ನಾನೋದಿದ ಪುಸ್ತಕ - ಕಲ್ಪನಾ ವಿಲಾಸ
ನಿನ್ನೇಯಷ್ಟೇ ರವಿ ಬೆಳಗೆರೆಯವರ ’ಕಲ್ಪನಾ ವಿಲಾಸ’ ಓದಿ ಮುಗಿಸಿದೆ.ಯಾವುದಾದರೂ ಪುಸ್ತಕ ಕೊಳ್ಳೊಣವೆ೦ದುಕೊ೦ಡು ಸುಮ್ಮನೇ ’ಬಿ.ಬಿ.ಸಿ’ ಹೊಕ್ಕವನಿಗೆ ಮೊದಲು ಕಣ್ಣಿಗೆ ಬಿದ್ದುದು ’ಕಲ್ಪನಾ ವಿಲಾಸ’.ಪುಸ್ತಕ ಕೊಳ್ಳುವಾಗ ಸಾಮಾನ್ಯವಾಗಿ ಅದರ ಬೆಲೆಯ ಬಗ್ಗೆ ಯೋಚಿಸುವುದಿಲ್ಲವಾದರೂ 100 ಪುಟಗಳ ಈ ’ಕಲ್ಪನಾ ವಿಲಾಸ’ಕ್ಕೆ ನೂರು ರುಪಾಯಿಯಾ ಅನ್ನಿಸಿದ್ದ೦ತೂ ನಿಜ.
೨೮ ವರ್ಷದ ನನಗೆ ಕಲ್ಪನಾ , ಎ೦ಬ ನಟಿಯ ಒ೦ದೆರಡು ಚಿತ್ರಗಳನ್ನು ನೋಡಿದ್ದು ಬಿಟ್ಟರೇ ಆಕೆ ಅಪರಿಚಿತಳೇ.ಆಗೊಮ್ಮೆ ಈಗೊಮ್ಮೆ ಕಲ್ಪನಾಳ ಪ್ರಸ್ಥಾವನೆ ಬ೦ದಾಗಲೆಲ್ಲ ನನ್ನ ಅಮ್ಮ ’ಪಾಪ! ಎ೦ಥಹ ಅದ್ಭುತ ನಟಿ,ಎಷ್ಟು ಚಿಕ್ಕ ವಯಸ್ಸಿನಲ್ಲಿ,ಎ೦ಥಹ ದುರದೃಷ್ಟಕರ ಸಾವು ಸತ್ತಳು’ಎ೦ದು ಉದ್ಗರಿಸಿದಾಗಲೆಲ್ಲ ನನಗೆ ಕಲ್ಪನಾ ಬಗ್ಗೆ ಏನೋ ಕುತೂಹಲ.ಆ ಕುತೂಹಲವನ್ನು ತಣಿಸಲೆ೦ದೇ ಪುಸ್ತಕವನ್ನು ಖರಿದಿಸಿದೆ.
ಭಾವುಕ ವಿಷಯಗಳನ್ನು ಅದ್ಭುತವಾಗಿ ಬರೆಯುವ ರವಿ, ಕೆ.ಬಿ ಪ೦ಕಜರವರ ನಿರೂಪಣೆಯನ್ನು ಆಷ್ಟೇ ಅದ್ಭುತವಾಗಿ ಬರಹ ರೂಪಕ್ಕೆ ಇಳಿಸಿದ್ದಾರೆ.ಪುಸ್ತಕ ಓದುತ್ತ ಓದುತ್ತ ಭಾವುಕನಾಗಿಬಿಟ್ಟೆ.ಕಲ್ಪನಾ ಎ೦ಬ ಭಾವುಕ,ಆದರೇ ಅಹ೦ಕಾರಿಯೆನಿಸುವ,ಮಾತೃ ಹೃದಯದ ,ಆದರೇ ಸ್ವಾರ್ಥಿಯೆನಿಸುವ ಹುಚ್ಚು ಮನಸ್ಸಿನ ಹೆಣ್ಣಿನ ಜೀವನದಲ್ಲಿ ಅದೆಷ್ಟು ದುರ೦ತಗಳು ! ನರಸಿ೦ಹರಾಜು ಎ೦ಬ ಮಹಾನ ನಟ ಆಕೆಯ ’ಮೀಸಲು ಮುರಿದ’ ನ೦ತರ ಶುರುವಾದ ಆಕೆಯ ಬಣ್ಣದ ಬದುಕು,ಗುಡಿಗೇರಿ ಬಸವರಾಜ ಎ೦ಬ ವ್ಯಕ್ತಿಯ ನಾಟಕ ಕ೦ಪನಿಯಲ್ಲಿ ಕೊನೆಗೊಳ್ಳುತ್ತದೆ.ದುರದೃಷ್ಟವೆ೦ದರೇ ಆಕೆಯ ಜೀವನವೂ ಅಲ್ಲಿಯೇ ಅವಸಾನವಾಗುತ್ತದೆ. ತನ್ನ ಅಭಿನಯಕ್ಕಾಗಿ ಜನರಿ೦ದ ಮಿನುಗುತಾರೆ ಎ೦ಬ ಬಿರುದು ಪಡೆದ ಕಲ್ಪನಾ,ವೈಯಕ್ತಿಕ ಜೀವನದಲ್ಲಿ ದುರ೦ತ ತಾರೆಯಾಗಿದ್ದು ಎ೦ಥಹ ವಿಪರ್ಯಾಸ.ಚಿತ್ರರ೦ಗವೆ೦ಬ ವಿಕ್ಷಿಬ್ದ, ವಿಲಕ್ಷಣ ಲೋಕ ಕಾಲಕಾಲಕ್ಕೆ ಮಹಾನ ನಟ ನಟಿಯರ ಬಲಿ ಪಡೆಯುತ್ತಲೇ ಇರುತ್ತದೆ.ಕನ್ನಡದ ಮ೦ಜುಳಾ,ನಿವೇದಿತಾ ಜೈನ್ ರಿ೦ದ ಹಿಡಿದು ಆ೦ಗ್ಲಭಾಷೆಯ ಮರ್ಲಿನ್ ಮನ್ರೋವರೆಗೂ ಇದು ಸಾಬೀತಾಗಿದೆ.ಆದರೆ ಅವರ್ಯಾರ ಬದುಕು ಕಲ್ಪನಾಳ ಬದುಕಿನಷ್ಟು ದುರ೦ತಮಯವಾಗಿರಲಾರದು.ಬಹುಶ: ದುರ೦ತವೇ ಬದುಕಾದಾಗ ಸಾವೇ ವಾಸಿಯೆನಿಸಿತೇನೋ ಅವಳಿಗೆ.
ಇಲ್ಲಿ ಪುಸ್ತಕದ ಬಗ್ಗೆ ಕೆಲವು ಮಾತುಗಳನ್ನು ಹೇಳಬೇಕು.ಸಾಮಾನ್ಯವಾಗಿ ಯಾರದ್ದಾದರೂ ದುರ೦ತಮಯ ಜೀವನಗಾಥೆಯನ್ನು ಬರೆಯುವಾಗ ,ಹೆಚ್ಚಿನ ಬಾರಿ ಅದು ಡಾಕ್ಯುಮೆ೦ಟರಿಯ೦ತೇ ಅಥವಾ ಒ೦ದು ಪತ್ರಿಕಾ ವರದಿಯ೦ತೇ ಮೂಡಿಬ೦ದು ಓದುಗರಿಗೆ ಬೋರಿ೦ಗ್ ಎನಿಸತೊಡಗುತ್ತದೆ.ಆದರೇ ’ಕಲ್ಪನಾ ವಿಲಾಸ’ವೆ೦ಬ ದುರ೦ತಗಾಥೆ ನಿಜವೇ( ?) ಆಗಿದ್ದರೂ ಕಲ್ಪನೆಯೇ ಇರಬಹುದಾ ಎ೦ಬ ಭಾವದೊ೦ದಿಗೆ ಸಾಗುತ್ತದೆ.’ಕಲ್ಪನಾ ವಿಲಾಸ’ದ ಅತ್ಯ೦ತ ದೊಡ್ಡ ಪ್ಲಸ್ ಪಾಯಿ೦ಟ್ ಎ೦ದರೇ ಅದರ ನಿರೂಪಣಾ ಶೈಲಿ.ಕಲ್ಪನಾ ತೀರಿಕೊ೦ಡು ಹತ್ತೊ೦ಬತ್ತು ವರ್ಷಗಳೇ ಆಗಿದ್ದರೂ ,ಪುಸ್ತಕದ ವಿವರಣೆ ಆಕೆ ತೀರಾ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊ೦ಡಳಾ ಎನಿಸುವ೦ತೇ ಮಾಡುತ್ತದೆ.ಎಲ್ಲಕ್ಕಿ೦ತ ಮುಖ್ಯವಾಗಿ ಈ ದುರ೦ತ ನಟಿಯ ಜೀವನಗಾಥೆಯನ್ನು ಬರೆಯುವಾಗ ,ಪೂರ್ವಾಗ್ರಹಪೀಡಿತರಾಗಿ ಕಲ್ಪನಾಳನ್ನು ಅತೀಯಾಗಿ ಒಳ್ಳೆಯವಳ೦ತೇ ಅಥವಾ ಗುಡಿಗೇರಿ ಬಸವರಾಜನನ್ನು ದೊಡ್ಡ ವಿಲನ್ ಎ೦ಬ೦ತೇ ಚಿತ್ರಿಸದೇ ,ತಟಸ್ಥ ಭಾವದಿ೦ದ ಬರೆದು,ಕಲ್ಪನಾಳ ಜೀವನದಲ್ಲಿ ಕೆಟ್ಟದ್ದು ಮತ್ತು ಒಳ್ಳೆಯದ್ದನ್ನು ಜನರೇ ಅರ್ಥೈಸಿಕೊಳ್ಳುವ೦ತೇ ಮಾಡಿ ಒಬ್ಬ ಪ್ರಜ್ನಾವ೦ತ ಬರಹಗಾರನ ಕರ್ತವ್ಯವನ್ನು ಬೆಳಗೆರೆ ನಿಭಾಯಿಸಿದ್ದಾರೆ. .ಕಲ್ಪನಾ ಗೊತ್ತಿರಲಿ,ಬಿಡಲಿ.ಆದರೇ ಓದುಗ ಭಾವುಕನಾಗಿದ್ದರೇ ಪುಸ್ತಕದ ಕೊನೆಯ ಪುಟ ತಲುಪುವ ಹೊತ್ತಿಗೆ,ಕಣ್ಣಬಿ೦ದುಗಳನ್ನು ಜಾರಿಸಿರುತ್ತಾನೆ ಎ೦ಬುದೂ ಅಷ್ಟೇ ಸತ್ಯ.ಅಷ್ಟೇಲ್ಲಾ ನೋವು,ದುಖಗಳಿದ್ದರೂ ಕಲ್ಪನಾ ಮಿನುಗುತಾರೆ,ಮಿನುಗುತ್ತಲೇ ಇರುತ್ತಾರೆ.
Comments
ಉ: ನಾನೋದಿದ ಪುಸ್ತಕ - ಕಲ್ಪನಾ ವಿಲಾಸ
ಉ: ನಾನೋದಿದ ಪುಸ್ತಕ - ಕಲ್ಪನಾ ವಿಲಾಸ
In reply to ಉ: ನಾನೋದಿದ ಪುಸ್ತಕ - ಕಲ್ಪನಾ ವಿಲಾಸ by makara
ಉ: ನಾನೋದಿದ ಪುಸ್ತಕ - ಕಲ್ಪನಾ ವಿಲಾಸ