ಒಂದು ಚೆಂದದ ಇಂಗ್ಲೀಷ್ ಯಕ್ಷಗಾನವು...
ಅಪರೂಪಕ್ಕೆ ಟಿವಿ ನೋಡುವ ನಾನು ಮೊನ್ನೆ ಸಾಯಂಕಾಲ ಹೀಗೆ ಸುಮ್ಮನೆ ಟಿವಿ ರಿಮೋಟ್ ಅದುಮುತ್ತಾ ಹೋದೆ. ಇದ್ದಕ್ಕಿದ್ದಂತೆ ಇದೇನಾಶ್ಚರ್ಯ!.......... ಇದೇನಾಶ್ಚರ್ಯ!....... ಇದೇನಾಶ್ಚರ್ಯ!
ನಮ್ಮಕುಡ್ಲ ವಾಹಿನಿಯಲ್ಲಿ (ಮಂಗಳೂರ ಸ್ಥಳೀಯ ವಾಹಿನಿ) ಯಕ್ಷಗಾನ ಪ್ರಸಾರವಾಗುತ್ತಿತ್ತು. ಟಿವಿ ವಾಹಿನಿಯಲ್ಲಿ ಯಕ್ಷಗಾನ ಪ್ರಸಾರ; ಅದರಲ್ಲೂ ಮಂಗಳೂರ ವಾಹಿನಿಗಳಲ್ಲಿ ಆಶ್ಚರ್ಯಕರ ಸಂಗತಿಯಲ್ಲ. ಆದರೆ ನನ್ನ ಕಣ್ಣು-ಕಿವಿಗಳಿಗೆ ಕಂಡು-ಬಿದ್ದದ್ದು ಇಂಗ್ಲೀಷ್ ಯಕ್ಷಗಾನ! ಭಯಂಕರ ಖುಷಿಯಾಯಿತು. ರಿಮೋಟ್ ಪಕ್ಕಕ್ಕಿಟ್ಟು ಚಾನೆಲ್ಲಿಂದ ಚಾನೆಲ್ಲಿಗೆ ಹೊರಳುವುದನ್ನು ನಿಲ್ಲಿಸಿ, ಕುರ್ಚಿಯಲ್ಲಿ ಇನ್ನಷ್ಟು ದೃಢವಾಗಿ ಕುಳಿತು ಯಕ್ಷಗಾನದತ್ತ ಕೇಂದ್ರೀಕೃತಳಾದೆ. ಯಾಕೆಂದರೆ ಇಂಗ್ಲೀಷ್ ಅರ್ಥಗಾರಿಕೆಯ ಯಕ್ಷಗಾನ ನಾನು ನೋಡಿದ್ದು ಇದೇ ಮೊದಲು.
ಹಳ್ಳಿ ಪ್ರದೇಶದಲ್ಲಿ ಹುಟ್ಟಿಬೆಳೆದ ನಮಗೆ ನಮ್ಮ ಬಾಲ್ಯ ಕಾಲದಲ್ಲಿ ಇದ್ದ ಮನರಂಜನೆ ಎಂದರೆ ವರ್ಷಕ್ಕೊಮ್ಮೆ ನಮ್ಮೂರಿಗೆ ಯಾವುದಾದರೂ ಮೇಳದವರು ಬಂದು ಆಡಿ ಹೋದ ಯಕ್ಷಗಾನ, ತಪ್ಪಿದರೆ ನಮ್ಮೂರಲ್ಲಿದ್ದ ಏಕೈಕ ಪ್ರಾಥಮಿಕ ಶಾಲೆಯ ಸ್ಕೂಲ್ ಡೇ. ಹೀಗೆ ವರ್ಷಾವಧಿ ಬರುವ ಯಕ್ಷಗಾನಗಳನ್ನು ತಪ್ಪದೇ ವೀಕ್ಷಿಸುತ್ತಿದ್ದ ನಾವುಗಳೆಲ್ಲ ನಮ್ಮನಮ್ಮ ಮನೆಯಂಗಳದ ಮಟ್ಟಿಗೆ ಯಕ್ಷಕಲಾವಿದರೇ! ಒಡಹುಟ್ಟಿದವರೊಂದಿಗೆ ಯಕ್ಷಗಾನದ ಶೈಲಿಯಲ್ಲೇ ಮೋಜು - ಮಸ್ತಿ - ಕುಸ್ತಿ, ಜಗಳ - ಸರಸ - ವಿರಸ.
ಕಾಲೇಜು ದಿನಗಳಲ್ಲಿ ನಾವು ಯಕ್ಷಗಾನ ಮಾಡುತ್ತಿದ್ದಾಗ (ಇದು ಬರಿಯ ಕಾಲೇಜು ಡೇಗೆ ಮಾತ್ರ ಸೀಮಿತವಾಗಿರುತ್ತಿತ್ತು) ಗುರುಗಳ ಕಣ್ಣು ತಪ್ಪಿಸಿ, ನಮ್ಮನಮ್ಮೊಳಗೆ ಇಂಗ್ಲೀಷ್ ಯಕ್ಷಗಾನ ಮಾಡಿದರೆ ಹೇಗಿರಬಹುದು ಎಂದು ಊಹಿಸುತ್ತಾ, ಭಾಗವತಿಕೆ ಮಾಡುತ್ತಾ, ಅರ್ಥ ಹೇಳುತ್ತಾ ಗುಂಪಿನೊಳಗೆ ಆನಂದ ಅನುಭವಿಸುತ್ತಿದ್ದೆವು. "ಬಂದಳು ಬಂದಳು ಶೂರ್ಪನಕೀ......" ಎಂಬುದನ್ನು "ಕಮ್ಮುಡ್ ಕಮ್ಮುಡ್ ಶೂರ್ಪನಕೀ......" ಹೀಗೇ ಇಂಗ್ಲೀಷೀಕರಿಸಿ ನಮ್ಮದೇ ಭಾಗವತಿಕೆ ಮಾಡಿ ಹಾರಿ - ಕುಣಿದು ಸಂತಸ ಪಡುತ್ತಿದ್ದೆವು.
ಇಂಥಾ ನನಗೆ ನಿಜವಾಗಿಯೂ ಯಕ್ಷಗಾನ ಪ್ರದರ್ಶನದಲ್ಲಿ ವೇಷಧಾರಿಗಳು ಇಂಗ್ಲೀಷ್ ಅರ್ಥಗಾರಿಕೆ ಮಾಡುವುದು ಕಂಡು ಕುತೂಹಲ, ಖುಷಿ ಎರಡೂ ಆಯಿತು. ಈ ಪ್ರಯೋಗದ ಬಗ್ಗೆ ಕೇಳಿದ್ದೆನಾದರೂ ನೋಡಿರಲಿಲ್ಲ.
ಶಾಂಭವಿ ವಿಜಯಮ್ ಎಂಬ ಪ್ರಸಂಗವೆಂದೂ, ಪಿ.ವಿ. ಐತಾಳ್ ಯಕ್ಷಗಾನ ತಂಡವೆಂದೂ ಮತ್ತು ಡಾ| ಪಿ ಸಂತೋಷ್ ಐತಾಳ್ ಅವರ ಸ್ಕ್ರಿಪ್ಟ್ ಎಂಬುದಾಗಿ ವಾಹಿನಿಯಲ್ಲಿ ಸ್ಕ್ರೋಲ್ ಆಗುತ್ತಿದ್ದುದನ್ನು ನೋಡಿ ತಿಳಿದುಕೊಂಡಂತಾಯಿತು.
ಹೇಗೆ ಮಾಡುತ್ತಾರೆಂಬ ಕುತೂಹಲ
"ಬಂದಂತಹ ಕಾರ್ಯ ಎಂಬುದಕ್ಕೆ...."
ವ್ಹಾಟ್ಹೀ....ಸ್ ದಿ ಎಜೆಂಡಾ......?
"ಕೇಳುವಂತವರಾಗಿ ಎಂಬದುಕ್ಕೆ"
ಲಿಸನ್ ಟ್ಹು ಮೀ .....
ಎಂಬಂತಹ ಆಂಗ್ಲ ಸಂಭಾಷಣೆಗಳನ್ನು ಕೇಳಿದಾಗ ಅದನ್ನು ವೀಕ್ಷಿಸುತ್ತಿದ್ದ ನನಗೆ ಬಹಳ ಸಂತೋಷ..... ಬಹಳ ಸಂತೋಷ...... ಬಹಳ ಸಂತೋಷ!
ಎಲ್ಲ ಕಲಾವಿದರು ಹಿರಿ ಕಿರಿಯರೆನ್ನದೆ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದು ಯಕ್ಷಗಾನದ ಚೊಕ್ಕ ಪ್ರದರ್ಶನವಾಗುತ್ತಿತ್ತು. ಕನ್ನಡ ಅಥವಾ ತುಳು ಯಕ್ಷಗಾನಗಳನ್ನು ವೀಕ್ಷಿಸಿ ಇದರ ಪೂರ್ವಗ್ರಹದಲ್ಲಿದ್ದರೂ ಸಹ ಇಂಗ್ಲೀಷ್ ಯಕ್ಷಗಾನದ ಈ ನನ್ನ ಪ್ರಥಮ ವೀಕ್ಷಣೆಯ ವೇಳೆಗೆ ಎಲ್ಲೂ ರಸಭಂಗವಾಗಲಿಲ್ಲ. ಯಕ್ಷಗಾನಕ್ಕೆ ತನ್ನದೇ ಆದ ಶೈಲಿ ಗತ್ತು ಗೈರತ್ತುಗಳಿದ್ದು ಅರ್ಥಗಾರಿಕೆ ವೇಳೆ ಪಾತ್ರಧಾರಿಗಳ ಸ್ವರದ ಏರಿಳಿತಗಳು ಮತ್ತು ಪ್ರಸ್ತುತಿಯೇ ಪ್ರೇಕ್ಷಕರನ್ನು ಸೆಳೆಯುವುದು. (ಹಿಮ್ಮೇಳವನ್ನು ಮರೆತಿಲ್ಲ) ಯಕ್ಷಗಾನದ ಪ್ರದರ್ಶನದ ಸೌಂದರ್ಯಕ್ಕೆ ಹೊಸ ಭಾಷೆಯ ಪ್ರಯೋಗ ತೊಡಕಾಗವುದಿಲ್ಲ ಎಂಬುದು ಶಾಂಭವಿ ವಿಜಯಂ ಪ್ರದರ್ಶನದಲ್ಲಿ ನಿಚ್ಚಳವಾಗಿದೆ.
ದೇವೇಂದ್ರನ ತಂಡ, ರಾಕ್ಷಸರ ತಂಡ, ಆದಿಮಾಯೆ ಮತ್ತು ತಂಡವನ್ನು ನಿರ್ವಹಿಸಿದ ಎಲ್ಲಾ ಕಲಾವಿದರೂ ಸಹ ತಮ್ಮತಮ್ಮ ಪಾತ್ರಗಳನ್ನು ತುಂಬ ಚೆನ್ನಾಗಿ ನಿರ್ವಹಿಸಿದ್ದಾರೆ. ಈ ಯಕ್ಷಗಾನದಲ್ಲಿ ನನ್ನನ್ನು ತುಂಬ ಸೆಳೆದದ್ದು ಬಣ್ಣದ ವೇಷದ ಶುಂಭಾಸುರ. ಮೊದಲ ಬಾರಿಗೆ ನಾನು ಇಂಗ್ಲೀಷ್ ಯಕ್ಷಗಾನ ನೋಡುತ್ತಿದ್ದುದರಿಂದ ಅಟೋಮೆಟಿಕ್ಕಾಗಿ ಈ ಯಕ್ಷಗಾನವು ಕನ್ನಡ ಯಕ್ಷಗಾನದೊಂದಿಗೆ ತುಲನೆಯಾಗುತ್ತಲೇ ಇರುತ್ತಿತ್ತು. ಈ ಆಸುರರೀರ್ವರ ಓಡ್ಡೋಲಗ ಮನಸ್ಸಿಗೆ ತುಂಬ ಮುದ ನೀಡಿತು. ಶುಂಭಾಸರ ಪಾತ್ರಧಾರಿ ಬಹಳ ಕಂಫರ್ಟೇಬಲ್ ಆಗಿದ್ದರು. ಶುಂಭಾಸುರನ ಡೈಯಲಾಗ್ ಡೆಲಿವರಿಗಳು ಆಂಗಿಕ ಅಭಿನಯಗಳಂತೂ ಸೂಪರ್! "ಆದಿಮಾಯೆಯ ತಂಟೆಗೆ ಹೋಗದಿರು, ಆಕೆ ತಾಯಿ ಸಮಾನ, ಆಕೆಯನ್ನು ವರಿಸುವ ಹುಚ್ಚು ಬೇಡ" ಎಂಬುದಾಗಿ ರಕ್ತಬೀಜಾಸುರ ಶುಂಭಾಸುರನಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಿರುವಾಗ ಆತನ ಪೌರುಷವನ್ನು ಕೆಣಕಿ ಆಕೆಯನ್ನು ರೊಚ್ಚಿಗೆಬ್ಬಿಸಿದ ರೀತಿ ಆನಂದಕರ. ಅಂತೆಯೇ ದೇವಿಯೊಂದಿಗಿನ ರಕ್ತಬೀಜಾಸುರನ ಸಂಭಾಷಣೆ ಕೂಡ.
*****
ಇಂಗ್ಲೀಷ್ ಯಕ್ಷಗಾನ ಪ್ರಸಾರ ಶಾಂಭವಿ ವಿಜಯಂ ಟಿವಿ ವಾಹಿನಿಯಲ್ಲಿ ಅಬ್‌ರಪ್ಟ್ ಆಗಿ ನಿಂತು ಹೋಯಿತು. ತುಂಬ ಇಷ್ಟಪಟ್ಟು ಆನಂದದಿಂದ ಆಸ್ವಾದಿಸುತ್ತಾ ತಿನ್ನುತ್ತಿದ್ದ ಚಾಕೋಲೇಟನ್ನು ಕೈಯಿಂದ ಕಸಿದುಕೊಂಡಂತಾಯಿತು. ಹಾಗಾಗಿ ಈ ಕುರಿತಂತೆ ಹೆಚ್ಚಿನ ಮಾಹಿತಿಗೆ ಗೂಗಲ್ ಗುರುವಿಗೆ ಮೊರೆ ಹೋದೆ. ಸ್ವಲ್ಪ ಹೆಚ್ಚು ತಿಳಿದುಕೊಂಡಂತಾಯಿತು.
ಇದೇ ಜುಲೈ 13ರಂದು ಮಂಗಳೂರಿನ ಟೌನ್ ಹಾಲ್‌ನಲ್ಲಿ ನಡೆದ ಯಕ್ಷಗಾನ ಪ್ರದರ್ಶನ ಇದಾಗಿದ್ದು, ಇದನ್ನು ಯಕ್ಷಗಾನ ಹಾಗೂ ನಾಟಕ ಕಲಾವಿದ ಪಿ.ವಿ. ಐತಾಳರ 15ನೇ ಪುಣ್ಯತಿಥಿಯ ಸ್ಮರಣಾರ್ಥ ಏರ್ಪಡಿಸಲಾಗಿದ್ದು, ಈ ಸಂದರ್ಭದಲ್ಲಿ "ಯಕ್ಷ ಟ್ರೆಶರ್" ಎಂಬ ಶ್ರೀ ಐತಾಳರ ಇಂಗ್ಲೀಷ್ ಯಕ್ಷಗಾನ ಅರ್ಥಗಾರಿಕೆಯ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು ಎಂಬುದು ತಿಳಿಯಿತು.
ಯಕ್ಷಗಾನ ಅರ್ಥಗಾರಿಕೆಯನ್ನು ಬರೆದ ಸಂತೋಷ್ ಐತಾಳ್ ಅವರು ವೃತ್ತಿಯಲ್ಲಿ ವಕೀಲರು ಮತ್ತು ಪಿ.ವಿ. ಐತಾಳರ ದ್ವಿತೀಯ ಪುತ್ರ.
ಈ ಯಕ್ಷಪಾತ್ರಧಾರಿಗಳೆಲ್ಲರೂ ಹವ್ಯಾಸಿ ಕಲಾವಿದರೆಂಬುದೂ ಸಹ ಗೂಗಲ್ ಗುರು ಕೊಟ್ಟ ಮಾಹಿತಿಯಲ್ಲಿತ್ತು. ಈ ಹವ್ಯಾಸಿ ಕಲಾವಿದರೆಲ್ಲರೂ ವೃತ್ತಿಪರ ಕಲಾವಿದರಿಗೆ ಕಮ್ಮಿ ಇಲ್ಲಂದಂತೆ ತಮ್ಮತಮ್ಮ ಪಾತ್ರ ನಿರ್ವಹಿಸಿದ್ದಾರೆ ಅವರಿಗೆ ಹ್ಯಾಟ್ಸಪ್!
*****
ಸ್ಕ್ರಿಪ್ಟ್ ಬರೆದ ಸಂತೋಷ್ ಐತಾಳರಿಗೆ, ಪ್ರದರ್ಶನ ನೀಡಿದ ಪಿ.ವಿ. ಐತಾಳ್ ಯಕ್ಷಗಾನ ತಂಡಕ್ಕೆ, ಐತಾಳರ ಕುಟುಂಬಕ್ಕೆ ಮತ್ತು ಈ ಯಕ್ಷಗಾನ ಪ್ರಸಾರಕ್ಕೆ ಕಾರಣರಾದ ಎಲ್ಲರಿಗೂ ಸೆಲ್ಯೂಟ್!
Comments
ಉ: ಒಂದು ಚೆಂದದ ಇಂಗ್ಲೀಷ್ ಯಕ್ಷಗಾನವು...
In reply to ಉ: ಒಂದು ಚೆಂದದ ಇಂಗ್ಲೀಷ್ ಯಕ್ಷಗಾನವು... by makara
ಉ: ಒಂದು ಚೆಂದದ ಇಂಗ್ಲೀಷ್ ಯಕ್ಷಗಾನವು...
In reply to ಉ: ಒಂದು ಚೆಂದದ ಇಂಗ್ಲೀಷ್ ಯಕ್ಷಗಾನವು... by makara
ಉ: ಒಂದು ಚೆಂದದ ಇಂಗ್ಲೀಷ್ ಯಕ್ಷಗಾನವು...
In reply to ಉ: ಒಂದು ಚೆಂದದ ಇಂಗ್ಲೀಷ್ ಯಕ್ಷಗಾನವು... by ganapati_bd
ಉ: ಒಂದು ಚೆಂದದ ಇಂಗ್ಲೀಷ್ ಯಕ್ಷಗಾನವು...
ಉ: ಒಂದು ಚೆಂದದ ಇಂಗ್ಲೀಷ್ ಯಕ್ಷಗಾನವು...
In reply to ಉ: ಒಂದು ಚೆಂದದ ಇಂಗ್ಲೀಷ್ ಯಕ್ಷಗಾನವು... by kavinagaraj
ಉ: ಒಂದು ಚೆಂದದ ಇಂಗ್ಲೀಷ್ ಯಕ್ಷಗಾನವು...
ಉ: ಒಂದು ಚೆಂದದ ಇಂಗ್ಲೀಷ್ ಯಕ್ಷಗಾನವು...
In reply to ಉ: ಒಂದು ಚೆಂದದ ಇಂಗ್ಲೀಷ್ ಯಕ್ಷಗಾನವು... by GOPALAKRISHNA …
ಉ: ಒಂದು ಚೆಂದದ ಇಂಗ್ಲೀಷ್ ಯಕ್ಷಗಾನವು...