ಹೀಗೊಂದು ತಾಜ್ ಮಹಲ್ - ಲಕ್ಷ್ಮೀಕಾಂತ ಇಟ್ನಾಳ

ಹೀಗೊಂದು ತಾಜ್ ಮಹಲ್ - ಲಕ್ಷ್ಮೀಕಾಂತ ಇಟ್ನಾಳ

                ಪಶ್ಚಿಮ ಘಟ್ಟಗಳ ದಟ್ಟ ಕಾಡಿನ ಪರಿಸರದ ಒಂದೂರು. ಹಸಿರು ಹೊದ್ದ ಕಾಡಿನ ಜನಜೀವನದಲ್ಲಿ ಹಾಸುಹೊಕ್ಕಾಗಿ ಅದರ ಜೀವನಾಡಿಯೊಂದಿಗೆ ಬೆರೆತ ಒಂದು ಪುಟ್ಟ ಸಂಸಾರ. ಕಡಲ ತಡಿಯ ಇಂತಹದೊಂದು ಊರಿನ ಕಚೇರಿಯೊಂದರಲ್ಲಿ ಜೀವನೋಪಾಯದ ನೌಕರಿ. ಕೆಲಸ ಮುಗಿಸಿ ಮನೆಗೆ ಮರಳುವಾಗ ಮಗನಿಗೇನಾದರು ಒಯ್ಯದಿದ್ದರೆ ತನ್ನನ್ನು ತಾನೇ ಕ್ಷಮಿಸಲಾರದ ಅಪ್ಪ. ಮನೆಯಿಂದ ಹೊರಡುವಾಗ ಮಗನ ಬೇಡಿಕೆಗಳ ಪಟ್ಟಿ ಅವನ ಮನಸ್ಸಿನಲ್ಲಿ ಇದ್ದೇ ಇರುತ್ತಿತ್ತು. ಅಪ್ಪನ ಹೆಚ್ಚು ಅಪ್ಯಾಯಮಾನ, ನಿಷ್ಕಾರಣ ಅತೀ ಪ್ರೀತಿ ಎಲ್ಲಿ ಮಗನನ್ನು ಹಠಮಾರಿಯನ್ನಾಗಿ ಮಾಡುವುದೋ, ಓದಿನಲ್ಲಿ ಹಿಂದಿಕ್ಕುವುದೋ ಎಂಬ ಅಳುಕು ಅಮ್ಮನದು, ಅದಕ್ಕಾಗಿಯೇ ಹುಸಿಮುನಿಸು. ಮಗನೂ ಅಷ್ಟೇ ಪ್ರತಿಭಾವಂತ. ಮಗನ ವಿದ್ಯಾಭ್ಯಾಸದೊಂದಿಗೆ ಇತರೆ ಚಟುವಟಿಕೆಗಳಿಗೆ ಮೈತುಂಬ ಪ್ರೋತ್ಸಾಹದ ಮಳೆ ಸುರಿಸುವ ಅಪ್ಪನನ್ನು ನೋಡಿ ಮಗನ ಸ್ನೇಹಿತರಲ್ಲಿ ಅಪ್ಪನ ಬಗ್ಗೆ ತುಂಬ ಗೌರವ. ಇಂಥ ಅಪ್ಪ ನಮಗೂ ಇರಬಾರದಿತ್ತೆ ಅಂದುಕೊಂಡವರೆಷ್ಟೋ, ಅಂದವರೂ ಅಷ್ಟೇ. ಸ್ನೇಹಿತರ ಮಾತಿಗೆ ಉಬ್ಬಿಹೋಗುತ್ತಿದ್ದ ಮಗ.

     ಮಗ ಓದುವಾಗ ಪಕ್ಕದಲ್ಲಿಯೇ ಬಿದ್ದುಕೊಂಡು ಅವನ ಜೊತೆಗಿದ್ದರೂ ಅಭ್ಯಾಸಕ್ಕೆ ತೊಂದರೆಯಾಗದಂತೆ ತಾನೂ ಒಂದು ಸಾಹಿತ್ಯ ಪುಸ್ತಕವನ್ನು ಓದುತ್ತ ಮಗನ ಸಾಮೀಪ್ಯದಲ್ಲೇ ಬಹುಹೊತ್ತು ಇರುತ್ತಿದ್ದ ಅಪ್ಪ. ಬಹುರಾತ್ರಿಯ ನಂತರ ಮಗನಿಗೆ ಗುಡ್ ನೈಟ್ ಹೇಳಿ, ಮಲಗಲು ಹೋದ ಅಪ್ಪನ ನಂತರ ತಾನೂ ಸ್ವಲ್ಪ ಹೊತ್ತಿಗೆ ಮಲಗಿದವನಿಗೆ ಬೆಳಿಗ್ಗೆ ಎದ್ದಾಗ ತನ್ನ ಹಾಸಿಗೆಯಲ್ಲಿ ಅಪ್ಪ ಮಲಗಿದ್ದು ನೋಡಿ ಖುಷಿ. ಬೆಳಿಗ್ಗೆ ಮಗನನ್ನು ಟ್ಯೂಶನ್ಗೆಂದು ಎಬ್ಬಿಸಲು ಬಂದವ, ಮಗ ಇನ್ನೂ ಗಾಢ ನಿದ್ದೆಯಲ್ಲಿದ್ದು ಅದೆಷ್ಟೊತ್ತಿಗೆ ಮಲಗಿದ್ದಾನೋ ಎಂದು ಎಬ್ಬಿಸಲು ಮನಸ್ಸಾಗದೇ, ಇನ್ನೂ ಸ್ವಲ್ಪ ಮಲಗಲಿ ಎಂದು ಅಲ್ಲಿಯೇ ಮಗನ ಜೊತೆಯಲ್ಲಿ ಮಲಗಿದ ಅಪ್ಪನಿಗೆ ನಿದ್ರೆಯಾವರಿಸಿದ್ದು, ಮಗ ಎದ್ದು ಅಭಿಮಾನದಿಂದ ಅಪ್ಪನ ತಲೆ ನೇವರಿಸಿ, ಕಾಫಿ ಮಾಡಲೇ ಅಪ್ಪ ಎಂದು ಕೇಳುತ್ತಿರುವಂತೆ ಎದ್ದು, ಇಲ್ಲ ಆಗಲೇ ಅಮ್ಮ ಮಾಡಿರಬಹುದೆಂದು ಹೇಳುತ್ತ, ಇಬ್ಬರೂ ಎದ್ದು ಬಾತರೂಮ್ ಕಡೆಗೆ ನಡೆಯುವರು. ಅಮ್ಮ ಕಾಫಿ ನೀಡುತ್ತ ಮಗನ ನೂರೆಂಟು ತಕರಾರುಗಳನ್ನು ಹೇಳುತ್ತಿದ್ದಂತೆ ಇಬ್ಬರದೂ ದಿವ್ಯ ಮೌನ. ಅಂದಿನ ಪೇಪರ್ ಓದುತ್ತ ಮಗನ ದಿನಚರಿ ವಿಚಾರಿಸುತ್ತಿದ್ದಂತೆ, ಮಗನೇನಾದರೂ ‘ಇಂದು ಈಜುವಾ’ ಎಂದರೆ ಅಪ್ಪ ಆಗಲೇ ರೆಡಿ. ಟಾವೆಲ್ ಬಟ್ಟೆ ತೆಗೆದುಕೊಂಡು ಅಪ್ಪ ಹೇಳುವ, ‘ಅರ್ಧ ಗಂಟೆಯಲ್ಲಿ ನೀರಿನಿಂದ ಹೊರಗಿರಬೇಕು’ ಅಂದಾಗ ಮಗನಿಗೆ ಅರ್ಥವಾಗುತ್ತಿತ್ತು, ಅಪ್ಪನಿಗೆ ಕಚೇರಿಯಲ್ಲಿ ಹೆಚ್ಚು ಕೆಲಸವಿರಬಹುದೆಂದು. ಏಕೆಂದರೆ ಅಪ್ಪ ಕಚೇರಿ ಕೆಲಸದಲ್ಲಿ ಬಹು ನಿಷ್ಠಾವಂತ. ಒಳ್ಳೆಯ ಗೌರವ ಇಟ್ಟುಕೊಂಡವ. ಬೈಕ್ನಲ್ಲಿ ಇಬ್ಬರೂ ಸಮೀಪದಲ್ಲೇ ಹರಿಯುವ ನದಿಗೆ ಹೋಗಿ ಈಜು ಹೊಡೆದು ಮರಳುವಷ್ಟರಲ್ಲಿ ಅಮ್ಮನ ಅಡಿಗೆ ತಯಾರು. ಇಬ್ಬರೂ ಒಂದೇ ತಟ್ಟೆಯಲ್ಲಿ ಉಂಡು ತಮ್ಮ ತಮ್ಮ ದೈನಂದಿನ ಕಾರ್ಯಗಳಿಗೆ ತೊಡಗುವ ಅಭ್ಯಾಸ ಮಾಡಿಕೊಂಡಿದ್ದರು. ಹೀಗೆ ಅಪ್ಪ ಮಗನದು ಅತೀತ ಸ್ನೇಹ, ಬಿಡಿಸಲಾರದ ನಂಟು.ತನ್ನ ಯೌವ್ವನದ ದಿನಗಳಲ್ಲಿ ಕಂಡ ಕನಸುಗಳನ್ನು ಅಪ್ಪ ಮಗನ ರೂಪದಲ್ಲಿ ಕಂಡಿದ್ದ, ಕಳೆದು ಹೋದ ಸುಂದರ ಗಳಿಗೆಗಳನ್ನು ಮತ್ತೆ ಪಡೆದಿದ್ದ.' ವೋ ಶಾಮ ಕುಛ ಅಜೀಬ್ ಥಿ, ಎ ಶಾಮ ಭೀ ಅಜೀಬ್ ಹೈ, ವೋ ಕಲ್ ಭೀ ಪಾಸ್ ಪಾಸ್ ಥಿ, ವೋ ಆಜ್ ಭೀ ಕರೀಬ್ ಹೈ' ಅನ್ನುವ ಸಾಲುಗಳನ್ನು  ಗುಲ್ಜಾರ್ ರು ಇವರಿಗಾಗಿಯೇ ಬರೆದಿದ್ದರೋ ಎನೋ!

   ಪಶ್ಚಿಮಘಟ್ಟಗಳ ರುದ್ರ ರಮಣೀಯ  ಸ್ಥಳಗಳಲ್ಲಿ, ಸಹ್ಯಾದ್ರಿಯ ತಪ್ಪಲಿನಲ್ಲಿ ನೆಲೆಸಿರುವ ದೇವಾನುದೇವತೆಗಳ ತೀರ್ಥಕ್ಷೇತ್ರಗಳಿಗೆ ದರ್ಶನ ಭಾಗ್ಯ ಅರಸಿ, ಅಸಂಖ್ಯ ಭಕ್ರರು, ಪರಿಸರ ಪ್ರಿಯರು, ಪಶ್ಚಿಮ ಘಟ್ಟಗಳಿಗೆ ಭೇಟಿ ನೀಡುವುದು ಸಾಮಾನ್ಯ. ಪ್ರತಿ ಹೆಜ್ಜೆಹೆಜ್ಜೆಗೆ ಹರಿಯವ ನೊರೆ, ತೊರೆ ಝರಿಗಳಲ್ಲಿ ಜುಳು ಜುಳು ಹರಿಯುವ ಆ ರಭಸದ ತಿಳಿಜಲಧಾರೆಯ ಸೊಬಗು, ಶುಭ್ರನೀರಿನಲ್ಲಿ ತಳಮಟ್ಟದವರೆಗಿನ ಕಾಣುವ ಉಸುಕು-ಕಲ್ಲುಗಳಲ್ಲಿ ಕಾಣುವ ಹಿಂಡು ಹಿಂಡು ಮೀನುಗಳು, ಡೊಂಕು ಡೊಂಕಾಗಿ ಹರಿಯುವ ಇವುಗಳ ನೋಟ, ಮುಂಗಾರು ಮಳೆ ಪ್ರವೇಶದಿಂದ ಶ್ರಾವಣದಿಂದ ಭಾದ್ರಪದದಲ್ಲೂ ಉಕ್ಕುತ್ತ ಹರಿಯುವ ಇವುಗಳನ್ನು ನೋಡಿ ಆನಂದಿಸಿದವರಿಗೇ ಗೊತ್ತು. ಮನಕೆ ತಂಪನೀಯುವ ಸೊಬಗಿನ, ಆಹ್ಲಾದಕರ ತಂಪು ಸುರಿಸುವ ಸುಂದರ ಹಸಿರಾತಿಹಸುರು ತಾಣಗಳು. ಅಪ್ಪ-ಮಗ ಸುತ್ತ-ಮುತ್ತ ನೂರಾರು ಕಿಮೀಗಳವರೆಗೂ ಪ್ರೇಕ್ಷಣೀಯ ಸ್ಥಳಗಳು, ಜಲಪಾತಗಳನ್ನು ಹಿಡಿದು ನೋಡದೇ, ಆಡದೇ ಇರುವ ಯಾವುದೂ ಉಳಿದಿಲ್ಲವೆನುವಂತೆ ತಮ್ಮ ಬಿಡುವಿನ ಸಮಯದಲ್ಲಿ ತಿರುಗುವವರು, ಹೀಗಾಗಿ ಇಂತಹ ವಿಷಯಗಳಲ್ಲಿ ಸುಪ್ರಸಿಧ್ಧರು, ಉಳಿದವರಿಗೆ ಒಂದು ರೆಫರನ್ಸ್ ಗೈಡ್.

    ಅದೊಮ್ಮೆ ಒಬ್ಬ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಯೊಬ್ಬರು ಕಚೇರಿಯ ಕಾಮಗಾರಿಗಳ ಪರಿಶೀಲನೆಗಾಗಿ ಬಂದಿದ್ದರು. ಅವರೊಬ್ಬ ದರ್ಪದ ಅಧಿಕಾರಿ ಎಂದೇ ಹೆಸರುವಾಸಿಯಾಗಿದ್ದವರು. ಅವರಿಗೆ ತಮ್ಮ ಮಗನ ಮೇಲೆ ಅಪಾರ ಪ್ರೀತಿ. ಹೀಗಾಗಿ ಮಗನಿಗೆ ಪಶ್ಚಿಮ ಘಟ್ಟಗಳ ರಮಣೀಯ ಸ್ಥಳಗಳನ್ನು ತೋರಿಸಲು ಕರೆದುಕೊಂಡು ಬಂದಿದ್ದರು. ಮಗನ ಜೊತೆಗಿನ ಅವರ ಒಡನಾಟದಿಂದ ಅವರಿಬ್ಬರೂ ಪರಸ್ಪರ ಬಹಳ ಸ್ನೇಹಜೀವಿಗಳಾಗಿದ್ದುದು ಗೋಚರವಾಗುತ್ತಿತ್ತು. ಇದನ್ನು ಕಂಡ ಈ ಅಪ್ಪನಿಗೂ ಗಳಿಗೆ ಗಳಿಗೆಯೂ ತನ್ನ ಮಗ ನೆನಪಾಗತೊಡಗಿದ್ದ. ಕಚೇರಿ ಕೆಲಸಗಳ ಪರಿಶೀಲನಾ ಸಭೆಯನ್ನು ಮುಂಜಾನೆಯೇ ನಿಗದಿಪಡಿಸಿದ್ದು, ಮಗನಿಗೆ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳನ್ನು ಆದಷ್ಟು ಬೇಗ ನೊಡಬೇಕೆನಿಸಿದ್ದರಿಂದ ಮಗನ ಮೇಲಿನ ಪ್ರೀತಿಗೆ, ಅವನ ಬೇಡಿಕೆಯಂತೆ ಅವುಗಳನ್ನು ವೀಕ್ಷಿಸಲು ಹೋದವರು, ಮಗನಿಗೆ ಇನ್ನೂ ಹೆಚ್ಚು ಹೆಚ್ಚು ತೋರಿಸಬೇಕೆಂಬ ಇವರ ಅಕ್ಕರೆ, ಪ್ರಯಾಣವನ್ನು  ಬೆಳೆಸುತ್ತಲೇ ಇತ್ತು. ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸುತ್ತ, ಸಾಹೇಬರ ಪ್ರವಾಸಕ್ಕೆ ಎಳ್ಳಷ್ಟು ತೊಂದರೆಯಾಗದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತ ಅವರ ಮೆಚ್ಚುಗೆಗೆ ಪಾತ್ರನಾಗಿದ್ದವನು ಈ ಅಪ್ಪ. ಸಾಹೇಬರು ತಮ್ಮ ಮಗನೊಂದಿಗೆ ನಡೆದುಕೊಳ್ಳುತ್ತಿದ್ದ ರೀತಿ, ಅವರಿಬ್ಬರ ಆಪ್ತ ಸಂಭಾಷಣೆಗಳು ಅವರಿಗೆ ಪದೇ ಪದೇ ತಮ್ಮ ಮಗನ ನೆನಪನ್ನು ತಂದು ಕೊಡುತ್ತಿತ್ತು. ಅದೆಲ್ಲಿಗೋ ಹೊರಡಲಿದ್ದ ಮಗನಿಗೆ, ಅವನ ಬೇಡಿಕೆ ಸಾಮಗ್ರಿಗಳನ್ನು ತಂದುಕೊಡಲು ಅಪ್ಪನೇ ಆಗಬೇಕು. ಮಗನ ಬೇಡಿಕೆ ಪಟ್ಟಿಯನ್ನು ಪದೇ ಪದೇ ನೋಡಿಕೊಳ್ಳುವನು. ಮುಖದಲ್ಲಿ ಅದೇನೋ ಅವ್ಯಕ್ತ ಆತಂಕ. ಮೋಬೈಲ್ ಗಳಿಗಿಂತ ಮೊದಲಿನ ಕಾಲವದು. ಅಲ್ಲಲ್ಲಿ ರಸ್ತೆಯ ಮೇಲಿನ ಗ್ರಾಮಗಳಲ್ಲಿ ದೂರವಾಣಿಯಲ್ಲಿ ಅವಶ್ಯಕತೆಗೆ ತಕ್ಕಂತೆ ಕಚೇರಿ, ಸ್ನೇಹಿತರು, ಹಾಗೂ ಮನೆಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದರು. ಯಾವತ್ತೂ ಹಾಗೆಯೇ ಇವರನ್ನು ಕೇಳದೇ ಕಚೇರಿಯಲ್ಲಿ ಕೆಲಸಗಳೇ ನಡೆಯದಷ್ಟು ಅನುಭವಿ. ಎಷ್ಟೇ ಅವಸರಿಸಿ ಪ್ರವಾಸೀ ತಾಣಗಳನ್ನು ನೋಡಿಬಂದರೂ ಕಚೇರಿಗೆ ಬಂದಾಗ ಸಂಜೆ 4.30 ಗಂಟೆ ಮೀರುತ್ತಿತ್ತು. ಮೀಟಿಂಗ್ ಕೂಡಲೇ ಪ್ರಾರಂಭವಾಯಿತು. ಸಂಜೆ ಆರೂವರೆಯಾದರೂ ಸಭೆ ಮುಕ್ತಾಯವಾಗುವ ಲಕ್ಷಣಗಳು ಗೋಚರಿಸಲಿಲ್ಲ. ತಮ್ಮ ಪ್ರವಾಸದಲ್ಲಿ ಜೊತೆಗಿದ್ದ ಈ ಅಪ್ಪ, ಜರೂರು ಕಾರ್ಯವೊಂದಕ್ಕೆ ತೆರಳುವವರಂತೆ ಏಳುತ್ತಿದ್ದಂತೆಯೇ, ಇವರತ್ತ ಸಿಟ್ಟಿನಿಂದಲೇ ಕೆರಳಿ, ಯಾರೂ ಸಭೆ ಮುಗಿಯುವವರೆಗೆ ಹೋಗಕೂಡದು ಎಂದು ಆಜ್ಙಾಪಿಸಿದರು. ಆದರೂ ಈ ಅಪ್ಪ ಎದ್ದು ಮೇಲಾಧಿಕಾರಿಗಳ ಹತ್ತಿರ ಹೋಗಿ, ಅವರತ್ತ ಬಗ್ಗಿ, ನಮ್ರನಾಗಿ, ‘ಸರ್, ಇಂದು ಬೆಳಿಗ್ಗೆ ನನ್ನ ಮಗ, ಅಪಘಾತದಲ್ಲಿ ತೀರಿಕೊಂಡಿದ್ದು, ಎಲ್ಲ ವಿಧಿವಿಧಾನವನ್ನು ನೆರವೇರಿಸಿ, ಸ್ಮಶಾನದ ವರೆಗೂ ಒಯ್ದಿರುವ ನನ್ನ ಸ್ನೇಹಿತರು  ಬೆಂಕಿ ಇಡುವುದಕ್ಕಾಗಿ ಕಾಯುತ್ತಿದ್ದಾರೆ, ನಾನೇ ಬೆಂಕಿ ಇಡಬೇಕು ಆದ್ದರಿಂದ ತೆರಳಲು ದಯಮಾಡಿ ಅನುಮತಿ ನೀಡಬೇಕೆಂದು ಅವರ ಮುಂದೆ ನಮ್ರವಾಗಿ ನುಡಿದ.

       ಇಷ್ಟೊತ್ತು ತಮ್ಮ ಮಗನಿಗಾಗಿ ಸಂಯಮದಿಂದ ಸ್ಥಳಗಳನ್ನು ತೋರಿಸುತ್ತಲಿದ್ದ ಈ ಮನುಷ್ಯನ ಎರಡೂ ಕೈಗಳನ್ನು ಹಿಡಿದುಕೊಂಡು ಮಾತು ಹೊರಬರದೇ ದಿಙ್ಮೂಢರಾಗಿ ನಿಂತುಬಿಟ್ಟರು. ಮೊನ್ನೆ ಕೆಲ ದಿನಗಳ ಹಿಂದೆ ಆ ಅಪ್ಪ ನನ್ನನ್ನು ಹುಡುಕುತ್ತ ಬಂದು ಒಂದು ಲಕೋಟೆ ನನ್ನ ಕೈಗಿತ್ತರು. ಬಿಡಿಸಿ ನೋಡಿದೆ. ಆಪ್ತ ಸ್ನೇಹಿತನಂತಿದ್ದ ಆ ತನ್ನ ಮಗನ ನೆನಪಿಗಾಗಿ, ತಮ್ಮ ಹಿರಿಯರು ಬಾಳಿದ ಊರಿನಲ್ಲಿ ಕಟ್ಟಿದ ಸುಂದರ ಮಂಗಲಭವನದ ಉದ್ಘಾಟನೆಯ ಆಮಂತ್ರಣವದು. ನಿಮ್ಮಂಥವರು ದಯವಿಟ್ಟು ಅದರ ಉದ್ಘಾಟನೆ ದಿನ ಬರಲೇಬೇಕೆಂದು ಸ್ನೇಹಿತನ ಒತ್ತಾಸೆಯಿಂದ ಆತ್ಮೀಯವಾಗಿ ಕೋರಿದರು. ಸುಮಾರು ವರ್ಷಗಳಿಂದ ಇವರನ್ನು ಬಲ್ಲ ನಾನು, ‘ಇದೆಲ್ಲ ಹೇಗೆ ಸಾಧ್ಯವಾಗಿಸಿದಿರಿ’ ಎಂದಾಗ ಅವರಿಂದ ಮಾತೇ ಹೊರಡಲಿಲ್ಲ. ಆದರೂ ಕಷ್ಟಪಟ್ಟು ಅವರು ಹೇಳಿದ್ದಿಷ್ಟೇ. ‘ಹಿರಿಯರಿಂದ ಬಂದ ಆಸ್ತಿ ಇತ್ತು. ಅವನ ಹೃದಯಭಾಗದಲ್ಲಿ ಎಂದೆಂದೂ ಮಂಗಲಕಾರ್ಯಗಳು ನೆರೆವೇರುತ್ತಿರಲಿ ಎಂದು ಈ ಕಾರ್ಯ ಕೈಗೊಂಡೆ’ ಎಂದರು. ವಾಹ್! ಎಂದು ಅಭಿಮಾನದಿಂದ ಸ್ನೇಹಿತನನ್ನು ತಬ್ಬಿಕೊಂಡೆ. ಕಣ್ಣಾಲಿಗಳು ತುಂಬಿಬಂದವು. ಎದ್ದು ಹೋದ ಮಗ ದಂತಕಥೆಯಾಗಿದ್ದರೆ, ಇದ್ದ ಅಪ್ಪನೂ ದಂತಕಥೆಯಂತಿದ್ದಾರೆ. ಅಗಾಧ ಆಂತರ್ಯ ವ್ಯಕ್ತಿತ್ವವುಳ್ಳ ಇವರು ಕತ್ತಲೆಯಲ್ಲಿ ಅರಳಿ ಪರಿಮಳ ಬೀರುವ ಬ್ರಹ್ಮಕಮಲದಂಥವರು. ಪೂನಾ - ಬೆಂಗಳೂರು ರಸ್ತೆಯ ಮೇಲಿರುವ ಮೇ ನಲ್ಲರಳುವ ಮರದ  ಹೆಸರೊಂದನ್ನು ಸೂಚಿಸುವ ಸಕ್ಕರೆಯಂಥ ಪಟ್ಟಣದಲ್ಲಿ ಈ ಮಗನ ನೆನಪಿನ ಮಂಗಲಭವನ ವೆಂಬ ತಾಜ್ ಮಹಲ್  ರೂಪುಗೊಂಡಿದೆ. ಇಂಥವರು ನನ್ನ ಸ್ನೇಹಿತರಾದದ್ದು ನನ್ನ ಸೌಭಾಗ್ಯ.ಅವರ ಮಗನೀಗ ' ಕಲ್ ಭೀ ಪಾಸ್ ಪಾಸ್ ಥಾ, ............ವೋ ಆಜ್ ಭೀ ಕರೀಬ್ ಹೈ'...........