ವೇಷ ಅಸ್ತ ವ್ಯಸ್ತವಾದರೂ ಚಿಂತೆಯಿಲ್ಲ ಹೃದಯ ಮಾತ್ರ‌ ವ್ಯವಸ್ತಿತವಾಗಿರಲಿ

Submitted by drpshashikalak… on Fri, 08/31/2012 - 22:35
ತುಂಟ, ಶ್ರೀಮಂತ ಯುವಕರಿಬ್ಬರು ಶಾಲೆ ತಪ್ಪಿಸಿ ತಿರುಗಾಡಲು ಹೊರಟಿದ್ದಾರೆ. ಹತ್ತಿರದ ಹೊಲದ ಮೂಲಕ ಹಾದು ಹೋಗುವಾಗ ಅವರ ಕಣ್ಣಿಗೆ ಕಂಡದ್ದು ಸವೆದುಹೋದ ತೂತಾದ ಒಂದು ಜೊತೆ ಬೂಟು. ಅದನ್ನು ನೋಡಿದಾಕ್ಷಣ ಅವರಿಗೆ ಅದನ್ನು ಧರಿಸುವಾತ ಹೇಗಿದ್ದಾನು ? ಎಂಬ ಕುತೂಹಲ. ಅವನನ್ನು ಛೇಡಿಸೋಣ ಎಂಬ ಮನಸ್ಸು ಒಬ್ಬ ಹುಡುಗನಿಗೆ. ಈ ಬೂಟುಗಳನ್ನು ಕಣ್ಣಿಗೆ ಕಾಣದಂತೆ ಮರೆ ಮಾಡೋಣ ನಂತರ ಇದನ್ನು ಹುಡುಕಲು ಹೆಣಗಾಡುವ ಆ ಮನುಷ್ಯನ ಪಾಡು ಹೇಗಿರುತ್ತೆ ನೋಡೋಣ ? ಎನ್ನುತ್ತಾನೆ. ಅದು ಅಷ್ಟು ಸರಿಯಾಗಿ ಕಾಣದ ಕಾರಣ, ಮತ್ತೊಬ್ಬ ಹೇಳುತ್ತಾನೆ ಬೇಡ, ಈ ಸವಕಲು ಬೂಟಿನೊಳಗೆ ಒಂದು ನಾಣ್ಯ ಹಾಕೋಣ, ಹೇಗಿರುತ್ತೆ ನಂತರದಲ್ಲಿ? ಎಂಬುದನ್ನು ಈ ಮರದ ಹಿಂದೆ ಅವಿತು ನೋಡೋಣ ! ಸರಿ ಇಬ್ಬರೂ ಒಪ್ಪಿ ಒಂದೊಂದು ಬೂಟಿನಲ್ಲೂ ಒಂದೊಂದು ನಾಣ್ಯ ಹಾಕುತ್ತಾರೆ.
 
ಸ್ವಲ್ಪ ಸಮಯದ ನಂತರ, ಹೊಲದ ಕೆಲಸ ಮುಗಿಸಿ ವಯಸ್ಸಾದ ಕಡು ಬಡವ ವೃದ್ಧ ಬಂದು ಆ ಬೂಟನ್ನು ಧರಿಸಲು ಕಾಲಿಡುತ್ತಾನೆ. ತನ್ನ ಕಾಲಿಗೆ ಏನೋ ಒತ್ತುತ್ತಿದೆ ಎಂದು ಭಾಸವಾದಾಗ ನೋಡುತ್ತಾನೆ. ಬೆಳ್ಳಿಯ ನಾಣ್ಯ ! ಆಶ್ಚರ್ಯ ಅದನ್ನು ಕೈಗೆ ತೆಗೆದುಕೊಂಡವನೇ ಕಣ್ಣಿಗೆ ಒತ್ತಿಕೊಳ್ಳುತ್ತಾನೆ.ಮತ್ತೊಂದು ಬೂಟು ಧರಿಸಲು ಕಾಲಿಟ್ಟಾಗ ಮತ್ತೆ ಕಾಲಿನಡಿ ಏನೋ ಇದ್ದಂತೆ ಭಾಸವಾಗುತ್ತದೆ. ನೋಡಿದರೆ ಅಲ್ಲೂ ಒಂದು ಬೆಳ್ಳಿಯ ನಾಣ್ಯ. ಮುದುಕನ ಮುಖ ಅರಳುತ್ತದೆ. ಕಣ್ಣುಗಳಲ್ಲಿ ಮಿಂಚು. ಎರಡೂ ನಾಣ್ಯಗಳನ್ನು ಕಣ್ಣಿಗೆ ಒತ್ತಿಕೊಳ್ಳುತ್ತಾನೆ. ನಂತರ ಸುತ್ತಲೂ ನೋಡುತ್ತಾನೆ. ಯಾರಾದರೂ ಈ ನಾಣ್ಯದ ಒಡೆಯರು ಇಲ್ಲಿರಬಹುದೇ ? ಎಂದು. ಯಾರು ಕಾಣುವುದಿಲ್ಲ. ಆ ನಾಣ್ಯಗಳನ್ನು ಕೈಲಿಟ್ಟುಕೊಂಡು ತಕ್ಷಣ ಭೂತಾಯಿಗೆ ನಮಸ್ಕರಿಸುತ್ತಾನೆ. ಮುಗಿಲತ್ತ ನೋಟ ಬೀರಿ, ಆಕಾಶಕ್ಕೂ ನಮಿಸುತ್ತಾನೆ. ಹೇ ಭೂದೇವಿ ನನ್ನ ಆಕ್ರಂದನ ನಿನಗೆ ಹೇಗೆ ತಲುಪಿತು. ಮನೆಯಲ್ಲಿ ನನ್ನ ಮಕ್ಕಳು ಎರಡು ದಿನದಿಂದ ಉಪವಾಸದಿಂದಿದ್ದಾರೆ. ಹೆಂಡತಿ ಖಾಯಿಲೆಯಿಂದ ಹಾಸಿಗೆ ಹಿಡಿದಿದ್ದಾಳೆ. ಆಕೆಯ ಔಷಧಿಗೂ ನನ್ನ ಬಳಿ ಬಿಡಿಗಾಸಿರಲಿಲ್ಲ. ಈ ಪರಿಸ್ಥಿತಿಯಲ್ಲಿ ನನ್ನ ಮೇಲೆ ಕರುಣೆ ತೋರಿ, ಧನ ಸಹಾಯ ಮಾಡಿದ ನಿನಗೆ ನಾನು ಕೃತಜ್ಞನಾಗಿದ್ದೇನೆ. ತಾಯೇ ಈ ಉಪಕಾರವನ್ನು ಮಾಡಿದವರ್ಯಾರೋ ತಿಳಿಯದು. ಅವರನ್ನು ನೀನು ಕಾಪಾಡು ಎಂದು ಬೇಡುತ್ತಾನೆ.
 
ಜೀವನದಲ್ಲಿ ಒಮ್ಮೆಲೇ ದುಡ್ಡಿನ ಬೆಲೆ, ಹಾಗೂ ಕೃತಜ್ಞತಾ ಮನೋಭಾವದ ಪಾಠವನ್ನು ತಿಳಿಸಿಕೊಟ್ಟ ಆ ಹಿರಿಯ ಚೇತನಕ್ಕೆ ಆ ಯುವಕರಿಬ್ಬರೂ ತಮಗರಿವಿಲ್ಲದಂತೆಯೇ ಅಲ್ಲಿಂದಲೇ ಕೈ ಮುಗಿಯುತ್ತಾರೆ.
 
ಉಪಕಾರ ಮಾಡಿದವರಿಗೆ ಕೃತಜ್ಞತೆಯನ್ನರ್ಪಿಸುವುದು ಎಲ್ಲಕ್ಕಿಂತ ಮಿಗಿಲಾದ ಕರ್ತವ್ಯ. ಉಪಕರಿಸಿದವರನ್ನು ಸ್ಮರಿಸಬೇಕು. ಶ್ರೀಮಂತಿಕೆಯ ಕುರುಹು ಧನ, ಧಾನ್ಯ, ಆಸ್ತಿಯಲ್ಲ.
 
ಸದ್ಗುಣಗಳೇ ಆಂತರಿಕ ಶ್ರೀಮಂತಿಕೆಯ ಕುರುಹು. ಯಾರೂ ಕದಿಯಲಾರದಂತಹ ಸಿರಿ ಸಂಪತ್ತು. ಜೀವನ ನಮಗೆ ಕಲಿಸುವ ಪಾಠದಿಂದ ನಮ್ಮ ಹೃದಯ ಶ್ರೀಮಂತಿಕೆಯನ್ನು ಹೆಚ್ಚಿಸಿಕೊಳ್ಳೊಣವೇ ?
 
ವೇಷ ಅಸ್ತವ್ಯಸ್ಥವಾಗಿದ್ದರೂ ಚಿಂತೆಯಿಲ್ಲ, ಹೃದಯ ಮಾತ್ರ ವ್ಯವಸ್ಥಿತವಾಗಿರಲಿ.