ಗೀತೆಯ ಗುಟ್ಟು 1

ಗೀತೆಯ ಗುಟ್ಟು 1

 ಒಂದನೆಗಳು,

ಇದು ನನ್ನ ಮೊದಲ ಪ್ರಯತ್ನ.

ಮೊದಲೇ ಹೇಳಿ ಬಿಡುತ್ತೇನೆ. ಈ ಬ್ಲಾಗಿನಲ್ಲಿ ಬರೆದ ಯಾವುದೂ ನನ್ನದಲ್ಲ. ಇದು ದಿ. ಶ್ರೀ ರಂಗನಾಥ ದಿವಾಕರ ಅವರ ಚಿಂತನೆ.

ಆದರೆ ವಿಷಯಗಳು ಇಂದಿಗೂ ಎಷ್ಟು ಉಪಯುಕ್ತವೆನಿಸುತ್ತವೆ ಮತ್ತು ವಸ್ತುನಿಷ್ಟವಾಗಿವೆ. ಅದಕ್ಕೆ ಹಂಚಿಕೊಳ್ಳಬೇಕೆನಿಸಿತು.

ಈಗ ಈ ಪುಸ್ತಕವೂ ಲಭ್ಯವಿರಲಿಕ್ಕಿಲ್ಲ.

ಈಗ ಓದಿ-

 

//ಓಂ ತತ್ಸತ್//

ಗೀತೆಯ ಗುಟ್ಟು ಅಥವಾ ಪರಮಾತ್ಮಯೋಗವು

1.  ಗೀತೆಯ ಮಹತ್ವವೂ ಮಾಹಾತ್ಮ್ಯವೂ

ಸೂಚನೆ:  ಶ್ರೀ ಗೀತಾ ಗ್ರಂಥದ ಮೂಲ ಶ್ಲೋಕಗಳನ್ನು ಕನ್ನಡ ಭಾಷಾಂತರವನ್ನು ಬರೆಯುವುದಕ್ಕೂ ಮೊದಲು ಒಂದು ವಿಸ್ತೃತವಾದ ಗೀತಾವಿವೇಚನೆಯನ್ನು ಬರೆಯಬೇಕೆಂದು ಸಂಕಲ್ಪವನ್ನು ಮಾಡಿಕೊಂಡು ಕೆಳಗಿನ ನಾಲ್ಕು ನುಡಿಗಳನ್ನು ವಾಚಕರೆದುರಿಗೆ ಇಡುತ್ತಿರುವೆ. ಈ ವಿವೇಚನೆಯಲ್ಲಿ

(1) ಗೀತೆಯ ಮಹತ್ವ ಮತ್ತು ಮಾಹಾತ್ಮ್ಯ

(2) ಗೀತೆ ಮತ್ತು ಸಧ್ಯದ ಸ್ಥಿತಿ

(3) ಗಿತೆ ಮತ್ತು ಕರ್ನಾಟಕ

(4) ಗಿತೆಯ ಭೂಮಿಕೆ

(5) ಗೀತೆಯಲ್ಲಿನ ಸನಾತನ ಧರ್ಮ

(6) ಗೀತೆಯಲ್ಲಿನ ಯುಗಧರ್ಮ 

(7) ಯೋಗ ಪಂಚಕ

(8) ಯೋಗಸಮನ್ವರ

(9) ಗೀತೆಯ ಗುಟ್ಟು ಗುರಿಗಳು

ಹೀಗೆ ಒಂಭತ್ತು ವಿಶಯಗಳನ್ನು ವಿವೇಚಿಸುವ ವಿಚಾರವಿದೆ. ಮೊದಲನೇಯ ಪ್ರಕರಣದಲ್ಲಿ ಈ ಗೀತಾ ಗ್ರಂಥದ ಮಹತ್ವವನ್ನೂ ಮಾಹಾತ್ಮ್ಯವನ್ನೂ ಕುರಿತು ವಿಚಾರಿಸುವೆ.

ಮಹಾತ್ಮ್ಯವನ್ನು ಹೇಳುವ ಪದ್ಧತಿ:

ಇದುವರೆಗೆ ಅಚ್ಚಾದ ಗೀತೆಯ ಪ್ರತಿಯೊಂದು ಆವೃತ್ತಿಯ ಆರಂಭದಲ್ಲಿ ಬಹುಶಃ "ಗೀತಾ ಮಾಹಾತ್ಮ್ಯವೆಂಬ" ಕೆಲವು ಶ್ಲೋಕಗಳು ಇದ್ದೇ ಇರುತ್ತವೆ.ಕೆಲವು ಆವೃತ್ತಿಗಳಲ್ಲಿ "ಅದ್ವೈತಾಮೃತವರ್ಷಿಣೀಂ" ಎಂಬ ಮುಂತಾದ ವಾಕ್ಯಗಳಿಂದೊಡಗೂಡಿದ ಅದ್ವೈತ ಸಂಪ್ರದಾಯದ ಮಹಾತ್ಮ್ಯವು ಹೇಳಲ್ಪಟ್ಟಿರುತ್ತದೆ. ಎಲ್ಲ ಮಹಾತ್ಮ್ಯಗಳಲ್ಲಿಯೂ ಗೀತಾಭ್ಯಾಸದ ಫಲಶ್ರುತಿಯಂತೂ ತಪ್ಪಿದ್ದಲ್ಲ. ಯಾವ ಗ್ರಂಥವನ್ನು ವಾಚಕರ ಕೈಯಲ್ಲಿ ಕೊಡಬೇಕಾಗಿದೆಯೋ ಅದರ ಮಹತ್ವವನ್ನು ಆದಿಯಲ್ಲಿಯೇ ಹೇಳುವ ಪರಿಪಾಠವು ಈ ರೀತಿಯಾಗಿ ಪರಂಪರಾಗತ ವಿರುವುದೆಂಬುದು ಇದರ ಮೇಲಿಂದ ಸಿದ್ಧವಾಗಬಹುದು. ಈ ಪರಂಪರೆಯನ್ನೇ ನಾನು ಇಲ್ಲಿ ಅನುಸರಿಸುತ್ತಿರುವೆನು.

ಆರ್ಯರ ತತ್ವಗ್ರಂಥಗಳು:

ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವ ವೇದ ಎಂಬ ನಾಲ್ಕು ವೇದಗಳು, ತದಂತರ್ಗತವಾದ ಈಶ, ಕೇನ, ಕಠ, ಮುಂಡಕ, ಮಾಂಡೂಕ್ಯ, ಪ್ರಶ್ನ, ಐತರೇಯ, ತೈತ್ತಿರೀಯ, ಛಾಂದ್ಯೋಗ್ಯ, ಬೃಹದಾರಣ್ಯಕ ಎಂಬ ದಶೋಪನಿಷತ್ತುಗಳು, ಉಪನಿಷತ್ತುಗಳ ಸಮನ್ವಯಾರ್ಥವಾಗಿ ಬರೆದ ಬ್ರಹ್ಮ ಸೂತ್ರಗಳೂ ಮತ್ತು ಭಗವದ್ಗೀತೆ ಇಷ್ಟು ಗ್ರಂಥಗಳು ಹಿಂದೂ ಜನರ ತತ್ವಜ್ಞಾನ ಸರ್ವಸ್ವವನ್ನು ಸಮ್ಗ್ರಹಿಸಿವೆ ಎಂದೆನ್ನಬಹುದು. ಯಾವುದೇ ಒಂದು ಶ್ರೇಷ್ಟವಾದ ವ್ಯಕ್ತಿಯು ಈ ಗ್ರಂಥಗಳನ್ನು ಬರೆಯಿತೆಂದು ಈ ಗ್ರಮ್ಥಗಳಿಗೆ ಈಗಿರುವ ಮಹತ್ವವು ಪ್ರಾಪ್ತವಾಗಿಲ್ಲ. ಆದರೆ, ಆಯಾ ಗ್ರಂಥಗಳಲ್ಲಿದ್ದ, ಜ್ಞಾನವೇ ಅವುಗಳ ಮಾಹಾತ್ಮ್ಯವನ್ನು ಬೆಳೆಸಲಿಕ್ಕೆ ಕಾರಣವಾಗಿರಬಹುದು. ಈ ಎಲ್ಲ ಗ್ರಂಥಗಳು ದೈವೀಸ್ಫೂರ್ತಿಯಿಂದ, ಜ್ಞಾನಸ್ಫೂರ್ತಿಯಿಂದ, ಸತ್ಯಸ್ಫೂರ್ತಿಯಿಂದ ಬರೆದವುಗಳಾಗಿರುವುದರಿಮ್ದ ಸಾವಿರಾರು ವರ್ಷಗಳಾಗಿಹೋದರೂ ಅವು ಈಗ್ಯೂ ಎಲ್ಲಧರ್ಮಗ್ರಂಥಗಳ ಶಿರೋಭಾಗದಲ್ಲಿ ವಿರಾಜಿಸುತ್ತಿರುವವು.  (ಮುಂದುವರೆಯುವುದು)

Rating
No votes yet

Comments