"ಕನ್ನಡ ಭಾಷಾ ಕಲಿಕೆ ಮುಖ್ಯ....ಡಾ|ಕುಂ.ವೀರಭದ್ರಪ್ಪ "

"ಕನ್ನಡ ಭಾಷಾ ಕಲಿಕೆ ಮುಖ್ಯ....ಡಾ|ಕುಂ.ವೀರಭದ್ರಪ್ಪ "

    ಕನ್ನಡ ಭಾಷೆಯನ್ನು ಸರಿಯಾಗಿ ಕಲಿತರೆ ಪ್ರಪಂಚದ ಯಾವುದೇ ಭಾಷೆಯನ್ನು ಕಲಿಯಬಹುದು


ರಿಪ್ಪನಪೇಟೆ :-


ಜಗತ್ತಿನಲ್ಲೆ ಭಾರತ ಸುಂದರವಾದ ದೇಶ, ಅದರಲ್ಲಿಯೂ ಕರ್ನಾಟಕರಾಜ್ಯ ಇಷ್ಟ ಅದೂ ಕನ್ನಡ ಭಾಷೆ ನೆಲ ಜಲ ಮತ್ತು ಸಂಸ್ಕೃತಿ ಗಳ ವಿಷಯವಾಗಿ, ಇನ್ನೂ ಹೇಳ ಬೇಕೆಂದರೆ ಬಯಲು ನಾಡಿನ ನನಗೆ ಸಹ್ಯಾದ್ರ್ರಿಯ ದಟ್ಟ ಮಲೆನಾಡಿನ ಸುಂದರ ಮನಸುಗಳ ಕೇಂದ್ರ ಈ ಗ್ರಾಮೀಣ ಪ್ರದೇಶ ನನಗೆ ಬಹಳ ಅಪ್ಯಾಯ ಮಾನವಾಗಿ ಕಾಣುತ್ತದೆ. ಯಾಕೆಂದರೆ ಇಲ್ಲಿ ವಿದ್ಯಾರ್ಥಿಗಳಿಗಿಂತ ಅಧಿಕ ಸಂಖ್ಯೆಯಲ್ಲಿವಿದ್ಯಾರ್ಥಿನಿಯರು ಸೇರಿದ್ದಾರೆ ಎಂದು ನಮ್ಮ ನಾಡಿನ ಖ್ಯಾತ ಸಾಹಿತಿ ವಿಮರ್ಶಕ ಮತ್ತು ಚಿಂತಕ ಡಾ|| ಕುಂ.ವೀರಭದ್ರಪ್ಪ ಅವರು ಇಲ್ಲಿಯ ಜಿಎಸ್ಬಿ ಕಲ್ಯಾಣ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರಿಪ್ಪನಪೇಟೆಯ ಹೋಬಳಿ ಘಟಕ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳ ಸಂಯುಕ್ತಾಶ್ರಯದಲ್ಲಿ  ಆಯೋಜಿಸಲಾಗಿದ್ದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಗಳಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಮಾತನಾಡುತ್ತ ಹೇಳಿದರು.


      ಮುಂದುವರಿದು ಮಾತನಾಡಿದ ಅವರು ' ಕನ್ನಡ ಭಾಷೆಯಲ್ಲಿ ಮಾತನಾಡುವುದು ಮತ್ತು ಬರೆಯುವುದು ಒಂದು ಚೆಂದವಾದರೆ , ನಮ್ಮ ನೆಲದ ಆಟಗಳು, ಜಾನಪದದ ಹಾಡುಗಳು, ಹಬ್ಬ ಹರಿದಿನಗಳು, ಸಾಂಸ್ಕೃತಿಕ ಆಚರಣೆಗಳನ್ನು ನೆನಪಿಸಿಕೊಂಡರೆ ಸಾಕು ನಮ್ಮ ಭಾಷೆಯ ವೈವಿಧ್ಯತೆಯ ಮತ್ತು ಸೊಗಡಿನ ಅರಿವಾಗುತ್ತದೆ. ಅಂತಹ ಸೊಗಸಾದ ಭಾಷೆಯನ್ನು ಬಿಟ್ಟು ನಾವು ಇಂಗ್ಲೀಷಿನ ಬೆನ್ನು ಬಿದ್ದಿದ್ದೇವೆ. ಈ ಇಂಗ್ಲೀಷ ಭಾಷೆಯ ವ್ಯಾಮೋಹದಿಂದ ನಾವು ಹೊರಬರದಿದ್ಚರೆ ನಮಗೆ ಭವಿಷ್ಯವಿಲ್ಲ. ಕನ್ನಡದ ಯುವ ಚೇತನಗಳಾದ ನೀವು ನಮ್ಮ ಭಾಷೆಯನ್ನು ಕಲಿತು ಆದರಿಸಿದರೆ ನಿಮ್ಮ ಬದುಕು ಹಸನಾಗುತ್ತದೆ. ಕನ್ನಡ ಭಾಷೆಯನ್ನು ಸರಿಯಾಗಿ ಕಲಿತವನು ಇಂಗ್ಲೀಷ ಭಾಷೆ ಮಾತ್ರವಲ್ಲ ಪ್ರಪಂಚದ ಯಾವುದೆ ಭಾಷೆಯನ್ನು ಕಲಿಯಬಲ್ಲ ಎಂದರು.


        ಶಿವಮೊಗ್ಗ ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ ಸೇವಾ ಕ್ಷೇತ್ರದಲ್ಲಿ ಯುವ ಜನರ ಪಾತ್ರ ಕುರಿತು ಮಾತನಾಡಿ ಆತ್ಮ ವಿಶ್ವಾಸ ತುಂಬದ ಶಿಕ್ಷಣ ನಿಷ್ಪ್ರಯೋಜಕ. ಸೇವೆ ಮಾಡುವವರಿಗೆ ನಾಚಿಕೆಯ ಸ್ವಭಾವವೂ ಬೇಕು. ಸಿನಿಮಾ ಧಾರಾವಾಹಿ ಗಳ ಪಾತ್ರಗಳು ನಮಗೆ ಆದರ್ಶವಾಗಬಾರದು. ನಾವಿಂದು ಎಲ್ಲವನ್ನೂ ವ್ಯಾವಹಾರಿಕ ದೃಷ್ಟಿಕೋನದಿಂದ ನೋಡುವ ಫಲಾನುಭವಿ ಗಳಾಗಿದ್ದೇವೆ. ಇದು ಇಂದಿನ ದುರಂತ. ನಿಮಗೆ ಮಹಾತ್ಮಾ ಗಾಂಧಿ, ಜಗದೀಶಚಂದ್ರ ಬೋಸ್, ಅರವಿಂದ ಘೋಷ, ಟ್ಯಾಗೋರ್, ಕುವೆಂಪು ಮತ್ತು ಬೇಂದ್ರೆ ಯವರ ತ್ಯಾಗ ಬಲಿದಾನ ಮತ್ತು ವಿಶಾಲ ದೃಷ್ಟಿಕೊನಗಳು ನಮ್ಮಲ್ಲಿ ಸಂಚಲನವುಂಟು ಮಾಡಬೇಕು. ಫಲಾಪೇಕ್ಷೆಯಿಲ್ಲದೆ ಕೆಲಸ ಮಾಡಬೇಕು ಅದು ಸೇವೆ. ನಮ್ಮ ಗ್ರಾಮೀಣ ಪರಿಸರ ಇಂದು ದರಿದ್ರ ಸ್ಥಿತಿಗೆ ಬಂದು ತಲುಪಿದೆ. ಗ್ರಾಮಗಳ ಸೇವೆ ಅಲ್ಲಿಯ ಯುವ ಜನರ ಆದ್ಯತೆಯಾದಾಗ ಮಾತ್ರ ಹಳ್ಳಿಗಳ ಉದ್ಧಾರ ಸಾಧ್ಯ ಎಂದರು.


          ಕಾರ್ಯಕ್ರಮದ ಮುಖ್ಯ ಅತಿಥಿ ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ|| ಕುಬೇರಪ್ಪ ಅವರು ಇದು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವ ಜನತೆ ಅದರಲ್ಲಿಯೂ ವಿದ್ಯಾವಂತ ಯುವ ಸಮುದಾಯದ ಮೇಲೆ ಇದೆ ಎಂದರು. ಇಲ್ಲಿಯ ಹೋಬಳಿ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಂಜುನಾಥ ಕಾಮತರವರು ಮಾತನಾಡಿ ಇಂದು ಕನ್ನಡ ಸಾಹಿತ್ಯ ಲೋಕದ ದಿಗ್ಗಜರ ಜೊತೆ ವೇದಿಕೆಯಲ್ಲಿ ಕುಳಿತು ಕೊಂಡಿದ್ದರೆ ಅದಕ್ಕೆ ಕಾರಣ ಕನ್ನಡ ಭಾಷೆಯ ಮೇಲಿನ ನನ್ನ ಅಭಿಮಾನ ಕಾರಣ ಎಂದರು. ನಮ್ಮ ಹೋಬಳಿ ಘಟಕ ಸ್ತಾಪನೆಯಾಗಿ ಹದಿನಾಲ್ಕು ದಿನಗಳಲ್ಲಿ ಇದು ಎರಡನೆಯ ಕಾರ್ಯಕ್ರಮ ಇದಕ್ಕೆ ಎಲ್ಲರ ಸಹಕಾರ ಮುಖ್ಯ ಕಾರಣ. ಅದೇ ರೀತಿ ಮುಂದೆಯೂ ಯುವ ಜನರ ಸಹಕಾರ ಕೋರಿದರು.


    ಈ ಸಂಧರ್ಭದಲ್ಲಿ ಇಲ್ಲಿಯ ಜಿಎಸ್ಬಿ ಸಮಾಜದ ವತಿಯಿಂದ ಕುಂ.ವೀರಭದ್ರಪ್ಪ ಅವರನ್ನು ಸನ್ಮಾನಿಸಲಾಯಿತು. ಜೇನಿ ಗ್ರಾಮದ ಹತ್ತಿರದ ಬೆಳ್ಳಿಸರದ ಅನಾಥಾಶ್ರಮದ ರೂವಾರಿ ಮತ್ತು ಉರಗತಜ್ಞ ಪ್ರಭಾಕರ ರವರ ಸಾಮಾಜಿಕ ಸೇವೆಯನ್ನು ನೆನೆದು ವೇದಿಕೆಗಳ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಿತ ಪ್ರಭಾಕರ ಮಾತನಾಡಿ ತಮ್ಮ ಅನಾಥಾಲಯದ ಕುರಿತು ಮಾತನಾಡಿ ಯುವಕರು ಅಲ್ಲಿಗೆ ಭೇಟಿ ನೀಡಿ ಪ್ರತ್ಯಕ್ಷಾನುಭವ ಪಡೆಯಬೇಕು ಎಂದರು. ಕು|| ಶ್ರುತಿ ಪ್ರಾರ್ಥಿಸಿದರು, ಡಾ|| ಮೋಹನ ಸ್ವಾಗತಿಸಿದರು, ಕನ್ನಡ ಸಾಹಿತ್ಯ ಪರಿಷತ್ತಿನಹ ಇಲ್ಲಿಯ ಹೋಬಳಿ ಘಟಕದ ಕಾರ್ಯದರ್ಶಿ ತ.ಮ.ನರಸಿಂಹ ಕಾರ್ಯಕ್ರಮದ ನಿರೂಪಣೆ ಮಾಡಿದರು. ಪ್ರೋ.ಹೆಚ್.ಕೆ.ಅನಂತನಾಗ ವಂದನಾರ್ಪಣೆ ಮಾಡಿದರು.