ಸೆಲ್‌ಫೋನ್ ಬಳಸದಿದ್ದರೆ ಬೆಲೆ ಕಡಿತ

ಸೆಲ್‌ಫೋನ್ ಬಳಸದಿದ್ದರೆ ಬೆಲೆ ಕಡಿತ

ಸೂರ್ಯನೇಕೆ ಇಷ್ಟು ವೃತ್ತಾಕಾರವಾಗಿದೆ?
ಸೂರ್ಯನು ಹೀಲಿಯಂ,ಜಲಜನಕ ಇತ್ಯಾದಿ ಅನಿಲಗಳಿಂದ ಮಾಡಲ್ಪಟ್ಟಿದ್ದಾನೆ.ಉರಿಯುವ ಈ ಗೋಳದಲ್ಲಿ,ಘನ ವಸ್ತುವೇ ಇಲ್ಲ.ಆದರೂ ಸೂರ್ಯನ ಆಕಾರ ಅತ್ಯಂತ ವೃತ್ತಾಕಾರವಾಗಿದೆ ಎಂದು ಖಗೋಳಶಾಸ್ತ್ರಜ್ಞರು ಹೇಳುತ್ತಾರೆ.ಒಂದು ವೇಳೆ ಸೂರ್ಯನ ಆಕಾರವನ್ನು ಚೆಂಡೊಂದರಷ್ಟು ಇಳಿಸಿದರೆ,ಅದರ ಅತಿ ಹೆಚ್ಚು ವ್ಯಾಸ ಮತ್ತು ಅತಿ ಕಡಿಮೆ ವ್ಯಾಸದ ನಡುವೆ ಬರೇ ಕೂದಲೆಳೆಯ ಅಂತರವಿದೆ ಎಂದು ಅವರು ಕಂಡುಕೊಂಡಿದ್ದಾರೆ.ಅದು ಹೇಗೆ ಸೂರ್ಯ ಇಷ್ಟು ವೃತ್ತಾಕಾರವಾಗಿದ್ದನೆ ಎಂದವರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.ಹೇಲಿಯೋಸಿಸ್ಮಿಕ್ ಮತ್ತು ಮ್ಯಾಗ್ನೆಟಿಕ್ ಇಮೇಜಿಂಗ್ ಸಹಾಯದಿಂದವರು ಇದನ್ನು ಕಂಡು ಕೊಂಡಿದ್ದಾರೆ.
---------------------------------------
ಒಂದೇ ವರ್ಷದಲ್ಲಿ  ಇ-ಪಿಟಿಶನ್‌ಗಳಿಗೆ ಆರೂವರೆ ದಶಲಕ್ಷ ಸಹಿಗಳು!
ಬ್ರಿಟನ್‌ನಲ್ಲಿ ಸರಕಾರವು ಜನರ ದು:ಖ-ದುಮ್ಮಾನಗಳನ್ನು ತಿಳಿಯಲು,ಇ-ಅಹವಾಲುಗಳನ್ನು ಸಲ್ಲಿಸಲಾಗಿದೆ.ನಿಜವಾಗಿ ಈ ಸಂಖ್ಯೆ ಹದಿನೇಳು ದಶಲಕ್ಷವನ್ನೂ ದಾಟಿದೆಯಾದರೂ ಕ್ರಮಬದ್ಧವಾದ ಅಹವಾಲುಗಳನ್ನು ಮಾತ್ರಾ ಸ್ವೀಕರಿಸುವುದರಿಂದ ಸಂಖ್ಯೆಯಲ್ಲಿ ಇಳಿಮುಖವಾಗಿದೆ.ಮೂವತ್ತಾರು ಸಾವಿರ ಅಹವಾಲುಗಳಿಗೆ ಜನರು ತಮ್ಮ ಸಹಿ ಹಾಕಿ,ಒಟ್ಟಿನಲ್ಲಿ ಆರೂವರೆ ಅಹವಾಲುಗಳನ್ನು ಸಲ್ಲಿಸಿದಂತಾಗಿದೆ.ಯಾವುದಾರೂ ಅಹವಾಲಿಗೆ ಒಂದು ಲಕ್ಷ ಸಹಿ ಬಿದ್ದರೆ,ಅದನ್ನು  ಸಂಸತ್ತಿನಲ್ಲಿ ಪರಿಶೀಲಿಸಬಹುದು.ಜನರು ಮತ್ತು ಸರಕಾರಗಳ ನಡುವೆ ಸೇತುವೆಯಾಗಿ,ಇದನ್ನು ಸ್ಥಾಪಿಸಲಾಯಿತು.ಹತ್ತು ಅಹವಾಲುಗಳಿಗೆ ಲಕ್ಷ ಸಂಖ್ಯೆಯಲ್ಲಿ ಸಹಿ ಬಿದ್ದಿದೆ.ಈಗಾಗಲೇ ಅವುಗಳ ಪೈಕಿ ಎಂಟನ್ನು ಸಂಸತ್ತಿನಲ್ಲಿ ಚರ್ಚಿಸಲಾಗಿದೆ.ಲಂಡನ್‌ನಲ್ಲಿ ಗಲಭೆಯಲ್ಲಿ ಭಾಗವಹಿಸಿದವರಿಗೆ ಸವಲತ್ತುಗಳನ್ನು ಕಡಿತ ಮಾಡಲು ಸಲ್ಲಿಸಿದ ಅಹವಾಲಿಗೆ ಅತಿ ಹೆಚ್ಚು ಅಂದರೆ,ಎರಡೂವರೆ ಲಕ್ಷ ಸಹಿ ಬಿದ್ದಿದೆ. 
------------------------------------
ವಿಕಿಲೀಕ್ಸ್‌ನ ಅಸಾಂಗೆಗೆ ಇಕ್ವಡೋರಿನಿಂದ ಆಶ್ರಯ
ವಿಕಿಲೀಕ್ಸ್‌ನ ಜೂಲಿಯನ್ ಅಸಾಂಗೆ ಆಸ್ಟ್ರೇಲಿಯಾದವರು.ಆದರೆ ಹಲವಾರು ಸರಕಾರಗಳ ವಿರೋಧ ಕಟ್ಟಿಕೊಂಡಿರುವ ಅಸಾಂಗೆ ಮೇಲೆ ಸ್ವೀಡನಿನಲ್ಲಿ ಈರ್ವರು ಮಹಿಳೆಯರು ಹಾಕಿರುವ ಮೊಕದ್ದಮೆಯಿಂದ ಜುಲಿಯನ್ ಅಸಾಂಗೆ ತೊಂದರೆಗೆ ಸಿಲುಕಿದ್ದಾರೆ.ಅವರಿಗೆ ಯಾವ ದೇಶವೂ ಆಶ್ರಯ ನೀಡಲು ಆಸಕ್ತಿ ಹೊಂದಿಲ್ಲ.ಬ್ರಿಟಿಶ್ ಸರಕಾರದ ವಿರೋಧದ ನಡುವೆಯೂ ಇಕ್ವೆಡೋರ್ ಇದೀಗ ಅವರಿಗೆ ಆಶ್ರಯ ನೀಡುವ ನಿರ್ಧಾರಕ್ಕೆ ಬಂದಿದೆ.ತನ್ನ ನಿರ್ಧಾರವನ್ನು ಬ್ರಿಟಿಶ್ ಸರಕಾರ ಗೌರವಿಸ ಬೇಕು ಎಂಬುದು,ಇಕ್ವೆಡೋರ್ ಸರಕಾರದ ನಿಲುವಾಗಿದೆ.
--------------------------------------
ವಿಜ್ಞಾನಿಗೆ ಮ್ಯೂಸಿಯಂ ಮಾಡಲು ಕಾರ್ಟೂನಿಸ್ಟ್ ಯತ್ನ
ನಿಕೋಲಾಸ್ ಟೆಸ್ಲಾ ಖ್ಯಾತ ವಿಜ್ಞಾನಿ.ಈತ ಮರಣ ಹೊಂದಿದಾಗ ಹಣಕಾಸು ಮುಗ್ಗಟ್ಟು ಎದುರಿಸಿದ್ದ.ಈತನ ಹೆಸರಲ್ಲಿ ಮ್ಯೂಸಿಯಂ ಕೂಡಾ ಸ್ಥಾಪಿಸಲಾಗಿಲ್ಲ.
ನ್ಯೂಯಾರ್ಕಿನಲ್ಲಿರುವ ಟೆಸ್ಲಾನ ಪ್ರಯೋಗಾಲಯವನ್ನು ಖರೀದಿಸಿ,ಅದನ್ನು ಮ್ಯೂಸಿಯಂ ಆಗಿ ಪರಿವರ್ತಿಸಲು ವ್ಯಂಗ್ಯಚಿತ್ರಕಾರ ಇನ್ಮಾನ್ ಹಣ ಒಟ್ಟು ಮಾಡುತ್ತಿದ್ದಾರೆ.ಇನ್ಮಾನ್ ಖ್ಯಾತ ವ್ಯಂಗ್ಯಚಿತ್ರಕಾರ.ಈತ ಇನ್ನೂ ಮೂವತ್ತರ ಹರೆಯದವರು.ಈತ ನಿಕೋಲಾಸ್ ಟೆಸ್ಲಾನ ಅಭಿಮಾನಿ.ಪ್ರಯೋಗಾಲಯ ಖರೀದಿಸಲು ಸುಮಾರು 1.7 ದಶಲಕ್ಷ ಡಾಲರು ಬೇಕಾದೀತು.ಇನ್ಮಾನ್ ತನ್ನ ಜನಪ್ರಿಯತೆ ಮತ್ತು ಇಂಟರ್ನೆಟ್ ಯುಗದ ಆನ್‌ಲೈನ್ ವಂತಿಗೆ ಮೂಲಕ ಹಣ ಕೂಡಿಸುವ ಸಾಹಸಕ್ಕೆ ಇಳಿದಿದ್ದಾರೆ.ಈಗಾಗಲೇ ಅರ್ಧಾಂಶ ಹಣ ಕೂಡಿಸಿಯಾಗಿದೆ.ಇನ್ನುಳಿದ ಹಣ ಕೂಡಿಸಲು ಸಮಯ ಬೇಕಾದೀತಾದರೂ,ಮಾರಾಟಕ್ಕಿರುವ ಪ್ರಯೋಗಾಲಯವನ್ನು ಖರೀದಿಸುವ ಮೂಲಕ,ಕೊನೆಪಕ್ಷ,ಅದನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಗುತ್ತದಲ್ಲ ಎನ್ನುವುದು ಕಾರ್ಟೂನಿಸ್ಟ್‌ನ ಲೆಕ್ಕಾಚಾರ.
------------------------
ಸೆಲ್‌ಫೋನ್ ಬಳಸದಿದ್ದರೆ ಬೆಲೆ ಕಡಿತ


ನ್ಯೂಯಾರ್ಕಿನ ಹೋಟೆಲ್ ತನ್ನ ಗ್ರಾಹಕರು ಸೆಲ್‌ಫೋನ್ ಹಿಡಿದುಕೊಂಡು,ಬಂದು ಎಲ್ಲರಿಗೂ ಕಿರಿಕಿರಿಯಾಗಿಸುವುದನ್ನು ತಪ್ಪಿಸಲು,ಸ್ವಾಗತ ಕೊಠಡಿಯಲ್ಲಿ,ಅವುಗಳನ್ನಿಟ್ಟು ಬರಲು ವ್ಯವಸ್ಥೆ ಮಾಡಿದೆ.ಗ್ರಾಹಕರು ಹೀಗೆ ಮಾಡುವುದನ್ನು ಪ್ರೋತ್ಸಾಹಿಸಲದು ಅಂಥಹ ಗ್ರಾಹಕರಿಗೆ ಬೆಲೆ ಕಡಿತ ಪ್ರಕಟಿಸಿದೆ.ಬಿಲ್‌ ಮೊತ್ತದಲ್ಲಿ ಐದು ಶೇಕಡಾ ಕಡಿತದ ಆಮಿಷದ ನಂತರ,ಗ್ರಾಹಕರು ತಮ್ಮ ಮೇಜುಗಳಲ್ಲಿ ಸೆಲ್‌ಫೋನ್ ಇಟ್ಟು,ಪದೇ ಪದೇ ಕರೆಗಳಲ್ಲಿ ಮಗ್ನರಾಗುವುದು ಶೇಕಡಾ ಐವತ್ತರಷ್ಟು ಕಡಿಮೆಯಾಗಿದೆ.
-------------------------------------------
ಅಸ್ಸಾಮಿಗರ ಬಗ್ಗೆ ವದಂತಿ ತಪ್ಪಿಸಲು ಎಸ್ಸೆಮ್ಮೆಸ್ ನಿಷೇಧ
ಈಶಾನ್ಯ ಭಾರತದವರ  ಮೇಲೆ ದಾಳಿ ನಡೆಯಲಿದೆ ಎನ್ನುವ ವದಂತಿ ಹಬ್ಬಿಸಲು,ಸೆಲ್‌ಫೋನ್ ಸಂದೇಶಗಳನ್ನು ಕಳುಹಿಸಲಾಗುತ್ತಿದೆ ಎನ್ನುವ ವರದಿಗಳ ಬೆನ್ನಲ್ಲೇ,ಸಂದೇಶಗಳ ರವಾನೆಗೆ ಆರು ದಿನಗಳ ನಿಷೇಧ ಹೇರಲಾಗಿದೆ.ಹಿಂದೆ ರಾಮಜನ್ಮಭೂಮಿ-ಬಾಬರಿ ಮಸೀದಿ ಬಗ್ಗೆ ನ್ಯಾಯಾಲಯದ ತೀರ್ಪು ಹೊರಬೀಳುವ ಸಂದರ್ಭದಲ್ಲೂ ಕೆಲದಿನ ಹೀಗೆ ಸಂದೇಶಗಳಿಗೆ ನಿಷೇಧ ಹೇರಲಾಗಿತ್ತು.ಟೆಲಿ ಮಾರ್ಕೆಟಿಂಗ್‌ಗಾಗಿ ಸಂದೇಶ ಕಳುಹಿಸುವ ಕಂಪೆನಿಗಳಿಗೆ ಈ ಕ್ರಮದಿಂದ ತೊಂದರೆಯಾಗುತ್ತದೆ,ಸಹಜವಾಗಿ,ಅವರು ತೀರ್ಮಾನದ ಬಗ್ಗೆ ಅಸಮಾಧಾನ ಪ್ರಕಟಿಸಿದ್ದು,ಭದ್ರತೆಯ ಬಗ್ಗೆ ಇಂತಹ ಕ್ರಮ ಅಗತ್ಯವಿದ್ದರೂ,ಸಂದೇಶಗಳ ಮೇಲೆ ಸರಾಸಗಟು ನಿಷೇಧ ಬೇಕಿರಲಿಲ್ಲ ಎನ್ನುವುದವರ ನಿಲುವು.
------------------------
ಟ್ವಿಟರ್ ಸಹಸ್ಥಾಪಕರಿಂದ ಹೊಸ ಬ್ಲಾಗಿಂಗ್ ಸಾಧನ
ಟ್ವಿಟರ್ ಅನ್ನು ಸ್ಥಾಪಿಸಿದ ಇವಾನ್ ವಿಲಿಯಂಸ್ ಮತ್ತು ಬಿಜ್ ಸ್ಟೋನ್ ಅವರೀಗ ಹೊಸ ಸಾಹಸಕ್ಕೆ ಇಳಿದಿದ್ದಾರೆ.ಬ್ಲಾಗ್ ಬರೆಯಲು ಮೀಡಿಯಂ ಎನ್ನುವ ಹೊಸ ಮಾಧ್ಯಮವನ್ನವರು ಆರಂಭಿಸಿದ್ದಾರೆ.ಆದರೆ ಅದು ಜನರ ಬಳಕೆಗಿನ್ನೂ ಮುಕ್ತವಾಗಿಲ್ಲ.ಅಲ್ಲಿ ಪ್ರಕಟವಾಗಿರುವ ಬ್ಲಾಗ್ ಬಗ್ಗೆ ಪ್ರತಿಕ್ರಿಯಿಸಲು ಟ್ವಿಟರ್ ಬಳಕೆದಾರರಿಗೆ ಅನುವು ಮಾಡಲಾಗಿದೆ.ಬ್ಲಾಗುಗಳನ್ನು ವಿಷಯಾನುಸಾರ ಸಂಗ್ರಹಿಸಲಾಗಿದೆ.ಜನಪ್ರಿಯ ಬ್ಲಾಗುಗಳು ಆದ್ಯತೆ ಗಳಿಸುತ್ತವೆ.ಟ್ವಿಟರ್ ಸಂದೇಶಗಳು ಮತ್ತು ಸದ್ಯದ ಬ್ಲಾಗುಗಳ ನಡುವಣ ಆಯ್ಕೆ ಬೇಕಾದವರಿಗಿದು ಸೂಕ್ತ ಮಾಧ್ಯಮವಾಗಲಿದೆ.ತಾವು ಕಳೆದ ದಶಕದಲ್ಲಿ ಗಳಿಸಿದ ಅನುಭವದಿಂದ ಹೊಸ ಬ್ಲಾಗ್ ಮಾಧ್ಯಮವನ್ನು ರೂಪಿಸಲಾಗಿದೆ ಎಂದು ಸ್ಥಾಪಕರ ನುಡಿ.ಈಗಾಗಲೇ ಲಭ್ಯವಿರುವ ಪಿಂಟರೆಸ್ಟ್,ಟುಂಬ್ಲ್ ಬ್ಲಾಗರ್ ಮುಂತಾದ ತಾಣಗಳ ಪ್ಲಸ್ ಪಾಯಿಂಟುಗಳನ್ನಿಲ್ಲಿ ಜತೆಯಾಗಿ ನೀಡಲಾಗಿದೆ.ಚಿತ್ರ,ಬರಹಗಳನ್ನು ಇಲ್ಲಿ ಇತರರ ಜತೆ ಹಂಚಿಕೊಳ್ಳಬಹುದು.ಇದರ ವಿನ್ಯಾಸ ಬಹು ಸರಳವಾಗಿದೆಯಂತೆ.ಮೀಡಿಯಂ ಸ್ಥಾಪಕರು ಬ್ಲಾಗರ್ ಅನ್ನೂ ಸ್ಥಾಪಿಸುವಲ್ಲಿ ಇತರರ ಜತೆ ಕೈಗೂಡಿಸಿ,ಅದೀಗ ಗೂಗಲ್ ಮೂಲಕ ಜನಪ್ರಿಯವಾಗಿರುವ ತಾಣವಾಗಿದೆ.ಜನಪ್ರಿಯ ಬರಹಗಳಿಗೆ ಮೊದಲ ಆದ್ಯತೆ ನೀಡಿ,ಗುಣಮಟ್ಟ ಹೆಚ್ಚಿಸಲಿಲ್ಲಿ ಒತ್ತು ಕೊಟ್ಟಿರುವುದು ಸ್ಪಷ್ಟ.
-------------------
ರಾಯ್ಟರ್ ಸುದ್ದಿ ಸಂಸ್ಥೆಗೆ ಹ್ಯಾಕರ್ ಕಾಟ
ರಾಯ್ಟರ್ ಸುದ್ದಿ ಸಂಸ್ಥೆಯು ಬಹು ಜನಪ್ರಿಯ.ಈ ತಾಣಕ್ಕೆ ಇತ್ತೀಚೆಗೆ ಹ್ಯಾಕರ್‌ಗಳು ಕಾಡುತ್ತಿದ್ದಾರೆ.ಕಳೆದ ವಾರ,ಸೌದಿ ಅರೇಬಿಯಾದ ವಿದೇಶ ಸಚಿವ ನಿಧನರಾಗಿದ್ದರೆ ಎಂದು ರಾಯ್ಟರ್‌ನ ಬ್ಲಾಗಿನಲ್ಲಿ ಪ್ರಕಟವಾಯಿತು.ಆದರಿದು ಹುಸಿ ಸುದ್ದಿಯಾಗಿತ್ತು.ಇದು ಗಮನಕ್ಕೆ ಬಂದೊಡನೆ,ರಾಯ್ಟರ್ ಸುದ್ದಿಗೆ ಕತ್ತರಿ ಪ್ರಯೋಗ ಮಾಡಿತು.ಅದಕ್ಕೂ ಮೊದಲು ಸಿರಿಯಾ ಗಲಭೆಯಲ್ಲಿ ಸರಕಾರದ ವಿರೋಧಿ ಪಡೆಗಳು ಮೇಲುಗೈ ಸಾಧಿಸಿದ ಬಗ್ಗೆಯೂ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು.ಇದರ ಹಿಂದೆ ಯಾರಿದ್ದಾರೆ ಎನ್ನುವುದಿನ್ನೂ ಸ್ಪಷ್ಟವಾಗಿಲ್ಲ.ರಾಯ್ಟರಿನ ಟ್ವಿಟರ್ ಸಂದೇಶಗಳಲ್ಲೂ ಹ್ಯಾಕರುಗಳು ತಮ್ಮ ಸಂದೇಶಗಳನ್ನು ಹಾಕುತ್ತಿದ್ದಾರೆ.



*ಅಶೋಕ್‌ಕುಮಾರ್ ಎ