ಋಣಾನುಬಂಧ (ಭಾಗ = 1)

ಋಣಾನುಬಂಧ (ಭಾಗ = 1)

ಸಾರಥಿ ಕಲ್ಯಾಣ ಮಂಟಪದ ಎದುರು ಸಿದ್ದಾರ್ಥ್ ಮತ್ತು ಕಲ್ಯಾಣಿ ಎಂಬ ಸ್ವಾಗತ ಫಲಕ ಸೂರ್ಯನ ಬೆಳಕಿನಲ್ಲಿ ಮತ್ತಷ್ಟು ಎದ್ದು ಕಾಣುತ್ತಿತ್ತು. ಕಲ್ಯಾಣ ಮಂಟಪ ತುಂಬಿತ್ತು. ಸಿದ್ದಾರ್ಥ್ ನ ಸ್ನೇಹಿತರು ಮಂಟಪದ ಹೊರಗೆ ನಿಂತುಕೊಂಡು ಹೋಗಿ ಬರುವ ಹುಡುಗಿಯರನ್ನು ನೋಡುತ್ತಾ ಹರಟೆ ಹೊಡೆಯುತ್ತಿದ್ದರೆ ಕಲ್ಯಾಣಿಯ ಸ್ನೇಹಿತೆಯರು ತಮ್ಮ ತಮ್ಮ ಬಟ್ಟೆಗಳ ಬಗ್ಗೆ ಆಭರಣಗಳಬಗ್ಗೆ ಮೇಕಪ್ ಬಗ್ಗೆ ಹರಟುತ್ತಿದ್ದರು. ಒಳಗಡೆ ಹಾಲಿನಲ್ಲಿ ಕುಟುಂಬದವರು, ಬಂಧು ಮಿತ್ರರು ಬಹಳ ದಿನಗಳ ನಂತರ ಭೇಟಿ ಮಾಡಿದ ಖುಷಿಯಲ್ಲಿ ಕಷ್ಟ ಸುಖ ಹಂಚಿ ಕೊಳ್ಳುತ್ತಿದ್ದರು. ಸಿದ್ದಾರ್ಥ್ ಮತ್ತು ಕಲ್ಯಾಣಿಯ ಅಪ್ಪ ಅಮ್ಮ ನಗುನಗುತ್ತಾ ಹೋಗಿ ಬರುವವರನ್ನು ಮಾತಾಡಿಸುತ್ತ, ಮದುವೆಯ ಕೆಲಸದಲ್ಲಿ ನಿರತರಾಗಿದ್ದರು.


ಹಸೆಮಣೆಯ ಮೇಲೆ ಸಿದ್ದಾರ್ಥ್ ಪೇಟ ಧರಿಸಿ ಕೂತಿದ್ದಾನೆ. ಪುರೋಹಿತರು ಮಂತ್ರಘೋಶವನ್ನು ಮಾಡುತ್ತಾ ವಧುವನ್ನು ಕರೆದುಕೊಂಡು ಬನ್ನಿ ಎಂದು ಕಲ್ಯಾಣಿಯ ತಾಯಿಗೆ ಹೇಳಿದರು. ತಕ್ಷಣ ಸಿದ್ದಾರ್ಥ್ ಒಮ್ಮೆ ಮಂಟಪದ ಸುತ್ತ ಕಣ್ಣಾಡಿಸಿದಉಹೂ...ಎಲ್ಲೂ ಕಾಣಲಿಲ್ಲ. ಅಷ್ಟರಲ್ಲಿ ಕಲ್ಯಾಣಿಯ ತಾಯಿ ಕಲ್ಯಾಣಿಯನ್ನು ಕರೆದುಕೊಂಡು ಬಂದು ಸಿದ್ದಾರ್ಥ್ ಪಕ್ಕದಲ್ಲಿ ಕೂಡಿಸಿದರು. ಸಿದ್ದಾರ್ಥ್ ಹಾಗೂ ಕಲ್ಯಾಣಿ ಪರಸ್ಪರ ಕಣ್ಣೋಟವನ್ನು ನಗುವಿನಿಂದ ಬದಲಿಸಿಕೊಂಡರು. ಸಿದ್ದಾರ್ಥ್ ಮತ್ತೊಮ್ಮೆ ಮಂಟಪವನ್ನು ಅವಲೋಕಿಸಿದ. ಇಲ್ಲ ಎಲ್ಲೂ ಕಾಣಲಿಲ್ಲ. ಅಷ್ಟರಲ್ಲಿ ಸಿದ್ದಾರ್ಥ್ ಮೊಬೈಲ್ ರಿಂಗಣಿಸಿತು. ಯಾರೆಂದು ನೋಡಿದರೆ ಹೌದು ಅವಳೇ...


ಏನು ಮಾಡುವುದು ಎಂದು ಆಲೋಚಿಸುತ್ತಿದ್ದಾಗ ಕರೆ ಕಟ್ ಆಯಿತು. ಸರಿ ಆಮೇಲೆ ಮಾಡೋಣ ಎಂದುಕೊಂಡು ಮತ್ತೆ ವಾಸ್ತವಕ್ಕೆ ಬಂದ. ಮುಹೂರ್ತದ ಸಮಯ ಬಂದಾಗ ಪುರೋಹಿತರು ಗಟ್ಟಿ ಮೇಳ ಎಂದು ಸಿದ್ದಾರ್ಥನ ಕೈಯಲ್ಲಿ ಕಲ್ಯಾಣಿಯಕೊರಳಿಗೆ ಮಂಗಳ ಸೂತ್ರವನ್ನು ಕಟ್ಟಿಸಿದರು. ಎಲ್ಲರಲ್ಲೂ ಸಂಭ್ರಮ ಸಂತೋಷ ತುಂಬಿ ತುಳುಕುತ್ತಿತ್ತು. ಮದುವೆಗೆ ಬಂದವರೆಲ್ಲ ಊಟ ಮಾಡಿ ಹೊರಡುತ್ತಿದ್ದರು. ನಿಧಾನವಾಗಿ ಕುಟುಂಬದವರು, ಬಂಧು ಮಿತ್ರರು ಒಬ್ಬೊಬ್ಬರೂ ಹೊರಡುತ್ತಿದ್ದರು. ಅಷ್ಟರಲ್ಲಿ ಕಲ್ಯಾಣಿ ಹಾಗೂ ಸಿದ್ದಾರ್ಥ್ ಅವರ ಊಟ ಕೂಡ ಮುಗಿದಿತ್ತು. ಬೆಳಗಿನಿಂದ ಒಂದೇ ಸಮನೆ ಕೂತು ಕೂತು ಇಬ್ಬರಿಗೂ ಬಹಳ ಸುಸ್ತಾಗಿ ಹೋಗಿತ್ತು. ಊಟ ಆದ ಮೇಲೆ ಸ್ವಲ್ಪ ಹೊತ್ತು ವಿರಮಿಸಬೇಕೆಂದು ಸಿದ್ದಾರ್ಥ ತನ್ನ ಕೋಣೆಗೆ ಬಂದರೆ ಕಲ್ಯಾಣಿ ಅಲ್ಲೇ ತನ್ನ ಮನೆಯವರ ಜೊತೆ ಮಾತಾಡುತ್ತ ಕೂತಿದ್ದಳು.


ರೂಮಿಗೆ ಬಂದ ಸಿದ್ದಾರ್ಥ್ ಮೊಬೈಲ್ ತೆಗೆದು ಅವಳಿಗೆ ಕರೆ ಮಾಡಿದ. ಹಲೋ ಹಾಯ್ ಶಾಲು...ಯಾಕೆ ಮದುವೆಗೆ ಬರಲಿಲ್ಲ? ಎಂದು ಕೇಳುತ್ತಿದ್ದಂತೆ ಶಾಲು ಒಂದೇ ಸಮನೆ ಅಳಲು ಶುರು ಮಾಡಿದಳು. ಸಿದ್ದಾರ್ಥ್ ಗೆ ಏನು ಮಾಡಬೇಕೋ ಗೊತ್ತಾಗಲಿಲ್ಲ. ಶಾಲು ಪ್ಲೀಸ್ ಅಳಬೇಡ..ಮೊದಲು ಅಳು ನಿಲ್ಲಿಸು. ಯಾಕೆ ಅಳ್ತಾ ಇದ್ದೀಯ? ಏನಾಯ್ತು? ಬಿಡಿಸಿ ಹೇಳು. ಸಿದ್ದಾರ್ಥ್ ಏನು ಹೇಳಿದರೂ ಅದನ್ನು ಕೇಳಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಇರಲಿಲ್ಲ ಶಾಲು. ಮತ್ತೆ ಸ್ವಲ್ಪ ಸಮಾಧಾನ ಮಾಡಿದ ಮೇಲೆ ಅಳು ನಿಲ್ಲಿಸಿದಳು. ಈಗ ಹೇಳು ಶಾಲು ಯಾಕೆ ಅಳ್ತಾ ಇದ್ದೀಯ? ಮದುವೆಗೆ ಯಾಕೆ ಬರಲಿಲ್ಲ ಹೇಳು? ಅತ್ತೆ ಮಾವ ಎಲ್ಲ ಬಂದಿದ್ದಾರೆ. ನೀನೊಬ್ಬಳೆ ಬಂದಿಲ್ಲ. ನಾನು ಬೆಳಗಿನಿಂದ ನಿನ್ನನ್ನು ಎದುರು ನೋಡುತ್ತಿದ್ದೆ. ಬೆಳಿಗ್ಗೆ ನೀನು ಕರೆ ಮಾಡಿದಾಗ  ನಾನು ಹಸೆಯ ಮೇಲೆ ಕೂತಿದ್ದೆ. ಹಾಗಾಗಿ ಆಗ ಮಾಡಲು ಆಗಲಿಲ್ಲ. ಈಗಷ್ಟೇ ಊಟ ಮುಗಿಸಿಕೊಂಡು ಸ್ವಲ್ಪ ರೆಸ್ಟ್ ತೆಗೆದುಕೊಳ್ಳೋಣ ಎಂದು ನಾನು ರೂಮಿಗೆ ಬಂದೆ. ಆಗ ನಿನ್ನ ಕರೆಯ ನಿನಪಾಗೆ ಕರೆ ಮಾಡಿದೆ. ಯಾಕೆ ಅತ್ತೆ ಶಾಲು ಏನಾಯ್ತು.


ಸಿದ್ದು ನಾನು ಬಹಳ ದೊಡ್ಡ ತಪ್ಪು ಮಾಡಿಬಿಟ್ಟೆ ಕಣೋ. ನಿನ್ನಿಂದ ಒಂದು ಸತ್ಯ ಮುಚ್ಚಿಟ್ಟೆ ಕಣೋ. ಅದರ ಪರಿಣಾಮ ನನಗೆ ಈಗ ಅರಿವಾಗುತ್ತಿದೆ ಎಂದು ಮತ್ತೆ ಅಳಲು ಶುರು ಮಾಡಿದಳು. ಸಿದ್ದಾರ್ಥ್ ಗೆ ಎಲ್ಲ ಗೊಂದಲಮಯವಾಗಿತ್ತು. ಶಾಲು ಅದೇನು ಹೇಳಬೇಕೋ ದಯವಿಟ್ಟು ಬಿಡಿಸಿ ಹೇಳು. ನನಗೊಂದೂ ಅರ್ಥವಾಗುತ್ತಿಲ್ಲ.


ಸಿದ್ದು ಏನಿಲ್ಲ ಬಿಡು. ಇವತ್ತು ನಿನ್ನ ಮದುವೆಯ ದಿನ. ನೀನು ಸಂತೋಷವಾಗಿ ಇರಬೇಕಾದ ದಿನ. ಸುಮ್ಮನೆ ನಿನ್ನ ಮುಂದೆ ಅತ್ತು ನಿನ್ನ ಮೂಡ್ ಹಾಳು ಮಾಡಿದೆ. ಐ ಆಮ್ ಸಾರಿ ಕಣೋ. ನೀನು ಬಿಡುವಾದಾಗ ಫೋನ್ ಮಾಡು ಓಕೆನಾ ಬೈ. ಹೇ ಕಂಗ್ರಾಟ್ಸ್ ಕಣೋ. ಆಲ್ ದಿ ಬೆಸ್ಟ್ ಫಾರ್ ಯುವರ್ ಫ್ಯೂಚರ್. ಬೈ ಬೈ 


ಶಾಲು ಹೀಗೆ ಅರ್ಧಂಬರ್ಧ ಮಾತಾಡಿ ಬಿಟ್ಟರೆ ಹೇಗೆ? ನಾನು ಸಂತೋಷವಾಗೆ ಇದ್ದೀನಿ ಅದೇನು ಸಮಸ್ಯೆ ಎಂದು ಹೇಳು ಯಾಕೆ ಅತ್ತೆ? ಈಗ ನೀನು ಹೇಳದಿದ್ದರೆ ನಾನು ನೇರವಾಗಿ ನಿಮ್ಮ ಅಮ್ಮ ಅಪ್ಪನ ಬಳಿಯೇ ಕೇಳುತ್ತೀನಿ. ಬೇಡ ಸಿದ್ದು ದಯವಿಟ್ಟು ಅವರ ಬಳಿ ಏನೂ ಕೇಳಬೇಡ. ಹಾಗಿದ್ದರೆ ಹೇಳು ಯಾಕೆ ಅತ್ತೆ ಎಂದು.


ಸಿದ್ದು ಅದೂ ಅದೂ ಐ ಲವ್ ಯೂ ಕಣೋ..ಐ ಲವ್ ಯೂ ಸೊ ಮಚ್ ಕಣೋ...ಎಂದು ಮತ್ತೆ ಅಳಲು ಶುರು ಮಾಡಿದಳು. ಅವಳ ಮಾತು ಕೇಳಿ ಸಿದ್ದಾರ್ಥ್ ಗೆ ಒಂದು ಕ್ಷಣ ಏನಾಗುತ್ತಿದೆ ಎಂದು ಗೊತ್ತಾಗಲಿಲ್ಲ. ನಂತರ ಸುಧಾರಿಸಿಕೊಂಡು ಶಾಲು ಏನು ಹೇಳ್ತಾ ಇದ್ದೀಯ ನೀನು? ಅದನ್ನು ಹೇಳುವ ಸಮಯಾನ ಇದು? ಶಾಲು ನಿನಗೇನಾದರೂ ತಲೆ ಕೆಟ್ಟಿದೆಯ? ಮದುವೆಗೆ ಮುಂಚೆ ನಿನ್ನನ್ನು ಎಷ್ಟು ಕೇಳಿದರೂ ಆಗ ಏನೂ ಮಾತಾಡದೆ ಈಗ ಹೀಗೆ ಹೇಳುತ್ತಿದ್ದೀಯಲ್ಲ ಶಾಲು. ಛೆ ಎಂಥಹ ದೊಡ್ಡ ತಪ್ಪು ಮಾಡಿದೆ ಶಾಲು ನೀನು. ಮದುವೆಗೆ ಮುಂಚೆ ನಿನ್ನಿಂದ ನಾನು ಇದನ್ನೇ ಶಾಲು ನಾನು ನಿರೀಕ್ಷಿಸಿದ್ದು. ಆದರೆ ಈಗ...ಐ ಆಮ್ ಸಾರಿ ಶಾಲು ಈಗ ನಾನೇನೂ ಮಾಡಲು ಸಾಧ್ಯವಿಲ್ಲ.


ಬೇಡ ಸಿದ್ದು..ನನ್ನ ತಪ್ಪಿಗೆ ನಾನು ಅನುಭವಿಸುತ್ತೇನೆ. ನೀನು ಸಂತೋಷವಾಗಿದ್ದರೆ ಅದೇ ನನಗೆ ಸಾಕು. ದಯವಿಟ್ಟು ನನ್ನನ್ನು ಕ್ಷಮಿಸು ಸಿದ್ದು. ಮದುವೆಯ ದಿವಸ ನಾನು ಇದನ್ನೆಲ್ಲಾ ಮಾತಾಡಬಾರದಿತ್ತು. ಆದರೆ ಅದೇಕೋ ಗೊತ್ತಿಲ್ಲ ಸಿದ್ದು. ಇಂದು ನಿನಗೆ ಹೇಳಲೇ ಬೇಕು ಎನಿಸಿತು. ನನ್ನನ್ನು ಕ್ಷಮಿಸು ಸಿದ್ದು. ಕಲ್ಯಾಣಿಗೂ ನನ್ನ ಕಡೆಯಿಂದ ಶುಭಾಶಯಗಳನ್ನು ತಿಳಿಸಿಬಿಡು. ಬೈ ಸಿದ್ದು ಎಂದು ಕರೆ ಕಟ್ ಮಾಡಿದಳು.


ಸಿದ್ದಾರ್ಥ್ ಗೆ ಶಾಲಿನಿ ಮೇಲೆ ಮರುಕ ಹುಟ್ಟಿತ್ತು. ಛೆ ಎಂಥಹ ಕೆಲಸ ಮಾಡಿದಳು. ಇಷ್ಟು ದಿವಸ ನಾನು ಅಪೇಕ್ಷೆ ಪಟ್ಟಿದ್ದು ಅವಳನ್ನೇ ಆದರೂ ಅವಳು ಒಂದು ದಿನವಾದರೂ ಸಮ್ಮತಿಸಲಿಲ್ಲ ಈಗ ನೋಡಿದರೆ ಹೀಗೆ ಹೇಳುತ್ತಿದ್ದಾಳೆ. ಅನ್ಯಾಯವಾಗಿ ತನ್ನ ಪ್ರೀತಿಯನ್ನು ಹಾಳು ಮಾಡಿಕೊಂಡಳು ಎಂದು ಶಾಲಿನಿ ಜೊತೆ ಕಳೆದ ದಿನಗಳನ್ನು ನೆನಪಿಗೆ ಹಚ್ಚಿದ....

Rating
No votes yet

Comments