ಕತೆ [ಪತ್ತೆದಾರಿ] : ಸುಳಿ - (೧)

ಕತೆ [ಪತ್ತೆದಾರಿ] : ಸುಳಿ - (೧)

 

 ಕಾರು  ಓಡಿಸುತ್ತಿರುವಂತೆ ಹಿಂದೆ ನೋಡಿದ ಡಾಕ್ಟರ್ ಗಿರಿಧರ್ . ಕಿಟಕಿಯಿಂದ ಆಚೆ ನೋಡುತ್ತ ಕುಳಿತಿದ್ದ ಹಿಂದಿದ್ದ ವ್ಯಕ್ತಿ, ಅವನ ಪಕ್ಕದಲ್ಲಿದ್ದ ಆಕೆಯನ್ನು ತನ್ನ ಮುಂದಿದ್ದ ಕನ್ನಡಿಯಲ್ಲಿ ನೋಡಲು ಪ್ರಯತ್ನಿಸಿದ, ಆಕೆಯು ಧರಿಸಿದ್ದ ಕಪ್ಪುವರ್ಣದ ಬುರ್ಕಾ ಕಂಡಿತೆ ವಿನಾಃ ಆಕೆಯ ಮುಖ ಕಾಣಲಿಲ್ಲ.

 
"ಮುಂದೆ ನೋಡಿ ಗಾಡಿ ಓಡುಸ್ರಿ  , ಅದೇನ್ ಪದೆ ಪದೆ ಹಿಂದೆ ನೋಡೋದು, ಇನ್ನೆಲ್ಲಿಯಾದರು ಗುದ್ದಿಬಿಟ್ಟೀರ"
 
ಗಿರಿಧರ್ ಗೊಣಗಿದ ಇದೆಲ್ಲಿಯ ವ್ಯವಹಾರ ತನಗೆ ಗಂಟು ಬಿತ್ತು, ಇಲ್ಲೆ ಸ್ವಲ್ಪ ದೂರ ಡ್ರಾಪ್ ಕೊಡಿ ಯಾವುದಾದರು ಡಾಕ್ಟರ್ ಶಾಪ್ ಹತ್ತಿರ ಇಳಿತೀನಿ ಅಂತ ಹತ್ತಿದವನು , ಕೆಳಗೆ ಇಳಿಯೋ ಲಕ್ಷಣವೆ ಇಲ್ಲ.
"ರೀ ಎಲ್ಲಿ ಇಳಿತೀನಿ ಅಂತ ಸರಿಯಾಗಿ ಹೇಳಿಬಿಡಿ, ನಿಲ್ಲಿಸಿಬಿಡ್ತೀನಿ, ನನ್ನ ಮನೆ ಹತ್ತಿರ ಬರ್ತಾ ಇದೆ, ನಿಮ್ಮ ಜೊತೆ ಸುತ್ತಕ್ಕೆ ನನಗೆ ಆಗಲ್ಲ"   ಸ್ವಲ್ಪ ಜೋರಾಗಿಯೆ ಹೇಳಿದ ಗಿರಿಧರ
 
" ಹರಾಮ್ ಕೋರ್, ನಿಂಗೆ ಹೇಳಿಲ್ವ ನಂಗೆ ಎಲ್ಲಿ ಬೇಕೊ ಅಲ್ಲಿ ಇಳಿತೀನಿ, ಗಾಡಿ ಓಡಿಸು ಅಂತ, ಜಾಸ್ತಿ ಮಾತನಾಡಬೇಡ, ತಲೆ ಚೂರು ಚೂರಾಗುತ್ತೆ ಅಸ್ಟೆ "
 ಕುತ್ತಿಗೆಯ ಹತ್ತಿರ ತಣ್ಣನೆಯ ಲೋಹವೊಂದು ತಾಕಿದಂತಾಗಿ ತಿರುಗಿನೋಡಿದರೆ, ಹಿಂದಿದ್ದ ವ್ಯಕ್ತಿ ತನ್ನ ಕೆಂಪನೆಯ ಕಣ್ಣುಗಳನ್ನು ಮತ್ತು ಕೆಂಪಾಗಿಸಿ, ಪಿಸ್ತೂಲನ್ನು ಅವನ ಕುತ್ತಿಗೆಗೆ ಹಿಡಿದಿದ್ದಾನೆ. ಬೆವೆತುಹೋದ, ಗಿರಿಧರ, ಏನು ಮಾತನಾಡಲು ತೋಚಲಿಲ್ಲ. ಗಾಭರಿಯಿಂದ ಕಾರು ನಿಲ್ಲಿಸಲು ಹೋದ.
"ಗಾಡಿ ನಿಲ್ಲಿಸಬೇಡ ಓಡಿಸುತ್ತ ಇರು, ಬೇವಕೂಫ್ ,  ನಿಲ್ಲಿಸಿದರೆ ಅಷ್ಟೆ, ಇಲ್ಲಿ ಕೇಳು, ನನಗೆ ಸರಿಯಾದ ಡಾಕ್ಟರ್ ಬೇಕು, ಇವಳಿಗೆ ಇಲಾಜ್ ಮಾಡಿಸಲು,  ಕಾಲು ಒಳಗೆ ಬುಲ್ಲೆಟ್ ಹೋಗಿದೆ, ತೆಗೆಸಬೇಕು,  ಅದಕ್ಕೆ ನಂಬಿಕೆ ಇರೊ ಡಾಕ್ಟರ್ ಆಗ್ಬೇಕು" ಅವನ ದ್ವನಿ ಕರ್ಕಶವಾಗಿತ್ತು.
 
" ಗಾಡಿ ಹತ್ತುವಾಗ,  ಆಕ್ಸಿಡೆಂಟ್ ಆಗಿದೆ, ಮೋಟರ್ ಬೈಕಿನಿಂದ ಬಿದ್ದುಬಿಟ್ಳು ಅಂತ ಹೇಳಿದೆ, ಈಗ ನೋಡಿದ್ರೆ ಹೀಗಂತಿ "
ಗಿರಿಧರ ಕೊಂಚ ಕೋಪದಿಂದ ನುಡಿದ
"ಮತ್ತೇನು , ಸತ್ಯ ನುಡಿದು ಬಿಟ್ರೆ, ನೀನು ಹತ್ತಿಸಿಬಿಡ್ತಿದ್ದ, ದೊಡ್ಡ ಮನಿಶ, ಅದೇನು ನಿನ್ನ ಕಾರಿನ ಮೇಲೆ, ಡಾಕ್ಟರ್ ಅಂತ ಮಾರ್ಕ್ ಇದೆ, ನಿನಗೆ ಬುಲ್ಲೆಟ್ ತೆಗ್ಯಕ್ಕೆ ಬರುತ್ತಾ"  ಅವನು ಕೇಳಿದ.
 ಗಿರಿಧರ್ ಬೆಚ್ಚಿದ, ಗಾಡಿ ಹತ್ತುವವರೆಗು ಮರ್ಯಾದಿಯಿಂದ ಮಾತನಾಡಿಸಿದ ಮನುಷ್ಯ ಈಗ ತನ್ನ ಹೊಸ ರೂಪ ತೋರುತ್ತಿದ್ದಾನೆ, ಇವನ ಹಿನ್ನಲೆ ಏನು , ಸೀದ ಪೋಲಿಸ್ ಸ್ಟೇಶನ್ ಹತ್ತಿರ ಗಾಡಿ ಓಡಿಸಿಬಿಡಲ ಅಂದುಕೊಂಡ,
"ನೋಡು ಇದೆಲ್ಲ ಪೋಲಿಸ್ ಕೇಸ್ , ನನಗೆ ಇಂತದೆಲ್ಲ ಆಗಲ್ಲ,  ನಾನು ಸರ್ಜನ್ ಅಲ್ಲ , ಬರಿ ಡಾಕ್ಟರ್, ನನಗೆ ತೊಂದರೆ ಕೊಡಬೇಡ, ಎಲ್ಲಾದರು ಇಳಿದುಕೊಂಡುಬಿಡು,ಅವಳನ್ನು ಕರೆದುಕೊಂಡು ನರ್ಸಿಂಗ್ ಹೋಂ ಹೋಗು ಬೇಕಾದಲ್ಲಿ ನಾನೆ ತೋರಿಸುತ್ತೆನೆ" ಗಿರಿಧರ ಹೇಳಿದ ಅನುನಯದ ದ್ವನಿಯಲ್ಲಿ.
"ಏಯ್ ಡಾಕ್ಟರ್ , ನಿನ್ನ ಬುದ್ದಿ ತೋರಿಸಬೇಡ, ಇಂತದೆಲ್ಲ ನನ್ನ ಹತ್ರ ನಡೆಯಲ್ಲ, ನಾನು ಸಾಮಾನ್ಯ ಡಾಕು ಅಲ್ಲ ಉಶಾರ್, ನಿನಗೆ ಹೆಚ್ಚಿನ ವಿವರ ಬೇಡ, ಈಗ ಕೇಳು, ನಾನು ನಿನ್ನ ಮನೆಗೆ ಬರುತ್ತೇನೆ ಅಲ್ಲಿ, ನೀನೆ ಇವಳ ಕಾಲಿನಲ್ಲಿರುವ ಬುಲೆಟ್ ತೆಗೆಯಬೇಕು, ಸ್ವಲ್ಪ ಹೆಚ್ಚು ಕಡಿಮೆ ಆದ್ರು ನಾಳೆ ನಿನ್ನ ಹೆಸರು ಪೇಪರಿನಲ್ಲಿರುತ್ತೆ, ನಿನ್ನ ಹೆಣದ ಫೋಟೊ ಜೊತೆ"  ಗಹಗಹಿಸಿ ನಗುತ್ತಿದ್ದ ಹಿಂದಿದ್ದ ವ್ಯಕ್ತಿ.
 ಗಿರಿಧರ ಚಿಂತಿಸುತ್ತಿದ್ದ ಇದೆಂತ ಬಲೆಯಲ್ಲಿ ನಾನು ಸಿಕ್ಕಿಬಿದ್ದೆ, ಕನಕಪುರದಿಂದ ಸಂಜೆ ಹೊರಟವನು, ಬೆಂಗಳೂರು  ಹದಿನೈದು ಕಿಲೊಮೀಟರ್ ಇದೆ ಅನ್ನುವಾಗ ರಸ್ತೆಯ ಪಕ್ಕ  ಬುರ್ಕಾ ಧರಿಸಿದ್ದ ಹೆಣ್ಣೊಬ್ಬಳ ಜೊತೆ ನಿಂತಿದ್ದ ಕುರ್ಚಲುಗಡ್ಡದ ವ್ಯಕ್ತಿಯೂಬ್ಬ ಕಾರಿಗೆ ಅಡ್ಡಬಂದ , ತಾನು ಕಾರು ನಿಲ್ಲಿಸಲೆ ಬೇಕಾಯಿತು, ಅವನ ಮೇಲೆ ರೇಗಲು ಹೊರಟರೆ
"ಸಾಹೇಬ್ರ ನೀವೆ ನನಗೆ ಸಹಾಯ ಮಾಡಬೇಕು, ಪಕ್ಕದ ಹಳ್ಳಿಯಿಂದ ಮೋಟರ್ ಬೈಕನಲ್ಲಿ ಬರ್ತಾ ಬ್ಯಾಲೆನ್ಸ್ ತಪ್ಪಿ ಬಿದ್ದುಬಿಟ್ಟೆ, ಇವಳ ಕಾಲಿಗೆ ಏಟು ಬಿದ್ದು ಬಿಡ್ತು, ನೋಡಿ ಹೇಗೆ ರಕ್ತ ಸುರೀತ ಇದೆ, ಯಾವ ಬಸ್ಸು ನಿಲ್ಲಿಸ್ತ ಇಲ್ಲ,  ಬನಶಂಕರಿ ಹತ್ತಿರ ಇಳಿಸಿಬಿಡಿ, ಯಾವುದೊ ಆಟೋ ಹಿಡಿದು, ಅಸ್ಪತ್ರೆಗೆ ಸೇರಿ ಇವಳಿಗೆ ತೋರಿಸ್ತೀನಿ " ಎಂದಿದ್ದ
ಅವನು ಹೇಳಿದ್ದು ನಿಜ, ಆಕೆಯ ಕಾಲಿನಿಂದ ರಕ್ತ ಸುರಿಯುತ್ತ ಇತ್ತು, ಸುಸ್ತಾಗಿ ಆಕೆ ಹೆಚ್ಚು ಕಡಿಮೆ ಜ್ಞಾನ ತಪ್ಪುವಂತಿದ್ದಳು, ತಕ್ಷಣ ಏನು ಮಾಡುವದೆಂದು ತೋಚಲಿಲ್ಲ,. ಅಲ್ಲದೆ ವೃತ್ತಿಯಲ್ಲಿ ಡಾಕ್ಟರ್ ಆದ ತನಗೆ ಇದು ಕರ್ತವ್ಯದಂತೆ ಎಂದು ಭಾವಿಸಿ, ಸರಿ ಹತ್ತಿ ಎಂದ . ಒಳಗೆ ಸೇರಿದ ಆ ವ್ಯಕ್ತಿ ಈಗ ಎಲ್ಲಿಯು ಇಳಿಯಲು ಒಪ್ಪದೆ ಗಿರಿಧರನನ್ನು ಸತಾಯಿಸುತ್ತಿದ್ದ. ಪೋಲಿಸ್ ಸ್ಟೇಷನ್ ಹತ್ತಿರ ಹೋಗದಂತೆ, ಒಳಗಿನಿಂದ ಹೆದರಿಸಿ ಕೂಡಿಸಿದ್ದ. ಆ ಪಿಸ್ತೂಲು ನಿಜವೊ ಸುಳ್ಳೊ ಅದು ಬೇರೆ ಅದರಲ್ಲಿ ಬುಲೆಟ್ ಇದೆಯೊ ಇಲ್ಲವೊ ತಿಳಿದಿಲ್ಲ ಆದರೆ ಹಾಗೆಂದು ಅವನು ಯಾವುದೆ ರಿಸ್ಕ್ ತೆಗೆದುಕೊಳ್ಳಲು ಸಾದ್ಯವಿರಲಿಲ್ಲ,
 
ಕಾರಿನ ಒಳಗೆ ಹತ್ತಿರುವ ವ್ಯಕ್ತಿ ಪಕ್ಕ ಪ್ರೊಫೆಷನಲ್ ತರ ಕಾಣುತ್ತಿದ್ದ.
 
"ನನ್ನ ಮನೆಗೆ   ಸಾದ್ಯವಿಲ್ಲ, ಅಲ್ಲಿ ಬುಲೆಟ್ ತೆಗೆಯಲು ಬೇಕಾದ ಯಾವುದೆ ವ್ಯವಸ್ತೆಯಿಲ್ಲ, ಅಪರೇಟ್ ಮಾಡಬೇಕಾದ ಸಾಮಾಗ್ರಿಗಳಾಗಲಿ, ಔಷದಿಗಳಾಗಲಿ, ಅಥವ ಸಹಾಯಕರು ಇಲ್ಲ, ಅಲ್ಲದೆ ಅಪರೇಷನ್ ಮಾಡಿ ಬುಲೆಟ್ ತೆಗೆಯಲು ಬೇಕಾದ ಅನುಭವ ನನಗಿಲ್ಲ, ನಾನು ಬೇರೆ ತರದ ಡಾಕ್ಟರ್ "
 ಎಂದ ಗಿರಿಧರ. ಆದರೆ ಆ ವ್ಯಕ್ತಿ ಅದನ್ನೆಲ್ಲ ಕೇಳಿಸಿಕೊಳ್ಳಲು ಸಿದ್ದನಿಲ್ಲ.
"ನೋಡು ಅದೆಲ್ಲ ನನಗೆ ತಿಳಿಯದು,  ಬುಲೆಟ್ ತೆಗೆಯಲು ಬೇಕಾದ ಎಲ್ಲವಸ್ತುಗಳನ್ನು ಇಲ್ಲಿ ಸರ್ಜಿಕಲ್ನಲ್ಲಿ   ಎಲ್ಲಿಯಾದರು ತೆಗೆದುಕೋ, ನಿನಗೆ ಬೇಕಾದರೆ ನಾನೆ ಸಹಾಯ ಮಾಡುವೆ, ನರ್ಸಿಂಗ್ ಹೋಂಗೆ ಹೋಗಲು ಸಾದ್ಯವಿಲ್ಲ" ಎಂದ ಅವನು
 ಇದೇನು ಗ್ರಹಚಾರ ತಾನು ಈ ಬಲೆಯಲ್ಲಿ ಸಿಕ್ಕಿಕೊಂಡೆ, ಅಲ್ಲ ಇವರಿಬ್ಬರನ್ನು ಮನೆಗೆ ಕರೆದುಕೊಂಡು ಹೋದರೆ ಸುತ್ತಮುತ್ತಲ ಜನರೆಲ್ಲರ ಕಣ್ಣಿಗೆ ಬೀಳುವದಿಲ್ಲವೆ, ಪೋಲಿಸರಿಗೆ ತಿಳಿದರೆ, ಯಾರೊ ಅಪರಾದಿಗಳಿಗೆ ಸಹಾಯ ಮಾಡಿದೆ ಎಂದು ತನ್ನನ್ನು ಅರೆಷ್ಟ್ ಮಾಡುವದಿಲ್ಲವೆ, ಎಂದೆಲ್ಲ ಯೋಚನೆ ಬಂದಿತು, ಆದರೆ ಪರಿಸ್ಥಿಥಿ  ಕೆಟ್ಟದಾಗಿತ್ತು, ಇವನಿಂದ ತಪ್ಪಿಸಿಕೊಳ್ಳುವಹಾಗಿರಲಿಲ್ಲ.
 ಸರ್ಜಿಕಲ್  ಸಾಮಾಗ್ರಿಗಳನ್ನು ಮಾರುವ ಅಂಗಡಿಯೊಂದು ಕಂಡಿತು, ಕಾರನ್ನು ಸ್ವಲ್ಪ ಮುಂದೆ ತೆಗೆದುಕೊಂಡು ಹೋಗಿ ನಿಲ್ಲಿಸಿದ, ಗಿರಿಧರ, ಆಂಗಡಿಯವನು ತನ್ನ ಕಾರನ್ನು ನೋಡಿ , ನಂಬರ್ ಏನಾದರು ಗುರುತಿಟ್ಟುಕೊಂಡರೆ ಸುಮ್ಮನೆ ಅಪಾಯ. 
"ನೋಡು ಅಲ್ಲಿ ಮೆಡಿಕಲ್ ಎಕ್ವಿಪಿಮೆಂಟ್ ಗಳನ್ನು ಮಾರುವ ಅಂಗಡಿ ಇದೆ, ನಾನು ಕೆಲವು ವಸ್ತುಗಳನ್ನು ಕಾಗದದಲ್ಲಿ ಬರೆದುಕೊಡುವೆ, ನೀನು ಹೋಗಿ ತಾ "
 ಎನ್ನುತ್ತ , ಕಾರಿನ ಡ್ಯಾಶ್ ಬೋರ್ಡಿನಿಂದ ಕಾಗದ ಪೆನ್ನು ತೆಗೆದು , ಅಗತ್ಯವಸ್ತುಗಳ ಹೆಸರನ್ನೆಲ್ಲ ಬರೆದು, ಅ ಅವ್ಯಕ್ತಿಯ ಕೈಗೆ ಕೊಟ್ಟ. ಅವನು
"ಅದೆಲ್ಲ ಸರಿ , ಇದಕ್ಕೆ ಎಷ್ಟು ಹಣ ಬೇಕಾಗಬಹುದು" ಎಂದ ಅವನು
ಅದಕ್ಕೆ  ಗಿರಿಧರ
"ಎಷ್ಟು ಅಂದರೆ, ಆಗುತ್ತೆ ಒಂದುವರೆ ಸಾವಿರ ಎರಡು ಸಾವಿರ ಹತ್ತಿರ" ಎಂದ ಅಲಕ್ಷದಿಂದ.
ಅವನು ನಗುತ್ತ
"ಸರಿ ಈಗ ಎರಡು ಸಾವಿರ ತೆಗಿ ನಿನ್ನ ಜೋಬಿನಿಂದ ನನ್ನ ಹತ್ತಿರ ಒಂದು ಪೈಸೆ ಸಹ ಇಲ್ಲ " ಎಂದ
 
ಗಿರಿಧರ ಅವಕ್ಕಾದ, ಇದೆಂತಹ ಬಂಡತನ,ನವಿರಾಗಿ ಮಾತನಾಡಿ ಗಾಡಿ ಏರಿದವನು, ಕೆಳಗೆ ಇಳಿಯಲು ತಕರಾರು ಮಾಡುತ್ತ, ಈಗ ಅವನ ಹೆಂಡತಿಯ ಚಿಕಿತ್ಸೆಗೆ ಹಣ ಕೇಳುತ್ತಿರುವ, ಅವನ ಕೈಲಿ ಪಿಸ್ತೂಲು ಬೇರೆ, ಬೆಳಗ್ಗೆ ಯಾವ ಗಳಿಗೆಯಲ್ಲಿ ಎದ್ದೆನೊ ಅನ್ನುತ್ತ  ನುಡಿದ
 
"ಗಾಡಿಯಲ್ಲಿ ಹತ್ತುವಾಗ ನೈಸಾಗಿ ಮಾತನಾಡಿ, ಈಗ ಗಂಡಾಗುಂಡಿ ಮಾಡುತ್ತಿದ್ದೀಯ, ಅದಕ್ಕೆ ಈಗ ಯಾರು ಯಾರಿಗು ಹೆಲ್ಪ್ ಮಾಡೋಲ್ಲ,  ಅಲ್ಲಿಂದ ಗಾಡಿಯಲ್ಲಿ ಡ್ರಾಪ್ ಕೊಟ್ಟಿರುವುದು ಅಲ್ಲದೆ, ನಿನ್ನ ಹೆಂಡತಿ  ಚಿಕಿತ್ಸೆಗೆ ಹಣ ಸಹ ನಾನೆ ಪೀಕಬೇಕ" ಎಂದ ಕುದಿಯುತ್ತಿರುವ ಕೋಪದಿಂದ
 
"ಏಯ್ ಡಾಕ್ಟರ್, ಇದೆಲ್ಲ ಕತೆ ನನ್ನ ಹತ್ತಿರ ಹೇಳಬೇಡ,  ಯಾಕೆ ನೀನೆ ಆಕ್ಸಿಡೆಂಟ್ ಮಾಡಿದ್ದು ಅಂತ ಅಂದುಕೊ ಎಲ್ಲ ಸರಿಹೋಗುತ್ತೆ, ಈಗ ಹಣ ತೆಗೆ, ಅಮೇಲೆ ನಿನ್ನ ಮನೆಗೆ ಹೋಗಿ, ದೂಸ್ರ ಮಾತನಾಡದೆ , ಅಪರೇಶನ್ ಮಾಡಿ ಕಾಲಿನಲ್ಲಿರುವ ಬುಲೆಟ್ ತೆಗಿ,  ಬೇಕಾದ್ರೆ ಇವಳನ್ನು ನಿನ್ನ ಹೆಂಡತಿ ಅಂತ್ಲೆ ಅಂದುಕೊ, ನಾನೇನು ಬೇಡ ಅನ್ನಲ್ಲ , ಅದು ಬಿಟ್ಟು ತರ್ಲೆ ಎಲ್ಲ ತೆಗಿಬೇಡ" ಎಂದ. 
ಇಂತ ವ್ಯಕ್ತಿಯ ಜೊತೆ ಮಾತಿನಿಂದ ಏನು ಉಪಯೋಗವಿಲ್ಲ ಎಂದು ಅರಿವಾಗಿ ಗಿರಿಧರ ಮಾತನಾಡದೆ ಹಿಪ್ ಪ್ಯಾಕೆಟ್ ನಿಂದ ಪರ್ಸ್ ತೆಗೆದು ಎರಡುಸಾವಿರ ಹಣ ತೆಗೆದುಕೊಟ್ಟು, ಸಪ್ಪೆಯಾಗಿ ಕೇಳಿದ
"ಬುಲೆಟ್ ಯಾಕೆ ತಾಕಿತು"  ,
ಆ ವ್ಯಕ್ತಿ ಭಯಂಕರವಾಗಿ ನಗುತ್ತ ಹೇಳಿದ
"ಹೇಗೆ ಅಂದ್ಯಾ? ನಮ್ಮಂತವರಿಗೆ ಹೇಗೆ ತಾಕುತ್ತೆ, ಹಾಳು ಪೋಲಿಸರು ನುಗ್ಗಿಬಿಟ್ರು, ತಪ್ಪಿಸಿಕೊಳ್ಳುವಾಗ,  ಇವಳಿಗೆ ಬುಲೆಟ್ ತಗಲಿ ಬಿಡ್ತು, ಹಲ್ಕಮುಂಡೆ, ಈಗ ಇವಳ ಜೊತೆ ನಾನು ಸಾಯಬೇಕು"
ಕೆಟ್ಟದಾಗಿ ಬೈದ.  ಹಣ ಪಡೆದು ಕೆಳಗೆ ಇಳಿಯುವಾಗ ತನ್ನ ಪಕ್ಕದಲ್ಲಿದ ಆಕೆಯ ಕೈಗೆ ಪಿಸ್ತೂಲು ಕೊಡುತ್ತ ಹೇಳಿದ
"ಏಯ್, ಹತ್ತು ನಿಮಿಷ ಹೀಗೆ ಹೋಗಿ ಹಾಗೆ ನಿನಗೆ ಬೇಕಾದ ಮೆಡಿಸನ್ ತಂದು ಬಿಡುತ್ತೇನೆ, ಈ ಡಾಕ್ಟರ್ ಅಲ್ಲಾಡದಂತೆ ನೋಡಿಕೊ,  ಸ್ವಲ್ಪ ಅಲುಗಾಡಿದರು, ಸರಿ ತಲೆಗೆ ಗುಂಡು ಹಾರಿಸು "  ಎಂದವನು ಬಾಗಿಲು ತೆಗೆದು ಕೆಳಗಿಳಿದು,  ಸರ್ಜಿಕಲ್  ಕಡೆಗೆ ನಡೆಯುತ್ತ ಹೊರಟ.
 ರಾತ್ರಿಯ ಬೆಳಕಿನಲ್ಲಿ ಗಿರಿಧರ ಕಾರಿನಿಂದಲೆ ಗಮನಿಸಿದ, ಆಸಾಮಿ ಕಡಿಮೆ ಅಂದರು ಆರು ಅಡಿ ಎತ್ತರವಿದ್ದಾನೆ, ತಿಂದು ಬೆಳಸಿದ ಮೈ,  ಮುಖದ ತುಂಬ ಮುಚ್ಚಿಕೊಂಡ ಕುರುಚಲು ಗಡ್ಡ ಮುಖಕ್ಕೆ ಎಂತದೊ ಕ್ರೌರ್ಯವನ್ನು ಕೊಟ್ಟೆದೆ, ಹಾಳಾದವನು ಈಕೆಯ ಕೈಗೆ ಪಿಸ್ತೂಲು ಕೊಟ್ಟು ಹೋಗಿರುವ, ಇಲ್ಲದಿದ್ದರೆ ಹೇಗೆ ಇಲ್ಲಿಂದ ಪಾರಾಗಲು ಪ್ರಯತ್ನಪಡಬಹುದಿತ್ತು, ಈ ಹೆಣ್ಣೊ ಒಂದು ಪದವನ್ನು ಆಡುತ್ತಿಲ್ಲ,   ಸ್ವಲ್ಪ ಓರೆಗಣ್ಣಲ್ಲಿ ನೋಡಿದ, ತೊಡೆಯ ಮೇಲೆ ಪಿಸ್ತೂಲು ಇಟ್ಟು, ಕೈಯನ್ನು ಪಿಸ್ತೂಲಿನ ಮೇಲೆ ಇಟ್ಟು ಕುಳಿತ್ತಿದ್ದಾಳೆ ಆಕೆ,  ಏನಾದರು ಆಕೆಯನ್ನು ಮಾತನಾಡಿಸಲ ಅಂದುಕೊಂಡ, ಬೇಡ ನನಗೇಕೆ ಬೇಕು ಈಗಲೆ ತೊಂದರೆಯಲ್ಲಿದ್ದೇನೆ. ಅಲ್ಲ ಅಷ್ಟು ಗುಂಡು ತಾಕಿ ನೋವು ಅನುಭವಿಸುತ್ತಿರುವ ಈಕೆ, ಕಾರು ಹತ್ತಿದ್ದಾಗ ಸ್ವಲ್ಪ ಒಂದೆರಡು ಬಾರಿ ನೋವಿನ ದ್ವನಿ ಹೊರಡಿಸಿದವಳು ನಂತರ ಶಾಂತವಾಗಿ ಕುಳಿತ್ತಿದ್ದಾಳೆ ಎಂದರೆ ಇನ್ನೆಂತ ಗಟ್ಟಿ ಹೆಂಗಸು, ನಮ್ಮ ಹೆಂಗಸರಾದರೆ, ಚಿಕ್ಕ ಗಾಯಕ್ಕು ಅರಚಾಡಿ ಆಕಾಶ ಭೂಮಿ ಒಂದು ಮಾಡುತ್ತಾರೆ ಅಂದುಕೊಂಡ.
 ಅವನು ಹೋಗಿ ಹತ್ತು  ನಿಮಿಷ ದಾಟಿ ಹದಿನೈದು ನಿಮಿಶವಾಗುತ್ತಿತ್ತು, ಅದೇನು ಇಷ್ಟು ಹೊತ್ತು ಅಂತ ಅಸಹನೆಯಿಂದ ಮಿಡುಕಿದ, ಹಿಂದಿದ್ದ ಆಕೆಗೆ
"ಎಲ್ಲಿ ಹೋಗ ನಿನ್ನ ಗಂಡ ಇಷ್ಟು ಹೊತ್ತಾದರು , ಬರಲಿಲ್ಲ,  ನಾಲಕ್ಕು ಮೆಡಿಸನ್ ತರಕ್ಕೆ ಇಷ್ಟು  ಹೊತ್ತಾ"  ಎಂದ .
ಅವಳಿಂದ ಎಂತದೂ ಉತ್ತರವಿಲ್ಲ.  ಥೂ ದರಿದ್ರ ಈಕೆಗೆ ಕನ್ನಡ ಬರುವುದೊ ಇಲ್ಲವೊ ಯಾರಿಗೆ ಗೊತ್ತು ಅಂದು ಕೊಂಡ .ನಿದಾನಕ್ಕೆ ತಲೆ ತಿರುಗಿಸಿ ನೋಡಿದ, ಆಕೆ ತನ್ನ ಬಂಗಿಯನ್ನು ಸ್ವಲ್ಪವು ಬದಲಿಸದೆ ಕುಳಿತ್ತಿದ್ದಳು.  ಮುಂದೆ ನೋಡುತ್ತ  ಕುಳಿತ ಈಗ ಹೇಗಿದ್ದರು ಅವನು ಇಲ್ಲ ಸೀದಾ  ಪೋಲಿಸ್ ಸ್ಟೇಷನ್ಗೆ ಗಾಡಿ ಓಡಿಸಿಬಿಡಲ ಅಂದು ಕೊಂಡ, ಮತ್ತೆ ಆಕೆಯ ಕೈಲಿದ್ದ ಪಿಸ್ತೂಲು ನೆನಪಿಗೆ ಬಂದಿತು.
ಇದೇನು ಅವನು ಹೋಗಿ ಅರ್ದಗಂಟೆಗೆ ಹತ್ತಿರವಾಗುತ್ತ ಬಂದಿತು, ಇನ್ನು ಬರಲಿಲ್ಲ
ಈಗ ಗಿರಿಧರನಿಗೆ ಅನ್ನಿಸಿತು, ಮೆಡಿಸನ್ ತರಲು ಹೋದ ಅವನೇನು ಸಧ್ಯ ಬರುವಂತೆ ಕಾಣುತ್ತಿಲ್ಲ ಈ ಬುರ್ಕಾದ ಹೆಣ್ಣು ತುಟಿ ಬಿಚ್ಚುತ್ತಿಲ್ಲ, ಸುಮ್ಮನೆ ಕೈಯಲ್ಲಿ ಪಿಸ್ತೂಲು ಹಿಡಿದು ಕುಳಿತಿದ್ದಾಳೆ
ಮತ್ತೆ ಹಿಂದೆ ತಿರುಗಿ ನೋಡಿದ, ಆಕೆಯದು ಅದೆ ಬದಲಾಗದ ಭಂಗಿ, ತೆರೆದ ಕಣ್ಣು, ಸ್ವಲ್ಪ ಆಶ್ಚರ್ಯವಾಗಿತ್ತು ಗಿರಿಧರನಿಗೆ
ಜೋರಾಗಿ ಕೂಗಿದ
"ನಿನ್ನ ಗಂಡ ಹತ್ತು ನಿಮಿಷ ಅಂತ ಹೋದವನು ಅರ್ದಗಂಟೆ ಆಯ್ತು ಬರಲೆ ಇಲ್ಲ, ಎಲ್ಲಿ ಹೋದ, ಪೋನ್ ಮಾಡಿ ನೋಡು"
ಅವಳಿಂದ ಯಾವುದೆ ಪ್ರತಿಕ್ರಿಯೆ ಇಲ್ಲ.
 
ಏಕೊ ಅನುಮಾನವಾಗಿ, ಅವಳ ಮುಖದ ಬಳಿ ತನ್ನ ಕೈ ಆಡಿಸಿದ, ಅವಳು ತನ್ನ ಕಣ್ಣನ್ನು ಸಹ ಪಿಳುಕಿಸುತ್ತಿಲ್ಲ,  ಅವಳಿಗೆ ಜ್ಞಾನ ಏನಾದರು ತಪ್ಪಿತ. ಒಳ್ಳೆಯದೆ ಆಯಿತು, ಸೀದ ಪೋಲಿಸ್ ಹತ್ತಿರ ಹೋಗಿಬಿಡುವುದು ಒಳ್ಳೆಯದು ಅಂದುಕೊಂಡವನು. ಕೆಳಗೆ ಇಳಿದ. ರಸ್ತೆಯಲ್ಲಿ ಟ್ರಾಫಿಕ್ ಸ್ವಲ್ಪ ತೆಳುವಾಗಿತ್ತು, ಹರಿಯುತ್ತಿರುವ ವಾಹನದಲ್ಲಿರುವ ಕೆಲವರು ಇವನತ್ತಲೆ ನೋಡುತ್ತಿದ್ದರು. ಗಿರಿಧರ ಹಿಂದಿನ ಬಾಗಿಲು ತೆರೆದ, ಅವಳ ಬುಜ ಹಿಡಿದು ಅಲುಗಿಸಿದ,
 
"ಏಯ್ ಎದ್ದೇಳು, ಕೆಳಗೆ ಇಳಿ" ಅವಳು ಹಾಗೆ ಪಕ್ಕಕ್ಕೆ ಒರಗಿದಳು,
 
ಗಿರಿಧರ ಗಾಭರಿಯಿಂದ ಅವಳ ಎಡಕೈ ನಾಡಿ ಹಿಡಿದು ನೋಡಿದ ,  ನಾಡಿ ನಿಂತು ಬಹಳ ಕಾಲವಾಗಿದೆ ಅನ್ನಿಸಿತು. ಆಕೆಯ ಮುಖದ ಹತ್ತಿರ ಕೈ ಹಿಡಿದು ನೋಡಿದ ಉಸಿರು ನಿಂತು ಹೋಗಿತ್ತು. ಅವನಿಗೆ ಎದೆಯಲ್ಲಿ ಭಯ ಎನ್ನುವುದು ತುಂಬಿ ಬಂತು. ರಸ್ತೆಯಲ್ಲಿ ಎಲ್ಲರು ಅವರ ಪಾಡಿಗೆ ಅವರು ಸಾಗುತ್ತಿದ್ದರು,  ಕಾರಿನಲ್ಲಿ ಡ್ರೈವರ್ ಸೀಟಿನಲ್ಲಿ ಕುಳಿತ, ಸುತ್ತಲ ಗಾಜುಗಳನ್ನು ಇಳಿಸಿಬಿಟ್ಟ. ಹೊರಗಿನವರಿಗೆ ಒಳಗಿನದೇನು ಕಾಣುವಂತಿಲ್ಲ. ಅಲ್ಲದೆ ಕಾರು ರಸ್ತೆ ದೀಪ ಇಲ್ಲದ ಕಡೆ ನಿಂತಿತ್ತು. ಅವನಿಗೆ ಎಂತದೊ ಗಾಭರಿ ತುಂಬಿತ್ತು, ಡಾಕ್ಟರ್ ಆದವನಿಗೆ ಸಾವನ್ನು ನೋಡುವುದು ಹೆದರಿಕೆ ಏನು ಅಲ್ಲ ಆದರೆ ಇದು ವಿಚಿತ್ರ ಪರಿಸ್ಥಿಥಿ ಆಗಿತ್ತು. ಯಾರೊ ಅಪರಿಚಿತ ಹೆಣ್ಣು ಗಂಡು ತನ್ನ ಕಾರಿನಲ್ಲಿ ಹತ್ತಿ, ಗಂಡು ಕೆಳಗೆ ಇಳಿದು ಹೋಗಿದ್ದಾನೆ, ಹೆಣ್ಣು ಪ್ರಾಣ ಬಿಟ್ಟಿದ್ದಾಳೆ
 
ಕತೆ ಮುಂದುವರೆಯುತ್ತದೆ... ಎರಡನೆ ಬಾಗ ಸಿದ್ದವಾದ ನಂತರ :)))

 

Rating
No votes yet

Comments