ಬಿಟ್ಟು ಹೋದ ಮಗಳಿಗೆ

ಬಿಟ್ಟು ಹೋದ ಮಗಳಿಗೆ

ಕವನ

ಮಗಳಿರದ ಮನೆಯೊಳಗೆ ನಗುವಿಲ್ಲ

ಎಷ್ಟು ಹಚ್ಚಿದರೂ ದೀಪ  ಕತ್ತಲು ಕಳೆಯಲಿಲ್ಲ

ನನ್ನಾಕಾಶದಲಿ ನಕ್ಷತ್ರಗಳು ಹೊಳೆಯಲಿಲ್ಲ

ಅಂಗಳದ ಮಲ್ಲಿಗೆ ಬಳ್ಳಿಯೊಳು ಹೂವರಳುತಿಲ್ಲ

ಬೇಗ ಬರುವೆನೆಂದು ಹೊರಹೋದವಳು

ಮುಸ್ಸಂಜೆಯಾದರೂ ಮರಳಲಿಲ್ಲ

 ಜಗವ ತಿಳಿಯದ ಮುಗುದೆಯವಳು

ಯಾವ ಗುರಿಯ ಅರಸುತಿಹಳೊ ನಿಂದು

ಕವಲು ದಾರಿಯಲಿ

ಇರಬಹುದು ರೆಕ್ಕೆ ಬಲಿತ ಹಕ್ಕಿಗೆ ಹಾರುವ  ತವಕ

ಮರಿಯಿನ್ನು ಎಳೆಸೆಂದುಕೊಂಡ ಅಪ್ಪನಿಗೊ ಆತಂಕ!

ಆಕಾಶದಲಿ ಹಾರುವದರ ಆಸೆಗೆ

ಬೇಡವೆನಲು ಯಾವ  ಹಕ್ಕಿದೆ ನನಗೆ?

ಇರಲಿ ಮಗಳೆ

ನಿನ್ನವಕಾಶಗಳ ಆಕಾಶ ನಿನಗೆ

ಎಚ್ಚರವಿರಲಿ ನಭದೊಳಗಿಲ್ಲ ಬರೀ ಪಾರಿವಾಳಗಳು

ಉಂಟಲ್ಲಿ ನಂಬಿಸಿ ನುಂಗುವ ರಣಹದ್ದುಗಳು

ಕ್ಷಣಿಕ ಸುಖದೊಂದಿಗೆ ಕಾಯುತ್ತಿರುತ್ತವೆ ನೋವಿನ

ನೆರಳು- ನರಳು

ಹಾರಿದ್ದು ಸಾಕೆನಿಸಿದರೆ

ಮರಳಿ ಬಾ ತವರಿಗೆ

ಕಾಯುತಿವೆ ವೃದ್ದ ಅಪ್ಪನ ಸೋತ ತೋಳುಗಳು

 

 

Comments