' ಅಪರಿಚಿತ '(ಕಥೆ) ಭಾಗ 7

' ಅಪರಿಚಿತ '(ಕಥೆ) ಭಾಗ 7

 


      ವೆಂಕಟಯ್ಯನವರನ್ನು ತಂಡ ಅನುಸರಿಸಿತು. ಗುಡ್ಡದ ತುದಿಗೆ ಹೋಗಿ ನಿಂತ ವೆಂಕಟಯ್ಯ ಇಳಿಜಾರಿನಲ್ಲಿ ಒಂದೆಡೆ ಕೈಮಾಡಿ ಹೊನ್ನೆಮರ ವೊಂದರೆಡೆ ತೋರಿದರು. ಅಸಹನೀಯ ದುರ್ನಾತ ಜೌಗು ಪ್ರದೇಶ ಕಾಲು ಜಾರುತ್ತಿತ್ತು, ಎಲ್ಲರೂ ನಿಧಾನಕ್ಕೆ ಇಳಿದು ಮರದ ಬುಡಕ್ಕೆ ಹೋಗಿ ನಿಂತರು. ಆ ದುರ್ನಾತ ಸಹಿಸಲಾರದೆ ಮಂಜಪ್ಪ ನಾಯ್ಕ ಸ್ವಲ್ಪ ದೂರದಲ್ಲಿಯೆ ನಿಂತು ಬಿಟ್ಟರು. ಕೆಳಗಿಳಿದು ಬರಲು ಪಟೇಲ ಪರಮಯ್ಯ ಹರ ಸಾಹಸ ಪಡುತ್ತಿದ್ದರು.


     ಅವರ ಪರಿಸ್ಥಿತಿಯನ್ನು ಗಮನಿಸಿದ ಅಲಿ ' ಪಟೇಲ್ರೆ ನೀವು ಅಲ್ಲಿಯೇ ನಿಲ್ಲಿ ಇಲ್ಲಿ ಕೆಳಗೆ ಬರುವುದು ಬೇಡ ' ಎಂದರು.


     ' ನೀವೆಲ್ಲ ಇಷ್ಟು ಶ್ರಮ ಪಡುತ್ತಿರುವಾಗ ನಾನು ದೂರ ನಿಂತು ಬಿಡೋದು ಎಷ್ಟು ಸರಿ ' ಎನ್ನುತ್ತ ಬಡಿಗೆಯನ್ನು ಊರುತ್ತ ಕೆಳಗಿಳಿದು ಬಂದರು. ಬೃಹತ್ತಾಗಿ ಬೆಳೆದ ಹೊನ್ನೆಮರವನ್ನು ಅಲಿ ಗಮನಿಸಿದರು. ಒಬ್ಬನ ತೆಕ್ಕೆ ಗಾತ್ರದ ಬುಡದ ಮರ ನೇರವಾಗಿ ಆಕಾಶದೆಡೆ ಮುಖಮಾಡಿ ಬೆಳೆದು ನಿಂತಿತ್ತು ಬುಡದಿಂದ ಎಂಟ್ಹತ್ತು ಅಡಿಗಳ ಮೇಲೆ ಮರ ಟಿಸಿಲುಗಳನ್ನು ಬಿಟ್ಟು ವಿಸ್ತಾರವಾಗಿ ಆಕ್ರಮಿಸಿ ಕೊಂಡಿತ್ತು. ಬಲಗಡೆಗೆ ಚಾಚಿದ್ದ ದೊಡ್ಡ ರೆಂಬೆಯೊಂದಕ್ಕೆ ಕತ್ತದ ನಾರಿನಿಂದ ಮಾಡಿದ ಹೊಸ ಹಗ್ಗವೊಂದರಿಂದ ಆತ ನೇಣು ಹಾಕಿಕೊಂಡಿದ್ದ. ಅಷ್ಟರಲ್ಲಿ ಪಿಎಸ್ಐ ಮಂಜಪ್ಪಗೌಡರು ಬಂದರು.


     ' ಸ್ಥಳಾವಲೋಕನ ಮಾಡಿದ ಮಂಜಪ್ಪ ಗೌಡರು ಮೇಲಗಡೆ ನಿಂತಿರುವ ಕೋಡುಗಲ್ಲೊಂದನ್ನು ನಿದರ್ಶನ ವಾಗಿಟ್ಟುಕೊಂಡು ಮರದ ವರೆಗಿನ ಸ್ಥಳವನ್ನು ಅಂದಾಜು ಲೆಖ್ಖಹಾಕಿ ಸ್ಥಳ ಪಂಚರ ಸಮಕ್ಷಮ ಮಹಜರುಕ್ರಮದ ಬಗ್ಗೆ ಬರಯಲು ಅಲಿಗೆ ಹೇಳಿದರು. ತಮ್ಮ ಜೊತೆ ಕರತಂದಿದ್ದ ಮೂಕಾಂಬಿಕಾ ಸ್ಟುಡಿಯೋದ ಅಪ್ಪು ಶೆಟ್ಟಿಗೆ


     ' ಶೆಟ್ಟರೆ ಪೂರ್ತ ಮರ ಸಮೇತ ನೇಣು ಹಾಕಿಕೊಂಡ ಫೋಟೊ, ಇನ್ನೊಂದು ನೇಣು ಹಾಕಿಕೊಂಡ ರೆಂಬೆ  ಮಾತ್ರ ಒಳಗೊಂಡಂತೆ ಮೃತನ ಶರೀರದ ಫೋಟೊ, ಮೃತನ ಶರೀರ ಕೆಳಗಿಳಿಸಿದ ನಂತರ ಶವವನ್ನು ಮಲಗಿಸಿದ ಸ್ಥಿತಿಯಲ್ಲಿ ಒಂದು ಫೋಟೊ ಹೀಗೆ ಒಟ್ಟು ಮೂರು ಫೋಟೋಗಳು ಇರಲಿ ಎಂದರು ಮಂಜಪ್ಪ ಗೌಡರು.


     ಹ್ಞೂಗಗುಟ್ಟಿದ ಫೋಟೋಗ್ರಾಫರ್ ಫೋಟೊ ತೆಗೆಯಲು ಉದ್ಯುಕ್ತನಾದ. ಸ್ಥಳ ಮಹಜರು ಕ್ರಮದ ನಂತರ ಹೆಣವನ್ನು ಕೆಳಗಿಳಿಸುವ ಕೆಲಸ ಪ್ರಾಂಭವಾಯಿತು. ಪಟೇಲರ ಜೊತೆಗೆ ಬಂದಿದ್ದ ಕರಿಯಪ್ಪ ಮರ ಏರಿದ. ಹೆಣದ ಕೆಳಗೆ ಬೆಳೆದ ಸೊಪ್ಪನ್ನು ಸವರಿ ಬಿಚ್ಚಿದ ಗೋಣಿಚೀಲಗಳನ್ನು ಹರಡಲಾಗಿತ್ತು. ಕರಿಯಪ್ಪ ಮೃತನು ನೇಣು ಹಾಕಿ ಕೊಂಡ ಕತ್ತದ ಹಗ್ಗ ಬಿಚ್ಚಲು ತೊಡಗುತ್ತಿದ್ದಂತೆ ಹೆಣ ಅಲುಗಾಡಿ ಮೃತನ ಮುಖ ಹಸ್ತ ಮತ್ತು ಪಾದದ ಮಾಂಸಲ ಭಾಗಗಳು ಕೆಳಗೆ ಉದುರಿ ಬಿದ್ದವು. ಅವುಗಳ ಜೊತೆಗೆ ಬಿಳಿ ಹುಳುಗಳು ಸಹ ಪುತಪುತನೆ ಕೆಳಗುದರಿ ಬಿದ್ದವು. ಕೊಳೆತ ಹೆಣದ ವಾಸನೆ ಇನ್ನೂ ಯಾತನಾಮಯ ವಾಯಿತು. ಹಗ್ಗವನ್ನು ಬಿಚ್ಚಿ ಮೃತನ ಶರೀರವನ್ನು ಕರಯಪ್ಪ ನಿಧಾನವಾಗಿ ಕೆಳಗಿಳಿಸಿದ. ಕೆಳಗೆ ಆಂಜನೇಯ ಎರಡೂ ಕಾಲುಗಳನ್ನು ಹಿಡಿದುಕೊಂಡ  ಹಗ್ಗದ ಕುಣಿಕೆಯನ್ನು ಮಂಜುನಾಥ ಹಿಡಿದುಕೊಂಡು ಮೃತನ ಶರೀರವನ್ನು ಬಿಚ್ಚಿ ಹಾಸಿದ್ದ ಗೋಣಿ ತಾಟಿನಮೇಲೆ ದಕ್ಷಿಣೋತ್ತರವಾಗಿ ನೇರವಾಗಿ ಮಲಗಿಸಿದರು. ಕುತ್ತಿಗೆಯ ಮಾಂಸಲಭಾಗ ಪೂರ್ಣ ಕಿತ್ತು ಹೋಗಿದ್ದು ಮೂಳೆ ಕಾಣುತ್ತಿತ್ತು. ತೀರ ಕಣಿವೆ ಪ್ರದೇಶವಾಗಿದ್ದು ಸೂರ್ಯ ಕೆಳಗಿಳಿಯುತ್ತಿದ್ದಂತೆ ಕತ್ತಲು ಕವಿಯುವ ಕಾರಣ ಶವ ಪಂಚನಾಮೆ ಮುಗಿದ ನಂತರ ಹೆಣವನ್ನು ಗುಡ್ಡದ ಮೇಲ್ಭಾಗಕ್ಕೆ ಸಾಗಿಸುವುದು ಸೂಕ್ತವೆಂಬ ತೀರ್ಮಾನಕ್ಕೆ ಎಲ್ಲರೂ ಬಂದರು. ಅಲ್ಲಿಂದ ಸುಮಾರು ಅರವತ್ತು ಎಪ್ಪತ್ತು ಅಡಿಗಳಷ್ಟು ಮೇಲೆ ಹೆಣವನ್ನು ಎತ್ತಿ ತರಬೇಕಿತ್ತು. ತಲೆಯ ಭಾಗದ ಕಡೆ ಮಂಜುನಾಥ ಕೆಳಗೆ ಕಾಲುಗಳ ಕಡೆಗೆ ಆಂಜನೇಯ ಗೋಣಿ ತಾಟನ್ನು ಎತ್ತಿಕೊಂಡು ಮೇಲಕ್ಕೆ ತರಲು ಪ್ರಾರಂಭಿ ಸಿದರು. ಇಳಿಜಾರು ಪ್ರದೇಶವಾದ ಕಾರಣ ಕೆಳಗಡೆ ಭಾರ ಹೆಚ್ಚಾಗಿ ಆಂಜನೇಯನ ನಡಿಗೆ ನಿಧಾನವಾಗಿ ಕ್ರಮೇಣ ಮೇಲೆರುವುದು ಕಷ್ಟವಾಗಿ ಪರಿಣಮಿಸಿತು. ಕರಿಯಪ್ಪ ಸಹಕರಿಸಿದ ಪರಿಣಾಮವಾಗಿ ಹೆಣವನ್ನು ಮೇಲಕ್ಕೆ ತರಲು ಸಹಾಯ ವಾಯಿತು.


          ಪಂಚರ ಸಮಕ್ಷಮ ಮೃತನ ಬಟ್ಟೆಬರೆಗಳನ್ನು ಪರಿಶೀಲನೆ ಮಾಡಲಾಯಿತು. ಆಂಜನೇಯ ಮೃತನ ಮೈಮೇಲಿನ ಬಟ್ಟೆ ಬರೆಗಳನ್ನು ಒಂದೊಂದಾಗಿ ಬಿಚ್ಚಿದ. ಮೃತ ಕಂದು ಬಣ್ಣದ ಟೆರಿಕಾಟ್ ಪ್ಯಾಂಟ್, ತಿಳಿಹಳದಿ ಬಣ್ಣದ ಅರ್ಧ ತೋಳಿನ ಬುಶ್ಶರ್ಟ, ತೋಳಿಲ್ಲದ ಸ್ಯಾಂಡೋ ಬನಿಯನ್, ಕಂದು ಬಣ್ಣದ ಚಡ್ಡಿ, ಆರೆಳೆಯ ಜನಿವಾರ, ಉಡುದಾರ ಮತ್ತು ಕಾಲುಗಳಲ್ಲಿ ಇದ್ದ ತಿಳಿಗಂದು ಬಣ್ಣದ ಸ್ಯಾಂಡಕ್ ಚಪ್ಪಲಿಗಳನ್ನು ತೆಗೆದ.


     ' ಆಂಜನೇಯ ಆತನ ಪ್ಯಾಂಟ್ ಮತ್ತು ಶರ್ಟಗಳ ಜೋಬುಗಳನ್ನು ನೋಡು ಎಂದರು ' ಮಂಜಪ್ಪ ಗೌಡರು.


     ಪಿಎಸ್ಐ ರವರ ಆದೇಶದ ಮೇರೆಗೆ ಮೃತನ ಬಟ್ಟೆಗಳನ್ನು ಅವಲೋಕನೆಗೆ ತೊಡಗಿದ. ಮೃತನ ಎಲ್ಲ ಬಟ್ಟೆಗಳು ಮೃತನ ಶರೀರ ಕೊಳೆತು ಸೋರಿದ್ದರಿಂದ ಆತ ಧರಿಸಿದ್ದ ಎಲ್ಲ ವಸ್ತುಗಳು ಒಂದು ತರಹದ ಸ್ನಿಗ್ಧ ಪದಾರ್ಥದಲ್ಲಿ ಅದ್ದಿ ತೆಗೆದಂತಿದ್ದವು. ಕೊಳೆತ ವಾಸನೆ ದಟ್ಟವಾಗಿ ಮೂಗಿಗೆ ಅಡರುತ್ತಿತ್ತು. ಬಟ್ಟೆಗಳು ಅಂಟಂಟಾಗಿದ್ದವು. ಬಟ್ಟೆಗಳನ್ನು ಬಿಚ್ಚಲು ಉದ್ಯುಕ್ತ ನಾಗುತಿದ್ದಂತೆ ಮೃತನ ದೇಹದ ಮಾಂಸಲ ಭಾಗಗಳು ಹಾಗೇಯೇ ಕಿತ್ತು ಬರುತ್ತಿದ್ದವು.ಒಂದು ಕ್ಷಣ ಆತನ ಮೈ ಝಮಕರಿಸಿದಂತಾಯಿತು. ಎಲ್ಲರ ಸಮಕ್ಷಮದಲ್ಲಿ ಪ್ಯಾಂಟಿನ ಜೋಬುಗಳನ್ನು ತಡಕಿದ, ಅವುಗಳಲ್ಲಿ ಏನೂ ಕಂಡು ಬರಲಿಲ್ಲ. ಶರ್ಟ ಜೋಬನ್ನು ತೆರೆದು ನೋಡಿದ, ಅದರಲ್ಲಿ ಸ್ವಲ್ಪ ಹಣ ಜೊತೆಗೆ ಬಸ್ ಮತ್ತು ಲಾಂಚ್ ಟಿಕೆಟುಗಳಿದ್ದವು. ಹಣವನ್ನು ಎಲ್ಲರ ಸಮಕ್ಷಮ ಬಿಡಿಸಿದ ಅವು ಹತ್ತು ರೂಪಾಉಯಿಗಳ ಐದು ಮತ್ತು ಐದು ರೂಪಾಯಿಗಳ ಒಂದು ನೋಟುಗಳಿದ್ದವು. ಅವೆಲ್ಲವನ್ನು ಬಟ್ಟೆಬರೆ ಮತ್ತು ಉಳಿದ ವಸ್ತುಗಳ ಸಮೇತ ಅಮಾನತ್ತು ಪಡಿಸಿಕೊಂಡರು.


     ಅಷ್ಟರಲ್ಲಿ ಕುಮರಿ ಸರ್ಕಾರಿ ಆಸ್ಪತ್ರೆಯ ಡಾ.ಮಂಜುನಾಥ ತಮ್ಮ ಸಿಬ್ಬಂದಿಯೊಡನೆ ಬಂದರು. ಮೃತನ ಶವದ ಬಟ್ಟೆಗಳನ್ನು ತೆಗೆಸಿ ನೋಡಿದರು. ಮೃತನ ದೇಹ ಸಂಪೂರ್ಣ ಕೊಳೆತು ವಿರೂಪ ಗೊಂಡಿದ್ದು ಕಣ್ಣು ಮೂಗು ಮರ್ಮಾಂಗಗಳನ್ನು ಹುಳುಗಳು ಸಂಪೂರ್ಣ ತಿಂದು ಹಾಕಿದ್ದವು. ಶವದ ಕೂಲಂಕುಷ ಪರೀಕ್ಷೆ ನಡೆಸಿದ ವೈದ್ಯರು ಪಿಎಸ್ಐ ರವರನ್ನು ಉದ್ದೇಶಿಸಿ


     ' ಗೌಡರೆ, ಶವ ಸಂಪೂರ್ಣ ಕೊಳೆತು ಹೋಗಿದೆ ನೀವು ಕೋರಿದಂತೆ ವಿಸೆರಾ ಸಂಗ್ರಹಿಸಲು ಆಗುವುದಿಲ್ಲ ' ಎಂದರು.


     ಅದಕ್ಕೆ ಮಂಜಪ್ಪ ಗೌಡರು ಡಾಕ್ಟರರೆ ಹಾಗಿದ್ದರೆ ಪೋಸ್ಟ್ ಮಾರ್ಟಂ ವರದಿಯನ್ನು ಈಗಲೆ ಕೊಟ್ಟು ಬಿಟ್ಟರೆ ಒಳ್ಳೆಯದು ಎಂದರು.


      ಸಮ್ಮತಿಸಿದ ವೈದ್ಯರು ಮೃತನ ಮರಣ ಕಾರಣದ ಬಗ್ಗೆ  'ದಿ ಬಾಡಿ ಈಸ್ಇನ್ ಹೈಲೀ ಡಿಕಾಂಪೊಸ್ಡ್ ಸ್ಟೇಟ್, ಸೊ ವಿಸೆರಾ ಕೆನಾಟ್ ಬಿ ಪ್ರಿಜರ್ವಡ್, ಎಟ್ ದಿಸ್ ಸ್ಟೇಜ್ ಐ ಯಾಮ್ ಆಫ್ ದಿ ಓಪಿನಿಯನ್ ದಟ್ ದಿ ಕಾಜ್ ಆಫ್ ದಿ ಡೆತ್ ಈಜ್ ಡ್ಯೂ ಟು ಹ್ಯಾಂಗಿಂಗ್ ' ಎಂದು ಅಭಿಪ್ರಾಯ ನೀಡಿ ಪೋಸ್ಟ ಮಾರ್ಟಂ ವರದಿಯನ್ನು ನೀಡಿದರು.


      ಅದನ್ನು ಸ್ವೀಕರಿಸಿದ ಪಿಎಸ್ಐ ಮಂಜಪ್ಪ ಗೌಡರು ಅದನ್ನು ಸಮ್ಮಂಧಪಟ್ಟ ಕೆಸ್ ಫೈಲ್ನಲ್ಲಿ ಇಟ್ಟು ಕೊಳ್ಳಲು ಕೊಟ್ಟು 'ಆಲಿ ನಾನು ವೆಂಕಟಯ್ಯನ ಜೊತೆ ಚುರ್ಚಗುಂಡಿಗೆ ಹೋಗಿ ಬರಲೆ ' ಎಂದರು ಮಂಜಪ್ಪ ಗೌಡರು. ನುಸ್ರತ ಅಲಿ ತಲೆಯಾಡಿಸಿ ಒಪ್ಪಿಗೆ ಸೂಚಿಸಿದರು. ಅಷ್ಟರಲ್ಲಿ ಮುನಿಸ್ವಾಮಿ ತನ್ನ ಕೆಲಸಗಾರರ ಜೊತೆ ಕ್ಯಾಂಟರ್ ವಾಹನದಲ್ಲಿ ಸೌದೆಗಳನ್ನು ತಂದರು. ಮುನಿಸ್ವಾಮಿ 



     ' ಸಾರ್ ಸೌದೆ ಜೋಡಿಸುವುದು ಎಲ್ಲಿ ? ' ಎಂದ.


     ' ಅಲ್ಲಿಯೆ ಶವದ ಪಕ್ಕದಲ್ಲಿಯೆ ಜೋಡಿಸಿ ' ಎಂದರು ನುಸ್ರತ್ ಅಲಿ.


     ಪಿಎಸ್ಐ ಮಂಜಪ್ಪ ಗೌಡರು ಹೊರಡಲು ಅಣಿಯಾಗಿ ನಿಂತವರು ' ಅಲಿ ನೀನು ಮಂಜುನಾಥನನ್ನು ಜೊತೆಗೆ ಕರೆದುಕೊಂಡು ಕುಮರಿಗೆ ಹೋಗಿ ಅಲ್ಲಿಯ ಅಂಗಡಿಗಳಲ್ಲಿ ಯಾರಾದರೂ ಈಗ್ಗೆ ಸುಮಾರು 15 ದಿನಗಳ ಹಿಂದೆ ನೀರು ಸೇದುವ ಹಗ್ಗವನ್ನು ಖರೀದಿಸಿದ್ದರೆ ಎಂದು ವಿಚಾರಿಸಿ ಈ ಪ್ರಕರಣಕ್ಕೆ ಸಮ್ಮಂಧ ಪಟ್ಟಂತೆ ಹೇಳಿಕೆ ದಾಖಲು ಮಾಡಿ ಕಡತದಲ್ಲಿ ಇಡು ' ಎಂದರು.


     ' ಮತ್ತೆ ಈ ಶವದ ಅಂತ್ಯ ಸಂಸ್ಕಾರ ' ಎಂದರು ಅಲಿ.


     ' ಆಂಜನೇಯ ಮತ್ತು ಮುನಿಸ್ವಾಮಿಯ ಹುಡುಗರು ನೋಡಿಕೊಳ್ಳುತ್ತಾರೆ ' ಎಂದರು ಮಂಜಪ್ಪಗೌಡ.



                                                                     ***


          ಮುನಿಸ್ವಾಮಿ ಸೌದೆ ತಂದ ಕ್ಯಾಂಟರ್ ವಾಹನದಲ್ಲಿ ನುಸ್ರತ್ ಅಲಿ ಮತ್ತು ಮಂಜುನಾಥ ಕುಮರಿ ಕಡೆಗೆ ಹೊರಟರು. ಪಿಎಸ್ಐ ಮಂಜಪ್ಪ ಗೌಡ ವೆಂಕಟಯ್ಯನ ಜೊತೆ ಚುರ್ಚಗುಂಡಿಗೆ ಹೋಗಲು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನೆಡೆಗೆ ಸಾಗಿ ಬಂದು ಚುರ್ಚಗುಂಡಿಯೆಡೆಗೆ ಹೊರಟರು. ಸೂರ್ಯ ಪಶ್ಚಿಮ ದಿಕ್ಕಿನೆಡೆಗೆ ತನ್ನ ದಿನದ ಅಭಿಯಾನ ಮುಗಿಸಿ ಸಾಗಿದ್ದ. ಶವದ ಕೈಕಾಲುಗಳು ಸೆಟೆದು ಕೊಂಡಿದ್ದು ಆರಡಿ ಉದ್ದ ಮೂರಡಿ ಅಗಲಕ್ಕೆ ಸಮಾನಾಂತರವಾಗಿ ನೇರವಾದ ಸ್ವಲ್ಪ ದಪ್ಪಗಿನ ಉದ್ದವಾಗಿದ್ದ ನಾಲ್ಕು ಕಟ್ಟಿಗೆಯ ಬಡಿಕೆಗಳನ್ನು ಗುದ್ದು ತೋಡಿ ನಿಲ್ಲಿಸಿದರು. ಕೆಳ ಭಾಗದಲ್ಲಿ ದಪ್ಪಗಿನ ಕಟ್ಟಿಗೆಯ ತುಂಡುಗಳ ಒಂದು ಪದರವನ್ನು ಜೋಡಿಸಿ ಕ್ರಮೇಣ ಮೇಲು ಮೇಲಕ್ಕೆ ಸಣ್ಣ ದೊಡ್ಡ ಕಟ್ಟಿಗೆಯ ತುಂಡುಗಳನ್ನು ಜೋಡಿಸಿ ಚಿತಾಸ್ಥರವನ್ನು ಸಿದ್ಧ ಪಡಿಸಿ ಅದರ ಮೇಲೆ ಮೃತ ' ಅಪರಿಚಿತ ' ವ್ಯಕ್ತಿಯ ಶವವನ್ನಿರಿಸಿ ಅದರೆ ಎದೆಯ ಮೇಲೆ ದೊಡ್ಡ ಬೊಡ್ಡೆಯೊಂದನ್ನು ಇರಿಸಿ ಶವದ ಮೈಮೇಲೆ ಕಟ್ಟಿಗೆಗಳನ್ನು ಒಟ್ಟಿ ಒಣ ದರಗನ್ನು ಒಟ್ಟು ಮಾಡಿ ತಂದು ಚಿತೆಯ ಕೆಳಗೆ, ಮೇಲೆ ಮತ್ತು ಮಧ್ಯ ಭಾಗದಲ್ಲಿ ಅಲ್ಲಲ್ಲಿ ಇಟ್ಟು ಅದಕ್ಕೆ ಸೀಮೆ ಎಣ್ಣೆಯನ್ನು ಸುರಿದರು. ಆಂಜನೇಯ ಅದಕ್ಕೆ ಕಡ್ಡಿಯನ್ನು ಗೀರಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ. ಬಂಧುಗಳ, ಸ್ನೇಹಿತರ ಮತ್ತು ಗ್ರಾಮಸ್ಥರ ಉಪಸ್ಥಿತಿಯ ದುಃಖಕರ ಸನ್ನಿವೇಶದಲ್ಲಿ ಎಲ್ಲ ವಿಧಿ ವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ಮಾಡಿಸಿ ಕೊಳ್ಳ ಬೇಕಾದ ವ್ಯಕ್ತಿ ಇಲ್ಲಿ ಅಪರಿಚಿತ ಕಾಡಿನಲ್ಲಿ ನೇಣಿಗೆ ಕೊರಳೊಡ್ಡಿ ಸತ್ತು, ಬೆರಳೆಣಿಕೆಯ ಕೆಲವೆ ಅಪರಿಚಿತ ವ್ಯಕ್ತಿಗಳ ಕೈಯಲ್ಲಿ ಅಗ್ನಿ ಸಂಸ್ಕಾರ ಮಡಿಸಿಕೊಂಡಿದ್ದ. ಚಿತೆಯ ಮೇಲೆ ಹೆಣ ಬೇಯುತ್ತಿತ್ತು, ಆ ಬೇಯುವ ವಾಸನೆ ಸುತ್ತ ಮುತ್ತ ದಟ್ಟವಾಗಿ ವ್ಯಾಪಿಸಿತ್ತು. ಯಾಕೋ ಏನೋ ಆಂಜನೇಯನಿಗೆ ಆ ಸನ್ನಿವೇಶ ಅಸಹನೀಯ ವೆನಿಸ ತೊಡಗಿತು.


     ಹೊತ್ತು ಮುಳುಗಿ ನಿಶೆ ಜಗವನ್ನಾವರಿಸುತ್ತಿದ್ದಳು. ದಟ್ಟವಾದ ಕರಿಮೋಡಗಳು ಎಲ್ಲೆಡೆಯಿಂದಲೂ ಆವರಿಸಿ ಕೊಳ್ಳುತ್ತಿದ್ದವು. ಅಡ್ಡ ಮಳೆಗಾಲದ ದಿನಮಾನ ಜೋರಾಗಿ ಗಾಳಿ ಬೀಸ ತೊಡಗಿತು. ಚಿತೆಯ ಜ್ವಾಲೆಗಳು ಗಾಳಿಯ ದಿಕ್ಕಿನೆಡೆಗೆ ಉರಿಯ ತೊಡಗಿದವು.. ಸಣ್ಣಗೆ ಹನಿಯಲು ಪ್ರಾರಂಭಿಸಿದ ಮಳೆ ಜೋರಾಗುವ ಲಕ್ಷಣ ಕಾಣ ತೊಡಗಿತು. ಪರಿಣಾಮ ಚಿತೆಯ ಉರಿಯ ಪ್ರಖರತೆ ಕಡಿಮೆಯಾಯಿತು. ಹೆಣ ಒಂದು ಬದಿಗೆ ವಾಲಿತು. ಮುನಿ ಸ್ವಾಮಿಯ ಹುಡುಗರು ಹೋಗುವ ತವಕದಲ್ಲಿದ್ದರು.


     ಅವರ ಪೈಕಿ ಒಬ್ಬ ಹುಡುಗ ' ಹೋಗುವ ಬನ್ನಿ ಸಾರ್ ' ಎಂದ.


     ' ಈ ಹೆಣ ಪೂರ್ತ ಸುಡುವ ವರೆಗೆ ನಾನು ಬರುವಂತಿಲ್ಲ, ನಾನು ಇಲ್ಲಿಯೇ ಇರುತ್ತೇನೆ,  ಕುಮರಿಯಲ್ಲಿ ನಮ್ಮ ಅಲಿ ಸಾಹೇಬರು ಸಿಕ್ಕರೆ ಅವರಿಗೆ ಈ ವಿಷಯ ತಿಳಿಸಿ ' ಎಂದ ಆಂಜನೇಯ ವಿಚಾರಕ್ಕೆ ಬಿದ್ದ, ಹೋಗುವಂತೆಯೂ ಇಲ್ಲ ಹೋಗದೆ ಇರುವಂತೆಯೂ ಇಲ್ಲ. ನಿಧಾನಕ್ಕೆ ಚಿತೆಯ ಪ್ರಖರತೆ ಕಡಿಮೆಯಾಗುತ್ತ ಬರ ತೊಡಗಿತು. ಚಿತೆ ಆರಿದರೆ ಕಷ್ಟ ಎಂದರಿತ ಆತ ಚಿತೆಯ ಕಣ್ಣಳತೆಯ ಬೆಳಕಿನಲ್ಲಿ ಒಣ ದರಗುಗಳು ಮತ್ತು ಪುರಲೆಗಳನ್ನು ಒಟ್ಟು ಮಾಡಿ ಚಿತೆಯ ಪ್ರಖರತೆ ಹೆಚ್ಚಿಸುವ ಸನ್ನಾಹದಲ್ಲಿದ್ದ. ಅಲ್ಲಿಂದ ತೆರಳಿದ ಮುನಿಸ್ವಾಮಿಯ ಹುಡುಗರು ಮತ್ತೆ ಮರಳಿ ಬಂದರು. 



     ಆ ಪೈಕಿ ಒಬ್ಬ ' ಈಗ ಏನು ಮಾಡುವುದು ಸಾರ್ ' ಎಂದ.



     ' ಎಲ್ಲಿಂದಲಾದರೂ ಇನ್ನಷ್ಟು ಸೌದೆಯನ್ನು ತಂದು ಚಿತೆಗೆ ಹಾಕಿ ಹೆಣವನ್ನು ಪೂರ್ತಿಯಾಗಿ ಸುಟ್ಟು ಹಾಕಬೇಕು, ಇಲ್ಲದಿದ್ದರೆ ಅದೇ ಒಂದು ರಾದ್ಧಾಂತವಾಗುತ್ತದೆ ' ಎಂದ ಆಂಜನೇಯ.


     ಹುಡುಗರು ತಮ್ಮ ಬಳಿಯಿದ್ದ ಬೆಂಕಿಯ ಪೊಟ್ಟಣದ ಕಡ್ಡಿಗಳನ್ನು ಗೀರುತ್ತ ಸೌದೆಯ ಹುಡುಕಾಟ ನಡೆಸಿದರು. ಸುಮಾರು ಅರ್ಧ ಫರ್ಲಾಂಗ್ ದೂರದಲ್ಲಿ ಯಾರೋ ಕಡಿದು ಒಟ್ಟು ಮಾಡಿದ ಸೌದೆಯ ತುಂಡುಗಳಿದ್ದವು. ಹುಡುಗರು ತಮಗೆ ಬೇಕಾದಷ್ಟ ಸೌದೆಯ ತುಂಡುಗಳನ್ನು ಹೊತ್ತು ತಂದು ಚಿತೆಯ ಮೇಲಿರಿಸಿದರು. ಗಾಳಿ ಜೋರಾಗಿ ಬೀಸಿ ಕಾರ್ಮೋಡಗಳು ಚೆದುರಿ ಮಳೆ ನಿಂತಿತು. ಬೀಸುವ ಗಾಳಿಯ ರಭಸಕ್ಕೆ ಮತ್ತೆ ಚಿತೆ ಹೊತ್ತುರಿಯ ತೊಡಗಿತು.


     ' ಅಲ್ಲ ಸಾರ್ ಈ ಹೆಣದ ಜೊತೆ ನಿಮ್ಮೊಬ್ಬರನ್ನೆ ಬಿಟ್ಟು ನಿಮ್ಮವರು ಹೋದರಲ್ಲ ಏನಿದು ಸಾರ್ ' ಎಂದ ಒಬ್ಬ.


     ' ನಾನೊಬ್ಬನೆ ಎಲ್ಲೊ ನೀವೆಲ್ಲ ಇದೀರಲ್ಲ ' ಎಂದ ಆಂಜನೇಯ.


     ' ಒಂದು ವೇಳೆ ನಾವೂ ಹೊರಟು ಹೋಗಿದ್ದರೆ ? ಎಂದ ಮತ್ತೊಬ್ಬ.


     ' ನೀವೆಲ್ಲ ಹೊರಟು ಹೋಗಿದ್ದರೂ ನಾನು ಇರುತ್ತಿದ್ದೆ, ಹೆಣದ ದಹನ ಕ್ರಿಯೆ ಪೂರ್ತಿಯಾಗಿ ಮುಗಿಯುವ ವರೆಗೆ ಇಲ್ಲಿ ಇರಬೇಕಾದ್ದು ನನ್ನ ಕೆಲಸ ' ಎಂದ ಆಂಜನೇಯ.


     ಹೆಣ ಪೂರ್ತಿಯಾಗಿ ಸುಡುವ ಹೊತ್ತಿಗೆ ರಾತ್ರಿ ಎರಡು ಗಂಟೆಯಾಗಿತ್ತು. ಆಂಜನೇಯ ಮೃತನ ಬಟ್ಟೆಬರೆ, ನೇಣು ಹಾಕಿಕೊಳ್ಳಲು ಬಳಸಿದ ಬಟ್ಟೆಬರೆ ಅವನ ಹೆಣದ ಮೇಲೆ ದೊರೆತ ಎಲ್ಲ ವಸ್ತುಗಳನ್ನು ತೆಗೆದುಕೊಂಡು ಹೊರಡಲು ಉದ್ಯಕ್ತನಾದ.


     ' ಅವನ್ನೆಲ್ಲ ಎಸೆಯಿರಿ ಬಟ್ಟೆಗಳು ಕೊಳೆತು ನಾರುತ್ತಿವೆ ' ಎಂದ ಒಬ್ಬ.


     ' ಮೃತನ ಪತ್ತೆಗೆ ಈಗ ಸಹಾಯ ವಾಗುವುದು ಈ ಬಟ್ಟೆಗಳು ಮಾತ್ರ, ಹೀಗಾಗಿ ಅವೆಲ್ಲವೂ ಬೇಕು ' ಎಂದ ಆಂಜನೇಯ.


     ' ನಿಮ್ಮದೊಳ್ಳೆಯ ಹೆಣ ಕಾಯುವ ಕೆಲಸ ಬಿಡಿ ' ಎಂದು ಒಬ್ಬ ವ್ಯಂಗ್ಯವಾಡಿದ.


     ' ಹೌದು ನಮ್ಮದು ಹೆಣ ಕಾಯುವ ಕೆಲಸವೆ ' ಎಂದ ಆಂಜನೇಯ ಮುನಿಸ್ವಾಮಿಯ ಕೆಲಸಗಾರರ ಜೊತೆ ಕುಮರಿಗೆ ಮರಳಿ ಬಂದಾಗ ರಾತ್ರಿ ಮೂರು ಗಂಟೆ.
    


                                                                                                         ( ಮುಂದುವರಿದುದು )


 


 ಕಥೆಯ ಆರನೇ ಭಾಗಕ್ಕೆ ಲಿಂಕ್ ;www.sampada.net/blog/%E0%B2%85%E0%B2%AA%E0%B2%B0%E0%B2%BF%E0%B2%9A%E0%B2%BF%E0%B2%A4-%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-6/19/08/2012/38003


 


 


 


 


 


 


 


 


 


 


 


 


 


 


 


 


 


 



 

Rating
No votes yet

Comments