ವ್ಯೂಹ(ಪತ್ತೇದಾರಿ ಕಾದಂಬರಿ)-ಅಧ್ಯಾಯ-8

ವ್ಯೂಹ(ಪತ್ತೇದಾರಿ ಕಾದಂಬರಿ)-ಅಧ್ಯಾಯ-8

 

ಆ ನಂಬರ್ ಬೇರೆ ಯಾರದೂ ಆಗಿರಲಿಲ್ಲ.ಯಾವ ವ್ಯಕ್ತಿ ಸುಜಾತ ಳನ್ನು ಭೇಟಿ ಮಾಡಲು ಕರೆದಿದ್ದನೋ ಅದೇ ವ್ಯಕ್ತಿಯ ನಂಬರ್ ಆಗಿತ್ತು.ಅಂದರೆ ಈ ಹುಡುಗಿಯರನ್ನು ಅಪಹರಿಸಲು ಪ್ರಯತ್ನಿಸಿದ ವ್ಯಕ್ತಿ ಮತ್ತು ಸುಜತಾಳನ್ನು ಕೊಲೆ ಮಾಡಿದ ವ್ಯಕ್ತಿ ಒಬ್ಬನೇ ಎಂಬುದು ರಘುವಿಗೆ ಸ್ಪಷ್ಟವಾಯಿತು.ಅದೇ ವ್ಯಕ್ತಿ ವಿನಯನ ಕೊಲೆಯ ಸೂತ್ರಧಾರ ಎಂದು ರಘುವಿಗೆ ತಿಳಿಯಿತು.ರಘು ಆ ಯುವತಿಯರಿಗೆ "ಹಿಂದೆ ಎಂದಾದರೂ ಈ ನಂಬರ್ ನಿಂದ ಕರೆ ಬಂದಿತ್ತೆ ?" ಎಂದು ವಿಚಾರಿಸಿದನು.ಆ ಯುವತಿಯರು,ಹಿಂದೆಂದೂ ಆ ನಂಬರಿನಿಂದ ಕರೆ ಬಂದಿಲ್ಲವೆಂದು ಆದರೆ ಅವರ ಹಾಸ್ಟೆಲಿನಲ್ಲಿ ಕೆಲವು ಹುಡುಗಿಯರು ಕೆಲವು ದಿನಗಳಿಂದ ಕಾಣಿಸುತ್ತಿಲ್ಲ ಮತ್ತು ಅವರನ್ನು ವೈಶ್ಯಾವಾಟಿಕೆ ದಂಧೆಗೆ ನೂಕಲಾಗಿದೆ ಎಂಬ ಮಾತು ಕೇಳಿಬರುತ್ತಿದೆ ಎಂದು ಹೇಳಿದರು."ಇದರಿಂದ ನಮಗೆ ವಿಪರೀತ ಭಯವಾಗುತ್ತಿದೆ.ದಯಮಾಡಿ ನಮ್ಮನ್ನು ಈ ಸಂಕಟದಿಂದ ಪಾರು ಮಾಡಿ" ಎಂದು ರಘುವನ್ನು ಪರಿ ಪರಿಯಾಗಿ ಬೇಡಿಕೊಂಡರು.ಆಗ ರಘು ಅವರಿಗೆ ಅಭಯವನ್ನು ನೀಡಿ ತಿಳಿಸಿ ಅವರ ರಕ್ಷಣೆಗಾಗಿ ಅವರ ಹಾಸ್ಟೆಲಿನ ಸುತ್ತ ಇಬ್ಬರು ಪೋಲಿಸ್ ಪೇದೆಗಳನ್ನು ನೇಮಿಸಿದನು.ರಘು ಈಗ ನಿಜವಾಗಿಯೂ ದ್ವಂದ್ವ ದಲ್ಲಿ ಬಿದ್ದಿದ್ದನು.ವಿನಯನ ರೂಮನ್ನು ಪರಿಶೀಲಿಸಿದಾಗ ಅವನ ರೂಮಿನಲ್ಲಿ ಗಾಂಜಾ ಪುಡಿ ಸಿಕ್ಕಿತು.ಆಗ ಕೊಲೆಗಾರ ಒಬ್ಬ ಮಾದಕ ವಸ್ತುಗಳ ಸಾಗಾಟಗಾರನಾಗಿರಬಹುದು ಎಂದು ರಘು ಊಹಿಸಿದ್ದನು.ಆದರೆ ಈಗ  ವೈಶ್ಯಾವಾಟಿಕೆಯಲ್ಲೂ ಕೂಡ ಆ ವ್ಯಕ್ತಿ ಭಾಗವಾಗಿರುವದರಿಂದ ವಿನಯನ ಕೊಲೆ ಯಾವ ಕಾರಣಕ್ಕಾಗಿ ಆಗಿರಬಹುದು ಎಂದು ರಘು ಯೋಚಿಸಿದನು.ಈ ಕಾರಣವನ್ನು ತಿಳಿಯಲು ರಘುವಿಗೆ ಕೊಲೆಗಾರನನ್ನು ಹಿಡಿಯದ ಹೊರತು ಬೇರೆ ದಾರಿಯೇ ಇರಲಿಲ್ಲ.ಅದಕ್ಕಾಗಿ ರಘು ಈ ಬಾರಿ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಯೋಜನೆ ರೂಪಿಸತೊಡಗಿದನು.ಈ ಬಾರಿ ಏನೇ ಆದರೂ ಕೊಲೆಗಾರನನ್ನು ಹಿಡಿದೇ ತೀರಬೇಕೆಂದು ನಿರ್ಧರಿಸಿದನು.

ಈ ಹಿಂದೆ ರಘು ವೈಶ್ಯಾವಾಟಿಕೆ ನಡೆಸುವ ಕೆಲವು ಜನ ಅಂತರ್ಜಾಲದಲ್ಲಿ ತಮ್ಮ ಮೊಬೈಲ್ ನಂಬರ್ ಕೊಟ್ಟಿರುತ್ತಾರೆ ಎಂಬ ವಿಷಯವನ್ನು ಯಾರಿಂದಲೋ ಕೇಳಿದ್ದನು.ಹಾಗೆಯೇ ಈ ಮೊಬೈಲ್ ನಂಬರ್ ಏನಾದರೂ ಅಂತರ್ಜಾಲದಲ್ಲಿ ಸಿಗಬಹುದೇ ಎಂದು ಪ್ರಯತ್ನಿಸಿದನು.ರಘು ಆ ವ್ಯಕ್ತಿಯ ಮೊಬೈಲ್ ನಂಬರ್ ಅನ್ನು ಅಂತರ್ಜಾಲದಲ್ಲಿ ಹುಡುಕಿದ್ದಾಗ ಅವನಿಗೆ ಆ ನಂಬರ್ ಇದ್ದ ಎರಡು ಲಿಂಕ್ ಗಳು ಸಿಕ್ಕಿದವು.ಒಂದು ವಿನಯ್ ಓದುತ್ತಿದ್ದ ಗೋಕುಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯದಾಗಿತ್ತು.ಇನ್ನೊಂದು ವೈಶ್ಯಾವಾಟಿಕೆಗೆ ಸಂಬಧಿಸಿದಾಗಿತ್ತು.ವಿನಯನ ಕಾಲೇಜಿನ ಲಿಂಕಿನಲ್ಲಿ ಹುಡುಕಿದಾಗ ಆ ನಂಬರ್ ಮನುವಿಗೆ ಸೇರಿದ್ದೆಂದು ತಿಳಿಯಿತು.ವೈಶ್ಯಾವಾಟಿಕೆ ಯ ಲಿಂಕನ್ನು ನೋಡಿದಾಗ ಅಲ್ಲಿ ಆ ನಂಬರ್ ಪ್ರಸಾದ್ ಎಂಬುವವನಿಗೆ ಸೇರಿದ್ದು ಎಂದು ತಿಳಿಯಿತು.ಅಂದರೆ ಮನುವೆ ಪ್ರಸಾದ್ ಎಂದು ಹೆಸರು ಬದಲಿಸಿ ವೈಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾನೆ ಎಂಬ ವಿಷಯ ರಘುವಿಗೆ ತಿಳಿಯಿತು.ಆ ವೈಶ್ಯಾವಾಟಿಕೆಯ ಲಿಂಕಿನಲ್ಲಿ ಇನ್ನೊಂದು ನಂಬರ್ ಕೂಡ ಇತ್ತು.ರಘು ಆ ನಂಬರ್ ಅನ್ನು ತನ್ನ ಡೈರಿಯಲ್ಲಿ ನಮೂದಿಸಿಕೊಂಡನು.

ರಘು ಒಂದು ಹೊಸ ಸಿಮ್ ಕಾರ್ಡ್ ಖರೀದಿಸಿ ಅದರಿಂದ ಆ ನಂಬರಿಗೆ ಕರೆ ಮಾಡುವದೆಂದು ನಿರ್ಧರಿಸಿದ್ದನು.ಬೇಗನೆ ಸ್ಟೇಷನ್ ನಲ್ಲಿದ್ದ ಪೇದೆಯೊಬ್ಬನನ್ನು ಕಳುಹಿಸಿ ಒಂದು ಹೊಸ ಸಿಮ್ ಕಾರ್ಡ್ ತರುವಂತೆ ಸೂಚಿಸಿದನು.ಆ ಸಿಮ್ ಕಾರ್ಡನ್ನು ಮೊಬೈಲ್ ಫೋನಿಗೆ ಹಾಕಿ ಆ ನಂಬರಿಗೆ ಕರೆ ಮಾಡಿದಾಗ ಆ ನಂಬರ್ ಇನ್ನು ಚಾಲನೆಯಲ್ಲಿದ್ದುದು ತಿಳಿದುಬಂದಿತು.ಹಾಗೆಯೇ ಮೊದಲ ಬಾರಿಗೆ ಕರೆ ಮಾಡಿದಾಗ ಯಾವುದೇ ಉತ್ತರ ಸಿಗಲಿಲ್ಲ.ರಘು ಮತ್ತೊಮ್ಮೆ ಆ ನಂಬರಿಗೆ ಕರೆ ಮಾಡಿದಾಗ ಒಬ್ಬ ವ್ಯಕ್ತಿ ಆ ಕರೆಯನ್ನು ತೆಗೆದುಕೊಂಡನು.ಆ ವ್ಯಕ್ತಿ
"ಹಲೋ...ಯಾರು ಮಾತಾಡ್ತಾ ಇರೋದು?" ಎಂದನು.ಆಗ ರಘು,
"ನಾನು ವಿಶ್ವನಾಥ್ ಎಂದು...ಮಲ್ಲೇಶ್ವರಂ ನಿಂದ ಮಾತಾಡ್ತಾ ಇದ್ದೀನಿ.....ನನಗೆ ಒಂದು ಹುಡುಗಿ ಬೇಕಾಗಿತ್ತು....ನೆಟ್ ನಲ್ಲಿ ನಿಮ್ಮ ನಂಬರ್ ನೋಡಿದೆ...ಅದಕ್ಕೆ ಕರೆ ಮಾಡಿದೆ" ಎಂದು ಹೇಳಿದನು.ಇದನ್ನು ಕೇಳಿದ ಆ ವ್ಯಕ್ತಿ..
"ಸರಿ.....ಸಂಜೆ ಏಳು ಗಂಟೆಗೆ ಸರಿಯಾಗಿ ಮಲ್ಲೇಶ್ವರಂ ಗ್ರೌಂಡ್ ಹತ್ರ ಬನ್ನಿ.....ಹುಡುಗೀರ್ನ ತೋರಿಸ್ತೀನಿ..." ಎಂದು ಕಾಲ್ ಕಟ್ ಮಾಡಿದನು.
ರಘು ತನ್ನ ಸ್ಟೇಷನ್ ನಲ್ಲಿದ್ದ ನಾಲ್ಕು ನಂಬಿಕಸ್ತ ಪೇದೆಗಳನ್ನು ಕರೆದು ವಿಷಯವನ್ನು ಸಂಕ್ಷಿಪ್ತವಾಗಿ ತಿಳಿಸಿ,"ಇಂದು ಸಂಜೆ ಎಲ್ಲರೂ ಸಿವಿಲ್ ಡ್ರೆಸ್ಸಿನಲ್ಲಿ ಮಲ್ಲೇಶ್ವರಂ ಗ್ರೌಂಡ್ ನ ಹತ್ತಿರ ಯಾರಿಗೂ ಅನುಮಾನ ಬರದಂತೆ ನಿಂತಿರಬೇಕು.ನಾನು ಸೂಚನೆ ನೀಡಿದ ತಕ್ಷಣ ಎಲ್ಲರೂ ತನ್ನ ಮುಂದೆ ಇರುವ ವ್ಯಕ್ತಿಯನ್ನು ಬಂಧಿಸಬೇಕು" ಎಂದು ಸೂಚನೆ ನೀಡಿದನು.ಎಲ್ಲರಿಗೂ ಒಂದು ಚಿಕ್ಕ ಪಿಸ್ತೂಲು ಮತ್ತು ಒಂದು ಚಿಕ್ಕ ಚಾಕುವನ್ನು ಇಟ್ಟುಕೊಳ್ಳಲು ಸೂಚಿಸಿದನು.ಅದರಂತೆ ತಾನೂ ಸಿವಿಲ್ ಡ್ರೆಸ್ ಧರಿಸಿ ಒಂದು ಚಿಕ್ಕ ಪಿಸ್ತೂಲು ಮತ್ತು ಚಾಕು ತೆಗೆದುಕೊಂಡು ಸಂಜೆ ಏಳರ ಸುಮಾರಿಗೆ ಮಲ್ಲೇಶ್ವರಂ ಗ್ರೌಂಡಿನ ಹತ್ತಿರ ಬಂದನು.

ಅವನು ಅಲ್ಲಿಗೆ ಬರುವಷ್ಟರಲ್ಲಿ ನಾಲ್ಕು ಪೇದೆಗಳು ಕೂಗಳತೆಯ ದೂರದಲ್ಲಿ ಒಂದೊಂದು ಅಂಗಡಿಯ ಮುಂದೆ ನಿಂತಿದ್ದರು.ಅವರು ಹಾಕಿದ್ದ ದಿರಿಸನ್ನು ನೋಡಿದರೆ ಯಾರಿಗೂ ಅನುಮಾನ ಬರುತ್ತಿರಲಿಲ್ಲ.ರಘುವೂ ಕೂಡ ತನ್ನ ಮುಖದ ಗುರುತು ಸಿಗದಿರಲೆಂದು ದಪ್ಪ ಮೀಸೆ ಮತ್ತು ದಾಡಿ ಅಂಟಿಸಿಕೊಂಡು ಬಂದಿದ್ದನು.ರಘು ಅಲ್ಲಿ ಯಾರಾದರೂ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿದ್ದಾರೆಯೇ ಎಂದು ಪರೀಕ್ಷಿಸಿದನು.ಅಲ್ಲಿ ಎಲ್ಲವೂ ನಾರ್ಮಲ್ ಆಗಿರುವಂತೆ ಕಂಡು ಬಂದಿತು.ಆಗ ರಘು ಮೊಬೈಲ್ ತೆಗೆದು ಆ ವ್ಯಕ್ತಿಗೆ ಕರೆ ಮಾಡಿದನು.ಆ ವ್ಯಕ್ತಿ ರಘು ಎಲ್ಲಿ ನಿಂತಿರುವನೆಂದು ಕೇಳಿ,ಅವನಿಗೆ ಅಲ್ಲೇ ನಿಲ್ಲುವಂತೆ ತಿಳಿಸಿದನು.ಇದಾದ ಹತ್ತು ನಿಮಿಷಗಳ ನಂತರ ಒಬ್ಬ ವ್ಯಕ್ತಿ ರಘುವಿನ ಎದುರು ರಸ್ತೆಯಲ್ಲಿ ನಿಂತು ಯಾರನ್ನೋ ಹುಡುಕುತ್ತಿರುವದು ಗೋಚರಿಸಿತು.ರಘು ಮತ್ತೆ ಆ ನಂಬರಿಗೆ ಕರೆ ಮಾಡಿದಾಗ ಎದುರು ರಸ್ತೆಯಲ್ಲಿದ್ದ ವ್ಯಕ್ತಿ ಯ ಮೊಬೈಲ್ ರಿಂಗಣಿಸತೊಡಗಿತು.ಆ ವ್ಯಕ್ತಿ ಕರೆಯನ್ನು ಸ್ವೀಕರಿಸಿದಾಗ ರಘುವಿಗೆ ಆ ವ್ಯಕ್ತಿಯೇ ಕೊಲೆಗಾರ ಎಂಬುದರಲ್ಲಿ ಯಾವ ಸಂಶಯವೂ ಉಳಿಯಲಿಲ್ಲ.ಆಗ ರಘು ತಡಮಾಡದೆ ವೇಗವಾಗಿ ಓಡಿ ಆ ವ್ಯಕ್ತಿಯ ಮೇಲೆ ಬಿದ್ದನು.ಇದನ್ನು ನೋಡಿದ ಪೇದೆಗಳು ಸಹ ವೇಗವಾಗಿ ರಘುವನ್ನು ಹಿಂಬಾಲಿಸಿ ಆ ವ್ಯಕ್ತಿಯನ್ನು ಬಂಧಿಸಿದರು.ಈ ಎಲ್ಲ ಘಟನೆಗಳು ಮಿಂಚಿನಂತೆ ಕೆಲವೇ ಕ್ಷಣಗಳಲ್ಲಿ ನಡೆದು ಕೊಲೆಗಾರನನ್ನು ತಬ್ಬಿಬ್ಬು ಮಾಡಿದ್ದವು.ರಘು ಆನಂದ ತುಂದಿಲನಾಗಿದ್ದನು.ಕಡೆಗೂ ಕೊಲೆಗಾರ ಅವನ ಮುಷ್ಟಿಯಲ್ಲಿ ಸಿಕ್ಕಿಬಿದ್ದಿದ್ದನು.

***********************************************************

ಅಧ್ಯಾಯ-8 -ಮುಗಿಯಿತು
ಅಧ್ಯಾಯ- 9-(ಕೊನೆಯ ಅಧ್ಯಾಯ)-ಮುಂದಿನ ವಾರ
ಅಧ್ಯಾಯ- 7 - ಕ್ಕೆ ಲಿಂಕ್

http://sampada.net/%E0%B2%B5%E0%B3%8D%E0%B2%AF%E0%B3%82%E0%B2%B9%E0%B2%AA%E0%B2%A4%E0%B3%8D%E0%B2%A4%E0%B3%87%E0%B2%A6%E0%B2%BE%E0%B2%B0%E0%B2%BF-%E0%B2%95%E0%B2%BE%E0%B2%A6%E0%B2%82%E0%B2%AC%E0%B2%B0%E0%B2%BF-%E0%B2%85%E0%B2%A7%E0%B3%8D%E0%B2%AF%E0%B2%BE%E0%B2%AF-7