ಸುಬ್ಬನ ಮನೆಯಿಂದ ಮತ್ತೊಬ್ಬ ಅತಿಥಿ !

ಸುಬ್ಬನ ಮನೆಯಿಂದ ಮತ್ತೊಬ್ಬ ಅತಿಥಿ !

 

ತುಂಬಾ ಬ್ಯುಸಿ ಇದ್ದೆ .. Facebook ನೋಡ್ತಿದ್ದೆ ... friend request ಕಾಣಿಸಿತು ... ನಂಬಲಿಕ್ಕೇ ಆಗ್ಲಿಲ್ಲ ... 

 

ಖಂಡಿತ ’ಅಬ್ದುಲ್ ಕಲಾಂ’ ಅವರಿಂದ ಬಂದ ರಿಕ್ವೆಸ್ಟ್ ಆಗಿರಲಿಲ್ಲ .... ಬಂದಿದ್ದು ಸುಬ್ಬನ ಅಜ್ಜಿ’ಯಿಂದ ! 'accept' ಮಾಡಿಯೇಬಿಟ್ಟೆ ... 

 

’ಅಜ್ಜಿ’ಯ ಅಂದಿನ-ಇಂದಿನ ಚಿತ್ರಗಳು ಇದ್ದವು ... ಸುಮಾರು ಜನ ಲೈಕ್ ಹಕಿದ್ರೂ, ಸುಬ್ಬನ ತಾತ’ನಿಂದ ಒಂದೂ ಇರಲಿಲ್ಲ !! ಪಾಪ ಹೇಗೆ ಹಾಕ್ತಾರೆ ... ಅವರು ತೀರಿಕೊಂಡೇ ಹತ್ತು ವರ್ಷವಾಯ್ತಲ್ಲ !! AD, BC ಅರ್ಥಾತ್ ’ಕ್ರಿ.ಪೂ, ಕ್ರಿ.ಶ’ ಎಲ್ಲ ಹಳತಾಯಿತು ... BFB, AFB ಅರ್ಥಾತ್ ’ಫೇಸ್ಬುಕ್.ಪೂರ್ವ, ಫೇಸ್ಬುಕ್.ಶಕ’ ... ಸುಬ್ಬನ ತಾತ ’ಫೇಸ್ಬುಕ್ ಪೂರ್ವ ೨೦೦೨’ರಲ್ಲೇ ಇಲ್ಲವಾದರು’ ..

 

ಅಜ್ಜಿಯ ಕಡೆಯಿಂದ ಕೇವಲ ಒಂದು ಅಪ್ಡೇಟ್ ಇತ್ತು .. ಗಮನ ಸೆಳೆಯಿತು ... ಬೇಸರದ ಚಿನ್ಹೆ ಹಾಕಿದ್ದರು ... ಅದಕ್ಕೊಂದಿಷ್ಟು ಜನ Unlike ಬಟನ್ ಒತ್ತಿದ್ದರು ... ಕೆಳಮುಖದ ಬೆರಳ ಚಿನ್ಹೆಯ ಮುಂದೆ ೫೪೫ ಅನ್ನೋ ಸಂಖ್ಯೆ ಬೇರೆ ! ಯಾಕೆ ಏನಾಯ್ತು ಎಂದು ಯಾರೋ ಕೇಳಿದ್ದ ಪ್ರಶ್ನೆಗೆ ’ಸುಬ್ಬನಿಗೆ ಇನ್ನೂ ಬುದ್ದಿ ಬಂದಿಲ್ಲ’ ಅಂತ ಹಾಕಿರೋದೇ? ನಾನೂ ಅನ್ಲೈಕ್ ಒತ್ತೋಣ ಅಂದುಕೊಂಡೆ. ಅಪ್ಪಿ ತಪ್ಪಿ ಅಜ್ಜಿ ’ಎಲ್ಲಾ ನಿನ್ನಿಂದ್ಲೇ’ ಅಂತೇನೋ ಕಮೆಂಟ್ ಹಾಕಿಬಿಟ್ರೆ? ೫೪೫ ಮಂದಿ ಮುಂದೆ ನನ್ ಮಾನ ಹರಾಜ್ ... ಬ್ಯಾಡಪ್ಪೋ ...

 

ಮತ್ತೊಂದು ಚಿತ್ರ ಕಣ್ಣಿಗೆ ಬಿತ್ತು ... ಅದ್ಬುತವಾಗಿ ಹದಿನೆಂಟು ಮೊಳದ ಧರ್ಮಾವರಂ ಸೀರೆ ಉಟ್ಟು, ತಲೆ ತುಂಬ ಮಲ್ಲಿಗೆ ಹೂವು ಮುಡಿದು, ಕಿವಿಗೆ ವಜ್ರದೋಲೆ ತೊಟ್ಟು, ಮುತ್ತಿನ ಮೂಗುತಿ ಹೊತ್ತು, ಢಾಳಾದ ಹಣೆ ಕುಂಕುಮ ಹೊತ್ತ ಅಜ್ಜಿಯ ಲೈಫ್ ಸೈಜ್ ಚಿತ್ರ ... ಖುಷಿಯಾಯ್ತು ... ಗೌರವದಿಂದ ಮನ ತುಂಬಿ ಬಂತು ಕಣ್ರೀ ... ’ಲೈಕ್’ ಒತ್ತಿದೆ ... ಯಾಕೋ ತೊಗೊಳ್ಳಿಲ್ಲ ... ಮತ್ತೆ ಕ್ಲಿಕ್ಕಿಸಿದೆ .. ಊಹು ... ಮತ್ತೆ ...ಊಹೂ

 

"ಅದೆಂಥದು, ಆಗಿನಿಂದ ನನ್ನ ಮೂತಿ ತಿವಿಯುತ್ತಿರುವುದು? ಕನಸಲ್ಲೂ ನನ್ನ ಬೈದುಕೊಳ್ತಿದ್ದೀರಾ?" ಅಂತ ಸ್ವರ ಬಂತು, ಹೆಂಡತಿಯಿಂದ ! ಓಹೋ!! ಇಷ್ಟು ಹೊತ್ತೂ ಕಂಡಿದ್ದು ಕನಸು ಅಂತಾಯ್ತು !!!

 

ಘಂಟೆ ಅರಾಗಿತ್ತು ... ಅಜ್ಜಿಯ ನೆನಪಿಂದ ನಿದ್ದೆ ಹಾರಿಹೋಗಿತ್ತು ... ಸುಬ್ಬನ ಖಾಂದಾನೇ ಹಾಗೆ ... ಎದ್ದೇಬಿಟ್ಟೆ. "ರವಿವಾರ ಆಯ್ತಲ್ಲ ಇವತ್ತು. ಇಷ್ಟು ಬೇಗ ಎಂತಕೆ ಏಳುವುದು? ನಿಮಗೇನಾದ್ರೂ ಹಬ್ಬದ ಅಡಿಗೆ ಮಾಡ್ಲಿಕ್ಕೆ ಉಂಟ?" ಎಂದಳಾ ನನ್ನಾಕೆ. "ಏನಿಲ್ಲ ಕಣೇ ... ಸುಬ್ಬನ ಅಜ್ಜಿ ನೆನಪಾದ್ರು" ಅದಕ್ಕವಳು "ನಿಮ್ಮ ಮಂಡೆಗೆ ನನ್ನ ಬಿಟ್ಟು ಇನ್ನೆಲ್ಲ ಹೆಂಗಸರೂ ಬರ್ತಾರೆ. ಹೌದಲ್ಲ?" ಅಂದು ಮುಸುಕು ಹೊದ್ದು ಮಲಗಿದಳು.

 

ಅವಳು ಎದ್ದಾಗ, ಒಳ್ಳೇ ಸ್ಟ್ರಾಂಗ್ ಕಾಫಿ ಮಾಡಿ ಕೈಯಲ್ಲಿಟ್ಟರೆ, ಸಂಡೆ ಬೆಳಿಗ್ಗೆ ಬೆಳಿಗ್ಗೆ ಆಗಿರೋ ಅವಳ ಮಂಡೆ ಬಿಸಿ ಸರಿ ಹೋಗುತ್ತೆ ಅಂತ ಅಂದುಕೊಂಡು, ಎದ್ದು ನಿತ್ಯಕರ್ಮ ಮುಗಿಸಿ, ಕಾಫಿ ಮಾಡಿಕೊಂಡು ಕುಡಿಯುತ್ತ, ಅಜ್ಜಿಯ ನೆನಪುಗಳನ್ನು ಕೆದಕ ಹತ್ತಿದೆ.

 

ಮೊದಲ ಬಾರಿ ಸರಿಯಾಗಿ ನನಗೆ ಅಜ್ಜಿ ಭೇಟಿ ಆಗಿದ್ದು, ಸುಬ್ಬನ ಮದುವೆ ಸಮಯದಲ್ಲಿ. ಸುಬ್ಬ ನನಗೆ ಮೊದಲಿಂದಲೂ ತಿಳಿದಿದ್ದರೂ ಯಾವಾಗಲೋ ಒಮ್ಮೆ ಅಜ್ಜಿಯ ದರ್ಶನ ಭಾಗ್ಯ ಆಗಿದ್ದರೂ, ಸ್ವಲ್ಪ ಬುದ್ದಿ (?) ಬಂದ ಮೇಲೆ ಅಂದರೆ ಅವನ ಮದುವೆ ಸಮಯದಲ್ಲಿ ಭೇಟಿಯಾದೆ ... ಸುಬ್ಬನ ಅಜ್ಜಿ, ಅಂದರೆ ಸುಬ್ಬನ ಅಮ್ಮನ ಅಮ್ಮ, ಹೆಚ್ಚಾಗಿ ಅಳಿಯ-ಮಗಳ ಮನೆಗೆ ಬರುತ್ತಿರಲಿಲ್ಲ ... ಸಂಪ್ರದಾಯಸ್ತರು ಅಂತ ಅಂದುಕೊಂಡರೆ ಅಂದುಕೊಳ್ಳಿ, ತಪ್ಪೇನಿಲ್ಲ .. ಆದರೆ ವಿಷಯ ಬೇರೆ ... ಸುಬ್ಬನ ಅಪ್ಪ ಹಲವಾರು ವರ್ಷ ಮನೆ ಅಳಿಯನಾಗೇ ಇದ್ದುದ್ದು. ಇವರು ಆಚೆ ಬಂದರಲ್ವೇ ಅವರು ಇವರ ಮನಗೆ ಬರೋದೂ? ಇರಲಿ, ಇದರ ಬಗ್ಗೆ ಇನ್ನೊಮ್ಮೆ ಮಾತನಾಡೋಣ.

 

ಅಜ್ಜಿ ಬಲು ಜೋರು! ತನ್ನ ಅಳಿಯ ಮತ್ತು ಮೊಮ್ಮಕ್ಕಳ ಮೇಲೆ ಒಳ್ಳೆ ಹಿಡಿತ ಇಟ್ಟುಕೊಂಡಿದ್ದರು ... ತಾತನ ವಿಷಯ ಇಲ್ಲಿ ಬೇಡ ... 

 

ಮೊದಲಿಂದಲೂ ಓದುವ ಹವ್ಯಾಸ ಹೊಂದಿದ್ದರಿಂದ ಸಿಕ್ಕಾಪಟ್ಟೆ ವಿಷಯ ತಿಳಿದುಕೊಂಡಿದ್ದರು ಕೂಡ.

 

ಸುಬ್ಬನ ಮದುವೆ ಸಮಯದಲ್ಲಿ ನಾನೂ ಅವರ ಮನೆಗೆ ಪದೇ ಪದೇ ದಾಳಿ ಇಡುತ್ತಿದ್ದುದರಿಂದ ಅಜ್ಜಿಯ ಪರಿಚಯ ಚೆನ್ನಾಗಿಯೇ ಆಗಿತ್ತು. ಹೆಣ್ಣಿನವರಿಂದ ಒಳ್ಳೇ ಛತ್ರ ಬುಕ್ ಆಗಿತ್ತು. ದೊಡ್ಡ ಛತ್ರ. ಛತ್ರದ ಪಕ್ಕದಲ್ಲೇ ರಾಯರ ಮಠ ಬೇರೆ ! ಅಜ್ಜಿ ಛತ್ರದಲ್ಲಿ ಊಟ ಮಾಡುವವರಲ್ಲ ಹಾಗಾಗಿ ಮಠ ಪಕ್ಕದಲ್ಲೇ ಇರುವುದು ನಿರಾಳದ ಸುದ್ದಿ.

 

ಮದುವೆ ಮುನ್ನಾ ದಿನ ಛತ್ರಕ್ಕೆ ಹೊರಡುವ ತಯಾರಿಯಲ್ಲಿದ್ದರು ಎಲ್ಲರೂ. ಅಳಿಯ ಜೊತೆ ಗೆಳೆಯ ಅಂತ ನಾನೂ ಅಲ್ಲೇ ಇದ್ದೆ. ಅಜ್ಜೀನ್ನ ಕೇಳಿದೆ "ಹನಿಮೂನಿಗೆ ಸುಬ್ಬನನ್ನ ಎಲ್ಲಿಗೆ ಕಳಿಸ್ತಿದ್ದೀರಾ?" ಅಂತ....

 

ಅಜ್ಜಿ ಏನು ಅರ್ಥೈಸ್ಕೊಂಡರೋ ಗೊತ್ತಿಲ್ಲ "ಸದ್ಯ ಎಲ್ಲಿಗೆ ಹೋಗೋದು. ಮಠಕ್ಕೇ ಬರ್ಸಿದ್ದೀವಿ" ಅಂದ್ರು !!

 

ನಾನು ಕುಳಿತಿದ್ದ ಛೇರಿನಿಂದ ಉರುಳೋದೊಂದು ಬಾಕಿ ನೋಡಿ. ಕಾಲ ಎಷ್ಟೇ ಮುಂದುವರೆದರೂ ಮಧುಚಂದ್ರವನ್ನ ಯಾರೂ ಮಠಕ್ಕೆ ಬರೆಸೋದಿಲ್ಲ! ಅಲ್ವೇ? "ಏನಜ್ಜಿ ಹಂಗಂದ್ರೇ?" ಅಂದೆ .. "ನಾನು ಛತ್ರದಲ್ಲಿ ಎಲ್ಲಿ ಊಟ ಮಾಡ್ತೀನೋ ಹು ... ಮು..ದೇ? ಅದಕ್ಕೇ ಸುಬ್ಬ ಮಠದಲ್ಲಿ ಬರೆಸಿದ್ದಾನೆ ಅಂದೆ" ಅಂದರು. 

 

ಇದಿಷ್ಟು ನನ್ನ, ಅಜ್ಜಿಯ ಪರಿಚಯದ ಹಿನ್ನೋಟ.

 

ವಯಸ್ಸಾದಂತೆ ಅಜ್ಜಿಯ ಕಣ್ಣು ಮಂಜಾಗಿ ಓದುವುದು ಕಡಿಮೆಯಾಗಿತ್ತು. ತಮ್ಮ ಅಡುಗೆ ತಾವು ಮಾಡಿಕೊಂಡು, ಮಿಕ್ಕ ಸಮಯದಲ್ಲಿ ಟೀ.ವಿ ನೋಡ್ತಿದ್ರು, ಹತ್ತಿರದಲ್ಲಿ ಕುಳಿತುಕೊಂಡು. ಜಾಹೀರಾತು ಬಂದರೆ ಸಹಿಸುತ್ತಿರಲಿಲ್ಲ. "ಇವರೆಲ್ಲ ಹಲ್ಲುಜ್ಜಿ, ಮುಖ ತೊಳೆದು, ವಯ್ಯಾರ ಮಾಡ್ಕೊಂಡು ಸ್ನಾನ ಮುಗಿಸಿದ್ರಲ್ವೇ ನಾವು ಸಿನಿಮಾ ನೋಡೋದಕ್ಕೆ?" ಅಂತ ಗೊಣಗುತ್ತಿದ್ದರು.

 

ಅಜ್ಜಿಗೆ ಕ್ರೀಡೆಯಲ್ಲಿ ಆಸಕ್ತಿ ಇತ್ತು. ಭಾರತದಲ್ಲಿ ಕ್ರಿಕೆಟ್ ವಿಷಯ ಹೇಳಬೇಕೇ? ಚೋಟೂ ಮೋಟು’ಗಳಿಂದ ಹಿಡಿದು ಮುದುಕರವರೆಗೂ ಎಲ್ಲರಿಗೂ ಆಸಕ್ತಿ. ಹಾಗೇ ಸುಬ್ಬನ ತಾತನಿಗೂ ... ಹಾಗಾಗಿ ಅಜ್ಜಿಗೂ ಅನ್ನಬಹುದೇನೋ ... ಕ್ರಿಕೆಟ್ ಬಗ್ಗೆ ತಾತನನ್ನು ಮಾತನಾಡಿಸಿದರೆ ಮುಂದ ಮಾತೆಲ್ಲ ಅವರದ್ದೇ ಆಗಿರುತ್ತಿತ್ತಂತೆ ..ಅಜ್ಜಿ ಹೇಳಿದ್ದು .. ’ನಮ್ ವಿಶ್ವನಾಥು ’ ಅಂತಂದ್ರೆ ಮುಗೀತು ... ಅವರ ಬಗ್ಗೆ ಜನ ಹೇಳ್ತಿದ್ದುದೇ ಹಾಗೆ "ಅವರು ಚಟ್ಟದ ಮೇಲೆ ಮಲಗಿದರೂ, ಚಟ್ಟದ ಕೋಲು ಮುರಿದುಕೊಂಡು ಬ್ಯಾಟ್ ಮಾಡಿಕೊಳ್ತಾರೆ" ಅಂತ

 

ಅಜ್ಜಿಗೂ ಕ್ರಿಕೆಟ್ ನೋಡೋ ಆಸೆ .. ಆದರೆ ಅವರ ಕಾಮೆಂಟ್ರಿ ಕೇಳೋಕ್ಕೆ ಸಿದ್ದ ಇರಬೇಕು ಅಷ್ಟೇ ! "ಅವನನ್ನು ನೋಡು! ಹು ... ಮು ... ಗ..ತಂದು ... ಎಲ್ಲೆಂದ್ರಲ್ಲೇ ಉಗೀತಾನೆ. ಎಂಜಲನ್ನೇ ಬಾಲಿಗೆ ಹಚ್ಚ್ತಾನೆ. ಮಡಿ ಇಲ್ಲ. ಮೈಲಿಗೆ ಇಲ್ಲ !"

 

ಹೀಗೆ ಒಮ್ಮೆ ಸುಬ್ಬನ ಯಾವುದೋ ಗೋಳು ನಿವಾರಿಸಲು ಹೋಗಿದ್ದೆ. ಅಜ್ಜಿ ಟಿ.ವಿ ಮುಂದೆ ಕೂತು ಟೆನ್ನಿಸ್ ನೊಡ್ತಿದ್ರು ... ಸಾಮಾನ್ಯವಾಗಿ ಅವರಿದ್ದಾಗ ಮಹಿಳೆಯರ ಟೆನ್ನಿಸ್ ಹಾಕುತ್ತಿರಲಿಲ್ಲ.  ನಾನು ಹೋದಾಗ ಹಿತ್ತಲಿಗೆ ಹೋಗಿದ್ದ. ನನ್ನನ್ನು ಯಾಕೆ ಕರೆಸಿದ್ದ ಅಂತ ನನಗೆ ಗೊತ್ತಿರಲಿಲ್ಲ. ಹಾಗಾಗಿ ಅಜ್ಜೀನ್ನ ಕೇಳಿದ್ದೆ "ಸುಬ್ಬ ಎಲ್ಲಿ?" ಅಂತ

 

"ಅದೇನು ತಿಂದನೋ? ಏನೋ? ಬೆಳಿಗ್ಗೆ ಇಂದ ಬರೀ ಇದೇ ಆಯ್ತು ... ಇವನು ಹಿಂಗೆ ಅಂತ ಗೊತ್ತಾದ ಮೇಲೆ ಇವನಪ್ಪ ಮನೆ ಕಟ್ಟಿಸಿದಾಗ, ಇವನಿಗೇ ಅಂತ ಒಂದು ಮಿಕ್ಕವರಿಗೇ ಅಂತ ಒಂದು ಕಟ್ಟಿಸಿದ್ದ" ಸುಬ್ಬನ ಮನೆ ಅಲ್ವೇ? ಅವನ ಗಾಳಿ ನನಗೂ ಬೀಸಿತ್ತು "ಏನು ಎರಡು ಕಟ್ಟಿಸಿದ್ದು?" ಅಂದೆ ... ಅಜ್ಜಿ ನೋಡೀದ ಸ್ಟೈಲಲ್ಲೇ ಅನ್ನಿಸಿತು ಅವರು "ಪೆದ್ದು ಮು... " ಅಂತ ಅಂದುಕೊಂಡರೂ ಅಂತ ! ತೆಪ್ಪಗಾದೆ !!

 

ಅಜ್ಜಿ "ಕರೆಂಟು ಬರೋವರೆಗೂ ಕಾಯಬೇಕು ... ಪಂಪ್ ಹಾಕಿ ನೀರು ಮೇಲೆ ಹೋದ ಮೇಲೆ ನಾನು ನೀರು ಹಿಡಿದುಕೊಳ್ಳಲು ... ಅಲ್ದೇ, ಸುಬ್ಬ ಇರೋ ಪರಿಸ್ಥಿತಿಯಲ್ಲಿ ಬೀದೀಲ್ಲಿರೋ ಪಂಪ್ ಹೊಡೆದು ನೀರು ತರೋದಂತೂ ಸುಳ್ಳು ... ಕಿಲುಬು ಹಿಡಿದಿರೋ ಪಂಪ್ ಹೊಡೆಯಲು ಜೋರಾಗಿ ಒತ್ತಿದರೆ ಇವನಿಗೆ ..." ... ಬೀದಿಯಲ್ಲಿ ಭರ್ರನೆ ಆಟೋ ಸದ್ದು ಮಾಡುತ್ತಾ ಹೋದ್ದರಿಂದ ಅಜ್ಜಿ ಮಾತು ಕೇಳಲಿಲ್ಲ ... ವಿಷಯವೂ ಹಾಗಿತ್ತು ನೋಡಿ, ಆದ್ದರಿಂದ ನಷ್ಟವೇ ಇಲ್ಲ!

 

ನಾನು ನೀರು ಹಿಡಿದುಕೊಡಲೇ ಎಂದು ಕೇಳುವವನಿದ್ದೆ ... ಸುಮ್ಮನಾದೆ ... ಹಿಂದೊಮ್ಮೆ, ಸುಬ್ಬನ ಮನೆಗೆ ಬರುವಾಗ, ಅಜ್ಜಿ ನೀರಿನ ಕೊಡವನ್ನು ಸೊಂಟಕ್ಕೆ ಏರಿಸಿ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದರು. ’ಪರೋಪಕಾರಾರ್ಥಮಿದಂ ಶರೀರಮ್’ ಎಂದುಕೊಂಡು ಸೀದ ಹೋಗಿ, ಕೊಡವನ್ನು ಕೈಗೆ ತೆಗೆದುಕೊಂಡು ’ಬನ್ನಿ ಅಜ್ಜಿ, ಹೋಗೋಣ’ ಅಂದೆ ... ಅಷ್ಟೆ ... "ಅಯ್ಯೋ! ಹು..ಮು.. ದೇ ... ಮಡೀಲ್ಲಿದ್ದೆ ಮುಟ್ಟಿಬಿಟ್ಯಲ್ಲೋ ... " ... ಮುಂದಿನ ವಿಷಯ ಅಲ್ಲೇ ಬಿಟ್ ಬಿಡಿ ...

 

ಟಿ.ವಿಯಲ್ಲಿ ವಿಂಬಲ್ಡನ್ ಮ್ಯಾಚ್ ಜೋರಾಗಿ ನೆಡೀತಿತ್ತು ... ಅಜ್ಜಿ ಹೇಳಿದ್ರು "ಮೋಟುದ್ದ ಚಡ್ಡೀ ಹಾಕ್ಕೊಂಡು ಆಟ ಆಡ್ತಾರೆ. ದೊಡ್ಡ ಚಡ್ಡೀ ಹೊಲೆಸಿಕೊಳ್ಳಬಾರದೇ? ಹಾಳಾಗಿ ಹೋಗ್ಲಿ, ಸೊಂಟಕ್ಕೆ ಒಂದು ಟವಲ್ ಆದ್ರೂ ಸುತ್ಕೋಬಾರದೇ? ಅವನ್ಯಾವನೋ ಟವಲ್ಲು ತಂದುಕೊಡ್ತಿದ್ದಾನೆ ಆದ್ರೆ ಈ ಮು ...ಕ್ಕೆ ಅರ್ಥವೇ ಆಗ್ತಿಲ್ಲ ... ವಾಪಸ್ ಕೊಡ್ತಿದ್ದಾನೆ"

 

ಸಧ್ಯ ಮಹಿಳೆಯರ ಟೆನ್ನಿಸ್ ಮ್ಯಾಚ್ ಅಲ್ಲವಲ್ಲ ಇವತ್ತು ... ಬಚಾವಾದೆ .. ಅದೂ ಪರವಾಗಿಲ್ಲ ... ಸಧ್ಯ ಅಪ್ಪಿ-ತಪ್ಪಿ ಕೂಡ ಅಜ್ಜಿ ಒಲಂಪಿಕ್ಸ್’ನ ಮಹಿಳೆಯರ ಬೀಚ್ ವಾಲಿಬಾಲ್ ನೋಡದಿರಲಿ !!

 

ಸುಬ್ಬ ಬರಲಿಲ್ಲ ... ನನಗೂ ಕೆಲಸ ಇತ್ತು ಅಂತ ಅಜ್ಜಿಗೆ ಹೇಳಿ ಹೊರಟೆ ... "ಅವನಿಗೆ ನಿಂತ ಮೇಲೆ ಬಾ .." ಅಂದ್ರು ... ನಾನು "ಏನು?" ಅಂದೆ ...

 

Comments