎಂದೆ. ಇನ್ನಷ್ಟು ಕೋಪ ಮಾಡಿಕೊಂಡು ಬಿಟ್ಟರು. ಎಲ್ಲರು ಹೀಗೆ ಹೇಳಿ.. ಹೇಳಿ.. ಅವರಿಗೆ ಯಾವ ಹುಡುಗಿಯ ಕಾಂತನಾಗಿ (ಮದುವೆನೇ) ಮಾಡಲಿಲ್ಲವಂತೆ. ಅದಕ್ಕೆ ಇನ್ನು ಸ್ವಲ್ಪ ಕಂಠ ಬಿರುಯುವ ಹಾಗೆ ಒದರಿದರು ಎಂದು ತಮ್ಮ ಅಳಲನ್ನು ತೋಡಿಕೊಂಡರು. ಪಾಪ ಡಾಕ್ಟರರನ್ನು ನೋಡಿ ಪ್ರಶಂಸೆ ಮಾಡಿ ಬೈಸಿಕೊಂಡದ್ದು ನೋಡಿ ನಗು ಬಂತು ಆದರೂ, ನಾನೇ ಸಮಾಧಾನಿಸಿದೆ.


ಡಾಕ್ಟರ ಎಲ್ಲ ಪರೀಕ್ಷಿಸಿ ನಿಮಗೆ ಕನ್ನಡಕ ಬಂದಿದೆ ಎಂದು ಹೇಳಿದರು. ವಿಧಿ ಇಲ್ಲದೆ ಕನ್ನಡಕ ಆರ್ಡರ್ ಮಾಡಿ ಬಂದೆ. ಮರುದಿನ ಕನ್ನಡಕ ತೆಗೆದುಕೊಳ್ಳಲು ಹೋದಾಗ, ಅಲ್ಲೇ ಗೋಡೆ ಮೇಲೆ ಹಾಕಿರುವ ಐಶ್ವರ್ಯ ರೈ ಫೋಟೋ ನೋಡುತ್ತಾ ಕುಳಿತಾಗ, ನನ್ನ ಮಡದಿ ಏನ್ರೀ ಏನು ನೋಡುತ್ತ ಇದ್ದೀರಾ? ಎಂದಳು, ನಾನು ನೇತ್ರ ದಾನದ ಜಾಹಿರಾತು ನೋಡುತ್ತಾ ಇದ್ದೇನೆ ಎಂದೆ. ನಿಮ್ಮದು ಗೊತ್ತಿಲ್ಲವಾ ಸುಮ್ಮನೆ ಬನ್ನಿ ಎಂದಳು. ನೀವು ನೇತ್ರ ದಾನ ಮಾಡಿದರೆ, ಅದರ ಜೊತೆ ಕನ್ನಡಕ ಕೂಡ ಕೊಡಬೇಕು ಗೊತ್ತ ಎಂದಳು.ಆಮೇಲೆ ಬಿಲ್ಲು ನೋಡಿ, ಬರೀ ಎರಡುನುರಾ ಎಪ್ಪತ್ತು ಎಂದು ಖುಷಿಯಾಗಿ ಕೊಡಲು ಹೋದಾಗ, ನೀವು ಕನ್ನಡಕ ಧರಿಸಿ ನೋಡಿ, ಆಮೇಲೆ ಬಿಲ್ಲು ಕೊಡಿ ಎಂದು ಡಾಕ್ಟರ ಹೇಳಿದರು. ಕನ್ನಡಕ ಧರಿಸಿ ಬಿಲ್ಲು 2700 ನೋಡಿ ದಿಕ್ಕೇ ತೋಚದಾಗಿತ್ತು. ಗಾಂಧೀಜಿಯ ಚಿತ್ರವಿರುವ ನೋಟುಗಳು ನನ್ನ ನೋಡಿ ನಕ್ಕ ಹಾಗೆ ಅನ್ನಿಸಿತು, ವಿಧಿ ಇಲ್ಲದೆ ದುಡ್ಡು ಕೊಟ್ಟು ಕನ್ನಡಕ ತೆಗೆದುಕೊಂಡು ಬಂದೆ.


ಮರುದಿನ ತಿಂಡಿ ತಿನ್ನುವಾಗ, ಊಟ ಮಾಡುವಾಗ ಮತ್ತು ಕಾಫಿ ಕುಡಿಯುವಾಗ ನನಗೆ ಕನ್ನಡಕ ಅಡ್ಡ ಬಂದ ಹಾಗೆ ಅನ್ನಿಸುತಿತ್ತು.


ನಾನು ಕನ್ನಡಕ ಹಾಕಿ ಕೊಂಡು ಮಂಜನ ಮನೆಗೆ ಹೋದಾಗ ಮಂಜ ಏನಪ್ಪಾ? ಚಾಳೀಸು, ಹಾಗಾದರೆ ಚಾಲೀಸ್ ವರ್ಷ ಆಯ್ತಾ ಎಂದು ಹಿಯಾಳಿಸಿದ. ಹಾಗಾದರೆ ನಿನ್ನ ವಯಸ್ಸು ಐವತ್ತು ತುಂಬಾ ಬೇಗನೆ ಆಗಿ ಬಿಟ್ಟಿತ್ತು ಎಂದೆ. ಏಕೆಂದರೆ? ಮಂಜ ತನ್ನ ಕನ್ನಡಕ ಹಾಕಿಕೊಳ್ಳಲು ಶುರು ಮಾಡಿದ್ದು ಹತ್ತು ವರ್ಷದ ಹಿಂದೆ. ಮಂಜ ತನ್ನ ಮಡದಿಗೆ ಐದು ನೂರರ ನೋಟು ಖೋಟ ಹೌದೋ ಅಲ್ಲವೋ ಎಂದು ಹೇಗೆ ತಿಳಿಯುವುದು ಗೊತ್ತ? ಎಂದು ಕೇಳಿದ. ಅದಕ್ಕೆ ಅವನ ಮಡದಿ ಹೇಗೆ? ಎಂದು ಕೇಳಿದಳು. ಅದಕ್ಕೆ ಅವಳ ಬಳಿ ಇದ್ದ ಒಂದೇ ನೋಟನ್ನು ತೆಗೆದುಕೊಂಡು ಅದನ್ನು ಜೋರಾಗಿ ಝಾಡಿಸಿ, ನೋಡು ಕೆಳಗಡೆ ಏನಾದರು ಬಿತ್ತಾ? ಎಂದ. ಅವಳು ಮತ್ತು ನಾನು ಕೆಳಗಡೆ ನೋಡುತ್ತಿದ್ದರೆ, ನಗುತ್ತ ನೋಡು ಗಾಂಧೀಜಿ ಕನ್ನಡಕ ಕೆಳಗೆ ಬಿಳಲಿಲ್ಲ, ಇದು ನಿಜವಾದ ನೋಟು ಎನ್ನುತ್ತಾ, ಸುಮ್ಮನೆ ಅದನ್ನು ತನ್ನ ಜೋಬಿನೊಳಗೆ ಇಳಿಸಿದ. ಮಂಜನ ಮಡದಿ ನಗುತ್ತ ಒಳಗಡೆ ಕಾಫಿ ಮಾಡಿಕೊಂಡು ಬರಲು ಹೋದಳು. ಆಮೇಲೆ ಮಂಜ ಒಂದು ಗುಟ್ಟು, ನನ್ನ ಕನ್ನಡಕಕ್ಕೆ ನಂಬರ್ ಇಲ್ಲ, ಹಾಗೆ ಸುಮ್ಮನೆ ಹಾಕಿ ಕೊಳ್ಳುತ್ತೇನೆ. ಇದರಿಂದ ಒಂದು ಫಾಯಿದೆ ಇದೆ ಗೊತ್ತ?. ಇದನ್ನು ಹಾಕಿಕೊಂಡಾಗ ನೀನು ಏನು? ಬೇಕಾದರೂ ನೋಡಿದರು ನೋಡುವವರಿಗೆ ತಿಳಿಯುವುದಿಲ್ಲ.ಮತ್ತೆ ಕೆಲವರು ಸುಳ್ಳು ಹೇಳುತ್ತಿದ್ದಾರೆ ಎಂದು ಅರಿಯಲು ಅವರ ಕಣ್ಣುಗಳೇ ಸಾಕ್ಷಿ. ಅದ್ದರಿಂದ ಕಣ್ಣುಗಳು ನಮ್ಮ ಎಷ್ಟೋ ಭಾವನೆಯನ್ನು ಮುಚ್ಚಿಡಲು ತುಂಬಾ ಸಹಾಯಕಾರಿ. "ಕಮಲೇ ಕಮಲೋತ್ಪತ್ತಿಃ" ಎಂದು ನೀನು ಕೇಳಿಲ್ಲವೇ ಹೆಚ್ಚು ಜನ ತಮ್ಮ ಭಾವನೆಗಳನ್ನು ಹಿಡಿದಿರಲು ಸಾಧ್ಯವಾಗದೆ "ಕಮಲೇ ಕಲಹೋತ್ಪತ್ತಿಃ " ಆಗಿ ಕಲಹಕ್ಕೆ ನಾಂದಿ ಹಾಡುತ್ತಾರೆ. ಅದರ ಬದಲು ಕನ್ನಡಕ ಧರಿಸುವುದರಿಂದ ಇದನ್ನು ತಡೆಯಬಹುದು. ಈ ಕನ್ನಡಕದಿಂದ ಕಲಹ ಹೇಗೆ ಆಗುತ್ತೆ ಎಂದು ಹೇಳುತ್ತೇನೆ ಕೇಳು, ಒಮ್ಮೆ ನನ್ನ ಅತ್ತೆ ಕನ್ನಡಕದ ನಂಬರ್ ಬದಲಾಗಿದ್ದರೂ, ಅದನ್ನು ಬದಲಿಸಿರಲಿಲ್ಲ. ಏಕೆಂದರೆ ಅವರ ಕನ್ನಡಕ ಅವರ ಪ್ರೀತಿಯ ಅಪ್ಪ ಕೊಡಿಸಿದ್ದು ಎಂದು. ಒಮ್ಮೆ ಹೀಗೆ ಸಂಪಿಗೆ ಹೂವು ಏನು? ರೇಟ್ ಎಂದು ಒಬ್ಬರನ್ನು ಕೇಳಿದರು, ಪಾಪ ಅವರು ಅದನ್ನು ತಮ್ಮ ಮನೆಗೆಂದು ತೆಗೆದುಕೊಂಡು ಹೊರಟಿದ್ದರು. ಇದು ಕೊಡುವುದಕ್ಕೆ ಅಲ್ಲ ಎಂದರು ಕೇಳದೆ, ಎಷ್ಟು ಸೊಕ್ಕು ನಿನಗೆ ಎಂದು ಜಗಳ ಶುರು ಮಾಡಿದ್ದರು. ಪಾಪ ಅವರು ಸ್ವಲ್ಪ ಹೂವು ಕೊಟ್ಟು ಕಳುಹಿಸಿದರು, ನಮ್ಮ ಅತ್ತೆಗೆ ಎಂದು ನಗಹತ್ತಿದ. ಕಾಮಾಲೆ ಕಣ್ಣಿಗೆ ಜಗತ್ತೇ ಹಳದಿ ಅಂತೆ.ಇದೆಲ್ಲವೂ ಮಾಡಿದ್ದೂ ಇವರ ಅಮ್ಮನೇ ಎಂದಾಗ ನನಗೂ ನಗು ತಡಿಯಲು ಆಗಲಿಲ್ಲ. ನಿಮ್ಮ ಗೆಳೆಯನ ಮನುಸ್ಸು ಹೀಗೆ, ಎಲ್ಲರನ್ನು ತಮ್ಮಂತೆ ಅಳೆಯುತ್ತಾರೆ ಎಂದು ಎನ್ನುತ್ತಾ ಮಂಜನ ಮಡದಿ ಬಂದು ಕಾಫಿ ಕೊಟ್ಟರು. ಕಡೆಗೆ ಕಾಫಿ ಕುಡಿದು ಮುಗಿಸಿ ಮನೆ ದಾರಿ ಹಿಡಿದೆ.

Rating
No votes yet

Comments