ರಾಗ ಮತ್ತು ದ್ವೇಷ ...ಒಂದಷ್ಟು ಚಿಂತನೆ

ರಾಗ ಮತ್ತು ದ್ವೇಷ ...ಒಂದಷ್ಟು ಚಿಂತನೆ

 
ಶ್ರೀ ರಾಮಕೃಷ್ಣರು ಹೇಳುತ್ತಾರೆ " ಯಾರನ್ನೂ, ಯಾವುದನ್ನೂ ದ್ವೇಷಿಸಬೇಡ.  ಏಕೆಂದರೆ ಪ್ರೀತಿಸುವುದಕಿಂತ ಬೇಗನೆ ದ್ವೇಷಿಸುವುದರ ಬಲೆಗೆ ಬೀಳುತ್ತಿಯ.  ಜೋಕೆ."
 
ನಮಗೆ ಪ್ರಿಯವಾದುದನ್ನು ಪ್ರೀತಿಸುತ್ತೇವೆ, ಅಪ್ರಿಯವಾದುದನ್ನು ಕಂಡರೆ ಆಗುವುದಿಲ್ಲ, ಆದರೆ, ಅಪ್ರಿಯವಾದದ್ದು  ಪುನಃ ನಮ್ಮಲ್ಲಿ ಬಂದಾಗ ದ್ವೇಷಿಸುತ್ತೇವೆ.  ಒಂದು ರಾಗ, ಮತ್ತೊಂದು ದ್ವೇಷ.  ಇವೆರಡೂ ನಮ್ಮನ್ನು ಕಟ್ಟಿಹಾಕುತ್ತವೆ..  ನಾವು ದ್ವೇಷಿಸುವ ವಸ್ತು ಅಥವಾ ವಿಚಾರ, ನಮ್ಮ ಮನಸಿನ ಮುಂದೆ ಬೇಡ ಬೇಡ ಎಂದುಕೊಂಡರು ಹಾಜರಾಗಿಬಿಡುತ್ತದೆ.  ಆಗ ನಾವು ಅಪ್ರಿಯವಾದ ಭಾವನೆಯಿಂದಲೇ ಚಿಂತಿಸುತ್ತೇವೆ. ಇದು ನಮ್ಮ ಮನಸ್ಸಿನ ಮೇಲೆ ಗಾಢವಾದ   ಕೆಟ್ಟ  ಪ್ರಭಾವನ್ನೇ   ಬೀರುತ್ತದೆ.  ಇದು ನಮಗೆ ವಾಸ್ತವದಲ್ಲಿ ಬೇಡ. ಆದರೂ ನಮ್ಮನ್ನು ಅದು ಬಿಡುವುದೇ ಇಲ್ಲ. ಇದು ನಮ್ಮ ಮನಸನ್ನು ಕಲುಷಿತಗೊಳಿಸಿ ಬಿಡುತ್ತದೆ.    ಬಿಡಲಾಗದೆ, ಕಟ್ಟಿ ಕೊಳ್ಳಲಾಗದೆ ಒದ್ದಾಡುತ್ತೇವೆ.  ಆಗಲೇ ಮನಸ್ಥಿತಿ ಮತ್ತು ದೇಹಸ್ಥಿತಿ ಎರಡೂ ಹಾಳಾಗುತ್ತದೆ.
 
ಪ್ರೀತಿಯ ವಿಚಾರ ಇನ್ನೊಂದು ರೀತಿ. ಸಾಧಾರಣವಾಗಿ ನಾವು ಅಂದುಕೊಂಡಿರುವ ಪ್ರೀತಿ ಸ್ವಾರ್ಥವಿಲ್ಲದೆ  ಇರಲು ಸಾಧ್ಯವಿಲ್ಲ.  ಈ ಪ್ರೀತಿಯು ಹತ್ತಿರ ಇದ್ದಾಗ ಏನೋ ಒಂದು ರೀತಿಯ ಸುಖದ ಅನುಭವ. ಏನೋ ಒಂದು ರೀತಿಯ ಸಮಾಧಾನ.  ಇದು ಸ್ವಲ್ಪ ದೂರಾದರೆ ಅಥವಾ ಇದು  ಬೇರೆಯವರಲ್ಲಿ ಹಂಚಿಕೊಳ್ಳುವ ಪ್ರಸಂಗ ಏನಾದರು ಬಂದರೆ ಮನಸ್ಸು ಚಂಚಲವಾಗುತ್ತದೆ . ಇಲ್ಲ ಸಲ್ಲದ ಯೋಚನೆಗಳು ಮುತ್ತಿಕೊಂಡುಬಿದುತ್ತದೆ .    ಆಗ ಈ ಪ್ರೀತಿಯೇ   ಸಂಕಟವಾಗುತ್ತದೆ .   ಪ್ರೀತಿಯೇ  ಒಂದು ರೀತಿ ಚಿಂತೆಯಾಗುತ್ತದೆ.   ಆಗ ಅತ್ಯಂತ ಪ್ರಿಯವೆನಿಸಿದ್ದು ಈಗ ಕಾಟ ಕೊಡಲು ಪ್ರಾರಂಭಿಸುತ್ತದೆ.  ಆರೋಗ್ಯದಲ್ಲಿ ಏರುಪೇರು ಆಗುತ್ತದೆ.
 
ಪ್ರೀತಿ ಮತ್ತು ದ್ವೇಷ ಇವೆರಡೂ ಬಂಧನಗಳೇ.  ಒಂದು ಪ್ರಿಯವಾದ ಬಂಧನ, ಮತ್ತೊಂದು ಅಪ್ರಿಯವಾದ ಬಂಧನ. ಪ್ರೀತಿಸಿದರೆ, ನಾವು ಪ್ರೀತಿಸುವ ವಸ್ತು ಅಥವಾ ವ್ಯಕ್ತಿಗೆ  ದಾಸರಾಗುತ್ತೇವೆ.   ದ್ವೇಷಿಸಿದರೆ, ಅಪ್ರಿಯವಾದ ಆ ವಸ್ತು ಅಥವಾ ವ್ಯಕ್ತಿ ಯ ವಿಚಾರ ಪಿಶಾಚಿಯಂತೆ ಬೇಡವೆಂದರೂ ನಮ್ಮನ್ನು ಕಾಡುತ್ತವೆ.  ನಾವು ಇವುಗಳಿಂದ ಓಡಿಹೋಗಲು ಆಗುವುದಿಲ್ಲ. ಎಲ್ಲಿಗೆ ಹೋದರು ಅದು ನೆರಳಿನಂತೆ ಬೆನ್ನು ಬೀಳುತ್ತವೆ. ಮತ್ತೇನು ಮಾಡಬೇಕು?     
 
 ಶ್ರೀ ರಾಮಕೃಷ್ಣರು ಹೇಳುತ್ತಾರೆ " ಇಂತಹ ಸ್ಥಿತಿಯಿಂದ ಪಾರಾಗಬೇಕಾದರೆ ಅತ್ತ ಕಡೆ ಗಮನ ಹರಿಸುವುದನ್ನು ಬಿಡು. ಅದರ ಮೇಲೆ ಅನಾದರವನ್ನು ಉಂಟು ಮಾಡಿಕೊ."       ಹೌದು,   ನಾವು ಇವೆರಡರ ಕಡೆ ಗಮನ ಕೊಡುವುದನ್ನು ಕಡಿಮೆ ಮಾಡಲು ಅಭ್ಯಾಸ ಮಾಡಬೇಕು. ಮನಸ್ಸನ್ನು ಉತ್ತಮ ವಿಚಾರದ ಕಡೆಗೆ ತಿರುಗಿಸಬೇಕು.  ಸಾಹಿತ್ಯ, ಸಂಗೀತ, ಸತ್ಸಂಗ, ಅಧ್ಯಾತ್ಮ ಮತ್ತು ಧ್ಯಾನದ ಕಡೆಗೆ ಮನಸ್ಸು ಕೊಟ್ಟರೆ ರಾಗ ಮತ್ತು ದ್ವೇಷಗಳ ಕಾಟ ಕಡಿಮೆಯಾಗುತ್ತದೆ.  
ಇಂತಹ ಸಮಯದಲ್ಲಿ ತಿಮ್ಮ ಗುರು ಅಪ್ಪಣೆ ಕೊಡುತ್ತಾರೆ
              ಒಮ್ಮೆ ಹೂದೋಟದಲಿ, ಒಮ್ಮೆ ಕೆಳೆಕೂಟದಲಿ |
              ಒಮ್ಮೆ ಸಂಗೀತದಲಿ, ಒಮ್ಮೆ ಶಾಸ್ತ್ರದಲಿ|| 
              ಒಮ್ಮೆ ಸಂಸಾರದಲಿ, ಮತ್ತೊಮ್ಮೆ ಮೌನದಲಿ |
              ಬ್ರಹ್ಮಾನುಭವಿಯಾಗೋ.......ಮಂಕುತಿಮ್ಮ||
ಹೆಚ್ ಏನ್ ಪ್ರಕಾಶ್
.  

 

Comments