ಈಗಷ್ಟೇ ಮಳೆಯಾಗಿದೆ

ಈಗಷ್ಟೇ ಮಳೆಯಾಗಿದೆ

ಕವನ

ಈಗಷ್ಟೇ ಮಳೆಯಾಗಿದೆ

ಮರಗಳಿನ್ನೂ ಹನಿಯುತಿವೆ

ಕೋಗಿಲೆಯೊಂದು ಹಾಡುತಿದೆ 

ನನ್ನೆದೆ ಹಾಡಿಗೆ ದನಿಯಾಗಿದೆ 

 

ನಿನ್ನೊಲುಮೆಯಲಿ ತೊಯ್ದ 

ಹೃದಯಕೆ, ಸಂತಸದ

ಗರಿ ಬಿಚ್ಚಿ ನವಿಲಿನಂತೆ

ಕುಣಿಯುವ ಮನಸಾಗಿದೆ 

 

ಸೂರ್ಯ ರಥಕೆ

ಅಡ್ಡಿ ಮಾಡಿದ ಮೋಡಗಳು

ನಿನ್ನ ನೆನೆವಾಗಿನ ನನ್ನ

ಕೆನ್ನೆಯಂತೆ ರಂಗೇರಿವೆ  

 


ಈಗಷ್ಟೇ ಮಳೆಯಾಗಿದೆ

ತಂಗಾಳಿಯಿನ್ನೂ ಬೀಸುತಿದೆ 

ನಿನ್ನೊಡನೆ ಹಕ್ಕಿಯಂತೆ

ಆಗಸದಿ ಹಾರುವ ಆಸೆಯಾಗಿದೆ

 

ಹೂವಿನ ಮೇಲಿನ ಮಳೆಹನಿ 

ಜಾರುವ ಮುನ್ನ 

ನಿನಗೊಂದು ಮುತ್ತನಿತ್ತು 

ಮುದ್ದಾಡುವ ಹಂಬಲವಾಗಿದೆ

 


ಈಗಷ್ಟೇ ನಿನ್ನ ಪ್ರೀತಿಯ ಮಳೆಯಾಗಿದೆ

ಮನಸು ತುಂಬಿ ಹರಿಯುತಿದೆ

ನಿರಂತರ ಜಲಧಾರೆಯಾಗಿ ನಾನು ನೀನು

ಪ್ರೇಮಸಾಗರದಲಿ ಅಲೆಯಾಗುವ ಕನಸಾಗಿದೆ

 

 
- ಪ್ರಮಿತ



೦೩/೦೮/೨೦೦೦  

Comments