ಕತೆ [ಪತ್ತೆದಾರಿ] : ಸುಳಿ - (೩)

ಕತೆ [ಪತ್ತೆದಾರಿ] : ಸುಳಿ - (೩)

 ಮೊದಲ ಭಾಗ : ಕತೆ ಪತ್ತೆದಾರಿ :- ಸುಳಿ - (೧)

 
ಮುಂದಕ್ಕೆ ಓದಿ...
 
ಗಿರಿಧರನಿಗೆ ತಕ್ಷಣಕ್ಕೆ ಏನು ಉತ್ತರಿಸ ಬೇಕೆಂದು ತಿಳಿಯಲಿಲ್ಲ. ಅವನು ಮನಸಿನಲ್ಲಿ  ಅಂದು ಕೊಂಡ ಇದೆಂತ ಕೆಲಸ ಮಾಡಿದೆ, ಕಾರಿನಲ್ಲಿದ್ದ ಶವವನ್ನು ಕಣ್ಮರೆ ಮಾಡಿದವನು , ಹಿಂದಿನ ಸೀಟಿನಲ್ಲಿದ್ದ ಈ ಪಿಸ್ತೂಲ್ ಮಣ್ಣಿನಲ್ಲಿ ಹಾಕಿ ಮುಚ್ಚಲು ಮರೆತುಬಿಟ್ಟೆ. ಆಮೇಲೆ ಒಳಗೆ ಎತ್ತಿಡೋಣ ಎಂದು ಅದನ್ನು ಪ್ರೀಜ್ ಮೇಲೆ   ಇಟ್ಟು ಹೊರಗೆ ಕಾರು ತೊಳೆಯಲು ಹೊರಟುಹೋದೆ, ಮಧ್ಯೆ ಈ ಪೋಲಿಸ್ ಚಂದ್ರಪ್ಪ ಬರುವನೆಂದು ನಿರೀಕ್ಷಿಸಲಿಲ್ಲ,. ಹೋಗಲಿ ಅಮೇಲಾದರು ಉಪಾಯವಾಗಿ ಪಿಸ್ತೂಲನ್ನು ಎತ್ತಿಡಬೇಕಾದವನು , ಮರೆವಿಗೆ ಬಲಿಯಾಗಿ, ಅಲ್ಲೆ ಬಿಟ್ಟು ಇವನ ಕಣ್ಣಿಗೆ ಬೀಳುವಂತೆ ಮಾಡಿರುವೆ, ಇದರಿಂದ ಏನಾಗುತ್ತೆ ಅನ್ನಿಸಿ ಭಯವಾಯಿತು, ಹೊರಗೆ ತೋರಗೋಡದೆ
 
"ಅದು ನನ್ನ ಸ್ನೇಹಿತರದು, ಇಲ್ಲಿ ಬಂದವರು ಬಿಟ್ಟು ಹೋಗಿದ್ದಾರೆ ಹಿಂದೆ ಕೊಡಬೇಕು"  ಎಂದ
"ಹೌದೆ ಯಾರದು, ಇದು ಸಾಮಾನ್ಯದ್ದಲ್ಲ , ವಿದೇಶದಿಂದ ತಂದಿರುವಂತೆ ಕಾಣುತ್ತೆ, ನಿಮ್ಮ ಸ್ನೇಹಿತರ ಹೆಸರೇನು "  ಎಂದು ಹತ್ತಿರದಿಂದ ಬಗ್ಗಿ ನೋಡಿದ. 
"ನೋಡಿ ಇದರ ಒತ್ತು ಗುಂಡಿಯ ಮೇಲೆ, ರಕ್ತದ ಗುರುತಿದೆ, ಪಕ್ಕದಲ್ಲು ಸ್ವಲ್ಪ ರಕ್ತ ಮೆತ್ತಿದೆಯಲ್ಲ, ಏನು ಗಡಿಬಿಡಿ ನಡೆದಿರುವಂತಿದೆ"
 
ಗಿರಿಧರನಿಗೆ ಉತ್ತರಿಸಲು ಕಷ್ಟವಾಯಿತು. "ಒಂದು ನಿಮಿಷ   ಬಂದು ಹೇಳುವೆ, ಒಳಗೆ ಕಾಫಿಗೆ ಎಂದು ಹಾಲು ಬಿಸಿಗೆ ಇಟ್ಟಿರುವೆ" ಎನ್ನುತ್ತ ಒಳಗೆ ಹೋಗಲು ನೋಡಿದ
 
ಚಂದ್ರಪ್ಪ "ಡಾಕ್ಟರೆ ಈಗ ಆ ಕಾಫಿ ವಿಷಯ ಬಿಟ್ಟುಬಿಡಿ, ಸ್ಟೌ ಆರಿಸಿ ಹೊರಬನ್ನಿ , ನೀವು ಪಿಸ್ತೂಲಿನ ಜೊತೆ , ನಮ್ಮ ಪೋಲಿಸ್ ಸ್ಟೇಷನ್  ಹೋಗೋಣ ಬನ್ನಿ" ಎಂದ. ಈಗ ಚಂದ್ರಪ್ಪನಲ್ಲಿ  ಪಕ್ಕದ ಮನೆಯಾತ ಹೋಗಿ ನಿಜವಾದ ಪೋಲಿಸ್ ಅವಾಹನೆಯಾಗಿದ್ದ. 
 
"ಅಂತದೇನು ಗಂಭೀರವಲ್ಲ, ನನ್ನ ಸ್ನೇಹಿತನಿಗೆ ಹಿಂದೆ ಕೊಟ್ಟುಬಿಡುತ್ತೇನೆ ಬಿಡಿ, ಅಂದ ಹಾಗೆ ನೀವು ಅದೇನು ಹಣ ಬೇಕು ಅಂದಿರಲ್ಲ ಎಷ್ಟು"
ಎಂದ ಗಿರಿಧರ  ಸ್ವಲ್ಪ ಅಳುಕುತ್ತಲೆ. ಅವನಿಗೆ ಅರಿವಾಗಿತ್ತು ನಾನು ತೊಂದರೆಯಲ್ಲಿ ಸಿಕ್ಕಿಬಿದ್ದೆ.
 
"ಡಾಕ್ಟರೆ ನಾನು ನಿಮ್ಮ ಬಳಿ ಹಣ ಕೇಳಲಿಲ್ಲ. ಮಾತು ಬದಲಾಯಿಸಬೇಡಿ, ನನಗೇನೊ ಅನುಮಾನ ಕಾಡುತ್ತಿದೆ, ನಿಮ್ಮ ನಡೆನುಡಿ ನೇರವಾಗಿಲ್ಲ, ಎಂತದೊ ಮರೆಸಲು ಪ್ರಯತ್ನಪಡುತ್ತಿರುವಿರಿ ಅನ್ನಿಸುತ್ತೆ, ನಾನು ಹೇಳಿದ ಹಾಗೆ ಮಾಡಿ ಬನ್ನಿ ಬಟ್ಟೆ ಧರಿಸಿ ಹೊರಡಿ, ನಾನು ಬಲವಂತವಾಗಿ ಕರೆದೊಯ್ಯುವಂತೆ ಮಾಡಿಕೊಳ್ಳಬೇಡಿ " ಎಂದ ಚಂದ್ರಪ್ಪ ತುಸು ಗಡಸು ದ್ವನಿಯಲ್ಲಿ
 
  ಗಿರಿಧರನಿಗೆ ಏನು ಮಾಡಲು ತೋಚಲಿಲ್ಲ. ಅವನು ಹೇಳಿದಂತೆ ಹೊರಡಲು ಸಿದ್ದನಾದ . ಅವನು ಸಿದ್ದನಾಗುವದರಲ್ಲಿ ಚಂದ್ರಪ್ಪ ಗಿರಿಧರನ ಮನೆಯಿಂದಲೆ,  ಬನಶಂಕರಿಯ ತನ್ನ ಪೋಲಿಸ್ ಠಾಣೆಗೆ ಹಾಗು ತನ್ನ  ಸಬ್ ಇನ್ಸ್ ಪೆಕ್ಟರ್ ಕರಿಯಪ್ಪನ ಮೊಬೈಲ್ ನಂಬರಿಗೆ ಕಾಲ್ ಮಾಡಿ ವಿಷಯವನ್ನೆ ಲ್ಲ ತಿಳಿಸಿ ಅನುಮಾನದಿಂದ ಕರೆತರುತ್ತಿರುವದಾಗಿ ತಿಳಿಸಿದ್ದ. ಹೊರಡುವ ಮುಂಚೆ ಗಿರಿಧರ ಮತ್ತೆ ಕೇಳಿದ
"ಚಂದ್ರಪ್ಪನವರೆ ನೀವು ತಪ್ಪು ತಿಳಿದು ಕರೆದೊಯ್ಯುತ್ತಿದ್ದೀರಿ , ಸುಮ್ಮನೆ ಯಾಕೆ ಇದೆಲ್ಲ"
" ಬನ್ನಿ ಡಾಕ್ಟರೆ , ಏನಾದರು ನಿಮ್ಮ ತಪ್ಪಿಲ್ಲ ಅಂದರೆ ನಾನೆ ನಿಮ್ಮನ್ನು ಮತ್ತೆ ಮನೆಗೆ ಕರೆತಂದು ಬಿಡುತ್ತೇನೆ , ಈಗಂತು ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಸುಮ್ಮನೆ ಇಲ್ಲಿ ಗಲಾಟೆ ಬೇಡ ಸುತ್ತಮುತ್ತಲು ಗೊತ್ತಿರುವ ಮನೆಗಳಿವೆ" 
 
ಗಿರಿಧರ ಅಸಹಾಯಕನಾಗಿ ಅವನ ಹಿಂದೆ ಹೊರಟ. ಜೊತೆಯಲ್ಲಿ  ಪ್ರೀಜ್ ಮೇಲಿದ್ದ ಪಿಸ್ತೂಲನ್ನು ಚಂದ್ರಪ್ಪ ಎಚ್ಚರಿಕೆಯಿಂದ  ಮೇಲೆ ಕರ್ಚಿಪ್ ಹಾಕಿ ಸುತ್ತಿಕೊಂಡು ಹಿಡಿದುಕೊಂಡ.
 
==============================
 
ಠಾಣೆಯಲ್ಲಿ ಡಾಕ್ಟರ್ ಗಿರಿಧರನ ಮುಖವನ್ನೆ ನೋಡುತ್ತ ಕುಳಿತಿದ್ದ ಇನ್ಸ್ ಪೆಕ್ಟರ್ , ಮೌನವನ್ನು ಮುರಿಯುತ್ತ ಕೇಳಿದ
"ನೀವು ನಮ್ಮ ಚಂದ್ರಪ್ಪನ ಮನೆ ರಸ್ತೆಲಿ ಅಂತೆ ಇರುವುದು ಅಂದರೆ ನಮ್ಮ ಸ್ಟೇಷನ್ ಹಿಂಬಾಗಕ್ಕೆ ಮೂರನೆ ರಸ್ತೆ, ಅದೇನು ಎಂತದೋ ತಕರಾರು"
"ತಕರಾರು ಏನಿಲ್ಲ ಸಾರ್ ಅವರು ಏನೊ ತಪ್ಪು ಅಭಿಪ್ರಾಯದಲ್ಲಿ ಕರೆತಂದಿದ್ದಾರೆ"  ಗಿರಿಧರ್ ಮೆತ್ತಗೆ ಹೇಳಿದ
"ಡಾಕ್ಟರೆ ನಿಮ್ಮ ಹತ್ತಿರ ಪಿಸ್ತೂಲ್ ಇದೆ, ಅದರ ಮೇಲೆ ರಕ್ತದ ಕಲೆ ಇದೆ ಅಂದರೆ ತಪ್ಪು ಅಭಿಪ್ರಾಯ ಹೇಗೆ ಆಗುತ್ರಿ, ಹೇಳಿ ನಿಮಗೆಲ್ಲಿ ಸಿಕ್ಕಿತು ಅದು" ಇನ್ಸ್ ಪೆಕ್ಟರ್ ಕರಿಯಪ್ಪನ ದ್ವನಿ ಯಾವಾಗಲು ಹೆದರಿಕೆ ಹುಟ್ಟಿಸುವಂತದೆ.
ಗಿರಿಧರ್ ಯೋಚಿಸುತ್ತಿದ್ದ ಏನು ಹೇಳಲಿ ಎಂದು
"ಸಾರ್ ಅದು ನನ್ನ ಸ್ನೇಹಿತರದು, ನಿನ್ನೆ ನಮ್ಮ ಮನೆಗೆ ಬಂದಿದ್ದವರು ಮರೆತು ಹೋಗಿದ್ದಾರೆ, ಮತ್ತೆ ಅವರಿಗೆ ಕೊಟ್ಟು ಬಿಡುವೆ ಬಿಡಿ"
ಅಂದ 
"ಸರಿ ಏನವರ ಹೆಸರು, ಫೋನ್ ಏನಾದರು ಇದೆಯ, ಅಡ್ರೆಸ್ ಗೊತ್ತ "
"ಅವರ ಫೋನ್ ನಂಬರ್ ತಿಳಿದಿಲ್ಲ, ಪೋಸ್ಟಲ ಅಡ್ರೆಸ್ ಗೊತ್ತಿಲ್ಲ ಅದೆಲ್ಲೊ ಚಾಮರಾಜಪೇಟೆ ಅನ್ನಿಸುತ್ತೆ ಅವರ ಮನೆ"
ಗಿರಿಧರ ಉತ್ತರಿಸಿದ
"ಸರಿ ಈಗ ಅವರನ್ನು ನೀವು ಕಾಂಟ್ಯಾಕ್ಟ್ ಮಾಡಿ ತಿಳಿಸಿ, ಈ ರೀತಿ ಆಗಿದೆ ಎಂದು ಬರುತ್ತಾರೆ"  ಇನ್ಸ್ ಪೆಕ್ಟರ್ ಹೇಳಿದ
"ಸಾರ್ ನಿಜ ಹೇಳಬೇಕು ಅಂದ್ರೆ ಅವರು ನನ್ನ ಪೇಷೆಂಟ್, ಅವರಾಗೆ ನನ್ನ ಹತ್ತಿರ ಬಂದಿದ್ದವರು ನಾನು ಅವರ ಮನೆಗೆ ಹೋಗಿಲ್ಲ" ಗಿರಿಧರ ಹೇಳಿದ
 
"ಅಂದ ಹಾಗೆ ನಿಮ್ಮದು ಯಾವ ವಿಭಾಗ ಡಾಕ್ಟರೆ ,ಚಿಕಿತ್ಸೆಯಲ್ಲಿ " ಇನ್ಸ್ ಪೆಕ್ಟರ್ ಕೇಳಿದ ಕುತೂಹಲದಲ್ಲಿ 
ಸ್ವಲ್ಪ ದ್ವನಿ ತಗ್ಗಿಸಿ ಹೇಳಿದ ಗಿರಿಧರ 
"ಗೈನಕಾಲಜಿ ವಿಭಾಗ" 
ಕಣ್ಣು ಚೂಪು ಮಾಡುತ್ತ ಕೇಳಿದ ಇನ್ಸ್ ಪೆಕ್ಟರ್
"ಅಂದರೆ ನಿಮ್ಮ ಪೇಷೆಂಟ್ ಯಾರೊ ಹೆಂಗಸರು, ಆಸಕ್ತಿಧಾಯಕವಾಗಿದೆ, ಹೆಂಗಸರೇಕೆ ನಿಮ್ಮ ಮನೆಗೆ ಬಂದಿದ್ದರು, ಪಿಸ್ತೂಲಿನ ಜೊತೆ "
 
ಸ್ವಲ್ಪ ಗಲಿಭಿಲಿಗೊಂಡ ಗಿರಿಧರ್
"ಅದು ಹಾಗಲ್ಲ ಕಾರಿನಲ್ಲಿ ಜೊತೆಗೆ ಬಂದಿದ್ದರು,  ಬಹುಷ ಇಳಿಯುವಾಗ ಪಿಸ್ತೂಲನ್ನು ನನ್ನ ಕಾರಿನಲ್ಲೆ ಮರೆತು ಹೋಗಿದ್ದಾರೆ ಅನ್ನಿಸುತ್ತೆ ಮತ್ತೆ ಸಿಗುತ್ತಾರೆ ಬಿಡಿ"
"ನೀವು ಕೆಲಸ ಮಾಡುವದೆಲ್ಲಿ ಸ್ವಂತ ಶಾಪೊ ನರ್ಸಿಂಗ್ ಹೋಮ್ ಇದೆಯ "  ಕೇಳಿದ
"ಇಲ್ಲ ಚಿಕ್ಕ ಶಾಪ್ ಅಷ್ಟೆ , ಕನಕಪುರದಲ್ಲಿ ನಡೆಸುತ್ತಿರುವೆ,  ದಿನ ಹೋಗಿ ಬಂದು ಮಾಡುತ್ತಿರುವೆ " ಗಿರಿಧರ ನುಡಿದ
"ಕೇಳಿದ್ದೀನಿ ಬಿಡಿ,  ನಿಮ್ಮನ್ನು ಅಭಾರ್ಷನ್ ಡಾಕ್ಟರು ಅಂತಲೆ ಅನ್ನುತಾರಂತೆ ಕನಕಪುರದಲ್ಲಿ "  ಗಹಗಹಿಸಿ ನಕ್ಕ ಇನ್ಸ್ ಪೆಕ್ಟರ್
ಗಿರಿಧರ ಪೇಚಿಗೆ ಸಿಲುಕಿದ , ಇಂತಹ ಮಾತಿಗೆಲ್ಲ ಏನೆಂದು ಉತ್ತರಿಸುವುದು ಸುಮ್ಮನಿದ್ದ 
"ಅದೇನು ನೀವು ಪದೆ ಪದೆ ತೆಂಗಿನಗಿಡ ಹಾಕಿಸುವೆ ಎಂದು ಮನೆ ಮುಂದೆ ಅಗಿಸುತ್ತಿರಂತೆ. ಏನದು ಸಮಾಚಾರ"  ಎಂದ 
ಗಿರಿಧರ ಬೆಚ್ಚಿ ಬಿದ್ದ, ಏನಿವನ ಪಶ್ನೆ ಎಲ್ಲಿಂದ ಎಲ್ಲಿಗೊ ಹೋಗುತ್ತಿವೆ, ಅವನ ಮುಖ ಗಾಭರಿಗೆ ಬೆವರುತ್ತಿತ್ತು
" ಆ~~, ಅವೆಲ್ಲ ಏನಿಲ್ಲ ಏನೊ ಗಿಡ ಹಾಕಿಸೋಣ ಅಂತ ಅಗೆದೆ ಅದು ತಪ್ಪೆ "  ಗಿರಿಧರ ಅಂದ  ಸಣ್ಣ ದ್ವನಿಯಲ್ಲಿ 
"ತಪ್ಪೆಲ್ಲ ಏನು ಇಲ್ಲ ಬಿಡಿ,  ಚಂದ್ರಪ್ಪ ಅದೇನೊ ಅಂತಿದ್ದ ಬೆಳಗ್ಗೆ ಬೆಳಗ್ಗೆನೆ ಕಾರು ತೊಳೆಯುತ್ತಿದ್ದೀರಿ ಎಂದು , ಅದೇನು ಡಾಕ್ಟರ್ ಅಂತೀರಿ ಒಬ್ಬ ಕೆಲಸದವ್ನು ಇಲ್ಲವೆ ನಿಮ್ಮ ಮನೇಲಿ"
ಗಿರಿಧರ ಅಸಾಹಯಕನಾಗಿ ಕುಳಿತ. ಎಲ್ಲ ಪ್ರಶ್ನೆಗಳು ಒಟ್ಟೊಟ್ಟಿಗೆ ಅಪ್ಪಳಿಸುತ್ತಿತ್ತು.
ಕಡೆಗೆ ಇನ್ಸ್ ಪೆಕ್ಟರ್ ನುಡಿದ ನಿಧಾನವಾಗಿ
" ಡಾಕ್ಟರೆ ನಾನೆ ಒಂದು ಕತೆ ಹೇಳಿಬಿಡ್ತೀನಿ, ಸರಿನಾ ತಿಳಿಸಿ, ನಿನ್ನೆ ಸಂಜೆ ಯಾರೊ ಹೆಣ್ಣು ಗಿರಾಕಿ ನಿಮಗೆ ಸಿಕ್ಕಿದ್ದಾಳೆ, ಅದೇನೊ ವ್ಯವಹಾರ ಹೆಚ್ಚುಕಡಿಮೆ ಯಾಗಿ ನೀವೆ ಅವಳನ್ನು  ಅವಳದೆ ಪಿಸ್ತೂಲಿನಲ್ಲಿ ಗುಂಡಿಟ್ಟು ಕೊಂದುಬಿಟ್ಟಿದ್ದೀರಿ, ನಂತರ ಅವಳ ಶವ ಏನು ಮಾಡುವುದು ತಿಳಿಯದೆ ನಿಮ್ಮ ಮನೆಯ ಕಾಂಪೋಡಿನಲ್ಲಿ ಗುಂಡಿ ತೆಗೆದು ಹೂತುಬಿಟ್ಟಿದ್ದೀರಿ. ಪಿಸ್ತೂಲನ್ನು ಬಚ್ಚಿಡುವುದು ಮರೆತು ನಮ್ಮ ಚಂದ್ರಪ್ಪನ ಕೈಲಿ ಸಿಕ್ಕಿಬಿದ್ದಿದ್ದೀರಿ ಅಲ್ಲವೆ "  ನಗುತ್ತ ಕೇಳಿದ
ಗಿರಿಧರ ಹೆದರಿಕೆಯಿಂದ ನಡುಗುತ್ತಿದ್ದ 
"ಇಲ್ಲ ಅವೆಲ್ಲ ಸುಳ್ಳು , ನೀವು ಹುಟ್ಟು ಹಾಕುತ್ತಿರುವ ಕತೆ, ನಾನು ಯಾರನ್ನು ಕೊಂದಿಲ್ಲ , ಪಿಸ್ತೂಲು ಸಹ ನನ್ನದಲ್ಲ, ಇದನ್ನು ನಂಭಿ ಇನ್ಸ್ ಪೆಕ್ಟರ್ "
ಇನ್ಸ್ ಪೆಕ್ಟರ್ ನಗುತ್ತ ಸಮಾದಾನವಾಗಿಯೆ ಹೇಳಿದ. ಅವನು ಕತ್ತಲೆಯಲ್ಲಿ ಬಾಣ ಬಿಡುತ್ತಿದ್ದ,
"ಡಾಕ್ಟರೆ ನಾನು ಸಹನೆ ಇರುವ ಮನುಷ್ಯ ಅಲ್ಲ , ಇಷ್ಟು ಹೊತ್ತಿಗೆ ನಿಮ್ಮ ಕೆಲವು ಮೂಳೆಯಾದರು ಮುರಿದಿರೋದು , ನನ್ನ ವಿಚಾರಣೆ ಅಂದ್ರೆ, ಆದ್ರೆ ಚಂದ್ರಪ್ಪ ಅದೇನೊ ನಮ್ಮ ರಸ್ತೆಯೋರು , ಅಕ್ಕಪಕ್ಕದೋರು, ಸ್ವಲ್ಪ ಸ್ಮೂತಾಗಿ ವಿಚಾರಿಸಿ ಅಂತ ರಿಕ್ವೆಷ್ಟ್ ಮಾಡಿದ್ದಾನೆ, ಸರಿ ಡಾಕ್ಟರ್ ನೀವೆ ಅದೇನಾಯಿತು ಅಂತ ಹೇಳಿಬಿಡಿ, ನಮಗೆ ಏಕೆ ತೊಂದರೆ ಕೊಡುತ್ತಿದ್ದೀರಿ, ಈಗ ನೋಡಿ ಆ ಚಂದ್ರಪ್ಪ ಆಗಲೆ ನಾಲಕ್ಕು ಜನದ ಜೊತೆ ನಿಮ್ಮ ಮನೆಗೆ ಹೋಗಿದ್ದಾನೆ, ಕಾಂಪೋಡಿನಲ್ಲಿ  ಗಿಡದ ಪಕ್ಕ ಅಗೆಸಿ ನೋಡುತ್ತೀನಿ ಅಂತ , ಅವನು ಕೆಲಸಕ್ಕೆ ಬಿದ್ದರೆ ಮಹಾ ಜಿಗುಟು ಸ್ವಭಾವ ಬೇಗ ಬಿಡುವನಲ್ಲ. ನಿಜ ಹೇಳದೆ ಇದ್ದರೆ ನೀವು ಮತ್ತಷ್ಟು ತೊಂದರೆಗೆ ಸಿಕ್ಕುವಿರಿ ಅಷ್ಟೆ"
ಕರಿಯಪ್ಪ ಒಂದು ಸುಳ್ಳು ಒಗೆದ 
 
" ಅಯ್ಯೊಯ್ಯೊ ನಿಜವೆ ಚಂದ್ರಪ್ಪ ಅಲ್ಲಿ ಹೋಗಿ ಅಗೆಸುತ್ತಿದ್ದಾನೆಯೆ"  ಬೆಚ್ಚಿ ಬಿದ್ದ ಡಾಕ್ಟರ್  ಗಿರಿಧರ
ತಾನೀಗ ನಿಜವಾದ ತೊಂದರೆಯಲ್ಲಿ ಸಿಕ್ಕಿ ಬಿದ್ದೆ ಎಂದು ಅವನಿಗೆ ಅನ್ನಿಸಿತು, ಈಗ ತಪ್ಪು ಒಪ್ಪಿಕೊಳ್ಳುವುದು ಸರಿಯಾದ ನಿರ್ದಾರ, ಇಲ್ಲದಿದ್ದರೆ ಮತ್ತೇನು ಆಗುವುದೊ ಅನ್ನಿಸಿ
 
" ಸರಿ ಇನ್ಸ್ ಪೆಕ್ಟ್ರರ್ ಎಲ್ಲವನ್ನು ಮೊದಲಿನಿಂದ ಹೇಳಿಬಿಡುವೆ, ಇದರಲ್ಲಿ ನನ್ನ ತಪ್ಪು ಏನು ಇಲ್ಲ ಏನೊ ಹೆದರಿ ಈ ರೀತಿ ಮಾಡಿಬಿಟ್ಟೆ ಈಗ ಅನವಶ್ಯಕ ಸಿಕ್ಕಿಕೊಂಡೆ "  ಎಂದ ದ್ವನಿಯನ್ನು ಇಳಿಸುತ್ತ.
 " ಅದು ಬುದ್ದಿವಂತರ ರೀತಿ ಎಷ್ಟಾದರು ನೀವು ಓದಿಕೊಂಡವರು ಬೇಗ ಪರಿಸ್ಥಿಥಿ ಅರ್ಥಮಾಡಿಕೊಂಡಿರಿ " 
ಎಂದು ಆಸಕ್ತಿಯಿಂದ ಕುಳಿತ  ಪೋಲಿಸ್ ಅಧಿಕಾರಿ
 
ಈಗ ಗಿರಿಧರ ತಾನು ನೆನ್ನೆ ಸಂಜೆ ಕನಕಪುರದಿಂದ ಬರುವಾಗ, ಬೆಂಗಳೂರಿನ ಹತ್ತಿರ   ಬರುತ್ತಿರುವಂತೆ, ರಸ್ತೆಯ ಪಕ್ಕ ಸಿಕ್ಕ ಅಪರಿಚಿತ ವ್ಯಕ್ತಿಯನ್ನು ಆವನ ಜೊತೆಗಿದ್ದ ಬುರ್ಕಾದವಳನ್ನು ಕಾರಿನಲ್ಲಿ ಹತ್ತಿಸಿಕೊಂಡಿದ್ದು, ನಂತರ ಅವರು ಹೆದರಿಸಿ ರಸ್ತೆಯಲ್ಲೆಲ್ಲ ಸುತ್ತಿಸಿದ್ದು, ನಂತರ ತನ್ನ ಕೈಲಿಂದ ಹಣ ಕಿತ್ತು, ರಸ್ತೆಯಲ್ಲಿ ಆವಳ ಹೆಣ ಬಿಟ್ಟು ಹೋಗಿದ್ದು, ಆಗ ಸಿಕ್ಕಿದ ಪಿಸ್ತೂಲನ ವಿಷಯ ಎಲ್ಲವನ್ನು ತಿಳಿಸಿದ. ಎಲ್ಲವನ್ನು ಸಹನೆ ಯಿಂದ ಕೇಳಿದ, ಇನ್ಸ್ ಪೆಕ್ಟರ್ , ಮತ್ತೆ ಕೆಲವು ಪ್ರಶ್ನೆಗಳ ಮೂಲಕ ಕಾರು ಹತ್ತಿದವರ ವಿವರ , ಅವರು ಹೇಗಿದ್ದರು, ಬಾಷೆ ಯಾವುದು , ಅವರ ನಡುವಳಿಕೆ, ಎಲ್ಲವನ್ನು ಕೇಳಿ  ತಿಳಿದ
ಗಿರಿಧರ ಹೇಳಿದ ನಾನು ಹೆದರಿ ಬಿಟ್ಟೆ,  ಅನವಶ್ಯಕ ನನ್ನ ಹೆಸರು ಅಪರಾಧಿಗಳ ಜೊತೆ ಸೇರಿಸಿ ಎಲ್ಲವು ಒಮ್ಮೆ ವಿರುದ್ದವಾದರೆ ನನಗೆ ತೊಂದರೆ ಎಂದು, ಅದಕ್ಕೆ ಆ ಹೆಣವನ್ನು ತಂದು ನಮ್ಮ ಮನೆಯ ಕಾಂಪೋಂಡಿನಲ್ಲಿ ಮಣ್ಣು ಅಗೆದು ಹೂತುಹಾಕಿದೆ ಅಷ್ಟೆ ಹೊರತು ನಾನು ಅವರ ಕೊಲೆಯನ್ನು ಮಾಡಲಿಲ್ಲ .  ಪಿಸ್ತೂಲನ್ನು  ಮುಚ್ಚಿಡುವುದು ಮರೆತುಹೋಗಿತ್ತು ಹಾಗಾಗಿ ಚಂದ್ರಪ್ಪನ ಕಣ್ಣಿಗೆ ಬಿದ್ದಿತು ಎಂದು ನಿಲ್ಲಿಸಿದ
" ನೋಡಿದರ ಡಾಕ್ಟರ್ ನಿಮ್ಮಂತ ಓದಿದ ಜನವೆ ಹೇಗೆ ಕಾನೂನಿಗೆ ವಿರುದ್ದವಾಗಿ ವರ್ತಿಸಿದಿರಿ, ಆಕೆ ಸತ್ತ ತಕ್ಷಣ ನೀವಾಗಿಯೆ ಪೋಲಿಸ್ ಹತ್ತಿರ ಬಂದಿದ್ದರೆ, ಈ ದಿನ ನೀವು ಎಲ್ಲರ ಎದುರಿಗೆ ಹೀರೋ ಆಗುತ್ತಿದ್ದೀರಿ, ಈಗ ನೋಡಿ ಅಪರಾದಿ ಜಾಗದಲ್ಲಿ ನಿಲ್ಲುವಂತಾಯಿತು. ಎಷ್ಟು ಓದಿದರೇನು ವಿವೇಕವಿಲ್ಲದಿದ್ದರೆ "  ಎಂದು ಹೊರಗೆ ಎದ್ದು ಹೋದ ಇನ್ಸ್ ಪೆಕ್ಟರ್. 
 
ಮುಂದಿನ ಭಾಗದಲ್ಲಿ ಮುಕ್ತಾಯ . 
 
                   (ಎಲ್ಲ ಭಾಗಗಳನ್ನು ಒಟ್ಟಿಗೆ ಓದಲು ಕೆಳಗಿನ ಸ್ಟೇಟಸ್ ಲೈನಿನಲ್ಲಿರುವ 'ಸುಳಿ ಪತ್ತೆದಾರಿ'  ಪದವನ್ನು  ಕ್ಲಿಕ್ ಮಾಡಿ) 
 
 
 
Rating
No votes yet

Comments