ಋಣಾನುಬಂಧ - ಭಾಗ 4
ನಿಗದಿಯಾದ ದಿನ ಸಿದ್ದಾರ್ಥನ ಮನೆಯಲ್ಲೇ ನಿಶ್ಚಿತಾರ್ಥದ ಕಾರ್ಯಕ್ರಮ ಏರ್ಪಡಿಸಿದ್ದರು. ಸಿದ್ದಾರ್ಥನ ಮನಸು ಈಗ ಶಾಲಿನಿಯನ್ನು ಮರೆತು ಕಲ್ಯಾಣಿಯನ್ನು ತುಂಬಿಕೊಂಡಿತ್ತು. ಎರಡೂ ಕುಟುಂಬದವರು ಸಂತೋಷ ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಾಲಿನಿಯ ತಾಯಿ ಮಾತ್ರ ಬಂದಿದ್ದರು. ಶಾಲಿನಿ ಬಂದಿಲ್ವಾ ಎಂದು ಕೇಳಬೇಕು ಎಂದುಕೊಂಡರೂ ಕೇಳದೆ ಸುಮ್ಮನಾದ ಸಿದ್ದಾರ್ಥ್. ಎಲ್ಲರೂ ಆಗಮಿಸಿದ ಮೇಲೆ ಸಿದ್ದಾರ್ಥ್ ಮತ್ತು ಕಲ್ಯಾಣಿ ಉಂಗುರಗಳನ್ನು ಬದಲಾಯಿಸಿಕೊಂಡರು. ಪುರೋಹಿತರು ಒಳ್ಳೆಯ ದಿನ ನೋಡಿ ಮದುವೆಯ ದಿನಾಂಕ ನಿಗದಿ ಪಡಿಸಿದರು.
ನಿಶ್ಚಿತಾರ್ಥವಾದ ಮಾರನೆ ದಿನ ಶಾಲಿನಿ ಕರೆ ಮಾಡಿದ್ದಳು. ಆಗಲೂ ಸಿದ್ದಾರ್ಥನಿಗೆ ಯಾಕೆ ಬರಲಿಲ್ಲ ಎಂದು ಕೇಳಬೇಕು ಎನಿಸಲಿಲ್ಲ. ಶಾಲಿನಿಯೇ ಹೇಗೆ ನಡೆಯಿತು ನಿಶ್ಚಿತಾರ್ಥ ಎಂದು ಕೇಳಿದಳು. ತುಂಬಾ ಚೆನ್ನಾಗಿ ನಡೆಯಿತು ಶಾಲು. ಕಲ್ಯಾಣಿ, ಅವರ ಅಪ್ಪ ಅಮ್ಮ ಎಲ್ಲರೂ ತುಂಬಾ ಚೆನ್ನಾಗಿ ನಡೆಸಿ ಕೊಟ್ಟರು. ನೀನು ನಿಮ್ಮಪ್ಪನನ್ನು ಬಿಟ್ಟು ಎಲ್ಲರೂ ಬಂದಿದ್ದರು. ನಿಮ್ಮಮ್ಮ ಇಲ್ಲೇ ಇದಾರೆ ಇವತ್ತು ಸಂಜೆ ಬರ್ತಾರೆ. ಇನ್ನು ಮೂರು ತಿಂಗಳು ಬಿಟ್ಟು ಮದುವೆ ಎಂದು ತೀರ್ಮಾನಿಸಿದ್ದಾರೆ. ಕಂಗ್ರಾಟ್ಸ್ ಕಣೋ ಸಿದ್ದು. ಅಪ್ಪನಿಗೆ ಮತ್ತೆ ಚೆನ್ನೈ ಗೆ ಟ್ರಾನ್ಸ್ಫರ್ ಆಗಿದೆ ಕಣೋ. ಹಾಗಾಗಿ ಅಪ್ಪ ಆ ಕೆಲಸದಲ್ಲಿ ಬ್ಯುಸಿ ಇದ್ದರು. ನನಗೆ ಕಾಲೇಜ್ ನಲ್ಲಿ ಬಹು ಮುಖ್ಯ ಕೆಲಸ ಇತ್ತು. ಹಾಗಾಗಿ ನನಗೂ ಬರಲಾಗಲಿಲ್ಲ ಕಣೋ ಸಾರಿ ಸಿದ್ದು. ಆಯ್ತು ಬಿಡು ಶಾಲು ನಾನೇನು ನಿನ್ನನ್ನು ಕೇಳಲಿಲ್ಲವಲ್ಲ ಯಾಕೆ ಬರಲಿಲ್ಲ ಅಂತ. ಅದು ಸರಿ ಯಾವಾಗ ಹೋಗ್ತಾ ಇದ್ದೀಯ ಚೆನ್ನೈ ಗೆ? ಯಾಕೋ ಸಿದ್ದು ನಾವು ಯಾವಾಗ ಹೋಗುತ್ತೀವಿ ಅಂತ ಕಾಯ್ತಾ ಇದ್ದೀಯ ಅನಿಸುತ್ತೆ. ಹ್ಮ್ಮ್...ಮುಂದಿನ ವಾರವೇ ಹೋಗುತ್ತಿದ್ದೇವೆ. ಇನ್ನು ಬಹುಶಃ ಅಲ್ಲೇ ಸೆಟಲ್ ಅನಿಸುತ್ತೆ. ಎನಿವೆಸ್ ಆಲ್ ದಿ ಬೆಸ್ಟ್ ಫಾರ್ ಯುವರ್ ಲೈಫ್ ಕಣೋ. ಕಲ್ಯಾಣಿನ ಕೇಳಿದೆ ಎಂದು ಹೇಳು. ಅವಳಿಗೂ ಆಲ್ ದಿ ಬೆಸ್ಟ್ ಹೇಳಿಬಿಡು ಎಂದು ಹೇಳುವಷ್ಟರಲ್ಲಿ ಅವಳಿಗೆ ಮಾತನಾಡಲು ಕಷ್ಟವಾಗುತ್ತಿತ್ತು. ಸರಿ ಸಿದ್ದು ಬೈ ಕಣೋ ಎಂದು ಕರೆ ಕಟ್ ಮಾಡಿದಳು.
ನಿಶ್ಚಿತಾರ್ಥದ ನಂತರ ಕೇವಲ ಮೂರು ತಿಂಗಳು ಇದ್ದಿದ್ದರಿಂದ ಸುಧಾರಿಸಿಕೊಳ್ಳಲು ಜಾಸ್ತಿ ಸಮಯ ಇರಲಿಲ್ಲ. ಸಿದ್ದಾರ್ಥ್ ಹಾಗೂ ಕಲ್ಯಾಣಿ ಇಬ್ಬರ ಮನೆಯಲ್ಲೂ ಮದುವೆ ಸಿದ್ಧತೆಗಳು ನಡೆದಿತ್ತು. ಕಲ್ಯಾಣಿ ತನ್ನ ಡಿಗ್ರೀ ಮುಗಿದ ಮೇಲೆ ಮನೆಯಲ್ಲೇ ಇದ್ದಳು. ಎಲ್ಲೂ ಕೆಲಸಕ್ಕೆ ಹೋಗುತ್ತಿರಲಿಲ್ಲ. ಹಾಗಾಗಿ ಮದುವೆಯ ಕೆಲಸದಲ್ಲಿ ತನ್ನ ತಾಯಿಗೆ ಸಹಾಯ ಮಾಡುತ್ತಿದ್ದಳು. ವಾರಾಂತ್ಯದಲ್ಲಿ ಸಿದ್ದು ಮತ್ತು ಕಲ್ಯಾಣಿ ಸಿನೆಮಾ, ಶಾಪಿಂಗ್ ಮಾಲ್ ಎಂದು ಸುತ್ತಾಡುತ್ತಿದ್ದರು. ಸಿದ್ದಾರ್ಥ್ ಈಗ ಶಾಲಿನಿಯ ಗುಂಗಿನಿಂದ ಸಂಪೂರ್ಣವಾಗಿ ಹೊರಬಂದು ಹೊಸ ಜೀವನ ಶುರು ಮಾಡುವುದರಲ್ಲಿದ್ದ. ಶಾಲಿನಿಯ ಕುಟುಂಬ ಮತ್ತೆ ವಾಪಸ್ ಚೆನ್ನೈಗೆ ಹೋದ ಮೇಲೆ ಶಾಲಿನಿ ಒಂದೆರಡು ಬಾರಿ ಸಿದ್ದಾರ್ಥನ ಜೊತೆ ಮಾತಾಡಿದ್ದಳು. ಅಲ್ಲಿ ಪ್ರೀತಿಯ ಬದಲಾಗಿ ಎಂದಿನ ಗೆಳೆತನದ ಮಾತಿತ್ತು ಅಷ್ಟೇ. ಒಮ್ಮೆ ಸಿದ್ದಾರ್ಥನಿಗೆ ಕಲ್ಯಾಣಿಯ ಮುಂದೆ ಶಾಲಿನಿಯ ವಿಷಯ ಹೇಳಿಬಿಡೋಣ ಎಂದೆನಿಸಿದರೂ ಮರುಕ್ಷಣದಲ್ಲೇ ಅದು ಮುಗಿದು ಹೋಗಿರುವ ಕಥೆ. ಅದನ್ನು ಯಾಕೆ ಅವಳಿಗೆ ಹೇಳಬೇಕು ಎಂದುಕೊಂಡು ಸುಮ್ಮನಾದ.
ನೋಡ ನೋಡುತ್ತಿದ್ದಂತೆ ಮದುವೆಯ ದಿನ ಬಂದೆ ಬಿಟ್ಟಿತ್ತು. ಹಿಂದಿನ ದಿನವೇ ಶಾಲಿನಿಯ ತಾಯಿ ಚೆನ್ನೈ ನಿಂದ ಆಗಮಿಸಿದ್ದರು. ಈ ಬಾರಿಯೂ ಶಾಲಿನಿಯು ಬಂದಿರಲಿಲ್ಲ. ಶಾಲಿನಿಯ ತಾಯಿಯ ಬಳಿ ಯಾಕೆ ಶಾಲು ಬಂದಿಲ್ಲ ಎಂದು ಕೇಳಿದ್ದಕ್ಕೆ ಇಲ್ಲ ಸಿದ್ದು ಅವಳಿಗೆ ಯಾಕೋ ಹುಷಾರಿರಲಿಲ್ಲ. ಹಾಗಾಗಿ ಬರಲಿಲ್ಲ ಎಂದಷ್ಟೇ ಹೇಳಿದ್ದರು. ಸಿದ್ದು ನಿನ್ನ ಮುಖದಲ್ಲಿ ಮದುವೆ ಕಳೆ ಎದ್ದು ಕಾಣುತ್ತಿದೆ ಕಣೋ. ಬಹಳ ಮುದ್ದಾಗಿ ಕಾಣುತ್ತಿದ್ದೀಯ. ನನ್ನ ದೃಷ್ಟಿಯೇ ಆಗುತ್ತದೆ. ಅದ್ಯಾಕೋ ಗೊತ್ತಿಲ್ಲ ಸಿದ್ದು ನೀನೆ ನನ್ನ ಅಳಿಯ ಆಗಿದ್ದರೆ ಎಷ್ಟು ಚೆನ್ನಾಗಿತ್ತು ಎನಿಸುತ್ತಿದೆ ಎಂದು ಅವನ ಮುಖದ ದೃಷ್ಟಿ ತೆಗೆದು ಹೋದರು. ಆ ಒಂದು ಕ್ಷಣಕ್ಕೆ ಶಾಲಿನಿಯ ಮುಖ ಕಣ್ಣ ಮುಂದೆ ಬಂದು ಹೋದಂತಾಯಿತು ಸಿದ್ದಾರ್ಥನಿಗೆ.
ವಾಸ್ತವ
ಶಾಲಿನಿಯ ಮಾತುಗಳನ್ನು ಎಷ್ಟೇ ಮರೆಯಬೇಕೆಂದರೂ ಪದೇ ಪದೇ ಕಾಡುತ್ತಿತ್ತು. ಇಷ್ಟು ದಿವಸ ಸುಮ್ಮನಿದ್ದು ನನ್ನ ಮದುವೆಯ ದಿನವೇ ಯಾಕೆ ಅವಳು ಈ ಮಾತನ್ನು ಹೇಳಬೇಕಿತ್ತು. ನನ್ನ ಪಾಡಿಗೆ ನಾನು ಎಲ್ಲವನ್ನೂ ಮರೆತು ಆರಾಮಾಗಿ ಇದ್ದೆ. ಇಂಥಹ ಸಮಯದಲ್ಲಿ ಹೀಗೇಕೆ ಮಾಡಿದಳು. ಇರಲಿ...ಈಗ ಅದರ ಬಗ್ಗೆ ಯೋಚಿಸಿ ಏನೂ ಪ್ರಯೋಜನ ಇಲ್ಲ. ಈಗ ನನ್ನ ಗಮನ ಕಲ್ಯಾಣಿಯ ಕಡೆ ಇರಬೇಕು. ಆಕೆ ನನ್ನನ್ನೇ ನಂಬಿಕೊಂಡುಎಲ್ಲವನ್ನೂ ತೊರೆದು ಬಂದಿದ್ದಾಳೆ. ಅವಳಿಗೆ ನಾನು ದ್ರೋಹ ಮಾಡಬಾರದು ಎಂದು ಯೋಚಿಸಿ ಶಾಲಿನಿಯನ್ನು ಮರೆಯಲು ಶುರುಮಾಡಿದ.
ಹದಿನೈದು ದಿನ ಪ್ರಿಂಟಿಂಗ್ ಪ್ರೆಸ್ ಗೆ ರಜೆ ಹಾಕಿ ಕಲ್ಯಾಣಿಯೊಡನೆ ಹಾಯಾಗಿ ಸುತ್ತಾಡಿಕೊಂಡಿದ್ದ. ಕಲ್ಯಾಣಿಯೂ ಸಿದ್ದಾರ್ಥನ ಪ್ರೀತಿಗೆ ಮರುಳಾಗಿದ್ದಳು. ಅವನು ತೋರಿಸುತ್ತಿದ್ದ ಪ್ರೀತಿ, ಆತ್ಮೀಯತೆಯಲ್ಲಿ ಅವಳು ಸಂಪೂರ್ಣ ತನ್ಮಯಳಾಗಿದ್ದಳು. ಬೇರೆ ಬೇರೆಊರುಗಳೆಲ್ಲ ಸುತ್ತಾಡಿಕೊಂಡು ಬಂದು ಎರಡು ದಿನ ಕಲ್ಯಾಣಿ ಮನೆ, ನಂತರ ಬಂಧುಗಳ ಮನೆ, ಔತಣ ಅದೂ ಇದೂ ಎಂದುಕೊಂಡು ಹದಿನೈದು ದಿವಸ ಕಳೆದದ್ದೇ ಗೊತ್ತಾಗಲಿಲ್ಲ. ಹದಿನೈದು ದಿವಸದ ನಂತರ ಸಿದ್ದಾರ್ಥ ಕೆಲಸಕ್ಕೆ ಹೊರಡಲು ಶುರು ಮಾಡಿದ. ಅಂದಿನಿಂದ ಕಲ್ಯಾಣಿ ಮನೆಯಲ್ಲಿ ಅತ್ತೆಯ ಜೊತೆ ಮಾತಾಡಿಕೊಂಡು ಅವರ ಕೆಲಸದಲ್ಲಿ ಸಣ್ಣ ಪುಟ್ಟ ಸಹಾಯ ಮಾಡಿಕೊಂಡು ಸಮಯ ಸಾಗಿಸುತ್ತಿದ್ದಳು. ಸಿದ್ದಾರ್ಥ ಪ್ರೆಸ್ ಕೆಲಸ ಮುಗಿಸಿಕೊಂಡು ಸೀದಾ ಮನೆಗೆ ಬರುವಷ್ಟರಲ್ಲಿ ರಾತ್ರಿ ೮.೩೦ -೦೯.೦೦ ಆಗುತ್ತಿತ್ತು. ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು.
ಒಂದು ದಿವಸ ರಾತ್ರಿ ಸಿದ್ದಾರ್ಥ್ ಮನೆಗೆ ಬಂದು ಊಟ ಮಾಡಿ ಸ್ವಲ್ಪ ಹೊತ್ತು ಟಿವಿ ನೋಡಿ ಮಲಗಲು ರೂಮಿಗೆ ಬಂದಾಗ ಆಗಲೇ ಕಲ್ಯಾಣಿ ಮಂಚದ ಮೇಲೆ ಮಲಗಿದ್ದಳು. ಮನೆಗೆ ಬಂದಾಗಿನಿಂದ ಯಾಕೋ ಅವಳ ಮುಖ ಬಾಡಿದ್ದನ್ನು ಸಿದ್ದಾರ್ಥ ಗಮನಿಸಿದ್ದ. ಪಕ್ಕದಲ್ಲಿ ಹೋಗಿ ಕುಳಿತು ಯಾಕೆ ಕಲ್ಯಾಣಿ ಒಂದು ರೀತಿ ಸಪ್ಪಗಿದ್ದೀಯ? ಏನು ವಿಷಯ?. ಏನೂ ಇಲ್ಲ ನೀವು ಮಲಗಿ ಬೆಳಗಿನಿಂದ ಸುಸ್ತಾಗಿರುತ್ತೀರಾ ಆರಾಮಾಗಿ ಮಲಗಿ ಎಂದು ಮಲಗುವಂತೆ ನಾಟಕ ಆಡಿದಳು. ಕಲ್ಯಾಣಿ ಮೊದಲು ನೀನು ಏನಾಯ್ತು ಎಂದು ಹೇಳು ಆಮೇಲೆ ಮಲಗುತ್ತೀನಿ? ಹೇಳಿದ್ನಲ್ಲ ಏನೂ ಇಲ್ಲ ಅಂತ ಸುಮ್ಮನೆ ಮಲಗಿ ಎಂದು ಸ್ವಲ್ಪ ಖಾರವಾಗಿ ನೋಡಿದಳು. ಸರಿ ಏನೋ ಅಪ್ಪ ಅಮ್ಮನ ನೆನಪಾಗಿರಬಹುದು ಎಂದುಕೊಂಡು ಸಿದ್ದಾರ್ಥ ಸುಮ್ಮನೆ ಎದ್ದು ಮಲಗಲು ಸಿದ್ಧನಾಗುತ್ತಿದ್ದಂತೆ ಕಲ್ಯಾಣಿಯಿಂದ ಅನಿರೀಕ್ಷಿತವಾದ ಪ್ರಶ್ನೆಯೊಂದು ಬಾಣದಂತೆ ಬಂದಿತ್ತು.
ನೀವು ಶಾಲಿನಿಯನ್ನು ತುಂಬಾ ಪ್ರೀತಿಸುತ್ತಿದ್ದಿರ?ತಕ್ಷಣ ಸಿದ್ದಾರ್ಥನಿಗೆ ಶಾಕ್ ಹೊಡೆದಂತಾಯಿತು. ಆದರೂ ಸುಧಾರಿಸಿಕೊಂಡು ಯಾರು ಹೇಳಿದ್ದು ನಿನಗೆ? ಯಾರು ಹೇಳಿದ್ದು ಎಂಬುದು ಮುಖ್ಯ ಅಲ್ಲ. ನೀವು ಪ್ರೀತಿಸುತ್ತಿದ್ದಿರ ಇಲ್ಲವ ಅಷ್ಟೇ?
ನೋಡು ಕಲ್ಯಾಣಿ ನಾನೇ ನಿನಗೆ ಎಲ್ಲ ವಿಷಯ ಹೇಳೋಣ ಎಂದು ಕೊಂಡಿದ್ದೆ. ಆದರೆ ಈಗಷ್ಟೇ ಮದುವೆಯಾಗಿದೆ ನಿಧಾನವಾಗಿ ಹೇಳೋಣ ಎಂದುಕೊಂಡು ಸುಮ್ಮನಾದೆ. ಈಗ ನೀನೆ ಕೇಳಿದೆಯಲ್ಲ ಹೇಳುತ್ತೀನಿ. ಕಲ್ಯಾಣಿ ಶಾಲಿನಿಯನ್ನು ನಾನು ಪ್ರೀತಿಸಿದ್ದು ನಿಜವೇ. ಆದರೆ ಅವಳ ಮನಸಿನಲ್ಲಿ ನನ್ನ ಬಗ್ಗೆ ಆ ರೀತಿಯ ಯಾವುದೇ ಭಾವನೆ ಇರಲಿಲ್ಲವಾದ್ದರಿಂದ ಆ ವಿಷಯವನ್ನು ಅಲ್ಲಿಗೆ ಬಿಟ್ಟು ಬಿಟ್ಟೆ. ಈಗ ಅದು ಮುಗಿದು ಹೋದ ಕಥೆ. ಅದು ಸರಿ ನಿನಗೆ ಯಾರು ಹೇಳಿದ್ದು ಈ ವಿಷಯವನ್ನು?
ನಿಮ್ಮ ತಾಯಿಯೇ ಹೇಳಿದ್ದು. ಶಾಲಿನಿಯನ್ನು ಕೇಳಲು ನಿಮ್ಮ ತಂದೆ ಅವರ ಮನೆಗೆ ಹೋದಾಗ ಶಾಲಿನಿಯ ತಾಯಿಗೆ ಒಪ್ಪಿಗೆ ಇತ್ತಂತೆ. ಆದರೆ ಅವರ ತಂದೆ ನನ್ನ ಮಗಳು ಡಾಕ್ಟರ ಓದುತ್ತಿದ್ದಾಳೆ, ನಾನು ಯಾವುದಾದರೂ ಡಾಕ್ಟರ ಗೆ ಕೊಟ್ಟು ಮದುವೆ ಮಾಡಬೇಕು ಎಂದಿದ್ದೇನೆ ಎಂದು ಅವಮಾನ ಮಾಡಿದರಂತೆ. ಅದಕ್ಕೆ ನಿಮ್ಮ ತಂದೆ ಆ ಕೋಪದಲ್ಲಿ ನಿಮಗೆ ಅರ್ಜೆಂಟಾಗಿ ಮದುವೆ ಮಾಡಬೇಕು ಎಂದು ತೀರ್ಮಾನ ಮಾಡಿದ್ದು ಎಂದು ತಿಳಿಸಿದರು. ನಿಜವಾಗಿಯೂ ನೀವು ಮನ:ಪೂರ್ವಕವಾಗಿಯೇ ನನ್ನನ್ನು ಮೆಚ್ಚಿ ಮದುವೆ ಆಗಿದ್ದೀರಾ ತಾನೇ?
ಹೌದು ಕಲ್ಯಾಣಿ ನಾನು ಹೇಳಿದೆನಲ್ಲ ನನ್ನ ಮನಸಿನಲ್ಲಿ ಈಗ ನಿನ್ನನ್ನು ಬಿಟ್ಟು ಬೇರೆ ಯಾರೂ ಇಲ್ಲ. ಶಾಲಿನಿ ನನ್ನ ಬಾಳಿನ ಪುಸ್ತಕದಲ್ಲಿ ಒಂದು ಮುಗಿದು ಹೋಗಿರುವ ಅಧ್ಯಾಯ. ನೀನು ಅದರ ಬಗ್ಗೆ ಯಾವುದೇ ಭಯ ಇಟ್ಟುಕೊಳ್ಳಬೇಡ. ಎಂದು ಅವಳ ಹಣೆಗೆ ಒಂದು ಮುತ್ತನಿಟ್ಟ. ಆಗ ಕಲ್ಯಾಣಿ ಮುಖದಲ್ಲಿ ಒಂದು ನಗು ಮೂಡಿತು