"ಹೊಸತು" -ಹರುಷಕಿಲ್ಲಿದೆ ದಾರಿ ನೋಡಾ
ಕಾಲ ಚಕ್ರ ಹಿಂದೆ ಸರಿದು ನಮಗೆ ಮತ್ತೊಮ್ಮೆ ಬದುಕ ಸವಿಯುವ ಅವಕಾಶ ಸಿಕ್ಕುವಂತಿದ್ದರೆ ?......ಸವಿಯಲಾಗದ ಬಾಲ್ಯದಾ ಕ್ಷಣಗಳನ್ನು ಮತ್ತೊಮ್ಮೆ ಮಗದೊಮ್ಮೆ ಸವಿಯುವಂತಿದ್ದರೆ?....ನಾವು ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಅವಕಾಶ ಸಿಗುವಂತಿದ್ದರೆ...... ಎಷ್ಟು ಚೆನ್ನ ಅಲ್ಲವೇ ? 'ಹೊಸತು' ಎಂಬುದೇ ಬದುಕನ್ನು ಪುನರಾರಂಭಗೊಳಿಸಲು ನಮಗೆ ಸಿಗುವ ಹೊಸ ಅವಕಾಶ.
"ತೆರೆದಿದೆ ಮನೆ ಓ ಬಾ ಅತಿಥಿ ಹೊಸ ಬೆಳಕಿನ ಹೊಸ ಗಾಳಿಯಾ ಹೊಸ ಬಾಳನು ತಾ ಅತಿಥಿ .....".ಪ್ರಖ್ಯಾತ ಕವಿ ಕುವೆಂಪು ವಿರಚಿತ ಕವಿತೆಯಲ್ಲಿ ಹೊಸತಿನ ಆಗಮನದ ಮಧುರ ಕ್ಷಣದ ನಿರೀಕ್ಷೆ ಬಹಳ ಅರ್ಥವತ್ತಾಗಿ ಮೂಡಿಬಂದಿದೆ.ಇದೆ ಭಾವ ಕವಿ ದ.ರಾ .ಬೆಂದ್ರೆ ಯವರ "ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ "ಯಲ್ಲಿ ಬದಲಾವಣೆಗಾಗಿ ಹಾತೊರೆಯುವ ಕವಿಮನದ ಆಶಯ ವ್ಯಕ್ತವಾಗುತ್ತದೆ.
ಹೊಸತಿಗಾಗಿ ನಮ್ಮ ಮನ ಹಾತೊರೆಯುತ್ತಿರುತ್ತದೆ.ಜೀವನದ ಏಕತಾನತೆಯಿಂದ ಹೊರಬರಲು ನಮಗೆ ಬದಲಾವಣೆ ಅಗತ್ಯ.ಇಲ್ಲವಾದಲ್ಲಿ ಬದುಕು ನಿಂತ ನೀರಾಗಬಹುದು.ನಾವು ಯಾವುದೊ ಹೊಸ ಯೋಜನೆಗಳ ಬಗ್ಗೆ ಆಲೋಚಿಸುವಾಗ ಮೂಡುವ ಹೊಸ ಆಶಾಕಿರಣವೊಂದು ನಮ್ಮ ಬದುಕಿನ ಗತಿಯನ್ನೇ ಬದಲಾಯಿಸಿ ಬಿಡಬಹುದು. 'ಹೊಸತು' ತರುವ ನವೋಲ್ಲಾಸದ ಕ್ಷಣಗಳಿಗಾಗಿ ನಾವು ಕಾತರದಿಂದ ಕಾಯುತ್ತೇವೆ.ಆ ಕಾಯುವಿಕೆ ಕೂಡ ಆನಂದದಾಯಕವಾಗಿರುತ್ತದೆ.ಆ ಸಂಭ್ರಮದ ಕ್ಷಣ ಯಾವ ರೂಪದಲ್ಲಿಯಾದರೂ ಬರಬಹುದು. ಮನೆಗೊಬ್ಬ ಹೊಸ ಅತಿಥಿ ಕಂದನ ರೂಪದಲ್ಲಿ ಇರಬಹುದು.ಕುಟುಂಬದ ಚಿತ್ರಣವೇ ಬದಲಾಗುತ್ತದೆ.ಮನೆಯವರ ಚಿತ್ತವೆಲ್ಲ ಅದರ ಆಗಮನದ ನಿರೀಕ್ಷೆಯಲ್ಲಿಯೇ ಕಳೆಯುತ್ತದೆ.ಹೊಸ ಹೊಸ ಕನಸುಗಳನ್ನು ಹೆಣೆಯುತ್ತಾ ಮನೆಯವರೆಲ್ಲ ಒಳಗೊಂಡು ಚಿತ್ತ ಚೋರನ ಲಾಲನೆ ಪಾಲನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.ನಮ್ಮ ಮನಸ್ಸಿಗೆ ಹರ್ಷ ತರುವ ವಿಚಾರ ಅದು ಏನೇ ಇರಲಿ ಅದು ನಮ್ಮ ಚಿಂತನೆಗೆ ನೂರು ಬಲವನ್ನಿತ್ತು,ಎಂತಹ ಸಮಸ್ಯೆಗಳಿದ್ದರೂ ಎಲ್ಲವನ್ನೂ ಒಂದರೆಗಳಿಗೆ ಮರೆಸಿಬಿಡುವ ಶಕ್ತಿ ನೀಡುತ್ತದೆ.ಗುಡ್ಡದಂತಿದ್ದ ಸಮಸ್ಯೆಗಳೂ ತೃಣವಾಗಿ ಬಿಡಬಹುದು.
'ಹಣ್ಣೆಲೆ ಉದುರಿ ಹೊಸ ಚಿಗುರಿಗೆ ದಾರಿ ಮಾಡಿಕೊಡುವ ಮೂಲಕ', 'ಹರಿವ ನೀರು ಕೊಳೆಯ ಕೊಚ್ಚುತ್ತಾ ಹೊಸ ನೀರನ್ನು ಆಹ್ವಾನಿಸುವ ಮೂಲಕ' ಪ್ರಕೃತಿಮಾತೆ ಪ್ರತಿ ಕ್ಷಣ ವಿಜ್ರಂಭಿಸುತ್ತಾಳೆ . ಪ್ರತಿನಿತ್ಯ ಬೆಳಗುವ ಸೂರ್ಯ ದಿನಾಂತ್ಯದಲ್ಲಿ ಸೊರಗಿದರೂ ,ಹೊಸ ನಾವೀನ್ಯತೆಯೊಂದಿಗೆ ಮತ್ತೆ ಮತ್ತೆ ಉದಯಿಸುತ್ತಾನೆ.(ಸೋಲಿಲ್ಲದ ಸರದಾರನಂತೆ).ವರ್ಷವಿಡೀ ಸೂರ್ಯನ ತಾಪದಲ್ಲಿ ಬಳಲಿ ಬೆಂಡಾದ ವಸುಂಧರೆ ವರ್ಷಧಾರೆಯ ಸ್ಪರ್ಶವಾದೊಡನೆ ನವಚೈತನ್ಯ ತುಂಬಿಕೊಂಡು ನವತರುಣಿಯಂತೆ ಸಿಂಗಾರಗೊಳ್ಳುತ್ತಾಳೆ. ವರ್ಷಕ್ಕೊಂದು 'ಹೊಸತು' ಜನ್ಮ ಪಡೆವ ಸೃಷ್ಟಿಯ ಮೆಚ್ಚುವ , ಆರಾಧಿಸುವ ನಮಗೆ ಅದೊಂದು ಅಚ್ಚರಿಯೇ ಸರಿ. ಹಳೆಯ ಕಂದಾಚಾರಗಳಿಗೆ ಜೋತುಬಿದ್ದು ದೇಹ ಮನಸ್ಸುಗಳನ್ನು ಆವರಿಸಿಕೊಂಡ ಜಡತ್ವದಿಂದ ಹೊರಬಂದು , ಮನೆ ಮನದ ಕಿಟಕಿಗಳನ್ನು ತೆರೆದಿಟ್ಟು 'ಹೊಸತನ್ನು' ಆಹ್ವಾನಿಸುವ ಮೂಲಕ ನಮ್ಮ ಜನ್ಮ ಸಾರ್ಥಕ ಪಡಿಸಿ ಕೊಂಡು ಹೊಸದರತ್ತ ಹೆಜ್ಜೆ ಹಾಕೋಣ !!.
ಕಮಲ ಬೆಲಗೂರು .
Comments
ಉ: "ಹೊಸತು" -ಹರುಷಕಿಲ್ಲಿದೆ ದಾರಿ ನೋಡಾ
In reply to ಉ: "ಹೊಸತು" -ಹರುಷಕಿಲ್ಲಿದೆ ದಾರಿ ನೋಡಾ by nanjunda
ಉ: "ಹೊಸತು" -ಹರುಷಕಿಲ್ಲಿದೆ ದಾರಿ ನೋಡಾ