ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೮: ಸ್ತೋತ್ರ - ೭ರ ವ್ಯಾಖ್ಯಾನ

ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೮: ಸ್ತೋತ್ರ - ೭ರ ವ್ಯಾಖ್ಯಾನ

  ತ್ರಿಪುರ ಸುಂದರೀ ಅಷ್ಟಕಂ - ೭

 ಸಕುಙ್‍ಕುಮವಿಲೇಪನಾಂ ಅಲಕಚುಂಬಿಕಸ್ತೂರಿಕಾಂ
ಸಮಂದಹಸಿತೇಕ್ಷಣಾಂ ಸಶರಚಾಪಪಾಶಾಙ್‍ಕುಶಾಮ್l
ಅಶೇಷಜನಮೋಹಿನೀಂ ಅರುಣಮಾಲ್ಯ ಭೂಷಾಂಬರಾಂ
ಜಪಾಕುಸುಮಭಾಸುರಾಂ ಜಪವಿಧೌ ಸ್ಮರಾಮ್ಯಂಬಿಕಾಮ್      llll
 
ಜಪವಗೈಯುತ ಧ್ಯಾನಿಸುವೆ ನಾ ಕುಂಕುಮಾಂಕಿತ ಮಾತೆಯನು,
ಕಸ್ತೂರಿ ಸುವಾಸನೆಗೈವ ಮುಂಗುರುಳ ಹೊಂದಿರುವಾಕೆಯನು,
ಮೃದು ಮಧುರ ನಗೆಯ ಬೀರುತ ಧನುರ್ಬಾಣ ಪಾಶಂಕುಶವ ಪಿಡಿದಾಕೆಯ,
ಕೆಂಪು ಒಡವೆ ವಸ್ತ್ರ ಧರಿಸಿ ಕೆಂಪು ಮಂದಾರದ ತೆರದಿ ಜನಸಾಗರವ
                                                   ಸಂಮೋಹನಗೊಳಿಪಾಕೆಯ.
 
          ಈ ಪದ್ಯ ಪಂಕ್ತಿಯಲ್ಲಿ ತ್ರಿಪುರ ಸುಂದರಿಯನ್ನು ಕೆಂಪು ವರ್ಣದವಳನ್ನಾಗಿ ಚಿತ್ರಿಸಲಾಗಿದೆ. ಕೆಂಪು ಬಣ್ಣವು ಆಶೆಯ ಸಂಕೇತವಾಗಿದ್ದು ರಜೋ ಗುಣವನ್ನು ಪ್ರತಿನಿಧಿಸುತ್ತದೆ. ಅವಳು ಅನೇಕವಾಗ ಬಯಸುವ ಪರಬ್ರಹ್ಮದ ಆಸೆಯ ಮೂಲ. ಕೆಂಪು ಉದಯ ಭಾನುವಿನ (ಅರುಣನ) ಬಣ್ಣವೂ ಹೌದು, ಇದು ಕತ್ತೆಲೆಯನ್ನು ಹೋಗಲಾಡಿಸುವುದರ ದೈವೀ ಸಂಕೇತವಾಗಿದೆ. ದೇವಿಯು ಏಕಕಾಲಕ್ಕೆ ಮಾಯೆ (ಮೋಹಿನಿ, ಲಲಿತಾ ಸಹಸ್ರನಾಮ ೫೬೨ನೇ ನಾಮಾವಳಿ) ಮತ್ತು ಅದನ್ನು ನಾಶಗೊಳಿಸುವವಳು (ಮೋಹನಾಶಿನಿ, ಲಲಿತಾ ಸಹಸ್ರನಾಮ ೧೬೩ನೇ ನಾಮಾವಳಿ). ಕರ್ಮ ಮಾರ್ಗ ಅಥವಾ ಪ್ರವೃತ್ತಿ ಮಾರ್ಗವನ್ನು ಅನುಸರಿಸುವ ಭಕ್ತರಿಗೆ ಧ್ಯಾನ ಮಾಡಲು ಇದು ಅತ್ಯಂತ ಹೆಚ್ಚು ಸೂಕ್ತವಾದ ದೇವಿಯ ರೂಪ; ಏಕೆಂದರೆ ಇದು ಶಕ್ತಿಯ (ಚಟುವಟಿಕೆಯ) ಅಪರಾವತಾರವಾಗಿದೆ.
 
ಮೋಹಃ - "ಒಬ್ಬನು ಸತ್ಯವನ್ನು ಅರಿತುಕೊಳ್ಳುವ ಗೋಜಿಗೆ ಹೋಗದೆ, ಪ್ರಾಪಂಚಿಕ ವಸ್ತುಗಳನ್ನು ನಿಜವೆಂದು ನಂಬುವಂತೆ ಅವನ ಮನಸ್ಸಿಗೆ ಭ್ರಮೆಯುಂಟು ಮಾಡಿ ಅವುಗಳ ಬಂಧನಕ್ಕೊಳಗಾಗಿಸಿ, ಅವನನ್ನು ಇಂದ್ರಿಯ ಸುಖಗಳಿಗೆ ದಾಸನನ್ನಾಗಿ ಮಾಡುವುದೇ ಮೋಹ"ವೆಂದು ಆಪ್ಟೆಯವರ ‘ವಿದ್ಯಾರ್ಥಿ ಸಂಸ್ಕೃತ-ಇಂಗ್ಲೀಷ್’ ಶಬ್ದಕೋಶವು ವ್ಯಾಖ್ಯಾನಿಸುತ್ತದೆ.  ("Delusion of mind which prevents one from discerning the truth and makes one believe in the reality of the worldly objects and to be addicted to the gratification of sensual pleasures" - Apte's Student's Sanskrit-English Dictionary).
 
          ದೇವಿಯು, ನಾಲ್ಕು ಕೈಗಳಲ್ಲಿ ಐದು ಪುಷ್ಪ ಬಾಣಗಳನ್ನು, ಕಬ್ಬಿನ ಜಲ್ಲೆಯ ಬಿಲ್ಲನ್ನು, ಅಂಕುಶ ಮತ್ತು ಪಾಶವನ್ನು ಹಿಡಿದು ತನ್ನ ಪ್ರಭಾವವನ್ನು ಬೀರುತ್ತಿದ್ದಾಳೆ. ಆ ಐದು ಹೂವಿನ ಬಾಣಗಳಾದ ಕಮಲ, ಅಶೋಕ, ಮಾವು ಹೂವಿನ ಚಿಗುರು, ಮಲ್ಲಿಗೆ ಮತ್ತು ನೀಲಿ ಕಮಲ (ನೈದಿಲೆ), ಇವುಗಳೇನೆಂದು ವಿವೇಚಿಸಿ ನೋಡಿದಾಗ, ಇವುಗಳು ಕ್ರಮವಾಗಿ ಸೂಕ್ಷ್ಮರೂಪದ ಶಬ್ದ, ಸ್ಪರ್ಷ, ರೂಪ, ರಸ ಮತ್ತು ಗಂಧಗಳನ್ನು (ಪಂಚಭೂತಗಳ ತನ್ಮಾತ್ರೆಗಳನ್ನು) ಸ್ಥೂಲವಾಗಿ ಪ್ರತಿಬಿಂಬಿಸುವ ಸಂಕೇತಗಳೆಂದು ತಿಳಿದು ಬರುತ್ತದೆ. ಕಬ್ಬಿನ ಜಲ್ಲೆಯು ಮನಸ್ಸನ್ನು ಪ್ರತಿನಿಧಿಸಿದರೆ, ಪಾಶವು ಆಸೆ ಮತ್ತು ಮೋಹಗಳನ್ನು ಸೂಚಿಸುತ್ತದೆ ಮತ್ತು ಅಂಕುಶವು ಇವುಗಳ ಪ್ರಲೋಭನೆಗೆ ಒಳಗಾದಾಗ ಉಂಟಾಗುವ ಶಿಕ್ಷೆಯನ್ನು ಜ್ಞಾಪಿಸುತ್ತದೆ (ಅಥವಾ ದೇವಿಯು ಕೊಡಬಹುದಾದ ಶಾಪವನ್ನು ಸಂಕೇತಿಸುತ್ತದೆ).
          ರಾಗಸ್ವರೂಪ ಪಾಶಾಢ್ಯಾ ಕ್ರೋಧಾಕಾರಾಂಕುಶೋಜ್ವಲಾ l
          ಮನೋರೂಪೇಕ್ಷುಕೋದಂಡಾ ಪಂಚತನ್ಮಾತ್ರಸಾಯಕಾ ll 
                           - (ಲಲಿತಾ ಸಹಸ್ರನಾಮ ಸ್ತೋತ್ರ ೨,೩)
 
          ಆಕರ್ಷಣೆ ಮತ್ತು ವಿಕರ್ಷಣೆ ವಿಷಯ ವಸ್ತುಗಳೆಡೆಗೆ ಮನಸ್ಸಿನ ಪ್ರತಿಕ್ರಿಯೆಗಳು. ಈ ಇಡೀ ಪ್ರಪಂಚವೇ  ಸ್ಥೂಲರೂಪದ ಪಂಚಭೂತಗಳ ಸಂಕೀರ್ಣಗಳಿಂದುಂಟಾದ ‘ಅಭಿವ್ಯಕ್ತ’ವಾಗಿದೆ. ಮನಸ್ಸು ಪಂಚೇಂದ್ರಿಯಗಳನ್ನು ಸಕ್ರಿಯಗೊಳಿಸುವ ಪ್ರಚೋದಕವಾಗಿದೆ ಮತ್ತು ವಿಷಯ ವಸ್ತುಗಳ ಅನುಭವವು ಇದರಿಂದ ಉಂಟಾಗುತ್ತದೆ. ಹಿಂದೂ ಪುರಾಣಗಳ ಪ್ರಕಾರ,  ಪರಬ್ರಹ್ಮನಿಂದ ಮೊದಲು ಉತ್ಪತ್ತಿಯಾದದ್ದು ’ಮಹತ್’ ಅಂದರೆ ವಿಶ್ವದ ಮನಸ್ಸು; ಇದನ್ನು ಅನುಸರಿಸಿ ಉತ್ಪನ್ನವಾದವುಗಳೇ ಐದು ತನ್ಮಾತ್ರಗಳು. ಈ ಪಂಚ ತನ್ಮಾತ್ರೆಗಳ ಸಂಕೀರ್ಣವೇ ಈ ವಿಶ್ವದ ಉಗಮಕ್ಕೆ ಕಾರಣವಾಯಿತು. ದೇವಿಯು ಕೈಯ್ಯಲ್ಲಿ ಹಿಡಿದಿರುವ ಕಬ್ಬಿನ ಜಲ್ಲೆಯು ಈ ವಿಶ್ವದ ಮನಸ್ಸಿನ ಪ್ರತೀಕವಾದರೆ, ದೇವಿಯ ಕೈಯ್ಯಲ್ಲಿ ಇರುವ ಐದು ಹೂವಿನ ಬಾಣಗಳು ಪಂಚಭೂತಗಳ ಸ್ಥೂಲ ರೂಪವನ್ನು ಪ್ರತಿನಿಧಿಸುತ್ತವೆ. ದೇವಿಯು ಇವುಗಳನ್ನು ಮಾರ್ಪಾಡುಗೊಳಿಸುವುದರ ಮೂಲಕ ಈ ಜಗತ್ತನ್ನು ಅಸ್ತಿತ್ವಕ್ಕೆ ತರುತ್ತಾಳೆ.
 
          ವಿಶ್ವದ ಒಡತಿಯಾಗಿರುವ (ರಾಜ ರಾಜೇಶ್ವರಿಯಾಗಿರುವ) ದೇವಿಯು ತನ್ನ ಹೃದಯಕ್ಕೆ ಸನಿಹರಾಗಿರುವವರ ಯೋಗಕ್ಷೇಮವನ್ನು ನೋಡಬೇಕು (ಇದು ಅವಳ ಕೈಯ್ಯಲ್ಲಿರುವ ಪಾಶವು ಪ್ರತಿಬಿಂಬಿಸುತ್ತದೆ; ಇದರ ಮೂಲಕ ಅವಳು ತನ್ನ ಪ್ರಜೆಗಳನ್ನು ತನ್ನ ಬಂಧನದಲ್ಲಿರುಸಿಕೊಳ್ಳುತ್ತಾಳೆ; ತನ್ನ ಪ್ರೀತಿಯಲ್ಲಿ ಕಟ್ಟಿಹಾಕಿಕೊಳ್ಳುತ್ತಾಳೆ) ಮತ್ತು ಅವಳು ನ್ಯಾಯ ಮತ್ತು ನೀತಿಯನ್ನೂ ಎತ್ತಿ ಹಿಡಿಯಬೇಕು (ಇದು ಅವಳ ಕೈಯ್ಯಲ್ಲಿರುವ ಆನೆಯನ್ನು ಪಳಗಿಸಲು ಬಳಸುವ ಅಂಕುಶವು ಪ್ರತಿನಿಧಿಸುತ್ದೆ; ಪ್ರಜೆಗಳನ್ನು ಅಂಕೆಯಲ್ಲಿಡುತ್ತಾಳೆ). ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅದು ದೇವಿಯು ಈ ವಿಶ್ವವನ್ನು ಅಸ್ತಿತ್ವಕ್ಕೆ ತಂದು ಅದನ್ನು ಪರಿಪಾಲಿಸುತ್ತಾಳೆ.
 
          ಯೋಗಿಹೃದಯವು ಹೇಳುತ್ತದೆ - "ಪಾಶವು ಅವಳಿಷ್ಟದಂತೆ ಮಾಡುವ ಶಕ್ತಿಯನ್ನು (ಇಚ್ಛಾ ಶಕ್ತಿ), ಅಂಕುಶವು ಅವಳ ವಿವೇಕದ ಶಕ್ತಿಯನ್ನು (ಜ್ಞಾನ ಶಕ್ತಿ), ಮತ್ತು ಬಾಣಗಳು ಆಕೆಯ ಕಾರ್ಯ ಶಕ್ತಿಯನ್ನು (ಕ್ರಿಯಾ ಶಕ್ತಿ) ಸಂಕೇತಿಸಿದರೆ, ಬಿಲ್ಲು ಇವುಗಳನ್ನು ದೇದೀಪ್ಯಗೊಳಿಸುತ್ತದೆ.
 
          ಇಚ್ಛಾಶಕ್ತಿಮಯಂ ಪಾಶಮ್ ಅಂಕುಶಂ ಜ್ಞಾನರೂಪಿಣಾಮ್ l
          ಕ್ರಿಯಾಶಕ್ತಿಮಯಂ ಬಾಣಧನುಷಿದಧಾದುಜ್ವಲಮ್ ll (ಅಧ್ಯಾಯ ೬, ಸ್ತೋತ್ರ ೫೩)
*****
ವಿ.ಸೂ.: ಈ ಕಂತಿನ ಶ್ಲೋಕ - ೭ರ ಭಾಗವು ’ತ್ರಿಪುರ ಸುಂದರೀ ಅಷ್ಟಕಮ್"- ಪ್ರಕಟಣೆ(೧೯೮೬): ಅಧ್ಯಕ್ಷರು, ಶ್ರೀ ರಾಮಕೃಷ್ಣ ಮಠ, ಮೈಲಾಪುರ್, ಮದ್ರಾಸ್ - ೬೦೦ ೦೦೪, ಪುಸ್ತಕದ ೫೧ರಿಂದ ೫೪ನೇ ಪುಟದ ಅನುವಾದವಾಗಿದೆ. ಮೂಲ ಇಂಗ್ಲೀಷ್ ಕರ್ತೃ - ಶ್ರೀಯುತ ಎಸ್. ಕಾಮೇಶ್ವರ್, ಮುಂಬಯಿ.
 
ಈ ಸರಣಿಯ ಹಿಂದಿನ ಲೇಖನ "ತ್ರಿಪುರ ಸುಂದರೀ ಅಷ್ಟಕಮ್ - ಭಾಗ ೭: ಸ್ತೋತ್ರ - ೬ರ ವ್ಯಾಖ್ಯಾನಕ್ಕೆ ಕೆಳಗಿನ ಕೊಂಡಿಯನ್ನು ನೋಡಿ:
 http://sampada.net/blog/%E0%B2%A4%E0%B3%8D%E0%B2%B0%E0%B2%BF%E0%B2%AA%E0%B3%81%E0%B2%B0-%E0%B2%B8%E0%B3%81%E0%B2%82%E0%B2%A6%E0%B2%B0%E0%B3%80-%E0%B2%85%E0%B2%B7%E0%B3%8D%E0%B2%9F%E0%B2%95%E0%B2%AE%E0%B3%8D-%E0%B2%AD%E0%B2%BE%E0%B2%97-%E0%B3%AD-%E0%B2%B8%E0%B3%8D%E0%B2%A4%E0%B3%8B%E0%B2%A4%E0%B3%8D%E0%B2%B0-%E0%B3%AC%E0%B2%B0-%E0%B2%B5%E0%B3%8D%E0%B2%AF%E0%B2%BE%E0%B2%96%E0%B3%8D%E0%B2%AF%E0%B2%BE%E0%B2%A8/24/08/2012/38065

ಚಿತ್ರ ಕೃಪೆ: ಗೂಗಲ್, ಕೊಂಡಿ: 

https://encrypted-tbn0.google.com/images?q=tbn:ANd9GcTwUK5bdfNIbMJm3ajKjbnpz64w0hSfLdbPmZRgnGzFfJAa5G9TTg

 

 

 

Rating
No votes yet

Comments