ಆತಂಕದ ಮನಸ್ಸು ಸಮಸ್ಯಗೆ ಆಹ್ವಾನ
ಭಾನುವಾರ ಸಂಜೆಯ ಸಮಯ. ತಂಪಾದ ಗಾಳಿ, ಮೋಡ ಕವಿದಿದೆ. ತುಂತುರು ಮಳೆ. ಕೆರೆಯ ಸುತ್ತ ನಡೆದಾಡಲು ಎಲ್ಲರಿಗೂ ಆಹ್ಲಾದಕರ ವಾತಾವರಣ.ಸ್ವಲ್ಪ ನಡೆದು, ಗೆಳೆಯರೊಡನೆ ಒಂದೆಡೆ ಕುಳಿತು ಮಾತನಾಡುತ್ತಿದ್ದೆ. ನನ್ನ ಮಗ ಹದಿಮೂರು ವರ್ಷದ ರಾಹುಲ್. ಮಳೆಯಲ್ಲೂ ಸಹ ಓಡುತ್ತಿದ್ದ. ಸಂಜೆ ಏಳು ಗಂಟೆಯಾಯಿತು. ಜನರೆಲ್ಲಾ ಮನೆಗೆ ತೆರಳುತ್ತಿದ್ದಾರೆ. ಕೆರೆಯಂಗಳದ ಹೊರಗಿನ ಬೃಹದ್ ಗಾತ್ರದ ಗೇಟ್ ಸಹಾ ಮುಚ್ಚಿ, ವಾಚ್ಮನ್ ಹೊರಡಲು ಸಜ್ಜಾಗಿದ್ದಾನೆ. ಕೆರೆಯ ಹೊರಗೆ ರಸ್ತೆಯಲ್ಲಿ ಮಾತನಾಡುತ್ತಾ ಇದ್ದ ನನಗೆ ಗಾಬರಿ.ರಾ ಹುಲ್ ಎಲ್ಲೂ ಕಾಣುತ್ತಿಲ್ಲ. ನನ್ನ ಮೊಬೈಲ್ ಅವನ ಬಳಿಯಿದೆ ಎಂಬ ಸಮಾಧಾನ.ಆದರೆ ಪೋನ್ ಮಾಡಿದರೂ ತೆಗೆಯುತ್ತಿಲ್ಲ. ಎಲ್ಲಿ ಹೋದ ? ಕತ್ತಲಾಗುತ್ತಿದೆ.ನನಗೆ ಗಾಬರಿ.ಹಾಗೇ ಸ್ವಲ್ಪ ಸಮಯದ ನಂತರ ಗೇಟ್ ಬಳಿಗೆ ಓಡಿ ಬರುತ್ತಿದ್ದ ಅವನನ್ನು ಕಂಡು ಖುಷಿಯಾಯಿತು. ಆದರೆ ಗೇಟ್ ಮುಚ್ಚಿದೆ. ಗೇಟ್ ಮೇಲೇರಿ ಹೊರ ಬರಲು ಅವನಿಗೆ ಹೇಳಿದೆನಾದರೂ, ಗೇಟ್ನ ಮೇಲೇರಿ ಚೂಪಾದ ಕಬ್ಬಿಣದ ಸಲಾಕೆಗಳಿಂದ ಏನೋ ಅನಾಹುತವಾಗುವುದೇ ಎಂಬ ಭಯ. ರಾಹುಲ್ ಗೇಟ್ ಹತ್ತುವ ಪ್ರಯತ್ನ ನಡೆಸಿದ. ತನ್ನ ಬಳಿಯಿದ್ದ ನನ್ನ ಮೊಬೈಲ್ ಹಾಗೂ ಜೇಬಿನಲ್ಲಿದ್ದ ವಸ್ತುಗಳನ್ನೆಲ್ಲಾ ನನಗೆ ರವಾನಿಸಿದ. ಗೇಟ್ ಹತ್ತಲು ಅಣಿಯಾದ. ಅಷ್ಠರಲ್ಲೇ ಕೆರೆಯ ಬಳಿ ಐ.ಜಿ.ಪಿ.ಸಹಾಯ್ ರವರ ಕಾರು.. ವಾಚ್ಮನ್ ಇಲ್ಲೇ ಇರಬಹುದು ಎನ್ನುತ್ತಾ ಕಾರಿಳಿದ ಅವರ ಗಮನ ಗೇಟ್ನ ಕಡೆಗೆ. ಗೇಟನ್ಮ್ನ ಪರಿಶೀಲಿಸಿದ ಅವರು ಗೇಟ್ಗೆ ಬೀಗ ಹಾಕೇ ಇಲ್ಲ, ಬರೇ ಚಿಲಕ ಹಾಕಿ ವಾಚ್ಮನ್ ಕಾಫಿ ಕುಡಿಯಲು ಹೋಗಿರಬಹುದು. ಎಂದು. ಒಂದೇ ನಿಮಿಷದಲ್ಲಿ ನಮ್ಮ ಗಾಬರಿ,ಆತಂಕ ಇವುಗಳಿಗೆ ತೆರೆ ಎಳೆದಿದ್ದರು.. ಟೆನಷನ್ ನಲ್ಲಿದ್ದ ನಮ್ಮ ಮನಸ್ಸು ಗಲಿಬಿಲಿ ಆಗಿ, ಗೇಟ್ ನ ಕಡೆ ಸರಿಯಾಗಿ ಗಮನವನ್ನೇ ಹರಿಸಿರಲಿಲ್ಲ. ನಂತರದಲ್ಲಿ ಗೇಟ್ ಚಿಲಕ ತೆಗೆದು ರಾಹುಲ್ ಹೊರ ಬಂದಿದ್ದ. ದೊಡ್ಡ ಗೇಟ್ ಹತ್ತಿ ಹುಷಾರಾಗಿ ಅವನನ್ನು ಇಳಿಸಿಕೊಳ್ಳುವ ಈ ನಿದರ್ಶನದಲ್ಲಿನ ಸಮಸ್ಯೆ : ಕೆರೆಯಂಗಳದಲ್ಲಿ ಉಳಿದ ರಾಹುಲ್ ಆಚೆ ಬರಬೇಕಿತ್ತು. ಹೇಗೆ? ಹೊರಬರುವ ಮಾರ್ಗ : ಗೇಟ್, ಅದು ಮುಚ್ಚಿತ್ತು ಎನ್ನುವುದರ ಪರಿವೆ ನನಗಿತ್ತಷ್ಠೆ ಹೊರತು, ಮುಚ್ಚಿದ ಗೇಟ್ ಗೆ ಬೇಗ ಹಾಕಿತ್ತೇ ಅಥವಾ ಚಿಲಕ ಹಾಕಿತ್ತೇ ಎಂದು ಪರೀಕ್ಷಿಸುವ ಸಂಯಮ, ತಾಳ್ಮೆ ಇರಲಿಲ್ಲ. ಬೀಗಹಾಕಿ ಗೇಟ್ ಮುಚ್ಚಲ್ಪಟ್ಟಿದೆ ಎಂಬ ತಪ್ಪು ಕಲ್ಪನೆ, ಪೂರ್ವಾಭಾವಿಯಾಗಿ ಮನಸ್ಸನ್ನು ಆವರಿಸಿತ್ತು.
ಮಕ್ಕಳೇ, ಇದರಿಂದ ನಾವು ಕಲಿಯಬಹುದಾದ ಪಾಠ : ಪ್ರಶ್ನೆ ಪತ್ರಿಕೆ ಕೊಟ್ಟ ನಂತರ ಪರೀಕ್ಷೆಯಲ್ಲಿ ಸಮಯದ ಸದುಪಯೋಗ ಮಾಡಿಕೊಳ್ಳಿ. ಪ್ರಶ್ನೆಯನ್ನು ಸರಿಯಾಗಿ ಓದಿ, ಅರ್ಥಮಾಡಿಕೊಂಡಲ್ಲಿ, ಅದಕ್ಕೆ ಸರಿಯಾದ ಉತ್ತರ ಬರೆಯುವುದು ಸುಲಭ. ಸಮಸ್ಯೆಯ ಅರಿವಿದ್ದರಷ್ಠೇ, ಸಮಸ್ಯೆಗೆ ಕಾರಣ ಹಾಗೂ ಪರಿಹಾರ ಕಂಡುಹಿಡಿಯಬಹುದು. ಇದನ್ನರಿಯ ಬೇಕಾದಲ್ಲಿ ಮನಸ್ಸು ಶಾಂತ ಸ್ಥಿತಿಯಲ್ಲಿದ್ದು, ಪ್ರಶಾಂತವಾಗಿರಬೇಕು. ಒತ್ತಡ, ಆತಂಕ, ಗಾಬರಿ, ಇವುಗಳನ್ನು ಮನಸ್ಸಿನಿಂದ ದೂರವಿಡಬೇಕು.