ನಮ್ಮೂರ ಸೀರಿ ಬಗ್ಗೆ ಗೊತ್ತನ್ರಿ ನಿಮಗ?? ಗೊತ್ತಿಲ್ಲಂದ್ರ ಕೆಳಗ ನೋಡ್ರ್ಯಲ ಒಂದ್ಸಲ..

Submitted by gayatri on Tue, 07/31/2012 - 15:20

"ಇಲಕಲ್ ಸೀರೆ ಉಟ್ಕೊಂಡು,


ಮೊಣಕಾಲ ಮಟಗ ಎತ್ಕೊಂಡು


ಏರಿ ಮೇಲೆ ಏರಿ ಬಂದ್ಲು ನಾರಿ


ಬುಟ್ಟಿ ತುಂಬ ಪ್ರೀತಿ ತಂದ್ಲು ಗೌರಿ"


ಅಂತ ಹಾಡ ಕೇಳೀರಿ ಅನಸತ್ತ, ಆ ಇಲಕಲ್ ನೋಡ್ರಿ ನಮ್ಮೂರು.. ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯೊಳಗ ಇರು ಇಲಕಲ್  ಬಂದು ನೋಡ್ರಿ ಒಂದ್ಸಲಾ ಎಲ್ಲಿ ನೋಡಿದ್ರು ಇಲಕಲ್ ಸೀರಿ ಉಟ್ಟಿರು ಹೆಣ್ಣುಮಕ್ಕಳ ಕಾನ್ತಾರ ಕಣ್ಣಿಗೆ..ಅವರನ್ನ ನೋಡಿದ್ರ ಕೈ ಮುಗಿಬೇಕ ಅನಸತ್ತ ನೋಡ್ರಿ.. ಕೈ ಮಗ್ಗದಾಗ ತಯಾರ ಮಾಡು ಇಲಕಲ್ ಸೀರಿ ನೋಡಾಕ ಬಾಳ ಚೆಂದ .. ನೋಡಿರ್ಲಿಕಂದ್ರ ಇಲ್ಲೆ ನೋಡ್ರ್ಯಲ ಹೆಂಗ ಇರತಾವಂತ. ಮ್ಯಾಲೆ ನೋಡ್ರಿ ನಮ್ಮ ಅಜ್ಜಿ (ಚಿತ್ರ ೧)ಹೆಂಗ ಗತ್ತಿನ್ಯಾಗ ಕುಂತಾರಾ ಇಲಕಲ್ ಸೀರಿ ಉಟ್ಕೊಂಡು..


 ಓಂದು ಸೀರಿ ತಯಾರ ಮಾಡ್ಬೇಕಂದ್ರ ಅದರ ಹಿಂದ ಎಸ್ಟ ಮಂದಿ ಶ್ರಮ ಇರತ್ತಂತ ಹೇಳಾಕು ಅಗಲ್ಲ ರೀ, ಹಗಲು ರಾತ್ರಿ ಕುಂತು ಕೆಲಸ ಮಾಡಿದಾಗ ಒಂದ ಸೀರಿ ತಯಾರ ಅಗತ್ತ... ಮ್ಯಾಲೆ ೬ ನೇ ಮತ್ತು ೭ ನೇ ಚಿತ್ರ ನೊಡ್ರಿ, ಅವು ಕೂಡ ಸೀರಿ ತಯಾರ ಮಾಡು ಕೆಲಸದಾಗ ಒಂದು.. ಚಿತ್ರದಾಗ ನಮ್ಮ ಹೆಣ್ಮಗಳು ಸೀರಿ ನೇಯ್ಯಾಕತ್ತಳ ನೋಡ್ರಿ ಹಂಗ ೨ ದವಸ ಕುಂತು ನೇದರ ೧ ಸೀರ ತಯಾರ ಅಗತ್ತ.. ಚಮಕಾ ತಂದು,ಬಣ್ಣಾ ಹಾಕುದು,ತೋಡುದು, ಹನಿಗಿ ಕೆಚ್ದುದು,ಟಾಣ ಹಾಕುದು,ಕಂಡಿಕೆ ಸುತ್ತುದು,ನೇಯುದು ಹಿಂಗ ಬಾಳ ಸುತ್ತು ಕೆಲಸ ಇರತಾವ್ರಿ..ಅಸ್ಟೆಲ್ಲ ಕೆಲಸ ಆಗಿಂದ ಒಂದ ಸೀರಿ ತಯಾರ ಆಗತ್ತ ನೋಡ್ರಿ... ಆದರ ಅದನ್ನ ಉಟ್ಕೊಂಡು ಮೆರಿಯು ಬಹಳ ಹುಡಿಗ್ಯಾರಿಗೆ ಅದರ ಹಿಂದಿನ ಶ್ರಮ ಗೊತ್ತಿಲ್ಲ ಅನಸತ್ತ.


ಒಂದ ತರ ಅಲ್ಲರಿ,ಇಲಕಲ ಸೀರಿ ಒಳಗು ಬ್ಯಾರೆ ಬ್ಯಾರೆ ತರ ಅದಾವು, ಎಸ್ಟು ರೇಶ್ಮೆ ಬಳಸ್ತಾರ ಅನ್ನುದರ್ ಮ್ಯಾಲೆ ಸೀರಿ ಕ್ವಾಲಿಟಿನು ಬದಲಾಗತ್ತ..


೧. ಚಿಕ್ಕಿ ಪರಾಸ್ (ಚಿತ್ರ ೪) 


೨.ಚಿಕ್ಕಿ ಪರಾಸ್ ಕಡ್ಡಿ(ಚಿತ್ರ ೨) 


೩.ದಪ್ಪಾಳ(ಚಿತ್ರ ೩)


೪.ಗಾಯತ್ರಿ(ಚಿತ್ರ ೫) 


ಅಂತೇಳಿ ಇನ್ನು ಬಾಳ ತರ ಸೀರಿ ಅದಾವ್ರಿ..


ಒಂದ್ಸಲ ಇಲಕಲ್ಲಿಗೆ ಬಂದು ನೋಡ್ರ್ಯಲ ಬಣ್ಣಬಣ್ಣದ ಇಲಕಲ್ ಸೀರಿ(ಚಿತ್ರ ೮) ಹೆಂಗಿರ್ತಾವಂತ. ಇಲಕಲ್ಲಿಗೆ ಬರ್ತೀರಿ ಅಂದಿಂದ ಒಂದ ಸೀರಿ ತಗೊಂಡ ಬಿಡ್ರ್ಯಲ ಮತ್ತ..ನಿಮ್ಮೂರಿಗೆ ಹೋಗಿ ಉಟ್ಕೊಂಡಾಗ ನಿಮುಗು ಯಾರರ ಹಿಂಗ ಹಾಡಾ ಹಾಡ್ತಾರಾ ಅವಾಗ


""ಇಲಕಲ ಸೀರೆ ಉಟ್ಕೊಂಡು


ಹೆಗಲಿಗೆ ಬ್ಯಾಗು ಹಾಕ್ಕೊಂಡು


ಆಫೀಸ್ ಗೆ ಹೋಗ್ತಾಳ ನೋಡ ಗೌರಿ


ಎಸ್ಟ ಚೆಂದ ಕಾಣ್ತಾಳ ನೋಡ ಮಾಡರ್ನ್ ನಾರಿ"""


ಯಾವಾಗ ಬರತೀರಿ ನೋಡ್ರಿ ಮತ ನಮ್ಮ ಸೀರಿ ಕರೀದಿ ಮಾಡಾಕಾ...ನಾನು ಒಬ್ಬ ನೇಕಾರ ಮಗಳ ರೀ,ನಮ್ಮ ಮನೆ ಉಧ್ಯೋಗ ಸೀರಿ ನೇಯುದ.. ಎಲ್ಲಾ ನೇಕಾರರಿಗೆ ಒಂದ್ಸಲ ಇಲ್ಲಿಂದಾನ ನಮಸ್ಕಾರ ಮಾಡ್ರ್ಯಲ, ಅವರು ಅಸ್ಟು ಶ್ರಮ ಪಡುದಕ್ಕ ಪ್ರತಿಫಲ ಸಿಗಲಿ.