ಅಣುಸ್ಥಾವರಗಳ ಪರಮ ಸತ್ಯ!
ಸ್ಥಳಿಯರ ಎಲ್ಲ ಪ್ರತಿರೋಧಗಳ ನಡುವೆಯೂ ಸರಕಾರ ತಮಿಳುನಾಡಿನ ಕಂದುಂಕುಲಂನಲ್ಲಿ ಅಣುಸ್ಥಾವರ ಸ್ಥಾಪನೆಗೆ ಮುಂದಾಗಿದೆ.ಅಮೇರಿಕಾದ ಹಿತಾಸಕ್ತಿಗಳಿಗೆ ಮಣಿದಿರುವ ಸರಕಾರ ನಮಗೆ ಅಣುಶಕ್ತಿ ಅನಿವಾರ್ಯವೆಂದು ಸಾರ್ವಜನಿಕರನ್ನು ನಂಬಿಸಲು ಹರಸಾಹಸ ಮಾಡುತ್ತಿದೆ.ಅದರ ಈ ಪ್ರಯತ್ನಕ್ಕೆ ವೈಜ್ಞಾನಿಕ ಅಧ್ಯಯನದ ಗಂಧಗಾಳಿಯೂ ಇರದ ನೇತಾರರು,ಪಟ್ಟಭದ್ರ ಹಿತಾಸಕ್ತಿಯ ಅಧಿಕಾರಶಾಹಿ ವರ್ಗ ಮತ್ತು ಎಲ್ಲ ಗೊತ್ತಿದ್ದೂ ಬಾಯಿಬಿಡದ ವಿಜ್ಞಾನಿಗಳು ಕೈ ಜೋಡಿಸಿದ್ದಾರೆ.
ಸರಕಾರ ಅಣುಶಕ್ತಿಯ ಬಗ್ಗೆ ಹೇಳುವ ಸುಳ್ಳುಗಳೆಂದರೆ ಅವು ಮಿತವ್ಯಯಕಾರಿ ಮತ್ತು ಅಪಾಯರಹಿತವಾದ ಪರಿಸರ ಸ್ನೇಹಿಯಾದವೆಂದು: ಆದರಿದು ಹಸಿ ಸುಳ್ಳು!
ಒಂದು ಅಣುಸ್ಥಾವರದಿಂದ ನಾವು ಉತ್ಪಾದಿಸುವ ವಿದ್ಯುತ್ತಿಗೆ ತಗಲುವ ವೆಚ್ಚವು ಇತರೇ ಮೂಲಗಳಿಂದ( ಜಲ,ಗಾಳಿ,ಸೋಲಾರ್) ತಯಾರಿಸುವ ವಿದ್ಯುತ್ ಗಿಂತ ಶೇಕಡಾ ನಲವತ್ತರಷ್ಟು ಅಧಿಕವಾಗಿರುತ್ತದೆ. ನೀವೇ ನೋಡಿ ಯೋಜನೆಗೆ ಒಪ್ಪಿಗೆ ನೀಡಿದಾಗ ಕುಂದುಂಕುಲಂನ ಅಂದಾಜು ವೆಚ್ಚ ಇದ್ದದ್ದು ಆರು ಸಾವಿರ ಕೋಟಿ ರೂಪಾಯಿಗಳು ಆದರೀಗ ಅದರ ಅಂದಾಜುವೆಚ್ಚ ಸುಮಾರು ಇಪ್ಪತ್ತು ಸಾವಿರ ಕೋಟಿ ರೂಪಾಯಿಗಳನ್ನು ದಾಟಿದೆ. ಈ ವೆಚ್ಚದಲ್ಲಿ ಅನುಪಯುಕ್ತ ವಸ್ತುಗಳನ್ನು ಸಂಗ್ರಹಿಸಿಡುವ-ವಿಲೇವಾರಿ ಮಾಡುವವೆಚ್ಚ ಸೇರಿಲ್ಲ. ಜೊತೆಗೆಪರಿಸರದ ಮೇಲಾಗುವ ಹಾನಿಯಿಂದಾಗುವ ನಷ್ಟವನ್ನು ಸರಿದೂಗಿಸುವ ಬಗ್ಗೆ ಯಾವ ಉಲ್ಲೇಖವೂ ಇಲ್ಲ.ಆದರೂ ಅಣುಸ್ಥಾವರಗಳನ್ನು ಸ್ಥಾಪಿಸಲುಉತ್ಸುಕವಾಗಿರುವ ಕೆಲವು ಸ್ವಹಿತಾಶಕ್ತಿಗಳು ಕಡಿಮೆ ವೆಚ್ಚದಲ್ಲಿ ಹಾನಿಕಾರಕವಲ್ಲದ ತಂತ್ರಜ್ಞಾನವೆಂಬ ಘೋಷಣೆಯೊಂದಿಗೆ ಲಾಭಿ ನಡೆಸುತ್ತಿವೆ.ವಿಪರ್ಯಾಸವೆಂದರೆ ಆಣುಶಕ್ತಿಯ ಬಗ್ಗೆ ಇಷ್ಟೊಂದು ಆಶಾದಾಯಕ ಮಾತುಗಳನ್ನಾಡುವ ಅಮೇರಿಕಾದಲ್ಲಿ 1980ರಿಂದ ಇತ್ತೀಚೆಗೆ ಒಂದೇ ಒಂದು ಅಣುಸ್ಥಾವರವೂ ಸ್ಥಾಪನೆಯಾಗಿಲ್ಲ.
ಇನ್ನು ಇದು ಕಡಿಮೆ ಅಪಾಯಕಾರಿಯೆಂಬ ಮಾತುಗಳ ಬಗ್ಗೆ ನೋಡೋಣ: ವರ್ಷಗಳ ಹಿಂದಿನ ಸೋವಿಯತ್ ಒಕ್ಕೂಟದ ಚೆರ್ನೋಬಿಲ್ ದುರಂತವನ್ನು ಯಾರಾದರು ಮರೆಯಲು ಸಾದ್ಯವೇ? ಇತ್ತೀಚೆಗಿನ ಜಪಾನಿನ ಪುಕೋಶಿಮಾ ಸ್ಥಾವರದ ಉದಾಹರಣೆ ನಮ್ಮ ಕಣ್ಮುಂದೆಯೇ ಇದೆ.
ಚೆರ್ನೋಬಿಲ್ ದುರಂತವೊಂದೇ ತನ್ನ ಆಸುಪಾಸಿನ ಎಂಟು ದಶಲಕ್ಷ ಜನರನ್ನು ಅಣುವಿಕಿರಣದ ಅಪಾಯಕ್ಕೆ ಒಡ್ಡಿದೆ. ಈ ವಿಕಿರಣದ ಪ್ರಭಾವ ಸುಮಾರು ಎರಡು ಲಕ್ಷ ಚದರ ಕಿಲೋಮೀಟರ್ ವರೆಗೂ ಹರಡಿದೆ.ಅಂದಾಜು ಐವತ್ತು ಸಾವಿರ ಹೆಕ್ಟೇರಿನಷ್ಟು ಕೃಷಿಭೂಮಿ ಸರ್ವ ನಾಶವಾಗಿ ಹೋಯಿತು. ಆ ತಕ್ಷಣದಲ್ಲಿ ಐದೂವರೆ ಲಕ್ಷ ಜನರಿಗೆ ಸರಕಾರ ಪುನರ್ವಸತಿ ಕಲ್ಪಿಸ ಬೇಕಾಗಿ ಬಂತು. ಇಷ್ಟಾದರು ಇವತ್ತಿಗೂ ಅಲ್ಲಿ ಜನರು ವಿಕಿರಣದ ಅಪಾಯದಲ್ಲಿ ಸಿಲುಕಿ ಮಾನಸಿಕ ದೈಹಿಕ ಕಾಯಿಲೆಗಳಿಂದ ನರಳುತ್ತದ್ದಾರೆ.
ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಅಣುಸ್ಥಾವರವೊಂದು ದಿನಕ್ಕೆ ಮುವತ್ತು ಟನ್ ನಿರುಪಯುಕ್ತ ತ್ಯಾಜ್ಯಗಳನ್ನು ಸೃಷ್ಠಿಸುತ್ತದೆ. ಇಂತಹ ತ್ಯಾಜ್ಯಗಳನ್ನು ಸಂಗ್ರಹಿಸಿಟ್ಟು,ನಂತರ ವಿಲೇವಾರಿ ಮಾಡುವ ಸಮಯದಲ್ಲಾಗುವ ಅಪಾಯದ ಮಟ್ಟವನ್ನು ಊಹಿಸಲೂ ಸಾದ್ಯವಿಲ್ಲ.
ಅಣುಸ್ಥಾವರಗಳ ಬಗ್ಗೆ ಇಷ್ಟು ದೊಡ್ಡ ದನಿಯಲ್ಲಿ ಮಾತಾಡುವ ಅಮೇರಿಕಾದ ಬಗ್ಗೆ ನೋಡಿ:ಉತ್ತರ ಅಮೇರಿಕಾದ ಯುರೇನಿಯಂ ಗಣಿಗಾರಿಕೆಯಲ್ಲಿ ಸಕ್ರಿಯವಾಗಿದ್ದ ಜನರಲ್ಲಿ ಶೇಕಡ ಎಪ್ಪತ್ತರಷ್ಟು ಅಧಿಕ ಜನ ಶ್ವಾಸಕೋಶದ ತೊಂದರೆಗಳಿಂದ ಸಾವನ್ನಪ್ಪಿದ್ದಾರೆ. ಮನುಕುಲಕ್ಕೆ ಇಷ್ಟೊಂದು ಅಪಾಯಕಾರಿಯಾದ ಅಣುಸ್ಥಾವರಗಳನ್ನು ಭಾರತದಂತಹ ರಾಷ್ಟ್ರಗಳಿಗೆ ಮಾರಲು ಹೊರಟಿರುವ ಅಮೇರಿಕಾಕ್ಕೆ ಯಾವ ಪಾಪ ಪ್ರಜ್ಞೆಯೂ ಇಲ್ಲ. ಆದರೆ ಅಮೇರಿಕೆಯಂತಹ ಬಲಾಢ್ಯ ಬಂಡವಾಳಶಾಹಿ ಶಕ್ತಿಗಳ ಸಂತೃಪ್ತಿಗಾಗಿ ತನ್ನದೇ ಜನತೆಯನ್ನು ಸಾವಿನ ದವಡೆಗೆ ನೂಕಲು ಸಿದ್ದವಾಗಿ ನಿಂತಿರುವ ನಮ್ಮ ನೇತಾರರ ಮನಸ್ಥಿತಿಯನ್ನು ಏನೆಂದು ವರ್ಣಿಸುವುದು?
ಕು.ಸ.ಮಧುಸೂದನ್
Comments
ಉ: ಅಣುಸ್ಥಾವರಗಳ ಪರಮ ಸತ್ಯ!