ಕತೆ : ದೂರ ತೀರದ ಕರೆ [ ಬಾಗ : 1 ]

ಕತೆ : ದೂರ ತೀರದ ಕರೆ [ ಬಾಗ : 1 ]

ಅದುನಿಕ ಮಾದ್ಯಮಗಳಾದ ಟೀವಿ, ಕಂಪ್ಯೂಟರ್ , ಇಂಟರ್ ನೆಟ್ ಇವು ಬೇಕೊ ಬೇಡವೊ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ ಬೆರೆತುಹೋಗಿವೆ. ಹಾಗೆಯೆ ಇವುಗಳನ್ನು ತೀರ ಹೀಗೆಳೆಯಲು ಆಗುವದಿಲ್ಲ. ಜೀವನದಲ್ಲಿ ಇವು ನಮ್ಮನ್ನು ಹೊಸ ನೆಲೆಯತ್ತ, ಹೊಸ ಚಿಂತನೆಗಳತ್ತ, ಹೊಸ ಆಯಾಮಗಳತ್ತ ಕರೆದೊಯ್ಯುತ್ತದೆ. ಹಾಗೆ ಜೀವನದ ಸಂಬಂದಗಳಿಗೆ, ಗೆಳೆತನಕ್ಕೆ ಹೊಸ ಅರ್ಥವನ್ನು ಹಚ್ಚುತ್ತ ಹೋಗುತ್ತದೆ. ನಾವು ಚಿಕ್ಕವರಾಗಿದ್ದಾಗಲೆಲ್ಲ, ಗೆಳೆಯರೆಂದರೆ ನಮ್ಮಗೆ ಎಂತದೊ ಸಂತಸ, ಹಾಗೆ ಗೆಳೆಯರೆಂದರೆ ಯಾರೊ ಆಗುತ್ತಿರಲಿಲ್ಲ. ನಮ್ಮ ಸುತ್ತಲೆ ಸದಾ ಇದ್ದು, ಅಕ್ಕಪಕ್ಕದ ಮನೆಗಳಲ್ಲಿ, ಬೀದಿಗಳಲ್ಲಿ ಇರುತ್ತ. ಬೆಳಗ್ಗೆ ಶಾಲೆಗೆ ಹೋಗುವಾಗ, ಮತ್ತೆ ಶಾಲೆಯಲ್ಲಿ, ಸಂಜೆ ಆಡುವಾಗ ಹೀಗೆ ಸದಾ ನಮ್ಮ ಜೊತೆಯೆ ಇರುತ್ತ, ಆಟ ಊಟಗಳಲ್ಲಿ ನೋವು ನಲಿವುಗಳಲ್ಲಿ ಬೆರೆಯುತ್ತ ಒಂದಾಗುತ್ತಿದ್ದವರು. ಅವರಿಗೆ ವಿಶಿಷ್ಟ ಸ್ಥಾನ ನಮ್ಮ ಬದುಕಲ್ಲಿ ಆದರೆ ಈಗ ಬದುಕೆ ಬದಲಾಗುತ್ತ ನಡೆದಿದೆ, ಪ್ರಪಂಚವೆಂದರೆ ತುಂಬಾ ಚಿಕ್ಕದಾಗುತ್ತ ನಡೆದಿದೆ, ಹಾಗೆ ಗೆಳೆಯರೆಂದರೆ ನಿಮ್ಮ ಪಕ್ಕದ ಮನೆಯವರಲ್ಲ, ಹಿಂದಿನ ಬೀದಿಯವರು ಅಲ್ಲ, ಎಲ್ಲೊ ಯಾವುದೋ ಕಾಣದ ಊರಿನಲ್ಲಿ, ಎಂದು ಕೇಳಿರದ ದೇಶದಲ್ಲಿರಬಹುದು. ಎಂದು ನೋಡಿರದೆ ಇರಬಹುದು, ಅವರ ಬಾಷೆಯು ಗೊತ್ತಿಲ್ಲದೆ ಇರಬಹುದು. ಗಂಡು ಅಥವ ಹೆಣ್ಣು ಎಂಬ ಬೇದವು ಇಲ್ಲದೆ ಹಾಗೆ ಈ ಗೆಳೆತನ ಬೆಸೆದುಬಿಡುತ್ತದೆ ಅನ್ನುವುದೆ ವಿಚಿತ್ರ. ಇದಕ್ಕೆಲ್ಲ ಕಾರಣವಾಗಿರುವುದು ಇಂಟರ್ ನೆಟೆ ಎಂಬ ಸೌಲಬ್ಯ. ಹೀಗೆ ಅದು ನನ್ನನ್ನು ಒಮ್ಮೆ ವಿಚಿತ್ರ ಲೋಕಕ್ಕೆ ಕರೆದೊಯ್ಯಬಲ್ಲದೆಂದು ಅಥವ ನಾನು ಎಂದು ಊಹೆ ಮಾಡಿರದ ವ್ಯಕ್ತಿಯೊಬ್ಬರ ಬೇಟಿಯಾಗಬಲ್ಲನೆಂದು ಕಲ್ಪಿಸಿರಲಿಲ್ಲ. ನಾನೇನು ಚಿಕ್ಕವಯಸಿನಿಂದಲು ಕಂಪ್ಯೂಟರ್ ಇಂಟರ್ ನೆಟ್ ಎಂದು ಬೆಳೆದವನಲ್ಲ ಅಸಲಿಗೆ ಚಿಕ್ಕವಯಸಿನಲ್ಲಿ ಅವೆಲ್ಲ ಇರಲೆ ಇಲ್ಲ. ತೀರ ತಡವಾಗಿ ಆ ಲೋಕಕ್ಕೆ ಪರಿಚಯವಾದವನು. ಪೇಸ್ ಬುಕ್ , ಟ್ವಿಟರ್ ಎಂದು ಕೇಳುತ್ತ ಅದೇನು ಎಂಬ ಕುತೂಹಲದಲ್ಲಿಯೆ ಅದರಲ್ಲಿ ಕಾಲಿಟ್ಟು, ಸ್ವಲ್ಪ ಗಂಭೀರವಾಗಿಯೆ ಇಳಿದವನು. ಕೆಲವರಾದರು ಅದರಲ್ಲಿ ಗೆಳೆಯರಾದರು ಅಂದರೆ ಅದಕ್ಕೆ ಕಾರಣ ನನಗೆ ಕನ್ನಡದಲ್ಲಿದ್ದ ಆಸಕ್ತಿ. ಆದರೆ ಒಮ್ಮೊಮ್ಮೆ ಬಾಷೆಯನ್ನು ಮೀರುವ ಸಂದರ್ಭ ಬಂದಿತು. ಅದರಲ್ಲಿ ಮೊದಲಿಗೆ ನನಗೆ ನನ್ನ ಪ್ರೊಫೈಲ್ ಅಕೌಂಟ್ ಬೇರೆಯವರು ಕಾಲು ಹಾಕದಂತೆ ತಡೆಯಲು ಗೊತ್ತಿರಲಿಲ್ಲ. ಹಾಗಾಗಿ ಯಾವುದೊ ಯಾವುದೊ ಗೆಳೆತನದ ಅಫರ್ ಬರೋದು. ಯಾವುದಕ್ಕು ಸ್ಪಂದಿಸುವದಕ್ಕೆ ಹೋಗುತ್ತಿರಲಿಲ್ಲ. ಸುಮ್ಮನಾಗಿಬಿಡುತ್ತಿದ್ದೆ. ವಿಚಿತ್ರವಾಗಿ ಕೆಲವು ಬೇರೆ ದೇಶಗಳಿಂದಲು ಬೇರೆ ಬಾಷೆಯ ಜನರು ಸಹ ಫೇಸ್ ಬುಕ್ನಲ್ಲಿ ನನಗೆ ರಿಕ್ವೆಸ್ಟ್ ಕಳಿಸಿದಾಗ ಗೊಂದಲವಾಗುತ್ತಿತ್ತು. ಕೆಲವರು ನನ್ನ ವಯಸಿನ ಅರಿವಿಲ್ಲದವರು ಸಹ ಇರುತ್ತಿದ್ದರು. ಸಾಮಾನ್ಯವಾಗಿ ಫೇಸ್ ಬುಕ್ ಅಕೌಂಟ್ ಎಂದಾಗ ಯಾರೊ ಒಬ್ಬ ವ್ಯಕ್ತಿ ಎಂದು ಭಾವಿಸುತ್ತೇವೆ, ಆದರೆ ಇಬ್ಬರು ಒಟ್ಟಾಗಿ ಅಪರೇಟ್ ಮಾಡುವ ಅಕೌಂಟ್ ಕಡಿಮೆ , ನನಗೆ ಒಂದು ಗೆಳೆತನದ ಕರೆ ಬಂದಿತ್ತು, ದೂರ ದೇಶದ ವ್ಯಕ್ತಿಗಳದು, ಇಬ್ಬರು ಒಂದೆ ಆಕೌಂಟ್ ಗೆ ರಿಜಿಸ್ಟರ್ ಆಗಿದ್ದವರು. ನನಗೆ ವಿಚಿತ್ರ ಅನ್ನಿಸಿತು. ಅವರಿಬ್ಬರು ಅಕ್ಕತಂಗಿಯರು ಅನ್ನಿಸುತ್ತೆ. ಆಂಡ್ರಿಯಾ ಅನ್ಸಾಲ್ ಮತ್ತು ಅಂಜಲೀನ ಅನ್ಸಾಲ್ ಅವರ ಹೆಸರುಗಳು. ಸಾಮಾನ್ಯವಾಗಿ ಫೇಸ್ ಬುಕ್ ನಲ್ಲಿ ಅಪರಿಚಿತರ ಗೆಳೆತನ ಒಪ್ಪದೆ ತಳ್ಳಿಹಾಕಿಬಿಡುವ ನಾನು ಅದಕ್ಕೆ ಒಪ್ಪಿಗೆ ಮುದ್ರೆ ಒತ್ತಿಬಿಟ್ಟೆ ನನಗೆ ಆಶ್ಚರ್ಯ ಆಗುವಂತೆ. ಎಷ್ಟೋ ಕಾಲ ಅವರ ಜೊತೆ ಗೆಳೆತನ ಬೆಳೆದು ನಡೆಯಿತು, ಮೊದಲಿಗೆ ಸ್ಟೇಟಸ್ ಅಪಡೇಟ್ ನಲ್ಲಿಯೆ ಮೆಸೇಜ್ ಗಳು ಸಾಗುತ್ತಿದ್ದುದ್ದು ಕಡೆ ಕಡೆಗೆ ಅದೇನೊ ಸ್ವಂತ ಮೆಸೇಜಗಳು ಹರಿದಾಡತೊಡಗಿ, ಫೇಸ್ ಬುಕ್ ಅಲ್ಲದೆ ನಮ್ಮದೆ ಇಮೈಲ್ ಮೂಲಕವು ಮಾತುಕತೆಗಳು, ಚಾಟ್ ಗಳು ಇರುತ್ತಿದ್ದವು. ಭಾರತದ ನೆಲದ , ಸಂಪ್ರದಾಯ, ಇಲ್ಲಿಯ ಸುತ್ತ ಮುತ್ತಲ ವಿಷ್ಯದ ಬಗ್ಗೆ ಅವರಿಬ್ಬರ ಆಸಕ್ತಿ ಹರಿದಾಡುತ್ತಿತ್ತು. ನಾನೇನು ಅವರ ದೇಶ ಅಮೇರಿಕದ ಬಗ್ಗೆ ಹೆಚ್ಚೆ ಆಸಕ್ತಿ ತೋರಿಸುತ್ತಿರಲಿಲ್ಲ. ನಿಜಕ್ಕು ನನಗೆ ಅವೆಲ್ಲ ಇಷ್ಟವು ಇರಲಿಲ್ಲ. ಆದರೆ ಅದು ಹೇಗೊ ಅವರಿಬ್ಬರ ಗೆಳತನ ಮಾತ್ರ ನನಗೆ ಅಂಟಿಕೊಂಡಿತ್ತು. ಅವರಿಬ್ಬರು ನಿಜವಾಗಿ ವ್ಯಕ್ತಿಗಳೊ ಅಥವ ಸುಳ್ಳು ಪ್ರೊಫೈಲ್ ಗಳೊ ಅನ್ನುವ ಅನುಮಾನವು ನನಗೆ ಮೊದಲಲ್ಲಿ ಕಾಡಿತ್ತು. ಆದರೆ ತೀರ ನನಗೆ ಇಮೈಲ್ ಗಳು ಪ್ರಾರಂಬವಾದ ನಂತರ ಅವರಿಬ್ಬರ ಮನಸ್ಸು ಸ್ವಭಾವ ಭಾವನೆಗಳು ಎಲ್ಲ ತಿಳಿಯುತ್ತ ಇರುವಂತೆ, ಅವರು ನಿಜ ವ್ಯಕ್ತಿಗಳೆ ಎಂಬ ನಂಬಿಕೆ ಬಂದಿತ್ತು. ಅದರೊಂದು ವಿಚಿತ್ರ ವಿತ್ತು ಎಂದು ಸಹ ಅವರಿಬ್ಬರ ಪ್ರತ್ಯೇಕ ಮೆಸೇಜ್ ನನಗೆ ಬರಲೆ ಇಲ್ಲ . ಯಾವ ಮೆಸೇಜ್ ಆಗಲಿ ಅವರಿಬ್ಬರ ಜೊತೆಯಾದ ಪತ್ರಗಳೆ ಇರುತ್ತಿದ್ದವು. ಕಡೆಯಲ್ಲಿ ಇಬ್ಬರ ಹೆಸರುಗಳು ಒಟ್ಟಿಗೆ ಇರುತ್ತಿದ್ದವು. ಅಕ್ಕತಂಗಿಯರು ತುಂಬಾ ಆತ್ಮೀಯರು ಎಂದುಕೊಳ್ಳುತ್ತಿದ್ದೆ. ನನಗೆ ಅವರಿಂದ ಅವರ ದೇಶದ, ಅಮೇರಿಕದ ಜನರ ನಡವಳಿಕೆಗಳ ಬಗ್ಗೆ, ಸಾಮಾನ್ಯ ವರ್ತನೆಗಳ ಬಗ್ಗೆ, ಸಂಸಾರ, ಬಾಂದವ್ಯ, ಗೆಳೆತನ, ಸಂಸ್ಕೃತಿ ಹೀಗೆ ಹತ್ತು ಹಲವು ವಿಷಯಗಳು ತಿಳಿಯುತ್ತಿದ್ದವು. ಮೊದಲಿನಿಂದ ನನ್ನದೆ ಆದ ಒಂದು ಅಭಿಪ್ರಾಯವಿತ್ತು, ಅದೆಂದರೆ ದೇಶ ಜನ ಯಾವುದೆ ಆಗಲಿ, ಒಟ್ಟಾರೆಯಾಗಿ ಎಲ್ಲ ಮನುಷ್ಯರ ವರ್ತನೆಗಳು ಒಂದೆ ಆಗಿರುತ್ತದೆ ಎನ್ನುವುದು ನನ್ನ ಕಲ್ಪನೆ . ನನ್ನ ಹಾಗು ನನ್ನ ಫೇಸ್ ಬುಕ್ ಗೆಳತಿಯರ ನಡುವಿನ ವಿಷಯ ವಿನಿಮಯಗಳು ನನ್ನ ಕಲ್ಪನೆಯನ್ನು ನಿಜ ಎಂದು ತೋರಿಸುತ್ತಿದ್ದವು. ಎಲ್ಲ ದೇಶದಲ್ಲಿ ಸಹ ದೊಡ್ಡವರ ಸಣ್ಣವರ ನಡುವಿನ ಬಿನ್ನಾಭಿಪ್ರಾಯಗಳೆ ಆಗಲಿ, ಹಣವಂತರ ಬಡವರ ನಡುವಿನ ವ್ಯೆತ್ಯಾಸವೆ ಆಗಲಿ, ಗಂಡು ಹೆಣ್ಣುಗಳ ನಡುವಿನ ಶೋಷಣೆಯೆ ಆಗಲಿ. ಸಾಮಾನ್ಯರ ಹಾಗು ಸಮಾಜದಲ್ಲಿ ಉನ್ನತ ಸ್ತರದಲ್ಲಿರುವ ಜನರ ನಡುವಿನ ನಡುವಳಿಕೆಗಳ ವ್ಯೆತ್ಯಾಸ ಎಲ್ಲವು ಇರುತ್ತದೆ. ಹಾಗೆ ದೇವರನ್ನು ನಂಬುವರು, ನಂಬದಿರುವರು, ಮೂಡನಂಭಿಕೆ ಇರುವರು ವೈಜ್ಞಾನಿಕ ಮನೋಭಾವದವರು, ಈ ರೀತಿ ಎಲ್ಲ ವರ್ಗದ ಜನರು ಒಂದು ಸಮಾಜದಲ್ಲಿರುತ್ತಾರೆ ಅನ್ನುವುದು ಸತ್ಯ, ಅದು ಅಮೇರಿಕವೆ ಆಗಲಿ ಪಾಕಿಸ್ತಾನವೆ ಆಗಲಿ , ನಮ್ಮ ಭಾರತವೆ ಆಗಲಿ ಹಾಗೆ ಇರುತ್ತದೆ. ತನ್ನ ದೇಶದ ನಡುವಳಿಕೆ ತಪ್ಪು ಎಂದು ತಿಳಿದವರು ಎಲ್ಲ ದೇಶದಲ್ಲಿಯು ಇರುತ್ತಾರೆ ಆದರೆ ಜೋರಾಗಿ ಹೇಳಲಾರರು. ಅದೆಲ್ಲ ಹಾಗಿರಲಿ , ನನ್ನ ಹಾಗು ಅಮೇರಿಕದ ಸಹೋದರಿಯರ ನಡುವಿನ ಗೆಳೆತನ ಹಾಗೆ ಮುಂದುವರೆದಿತ್ತು. ಅದೇನೊ ಎಲ್ಲಿಯೊ ಇರುವ ಅವರ ನನ್ನ ನಡುವೆ ಒಂದು ಗೆಳೆತನದ ಬೆಸುಗೆ ಬೆಸೆದಿತ್ತು. ನಾನು ಕೆಲವು ನನ್ನ ವೈಯುಕ್ತಿಕ ವಿಷಯಗಳನ್ನು ಅವರಲ್ಲಿ ಹಂಚಿಕೊಂಡಿದ್ದೆ, ನನ್ನ ಸಂಸಾರ , ಹೆಂಡತಿ, ಮಗಳ ವಿಷಯ, ನನ್ನ ವಯಸ್ಸು ಎಲ್ಲವು ಅವರಿಗೆ ತಿಳಿದಿತ್ತು, ಆದರೆ ಎರಡು ವರ್ಷಗಳ ಅಂತರ ದಲ್ಲಿ ನನಗೆ ಅವರ ಹೆಸರಿನ ವಿನಃ ಯಾವುದೆ ಸ್ವಂತ ವಿಷಯವು ತಿಳಿದಿರಲಿಲ್ಲ. ಕಡೆಗೆ ಅವರ ವಯಸ್ಸು ಸಹ ಸರಿಯಾಗಿ ತಿಳಿದಿರಲಿಲ್ಲ. ಅವರ ಬಾಷೆ, ಅನುಭವದ ಮಾತು, ಮನಸಿನ ಸ್ಥಿಥಿ ಎಲ್ಲವನ್ನು ಅನುಸರಿಸಿ ನಾನೆ ಸುಮಾರಾಗಿ ಅವರು ನಲವತ್ತು ನಲವತೈದು ವಯಸಿನವರಿರಬಹುದೆಂದು ಭಾವಿಸಿದ್ದೆ. ಅವರು ಒಮ್ಮೆ ನನ್ನನ್ನು ಅಮೇರಿಕಗೆ ಬೇಟಿ ಕೊಡುವ ಬಗ್ಗೆ ವಿಚಾರಿಸಿದರು, ಆದರೆ ನನಗೆ ತಿಳಿದಂತೆ ಅದು ನನಗೆ ಸಾದ್ಯವೆ ಇರಲಿಲ್ಲ. ನನಗೆ ಅದಕ್ಕೆ ಬೇಕಾದ ಯಾವುದೆ ಪಾಸ್ ಪೋರ್ಟ್ ವೀಸಾ ಅಗಲಿ ಮತ್ಯಾವುದೆ ಆಗಲಿ ಇರಲಿಲ್ಲ. ಅಲ್ಲದೆ ನನಗೆ ಅಲ್ಲಿಗೆ ಹೋಗಬೇಕಾದ ಪ್ರೊಪೆಷನಲ್ ಕೆಲಸವು ಇರಲಿಲ್ಲ. ವೈಯುಕ್ತಿಕ ನೆಲೆಯಲ್ಲಿ ಅಲ್ಲಿಗೆ ಹೋಗುವಷ್ಟು ಹಣಕಾಸಿನ ಸ್ಥಿಥಿಯಾಗಲಿ ಅಥವ ಪರಿಸ್ಥಿಥಿಯಾಗಲಿ ಇರಲಿಲ್ಲ. ನಾನು ಅದನ್ನೆಲ್ಲ ತಿಳಿಸಿ ನನ್ನ ಅಮೇರಿಕದ ಬೇಟಿ ಬಹುಮಟ್ಟಿಗೆ ಅಸಾದ್ಯವೆಂದೆ ತಿಳಿಸಿದ್ದೆ. ಆದರೆ ಅವರಿಗಂತು ಭಾರತದ ವಿಷಯದಲ್ಲಿ ಸಾಕಷ್ಟು ಆಸಕ್ತಿ ಇತ್ತು, ಇಲ್ಲಿ ಒಮ್ಮೆ ಬಂದು ಇಲ್ಲಿಯ ಜನ, ಸಮಾಜ, ವಾರಣಾಸಿ, ಮುಂಬೈನಂತ ನಗರಗಳು ಎಲ್ಲವನ್ನು ನೋಡುವ ಕುತೂಹಲವಿತ್ತು, ಅದನ್ನು ಅವರೆ ನನಗೆ ತಿಳಿಸಿದ್ದರು, ಅವರು ಭಾರತಕ್ಕೆ ಬರುವದಾದಲ್ಲಿ ನಾನು ಅವರನ್ನು ಸ್ವಾಗತಿಸಲು ಸಿದ್ದನಿದ್ದೆ. ಒಮ್ಮೆ ನನಗೆ ಅವರಿಂದ ಮೆಸೇಜ್ ಬಂದಿತು, ಏನೆಂದು ತೆಗೆದು ಓದುವಲ್ಲಿ ಅವರಿಬ್ಬರು ಬಾರತದ ಬೇಟಿಗೆ ಬಂದಿರುವರೆಂದು ಸದ್ಯಕ್ಕೆ ಮುಂಬಯಿ ನಗರದಲ್ಲಿ ಇರುವರೆಂದು ತಿಳಿಸಿದ್ದರು. ಅವರು ಮೂರು ನಾಲಕ್ಕು ದಿನ ಉತ್ತರ ಭಾರತ ವಾರಣಾಸಿ ಎಲ್ಲ ಕಡೆ ಹೋಗಿ ಪುನಃ ಮುಂಬಯಿಗೆ ಹಿಂದಿರುಗುವರೆಂದು ತಿಳಿಸಿದ್ದರು. ಅಲ್ಲದೆ ನನ್ನನ್ನು ಬೆಂಗಳೂರಿನಿಂದ ಮುಂಬಯಿಗೆ ಬಂದು ಬೇಟಿ ಮಾಡಲು ಸಾದ್ಯವೆ ಎಂದು ಕೇಳಿದ್ದರು. ನನಗೆ ಸಂತಸವೆನಿಸಿತು. ಮೈಲ್ ನಲ್ಲಿ ಅವರ ಪೋನ್ ನಂಬರ್ ಕೊಟ್ಟು ಒಮ್ಮೆ ಮಾತನಾಡಲು ಕೋರಿದ್ದರು. ಎರಡು ವರ್ಷಗಳ ನಂತರ ಈಮೈಲ್ ಬಿಟ್ಟು ಪ್ರಥಮ ಬಾರಿಗೆ ಅವರೊಂದಿಗೆ ನೇರವಾಗಿ ಮಾತನಾಡುವ ಸಂದರ್ಭ ಬಂದಿದ್ದು ನನಗಂತು ಕೊಂಚ ಕುತೂಹಲ, ಸ್ವಲ್ಪ ಗಡಿಬಿಡಿ. ಅಥವ ಟೆನ್ಶನ್ ಅಂದುಬಿಡಿ ಎಲ್ಲವು ಇತ್ತು. ನಾನೊಂದು ಮೆಸೇಜ್ ಕಳಿಸಿದೆ ಈಮೈಲ್ ನಲ್ಲಿ ಸಂಜೆ ಆರುಗಂಟೆಗೆ ಕಾಲ್ ಮಾಡುತ್ತಿದ್ದೇನೆ ಅಂತ ತಿಳಿಸಿ ನನ್ನ ನಂಬರ್ ಕೊಟ್ಟೆ. ಸಂಜೆ ಎಲ್ಲ ಗಡಿಬಿಡಿ ಮುಗಿಸಿ, ಸ್ವಲ್ಪ ವಿರಾಮವಾಗೆ ಕುಳಿತು ಅವರ ನಂಬರ್ ಡಯಲ್ ಮಾಡಿದೆ, ಅತ್ತ ರಿಂಗ್ ಆಗುತ್ತಿರುವ ಶಬ್ದ, ಓಹ್ ರಿಸೀವ್ ಮಾಡಿದರು "ಹಾಯ್, ಸಾರಥಿ ನ" ಅತ್ತಲಿಂದ ದ್ವನಿ, ನನ್ನನ್ನು ಸದಾ ಅವರು ಹಾಗೆ ಅಡ್ರೆಸ್ ಮಾಡುತ್ತಿದ್ದರು, ನಾನು ಸಂಭ್ರಮದಿಂದ "ಹೌದು, ನಾನೆ , ನಾನು ಈಗ ಯಾರ ಜೊತೆ ಮಾತನಾಡುತ್ತಿರುವೆ" ಎಂದು ಕೇಳಿದೆ, ಅಸಲಿಗೆ ಅದು ಅವರಿಬ್ಬರಲ್ಲಿ ಆಂಡ್ರಿಯ ಅಥವ ಆಂಜಲೀನ ಯಾರ ನಂಬರ್ ಎಂದು ನನಗೆ ತಿಳಿದಿರಲಿಲ್ಲ. ಅತ್ತಲಿಂದ ಸ್ವಲ್ಪ ನಗು, ಮಧುರವಾದ ದ್ವನಿ "ನಿಮಗೆ ಯಾರ ಜೊತೆ ಮಾತನಾಡಲು ಆದೀತು, ನಾನು ಅಂಜಾಲೀನ" ಎಂದಳು ಆಕೆ, ಈಗ ನಿಜವಾದ ತೊಂದರೆ ನನಗೆ ಪ್ರಾರಂಬವಾಗಿತ್ತು, ಅದೆಂದರೆ ಆಕೆ ಅಂಗ್ಲದಲ್ಲಿ ಮಾತನಾಡುತ್ತಿದ್ದರು, ನನಗೆ ಅಂಗ್ಲ ಬಾಷೆ ಗೊತ್ತು ಅದರಲ್ಲಿ ಪ್ರೊಫೆಷನಲ್ ಅಲ್ಲದಿದ್ದರು, ಮಾತನಾಡಬಲ್ಲೆ, ಆದರೆ ಅವರ ಅಂಗ್ಲ ಮಾತನಾಡುವ ಅಮೇರಿಕದ ಶೈಲಿ ನನಗೆ ತೊಂದರೆ ಕೊಡುತ್ತಿತ್ತು, ಆಕೆ ನನಗಾಗಿ ನಿದಾನಕ್ಕೆ ಮಾತನಾಡುತ್ತಿರುವಂತೆ ಅನ್ನಿಸಿತು. "ಓಹ್, ನಿಜವಾಗಿ, ಆಂಜಲೀನ ನಿಮ್ಮ ಜೊತೆ ಮಾತನಾಡುವುದು ನನಗೆ ಖುಷಿ ಕೊಡುತ್ತಿದೆ, ನೀವು ಯಾವಾಗ ಭಾರತಕ್ಕೆ ಬಂದಿರಿ, ಎಲ್ಲಿ ಇದ್ದೀರಿ, ನಿಮ್ಮ ಕಾರ್ಯಕ್ರಮವೇನು" ಎಂದು ಕೇಳಿದೆ. ಬಂದು, ಸರಿ ಸುಮಾರು ಎರಡು ದಿನವಾಯಿತು, ಅಪ್ಪ ಜೊತೆಯಲ್ಲಿದ್ದಾರೆ, ಹಾಗು ಮುಂಬಯಿಯ ಏರ್ ಪೋರ್ಟ್ ಹತ್ತಿರದ, ಲಲಿತ್ ಇಂಟರ್ನ್ಯಾಷನಲ್ ಕಾಂಟಿನೆಂಟಲ್ ಹೋಟೆಲಿನಲ್ಲಿ ಇರುವದಾಗಿ ತಿಳಿಸಿದ ಅಂಜಲೀನ ಮೊದಲೆ ತಿಳಿಸಿದಂತೆ ವಾರಣಾಸಿಗೆ ಎರಡು ದಿನ ಹೋಗಿಬರುವದಾಗಿ ಹೇಳಿ, ನೀವು ಮುಂಬಯಿಗೆ ಬರಲು ಸಾದ್ಯವೆ, ಅಲ್ಲಿಂದ ಬೆಂಗಳೂರು ಎಷ್ಟು ದೂರದಲ್ಲಿದೆ ಮುಂತಾದ ವಿಷಯ ಕೇಳಿದರು. ನಾನು ಬೆಂಗಳೂರು, ಮುಂಬಯಿ ನಡುವಿನ ದೂರ ಸುಮಾರು ಎಂಟುನೂರಾಐವತ್ತು ಕಿ.ಮಿ. ಆಗಬಹುದೆಂದು , ರೈಲಿನಲ್ಲಿಯಾದರೆ ಒಂದುದಿನ ತಗಲಬಹುದೆಂದೆ, ತಿಳಿಸಿ, ಅವರನ್ನು ಬೆಂಗಳೂರಿಗೆ ಅಹ್ವಾನಿಸಿದೆ. ಅತ್ತಲಿಂದ ಸ್ವಲ್ಪ ಮೌನ. ಆಕೆ ಮತ್ತೆ ತಿಳಿಸಿದರು 'ಹೌದು ಅದೆಂತ ಸುಂದರ ಗಳಿಗೆ ನಿಮ್ಮಲಿಗೆ ಬರುವುದು, ಆದರೆ ಈಗ ಇರುವ ಪರಿಸ್ಥಿಥಿಯಲ್ಲಿ, ನಾವು ಬೆಂಗಳೂರಿಗೆ ಬರುವ ಸಾದ್ಯತೆ ಇಲ್ಲ. ಆದರೆ ನಿಮ್ಮನ್ನು ನೋಡುವ ಆಸೆ ಬಲವಾಗಿದೆ, ಆಂಡ್ರಿ ಕೂಡ ನಿಮ್ಮನ್ನು ನೋಡಬೇಕೆಂದು ಹಾತೊರೆದಿದ್ದಾಳೆ, ತೊಂದರೆ ಅನಿಸಿದರು ಪರವಾಗಿಲ್ಲ, ಒಮ್ಮೆ ಮುಂಬಯಿಗೆ ಬನ್ನಿ' ಎಂದು ಅಹ್ವಾನಿಸಿದಳು. ನಾನು ಸ್ವಲ್ಪ ಯೋಚಿಸಿ "ಸರಿ ಆಂಜಾಲೀನ ನನಗಂತು ನಿಮ್ಮನ್ನು ಬೇಟಿಮಾಡುವ ಕುತೂಹಲ, ಉತ್ಸಾಹ ಖಂಡೀತ ಇದೆ, ನೀವು ಬರಲು ಸಾದ್ಯವಿಲ್ಲ ಎಂದಾದರೆ ನಾನೆ ಅಲ್ಲಿಗೆ ಬಂದು ನಿಮ್ಮನ್ನು ಬೇಟಿ ಮಾಡುವೆ, ನೀವು ವಾರಣಾಸಿಯ ಬೇಟಿ ಮುಗಿಸಿ ಬರುವದರಲ್ಲಿ ನಾನು ಇಲ್ಲಿಂದ ಹೊರಟು ಮುಂಬಯಿಗೆ ಬಂದು ಸೇರುವೆ, ಅಲ್ಲಿಗೆ ಬಂದ ನಂತರ ಕಾಲ್ ಮಾಡಿ ಬೇಟಿ ಗೊತ್ತು ಪಡಿಸಿ ನಿಮ್ಮನ್ನು ಸೇರುವೆ" ಎಂದು ತಿಳಿಸಿದೆ. ನನಗೆ ಗೊತ್ತಿತ್ತು ಅಮೇರಿಕನ್ನರ ಸ್ವಭಾವ ಮೊದಲೆ ನಿಗದಿಪಡಿಸಿದ ಕಾರ್ಯಕ್ರಮದಲ್ಲಿಯಷ್ಟೆ ಅವರು ಮತ್ತೊಬ್ಬರನ್ನು ಬೇಟಿ ಮಾಡಲು ಇಷ್ಟ ಪಡುತ್ತಾರೆ, ಭಾರತದಲ್ಲಿಯಂತೆ ಬೇಕಾಬಿಟ್ಟಿ ನುಗ್ಗುವ ಹಾಗಿಲ್ಲ ಎಂದು. ಒಂದೆ ಕ್ಷಣ ಅತ್ತಲಿಂದ ಮೌನ . ಆಕೆ "ಇಲ್ಲ ನಾನು ಆ ಅರ್ಥದಲ್ಲಿ ಹೇಳಲಿಲ್ಲ, ನೀವು ಯಾವುದೆ ಬೇಟಿ ನಿಗದಿಪಡಿಸದೆ ಯಾವುದೆ ಕ್ಷಣದಲ್ಲಿ ನಮ್ಮಲಿಗೆ ಬರಬಹುದು, ಇನ್ ಫ್ಯಾಕ್ಟ್, ನೀವು ಎರಡು ದಿನ ನಮ್ಮ ಜೊತೆಗೆ ಇದ್ದರೆ ನಮಗೆ ಸಂತಸ , ನಾವು ಸಾಕಷ್ಟು ವಿಷಯ ಹಂಚಿಕೊಳ್ಳ ಬಹುದು " ಎಂದರು. ಮತ್ತೆ ಅದೆಂತದೊ ಮೌನ, ಆಕೆಯ ಮಾತು ಸ್ವಲ್ಪ ತಡವರಿಸಿತ್ತು, "ಮತ್ತೆ ನೀವು ಒಬ್ಬರೆ ಬನ್ನಿ ಅಂತ ನಮ್ಮ ರಿಕ್ವೆಶ್ಟ್ , ನಿಮ್ಮನ್ನು ಹೊರತುಪಡಿಸಿ ಬೇರೆ ಯಾರು ಬೇಡ, ಇಲ್ಲಿ ಬಂದಾಗ ನಮ್ಮ ಬೇಟಿ ನಿಮಗೆ ಸ್ವಲ್ಪ ಶಾಕಿಂಗ್ ಆಗಬಹುದು ಎಂದು ನಮಗೆ ಅನಿಸುತ್ತಿದೆ ಅದಕ್ಕಾಗಿ ಹೇಳುತ್ತಿರುವೆ ಅನ್ಯಥಾ ಭಾವಿಸದಿರಿ" ಎಂದಳು ನನಗೆ ಮನ ಸ್ವಲ್ಪ ಸಪ್ಪೆಯಾಯಿತು. ನನಗೇನು ಹೆಂಡತಿ ಮಗಳನ್ನು ಜೊತೆಗೆ ಕರೆದೊಯ್ಯುವ ಅಲೋಚನೆ ಇರಲಿಲ್ಲ ಆದರೂ ಆಕೆ ಹಾಗೆಂದಾಗ ಸ್ವಲ್ಪ ಪಿಚ್ ಅನ್ನಿಸಿತು. ಅಲ್ಲದೆ ಆಕೆ ಅದೇನೊ ಹೇಳುತ್ತಿದ್ದಾರಲ್ಲ ಅದೆಂತದೊ ಶಾಕಿಂಗ್ ಆಗಿರಬಹುದೆಂದು. ಸಮಾದಾನವಾಗಿಯೆ ಕೇಳಿದೆ "ಸರಿ, ನಾನು ಒಬ್ಬನೆ ಬರುವೆ ಚಿಂತೆಯಿಲ್ಲ, ಮತ್ತೆ ಆಂಡ್ರಿ ಹೇಗಿದ್ದಾರೆ, ಅವರೊಡನೆ ಒಂದೆರಡು ಮಾತನಾಡಬಹುದಾ?" ಆಕೆ ನಕ್ಕರು "ಏಕಿಲ್ಲ, ಆಕೆಯು ಕಾಯುತ್ತಿದ್ದಾಳೆ, ಮತ್ತೆ ನಿಮ್ಮ ನೋಡುವೆ, ಅವಳೊಡನೆ ಮಾತನಾಡಿ " ಎನ್ನುತ್ತ ಪೋನ್ ಆಕೆಗೆ ಕೊಟ್ಟರು ಅನ್ನಿಸುತ್ತೆ, ಆಕೆ ಪಕ್ಕದಲ್ಲಿಯೆ ಇದ್ದರೇನೊ, ಕಾಯುತ್ತಿರುವಂತೆ "ಹಾಯ್, ನಾನು ಆಂಡ್ರಿಯ, ಹೇಗಿದ್ದೀರಿ " ಎನ್ನುತ್ತ ಮಾತು ಆರಂಬಿಸಿದರು, ಸ್ವಲ್ಪವು ಹೆಚ್ಚು ಕಡಿಮೆ ಎನಿಸದಂತೆ ಒಂದೆ ದ್ವನಿ ಆದರೆ ಮಾತಿನ ಶೈಲಿ ಮಾತ್ರ ಸ್ವಲ್ಪ ಬೇರೆ. ಅವರೊಡನೆ ಸ್ವಲ್ಪ ಮಾತನಾಡಿದೆ, ಅವರೊಡೆನೆ ಸಹ ಮುಂಬಯಿಗೆ ಬರುತ್ತಿರುವದಾಗಿ ತಿಳಿಸಿ ಮಾತು ಮುಗಿಸಿದೆ. ನಾನು ಒಮ್ಮೆಲೆ ಮುಂಬಯಿಗೆ ಹೊರಟು ನಿಂತಾಗ ಮನೆಯಲ್ಲು ಎಲ್ಲರಿಗು ಆಶ್ಚರ್ಯ. ಇದೇನು ಇಷ್ಟು ಆತುರವಾಗಿ ನಿರ್ದಾರ ಅಂತ, ಅಲ್ಲದೆ ಮುಂಬಯಿಯಲ್ಲಿ ನನಗೆ ಪರಿಚಯದವರು ಅಂತ ಯಾರು ಇಲ್ಲ. ಯಾರೊ ದೂರದೇಶದ ಅಪರಿಚಿರತನ್ನು ನೋಡಲು ಹೊರಟಿದ್ದು ಮನೆಯವರು ಸಹ ಸ್ವಲ್ಪ ಯೋಚಿಸಲು ಕಾರಣವಾಗಿತ್ತು. ನಾನು ಆ ರೀತಿ ಗಾಭರಿಗೆ ಕಾರಣ ಏನು ಇಲ್ಲ ಅಂತ ತಿಳಿಸಿ ಹೊರಟುಬಿಟ್ಟೆ. ಮೊದಲೆ ಬುಕ್ ಮಾಡಿಸದಿದ್ದರು ಸಹ ಒಬ್ಬ ಏಜೆಂಟ್ ಹಿಡಿದು ರೈಲಿನಲ್ಲಿ ಬರ್ತ್ ಟಿಕೆಟ್ ಹೊಂದಿಸಿದ್ದಾಯಿತು. ಬೆಂಗಳೂರಿನಿಂದ ಮುಂಬಯಿಗೆ ಹೋಗುವ ಕುರ್ಲಾ ಗಾಡಿಯ ಟೂ ಟೈರ್ ಏಸಿ ಬರ್ತ್ . ಮೊದಲ ಸಾರಿ ಮುಂಬಯಿಯ ಪ್ರಯಾಣ ಎಲ್ಲರು ಹೇಳುವರು ಅಲ್ಲಿಯ ಟ್ರಾಫಿಕ್ ಬಗ್ಗೆ , ಮುಂಬಯಿ ರೈಲಿನ ಬಗ್ಗೆ, ರಸ್ತೆಗಳ ಬಗ್ಗೆ ಕೊಳಗೇರಿಗಳ ಬಗ್ಗೆ , ಆದರೆ ಸದ್ಯಕ್ಕೆ ನನಗೆ ಆ ಯಾವುದರಲ್ಲು ಆಸಕ್ತಿ ಇರಲಿಲ್ಲ, ಆಸಕ್ತರೊಬ್ಬರ ಬೇಟಿಗಾಗಿ ಅಲ್ಲಿಗೆ ಹೊರಟಿದ್ದೆ. ನಾನು ಮುಂಬಯಿ ತಲುಪುವ ವೇಳೆ ಅವರ ವಾರಣಾಸಿ ಟ್ರಿಪ್ ಸಹ ಮುಗಿದಿರುತ್ತೆ ಅನ್ನಿಸಿತು.. ಮುಂಬಯಿ ತಲುಪಿ, ರೈಲ್ವೆ ನಿಲ್ದಾಣದ ಹತ್ತಿರ ಹೋಟೆಲ್ ಒಂದರಲ್ಲಿ ರೂಮನ್ನು ಪಡೆದೆ. ಎಲ್ಲ ಹೊಸ ಅನುಭವ. ಬೆಂಗಳೂರಿನಲ್ಲಿ ಹೊರಡುವ ಮೊದಲೆ ಕೆಲವು ಗೆಳೆಯರ ಬಳಿ ಮುಂಬಯಿಯ ಬಗ್ಗೆ ವಿಚಾರಿಸಿದೆ, ಎಲ್ಲಿ ಇಳಿಯ ಬಹುದು, ಹೇಗೆ ತಲುಪುವುದು, ಅಲ್ಲಿಯ ಓಡಾಟ ಹೀಗೆಲ್ಲ, ಗೊತ್ತಿದ್ದವರ ಬಳಿ. ಹಾಗಾಗಿ ತೊಂದರೆ ಅನ್ನಿಸಲಿಲ್ಲ. ಸ್ನಾನ ವಿಶ್ರಾಂತಿಗಳು ಆದವು ಆಗಲೆ ರಾತ್ರಿಯು ಆದ್ದರಿಂದ ಆಗಲೆ ಹೊರಡುವ ಯೋಚನೆ ಕೈಬಿಟ್ಟು ಬೆಳಗ್ಗೆ ಹೊರಟು ಅವರಿರುವ ಸ್ಥಳ ಸೇರಿವುದಾಗಿ ನಿರ್ದರಿಸಿ, ಅವರು ಕೊಟ್ಟಿದ್ದ ನಂಬರ್ ಗೆ ಕಾಲ್ ಮಾಡಿದೆ. ಯಥಾಪ್ರಕಾರ ಅಂಜಾಲಿನ ರಿಸೀವ್ ಮಾಡಿದರು . ನಾನು ಮುಂಬಯಿಗೆ ಬಂದಿರುವದನ್ನು ತಿಳಿಸಿ. ನಾನು ಇಳಿದಿರುವ ಸ್ಥಳದ ಬಗ್ಗೆ ತಿಳಿಸಿ. ಮರುದಿನ ಬೆಳಗ್ಗೆ ಬರುವದಾಗಿ ಹೇಳಿದೆ. ಆಕೆ ಸಂಬ್ರಮ ಪಟ್ಟರು 'ಬೆಳಗ್ಗೆ ಏಕೆ ಈಗಲೆ ಬರಬಹುದಾಗಿತ್ತು ' ಎಂದ ಆಕೆ , ಒಂದು ಸಲಹೆ ಕೊಟ್ಟರು. ಮರುದಿನ ಬೆಳಗ್ಗೆ ಹೊರಡುವಾಗ, ನಾನು ಇಳಿದ ಹೋಟೆಲ್ ರೂಮನ್ನು ಖಾಲಿ ಮಾಡಿ ಬರಬೇಕೆಂದು, ನನಗಾಗಿ ಅವರು ಇಳಿದಿರುವ ಹೋಟೆಲ್ ನಲ್ಲಿಯೆ ಒಂದು ರೂಮನ್ನು ರಿಸರ್ವ್ ಮಾಡಿರುವದಾಗಿ ತಿಳಿಸಿ, ನಾನು ಅವರ ಅತಿಥಿ ಎಂದರು. ನಾನೆಂದೆ "ಇದೇನು, ನಮ್ಮ ದೇಶಕ್ಕೆ ಬಂದ ನೀವು ನನಗೆ ಅತಿಥಿಯಾಗಬೇಕು, ನಾನು ನಿಮಗೆ ಅತಿಥಿಯಾಗುವುದೆ" ಎಂದು ಸಂಕೋಚಪಟ್ಟಾಗ ಅವರು "ಹಾಗೇನು ಇಲ್ಲ, ನೀವು ಎರಡು ದಿನ ನಮ್ಮ ಜೊತೆ ಇರಬೇಕು ಎಂದು ನಮ್ಮ ಬಯಕೆ, ಅಪ್ಪ ಸಹ ಹಾಗೆ ಹೇಳಿದರು, ಹಾಗಾಗಿ ಈ ಏರ್ಪಾಡು, ನೀವು ನಮಗಾಗಿ ನಿಮ್ಮ ಸ್ಥಳದಿಂದ ಇಷ್ಟು ದೂರ ಬಂದಿದ್ದೀರಿ, ಅದೇ ನಮಗೆ ಗೌರವ " ಎಂದರು. ಸರಿ ಬೇರೆ ದಾರಿ ಇರಲಿಲ್ಲ, ನಾನು ಒಪ್ಪಲೆ ಬೇಕಿತ್ತು, ಬೆಳಗ್ಗೆ ನನ್ನ ರೂಮನ್ನು ಖಾಲಿಮಾಡಿ. ಅಲ್ಲಿಂದ ಹೊರಟೆ. ನನಗೆ ಈ ಸ್ಟಾರ್ ಹೊಟೆಲ್ ಗಳು ಅಂದರೆ ಒಂದು ಮುಜುಗರ, ನಮ್ಮ ನಡೆನುಡಿಗಳಿಗೆ ಒಗ್ಗದ ಸ್ಥಳ ಎನ್ನುವ ಭಾವನೆ ಅಥವ ಕೀಳಿರಿಮೆ ಎಂದು ಬೇಕಾದರು ಅನ್ನಿ. ಅವರಿವರ ಸಹಾಯ ಪಡೆದು , ಅವರು ಇಳಿದಿದ್ದ ಲಲಿತ್ ಕಾಂಟಿನೆಂಟಲ್ ಎಂಬ ಹೋಟೆಲ್ ತಲುಪುವಾಗ ಸಾಕಷ್ಟು ಸಾಹಸವಾಗಿತ್ತು. ಒಂದರ ಹಿಂದೊಂದು ಕಾರುಗಳು ಒಳ ಪ್ರವೇಶ ಮಾಡುತ್ತಿದ್ದವು. ನಾನು ಕೈಯಲ್ಲಿ ಸೂಟ್ ಕೇಸ್ ಹಿಡಿದು , ನಡೆಯುತ್ತ ಪ್ರವೇಶ ಮಾಡುವಾಗ ಸಹಜವಾಗಿ ಅಲ್ಲಿಯ ಗೇಟನಲ್ಲಿ ವಾಚ್ಮನ್ ಸಾಕಷ್ಟು ಸತಾಯಿಸಿದ. ಅದೇನೊ ಈ ವಾಚ್ ಮನ್ ಗಳು , ಇವರು ಇರುವುದೆ ಕೆಲವೊಮ್ಮೆ ಗುಡಿಸಲುಗಳಲ್ಲಿ ಆದರೆ ನಡೆದು ಬರುವವರನ್ನು ಅನುಮಾನದಿಂದ ನೋಡುವ ಇವರು, ಕಾರಿನಲ್ಲಿ ಬರುವರನ್ನು ಸಲ್ಯೂಟ್ ಹೊಡೆಯುತ್ತ ಕಳಿಸುತ್ತಾರೆ. ಮೊದಲೆ ಯೋಚಿಸಿದ್ದರೆ ಟ್ಯಾಕ್ಸಿ ಮಾಡಿ ಬರಬಹುದಿತ್ತು. ನನಗೆ ಗೊತ್ತಿದ್ದ ಅರ್ದ ಹಿಂದಿ , ಮುಕ್ಕಾಲು ಅಂಗ್ಲದಲ್ಲಿ ಅವನನ್ನು ಒಪ್ಪಿಸಿ ಒಳಬಂದು ರಿಸಿಪ್ಷನ್ ಕಾಣುವಾಗ ಸುಸ್ತಾಗಿತ್ತು. ಅಲ್ಲಿ ನನಗೆ ಗೊತ್ತಿದ್ದ ವಿವರ ತಿಳಿಸಿದೆ. ಆಕೆ ನಗುತ್ತ ಫೋನ್ ತೆಗೆದು ಇಂಟರ್ ಕಾಂ ನಲ್ಲಿ ಆಂಡ್ರಿಯಾ ಹಾಗು ಅಂಜಲೀನ ಇಳಿದಿದ್ದ ಕೋಣೆಗೆ ಕಾಲ್ ಮಾಡಿದರು, ಒಂದು ಕ್ಷಣ ನನ್ನ ತ್ತ ನೋಡಿ, ಲಾಂಚ್ ನಲ್ಲಿದ್ದ ಸೋಪ ತೋರಿಸುತ್ತ, "ಒಂದೆರಡು ನಿಮಿಶವಾಗಬಹುದು ಅವರೆ ಬರುತ್ತಿದ್ದಾರೆ ಕೆಳಗೆ, ದಯಾಮಾಡಿ ಕುಳಿತು ಕಾಯಿರಿ" ಎಂದಳು. ನಾನು ಕಾಯುತ್ತ ಕುಳಿತೆ. ಮನದಲ್ಲಿ ಎಂತದೊ ಎಕ್ಸೈಟ್ ಮೆಂಟೆ ಹೇಗಿರಬಹುದು ಅವರಿಬ್ಬರು, ದ್ವನಿ ನೋಡುವಾಗ ತುಂಬಾ ವಯಸ್ಸಾದವರಂತೆ ಅನ್ನಿಸುವದಿಲ್ಲ. ಆದರೆ ಸರಿಯಾಗೆ ಅಳೆಯುವುದು ಕಷ್ಟ, ವಿಪರೀತ ಕುತೂಹಲ ಏಕೆ, ಒಂದೆರಡು ಕ್ಷಣದಲ್ಲಿ ಅವರೆ ಕೆಳಗೆ ಬರುವರು ಎಂದು, ಲಿಫ್ಟ್ ಹಾಗು ಮೆಟ್ಟಿಲುಗಳನ್ನು ಗಮನಿಸುತ್ತ, ಬರಬಹುದಾದ ವಿದೇಶಿ ಸ್ತ್ರೀಯರನ್ನು ಕಾಯುತ್ತ ಕುಳಿತೆ. ನನ್ನ ನಿರೀಕ್ಷೆ ಸುಳ್ಳಾಯಿತು. ಸ್ವಲ್ಪ ಸಮಯದಲ್ಲಿಯೆ, ಸೂಟ್ ಧರಿಸಿದ್ದ, ನಡುವಯಸ್ಸು ದಾಟಿದ್ದ. ಅಮೇರಿಕಾದ ಅಚ್ಚ ಕೆಂಪನೆಯ ವ್ಯಕ್ತಿಯೊಬ್ಬರು ನನ್ನ ಬಳಿ ಬಂದು ನಿಂತರು, ನಿಧಾನಕ್ಕೆ "ಮಿ.ಪಾರ್ಥಸಾರಥಿ..." ಎನ್ನುವಾಗ, ನಾನು ನಿಂತು , ಹೌದು ಎನ್ನುತ್ತ ಪರಿಚಯಿಸಿಕೊಂಡೆ. ನನ್ನ ಇಂಗ್ಲೀಷ್ ಅವರಿಗೆ ಕೊಂಚ ಗಲಿಬಿಲಿಯೆ ಹಾಗೆ ನನಗು ಸಹ ಅವರ ಉಚ್ಚಾರಣೆ. ಅವರು ಬನ್ನಿ ಮೇಲೆ ರೂಮಿಗೆ ಹೋಗೋಣ ಎನ್ನುತ್ತ ಹೊರಟರು. ನಾನು ನಿರಾಸೆಯಿಂದ ಅವರ ಹಿಂದೆ ಹೊರಟೆ, ತಮ್ಮನ್ನು ಪರಿಚಯಿಸಿಕೊಳ್ಳುತ್ತ ಅವರು ಹೇಳಿದರು, ಅವರು ಆಂಜಾಲೀನ, ಹಾಗು ಆಂಡ್ರಿಯ ತಂದೆ ಎಂದು. ಹೆಸರು 'ರಾಬರ್ಟ್ ಅನ್ಸಾಲಿ '. ಅನ್ಸಾಲಿ ಇವರ ಪ್ಯಾಮಿಲಿ ಹೆಸರು ಅನ್ನಿಸುತ್ತೆ. ಈತನ ವಯಸ್ಸು ನಲವತೈದು ದಾಟಿಲ್ಲ.ಅಂದರೆ ಅವರಿಬ್ಬರ ವಯಸ್ಸು, ಇಪ್ಪತೈದು ಇರಬಹುದು. ಅವರಿಬ್ಬರ ನಡುವಿನ ವಯಸ್ಸಿನ ಅಂತರವು ತಿಳಿದಿಲ್ಲ. ಸರಿ ಏಕೆ ಅನಗತ್ಯ ಕುತೂಹಲ , ಹೇಗು ಬೇಟಿ ಮಾಡುತ್ತಿದ್ದೀನಲ್ಲ ಎಂದು ಸುಮ್ಮನಾದೆ. ಲಿಫ್ಟ್ನಲ್ಲಿ ನಾಲ್ಕನೆಯ ಫ್ಲೋರ್ ತಲುಪಿದ್ದಾಯಿತು, ಅಲ್ಲಿ ಹೊರಗೆ ಬಂದು ಅವರ ಹಿಂದೆ ನಡೆದಂತೆ, ಒಂದು ರೂಮಿನ ಮುಂದು ನಿಂತು, ಕೀ ಬಳಸಿ ರೂಮಿನ ಬಾಗಿಲು ತೆರೆದರು, ಇದೇನು ರೂಮಿನ ಬೀಗ ಹೊರಗಿನಿಂದ ಹಾಕಲಾಗಿದೆ, ತನ್ನ ಮಕ್ಕಳಿಬ್ಬರನ್ನು ಒಳಗೆ ಬಿಟ್ಟು ಬೀಗ ಏಕೆ ಹಾಕಿ ಬಂದಿರುವ ಈತ ಎಂದು ಯೋಚಿಸುತ್ತ, ಅವನ ಹಿಂದೆ ಒಳಗೆ ನಡೆದು ಸುತ್ತ ನೋಡಿದೆ, ಎಲ್ಲಿ ಕುಳಿತ್ತಿದ್ದಾರೆ, ಅಂಜಾಲಿನ, ಹಾಗು ಆಂಡ್ರಿಯಾ ಎಂದು ಚಿಂತಿಸುತ್ತ. ಆತ ನುಡಿದರು "ಇದು ನಿಮಗಾಗಿ ರಿಸರ್ವ್ ಆದ ಕೋಣೆ, ನೀವು ನಿಮ್ಮ ಬ್ಯಾಗೇಜ್ ಇಲ್ಲಿ ಇಡಿ ಬಟ್ಟೆ ಬದಲಾಯಿಸುವದಾದರೆ ನೋಡಿ, ಮತ್ತೆ ಫ್ರೇಶ್ ಆಗಿ, ಕುಡಿಯಲು ಏನಾನ್ನಾದರು ತರಿಸುವೆ ನಿಮ್ಮ ಆಯ್ಕೆ ಏನು" ಎಂದು ಕೇಳಿದರು. ನನಗೀಗ ಅರ್ಥವಾಯ್ತು, ಅವರು ಕರೆತಂದಿದ್ದು ನನಗೆ ಮೀಸಲಾದ ಕೊಟ್ಟಡಿಗೆ, ಎಂದು. ಸರಿ ಎನ್ನುತ್ತ ಪೆದ್ದುಪೆದ್ದಾಗಿ ನನ್ನ ಬ್ಯಾಗೇಜ್ ಕೆಳಗಿಟ್ಟು. ಅವರನ್ನು ಕುಳಿತುಕೊಳ್ಳಿ ಎಂದು ತಿಳಿಸಿ, ನಾನು ಸಿದ್ದನಾದೆ, ಮತ್ತೆ ತಿಳಿಸಿದೆ ಈಗ ಏನು ಬೇಡ, ನಿಮ್ಮ ಮಕ್ಕಳ ಜೊತೆಗೆ ಕುಡಿಯಲು ಕಾಫಿ ತೆಗೆದುಕೊಳ್ಳುವೆ, ಈಗ ನಿಮಗೆ ತೊಂದರೆ ಇರದಿದ್ದಲ್ಲಿ, ಅವರನ್ನು ಬೇಟಿ ಮಾಡಲು ಹೋಗೋಣ ಎಂದು. ಆತ ನಗುತ್ತ ಎದ್ದು ನಿಂತು, ಸರಿ ನಿಮಗೂ ಅವರನ್ನು ಬೇಟಿ ಮಾಡಲು ಕಾತುರ ಅನ್ನಿಸುತ್ತೆ ದೂರವೇನು ಇಲ್ಲ , ನಿಮ್ಮ ರೂಮಿನ ಎದುರಿನ ರೂಮೆ ಇದೆ, ಎನ್ನುತ್ತ ಹೊರಟರು, ನಾನು ಹೊರಗೆ ಬಂದಂತೆ ಆತ ರೂಮನ್ನು ಲಾಕ್ ಮಾಡಿ ಕೀ ನನ್ನ ಕೈಗೆ ಕೊಟ್ಟು ಇದು ನಿಮ್ಮಲ್ಲಿಯೆ ಇರಲಿ ಎನ್ನುತ್ತ, ನನ್ನ ರೂಮಿನ ಎದುರಿಗೆ ಇದ್ದ ಮತ್ತೊಂದು ರೂಮಿನ ಬಾಗಿಲು ತೆರೆಯುತ್ತ ಹೇಳಿದರು. "ಒಳಹೋಗುವ ಮುಂಚೆಯೆ ನಿಮಗೆ ತಿಳಿಸಿದರೆ ಒಳ್ಳೆಯದು ಅನ್ನಿಸುತ್ತೆ, ಅವರಿಬ್ಬರನ್ನು ನೋಡುವಾಗ ನಿಮಗೆ ಗಲಿಬಿಲಿ ಅನ್ನಿಸಬಹುದು ಆದರೆ ಮುಖದಲ್ಲಿ ಯಾವುದೆ ಭಾವನೆ ತೋರಿಸಬೇಡಿ ಸಹಜವಾಗಿರಿ, ಜಷ್ಟ್ ರಿಕ್ವೆಷ್ಟ್ ಅಷ್ಟೆ" ಎಂದರು. ನಾನು ಸ್ವಲ್ಪ ಆಶ್ಚರ್ಯ ಪಟ್ಟೆ, ಇದನ್ನು ನಾನು ನಿರೀಕ್ಷಿಸಿರಲಿಲ್ಲ. ಒಳಗೆ ಹೋದವನು ಅಲ್ಲಿಯ ಮಂದ ಬೆಳಕಿಗೆ ಸುಲುಭವಾಗಿ ಹೊಂದಿಕೊಂಡೆ. ಸ್ವಲ್ಪ ಆಸಕ್ತಿ ಯಿಂದಲೆ ಕಣ್ಣಾಡಿಸಿದೆ ಸುತ್ತಲು, ಆಕರ್ಷಕ ಇಂಟೆರಿಯರ್ ಇರುವ ರೂಮದು. ವಿಶಾಲವಾದ ಕಿಟಕಿಯಿಂದ ಸಾಕಷ್ಟು ಬೆಳಕು ಬರುತ್ತಿತ್ತು. ತಂಪಾದ ಗಾಳಿ ಎಲ್ಲವು ಸುಖಕರ. ಕಿಟಕಿಯ ಹತ್ತಿರದ ಸೋಫದಲ್ಲಿ ಕುಳಿತಿದ್ದ ಆಕೆಯತ್ತ ನಾವು ನಡೆದವು, ಆಕೆ ಇತ್ತ ತಿರುಗಿ ನಮ್ಮತ್ತ ನಗು ಬೀರುವಲ್ಲಿ ಪಕ್ಕದಲ್ಲಿ ಮತ್ತೊಬ್ಬರ ಮುಖ ಕಾಣಿಸಿತು. ಎದ್ದು ನಿಂತ ಆಕೆಯತ್ತ ನೋಡುತ್ತಿರುವಂತೆ ಮೊದಲು ನನ್ನಲ್ಲಿ ಮೂಡಿದ ಭಾವನೆ ಹೆದರಿಕೆ ನಂತರ ವಿಸ್ಮಯ. ಸ್ವಲ್ಪ ಅಘಾತ ಎಲ್ಲ ಭಾವನೆಗಳು ಒಟ್ಟೊಟ್ಟಿಗೆ ನನ್ನನ್ನು ಆಕ್ರಮಿಸಿದವು. ಮುಂದೆವರೆಯುವುದು.... ಕಡೆಯ ಹಾಗು ಮುಂದಿನಬಾಗ ನಿರೀಕ್ಷಿಸಿ : ಸೋಮವಾರ 30-07-2012 ದಿನಾಂಕದಂದು ಎರಡನೆ ಬಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: http://sampada.net/…
Rating
No votes yet

Comments