"ಅಪರಿಚಿತ"(ಕಥೆ) ಭಾಗ 5
' ನಾನು ವಿದ್ಯಾವಂತ ಜೀವನದಾಗ ಅಷ್ಟು ಇಷ್ಟು ಅಂತ ಮೌಲ್ಯಗಳನ್ನ ಇಟಕೊಂಡವನು, ನಿಮ್ಮಂಥ ಮುಠ್ಠಾಳರಿಗೆ ಅದೆಲ್ಲ ಅರ್ಥ ಆಗೋದಿಲ್ಲ ' ಎಂದು ರೇಗಿದ ಪರಸಪ್ಪ.
' ಮಾತಿಗೊಂದ್ಸಲ ಅದನ್ನ ಹೇಳ್ತಿ ನೋಡು ನಾ ವಿದ್ಯಾವಂತ ಅಂತ, ಇಷ್ಟೆಲ್ಲ ಮಾತಾಡ್ತಿಯುಲ್ಲ ಹಿಂದಿನ ಸ್ಟೇಶನ್ನಿನ ಕಥಿ ಬಿಡು, ಇಲ್ಲಿಗೆ ಬಂದು ಮೂರು ವರ್ಷ ಆತು, ನೀ ಮಾತ ಮಾತಿಗೆ ಹೇಳ್ತಿಯಲ್ಲ ಆ ಬುದ್ಧ ಬಸವ ಗಾಂಧಿ ಯವರ ತತ್ವದ ಒಂದು ಪೈಸೆದಷ್ಟು ಆಚರಣೆಗೆ ತಂದಿದ್ರ ನೀನು ಈಗಿನಕಿಂತ ಸ್ವಲ್ಪ ಒಳ್ಳೆಯ ಮನುಷ್ಯ ಆಗಿರತಿದ್ದಿ. ಜನ ನಿನ್ನ ಬಗ್ಗೆ ಹೊರಗ ಏನು ಮಾತಾಡ್ತಾರ ಗೊತ್ತದ ಏನು ' ಎಂದು ಗಂಗಾಧರ ದನಿಯೇರಿಸಿ ಮಾತನಾಡಿದರು.
' ಜನಕ್ಕೇನು ಮಾತಾಡ್ತಾರ ಆಗಲೆ ಹೇಳಿದ್ನಲ್ಲ ನನ್ನ ಬಗ್ಗೆ ದೂರು ಇದ್ರ ಹೇಳ್ರಿ ಈಗಿಂದೀಗ ನೌಕರಿ ಬಿಟ್ಟು ಹೋಗ್ತೀನಿ ' ಎಂದು ಪರಸಪ್ಪ ಬೇಸರದಿಂದ ಮಾತನಾಡಿದ.
' ಬರವಣಿಗಿಲೆ ಕೊಟ್ರ ಮಾತ್ರ ದೂರನು ಬಾಯ್ಮಾತಿನ್ಯಾಗ ಜನ ಹೇಳಿದ್ರ ಅವು ದೂರು ಅಲ್ಲನು ? ನಾವೂ ಹೋಗಲಿ ಇವತ್ತಲ್ಲ ನಾಳೆ ಸುಧಾರಸ್ತಾನಂತ ಸಹಿಸಿಕೊಂಡು ಬಂದ್ರ ಉರ್ಚಗ್ಯಾತನ ಮಾಡ್ತಿ. ಈಗ ನಿನ್ನೆದ್ರಿಗೆ ಮಂಜಪ್ಪ ಅದಾನಲ್ಲ ಅವನ ವಿಷಯನ ತುಗೊ, ಅವನ ಅರ್ಜಿ ಬಗ್ಗೆ ನಿನ್ನ ಕಳಸ್ತೇವಿ ಅಂದ್ರ ಅವ ನಿನ್ನ ಕಳಸೋದು ಬ್ಯಾಡ ಅಂತ ಯಾಕ ಅಂತಾನ ? ಒಂಚೂರು ವಿಚಾರ ಮಾಡು ನೀ ಅವನ್ನ ಎಷ್ಟು ಪೀಡಿಸೀದಿ ಅಂತ. ಹೇಳೋ ಮಂಜಪ್ಪ ಹೇಳು ! ನೀ ಪರಸಪ್ಪನ್ನ ಕಳಸೋದು ಬ್ಯಾಡ ಅಂತ ಯಾಕ ಅಂದಿ ಹೇಳ್ಬಿಡು ಈಗ ' ಎಂದರು ಗಂಗಾಧರ.
' ಹೋಗಲಿ ಬಿಡಿ ಸ್ವಾಮಿ ಅದೆಲ್ಲ ಈಗ್ಯಾಕ ' ಎಂದು ವಿಷಯವನ್ನು ಮಂಜಪ್ಪ ತಿಳಿಗೊಳಿಸಲು ನೋಡಿದ.
' ಹೋಗ್ಲಿ ಅಂದರ ಹ್ಯಾಂಗೋ ! ಅಲ್ಲಿ ಹೆಣ ಬಿದ್ದದ ಜನಾ ಇಲ್ಲ, ಇದೊಂದ ಸಲ ಹೋಗು ಅಂದ್ರ ಹುಷಾರಿಲ್ಲ ಅಂತ ನಾಟಕ ಮಾಡ್ತಾನ, ನೀನು ನಿಮ್ಮ ಅಣ್ಣನಮ್ಯಾಗ ಅರ್ಜಿ ಕೊಟ್ಟಿ ನಿಮ್ಮಣ್ಣನ್ನ ಕರ್ಕೊಂಡು ಬರೋಕ ಅವನ್ನ ಕಳಸ್ತೀವಿ ಅಂದ್ರ ನೀ ಅವ ಬ್ಯಾಡ ಅಂತಿ, ಜನ ಇರೋದು ಕಡಿಮಿ ಕೆಲಸದ ಹೊರಿ ಜಾಸ್ತಿ ಈಗ ನಾವರ ಏನು ಮಾಡೋಣ ಹೇಳು ? ' ಎಂದರು ಗಂಗಾಧರ.
' ಹೋಗ್ಲಿ ಬಿಡ್ರಿ ಗಂಗಾಧರ ಅವನ ಸಮಸ್ಯೆ ತುಗೊಂಡು ಅವ ಬಂದಾನ ಅದನ್ನ ಬಗಿಹರಸ ಬೇಕಾದ್ದು ನಮ್ಮ ಕರ್ತವ್ಯ , ನಮ್ಮ ಸಮಸ್ಯೆ ಅವನ ಮುಂದ ಹೇಳಿದ್ರ ಅವ ಬಗೆಹರಸಲಿಕ್ಕೆ ಅಗತದನು, ಪರಸ ನೀ ರಜಾ ಕೇಳಿದ್ದಿ ಮಂಜೂರು ಮಾಡ್ತೇನಿ ಹೋಗೋದಾದ್ರ ರಜಾ ಹೋಗು ಇಲ್ಲಾಂದ್ರ ರಾತ್ರಿ ಡ್ಯೂಟಿಗೆ ಬಾ ಹೋಗು, ಮಂಜಪ್ಪ ನೀ ಈಗ ಊರಿಗೆ ಹೋಗು ನಾಳೆ ನಾನು ಯಾರನರ ನಿಮ್ಮೂರಿಗೆ ಖಂಡಿತ ಕಳಸ್ತೀನಿ ' ಎಂದರು ಮಂಜಪ್ಪ ಗೌಡರು.
' ಮಂಜಪ್ಪ ನಿನಗ ಈಗ ಹನ್ನೆರಡು ಗಂಟೆ ವರೆಗೂ ಬಸ್ಸಿಲ್ಲ, ನೀ ಎಲ್ಲೆಗೆರ ಹೋಗೋದಿದ್ರ ಹೋಗಿ ಬಾ ನೋಡೋಣ ' ಎಂದರು ಗಂಗಾಧರ.
' ಸಾರ್ ಇವಂದೇನು ಹೊಸ ಸಮಸ್ಯೆ ಅಲ್ಲ ಇದು ಮೂವತ್ತು ವರ್ಷದ ಸಮಸ್ಯೆ. ನಾನು ಮೂವತ್ತು ವರ್ಷದ ಹಿಂದೆ ಮೊದಲ ಅಪಾಯಿಂಟ್ ಆಗಿ ಇಲ್ಲಿಗೆ ಬಂದೆ, ಆವಾಗ್ಲಿಂದನೂ ಈ ಸಮಸ್ಯೆ ಅದ. ನಾನು ಇಪ್ಪತ್ತೈದು ವರ್ಷ ಬೇರೆ ಕಡೆ ಕೆಲಸ ಮಾಡಿ ಕೊನೆಗಾಲಕ್ಕ ಮತ್ತ ಇಲ್ಲೆ ಬಂದೀನಿ, ಸಮಸ್ಯೆ ಇನ್ನೂ ಬಗೆ ಹರದಿಲ್ಲ. ಕೇಸು, ಕೌಂಟರ್ ಕೇಸು, ಅಲ್ಲದ ಸೆಕ್ಯೂರಿಟಿ ಕೇಸು ಎಲ್ಲ ಆಗ್ಯಾವ, ಇದು ಬಗೆ ಹರಿಲಾರದ ಸಮಸ್ಯೆ ' ಅಂದರು ಗಂಗಾಧರ.
' ಇಬ್ಬರೂ ಮನಸ ಮಾಡಿದ್ರ ಬಗೆ ಹರಿಸಿಕೋ ಬಹುದು, ಆದರ ಇಬ್ರೂ ತಮ್ಮ ತಮ್ಮ ಜಾಗದಾಗ ನಿಂತಾರ, ಒಂದು ಹೆಜ್ಜಿ ಕಿತ್ತಿ ಇಡಾಕ ಇಬ್ರೂ ತಯಾರಿಲ್ಲ, ಇಬ್ಬರದೂ ತಮ್ಮದ ಸರಿ ಎಂಬ ಪ್ರತಿಷ್ಟಾ ಮನೋಭಾವ. ಇವರಿಬ್ಬರೂ ಕಾರೆಮಕ್ಕಿ ದೇವಪ್ಪನ ಮಕ್ಕಳು. ಇಬ್ಬರಿಗೂ ತಲಾ ಎರಡೆರಡು ಎಕರೆ ಭತ್ತದ ಗದ್ದಿ ಬಂದಾವ. ಮೇಲಿನ ಗದ್ದಿ ಅಣ್ಣ ನಂಜಪ್ಪಂದು, ಅದರ ಕೆಳಗಿಂದು ತಮ್ಮ ಮಂಜಪ್ಪಂದು. ಇವು ಗುಡ್ಡಕ್ಕ ಹೊಂದಿಕೊಂಡಿರೋ ಜಮೀನು. ಮಳೆಗಾಲ ದಾಗ ಮಳಿ ಜಾಸ್ತಿ ಆದಾಗ ನಂಜಪ್ಪನ ಗದ್ದೆ ಬದುವಿನ ಕೂಡ ಹರದ ಬಂದು ಮಂಜಪ್ಪನ ಗದ್ದಿ ಬದುವಿನಗುಂಟ ಹರದು ಹೋಗಿ ಹಳ್ಳ ಸೇರತದ. ಆಗ ಮಂಜಪ್ಪ ನನ್ನ ಗದ್ದೆಗೆ ನೀರ ಬಿಡಬ್ಯಾಡ ಅಂತ ತಕರಾರು ತಗಿತಾನ. ಮತ್ತ ಇಬ್ಬರೂ ಬ್ಯಾಸಿಗಿ ಬೆಳಿ ಮಾಡತಾರ, ಆಗ ನಂಜಪ್ಪ ನನ್ನ ಗದ್ದಿಗೆ ನೀರು ಬಿಡೋದಿಲ್ಲ ಅಂತ ತಕರಾರು. ನೀರು ಎತ್ತರದಿಂದ ಇಳಿಜಾರಿಗೆ ಹರದು ಹೋಗೋದು ಅದರ ಪ್ರಾಕೃತಿಕ ಧರ್ಮ. ಆಗ ಸಮೃದ್ಧ ಕಾಡು ಇತ್ತು ಮಳೀನೂ ಸಮೃದ್ಧಿ ಯಾಗಿ ಆಗ್ತಿತ್ತು, ಆಗಿನ ಕಾಲಕ್ಕ ಬ್ಯಾಸಿಗಿ ಬೆಳಿಗೆ ನೀರಿನ ತಕರಾರು ಇರಲಿಲ್ಲ. ಈಗ ಕಾಡು ನಾಶ ಆತು ಮಳೀನೂ ಕಡಿಮಿ ಅತು ಹರದ ಬರೋ ನೀರೂ ಕಡಿಮಿ ಅತು, ಇಬ್ಬರೂ ಒಂದೊಂದು ಎಕರೇದಾಗ ಬ್ಯಾಸಿಗಿ ಬೆಳಿ ಬೆಳೀರಿ ಅಂದರ ಇಬ್ರಿಗೂ ನೀರು ಸಿಗತದ, ಈ ವಿಷಯ ಹೇಳಿದ್ರ ಇಬ್ಬರೂ ಅರ್ಥ ಮಾಡ್ಕೊಳ್ಳೋದಿಲ್ಲ, ತಮ್ಮದ ಹಟ ಸಾಧಸ್ತಾರ. ಮಳೆಗಾಲದಾಗ ಹೆಚ್ಚಾದ ನೀರು ಕೆಳಗ ಬಿಡೋ ನಂಜಪ್ಪ ಬ್ಯಾಸಿಗ್ಯಾಗ ತೆಳಗ ಹರಿಯೊ ನೀರು ತಡದು ನಿಲ್ಲಸ್ತಾನ. ಬ್ಯಾಸಿಗಿ ಬೆಳಿಗೆ ನೀರು ಕೇಳೊ ಮಂಜಪ್ಪ ಮಳೆಗಾಲದಾಗ ನನ್ನ ಗದ್ದಿ ತಲಿಮ್ಯಾಗ ನೀರು ಬಿಡಬ್ಯಾಡ ಅಂತಾನ, ಇದ ಸಮಸ್ಯೆ ಆಗಿರೋದು. ಇವರದೂ ಒಂಥರಾ ಕಾವೇರಿ ನದಿ ನೀರಿನ ಸಮಸ್ಯಾ ಆದಂಗ ಆಗೇದ. ಹ್ಯಾಂಗೂ ಮುಂಗಾರು ಸುರುವಾಗೋ ಲಕ್ಷಣ ಅದ, ಮಳಿ ಅದ್ರ ತತ್ಕಾಲಕ್ಕ ಇವರ ಸಮಸ್ಯೆ ಬಗಿಹರಿ ಬಹುದು. ರಫಿಕ್ ನ ಕಾರು ಬಂತು ನೀವು ಹೋಗಿ ಸರ್ ' ಎಂದರು ಗಂಗಾಧರ.
ಮಂಜಪ್ಚ ಗೌಡರು ಹೊರಗೆ ಬಂದು ಕಾರಿನಲ್ಲಿ ಕುಳಿತು ' ರಫಿಕ್ ಯಾವ ರೂಟನ್ಯಾಗ ಹೋಗೋಣ ' ಎಂದರು.
' ಒಂದ್ಹತ್ತು ಕಿಲೋ ಮೀಟರು ಜಾಸ್ತ್ತಿಯಾದರೂ ಪರವಾ ಇಲ್ಲ ಮೂಗುರು ಘಾಟಿ ಮೂಲಕಾನ ಹೋಗೋಣ, ಅಂದ್ರ ಕುಮರಿಗೆ ಬೇಗ ಹೋಗಿ ಮುಟ್ಟ ಬಹುದು ' ಎಂದ ರಫಿಕ್.
' ಹಂಗಾದ್ರ ಅದ ರೂಟನ್ಯಾಗ ಹೋಗೋಣ ' ಎಂದರು ಮಂಜಪ್ಪ ಗೌಡ.
( ಮುಂದುವರಿದುದು )
Comments
ಉ: "ಅಪರಿಚಿತ"(ಕಥೆ) ಭಾಗ 5
In reply to ಉ: "ಅಪರಿಚಿತ"(ಕಥೆ) ಭಾಗ 5 by makara
ಉ: "ಅಪರಿಚಿತ"(ಕಥೆ) ಭಾಗ 5
ಉ: "ಅಪರಿಚಿತ"(ಕಥೆ) ಭಾಗ 5
In reply to ಉ: "ಅಪರಿಚಿತ"(ಕಥೆ) ಭಾಗ 5 by swara kamath
ಉ: "ಅಪರಿಚಿತ"(ಕಥೆ) ಭಾಗ 5