ಮಾಮೂಲು ಮಹಾತ್ಮೆಯಿಂದ ಮೂರು ರೂಪ ತೆಳೆದ ಫೈಲು – ಧಟ್ಸ್, ಇಂಡಿಯಾ!

ಮಾಮೂಲು ಮಹಾತ್ಮೆಯಿಂದ ಮೂರು ರೂಪ ತೆಳೆದ ಫೈಲು – ಧಟ್ಸ್, ಇಂಡಿಯಾ!

ಒಬ್ಬ ದೊಡ್ಡ ಉದ್ದಿಮೆದಾರನ ಫೈಲೊಂದು ಬಹಳ ದಿನಗಳಿಂದ ಸರ್ಕಾರಿ ಆಫೀಸಿನಲ್ಲಿ ಕೊಳೆಯುತ್ತಾ ಬಿದ್ದಿತ್ತು. ಆ ಉದ್ದಿಮೆದಾರ ತನ್ನ ಚೇಲಾನನ್ನು ಕಳುಹಿಸಿ ವಿಷಯವೇನೆಂದು ತಿಳಿದುಕೊಂಡು ಬರಲು ಹೇಳಿದ. ಅಲ್ಲಿ ಹೋಗಿ ಬಂದ ಅವನ ಚೇಲಾ ಅಲ್ಲಿ ಕೈಬೆಚ್ಚಗೆ ಮಾಡಿದರೆ ಕೆಲಸ ಆಗುವುದೆಂದೂ ಹೇಳಿದ, ಅದಕ್ಕೆ ಸಮ್ಮತಿಸಿದ ಆ ಉದ್ಯಮಪತಿ ಆಗಲಿ ಕೆಲಸ ಆದ ಮೇಲೆ ಅವರ ಮಾಮೂಲಿಯನ್ನು ಮುಟ್ಟಿಸೋಣವೆಂದು ಹೇಳಿದ. ಇದನ್ನು ಸಂಭಂದಪಟ್ಟ ಗುಮಾಸ್ತನಿಗೆ ಹೇಳಿದ್ದೇ ತಡ ಆ ಉದ್ಯಮಪತಿಯ ಕಡತ ಚಕಚಕನೆ ಓಡಾಡಿ ಸಂಭಂದಪಟ್ಟ ಅಧಿಕಾರಗಳೆಲ್ಲಾ ಅದಕ್ಕೆ ರುಜುಹಾಕಿ ಅಂತಿಮ ಆಣತಿಗಾಗಿ ಮುಖ್ಯಮಂತ್ರಿಗಳ ಟೇಬಲ್ ಮೇಲೆ ಕುಳಿತುಕೊಂಡಿತು. ಈ ಉದ್ದಿಮೆದಾರ ಅದಕ್ಕೆ ಸೂಕ್ತ ಸಂಭಾವನೆಯನ್ನು ಕೊಡುವ ವಿಷಯ ತಿಳಿದ ಮು.ಮ.ಯವರು ಅದಕ್ಕೆ SANCTIONED ಎಂದು ಆಮೋದ ಮುದ್ರೆಯನ್ನೊತ್ತಿದರು. ಈ ವಿಷಯ ತಿಳಿದ ಉದ್ಯಮಪತಿ ಇನ್ನೇನು ಕೆಲಸವಾಯಿತಲ್ಲ ಹಾಗಾಗಿ ರೊಕ್ಕ ಕೊಡುವ ಕೆಲಸವೇನಿದೆ ಎಂದು ಆ ಸಂಭಂದಪಟ್ಟ ಗುಮಾಸ್ತನ ಮುಂದೆ ನಕ್ಕು ಹೇಳಿದ. ಇವನು ಕೆಲಸ ಆದಮೇಲೆ ದುಡ್ಡು ಕೊಡದೆ ಕೈ ಎತ್ತುತ್ತಾನೆಂದು ಅರ್ಥಮಾಡಿಕೊಂಡ ಈ ಗುಮಾಸ್ತ ಅದನ್ನು ತನ್ನ ಮೇಲಧಿಕಾರಿಗೆ ತಿಳಿಸಿದ. ಕೂಡಲೇ ಆ ಮೇಲಧಿಕಾರಿ ಕಡತದ ಮೇಲಿದ್ದ SANCTIONED ಟಿಪ್ಪಣಿಯನ್ನು NOT SANCTIONED ಎಂದು ಮಾರ್ಪಡಿಸಿದ. ಇದನ್ನು ಆ ಗುಮಾಸ್ತನ ಮೂಲಕ ತಿಳಿದುಕೊಂಡ ಉದ್ಯಮಪತಿ ಬಾಯಿಮುಚ್ಚಿಕೊಂಡು ನಿಗಧಿಯಾಗಿದ್ದ ಹಣವನ್ನು ತಂದು ಕೊಟ್ಟ. ಇದನ್ನು ಪುನಃ ತನ್ನ ಮೇಲಧಿಕಾರಿಯ ಬಳಿಗೆ ಒಯ್ದ ಗುಮಾಸ್ತ, ಆಗ ಆ ಮೇಲಧಿಕಾರಿ ಅದೇ ಕಡತವನ್ನು ಈ ರೀತಿ ತಿದ್ದಿದ, NOTE: SANCTIONED. ಹೀಗೆ ಒಂದೇ ಕಡತ ಲಕ್ಷ್ಮೀಕಟಾಕ್ಷದಿಂದಾಗಿ ಮೂರು ರೂಪಗಳನ್ನು ತೆಳೆಯಿತು.
(ಇದು ನೀಲಂ ಸಂಜೀವ ರೆಡ್ಡಿಯವರು ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ನಡೆದ ಘಟನೆ ಎಂದು ಕೆಲವರು ಹೇಳುತ್ತಾರೆ.)

Comments

Submitted by venkatb83 Sat, 09/22/2012 - 18:26

ಜೀ ಸಖತ್....

ಇದೇನು ಸುಳಲ್ಲ ಬಿಡಿ , ಕಾಸಿದ್ದರೆ ಏನೇನೋ ಇನ್ನೇನೋ ಆಗ್ವುದು.. ಕೆಲವೇ ಪದಗಳನ್ನು ಬದಲಾಯಿಸದರೆ ಎಸ್ಟೊಂದು ಅರ್ಥ..! ಅಬ್ಬ... ಈ ಸರಕಾರೀ ನೌಕರರರು ಪ್ರಮುಖರು ಎಸ್ಟೊಂದು ಶಕ್ತಿವಂತರು !! ಬುದ್ಧಿವಂತರು... ತಂತ್ರಿಗಳು ಕುತಂತ್ರಿಗಳು.. !! (ಇದು ಅಂಥವರಿಗೆ ಮಾತ್ರ ಹೇಳಿದ್ದು!!)...

ನಿಮ್ಮ ಬರಹಗಳ ಮೂಲಕ ನಮಗೆ ನಮಗಿಂತ ಪೂರ್ವ ಕಾಲದ ಹತ್ತು ಹಲವು ಮಾಹಿತಿ ಸಿಗುತ್ತಿವೆ.. ಜ್ಞಾನ ಬೆಳೆಯುತ್ತಿದೆ.. ಹಂಚುವಿಕೆ ಜ್ಞಾನ ಪ್ರಸಾರ ಒಳ್ಳೆಯದು...!!

ಶುಭವಾಗಲಿ

ಶುಭ ಸಂಜೆ..

ನನ್ನಿ

\|

Submitted by makara Sat, 09/22/2012 - 21:16

In reply to by venkatb83

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು, ಸಪ್ತಗಿರಿಗಳೆ. ಅಂತೂ ನನ್ನ ನಿಜವಾದ ಹೆಸರನ್ನು ಕಂಡು ಹಿಡಿದಿರಲ್ಲ! ಇಲ್ಲದಿದ್ದರೆ ನನ್ನ ಯೂಸರ್ ನೇಮಿನಿಂದ ಮಕರ ಎಂದೇ ಕರೆಯುತ್ತೀರೇನೋ ಅಂದುಕೊಂಡಿದ್ದೆ. ಹಿಂದಿನ ಬರಹದ ಪ್ರತಿಕ್ರಿಯೆ ನೋಡಿ. ಶುಭದಿನ :))