ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೭: ಸ್ತೋತ್ರ - ೬ರ ವ್ಯಾಖ್ಯಾನ
ತ್ರಿಪುರ ಸುಂದರೀಅಷ್ಟಕಂ - ೬
ಸ್ಮರಪ್ರಥಮಪುಷ್ಪಿಣೀಂ ರುಧಿರಬಿಂದುನೀಲಾಂಬರಾಂ
ಗೃಹೀತಮಧುಪಾತ್ರಿಕಾಂ ಮದವಿಢರ್ಣನೇತ್ರಾಞ್ಚಲಾಂl
ಘನಸ್ತನಭರೋನ್ನತಾಂ ಗಲಿತಚೂಲಿಕಾಂ ಶ್ಯಾಮಲಾಂ
ತ್ರಿಲೋಚನ ಕುಟುಂಬಿನೀಂ ತ್ರಿಪುರಸುಂದರೀಮಾಶ್ರಯೇ ll೬ll
ಮನ್ಮಥನ ಪ್ರಥಮ ಪುಷ್ಪವ ಧರಿಸಿದಾಕೆಯೇ,
ಕೆಂಪು ಬಿಂದುವಿನಿಂದೊಡಗೂಡಿದ ನೀಲವಸ್ತ್ರಧಾರಿಯೇ,
ಮಧುಪಾತ್ರೆಯ ಪಿಡಿದವಳೇ, ಉನ್ಮತ್ತ ಸಂಕುಚಿತ ನೇತ್ರಳೇ,
ಭಾರ ಕುಚೋನ್ನತೆಯೇ, ಮಿರುಗುಗಪ್ಪಿನ ಕೆದರಿದ ಕೇಶರಾಶಿಯವಳೇ,
ಶ್ಯಾಮಲವರ್ಣಳೇ, ತ್ರಿಪುರ ಸುಂದರಿಯೇ,
ಕೋರುವೆನು ನಿನ್ನಾಶ್ರಯವ, ತ್ರಿನೇತ್ರನ ಅರ್ಧಾಂಗಿನಿಯೇ.
ಮನ್ಮಥನ ಪ್ರಥಮ ಪುಷ್ಪವ ಧರಿಸಿದಾಕೆಯೇ - ಕಾಮನೆಗಳ ಅಧಿದೇವತೆಯಾದ ಮನ್ಮಥನು ಕಬ್ಬಿನ ಜಲ್ಲೆಯ ಧನುಸ್ಸನ್ನು ಮತ್ತು ಐದು ರೀತಿಯ ಪುಷ್ಪಗಳ ಬಾಣಗಳನ್ನು ಹೊಂದಿರುತ್ತಾನೆ. ಆ ಐದು ಪುಷ್ಪಗಳಲ್ಲಿ ಮೊದಲನೆಯದೇ ಕಮಲ. ತ್ರಿಪುರಸುಂದರಿಯ ಕೈಯ್ಯೊಂದರಲ್ಲಿ ಕಮಲವನ್ನು ಹಿಡಿದಿರುತ್ತಾಳೆ. ಈ ಕಮಲವಾದರೋ ತಂತ್ರ ಪದ್ಧತಿಯ ಪ್ರಕಾರ ಈ ಪ್ರಪಂಚದ ಸಂಕೇತವಾಗಿದೆ ("ಪ್ರಪಂಚಾಂಭುಜ ಹಸ್ತಾ ಚ ಕಪಾಲಿನ್ಯುಚ್ಛತೆ ಪರಾ" - ರಹಸ್ಯಾಗಮ).
'ಪುಷ್ಪ' ಎನ್ನುವುದು ಹೂವು ಎಂಬ ಅರ್ಥವನ್ನು ಕೊಡುವುದಲ್ಲದೆ, 'ಬಹಿಷ್ಠೆಯಾದ ಸ್ತ್ರೀಯ ಸ್ರವಿಸುವಿಕೆ' ಎಂಬ ಅರ್ಥವನ್ನೂ ಕೊಡುತ್ತದೆಯಾದ್ದರಿಂದ 'ಪುಷ್ಪಿಣಿ'ಯೆನ್ನುವುದು ಬಹಿಷ್ಠೆಯಾಗಿರುವ ಸ್ತ್ರೀಯನ್ನು ಸೂಚಿಸುತ್ತದೆ. ಆದ್ದರಿಂದ 'ಪ್ರಥಮ ಪುಷ್ಪಿಣಿ'ಯೆನ್ನುವುದು ಮೊದಲ ಬಾರಿಗೆ ಬಹಿಷ್ಠೆಯಾಗಿರುವ ಸ್ತ್ರೀ ಎನ್ನುವ ಅರ್ಥವನ್ನು ಹೊಮ್ಮಿಸುತ್ತದೆ.
ತಾಂತ್ರಿಕನು ದೇವಿಗೆ ಅರ್ಪಿಸುವ ಐದು ವಸ್ತುಗಳಲ್ಲಿ (ಪಂಚ 'ಮ'ಕಾರಗಳಲ್ಲಿ)ಮೈಥುನವೂ ಒಂದು. ಮೈಥುನವೆಂದರೆ ಸಂಯೋಗ (ಜೋಡಣೆ/ಒಟ್ಟಾಗಿಸುವುದು) ಅದರಲ್ಲಿ ಲೈಂಗಿಕ ಸಮಾಗಮವೂ (ಲೈಂಗಿಕವಾಗಿ ಒಂದುಗೂಡುವುದೂ) ಒಂದು. ಸಾಧಕನಿಗೆ ಮೈಥುನವೆಂದರೆ ಕುಂಡಲಿನಿಯು ಶಿವನೊಂದಿಗೆ ಸಮಾಗಮವಾಗುವುದು, ಅದು ತಾಂತ್ರಿಕ ಪೂಜೆಯ ಅಂತಿಮ ಘಟ್ಟವೂ ಹೌದು.
ಮೂಲಾಧಾರ ಚಕ್ರವು ಕತ್ತಲೆಯಿಂದಾವರಿಸಲ್ಪಟ್ಟ ನಾಲ್ಕು ದಳದ ಪದ್ಮವಾಗಿದ್ದು, ಅದರಲ್ಲಿ ದೇವಿಯು ನಿರಂತರ ನಿದ್ರಾವಸ್ಥೆಯಲ್ಲಿರುತ್ತಾಳೆ. ಅವಳನ್ನು ಎಚ್ಚರಗೊಳಿಸುವುದರ ಮೂಲಕ ತಾಂತ್ರಿಕನು ಅವಳ ಸಂಗಾತಿಯಾದ ಶಿವನ ನಿವಾಸವಾದ ಸಹಸ್ರಾರಕ್ಕೆ ಕೊಂಡೊಯ್ಯುತ್ತಾನೆ. ಲೌಕಿಕ ಮಾತಾ-ಪಿತರು ತಮ್ಮ ವಿವಾಹ ವಯಸ್ಕಳಾದ ಮಗಳನ್ನು ಯೋಗ್ಯ ವರನಿಗೆ ಧಾರೆಯೆರೆದು ಕೊಟ್ಟು ಅವನ ಪೋಷಣೆಗೆ ಬಿಡುವಂತೆ, ತಾಂತ್ರಿಕನು ನಿತ್ಯ ಯೌವನೆಯಾದ ’ಕುಂಡಲಿನಿ’ಯನ್ನು ಅವಳ ವರನಾದ ಪರಶಿವನ ಪ್ರಸ್ತದ (ನಿಷೇಕದ) ಕೋಣೆಯಾದ ಸಹಸ್ರಾರದೊಳಕ್ಕೆ ಬಿಡುತ್ತಾನೆ.
ದೈಹಿಕವಾದ ಲೈಂಗಿಕ ಸಮಾಗಮವು ಸ್ರೀಯು ಪ್ರೌಢಾವಸ್ಥೆಗೆ (ಮೈ ನೆರೆತ ಹಂತಕ್ಕೆ) ಬಂದ ಮೇಲೆ ಸಾಧ್ಯವಾಗುತ್ತದೆ. ಆದ್ದರಿಂದ ಕುಂಡಲಿನಿಯನ್ನು ಜಾಗೃತಗೊಳಿಸುವ ಪ್ರಯತ್ನದಲ್ಲಿರುವ ತಾಂತ್ರಿಕ ಸಾಧಕನು ದೇವಿಯನ್ನು ಅವಳು ಈಗ ತಾನೇ ಮೈ ನೆರೆತು (ಯೌವನಾವಸ್ಥೆಗೆ ಬಂದು) ಸಮಾಗಮ ಕ್ರಿಯೆಗೆ (ಶೋಭನಕ್ಕೆ) ಯುಕ್ತಳಾಗಿದ್ದಾಳೆಂದು ಭಾವಿಸಿ ಧ್ಯಾನವನ್ನು ಕೈಗೊಳ್ಳುತ್ತಾನೆ. ಕಾಮಕಲಾವಿಲಾಸದ ಒಂಭತ್ತನೆಯ ಪಂಕ್ತಿಯು ಹೀಗೆ ಹೇಳುತ್ತದೆ:
"ರಕ್ತವರ್ಣದ ಬಿಂದುವು ಇನ್ನೇನು ಸೃಷ್ಟಿಕಾರ್ಯವನ್ನು ಪ್ರಾರಂಭಿಸಬೇಕೆನ್ನುವ ಸ್ಥಿತಿಯಲ್ಲಿ 'ರಾವಃ'ಎನ್ನುವ ಶಬ್ದದ ಉತ್ಪತ್ತಿಯಾಯಿತು, ಇದು ನಾದಬ್ರಹ್ಮನಿಂದ ಉಗಮವಾದದ್ದು. ಆ ಶಬ್ದದಿಂದ ಹೊಮ್ಮಿದ್ದೇ ಆಕಾಶ, ವಾಯು, ಅಗ್ನಿ, ವರುಣ, ಭೂಮಿ (ಪಂಚಭೂತಗಳು) ಮತ್ತು ವರ್ಣಮಾಲೆಯ ಅಕ್ಷರಗಳು" (ಈ ರೀತಿ ಇಂಗ್ಲೀಷಿಗೆ ಅನುವಾದ ಮಾಡಿರುವುದು ಸರ್ ಜಾನ್ ವುಡ್ರೋಫ್ - "From the Red Bindu about to create rouse a sound (’Raavah') which is the nadabrahman sprout. From that (Sound) came Ether, Air, Fire, Water, Earth and the letters of the alphabet" - Tr. by John Woodroffe)
ಮೂಲ ಸಂಸ್ಕೃತ ಶ್ಲೋಕ:
ಸ್ಪುಟಿತಾದರುಣಾದ್ ಬಿಂದೋರ್ನಾದಬ್ರಹ್ಮಾಂಕುರೋ ರವೋ ವ್ಯಕ್ತಃ l
ತಸ್ಮಾದ್ ಗಗನಸಮೀರಣದಹನೋದಕಭೂಮಿರ್ವರ್ಣಸಂಭೂತಿಃ ll
ತಾಂತ್ರಿಕರು ಸಾಂಕೇತಿಕವಾಗಿ 'ರಕ್ತಬಿಂದು' (ಕೆಂಪುವರ್ಣದ ಬಿಂದು) ಎಂದು ಕರೆಯುವುದರ ಮೂರ್ತರೂಪವೇ ವಿಶ್ವಮಾತೆಯು ತನ್ನ ಪ್ರಥಮ ಬಹಿಷ್ಠಾವಸ್ಥೆಯಲ್ಲಿರುವ ಸ್ಥಿತಿ.
'ಸ್ಮರ' ಎನ್ನುವುದು ಕಾಮನ ಬಿರುದುಗಳಲ್ಲಿ ಒಂದು. ಅದು ಜ್ಞಾಪಕ ಶಕ್ತಿ ಹಾಗು ನೆನೆಪಿಸಿಕೊಳ್ಳು ಎನ್ನುವ ಅರ್ಥವನ್ನು ಕೊಡುತ್ತದೆ. ಈ ಮುಂಚೆಯೇ, ಪ್ರೇಮದ ಅಧಿದೇವತೆಯಾದ ಕಾಮನು ಮನಸ್ಸಿನ ಕಾಮನೆಗಳ ಮೂರ್ತರೂಪವೆಂದು ಹೇಳಲಾಗಿದೆ. ವಿಷಯ ವಸ್ತುಗಳನ್ನು ಕುರಿತಾಗಿ ಪದೇ ಪದೇ ಚಿಂತಿಸುತ್ತಿದ್ದರೆ, ಅವು ಕಾಮನೆಗಳನ್ನು ಹೆರುವ ಗರ್ಭಕೋಶಗಳಾಗುತ್ತದವೆ. ವಿಷಯ ವಸ್ತುಗಳು ನಮ್ಮ ದೃಷ್ಟಿಯಿಂದ ಕಣ್ಮರೆಯಾದರೂ ಕೂಡಾ ಅವುಗಳು ಮನಸಿನ ಮೇಲೆ ಉಂಟುಮಾಡಿದ ಗುರುತುಗಳು ಮಾಸುವುದಿಲ್ಲ. ವಾಸ್ತವವಾಗಿ, ವಿಷಯ ವಸ್ತುಗಳ ಕುರಿತಾಗಿ ಹೆಚ್ಚು ಹೆಚ್ಚು ಆಲೋಚನೆ ಮಾಡಿದಂತೆಲ್ಲಾ ಮನಸ್ಸಿನಲ್ಲಿ ಅವು ಇನ್ನೂ ತೀವ್ರತರವಾದ ಕ್ಷೋಭೆಯನ್ನುಂಟು ಮಾಡುತ್ತಾ ಹೋಗುತ್ತದೆ. ಗಮನಿಸಿ -
ಒಬ್ಬನು ವಿಷಯ ವಸ್ತುಗಳ ಕುರಿತಾಗಿ ಆಲೋಚಿಸುತ್ತಿದ್ದರೆ, ಅವುಗಳ ಬಗ್ಗೆ ಮೋಹವು ಹುಟ್ಟುತ್ತದೆ. ಹೀಗೆ ಹುಟ್ಟಿದ ಮೋಹದಿಂದಾಗಿ ಅದನ್ನು ಪಡೆಯಬೇಕೆಂಬ ಉತ್ಕಟ ಬಯಕೆಯುಂಟಾಗುತ್ತದೆ...........(ಧ್ಯಾಯತೋ ವಿಷಯಾನ್ ಪುಂಸಃ ಸಂಘಸ್ತೇಶೂಪಜಾಯತೇ; ಸಂಘಾತ್ ಸಂಜಾಯತೇ ಕಾಮಃ............. ಭಗವದ್ಗೀತೆ ೧೧.೬೨).
ಸತತ ಸ್ಮರಣೆಯಿಂದ ಕಾಮವು ಜನಿಸುತ್ತದೆ. ಅಂದರೆ ವಿಷಯ ವಸ್ತುಗಳನ್ನು ಕುರಿತಾಗಿ ಮತ್ತೆ ಮತ್ತೆ ಆಲೋಚಿಸುತ್ತಿದ್ದರೆ ಅದರಿಂದ ಅದನ್ನು ಪಡೆಯಲೇ ಬೇಕೆಂಬ ಕಾಮನೆ/ಆಸೆಯು ಹುಟ್ಟುತ್ತದೆ.
ಕೆಂಪು ಬಿಂದುವಿನಿಂದೊಡಗೂಡಿದ ನೀಲವಸ್ತ್ರಧಾರಿಯೇ - ದೇವಿಯು ರಕ್ತವರ್ಣದ ಬಿಂದುಗಳಿಂದ ಕೂಡಿದ ನೀಲಾಂಬರಧಾರಿಣಿಯಾಗಿರುವಳು. ಮೊದಲ ಬಾರಿಗೆ ಸ್ತ್ರೀಯು ಬಹಿಷ್ಠೆಯಾದಾಗ ಅವಳು ಸಂತಾನವನ್ನು ಹೊಂದಲು ಯುಕ್ತ ವಯಸ್ಕಳಾಗಿದ್ದಾಳೆನ್ನುವುದನ್ನು ಸೂಚಿಸುತ್ತದೆ. ಅದೇ ರೀತಿ ನೀಲ ವಸ್ತ್ರವು, ದೇವಿಯು ಸೃಷ್ಟಿ ಕಾರ್ಯವನ್ನು ಪ್ರಾರಂಭಿಸುವುದರ ಮುನ್ಸೂಚೆಯನ್ನು ಕೊಡುವ ಸಂಕೇತವಾಗಿದೆ. ತನ್ನ ಸಂಗಾತಿಯೊಡನೆ ಸಮಾಗಮ ಹೊಂದಲು ಸಹಸ್ರಾರಕ್ಕೆ ಹೋಗುವ ಮೊದಲು ಮೂಲಾಧಾರ ಚಕ್ರದಲ್ಲಿ ದೀರ್ಘ ನಿದ್ರೆಯಲ್ಲಿರುವ ದೇವಿಯು ಗಾಢಾಂದಕಾರದ ಹೊದಿಕೆಯಿಂದ ಆವರಿಸಲ್ಪಟ್ಟಿರುತ್ತಾಳೆ.
ಮಧುಪಾತ್ರೆಯ ಪಿಡಿದವಳೇ - ಅವಳು ಮಾಯೆಯೆಂಬ ಮಧುಪಾತ್ರೆಯನ್ನು ಕೈಯ್ಯಲ್ಲಿ ಹಿಡಿದು ಜೀವಿಗಳನ್ನು ಮಾಯೆಯ ಪ್ರಭಾವಕ್ಕೆ ಒಳಪಡಿಸುತ್ತಿದ್ದಾಳೆ. ಮಧುವೆಂದರೆ ಕೇವಲ ಮತ್ತನ್ನು ಉಂಟುಮಾಡುವ ದ್ರವ(ಹೆಂಡ) ಮಾತ್ರವಲ್ಲ ಅದಕ್ಕೆ ಜೇನು ಮತ್ತು ವಸಂತ ಋತು ಎನ್ನುವ ಅರ್ಥಗಳೂ ಇವೆ. ಕಾಮನ ಹತ್ತಿರದ ಸ್ನೇಹಿತ ಮತ್ತು ಒಡನಾಡಿಯೆಂದರೆ ವಸಂತಋತು. ಎಲ್ಲರ ಅನುಭವಕ್ಕೂ ಬಂದಿರುವಂತೆ ವಸಂತಋತುವಿನಲ್ಲಿ ಜೀವಿಗಳ ಕಾಮನೆಗಳು ಹೆಚ್ಚು ಉತ್ಕಟವಾಗಿರುತ್ತವೆ. ರಾಜಸಿಕ ಗುಣದಿಂದ ಕೂಡಿದ ಹೆಂಡವು ಮನುಷ್ಯನ ಬಯಕೆಯನ್ನು ಕೆರಳಿಸುತ್ತದೆ. ಆದ್ದರಿಂದ ಮಧುವು ಕಾಮನ ಒಡನಾಡಿಯಾಗಿರುವುದು ಸಹಜವಾಗಿಯೇ ಇದೆ. ಇನ್ನೊಂದು ಅಸಕ್ತಿಕರ ವಿಷಯವನ್ನು ಗಮನಿಸಿ ಅದೇನೆಂದರೆ ಕಾಮನ ಹೆಂಡತಿಯ ಹೆಸರು ರತಿ - ಅಂದರೆ ಸಂತೋಷಿಸುವುದು/ಅನಂದಿಸುವುದು ಅಥವಾ ಭೋಗಿಸಿವುದು/ಅನುಭವಿಸುವುದು ಎನ್ನುವ ಅರ್ಥವನ್ನು ಕೊಡುತ್ತದೆ.
ಉನ್ಮತ್ತ ಸಂಕುಚಿತ ನೇತ್ರಳೇ - ಬಹಿರ್ಗತವಾಗಿ ಇದು ದೇವಿಯು ತನ್ನ ಸಂಗಾತಿಯೊಡನೆ ಸಹಸ್ರಾರದಲ್ಲಿ ಸಮಾಗಮಗೊಂಡಾಗ ಉಂಟಾದ ಪರಮಾನಂದವನ್ನು ಸೂಚಿಸುತ್ತದೆ. ಇದು ಕೇವಲ ಸಾಂಕೇತಿಕ ವಿವರಣೆ ಮಾತ್ರ. ಯಾವ ರೀತಿ ಮಧುವನ್ನು ಹೀರಿದವನು (ಹೆಂಡವನ್ನು ಕುಡಿದವನು) ತನ್ನ ಸುತ್ತಲಿನ ಪರಿವೆಯಿಲ್ಲದೆ ವರ್ತಿಸುತ್ತಾನೆಯೋ ಅದೇ ರೀತಿ ದ್ವೈವ ಉನ್ಮಾದಕ್ಕೆ ಒಳಗಾದ ವ್ಯಕ್ತಿಯು ಭಾವೋದ್ರೇಕಕ್ಕೆ ಒಳಗಾಗುತ್ತಾನೆ. ಯಾವ ರೀತಿ ಕುಡುಕನು ಮಧುಪಾತ್ರೆಯನ್ನು ಹೊಂದಲು ಚಡಪಡಿಸುತ್ತಾನೆಯೋ ಅದೇ ರೀತಿ ಯೋಗಿಯಾದವನು ಬ್ರಹ್ಮಾನಂದವನ್ನು ಪಡೆಯಲು ತವಕಿಸುತ್ತಾನೆ. ಮುಖವು ಮನಸ್ಸಿನ ಕನ್ನಡಿ ಅದಕ್ಕಿಂತ ಚೆನ್ನಾಗಿ ಬಿಂಬಿಸುವುದು ಕಣ್ಣುಗಳು. ಮುಖವು ಗಡಿಯಾರದ ಮುಖಬಿಲ್ಲೆಯನ್ನು ಸೂಚಿಸಿದರೆ ಕಣ್ಣುಗಳು ಅದರ ಮುಳ್ಳುಗಳನ್ನು ಸಂಕೇತಿಸುತ್ತವೆ.
ಕೆದರಿದ ಕೇಶರಾಶಿಯವಳೇ - ಇದು ಅವಳು ಎಲ್ಲಾ ವಿಧವಾದ ಕಟ್ಟಳೆಗಳಿಗೆ ಅಂದರೆ ಜಡೆ ಹಾಕಿಕೊಳ್ಳುವುದು ಮುಂತಾದ ಸಂಪ್ರದಾಯಗಳಿಗೆ ಅತೀತಳಾಗಿರುವಳೆನ್ನುವುದನ್ನು ಸೂಚಿಸುತ್ತದೆ.
*****
ವಿ.ಸೂ.: ಈ ಕಂತಿನ ಶ್ಲೋಕ - ೬ರ ಭಾಗವು ’ತ್ರಿಪುರ ಸುಂದರೀ ಅಷ್ಟಕಮ್"- ಪ್ರಕಟಣೆ(೧೯೮೬): ಅಧ್ಯಕ್ಷರು, ಶ್ರೀ ರಾಮಕೃಷ್ಣ ಮಠ, ಮೈಲಾಪುರ್, ಮದ್ರಾಸ್ - ೬೦೦ ೦೦೪, ಪುಸ್ತಕದ ೪೫ರಿಂದ ೫೦ನೇ ಪುಟದ ಅನುವಾದವಾಗಿದೆ. ಮೂಲ ಇಂಗ್ಲೀಷ್ ಕರ್ತೃ - ಶ್ರೀಯುತ ಎಸ್. ಕಾಮೇಶ್ವರ್, ಮುಂಬಯಿ.
ಈ ಸರಣಿಯ ಹಿಂದಿನ ಲೇಖನ "ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೬: ಸ್ತೋತ್ರ - ೫ರ ವ್ಯಾಖ್ಯಾನಕ್ಕೆ ಕೆಳಗಿನ ಕೊಂಡಿಯನ್ನು ನೋಡಿ:
http://sampada.net/blog/%E0%B2%A4%E0%B3%8D%E0%B2%B0%E0%B2%BF%E0%B2%AA%E0%B3%81%E0%B2%B0-%E0%B2%B8%E0%B3%81%E0%B2%82%E0%B2%A6%E0%B2%B0%E0%B3%80-%E0%B2%85%E0%B2%B7%E0%B3%8D%E0%B2%9F%E0%B2%95%E0%B2%AE%E0%B3%8D-%E0%B2%AD%E0%B2%BE%E0%B2%97-%E0%B3%AC-%E0%B2%B8%E0%B3%8D%E0%B2%A4%E0%B3%8B%E0%B2%A4%E0%B3%8D%E0%B2%B0-%E0%B3%AB%E0%B2%B0-%E0%B2%B5%E0%B3%8D%E0%B2%AF%E0%B2%BE%E0%B2%96%E0%B3%8D%E0%B2%AF%E0%B2%BE%E0%B2%A8/23/08/2012/38052
ಕಾಳಿಕಾ ಮಾತೆಯ ಚಿತ್ರದ ಕೃಪೆ: ಗೂಗಲ್, ಕೊಂಡಿ:
https://encrypted-tbn1.google.com/images?q=tbn:ANd9GcQQ1mcVgyv7MmtKQYnSzYv7XfhyrpVIU_-5QpbJdtygRqbDBp4G
Rating
Comments
ಉ: ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೭: ಸ್ತೋತ್ರ - ೬ರ ವ್ಯಾಖ್ಯಾನ
In reply to ಉ: ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೭: ಸ್ತೋತ್ರ - ೬ರ ವ್ಯಾಖ್ಯಾನ by Chikku123
ಉ: ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೭: ಸ್ತೋತ್ರ - ೬ರ ವ್ಯಾಖ್ಯಾನ
ಉ: ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೭: ಸ್ತೋತ್ರ - ೬ರ ವ್ಯಾಖ್ಯಾನ
In reply to ಉ: ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೭: ಸ್ತೋತ್ರ - ೬ರ ವ್ಯಾಖ್ಯಾನ by sathishnasa
ಉ: ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೭: ಸ್ತೋತ್ರ - ೬ರ ವ್ಯಾಖ್ಯಾನ
ಉ: ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೭: ಸ್ತೋತ್ರ - ೬ರ ವ್ಯಾಖ್ಯಾನ
In reply to ಉ: ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೭: ಸ್ತೋತ್ರ - ೬ರ ವ್ಯಾಖ್ಯಾನ by nanjunda
ಉ: ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೭: ಸ್ತೋತ್ರ - ೬ರ ವ್ಯಾಖ್ಯಾನ
ಉ: ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೭: ಸ್ತೋತ್ರ - ೬ರ ವ್ಯಾಖ್ಯಾನ
In reply to ಉ: ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೭: ಸ್ತೋತ್ರ - ೬ರ ವ್ಯಾಖ್ಯಾನ by partha1059
ಉ: ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೭: ಸ್ತೋತ್ರ - ೬ರ ವ್ಯಾಖ್ಯಾನ
In reply to ಉ: ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೭: ಸ್ತೋತ್ರ - ೬ರ ವ್ಯಾಖ್ಯಾನ by Premashri
ಉ: ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೭: ಸ್ತೋತ್ರ - ೬ರ ವ್ಯಾಖ್ಯಾನ
In reply to ಉ: ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೭: ಸ್ತೋತ್ರ - ೬ರ ವ್ಯಾಖ್ಯಾನ by partha1059
ಉ: ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೭: ಸ್ತೋತ್ರ - ೬ರ ವ್ಯಾಖ್ಯಾನ
ಉ: ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೭: ಸ್ತೋತ್ರ - ೬ರ ವ್ಯಾಖ್ಯಾನ