ಬಿಗ್ ಬಜಾರಿನಲ್ಲಿ ಕನ್ನಡ ಹಾಡನ್ನು ಅರಸುತ್ತಾ...

ಬಿಗ್ ಬಜಾರಿನಲ್ಲಿ ಕನ್ನಡ ಹಾಡನ್ನು ಅರಸುತ್ತಾ...

ನೆನ್ನೆ ಎಂ ಜಿ ರೋಡ್ ಹತ್ತಿರದಲ್ಲಿರುವ ಬಿಗ್ ಬಜಾರಿಗೆ (ಲಿಡೋ ಥಿಯೇಟರ್ ಬಳಿ) ಹೋಗಿದ್ದೆವು. ಒಳಗೆ ನಿಧಾನಕ್ಕೆ ಸಂಗೀತ ತೇಲಿ ಬರುತ್ತಿತ್ತು, ಹಿಂದಿ ಹಾಡನ್ನು ಹಾಕಿದ್ದರು. ನನ್ನಾಕೆ ಏನನ್ನೋ ಹುಡುಕುತ್ತಿದ್ದಳು. ನಾನು ಅವಳನ್ನು ಅಲ್ಲೇ ಬಿಟ್ಟು  ತಿರುಗಾಡುತ್ತಿದ್ದೆ. ಆ ಹಾಡು ಮುಗಿದ ತಕ್ಷಣ ತೆಲುಗು ಹಾಡೊಂದು ಬಂತು ಅದಾದ ನಂತರ ಮತ್ತೊಂದು ತೆಲುಗು ಹಾಡು, ಅದು ಮುಗಿದ ತಕ್ಷಣ ತಮಿಳಿನ ಹಾಡು. ಅಲ್ಲಿ ಕೆಲಸ ಮಾಡುವವರಲ್ಲಿ ಬಹುತೇಕ ಮಂದಿ ಕನ್ನಡ ಮಾತನಾಡುತ್ತಿದ್ದರು. ಸುಮಾರು ಅರ್ಧ ಘಂಟೆಗಳ ಅವಧಿಯವರೆಗೆ ಬೇರೆ ಭಾಷೆಯ ಹಾಡುಗಳೇ ಬರುತ್ತಿತ್ತು. ಹತ್ತಿರದಲ್ಲೇ ಕೆಲಸ ಮಾಡುತ್ತಿದ್ದವನ ಬಳಿ ಹೋಗಿ 'ಅರ್ಧ ಘಂಟೆಯಿಂದ ಇಲ್ಲೇ ಇದ್ದೀನಿ, ಒಂದೂ ಕನ್ನಡ ಹಾಡೇ ಹಾಕಿಲ್ವಲ್ರೀ?' ಅಂದಾಗ ಆ ಪುಣ್ಯಾತ್ಮ 'ಸರ್, ಎಲ್ಲಾ ಭಾಷೆದು ಹಾಕ್ತೀವಿ ಸರ್. ಹಿಂದಿ, ಕನ್ನಡ, ತಮಿಳು, ತೆಲುಗು' ಅಂದಾಗ ಇವಳು 'ಇದು ಕರ್ನಾಟಕ ಕಣ್ರೀ' ಅಂದಾಗ ಆತ ಏನೂ ಹೇಳದೆ ಸುಮ್ಮನಾದ.

'ಇಲ್ಲಿ ಕಂಪ್ಲೇಂಟ್ ಮಾಡೋಕೆ ಎಲ್ಲಿ ಹೋಗ್ಬೇಕು?' ಅಂದಾಗ ಕಸ್ಟಮರ್ ಡೆಸ್ಕ್ ಫಸ್ಟ್ ಫ್ಲೋರಲ್ಲಿದೆ ಅಂದ.


ಸರಿ ಅಂದು ಅಲ್ಲಿಗೆ ಹೋದೆ. ಅಲ್ಲಿ ೩ ಜನ ಕುಳಿತಿದ್ದರು. ಒಂದು ಹೆಂಗಸು ಮತ್ತಿಬ್ಬರು ಗಂಡಸರು ಇದ್ದರು. ಅ ಹೆಂಗಸು ತಮಿಳಿನಲ್ಲಿ ಅವರಿಬ್ಬರ ಜೊತೆ ಮಾತನಾಡುತ್ತಿದ್ದರು. ಅಲ್ಲಿ ಹೋಗಿ ನಿಂತು ಆಕೆಯ ಬಳಿ 'ನಾನು ಇಲ್ಲಿ ಅರ್ಧ ಘಂಟೆಯಿಂದ ಇದ್ದೀನಿ, ಒಂದೂ ಕನ್ನಡ ಹಾಡು ನನಗೆ ಕೇಳಿಸ್ಲಿಲ್ಲ' ಅಂದೆ. ಅವಳು ಸ್ವಲ್ಪ ಗಾಬರಿಯಾಗಿ ಪಕ್ಕದಲ್ಲಿದ್ದವನಿಗೆ 'ಸರ್, ಕನ್ನಡ ಹಾಡು ಇರೋ ಪೆನ್ ಡ್ರೈವ್ ಹಾಕಿ' ಅಂದ್ಲು. ನಾನು ಹಾಗೇ ಒಂದು ನಗೆಯನ್ನು ಕೊಟ್ಟು ಬಂದೆ. 'ಮಿಂಚಾಗಿ ನೀನು ಬರಲು' ಆನಂತರ 'ಖುಷಿಯಾಗಿದೆ ಏಕೋ ನಿನ್ನಿಂದಲೇ' ಹಾಡುಗಳು ಬಜಾರಿನ ಎಲ್ಲಾ ಮೂಲೆಗಳಿಂದಲೂ ಕೇಳಿಬರುತ್ತಿತ್ತು.

Rating
No votes yet

Comments