ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೬: ಸ್ತೋತ್ರ - ೫ರ ವ್ಯಾಖ್ಯಾನ
ತ್ರಿಪುರ ಸುಂದರೀ ಅಷ್ಟಕಂ - ೫
ಕುಚಾಞ್ಚಿತವಿಪಞ್ಚಿಕಾಂ ಕುಟಿಲಕುಂತಲಾಲಂಕೃತಾಂ
ಕುಶೇಶಯನಿವಾಸಿನೀಂ ಕುಟಿಲಚಿತ್ತವಿದ್ವೇಷಿಣೀಮ್l
ಮದಾರುಣವಿಲೋಚನಾಂ ಮನಸಿಜಾರಿಸಂಮೋಹಿನೀಂ
ಮತಙ್ಗಮುನಿಕನ್ಯಕಾಂ ಮಧುರಭಾಷಿಣೀಮಾಶ್ರಯೇ ll೫ll
ಎದೆಗಪ್ಪಿದ ವೀಣೆಯಿಂ ಕಂಗೊಳಿಸುತಿಹ,
ಸುರಟಿಗೊಂಡ ಕೇಶದಿಂ ಅಲಂಕೃತಳಾಗಿಹ,
ಕಮಲವಾಸಿನಿ ಕುಟಿಲಜನವಿದ್ವೇಷಿಣಿಯೇ,
ಮಧುವಿನಿಮ್ ಕೆಂಪಡರಿದ ಉನ್ಮತ್ತಲೋಚನೆಯೇ,
ಮದನಾರಿಯ ಸಂಮೋಹನಗೊಳಿಪಾಕೆಯೇ,
ಮಂಜುಳ ದನಿಯಿಂ ಸಂಭಾಷಣೆಗೈವ,
ಮಾತಂಗಿಯ ಕೋರುವೆನಾಶ್ರಯವ.
ಮತಂಗಮುನಿಕನ್ಯಕಾಂ (ಮಾತಂಗಿ) - ಮತಂಗ ಋಷಿಯು ಒಬ್ಬಶ್ರೇಷ್ಠ ಸಂಗೀತ ವಿದ್ವಾಂಸನಾಗಿದ್ದನು. ಅವನ ಪ್ರಾರ್ಥನೆಗೆ ಓಗೊಟ್ಟು ತ್ರಿಪುರಸುಂದರಿ ದೇವಿಯು ಅವನ ಮಗಳಾಗಿ ಹುಟ್ಟಿದ್ದರಿಂದ ಅವಳಿಗೆ ಮಾತಂಗಿ ಎನ್ನುವ ಹೆಸರು ಬಂದಿತು.
ಮಂಜುಳ ದನಿಯಿಂ ಸಂಭಾಷಣೆಗೈವ - ಪರಮಾನಂದವು ದೇವಿಯ ಸ್ವಭಾವವಾಗಿರುವುದರಿಂದ ಸಹಜವಾಗಿಯೇ ಆಕೆಯ ದನಿಯು ಮೃದು, ಮಧುರ ಮತ್ತು ಇಂಪಾಗಿರುತ್ತದೆ. ಆದ್ದರಿಂದ ಅವಳನ್ನು 'ಕಲಾಲಾಪ' (ಲಲಿತಾ ತ್ರಿಶತಿ ನಾಮಾವಳಿ - ೧೫೬) ಕರೆಯಲಾಗಿದೆ. ಇದರ ಅರ್ಥವನ್ನು ನಿಷ್ಪತ್ತಿಗೊಳಿಸುತ್ತಾ ಆದಿ ಶಂಕರರು ಹೀಗೆ ಬರೆಯುತ್ತಾರೆ - ಕಲಾ ಎಂದರೆ ಉದ್ದೇಶಪೂರ್ವಕವಾದದ್ದು ಮತ್ತು ಅವರ್ಣನೀಯವಾದ ಮಧುರತೆಯನ್ನು ಹೊಂದಿದ್ದು; ಆಲಾಪವೆಂದರೆ ಸಂಭಾಷಣೆ. ಈ ಹೇಳಿಕೆಯ ಪ್ರಕಾರ, "ಅವ್ಯಕ್ತ ಭಾರತೀತಥಾ" - ಅಂದರೆ ಅತ್ಯಂತ ಮಧುರವಾಗಿ ಮಾತನಾಡುವುದು ಮಹಾತ್ಮರ ಗುಣ/ಹೆಗ್ಗುರುತು.
ಎದೆಗಪ್ಪಿದ ವೀಣೆಯಿಂ ಕಂಗೊಳಿಸುತಿಹ - ಸಂಗೀತವು ಎಲ್ಲರನ್ನೂ ಮಂತ್ರಮುಗ್ದರನ್ನಾಗಿಸುವ ಶಕ್ತಿಯನ್ನು ಹೊಂದಿದೆ. ಲಾಂಗ್ಫೆಲೋ ಹೇಳುವಂತೆ, "ಸಂಗೀತವು ಮಾನವಾವಳಿಯ ವಿಶ್ವಮಾನ್ಯ ಭಾಷೆ" (Music is the universal language of Mankind - Longfellow). ದೇವಿಯು ವಿಶ್ವದಲ್ಲಿ ಸಾಮರಸ್ಯವನ್ನು ಉಂಟುಮಾಡುವ ದ್ಯೋತಕವೇ ವೀಣೆಯ ಸಾಂಕೇತಿಕ ಅರ್ಥ. ಅವಳು ರಾಜಮಾತಂಗಿಯ ರೂಪದಲ್ಲಿ ವೀಣೆಯನ್ನು ನುಡಿಸುತ್ತಾಳೆ.
ಸುರಟಿಗೊಂಡ ಕೇಶದಿಂ ಅಲಂಕೃತಳಾಗಿಹ (ಸುರುಳಿಯಾದ/ವಕ್ರವಾಗಿರುವ ಕೂದಲುಗಳಿಂದ ಕಂಗೊಳಿಸುತ್ತಿರುವ) - ಕೂದಲಿನ ಬಣ್ಣ ಮಾಸುವುದು/ಬಿಳಿಯಾಗುವುದು ಅಥವಾ ಉದರುವುದು ಮುಪ್ಪಾಗುವಿಕೆಯ ಸಂಕೇತವಾಗಿದೆ. ವಿಶ್ವದ ಸಮಸ್ತ ಶಕ್ತಿಯ ಆಗರವಾಗಿರುವ ಆದಿಪರಾಶಕ್ತಿಯಾದರೋ 'ನಿತ್ಯ ಯೌವನವತಿ'ಯಾಗಿದ್ದು, ಮತ್ತು ಎಲ್ಲಾ ವಿಧವಾದ ವಯೋಸಹಜ ವಿಕಾರಕ್ಕೊಳಗಾಗದವಳು -'ವಯೋವಸ್ಥಾವಿವರ್ಜಿತಾ', ಅಂದರೆ ವೃದ್ಧತ್ವವಿಲ್ಲದವಳು ಅಥವಾ ಮುಪ್ಪಿಲ್ಲದವಳು. ಈ ವಿಶ್ವದ ಒಟ್ಟು ಶಕ್ತಿಯು ಯಾವಾಗಲೂ ನಿರ್ಧಿಷ್ಟ ಪ್ರಮಾಣದಲ್ಲಿದ್ದು; ಅದು ಯಾವುದೇ ಸಮಯದಲ್ಲಿ ಹೆಚ್ಚಿಗೆಯಾಗುವುದಾಗಲಿ ಕಡಿಮೆಯಾಗುವುದಾಗಲಿ ಆಗುವುದಿಲ್ಲ.
ಕಮಲವಾಸಿನಿ - ೧) ಸಾಧಕರಿಗೆ ಕಮಲವೆಂದರೆ ದೇವಿಯ ಆವಾಸಸ್ಥಾನವಾಗಿರುವ ಹೃದಯ. ಗೀತೆಯಲ್ಲಿ ಹೀಗೆ ಹೇಳಲ್ಪಟ್ಟಿದೆ - "ಈಶ್ವರನು ಎಲ್ಲಾ ಜೀವಿಗಳ ಹೃದಯದಲ್ಲಿ ನಿವಸಿಸುತ್ತಾನೆ, ಓ ಅರ್ಜುನನೆ" (ಈಶ್ವರಃ ಸರ್ವಭೂತಾನಾಂ ಹೃದಯೇಷ್ಯರ್ಜುನ ತಿಷ್ಟತಿ, ೧೮.೬೧). ರಮಣ ಮಹರ್ಷಿಗಳು ಹೀಗೆ ವಿವರಿಸುತ್ತಾರೆ, "ಅದು ಆತ್ಮದ ಕೇಂದ್ರವಾಗಿದೆ; ಅಂದರೆ ಆತ್ಮದ ಭೌತಿಕ ಕೇಂದ್ರವಾಗಿದೆ" (ರಮಣ ಮಹರ್ಷಿಗಳೊಡನೆ ಸಂಭಾಷಣೆ, ೧೯೬೮, ಪುಟ ೪೬, ಆಂಗ್ಲ ಮೂಲ - Talks with Ramana Maharshi, 1968, Page 46). ಅದು ಬೈಬಲ್ನಲ್ಲಿ ಹೇಳಿರುವಂತೆ, "ಸ್ವರ್ಗದ ಸಾಮ್ರಾಜ್ಯದಲ್ಲಿ ತಂದೆಯು ನಿವಸಿಸುವ ಸ್ಥಾನವಾಗಿದೆ" (The Biblical Kingdom of Heaven where the father dwells).
೨) ಕಮಲವೆಂದರೆ ತ್ರಿಪುರ ಸುಂದರಿದೇವಿಯ ಆವಾಸಸ್ಥಾನವಾಗಿರುವ 'ಸಹಸ್ರಾರಚಕ್ರ' (ಸಾವಿರ ದಳದ ಪದ್ಮ) ಮತ್ತು ದೇವಿಯು ತ್ರಿಪುರ ಭೈರವಿಯ ರೂಪದಲ್ಲಿ ವಾಸಿಸುವ 'ಮೂಲಾಧಾರ ಚಕ್ರ' (ನಾಲ್ಕು ದಳದ ಪದ್ಮ) ವಾಗಿದೆ. ಯೋಗ ಪದ್ಧತಿಯಲ್ಲಿ ದೇವಿಯು ಯಾತ್ರೆಗೈಯುವ ಷಟ್ಚಕ್ರ(ಆರು ಚಕ್ರ)ಗಳನ್ನೂ ಕಮಲಗಳೆಂದೇ ಕರೆಯಲಾಗಿದೆ.
೩) "ಕಮಲವಾಸಿನಿ" ಎಂಬ ಪ್ರಸಿದ್ಧ ನುಡಿಗಟ್ಟು ಅಥವಾ ಸೂಕ್ತಿಯು ಲಕ್ಷ್ಮಿಯನ್ನು ಕುರಿತಾಗಿ ಪ್ರಚಲಿತವಾಗಿದೆ. ಲಕ್ಷ್ಮಿಯು ಐಶ್ವರ್ಯದ ಅಧಿದೇವತೆಯಾಗಿದ್ದು, 'ಆದಿ ಪರಾಶಕ್ತಿ'ಯ ಹಲವಾರು ಅವತಾರಗಳಲ್ಲಿ/ರೂಪಾಂತರಗಳಲ್ಲಿ ಒಂದೆನಿಸಿದ್ದಾಳೆ. ಈ ಕಾರಣದಿಂದಾಗಿಯೇ ದೇವಿಯನ್ನು ಲಕ್ಷ್ಮಿಯ ಒಂದು ಬಿರುದಾದ 'ರಮಾ' ಎನ್ನುವುದರಿಂದ (ಲಲಿತಾ ಸಹಸ್ರನಾಮ ನಾಮಾವಳಿ ೩೧೩ರಲ್ಲಿ ) ಕರೆಯಲಾಗಿದೆ.
೪) ಸ್ಕಂದ ಪುರಾಣದ ಪ್ರಕಾರ, ದೇವಿಯು ಕಮಲದಲ್ಲಿ ಹುಟ್ಟಿದ ಕಥೆಯ ಎರಡು ರೂಪಾಂತರಗಳು ನಮಗೆ ಸಿಗುತ್ತವೆ.
ಅ) ದಕ್ಷನಿಗೆ, ದೇವಿಯು ಪುತ್ರಳಾಗಿ ಜನಿಸುತ್ತಾಳೆಂದು ಶಿವನು ವರವಿತ್ತಿದ್ದನಂತೆ. ಆ ವರವನ್ನು ಈಡೇರಿಸುವುದಕ್ಕಾಗಿ ದೇವಿಯು ಯಮುನಾ ತೀರಕ್ಕೆ ಬಂದು, ಒಂದು ಶಂಖದ ರೂಪವನ್ನು ತಾಳಿ, ಯಮುನಾ ನದಿಯಲ್ಲಿ ಒಂದು ಕಮಲದಲ್ಲಿ ನಿವಾಸವನ್ನೇರ್ಪಡಿಸಿಕೊಂಡು ದೀರ್ಘ ತಪಸ್ಸನ್ನು ಕೈಗೊಂಡಳು. ಅನತಿ ಕಾಲದಲ್ಲಿ, ದಕ್ಷನು ಸಂಧ್ಯಾವಂದನೆಗೆಂದು ಅಲ್ಲಿಗೆ ಬಂದನು. ಆ ಶಂಖದ ಸೌಂದರ್ಯಕ್ಕೆ ಮಾರು ಹೋಗಿ ದಕ್ಷನು ಆ ಶಂಖವನ್ನು ಕೈಯ್ಯಲ್ಲಿ ತೆಗೆದುಕೊಂಡನು, ಅವನು ಹಾಗೆ ತೆಗೆದುಕೊಂಡದ್ದೇ ತಡ ಆ ಶಂಖವು ಒಂದು ಸುಂದರ ಹೆಣ್ಣು ಶಿಶುವಾಗಿ ರೂಪಾಂತರ ಹೊಂದಿತು. ದಕ್ಷನು ಅತ್ಯಾನಂದದಿಂದ ಆ ಮಗುವನ್ನು ತನ್ನ ಅರಮನೆಗೆ ಒಯ್ದನು.
ಬ) ದಕ್ಷನು ಶಿವದ್ವೇಷಿಯಾಗಿ ಮಾರ್ಪಟ್ಟದ್ದರಿಂದ ತನ್ನ ತಂದೆಯಾದ ದಕ್ಷನಿಂದ ಪಡೆದ ದೇಹವನ್ನು ದೇವಿಯು ಅವಸಾನಗೊಳಿಸಲು ಬಯಸಿದಳು. ಇದಕ್ಕೆ ಅವಳಿಗೆ ಶಿವನ ಅಪ್ಪಣೆಯೂ ದೊರೆಯಿತು. ಅವಳ ಯೋಜನೆಯಂತೆ ಅವಳು ಭೂಮಿಗೆ ಇಳಿದು 'ಪದ್ಮ' ಎನ್ನುವ ಸರೋವರದ ಬಳಿಗೆ ಬಂದು, ಶಿಶುವಿನ ರೂಪವನ್ನು ತಾಳಿ; ಕಮಲವೊಂದರ ಮಧ್ಯದಲ್ಲಿ ಆ ಸರೋವರದಲ್ಲಿ ವಾಸಿಸಲು ತೊಡಗಿದಳು. ಅಲ್ಲಿಯೇ ಕಠಿಣ ತಪಸ್ಸನ್ನಾಚರಿಸುತ್ತಿದ್ದ ಹಿಮವಂತನು ಆಕಸ್ಮಿಕವಾಗಿ ಅಲ್ಲಿಗೆ ಬಂದಾಗ ಆ ಶಿಶುವನ್ನು ನೋಡಿ, ಸಂತೋಷಗೊಂಡು ಅದನ್ನು ತನ್ನ ಮನೆಗೆ ತೆಗೆದುಕೊಂಡು ಹೋದನು.
ಕುಟಿಲಜನವಿದ್ವೇಷಿಣಿಯೇ - (ಇದನ್ನು ಈ ರೀತಿಯಾಗಿಯೂ ಅರ್ಥೈಸಬಹುದು. ತನ್ನ ಕೇಶಗಳು ವಕ್ರವಾಗಿರುವಂತೆ ಅವಳು ಕುಜನರೆಡೆಗೆ ತನ್ನ ಬಾಯನ್ನು ವಕ್ರವಾಗಿ ಮಾಡಿಕೊಂಡಿರುವಳು, ಅಂದರೆ ಸಿಟ್ಟು ತೋರುವಳು). ದೇವಿಯು ದುಷ್ಟ ಮನಸ್ಸಿನ, ಅಪ್ರಾಮಣಿಕ ತರಹದ ವ್ಯಕ್ತಿಗಳಿಗೆ ಅಲಭ್ಯಳು. "ಯಾರಲ್ಲಿ ವಕ್ರಬುದ್ಧಿಯಿಲ್ಲವೋ, ಸುಳ್ಳು ಹೇಳುವ ಗುಣವಿಲ್ಲವೋ, ಕಪಟ ವೇಷದಾರಿಗಳಲ್ಲವೋ ಅಂತಹ ನಿಷ್ಕಳಂಕಿತರಿಗೆ ಬ್ರಹ್ಮಲೋಕವು ಮೀಸಲು" ಎಂದು ಶ್ರುತಿಗಳು ಸಾರುತ್ತವೆ. (ತೇಷಾಮಾಸೌ ವಿರಜೋ ಬ್ರಹ್ಮಲೋಕೋ ನ ಏಷು ಜಿಹ್ಮಾಮಂತ್ರಮ್ ನ ಮಾಯಾ ಚೇತಿ - ಪ್ರಶ್ನ ಉಪನಿಷತ್ತು). "ಅದು (ಆತ್ಮ ಸಾಕ್ಷಾತ್ಕಾರವು) ಸತ್ಯದಿಂದ ಲಭ್ಯವಾಗುತ್ತದೆ" (ಸತ್ಯೇನ ಲಭ್ಯಃ, ಮುಂಡಕ ಉಪನಿಷತ್ತು, ೩.೧.೫). ಆತ್ಮಸಾಕ್ಷಾತ್ಕಾರಕ್ಕೆ ಇರುವ ಮಾರ್ಗವೆಂದರೆ ನೈತಿಕ ಶುದ್ಧತೆ. ಇದನ್ನು ಹೋಲಿಸಿ:
"ಧನ್ಯರವರು ಯಾರು ಹೃದಯದಲಿಶುದ್ಧರೋ, ಅವರಿಗೆ ದೇವನದರ್ಶನವಾಗುವುದು" ಬೈಬಲ್, ಸಂತ ಮ್ಯಾಥಿವ್ ೫:೮ ("Blessed are the pure in heart, they shall see God". The Bible, St. Mathew 5:8).
ದುಷ್ಟರಿಗೆ ಸಾಮಾಜಿಕ ಸಾಮರಸ್ಯವನ್ನು ಹಾಳು ಮಾಡಿ ಸಮಾಜದ ಸುವ್ಯವಸ್ಥೆಯನ್ನು ಹಾಳು ಮಾಡುವ ಚಾಳಿ ಇರುತ್ತದೆ. ಯಾವಾಗ ಇಂಥಹ ರಾಕ್ಷಸರ ಕೈಮೇಲಾಗುತ್ತದೆಯೋ ಆಗ ದೇವಿಯು ಅವತಾರವೆತ್ತಿ ಅವರ ಸಂಹಾರ ಮಾಡುತ್ತಾಳೆ. ಇದನ್ನೂ ಕೂಡಾ ಗಮನಿಸಿ:
ಶಿಷ್ಟರ ರಕ್ಷಣೆಗಾಗಿ, ದುಷ್ಟರ ವಿನಾಶಕ್ಕಾಗಿ ಮತ್ತು ಧರ್ಮವನ್ನು ಸ್ಥಾಪನೆ ಮಾಡುವುದಕ್ಕಾಗಿ ನಾನು ಪ್ರತಿಯುಗದಲ್ಲಿಯೂ ಜನ್ಮವೆತ್ತುತ್ತೇನೆ. (ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ, ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ. ಭಗವದ್ಗೀತೆ, ಅಧ್ಯಾಯ ೪, ಶ್ಲೋಕ ೮).
ಮದನಾರಿಯ*ಸಂಮೋಹನಗೊಳಿಪಾಕೆಯೇ - ಇಲ್ಲಿ ಪ್ರಾಸಂಗಿಕವಾಗಿ, ದೇವತೆಗಳ ರಾಜನಾದ ಇಂದ್ರನ ಪ್ರಚೋದನೆಯಿಂದ ಬಯಕೆಗಳ ದೇವತೆಯಾದ ಕಾಮನು, ಶಿವನು ಪಾರ್ವತಿಯೊಡನೆ ಮೋಹಗೊಂಡು ಅವರಿಬ್ಬರ ಸಮಾಗಮದಿಂದ ಅವರಿಗೆ ತಾರಕಾಸುರನನ್ನು ಸಂಹರಿಸುವ ಸಂತಾನವು ಉಂಟಾಗಲಿ ಎನ್ನುವ ಉದ್ದೇಶದಿಂದ ಹೂಡಿದ ಮದನ ಬಾಣಕ್ಕೆ ಕೋಪಗೊಂಡ ಶಿವನು ತನ್ನ ಮೂರನೆಯ ಕಣ್ಣಾದ ವಿವೇಕದ ಕಣ್ಣಿನ್ನು ತೆರೆದು, ನೋಟಮಾತ್ರದಿಂದಲೇ ಅವನನ್ನು ಸುಟ್ಟು ಬೂದಿ ಮಾಡುತ್ತಾನೆ. ಸ್ವತಃ ಆ ಶಿವನೇ ಮುಂದೆ ಗಿರಿಜೆಯೊಡನೆ ವೈವಾಹಿಕ ಮೋಹ ಬಂಧನಕ್ಕೊಳಗಾಗುತ್ತಾನೆ!
(*ಮದನ+ಅರಿ=ಮದನಾರಿ ಅಂದರೆ ಮದನನ ಶತ್ರುವಾದ ಶಿವನು)
'ಮನಸಿಜ' ಎಂದರೆ ಮನಸ್ಸಿನಿಂದ ಉತ್ಪನ್ನವಾದವನು ಎಂದು ಅರ್ಥ. ಇದು ಪ್ರೇಮದ ಅಧಿದೇವತೆಯಾದ ಕಾಮನ ಒಂದು ಬಿರುದಾಗಿದ್ದು,ಅವನು ಸೃಷ್ಟಿಕರ್ತ ಬ್ರಹ್ಮನ ಮನಸ್ಸಿನಿಂದ ಉದ್ಭವಿಸಿದವನಾದುದರಿಂದ ಅವನಿಗೆ ಆ ಹೆಸರು ಬರಲು ಕಾರಣವಾಗಿದೆ.
ಕಾಮನ ಹುಟ್ಟಿನ ಮೂಲವನ್ನು ಶಿವಪುರಾಣದ ರುದ್ರಸಂಹಿತೆಯಲ್ಲಿ ಹೇಳಲಾಗಿದೆ. ಬ್ರಹ್ಮನು ಮರೀಚಿ, ಅತ್ರಿ, ಪುಲಹ, ಪುಲಸ್ತ್ಯ, ಅಂಗೀರಸ, ಕ್ರತು, ವಶಿಷ್ಠ, ನಾರದ, ದಕ್ಷ, ಮತ್ತು ಭೃಗು ಎನ್ನುವ ಹತ್ತು ಜನ ದೈವ ಸಮಾನರಾದ ಮಾನಸ ಪುತ್ರರನ್ನು ಸೃಷ್ಟಿಸಿದ ನಂತರ, ಅವನ ಮನಸ್ಸಿನಿಂದ ಲಾವಣ್ಯವತಿಯಾದ ಸ್ತ್ರೀಯೊಬ್ಬಳ ಜನನವಾಯಿತು. ಹಲವಾರು ಹೆಸರುಗಳಿಂದ ಕರೆಯಲ್ಪಡುವ ಅವಳಿಗೆ ಸಂಧ್ಯಾ ಎನ್ನುವುದೂ ಒಂದು ಹೆಸರು. ಅವಳನ್ನು ನೋಡಿದಾಕ್ಷಣ ಬ್ರಹ್ಮ ಮೊದಲಾದ ದೇವತೆಗಳು ಅವಳ ಸೌಂದರ್ಯಕ್ಕೆ ಭಾವೋದ್ರೇಕಗೊಂಡು ತಮ್ಮಷ್ಟಕ್ಕೆ ತಾವೇ ಎದ್ದುನಿಂತರು. ಆಗ ಬ್ರಹ್ಮನ ದೃಷ್ಟಿಗೆ ಅವನ ಮನಸ್ಸಿನಿಂದಲೇ ಜನಿಸಿದ ಇನ್ನೊಬ್ಬ ಸರ್ವಾಂಗಸುಂದರ ಮತ್ತು ಸ್ಪುರದ್ರೂಪಿಯಾದ ಯುವಕನು ಗೋಚರಿಸಿದನು. ಅವನು ಮತ್ತ್ಯಾರೂ ಅಲ್ಲದೆ ಸೌಂದರ್ಯದ ಅಧಿದೇವತೆಯಾದ ಕಾಮನಾಗಿದ್ದನು. ಕಾಮನ ಇರುವಿಕೆಯೊಂದರಿಂದಲೇ ಬ್ರಹ್ಮನ ಹೃದಯದಲ್ಲಿ ಸಂಧ್ಯಳ ಬಗ್ಗೆ ಪ್ರೀತಿಯುಂಟಾಗಲು ಸಾಕಾಗಿತ್ತು. ಹಾಗಾಗಿ ಕಾಮನು ತನ್ನ ಕರ್ತವ್ಯವೇನೆಂದು ಕೇಳಲಾಗಿ, ಬ್ರಹ್ಮನು ಅವನಿಗೆ ಜನರ ಹೃದಯದಲ್ಲಿ ಕಾಮವನ್ನು ಹುಟ್ಟುಹಾಕುವುದೇ ಅವನ ಕೆಲಸವನ್ನಾಗಿ ವಹಿಸಿದನು. ಆಗ ಕಾಮನು ತಾನು ತನ್ನ ಕರ್ತವ್ಯವನ್ನು ಎಷ್ಟರ ಮಟ್ಟಿಗೆ ನಿರ್ವಹಿಸಬಲ್ಲೆ ಎನ್ನುವುದನ್ನು ಪರೀಕ್ಷಿಸಿಕೊಳ್ಳುವುದಕ್ಕೋಸ್ಕರ ತನ್ನ ಕುಸುಮಬಾಣವನ್ನು ತನ್ನ ತಂದೆಯಾದ ಬ್ರಹ್ಮನೆಡೆಗೇ ಪ್ರಯೋಗಿಸಿದನು. ಆಗ ನೋಡಿ, ಸ್ವತಃ ಆ ಬ್ರಹ್ಮನಿಗೇ ತನ್ನನ್ನು ಹತೋಟಿಯಲ್ಲಿಟ್ಟುಕೊಳ್ಳಲಾಗಲಿಲ್ಲ! ಅಂದಿನಿಂದ ಕಾಮನು ಜನರ ಹೃದಯಗಳನ್ನು ಪ್ರೇಮಜ್ವಾಲೆಯಿಂದ ಬೇಯುವಂತೆ ಮಾಡುತ್ತಿದ್ದಾನೆ.
ಕಾಮನೆಂದರೆ ಆಸೆ ಮತ್ತು ಪ್ರೇಮ. ಪ್ರೇಮದ ಅಧಿದೇವತೆಯಾದ ಕಾಮನು ವಾಸ್ತವದಲ್ಲಿ ಆಸೆಯ ಮೂರ್ತರೂಪವಷ್ಟೆ. ಅವನು ಕಬ್ಬಿನ ಜಲ್ಲೆಯ ಧನುಸ್ಸನ್ನು ಧರಿಸಿದ್ದಾನೆನ್ನುವುದು ಮನಸ್ಸನ್ನು ಬಿಂಬಿಸಿದರೆ, ಅವನ ಬತ್ತಳಿಕೆಯಲ್ಲಿರುವ ಐದು ಪುಷ್ಪ ಬಾಣಗಳು, ನಮ್ಮ ಪಂಚೇಂದ್ರಿಯಗಳ ಪ್ರತೀಕವಾಗಿವೆ. ಪಂಚೇಂದ್ರಿಯಗಳ ಮೂಲಕ ನಮ್ಮ ಮನಸ್ಸು ವಿಷಯ ವಸ್ತುಗಳೊಂದಿಗೆ ಒಡನಾಟ ಹೊಂದಿದಾಗ ನಮಗೆ ಬಾಹ್ಯ ಪ್ರಪಂಚದ ಅರಿವುಂಟಾಗುವುದು.
ಮನಸ್ಸನ್ನು ಆ ರೀತಿಯಿಂದ ಕರೆದಿರುವ ಉದ್ದೇಶವೇನೆಂದರೆ ಅದರ ಕೆಲಸ 'ಮನನ' ಮಾಡುವುದು ಅಥವಾ ಆಲೋಚಿಸುವುದು. ಕಾಮನ ಹುಟ್ಟನ್ನು ಬ್ರಹ್ಮನ ಮನಸ್ಸಿನೊಂದಿಗೆ ತಳಕು ಹಾಕಿರುವುದು ಎಲ್ಲಾ ಕಾಮನೆಗಳು ಮನಸ್ಸಿನಿಂದಲೇ ಉದ್ಭವವಾಗುತ್ತವೆ ಎನ್ನುವುದರ ದ್ಯೋತಕ.
ಅದ್ವೈತ ಸಿದ್ಧಾಂತದ ಪ್ರಕಾರ, ಈ ಸಂಪೂರ್ಣ ಪ್ರಪಂಚವು ಮನಸ್ಸಿನ ವಿವರ್ತವಲ್ಲದೆ (ಹೊರಹೊಮ್ಮುವಿಕೆಯಲ್ಲದೆ) ಮತ್ತೇನೂ ಅಲ್ಲ. ಒಬ್ಬನು ಕನಸಿನಲ್ಲಿ ಹಲವಾರು ಅನುಭವಗಳನ್ನು ಹೊಂದುತ್ತಾನೆ, ತಾನು ಕನಸು ಕಾಣುತ್ತಿರುವವರೆಗೆ ಆ ಕನಸಿನ ಪ್ರಪಂಚದಲ್ಲಿ ನಡೆಯುವ ಪ್ರತಿಯೊಂದನ್ನೂ ಅವನು ನಿಜವೆಂದು ನಂಬುತ್ತಾನೆ; ಅದೇ ರೀತಿ ಮಾಯೆಗೆ ಒಳಗಾಗಿರುವ ವ್ಯಕ್ತಿಯು ಈ ಮಾಯಾ ಪ್ರಪಂಚದ ಎಲ್ಲಾ ಆಗು ಹೋಗುಗಳನ್ನು ಮಾಯೆಯ ವಶಕ್ಕೊಳಗಾಗಿ ನಿಜವೆಂದು ತಿಳಿಯುತ್ತಾನೆ; ಯಾವಾಗ ಕನಸುಗಾರನು ತನ್ನ ಕನಸಿನ ಸ್ಥಿತಿಯಿಂದ ಎಚ್ಚೆತ್ತುಕೊಳ್ಳುತ್ತಾನೋ ಆವಾಗ ತಾನು ಎಚ್ಚರದ ಸ್ಥಿತಿಯಲ್ಲಿರುವಾಗಿನಅನುಭವಗಳೊಂದಿಗೆ ಹೋಲಿಸಿಕೊಂಡು, ಅಲ್ಲಿಯವರೆಗೆ ತಾನು ಕನಸಿನಲೋಕದಲ್ಲಿ ಕಂಡದ್ದೆಲ್ಲಾ ನಿಜವಲ್ಲವೆಂದು ಕಂಡುಕೊಳ್ಳುತ್ತಾನೆ; ಅದೇ ರೀತಿ ಮಾಯೆಯ ವಶದಲ್ಲಿರುವವನು ಆ ಸ್ಥಿತಿಯಿಂದ ಎಚ್ಚರಗೊಂಡಾಗ, ಅಂದರೆ ಮಾಯಾ ಪ್ರಪಂಚದಿಂದ ಬ್ರಹ್ಮಸಾಕ್ಷಾತ್ಕಾರದ ಸ್ಥಿತಿಗೆ ತಲುಪಿದಾಗ, ಅಂತಿಮ ಸತ್ಯವಾದ ಪರಬ್ರಹ್ಮನೊಂದಿಗೆ ಹೋಲಿಸಿದಾಗ ಅವನಿಗೆ ತಾನು ಮಾಯಾ ಪ್ರಪಂಚದಲ್ಲಿ ಅನುಭವಿಸಿದ್ದೆಲ್ಲಾ ಅಸತ್ಯವೆಂದು ಭಾಸವಾಗುತ್ತದೆ.
'ಮನೋಮಯ ಕೋಶ'ದಲ್ಲಿ (ಮಾನಸಿಕ ಕವಚದಲ್ಲಿ) ಮನಸ್ಸು ಓಲಾಡುತ್ತಿರುವಾಗ ಈ ಕನಸಿನ ಲೋಕವು ಅದರಿಂದ ಹೊರಹೊಮ್ಮುತ್ತದೆ. ಅದೇ ರೀತಿ ಮನಸ್ಸು 'ಅನ್ನಮಯ ಕೋಶ' (ಭೌತಿಕ ಕಾಯ)ದಲ್ಲಿ ವಿಹರಿಸುತ್ತಿರುವಾಗ ಅದು ವಸ್ತು ಪ್ರಪಂಚವನ್ನು ಹೊರಹೊಮ್ಮಿಸುತ್ತದೆ. ಆದ್ದರಿಂದ ಇದರಲ್ಲಿ ಅರ್ಥವಾಗುವುದೇನೆಂದರೆ ನಾವು ಅನುಭವಿಸುವ ಪ್ರತಿಯೊಂದು ವಸ್ತುವೂ ಮನಸಿನ ಉತ್ಪನ್ನವಾಗಿದೆ ಅಥವಾ ಮನೋಜನ್ಯವಾಗಿದೆ ಆದ್ದರಿಂದ ಅದು 'ಮನಸಿಜ'. ಪ್ರೇಮದ ಅಧಿದೇವತೆಯಾಗಿರುವ ಕಾಮದೇವನು ಈ ಮನೋವಿಕಾರಗಳ ಮೂರ್ತರೂಪವಷ್ಟೇ.
ಗಮನಿಸಿ - "ಎಲ್ಲಾ ಚರಾಚರ ವಸ್ತುಗಳು ಕೇವಲ ಮನಸಿನ ವಿದ್ಯಮಾನಗಳಾಗಿವೆ" (ಮನೋದೃಶ್ಯಮಿದಮ್ ದ್ವೈತಮ್ ಯತ್ಕಿಂಚಿತ್ ಸಚರಾಚರಂ - ಗೌಡಪಾದ ಕಾರಿಕಾ, ೩.೩೧)
ವಿ.ಸೂ.: ಈ ಕಂತಿನ ಶ್ಲೋಕ - ೫ರ ಭಾಗವು ’ತ್ರಿಪುರ ಸುಂದರೀ ಅಷ್ಟಕಮ್"- ಪ್ರಕಟಣೆ(೧೯೮೬): ಅಧ್ಯಕ್ಷರು, ಶ್ರೀ ರಾಮಕೃಷ್ಣ ಮಠ, ಮೈಲಾಪುರ್, ಮದ್ರಾಸ್ - ೬೦೦ ೦೦೪, ಪುಸ್ತಕದ ೩೫.೬ರಿಂದ ೪೪ನೇ ಪುಟದ ಅನುವಾದವಾಗಿದೆ. ಮೂಲ ಇಂಗ್ಲೀಷ್ ಕರ್ತೃ - ಶ್ರೀಯುತ ಎಸ್. ಕಾಮೇಶ್ವರ್, ಮುಂಬಯಿ.
ಈ ಸರಣಿಯ ಹಿಂದಿನ ಲೇಖನ "ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೫: ಸ್ತೋತ್ರ - ೪ರ ವ್ಯಾಖ್ಯಾನಕ್ಕೆ ಕೆಳಗಿನ ಕೊಂಡಿಯನ್ನು ನೋಡಿ:
http://sampada.net/blog/%E0%B2%A4%E0%B3%8D%E0%B2%B0%E0%B2%BF%E0%B2%AA%E0%B3%81%E0%B2%B0-%E0%B2%B8%E0%B3%81%E0%B2%82%E0%B2%A6%E0%B2%B0%E0%B3%80-%E0%B2%85%E0%B2%B7%E0%B3%8D%E0%B2%9F%E0%B2%95%E0%B2%AE%E0%B3%8D-%E0%B2%AD%E0%B2%BE%E0%B2%97-%E0%B3%AB-%E0%B2%B8%E0%B3%8D%E0%B2%A4%E0%B3%8B%E0%B2%A4%E0%B3%8D%E0%B2%B0-%E0%B3%AA%E0%B2%B0-%E0%B2%B5%E0%B3%8D%E0%B2%AF%E0%B2%BE%E0%B2%96%E0%B3%8D%E0%B2%AF%E0%B2%BE%E0%B2%A8/21/08/2012/38032
ಚಿತ್ರ ಕೃಪೆ: ಗೂಗಲ್, ಕೊಂಡಿ:
http://www.google.co.in/imgres?hl=en&sa=X&biw=1821&bih=832&tbm=isch&prmd=imvns&tbnid=oQ9W02w2KW2zhM:&imgrefurl=http://www.dollsofindia.com/minor-hindu-gods.htm&docid=sGuNeA5MMO0CsM&imgurl=http://www.dollsofindia.com/dollsofindiaimages/newsletter/minor-hindu-gods-part1/book-on-shiva-CQ86_a_05.jpg&w=350&h=206&ei=Caw1UMiyAYfnrAf7nYHgBg&zoom=1&iact=hc&vpx=1344&vpy=127&dur=568&hovh=164&hovw=280&tx=168&ty=138&sig=110207964646523070807&page=1&tbnh=89&tbnw=150&start=0&ndsp=64&ved=1t:429,r:12,s:0,i:106
Rating
Comments
ಉ: ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೬: ಸ್ತೋತ್ರ - ೫ರ ವ್ಯಾಖ್ಯಾನ
In reply to ಉ: ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೬: ಸ್ತೋತ್ರ - ೫ರ ವ್ಯಾಖ್ಯಾನ by Chikku123
ಉ: ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೬: ಸ್ತೋತ್ರ - ೫ರ ವ್ಯಾಖ್ಯಾನ
ಉ: ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೬: ಸ್ತೋತ್ರ - ೫ರ ವ್ಯಾಖ್ಯಾನ
In reply to ಉ: ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೬: ಸ್ತೋತ್ರ - ೫ರ ವ್ಯಾಖ್ಯಾನ by nanjunda
ಉ: ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೬: ಸ್ತೋತ್ರ - ೫ರ ವ್ಯಾಖ್ಯಾನ
ಉ: ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೬: ಸ್ತೋತ್ರ - ೫ರ ವ್ಯಾಖ್ಯಾನ
In reply to ಉ: ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೬: ಸ್ತೋತ್ರ - ೫ರ ವ್ಯಾಖ್ಯಾನ by partha1059
ಉ: ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೬: ಸ್ತೋತ್ರ - ೫ರ ವ್ಯಾಖ್ಯಾನ
ಉ: ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೬: ಸ್ತೋತ್ರ - ೫ರ ವ್ಯಾಖ್ಯಾನ