ಆಕಾಶ ಮಲ್ಲಿಗೆ ಹೂ, ಅಮ್ಮನ ನಾಸ್ಟಾಲ್ಜಿಯಾ

ಆಕಾಶ ಮಲ್ಲಿಗೆ ಹೂ, ಅಮ್ಮನ ನಾಸ್ಟಾಲ್ಜಿಯಾ

ಸಂಜೆಯ ವೇಳೆ ವಾಕಿಂಗ್ ಮಾಡುವುದೆಂದರೆ ನಾವಿರುವಲ್ಲಿ (ಬೆಂಗಳೂರಿನ ಪಶ್ಚಿಮ ಭಾಗ) ಸೂರ್ಯಾಸ್ತದ ಚೆಂದದ ಫೋಟೋ ಸೆರೆಹಿಡಿಯಲು ಸಿಗುತ್ತದೆ. ಹೀಗಾಗಿ ವಾಕಿಂಗ್ ಎಂದು ಹೊರಡುವಾಗ ಕ್ಯಾಮೆರಾ ಹಿಡಿದುಕೊಂಡು ಹೋಗುವುದು ಕಷ್ಟವಾದರೂ ಮೊಬೈಲನ್ನಾದರೂ ಜೊತೆಗೆ ಹಿಡಿದುಕೊಂಡು ಹೋಗುವ ಹವ್ಯಾಸ.

ಆ ದಿನ ಎಂದಿನಂತೆ ಡಾಕ್ಟರರ ಸಲಹೆಯನ್ನು ಪಾಲಿಸುವ ಸಲುವಾಗಿ ಹಾಗೆಯೇ ಅಮ್ಮನ ಮನೆಯ ಕಡೆ ವಾಕ್ ಹೊರಟಿದ್ದೆ. ಅಮ್ಮನ ಮನೆ ಹತ್ತಿರ ತಲುಪುತ್ತಿರುವಂತೆ ನನ್ನನ್ನು ನೋಡಿ ಅಕ್ಕನ ಮಗಳು ಓಡೋಡಿ ಬಂದಳು. ಅವಳಿಗೆ ಯಾರೋ ಹೊಸ 'ಫ್ರೆಂಡು' ಸಿಕ್ಕಿದ್ದಳಂತೆ. ಅದನ್ನು ತಿಳಿಸಲು ರೋಡು ದಾಟಿ ಓಡಿಕೊಂಡು ಬಂದಳು.  ಅವಳ "ಹೊಸ ಫ್ರೆಂಡ್" ಕಥೆ ನನಗೆ ಆಗ ಅಷ್ಟಾಗಿ ಅರ್ಥವಾಗದಿದ್ದರೂ ಅವಳು ಓಡಿಬಂದ ದಾರಿಯಲ್ಲಿಯೇ ಸಾಲಾಗಿ ಮರದ ಕೆಳಗೆ ಬಿದ್ದಿದ್ದ ಹೂವುಗಳು  ನನ್ನ ಗಮನ ಸೆಳೆಯಿತು. ಅವು ಆಕಾಶ ಮಲ್ಲಿಗೆ ಮರದ ಹೂವುಗಳು.

ಆಕಾಶ ಮಲ್ಲಿಗೆ ಬರ್ಮಾ ದೇಶದಲ್ಲಿ ಮೊದಲು ಹೆಚ್ಚಾಗಿ ಕಂಡಿತ್ತಂತೆ. ಇದಕ್ಕೆ 'ಇಂಡಿಯನ್ ಕಾರ್ಕ್ ಟ್ರೀ' ಅಥವ 'ಟ್ರೀ ಜಾಸ್ಮಿನ್' ಎಂದೂ ಕರೆಯುತ್ತಾರೆ. ವರ್ಷದಲ್ಲಿ ಎರಡು ಬಾರಿ, ಮಳೆಗಾಲದ ಮುನ್ನ ಹಾಗು ಮಳೆಗಾಲದ ನಂತರ ಇದು ಹೂ ತಳೆಯುತ್ತದೆ. ಇದನ್ನು ಬೆಳೆಸಿರುವಲ್ಲಿ ರೋಡು ತುಂಬ ಅಥವ ಬೆಳೆಸಿರುವ ಜಾಗದಲ್ಲಿ ಘಮಘಮಿಸುವ ಹೂಗಳು ನೆಲಕ್ಕೆ ಬೀಳುವುದು ಕಾಣಬಹುದು. ಈ ಮರ ಸಾಕಷ್ಟು ಎತ್ತರಕ್ಕೆ ಬೆಳೆದು ನಿಲ್ಲುತ್ತದೆ. ಮಳೆಗಾಲದಲ್ಲಿ ಕೆಲವೊಮ್ಮೆ ಮಳೆ, ಗಾಳಿಗೆ ಟೊಂಗೆಗಳು ಮುರಿದು ಬೀಳುವುದು ಸಾಮಾನ್ಯ - ಇದಕ್ಕಾಗಿ ಮರದ ಟೊಂಗೆಗಳನ್ನು ಆಗಾಗ ಕತ್ತರಿಸುತ್ತಿರುವುದು ಸಾಮಾನ್ಯ.

ಅಕ್ಕನ ಮಗಳ ಜೊತೆ ಈ ಹೂವುಗಳ ಫೋಟೋ ತೆಗೆಯುತ್ತ ನಾನು ಅಮ್ಮನ ಮನೆಯ ಕಡೆ ಹೊರಟದ್ದೆಂಬುದೇ ಕ್ಷಣಿಕವಾಗಿ ಮರೆತುಹೋಗಿತ್ತು. ರೋಡಿನಲ್ಲಿ ಫೋಟೋ ಹೊಡಿಯುತ್ತಿರುವುದನ್ನು ನೋಡಿ ಅಮ್ಮ, ಅಕ್ಕ ಇಬ್ಬರೂ ನಾವಿದ್ದಲ್ಲಿಗೇ ಬಂದರು. ಹೂವುಗಳನ್ನು ನೋಡಿದ ಅಮ್ಮನಿಗೆ ತಮ್ಮ ಬಾಲ್ಯದ ನೆನಪಾಯಿತು. ಒಂದೆರಡು ನಿಮಿಷಗಳಲ್ಲಿ ಹೂವುಗಳನ್ನು ಆಯ್ದು ಜಡೆಯಂತೆ ಕಟ್ಟಿದರು. ಅಕಾಶ ಮಲ್ಲಿಗೆ ಹೂವುಗಳನ್ನು ಆಯ್ದು ಹೀಗೆ ಕಟ್ಟುತ್ತಿದ್ದೆವು ಎಂದು ತೋರಿಸಿದರು.

Rating
No votes yet

Comments