ಪಬ್ಬು ಕ್ಲಬ್ಬು ರೆಸಾರ್ಟು ಮತ್ತು ಹುಡುಗಿಯರು

ಪಬ್ಬು ಕ್ಲಬ್ಬು ರೆಸಾರ್ಟು ಮತ್ತು ಹುಡುಗಿಯರು

ಕವನ

ಪಬ್ಬು ಕ್ಲಬ್ಬು ರೆಸಾರ್ಟು ಮತ್ತು ಹುಡುಗಿಯರು

ಆಗಬಾರದು ಹೆಣ್ಣಿಗೆ,
ಸ್ವಾತಂತ್ರ್ಯವೆಂದರೆ,
ಆಧುನಿಕತೆಯ ಹೆಸರಿನಲ್ಲಿ
ಅರೆ ಬೆತ್ತಲಾಗಿ ಓಡಾಡುವುದು.
ಮುಚ್ಚಿ ಇಡಬೇಕಾದ ಅಂಗಾಂಗಗಳನು
ಹೋಗಬಾರದ ಜಾಗಗಳಿಗೆ ಹೋಗಿ
ಬಿಚ್ಚಿ ಬಿಚ್ಚಿ ತೋರಿಸುವುದು.
ನಾಲ್ಕು ಆಂಗ್ಲದಕ್ಷರ ಕಲಿತು
ಕೈಯಲ್ಲಿ ಸಿಗರೇಟು ಹಿಡಿದು ಪೋಲಿ ಪೋರರ ಜೊತೆ
ಪಬ್ಬು ಕ್ಲಬ್ಬು ರೆಸಾರ್ಟು ಸುತ್ತುವುದು.
ಇನ್ನು ಬದುಕಿನ ಮಡಿಲಲ್ಲಿ
ಹಾಲು ಕುಡಿಯುವ ಹಸುಳೆಯಂತಿರುವವಳು
ಆಲ್ಕೋಹಾಲಿಗೆ ಶರಣಾಗುವದು.
ಹೌದು,
ಆಗಬಾರದು ಹೆಣ್ಣಿಗೆ,
ಸ್ವಾತಂತ್ರ್ಯವೆಂದರೆ,
ಪ್ರೀತಿಯ ಹೆಸರಿನಲ್ಲಿ ಮಿತಿಯ ಗೆರೆ ದಾಟುವುದು
ಹೆತ್ತವರ ಮನೆ ತಣ್ಣಗಿರಿಸುವ ವಯಸಲಿ
ಕಾಮದ ಬೆಂಕಿಯ ಒಲೆಯಲಿ ಬೀಳುವುದು.

ನಿನಗೆ ಥಳಿಸುವವರಿಗೆ ನಾನು ಸಮರ್ಥಿಸುತ್ತಿಲ್ಲ 
ಆದರೆ ನಿನ್ನಿಂದಲೇ ನಿನ್ನ ಮನಸಿಗೆ
ಬಿದ್ದ ಪೆಟ್ಟು, ಆದ ಗಾಯ,
ದಕ್ಕಿದ ನೋವಿಗೆ ಯಾರು ಹೊಣೆ ಹೇಳು?

ನನ್ನಕ್ಕ, ನನ್ನ ತಂಗಿ, ನನ್ನ ಗೆಳತಿ,
ನೀನು ನಿರ್ವಸ್ತ್ರಳಾದರೆ ಆಗು 
ಆದರೆ ಶತಮಾನಗಳಿಂದ ನಿನ್ನನ್ನು ಮೆತ್ತಿಹ  
ದೌರ್ಜನ್ಯದ ಕತ್ತಲೆಯ ತೊಳೆದೊಗೆದು
ನಿನ್ನ ಹೊಸಜನ್ಮವ ಬೆಳಗಲೆಂದು.

ನೀನು ಬೆತ್ತಲಾದರೆ ಆಗು,
ಆದರೆ ನಿನಗಂಟಿದ ಅನಾಚಾರದ,
ಅಸಮಾನತೆಯ ಬಟ್ಟೆಹರಿದೊಗೆದು ಸಾಧನೆಯ ಪೂಜೆಗೆಂದು.

ರಾಜೇಂದ್ರಕುಮಾರ್ ರಾಯಕೋಡಿ - Copyright©

Comments