ಪ್ರೀತಿಯ ಹುಡುಗಿ ಮೋಹದ ಹುಡುಗ(ಸಣ್ಣ ಕತೆ)

ಪ್ರೀತಿಯ ಹುಡುಗಿ ಮೋಹದ ಹುಡುಗ(ಸಣ್ಣ ಕತೆ)

     ಎಂಜನಿಯರಿಂಗ್‍ನ ಆರನೇ ಸೆಮಿಸ್ಟರ್‍ನಲ್ಲಿ ಓದುತ್ತಿದ್ದ ಸ್ವಾತಿ ಬೆಳಿಗ್ಗೆ ಕಾಲೇಜಿಗೆ ಹೋಗಲು ಸಿದ್ಧವಾಗಿ ತನ್ನ ರೂಮಿನಿಂದ ಹೊರಬಂದಾಗ ಅವರ ತಾಯಿ ಸುಶೀಲಮ್ಮನವರು ಅಡುಗೆ ಮನೆಯಲ್ಲಿ ಹಂಚಿನ ಮೇಲೆ ದೋಸೆ ಹಾಕುತ್ತಿದ್ದರು. ತಂದೆ ಶ್ರೀಕಂಠರಾಯರು ಸೋಫಾದ ಮೇಲೆ ಕುಳಿತು ಅಂದಿನ ದಿನಪತ್ರಿಕೆ ಓದುತ್ತಿದ್ದರು. ಮಗಳಿಗೆ ತಟ್ಟೆಯಲ್ಲಿ ದೋಸೆ ಹಾಕಿಕೊಂಡು ಬಂದ ಸುಶೀಲಮ್ಮನವರು ‘ಮಧ್ಯಾಹ್ನಕ್ಕೂ ಡಬ್ಬಿಗೆ ಹಾಕಲೇನೆ?’ ಎಂದು ಕೇಳಿದಾಗ ‘ಬೇಡ  ಮಮ್ಮಿ, ಅಲ್ಲೇ ಕ್ಯಾಂಟೀನಲ್ಲಿ ಏನಾದ್ರೂ ತಿಂತೀನಿ’ ಎಂದ ಸ್ವಾತಿ ದೋಸೆ ತಿನ್ನುತ್ತಾ ಟೀಪಾಯಿಯ ಮೇಲಿದ್ದ ದಿನಪತ್ರಿಕೆಯ ಚಲನಚಿತ್ರ ಆವೃತ್ತಿಯ ಪುಟದ ಮೇಲೆ ಕಣ್ಣಾಡಿಸತೊಡಗಿದಳು.

    ಅಷ್ಟರಲ್ಲಿ ಅಂದಿನ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದ ಯುವತಿಯ ಆತ್ಮಹತ್ಯೆ ಎಂಬುದನ್ನು ಓದಿದ ರಾಯರು ‘ಈಗಿನ ಕಾಲದ ಹೆಣ್ಣುಮಕ್ಕಳಿಗೆ ಒಂದು ಚೂರೂ ಕಾಮನ್ ಸೆನ್ಸ್ ಅನ್ನೋದೆ ಇಲ್ಲ, ಯಾರೋ ಹುಡುಗನ್ನ ಲವ್ ಮಾಡಿದ್ಲಂತೆ, ಅವನು ಆಮೇಲೆ ಇವ್ಳಿಗೆ ಕೈಕೊಟ್ಟನಂತೆ.. ಅಷ್ಟರಲ್ಲಿ ಅವರಿಬ್ರು ಮಧ್ಯೆ ಎಲ್ಲಾ ನಡೆದಿತ್ತಂತೆ..ಅದಕ್ಕೆ ಇವ್ಳು ಆತ್ಮಹತ್ಯೆ ಮಾಡ್‍ಕೊಂಡಳಂತೆ.....ಏನ್ ಹೆಣ್ ಮಕ್ಳೋ ಏನೋ...ಈ ಲವ್ವು ಗಿವ್ವು ಅಂದ್ಕೊಂಡು ಮದ್ವೆಗೆ ಮುಂಚೇನೆ  ಅವ್ನಿಗೆ ಮೈ ಒಪ್ಪಿಸಿದ್ರೆ ಜೀವನ ಅಂದ್ರೆ ಇಷ್ಟೇ ಅಂದ್ಕÀಂಡು ಅವ್ನು ಮತ್ತೆ ಇವಳ ಹತ್ರ ಬರ್ತಾನಾ....’ ಎಂದು ಗೊಣಗಿಕೊಂಡಾಗ ಎಲ್ಲವನ್ನೂ ಅಡುಗೆಮನೆಯಿಂದಲೇ ಕೇಳಿಸಿಕೊಂಡ ಸುಶೀಲಮ್ಮನವರು ‘ರೀ..... ಎದ್ದೋಳ್ರೀ... ನಿಮ್ಗೇನು ಬೇರೆ ಕೆಲ್ಸ ಇಲ್ವಾ.. ಬೆಳೆದ ಮಗಳ ಎದುರಿಗೆ ಏನ್ ಹೇಳ್ಬೇಕು ಏನ್ ಹೇಳ್ಬಾರ್ದು ಅನ್ನೋ ಕಾಮನ್ ಸೆನ್ಸ್ ನಿಮಗಿಲ್ಲ ಅಷ್ಟೆ....ಕಮಂಗಿ ತರಾ ಕುತ್ಕೊಂಡು ಏನೇನೋ ಹೇಳ್ತಾ ಇದೀರಲ್ಲಾ.. ಎದ್ದು ರೆಡಿಯಾಗಿ ಬನ್ನಿ, ನಂಗೂ ಆಫೀಸಿಗೆ ಬೇಗ ಹೋಗ್ಬೇಕು ಮತ್ತೆ ಹಂಚು ಹಾಕೋಕಾಗಲ್ಲ, ಈಗ್ಲೇ ದೋಸೆ ಹಾಕ್ತೀನಿ ಬೇಗ ಬನ್ನಿ.. ಎಂದು ಗಂಡನನ್ನು ಗದರಿಸಿದರು.

    ‘ಅಯ್ಯೋ ಮಾರಾಯ್ತಿ.. ನಾನೇನ್ ತಪ್ಪು ಮಾತಾಡಿದ್ನೇ.... ಇದ್ದದು ಇದ್ದಂಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ರಂತೆ ಅನ್ನೋ ಹಂಗೆ ಆಯ್ತು ನಿನ್ ಕತೆ’ ಎಂದು ರಾಯರು ಸ್ನಾನದ ಮನೆಗೆ ತೆರಳಿದರು.

    ಸ್ಕೂಟರಿನಲ್ಲಿ ಕಾಲೇಜಿಗೆ ತೆರಳುತ್ತಿದ್ದ ಸ್ವಾತಿಯ ಮನದಲ್ಲಿ ತಂದೆ ಹೇಳಿದ ಮಾತುಗಳು ಪ್ರತಿಧ್ವನಿಸತೊಡಗಿದವು. ನನ್ನ ಹುಡುಗ ಅಂತಹವನಲ್ಲ.. ಎಷ್ಟೊಂದು ಸೌಮ್ಯ ಸ್ವಭಾವದವನು.. ಒಂದು ಬಾರಿಯೂ ಸ್ನೇಹಿತೆಯರ ಎದುರಿಗೆ ನÀನ್ನನ್ನು ಮಾತನಾಡಿಸಿದವನಲ್ಲ.. ಅಂಜುಗುಳಿ. ಎಲ್ಲಾ ವಿಷಯದಲ್ಲೂ ನನಗೆ ತಕ್ಕ ಹುಡುಗ.. ನನ್ನ ಆಯ್ಕೆ ಎಂದೂ ಹುಸಿಯಾಗುವುದಿಲ್ಲ.. ಎಂದು ಏನೇನೋ ಯೋಚಿಸಿಕೊಂಡು ಕಾಲೇಜು ತಲುಪಿದಳು.

    ಇದಾದ ಕೆಲವು ದಿನಗಳ ಬಳಿಕ ತಂದೆಯ ಮಾತುಗಳು ಸ್ವಾತಿಯ ನೆನಪಿನಿಂದ ಮಾಯವಾದರೂ ಆಕೆಯ ಸುಪ್ತಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದವು.

    ಸಂದೇಶ್ ಸ್ವಾತಿ ಓದುತ್ತಿದ್ದ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿ. ನೋಡಲು ಸ್ಫುರದ್ರೂಪಿ. ಕಾಲೇಜಿನಲ್ಲಿದ್ದ ಎಲ್ಲಾ ಹುಡುಗಿಯರ ಕಣ್ಣು ಅವನ ಮೇಲಿತ್ತು. ಎಲ್ಲರೂ ಅವನನ್ನು ‘ಕ್ಯೂಟ್ ಅಂಡ್ ಸ್ಮಾರ್ಟ್ ಗೈ’ ಎಂದೇ ಹೊಗಳುತ್ತಿದ್ದರು. ಹೋದ ಬಾರಿ ಕಾಲೇಜಿನ ವಾರ್ಷಿಕೋತ್ಸವದಂದು ಸ್ವಾತಿಗೆ ಅವನ ಪರಿಚಯವಾಗಿತ್ತು. ಇಬ್ಬರ ಕಣ್ಣುಗಳು ಕಲೆತು ಪರಿಚಯ ಪ್ರೇಮಕ್ಕೆ ತಿರುಗಿತ್ತು. ಆದರೆ ಎಲ್ಲವೂ ಮೊಬೈಲಿನ ಮೆಸೇಜುಗಳ ಮೂಲಕ ಮಾತ್ರ ವ್ಯಕ್ತವಾಗುತಿದ್ದುದು ಬಿಟ್ಟರೆ ಕಾಲೇಜಿನಲ್ಲಿ ಇಬ್ಬರೂ ಅಪರಿಚಿತರಂತೆ ಇರುತ್ತಿದ್ದರು.

     ಸಂದೇಶ್  ಶ್ರೀಮಂತರ ಮನೆಯ ಹುಡುಗ. ಅವನು ದಿನವೂ ಕಾಲೇಜಿಗೆ ಆಕರ್ಷಕವಾದ ಆಧುನಿಕÀ ಉಡುಪು ಧರಿಸಿಕೊಂಡು ಬರುತ್ತಿದ್ದ. ಆಗಾಗ ಬೇರೆ ಬೇರೆ ನಮೂನೆಯ ಬೈಕುಗಳನ್ನು ಕಾಲೇಜಿಗೆ ತರುತ್ತಿದ್ದ. ಒಮ್ಮೊಮ್ಮೆ ಐಷಾರಾಮಿ ಕಾರಿನÀಲ್ಲಿಯೂ ಬರುತ್ತಿದ್ದ ಸಂದೇಶ್‍ನ ಸುತ್ತಾ ಆತನ ಸ್ನೇಹಿತರು ಸುತ್ತುತಿದ್ದರು. ಅವನಿಗೊಂದು ಸ್ನೇಹಿತರ ದೊಡ್ಡ ಪಡೆಯೇ ಇತ್ತು. ಕಾಲೇಜಿನ ಕ್ಯಾಂಪಸ್ಸಿನಲ್ಲಿ ‘ಹೀರೋ’ ಪಟ್ಟ ಅವನದಾಗಿತ್ತು. ಓದಿನಲ್ಲಿ ಅಷ್ಟೊಂದು ಮುಂದಿರಲಿಲ್ಲವಾದರೂ ಸಾಮಾನ್ಯ ವಿದ್ಯಾರ್ಥಿಯಾಗಿ ಎಲ್ಲೂ ಫೇಲಾಗದೆ ಎಲ್ಲಾ ಸೆಮಿಸ್ಟರುಗಳನ್ನು ಪಾಸು ಮಾಡಿಕೊಂಡು ಅಂತಿಮ ವರ್ಷಕ್ಕೆ ಕಾಲಿರಿಸಿದ್ದ.

     ಸ್ವಾತಿಗೆ ಈಗೀಗ ಮನೆಯಲ್ಲಿದ್ದರೂ ಕಾಲೇಜಿನಲ್ಲಿದ್ದರೂ ಸಂದೇಶ್‍ನದೇ ಗುಂಗು ಹಿಡಿದಿತ್ತು. ಆದರೆ ಯಾವ ಸ್ನೇಹಿತೆಯರಿಗಾಗಲೀ, ತನ್ನ ತಂದೆ-ತಾಯಿಯರಿಗಾಗಲೀ ವಿಷಯ ತಿಳಿಯದಂತೆ ಎಚ್ಚರ ವಹಿಸಿದ್ದಳು. ತನ್ನ ತಂದೆ ತಾಯಂದಿರ ಬಗ್ಗೆ ಆಕೆಗೆ ಅಪರಿಮಿತ ವಿಶ್ವಾಸವಿತ್ತು. ಅವರು ನನ್ನ ಆಯ್ಕೆಗೆ ಅಡ್ಡ ಬರಲಾರರು ಎಂಬ ನಂಬಿಕೆಯಿತ್ತು. ಏನೇ ಆದರೂ ನನ್ನ ಪ್ರೀತಿಯ ಅನಾವರಣ ನಾನು ಕಾಲೇಜು ಮುಗಿಸಿ ಯಾವುದಾದರೂ ಉದ್ಯೋಗ ಹಿಡಿದು ನನ್ನ ಸ್ವಂತ ಕಾಲ ಮೇಲೆ ನಿಂತ ಮೇಲೆ ಮಾತ್ರ ಎಂದು ನಿರ್ಧರಿಸಿಕೊಂಡಿದ್ದಳು. ಮನೆಯಲ್ಲಿದ್ದಾಗ ತನ್ನ ಮೊಬೈಲಿನಿಂದ ಸಂದೇಶ್‍ನಿಗೆ ಕಳುಹಿಸುತ್ತಿದ್ದ ಮತ್ತು ಅವನಿಂದ ತನಗೆ ಬರುತ್ತಿದ್ದ ಮೆಸೇಜುಗಳನ್ನು ಓದಿದ ನಂತರ ತಕ್ಷಣವೇ ಅಳಿಸಿಹಾಕುವ ಎಚ್ಚರಿಕೆ ವಹಿಸುತ್ತಿದ್ದಳು. ಸಂದೇಶ್ ಇಂಟರ್‍ನೆಟ್‍ನ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದ ಅವನ ವಿವಿಧ ಭಂಗಿಯ ಫೋಟೋಗಳನ್ನು ನೋಡಿ ಖುಷಿಪಡುತ್ತಿದ್ದ ಸ್ವಾತಿ ಗಂಟೆಗಟ್ಟಲೆ ಕಂಪ್ಯೂಟರ್ ಮುಂದೆ ಕುಳಿತು ತಂದೆ–ತಾಯಿಗೆ ತಿಳಿಯದಂತೆ ಅವನೊಂದಿಗೆ ಚಾಟ್ ಮಾಡುತ್ತಿದ್ದಳು. ತಮ್ಮ ಮಗಳು ಬುದ್ದಿವಂತೆ, ತಪ್ಪು ದಾರಿ ಹಿಡಿಯುವುದಿಲ್ಲ ಎಂದು ಆಕೆಯ ತಂದೆ-ತಾಯಿ ಕೂಡ ಇವಳ ಮೇಲೆ ಸಂದೇಹಪಡುತ್ತಿರಲಿಲ್ಲ.

     ಭಾನುವಾರಗಳಂದು ತನ್ನ ಸ್ನೇಹಿತೆಯರ ಮನೆಗೆ ಹೋಗಿಬರುತ್ತೇನೆಂದು ಹೇಳಿ ಯಾರಿಗೂ ತಿಳಿಯದಂತೆ ಸಂದೇಶ್‍ನನ್ನು ಭೇಟಿಯಾಗುತ್ತಿದ್ದಳು. ಕೆಲವೊಮ್ಮೆ ನಗರದ ಇನ್ನೊಂದು ತುದಿಯಲ್ಲಿ ದೂರದಲ್ಲಿದ್ದ ಚಲನಚಿತ್ರಮಂದಿರಗಳಲ್ಲಿ ಇಬ್ಬರೂ ಒಟ್ಟಾಗಿ ಕುಳಿತು ಯಾವಯಾವುದೋ ಇಂಗ್ಲೀಷಿನ ರೋಮ್ಯಾಂಟಿಕ್ ಚಲನಚಿತ್ರಗಳನ್ನು ನೋಡುತ್ತಿದ್ದರು. ಆದರೂ ಸ್ವಾತಿ ಎಲ್ಲಾ ರೀತಿಯ ಎಚ್ಚರ ವಹಿಸಿದ್ದಳು. ಕೆಲವೊಂದು ಬಾರಿ ಸಂದೇಶ್  ಆಕೆಯ ಕೈ ಹಿಡಿಯುತ್ತಿದ್ದುದು ಮತ್ತು ಆಕೆಯ ಅಂದಚೆಂದದ ದೇಹಸಿರಿಯ ಬಗ್ಗೆ ಕಾಮೆಂಟ್ ಮಾಡುತ್ತಿದ್ದುದು ಬಿಟ್ಟರೆ ಎಂದೂ ಅವನಾಗಿಯೇ ಮುಂದುವರೆದಿರಲಿಲ್ಲ. ಈ ಎಲ್ಲಾ ಕಾರಣಗಳಿಂದ ಸ್ವಾತಿಗೆ ಸಂದೇಶ್‍ನ  ಮೇಲೆ ಅತೀವ ವಿಶ್ವಾಸವಿತ್ತು. ಅವನ ಸಾಮಿಪ್ಯದ ಸುಖ ಬಯಸಿ ಈಕೆಯೇ ಬೆಳಿಗ್ಗೆ ಎದ್ದ ಕೂಡಲೇ ಮತ್ತು ರಾತ್ರಿ ಮಲಗುವ ಮುನ್ನ ಅನೇಕ ಮೆಸೇಜುಗಳನ್ನು ಕಳುಹಿಸುತ್ತಿದ್ದಳು.  ತನ್ನ ರೂಮಿನ ಬಾಗಿಲು ಭದ್ರಪಡಿಸಿಕೊಂಡೋ ಅಥವಾ ರೂಮಿನ ಲೈಟು ಆರಿಸಿ ಹೊದಿಕೆಯೊಳಗೆ ಮೊಬೈಲನ್ನಿಟ್ಟುಕೊಂಡು ಸರಿರಾತ್ರಿಯವರೆಗೆ ಸಂದೇಶ್‍ನೊಂದಿಗೆ ಮೆಸೇಜುಗಳಲ್ಲೇ ಚಾಟ್  ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದ ಸ್ವಾತಿಗೆ ತನ್ನ ಕೈಯಲ್ಲಿರುತ್ತಿದ್ದ ಮೊಬೈಲನ್ನು ಒಂದು ನಿಮಿಷವೂ ಅಪ್ಪಿತಪ್ಪಿಯೂ ಎಲ್ಲಿಯೂ ಬಿಡದಂತೆ ಎಚ್ಚರಿಕೆ ವಹಿಸುವ ಕಲೆ ಕರಗತವಾಗಿತ್ತು.  ತನ್ನ ಮನಸ್ಸಿನಾಳದಲ್ಲಿ ಯಾರಿಗೂ ತಿಳಿಯದಂತೆ ಸಂದೇಶ್‍ನನ್ನು ಬಚ್ಚಿಟ್ಟುಕೊಂಡಿದ್ದವಳಿಗೆ ಅವನಂತಹ ಸೌಮ್ಯ ಸ್ವಭಾವದ ಹುಡುಗ ಜಗತ್ತಿನಲ್ಲಿಯೇ ಯಾರೂ ಇಲ್ಲ ಎನಿಸಿತ್ತು.

    ದಿನಗಳು ಉರುಳಿ ಸ್ವಾತಿಯ ಆರನೇ ಸೆಮಿಸ್ಟರ್‍ನ ಪರೀಕ್ಷೆಗಳು ಮುಗಿದುಹೋದವು. ಸಂದೇಶ್  ತನ್ನ ಎಂಜನಿಯರಿಂಗ್ ಪದವಿಯ ಕೊನೆಯ ಸೆಮಿಸ್ಟರಿನ ಪರೀಕ್ಷೆ ಬರೆದು ಉಲ್ಲಾಸಿತನಾಗಿದ್ದ. ಮುಂದಿನ ಸೆಮಿಸ್ಟರಿನಿಂದ ಅವನು ಕಾಲೇಜಿಗೆ ಬರುವುದಿಲ್ಲ ಎಂಬುದು ಅರಿವಾಗಿ ಸ್ವಾತಿಗೆ ಏನೋ ಒಂದು ರೀತಿಯ ಅವರ್ಣನೀಯ ಆತಂಕವಾಗಿತ್ತು. ಹೇಗೋ ಇನ್ನೊಂದು ವರ್ಷ ಕಳೆದರೆ ಸಾಕು, ನಂತರ ಯಾವುದಾದರೂ ಉದ್ಯೋಗಕ್ಕೆ ಸೇರಿ ನನ್ನ ಪ್ರೀತಿಯನ್ನು ತಂದೆ-ತಾಯಿಯರಲ್ಲಿ ತಿಳಿಸಿ ಆದಷ್ಟು ಬೇಗ ಸಂದೇಶ್‍ನನ್ನು ಬಾಳಸಂಗಾತಿಯನ್ನಾಗಿ ಮಾಡಿಕೊಳ್ಳಬೇಕೆಂಬ ಹಂಬಲ ಹೆಚ್ಚಾಗಿ ದಿನ ಕಳೆಯತೊಡಗಿದಳು.

    ಆರನೆಯ ಸೆಮಿಸ್ಟರಿನ ಫಲಿತಾಂಶ ಪ್ರಕಟವಾದ ದಿನ ಕಾಲೇಜಿಗೆ ಬಂದ ಸ್ವಾತಿ ಸಂದೇಶ್‍ನಿಗಾಗಿ ಕಾಯುತ್ತಿದ್ದಳು. ಸ್ವಾತಿ ಉತ್ತಮ ಅಂಕ ಗಳಿಸಿ ಡಿಸ್ಟಿಂಕ್ಷನ್‍ನಲ್ಲಿ ಪಾಸಾಗಿದ್ದಳು. ಸಂದೇಶ್  ಎಂದಿನಂತೆ ಸಾಮಾನ್ಯ ದರ್ಜೆಯಲ್ಲಿ ಪಾಸಾಗಿ ತನ್ನ ಪದವಿಯನ್ನು ಮುಗಿಸಿದ್ದ. ಎಲ್ಲಾ ಸ್ನೇಹಿತೆಯರು ಫಲಿತಾಂಶ ನೋಡಿಕೊಂಡು ಹೋದಮೇಲೆ ಸಂದೇಶ್‍ನಿಗೆ ಮೊಬೈಲಿನಲ್ಲಿ ಮೆಸೇಜು ಕಳುಹಿಸಿ ಕಾಲೇಜಿನಿಂದ ದೂರದಲ್ಲಿದ್ದ ರಸ್ತೆಯೊಂದರ ತಿರುವಿನ ಬಳಿ ಕಾದು ನಿಂತಿದ್ದಳು. ಸಂದೇಶ್  ಸರಿಯಾದ ಸಮಯಕ್ಕೆ ತನ್ನ ಬೈಕಿನಲ್ಲಿ ಹಾಜರಾದ. ಇಬ್ಬರೂ ಸುಮಾರು ಹೊತ್ತು ಅಲ್ಲಿಯೇ ಮಾತನಾಡಿಕೊಂಡು ನಿಂತಿದ್ದರು. ಸ್ವಾತಿ ಮುಂದಿನ ಸೆಮಿಸ್ಟರಿನಿಂದ ಸಂದೇಶ್  ಕಾಲೇಜಿಗೆ ಬರುವುದಿಲ್ಲವೆಂದು ತಿಳಿದು ಎಂದಿನಂತೆ ಬೇಗ ಮನೆಗೆ ಹೋಗಲು ಅವಸರಿಸಲಿಲ್ಲ. ಪ್ರತಿದಿನ ಸಂದೇಶ್‍ನ ಮುದ್ದುಮುಖವನ್ನು ನೋಡಲು ಆಗುವುದಿಲ್ಲವಲ್ಲ ಎಂಬ ಕಳವಳ ಅವಳದಾಗಿತ್ತು.

    ಹಾಗೆಯೇ ಮಾತನಾಡುತ್ತಾ ‘ಹೇಗೂ ನಾನು ನೆಕ್ಸ್ಟ ಸೆಮಿಸ್ಟರಿನಿಂದ ಕಾಲೇಜಿಗೆ ಬರೋಲ್ಲ, ನೀನೂ ನಮ್ ಮನೆ ನೋಡಿಲ್ಲ, ನಮ್ ಮನೆ ತೋರಿಸ್ತೀನಿ ಬಾ ಹೋಗೋಣ’ ಎಂದು ಸಂದೇಶ್  ಹೇಳಿದಾಗ ಸ್ವಾತಿಗೆ ದಿಗಿಲಾಯಿತು. ‘ನಿಮ್ ಡ್ಯಾಡಿ ಮಮ್ಮಿ ಇರ್ತಾರಲ್ವಾ..........’ ಎಂದು ಏನೋ ಹೇಳಲು ಹೊರಟವಳಿಗೆ ‘ಅವರ್ಯಾರು ಇಲ್ಲ, ಇಲ್ಲೇ ಯಾವುದೋ ಫಂಕ್ಷನ್‍ಗೋಗಿದಾರೆ ರಾತ್ರೀನೇ ಬರೋದು, ಟೆನ್ ಮಿನಿಟ್ಸ್ ಅಷ್ಟೇ...ನಮ್ ಮನೆ ನೋಡ್ಕೊಂಡು ಬಂದುಬಿಡುವಂತೆ ಬಾ’ ಎಂದ ಸಂದೇಶ್‍ನ ಸೌಮ್ಯ ಸ್ವಭಾವವನ್ನು ಅರಿತಿದ್ದ ಸ್ವಾತಿ ಇಲ್ಲ ಎಂದು ಹೇಳಲಾಗದೆ ತನ್ನ ಸ್ಕೂಟರಿನಲ್ಲಿ ಅವನ ಬೈಕನ್ನು ಹಿಂಬಾಲಿಸಿದಳು.

    ವಿಶಾಲವಾದ ಎರಡಂತಸ್ತಿನ ಮನೆ. ಮನೆಯ ಮುಂದೆ ಇದ್ದ ಎತ್ತರದ ಕಾಂಪೌಂಡ್. ಗೇಟು ತೆರೆದು ಒಳಗೆ ಹೋದಾಗ ಕಂಡ ಸುಂದರವಾದ ಕೈತೋಟ ಸ್ವಾತಿಯನ್ನು ಮಂತ್ರಮುಗ್ಧಳನ್ನಾಗಿಸಿದವು. ಸಂದೇಶ್  ಮನೆಯ ಬೀಗ ತೆರೆದು ಮನೆಯೆನ್ನೆಲ್ಲಾ ತೋರಿಸಿ ಫ್ರಿಜ್‍ನಲ್ಲಿದ್ದ ಜ್ಯೂಸನ್ನು ಎರಡು ಗ್ಲಾಸುಗಳಲ್ಲಿ ತಂದು ಸ್ವಾತಿಗೊಂದು ಕೊಟ್ಟು ಮಹಡಿಯ ಮೇಲಿದ್ದ ತನ್ನ ರೂಮಿನ ಕಡೆ ನಡೆದ. ಅವನ ವಿಶಾಲವಾದ ಹವಾನಿಯಂತ್ರಿತ ಐಷಾರಾಮಿ ರೂಮು ಮತ್ತು ಅಲ್ಲಿದ್ದ ಬಗೆಬಗೆಯ ಪೀಠೋಪಕರಣಗಳು ಸ್ವಾತಿಯ ಕಣ್ಣುಕುಕ್ಕಿದವು. ಅಲ್ಲಿಯೇ ಇದ್ದ ಮೆತ್ತನೆಯ ಸೋಫಾದ ಮೇಲೆ ಇಬ್ಬರೂ ಕುಳಿತರು. ರೂಮಿನ ಗೋಡೆಗೆ ತಗುಲಿಸಿದ್ದ ತೆಳ್ಳನೆಯ ಟೀವಿಯಲ್ಲಿ ಬರುತ್ತಿದ್ದ ಚಲನಚಿತ್ರವೊಂದನ್ನು ನೋಡುತ್ತಾ ಸಮಯ ಹೋದದ್ದೇ ಸ್ವಾತಿಗೆ ತಿಳಿಯಲಿಲ್ಲ. ಕೈಯಲ್ಲಿದ್ದ ಗಡಿಯಾರವನ್ನೊಮ್ಮೆ ನೋಡಿ ‘ಬರ್ತೀನಿ ಸಂದೇಶ್’ ಎಂದು  ಎದ್ದು ಹೊರಟವಳ ಮುಖವನ್ನೇ ನೋಡುತ್ತಾ ಇದ್ದಕ್ಕಿದ್ದಂತೆಯೇ ಸಂದೇಶ್  ಆಕೆಯ ಮುಖವನ್ನು ತನ್ನೆರಡೂ ಹಸ್ತಗಳಿಂದ ಹಿಡಿದು ತನ್ನ ತುಟಿಗಳನ್ನು ಅವಳ ತುಟಿಗಳ ಹತ್ತಿರ ತಂದಾಗ ಸ್ವಾತಿಗೆ ಆಘಾತವಾದಂತಾಗಿ ಅವನ ಕೈಗಳನ್ನು ಕಿತ್ತೊಗೆದು ‘ಏ.... ಸಂದೇಶ್...ಏನ್ ಮಾಡ್ತಿದೀಯಾ...’ ಎನ್ನುವಷ್ಟರಲ್ಲಿ ಸಂದೇಶ್  ಆಕೆಯನ್ನು ತಬ್ಬಿ ತಳ್ಳಿಕೊಂಡು ಅಲ್ಲಿಯೇ ಇದ್ದ ಮಂಚದ ಮೇಲೆ ಕುಳ್ಳಿರಿಸಿದ. ಸ್ವಾತಿಗೆ ತಲೆ ಸುತ್ತಿಬಂದಂತಾಗಿ ‘ಏ..ಏ..ಏನ್ ಮಾಡ್ತಿದೀಯೋ...’ ಎಂದು ಕಿರುಚಿದಳು.

   ‘ಸ್ವಾತಿ ಡಾರ್ಲಿಂಗ್, ಇದೆಲ್ಲಾ ವೆರಿಕಾಮನ್... ಹೇಗೂ ನಾವಿಬ್ರೂ ಮದುವೆಯಾಗೋರಲ್ವಾ....  ಒಂದೇ ಒಂದು ಸರ್ತಿ...’ ಅನ್ನುವಷ್ಟರಲ್ಲಿ  ಅವನ ಅಪ್ಪುಗೆಯಿಂದ ಮೈಮೇಲೆಲ್ಲಾ ಚೇಳು ಹರಿದಂತಾಗಿ ಸ್ವಾತಿಯ ಬಲಗೈ ಸಂದೇಶ್‍ನ ಕೆನ್ನೆಯ ಮೇಲೆ ಬಲವಾಗಿ ಅಪ್ಪಳಿಸಿತು. ಸ್ವಾತಿಯನ್ನು ಮೆತ್ತಗಿನ ಸೌಮ್ಯ ಸ್ವಭಾವದ ಹುಡುಗಿ ಎಂದು ತಿಳಿದಿದ್ದ ಸಂದೇಶ್  ತನ್ನ ಕೆನ್ನೆಯ ಮೇಲೆ ಬಿದ್ದ ಅನಿರೀಕ್ಷಿತ ಏಟಿನಿಂದ ಕಂಗಾಲಾಗಿ ಹೋಗಿದ್ದ.

   ‘ಯೂ ಚೀಟ್, ನಿನ್ನನ್ನ ಏನೋ ಅಂದ್ಕೊಂಡಿದ್ದೆ....ನೀನು ನನ್ನನ್ನ ಪ್ರಿತಿಸ್ತಾ ಇಲ್ಲ.. ನೀನು ಪ್ರೀತಿಸ್ತಾ ಇರೋದು ನನ್ನ ದೇಹಾನ...ಸದ್ಯ ಗಾಡ್ ಈಸ್ ಗ್ರೇಟ್..ನನ್ನ ಕಣ್ಣು ತೆರೆಸಿದ....ಇದೇ ಕೊನೆ..ಇನ್ನೊಂದ್ ಸರ್ತಿ ನನ್ ಸುದ್ದಿಗೆ ಬಂದ್ರೆ ಕೈಕಾಲು ಮುರಿದಾಕಿಬಿಡ್ತೀನಿ..ಹುಷಾರ್...’ ಎಂದು ಕೆರಳಿದ ಹೆಣ್ಣುಹುಲಿಯಂತೆ ಆರ್ಭಟಿಸಿ  ಒಮ್ಮೆಯೂ ತಿರುಗಿನೋಡದೆ ದಡದಡನೆ ಮೆಟ್ಟಿಳಿದು ಮನೆಯಿಂದ ಆಚೆ ಬಂದು ಹೊರಗೆ ನಿಲ್ಲಿಸಿದ್ದ ಸ್ಕೂಟರನ್ನೇರಿ ಹೊರಟಾಗ ಆಕೆಯ ದೇಹವೆಲ್ಲಾ ಕೋಪದಿಂದ ಥರಥರ ಕಂಪಿಸುತ್ತಿತ್ತು.

 

 

Comments