ಸುಳ್ಳರ ಸಂತೆ!

ಸುಳ್ಳರ ಸಂತೆ!

 
ಮೂವರು ಸುಳ್ಳರು ಒಂದು ಕಡೆ ಕೂತು ಗುಂಡು ಹಾಕುತ್ತಿದ್ದರು.  ಸ್ವಲ್ಪ ನಿಶೆ ಏರುತ್ತಿದ್ದಂತೆ ಒಬ್ಬ ಹೇಳಿದ " ನಾನು ಮಿಲಿಟರಿಯಲ್ಲಿದ್ದಾಗ  ನನ್ನನ್ನು ಕಾಡಿನ ಮಧ್ಯೆ ಇರುವ ಕ್ಯಾಂಪ್ಗೆ  ಹಾಕಿದ್ದರು.  ಅಲ್ಲಿ ಒಮ್ಮೆ ಒಂದು ಹುಲಿ ನನ್ನನ್ನು ನೋಡಿ ಅಟ್ಟಿಸಿಕೊಂಡು ಬಂತು.  ನಾನು ಹೆದರುತ್ತಿನಾ?  ಜೇಬಿಂದ ಪಿಸ್ತೂಲು ತೆಗೆದು ಒಂದೇ ಏಟಿಗೆ ಉಡಾಯಿಸಿಬಿಟ್ಟೆ. "  ಎಂದು ಕೊಚ್ಚಿಕೊಂಡ.
 
ಎರಡನೆಯವನು ತಾನೇನು ಕಮ್ಮಿ ಎಂದು " ಏನಾಶ್ಚರ್ಯ!  ನಂಗೂ ಇದೆ ರೀತಿ ಒಮ್ಮೆ ಆಯಿತು.  ಆದರೆ ನಾನು ಹುಲಿಯನ್ನು ಎದುರಿಸಿದ್ದೆ ಬೇರೆ ರೀತಿ." 
 
"ಅಂದರೆ'" ಎಂದು ಇನ್ನಿಬ್ಬರು ಒಮ್ಮೆಲೇ ಕೇಳಿದರು.
 
" ಜೇಬಿಗೆ ಕೈ ಹಾಕ್ತೀನಿ, ಪಿಸ್ತೂಲು ಇಲ್ಲ. ಅದನ್ನು ಮರೆತು ಟೆಂಟ್ ನಲ್ಲೆ ಬಿಟ್ಟು ಬಂದಿದ್ದೆ.   ಹುಲಿ ಹತಿರ ಬರ್ತಾ ಇದೆ.  ತಕ್ಷಣ ನಾನು ಸೊಂಟಕ್ಕೆ ಕಟ್ಟಿದ್ದ ಬೆಲ್ಟ್ ಬಿಚ್ಚಿಕೊಂಡು ಕೊಟ್ಟೆ.....ಕೊಟ್ಟೆ.....ಕೊಟ್ಟೀ....ಹುಲಿ ಬಿದ್ದೆನೋ ಕೆಟ್ಟನೋ ಅಂತ ಓಡಿಹೋಯಿತು ಮಾರಾಯ! "
 
ಮೂರನೆಯನು  "ಏನಂತ ಹೇಳಲಿ?  ನನಗೂ ಹೀಗೆ ಆಗಬೇಕಾ? "
 
 "ಏನು?  ನಿಂದು ಇದೆ ಕಥೇನಾ? " ಎಂದು ಇನ್ನಿಬ್ಬರು ಒಟ್ಟಿಗೆ ಕಿರುಚಿದರು.
 
" ತಾಳ್ಮೆ, ಯಾಕೆ ಹಾಗೆ ಕಿರುಚುತ್ತಿರಾ?  ಸ್ವಲ್ಪ ಕೇಳಿ.   ನನ್ನ ಎದುರು ಹುಲಿ ಬಂದು ನಿಂತಿದೆ. ಜೇಬಿಗೆ ಕೈ ಹಾಕಿದರೆ ಪಿಸ್ತೂಲು ಇಲ್ಲ.  ಸೊಂಟಕ್ಕೆ ಕೈ ಹಾದರೆ ಬೆಲ್ಟ್ ಕೂಡ ಇಲ್ಲ "
 
" ಮತ್ತೇನು ಮಾಡಿದೆ ಮಾರಾಯ? " ಎಂದು ಆತುರದಲ್ಲಿ ಕೇಳಿದ ಒಬ್ಬ.
 
" ಮತ್ತೇನು ಮಾಡೋದು?  ಹಿಪ್ ಪಾಕೆಟ್ಟಿಗೆ ಕೈ ಹಾಕಿ ಅಲ್ಲಿಂದ ರೈಫೆಲ್  ಲೈಸೆನ್ಸ್ ತೋರಿಸಿದೆ ಮಾರಾಯ , ಆ ಹುಲಿ ಸತ್ತೆನೋ, ಕೆಟ್ಟೆನೋ ಎಂದು ಪರಾರಿ .   ಈಗಲೂ ನನಗೆ ಆಶ್ಚರ್ಯ ಆ ಹುಲಿ ಎಲ್ಲಿಗೆ ಹೋಯ್ತು ಅಂತ." ಎಂದು ಮತ್ತೊಂದು  ಪೆಗ್ ಏರಿಸಿದ.

 

Comments