ಋಣಾನುಬಂಧ - ಭಾಗ 5

ಋಣಾನುಬಂಧ - ಭಾಗ 5

ಪ್ರಿಂಟಿಂಗ್ ಪ್ರೆಸ್ ನಲ್ಲಿ ಕುಳಿತಿದ್ದ ಸಿದ್ದಾರ್ಥನಿಗೆ ಯಾಕೆ ತನ್ನ ತಂದೆ ತಾಯಿ ಶಾಲಿನಿ ಮನೆಗೆ ಹೋಗಿ ಮಾತನಾಡಿದ್ದನ್ನು ತಿಳಿಸಲಿಲ್ಲ. ಶಾಲಿನಿ ಹಾಗೂ ಅವರ ಅಮ್ಮನೂ ಇದರ ಬಗ್ಗೆ ಒಂದು ಮಾತು ತಿಳಿಸಲಿಲ್ಲವಲ್ಲ ಎಂದು ಆಲೋಚಿಸುತ್ತಿದ್ದಾಗಲೇ ಮೊಬೈಲ್ ರಿಂಗಾಯಿತು. ನೋಡಿದರೆ ಶಾಲಿನಿ ಕರೆ ಮಾಡಿದ್ದಳು. ಹಾಯ್ ಶಾಲು ಹೇಗಿದ್ದೀಯ? ಏನು ಸಮಾಚಾರ?  ನಾನು ಚೆನ್ನಾಗಿದೀನಿ ಸಿದ್ದು, ನೀನು ಹೇಗಿದ್ದೀಯ? ಕಲ್ಯಾಣಿ ಹೇಗಿದಾಳೆ? ಹೇಗೆ ನಡೀತಿದೆ ಮದುವೆ ಜೀವನ?


ಎಲ್ಲಾ ಚೆನ್ನಾಗಿದೆ ಶಾಲು. ಅದು ಸರಿ ಶಾಲು ಒಂದು ವಿಷಯ ಕೇಳೋಣ ಎಂದುಕೊಂಡೆ ಅಷ್ಟರಲ್ಲಿ ನೀನೆ ಕರೆ ಮಾಡಿದೆ. ಈಗ ಸ್ವಲ್ಪದ ದಿನದ ಮುಂಚೆ ಅಂದರೆ ನನ್ನ ಮದುವೆಗೆ ಕರೆಯುವುದಕ್ಕೆ ಮುಂಚೆ ಯಾವಾಗಾದರೂ ನಮ್ಮಪ್ಪ ಅಮ್ಮ ನಿಮ್ಮ ಮನೆಗೆ ಬಂದಿದ್ದರ? ಹಾ ಸಿದ್ದು ಒಂದು ಸಲ ಬಂದಿದ್ದರು ಆದರೆ ಯಾಕೆ ಬಂದಿದ್ದರು ಎಂದು ಗೊತ್ತಾಗಲಿಲ್ಲ. ಮನೆಯಲ್ಲಿ ಅಪ್ಪ ಅಮ್ಮನ್ನ ಕೇಳಿದ್ದಕ್ಕೆ ಏನೋ ಕೆಲಸದ ಮೇಲೆ ಬಂದಿದ್ದಾಗಿ ಹೇಳಿದ್ದರು. ಯಾಕೆ ಸಿದ್ದು ಏನಾದರೂ ಮುಖ್ಯವಾದ ವಿಷ್ಯ ಇತ್ತ? ಇಲ್ಲ ಶಾಲು ಹಾಗೇನೂ ಇಲ್ಲ ಸುಮ್ಮನೆ ಕೇಳಿದೆ. ಮತ್ತೆ ಇನ್ನೇನು ಸಮಾಚಾರ? ಏನಿಲ್ಲ ಸಿದ್ದು ಹಾಗೆ ಸುಮ್ಮನೆ ಮಾಡಿದೆ ಅಷ್ಟೇ ಸರಿ ಸಿದ್ದು ಮತ್ತೆ ಯಾವಾಗಾದರೂ ಕರೆ ಮಾಡುತ್ತೀನಿ. ಬೈ. ಬೈ ಶಾಲು ಎಂದು ಕರೆ ಕಟ್ ಮಾಡಿ ಮತ್ತೆ ಯಾಕೆ ಅಪ್ಪ ಅಮ್ಮ ನನ್ನ ಬಳಿ ಈ ವಿಷಯ ಮುಚ್ಚಿಟ್ಟರು ಎಂದು ಯೋಚನೆಯಲ್ಲಿ ಮುಳುಗಿದ. 


ಅದೇ ಯೋಚನೆಯಲ್ಲಿ ಮನೆಗೆ ಬಂದ ಸಿದ್ದು ಸೀದಾ ಅವರ ತಾಯಿಯ ಬಳಿ ಬಂದು ಅಮ್ಮ ನೀವು ಶಾಲಿನಿಯ ಮನೆಗೆ ಹೋಗಿ ಹುಡುಗಿಯನ್ನು ಕೇಳಿದ ವಿಷಯ ನನಗೆ ಏಕೆ ತಿಳಿಸಲಿಲ್ಲ. ನನಗೆ ತಿಳಿಸಲಿಲ್ಲ ಸರಿ. ಶಾಲಿನಿಯ ವಿಷಯವನ್ನು ಕಲ್ಯಾಣಿಯ ಮುಂದೆ ಯಾಕೆ ಹೇಳಬೇಕಿತ್ತು. ನೆನ್ನೆಯಿಂದ ಅವಳು ಅದನ್ನೇ ತಲೆಗೆ ಹಚ್ಚಿಕೊಂಡು ಕುಳಿತಿದ್ದಾಳೆ. ನನ್ನೊಡನೆ ಸರಿಯಾಗಿ ಮಾತು ಕೂಡ ಆಡುತ್ತಿಲ್ಲ. ಅಮ್ಮ, ನಾನು ಎಲ್ಲವನ್ನೂ ಮರೆತು ಕಲ್ಯಾಣಿಯನ್ನು ಮದುವೆ ಆಗಿದ್ದೀನಿ ತಾನೇ. ಈಗ ಅವಳ ಮುಂದೆ ಶಾಲಿನಿಯ ವಿಷ್ಯ ಹೇಳುವ ಅವಶ್ಯಕತೆಯಾದರೂ ಏನಿತ್ತು?


ಅದು ಹಾಗಲ್ಲ ಸಿದ್ದು, ಶಾಲಿನಿಯ ತಂದೆ ನಿನಗೆ ಅವಳನ್ನು ಕೊಡುವುದಿಲ್ಲ ಎಂಬ ವಿಷಯವನ್ನು ನಿನ್ನ ಬಳಿ ಹೇಳಿದರೆ ನಿನ್ನ ಮನಸಿಗೆ ಮತ್ತಷ್ಟು ನೋವುಂಟು ಆಗುತ್ತದೆ ಎಂದು ನಿನ್ನ ಬಳಿ ಆ ವಿಷಯ ತಿಳಿಸಲಿಲ್ಲ. ಇನ್ನು ಕಲ್ಯಾಣಿಯ ಹತ್ತಿರ ಶಾಲಿನಿಯ ವಿಷಯ ನಾನೇನೂ ಬೇಕೆಂದು ಹೇಳಲಿಲ್ಲ. ಏನೋ ಹೀಗೆ ಮಾತಿಗೆ ಮಾತು ಬಂದು ಆ ವಿಷಯವನ್ನು ಹೇಳಿದೆ. ಹಾಗೆಯೇ ಈಗ ಅದು ಮುಗಿದಿರುವ ವಿಷಯ ಎಂತಲೂ ತಿಳಿಸಿದ್ದೇನೆ. ಆದರೂ ಏಕೆ ಅವಳು ನಿನ್ನನ್ನು ಕೇಳಿದಳು. ಹೋಗಲಿ ಬಿಡು ಸಿದ್ದು ಈಗಲೇ ಗೊತ್ತಾಗಿದ್ದು ಒಳ್ಳೆಯದಾಯಿತು. ಆಮೇಲೆ ಮುಂದೆ ತೊಂದರೆ ಆಗುವುದು ತಪ್ಪಿತಲ್ಲ.


ಅಲ್ಲಿಂದ ಸಿದ್ದು ತನ್ನ ರೂಮಿಗೆ ಬಂದರೆ ಕಲ್ಯಾಣಿ ಸಿದ್ಧವಾಗಿ ಕೂತಿದ್ದಳು. ಏನು ಕಲ್ಯಾಣಿ ಫುಲ್ ರೆಡಿ ಆಗಿ ಕೂತಿದ್ದೀಯ ಏನು ವಿಷಯ? ಏನಿಲ್ಲ ಸಿದ್ದು ಬೆಳಗಿನಿಂದ ಮನೆಯಲ್ಲಿ ಕೂತು ಕೂತು ಬೇಸರ ಆಗಿದೆ. ನಡೀ ಎಲ್ಲಾದರೂ ಒಂದು ಸುತ್ತು ಹಾಕಿಕೊಂಡು ಬರೋಣ ಎಂದಳು. ಸಿದ್ದಾರ್ಥ್ ಒಂದು ಕ್ಷಣ ಆಲೋಚಿಸಿ ಅವಳ ಬಳಿ ಹೋಗಿ ಅವಳ ಹೆಗಲ ಮೇಲೆ ಕೈ ಹಾಕಿ ಸಾರಿ ಕಲ್ಯಾಣಿ ಇವತ್ತು ತುಂಬಾ ಸುಸ್ತಾಗಿದೆ ನಾಳೆ ಹೋಗೋಣ ಎಂದ. ಅಷ್ಟಕ್ಕೇ ಕಲ್ಯಾಣಿ ಮುಖದಲ್ಲಿ ಕೋಪ ಮೂಡಿತು. ಸಿದ್ದು ನಾನು ಬೆಳಗ್ಗಿನಿಂದ ಒಬ್ಬಳೇ ಇರುತ್ತೇನೆ. ನನಗೆ ಎಷ್ಟು ಬೋರ್ ಹೊಡೆಯುತ್ತೆ ಗೊತ್ತ? ಏನೋ ಒಂದು ಹತ್ತು ನಿಮಿಷ ಆಚೆ ಹೋಗೋಣ ಎಂದರೆ ಆಗಲ್ಲ ಅಂತೀಯ ಎಂದು ಕಣ್ಣೀರು ಹಾಕಲು ಶುರು ಮಾಡಿದಳು. ತಕ್ಷಣ ಸಿದ್ದಾರ್ಥ ಅವಳನ್ನು ಸಮಾಧಾನ ಪಡಿಸಿ ಆಚೆ ಕರೆದುಕೊಂಡು ಹೋಗಿ ಬಂದ.


ಮುಂದೆ ಒಂದೆರಡು ಬಾರಿ ಇದೆ ಸಂಗತಿ ಪುನರಾವರ್ತನೆಯಾದಾಗ ಸಿದ್ದಾರ್ಥ ಪ್ರೆಸ್ ನಿಂದ ಸ್ವಲ್ಪ ಬೇಗ ಬರಲು ಶುರು ಮಾಡಿದ. ಬಂದೊಡನೆ ಕಲ್ಯಾಣಿಯನ್ನು ಕರೆದುಕೊಂಡು ಆಚೆ ಸುತ್ತಾಡಿಕೊಂಡು ಬರುತ್ತಿದ್ದ. ಒಂದು ವಾರ ಎಲ್ಲವೂ ಸರಿ ಇತ್ತು. ಮತ್ತೆ ಕಲ್ಯಾಣಿ ಶುರು ಮಾಡಿದಳು. ನೀನು ನನ್ನೊಡನೆ ಸರಿಯಾಗಿ ಸಮಯ ಕಳೆಯುತ್ತಿಲ್ಲ. ಸದಾ ಕಾಲ ಆಚೆಯೇ ಇರುತ್ತೀಯ? ನಿನಗೆ ನನ್ನನ್ನು ಕಂಡರೆ ಇಷ್ಟ ಇಲ್ಲ ಹಾಗೆ ಹೀಗೆ ಎಂದು ಶುರುಮಾಡಿದಳು. ಅವಳು ಏನೇ ಮಾತಾಡಿದರೂ ಸಿದ್ದಾರ್ಥ ತನ್ನ ತಾಳ್ಮೆ ಕಳೆದುಕೊಳ್ಳಲಿಲ್ಲ. ನಿಧಾನವಾಗಿ ಅವಳಿಗೆ ಬಿಡಿಸಿ ಹೇಳಿದ. ನೋಡು ಕಲ್ಯಾಣಿ ನಾನು ಕೆಲಸ ಬಿಟ್ಟು ನಿನ್ನೊಡನೆ ಕೂತಿರಲು ಸಾಧ್ಯವಿಲ್ಲ. ನಾನು ಈಗ ಪ್ರೆಸ್ ನಿಂದ ಬೇಗನೆ ಬರುತ್ತಿದ್ದೇನೆ. ಬಂದ ಕೂಡಲೇ ನಿನ್ನೊಡನೆ ಬರುತ್ತಿದ್ದೇನೆ ತಾನೇ. ಮತ್ತೆ ಏನು ನಿನ್ನ ಸಮಸ್ಯೆ?. ನನಗೆ ಅದೆಲ್ಲ ಗೊತ್ತಿಲ್ಲ ಸಿದ್ದು ನೀನು ನನ್ನೊಡನೆ ಸಮಯ ಕಳೆಯುತ್ತಿಲ್ಲ ಎಂದು ಅಳಲು ಶುರು ಮಾಡಿದಳು. ಸಿದ್ದಾರ್ಥನಿಗೆ ಏನು ಮಾಡಬೇಕೋ ತೋಚಲಿಲ್ಲ. ಸ್ವಲ್ಪ ಹೊತ್ತು ಆಲೋಚಿಸಿದ ನಂತರ ಕಲ್ಯಾಣಿ ನಾಳೆ ಇಂದ ಒಂದು ಕೆಲಸ ಮಾಡು. ನೀನು ಕೂಡ ನನ್ನೊಡನೆ ಪ್ರೆಸ್ ಗೆ ಬಂದು ಕೂಡು. ಅಲ್ಲಿ ನಿನಗೆ ಏನು ತೊಚತ್ತೋ ಆ ಕೆಲಸ ಮಾಡು. ಆಗ ನಾನು ನಿನ್ನ ಜೊತೆ ಇದ್ದ ಹಾಗಾಗುತ್ತೆ ಹಾಗೆಯೇ ನಿನಗೂ ಸಮಯ ಕಳೆಯುವುದು ಸುಲಭವಾಗುತ್ತದೆ. ಈ ಸಲಹೆ ಕಲ್ಯಾಣಿಗೆ ಇಷ್ಟ ಆಯಿತು. ಸರಿ ಹಾಗಿದ್ದರೆ ನಾಳೆಯಿಂದ ನಾನು ನಿನ್ನೊಡನೆ ಬರುತ್ತೇನೆ ಎಂದು ನಗುತ್ತಾ ನುಡಿದಳು.


ರಾತ್ರಿ ಊಟ ಮಾಡಿ ಮಲಗಿದ ಸಿದ್ದಾರ್ಥನಿಗೆ ತಲೆಯಲ್ಲಿ ಇದೆ ಹುಳ ಕೊರೆಯುತ್ತಿತ್ತು. ಯಾಕೆ ಕಲ್ಯಾಣಿ ಹೀಗೆ ಮಾಡುತ್ತಿದ್ದಾಳೆ. ಮದುವೆ ಆಗಿ ಇನ್ನೂ ಒಂದು ತಿಂಗಳು ಕಳೆದಿಲ್ಲ. ಆಗಲೇ ಹೀಗೆಲ್ಲ ಶುರು ಮಾಡಿದ್ದಾಳೆ. ಇನ್ನು ಮುಂದೇನು ಕಾದಿದೆಯೋ ಎಂದು ಯೋಚಿಸುತ್ತ ಹಾಗೆ ನಿದ್ರೆಗೆ ಜಾರಿದ. ಮರುದಿನ ಸಿದ್ದಾರ್ಥನಿಗಿಂತ ಮುಂಚೆಯೇ ಕಲ್ಯಾಣಿ ತಯಾರಾಗಿ ಕುಳಿತಿದ್ದಳು. ಸಿದ್ದಾರ್ಥ ಅವಳನ್ನೂ ತನ್ನೊಡನೆ ಪ್ರೆಸ್ ಗೆ ಕರೆದುಕೊಂಡು ಬಂದು ಪ್ರೆಸ್ ಎಲ್ಲ ತೋರಿಸಿ ನೋಡು ಕಲ್ಯಾಣಿ ಇಲ್ಲಿ ನೀನು ಹೇಗೆ ಬೇಕೋ ಹಾಗಿರಬಹುದು. ಅಲ್ಲಿ ಆಫೀಸ್ ರೂಂ ಅಲ್ಲಿ ಕಂಪ್ಯೂಟರ್ ಇದೆ. ಇಂಟರ್ನೆಟ್ ಇದೆ ಆರಾಮಾಗಿ ಅಲ್ಲಿ ಕೂತು ಬ್ರೌಸ್ ಮಾಡು. ಬೋರ್ ಆದರೆ ಆಚೆ ಬಂದು ಪ್ರೆಸ್ ಅಲ್ಲಿ ಓಡಾಡು ಎಂದು ನಕ್ಕು ತನ್ನ ಕೆಲಸ ನೋಡಲು ಹೊರಟ.


ಹತ್ತು ದಿವಸ ಕಲ್ಯಾಣಿ ಏನೂ ಮಾತಾಡದೆ ಪ್ರತಿ ದಿನ ಸಿದ್ದಾರ್ಥನ ಜೊತೆ ಪ್ರೆಸ್ ಗೆ ಬರುತ್ತಿದ್ದಳು. ಅವನ ಜೊತೆಯೇ ವಾಪಸ್ ಹೊರಡುತ್ತಿದ್ದಳು. ಒಂದು ದಿವಸ ಸಿದ್ದಾರ್ಥ ತನ್ನ ಮೊಬೈಲನ್ನು ಆಫೀಸ್ ರೂಮಿನಲ್ಲಿ ಇಟ್ಟು ಆಚೆ ಯಾರೋ ಬಂದಿದ್ದಾರೆ ಅವರೊಡನೆ ಮಾತಾಡುತ್ತಿದ್ದ. ಮೊಬೈಲ್ ರಿಂಗಾಯಿತು. ಪಕ್ಕದಲ್ಲೇ ಇದ್ದ ಕಲ್ಯಾಣಿ ಯಾರೆಂದು ನೋಡಿದರೆ ಶಾಲು ಎಂದಿತ್ತು. ಮೊದಲಿಗೆ ಅವಳಿಗೆ ಯಾರು ಎಂದು ಗೊತ್ತಾಗಲಿಲ್ಲ. ನಂತರ ಶಾಲಿನಿ ಎಂದು ಗೊತ್ತಾಯಿತು. ಕಲ್ಯಾಣಿ ಕೋಪದಲ್ಲಿ ಕುದಿಯ ತೊಡಗಿದಳು. ಕರೆ ಸ್ವೀಕರಿಸಿ ಶಾಲಿನಿಗೆ ಇನ್ನು ಮುಂದೆ ಯಾವತ್ತೂ ಫೋನ್ ಮಾಡಬೇಡ ಎಂದು ಬೈದು ಫೋನ್ ಇಟ್ಟಳು. ಸಿದ್ದಾರ್ಥನಿಗೆ ಇದ್ಯಾವುದರ ಅರಿವೂ ಇರಲಿಲ್ಲ. ಕಲ್ಯಾಣಿಯೂ ಏನೂ ನಡೆದೇ ಇಲ್ಲ ಎನ್ನುವಂತೆ ಸುಮ್ಮನಿದ್ದಳು. ಅಂದು ಪ್ರೆಸ್ ಮುಗಿಸಿಕೊಂಡು ಮನೆಗೆ ಬಂದು ಊಟ ಮಾಡಿ ಮಲಗುವ ಮುನ್ನ ಸಿದ್ದಾರ್ಥ ತನ್ನ ಮೊಬೈಲ್ ನಲ್ಲಿ ಕಾಲ್ ರಿಜಿಸ್ಟರ್ ನೋಡುತ್ತಿದ್ದಾಗ ಶಾಲಿನಿಯಿಂದ ಕರೆ ಬಂದಿರುವುದು ಗೊತ್ತಾಯಿತು. ಸಮಯ ನೋಡಿದರೆ ಅರೆ ತಾನು ಮಧ್ಯಾಹ್ನ ಆಚೆ ಇದ್ದಾಗ ಬಂದಿರುವ ಹಾಗಿದೆ. ಹಾಗಿದ್ದರೆ ಕಲ್ಯಾಣಿ ಕರೆ ಸ್ವೀಕರಿಸಿದ್ದಾಳೆ. ನನಗೆ ಒಂದು ಮಾತು ಕೂಡ ತಿಳಿಸಲಿಲ್ಲವಲ್ಲ, ಒಂದು ವೇಳೆ ಶಾಲಿನಿಯ ಜೊತೆ ಇವಳು ಕೆಟ್ಟದಾಗಿ ಮಾತಾಡಿದ್ದಾಳ? ನಾನೇ ಕೇಳಿಬಿಡಲ? ಬೇಡ, ಆಮೇಲೆ ಅದೊಂದು ದೊಡ್ಡ ರಾದ್ಧಾಂತ ಆಗುತ್ತದೆ ಎಂದು ಸುಮ್ಮನಾದ.


ಅಷ್ಟರಲ್ಲಿ ಒಳಗೆ ಬಂದ ಕಲ್ಯಾಣಿ ತನ್ನ ಬಟ್ಟೆಗಳನ್ನು ಜೋಡಿಸುತ್ತ ಇವತ್ತು ನಿಮ್ಮ ಹಳೆ ಗರ್ಲ್ ಫ್ರೆಂಡ್ ಫೋನ್ ಮಾಡಿದ್ದಳು ಎಂದಳು. ಸಿದ್ದಾರ್ಥ ಏನೂ ಗೊತ್ತಿಲ್ಲದಂತೆ ಏನಂದೆ? ಹಳೆ ಗರ್ಲ್ ಫ್ರೆಂಡಾ? ಯಾರದು? ಅದೇ ನಿಮ್ಮ ಶಾಲು......ಕಲ್ಯಾಣಿ ನಿನಗೆ ಎಷ್ಟು ಸಲ ಹೇಳಿದ್ದೀನಿ ಅದೊಂದು ಮುಗಿದ ಕಥೆ ಎಂದು. ಯಾಕೆ ಪದೇ ಪದೇ ಅದನ್ನು ತೆಗೆಯುತ್ತೀಯ? ಅದಕ್ಕೆ ಸಿದ್ದು ಇನ್ನು ಮುಂದೆ ಪದೇ ಪದೇ ಆಗಬಾರದೆಂದೇ ಇಂದು ಅವಳಿಗೆ ಸರಿಯಾಗಿ ಬೈದಿದ್ದೀನಿ. ಇನ್ನೊಂದು ಸಲ ಅವಳು ನಿನಗೆ ಕರೆ ಮಾಡಬಾರದು. ಅಲ್ಲಿಯವರೆಗೂ ತಾಳ್ಮೆಯಿಂದ ಇದ್ದ ಸಿದ್ದಾರ್ಥ ಒಮ್ಮೆಲೇ ತಿರುಗಿ ಬಿದ್ದ. ಕಲ್ಯಾಣಿ ಅವಳು ನನ್ನ ಅತ್ತೆ ಮಗಳು ಮಾಮೂಲಾಗಿ ಮಾತಾಡಲು ಕರೆ ಮಾಡಿರುತ್ತಾಳೆ. ನೀನು ಅದನ್ನೇ ತಪ್ಪಾಗಿ ಅರ್ಥೈಸಿಕೊಂಡು ಅವಳಿಗೆ ಯಾಕೆ ಬೈಯ್ಯ ಬೇಕಿತ್ತು? ನೀನು ಮಾಡಿದ್ದು ತಪ್ಪು. ಇನ್ನೊಮ್ಮೆ ಹೀಗೆಲ್ಲ ಮಾಡಬೇಡ ಎಂದು ಖಾರವಾಗಿ ಹೇಳಿದ. ಒಮ್ಮೆಲೇ ಸಿದ್ದಾರ್ಥ ತಿರುಗಿ ಬಿದ್ದದ್ದು ನೋಡಿ ಕಲ್ಯಾಣಿಗೆ ಒಂದು ರೀತಿ ಹೆದರಿಕೆ ಉಂಟಾಗಿ ಅಳಲು ಶುರು ಮಾಡಿದಳು. ಸಿದ್ದಾರ್ಥ ಒಮ್ಮೆ ಅವಳ ಕಡೆ ನೋಡಿ ಇವಳ ಹಣೆ ಬರಹವೇ ಇಷ್ಟು ಮಾಡೋದೆಲ್ಲ ಮಾಡಿ ಅಳೋದು ಬೇರೆ ಎಂದು ಹೊದ್ದಿಕೆ ಎಳೆದುಕೊಂಡು ಅವಳ ಅಳು ಕೇಳದ ಹಾಗೆ ಕಿವಿ ಮುಚ್ಚಿಕೊಂಡು ಮಲಗಿದ

Rating
No votes yet

Comments