ಹಕ್ಕಿಗಳು

ಹಕ್ಕಿಗಳು

ಕವನ

೧೨.೧೨.೨೦೦೨ ರಲ್ಲಿ ಬರೆದ ಪದ್ಯ

ಹಕ್ಕಿಗಳು

ಹಾರುತಿವೆ ಹಕ್ಕಿಗಳ ಸಾಲು ಸಾಲು
ಬಣ್ಣವದೋ ಹಾಲು ಹಾಲು
ಏರುತಿವೆ ಬಾನೆತ್ತರಕೆ, ಹಾರುತಿವೆ ರವಿಯತ್ತಿರಕೆ
ಮುಸ್ಸಂಜೆಯ ಹೊಂಬಣ್ಣದ ಕಿರಣಗಳು
ಮುತ್ತಿಕ್ಕಿವೆ ಆ ಹಕ್ಕಿಗಳ ಹಿಂಡ
ಕಂಡದನು ಕುಣಿದಾಡಿದೆ ಈ ಮನ
ಹೇಳುತಿದೆ ನೂರೊಂದು ನಮನ
ಇದಕ್ಕಿಲ್ಲ ಯಾವುದೂ ಸಮಾನ

ಬಾನಾಡಿಗಳ ಆ ಹಾಡು
ಹೋಲಿಕೆಯಿಲ್ಲದ ಕಾವ್ಯ
ತಲೆದೂಗಿದೆ; ಮನತೂಗಿದೆ
ಆ ಸಿರಿಯ ಚೆಲುವಿಗೆ
ಮುದ ನೀಡಿದೆ ಈ ಮನಸಿಗೆ
ಅದಕೇಳಿದೆ ಸಹಸ್ತ್ರ ನಮನ

ಪಿಸುಮಾತಿನಲಿ ಬಾನಾಡಿಗಳಿಗೆ
ಹೇಳಿದೆ ನಾ ಹೇಳಿದೆ ನಾ
ನನ್ನನೂ ನಿಮ್ಮೊಡನೆ ಕರೆದೊಯ್ಯಿರಿ
ಬಾನೆತ್ತರಕೆ, ರವಿಯತ್ತಿರಕೆ

ಸೇರಿಸಿದೆ ನನ್ನುಸಿರ ಆ ಚಿಲಿಪಿಲಿಯ
ಉಸಿರೊಳು, ನನ್ನ ನಾನೇ ಮರೆತೆ
ಆ ಸಂತಸದ ಕ್ಷಣದಿ
ಬೆರೆತು ಹೋಗಿದ್ದೆ ಬಾನಾಡಿಗಳ
ಆ ಹಾಡಿನೊಳು ಆ ಹಾಡಿನೊಳು
ಅದಕೇಳಿದೆ ಬಾನಾಡಿಗಳಿಗೆ ಕೋಟಿ ನಮನ

ನಾಡನ್ನೆ ಮರೆತಿದ್ದೆ ಹಾಡೊಂದ
ಕಟ್ಟಿದ್ದೆ ಆನಂದದಿಂದ, ಆ ಅಂದ
ಆ ಚೆಂದ ನಾನೆಂದು ಮರೆಯಲ್ಲ
ಬೆರೆತು ಹೋಗಿದೆ ನನ್ನುಸಿರಿ
ಆ ಹಸಿರ ಸಿರಿಯಲಿ, ಆ
ರವಿಯ ಸನಿಹದಲಿ, ಬಾನಾಡಿಗಳ
ಬಳಗದಲಿ, ಬೆಳಗುತಿದೆ ದಿವ್ಯ ಜ್ಯೋತಿ

ಬಳಲಿಕೆಯು ಎನಗಿಲ್ಲ
ಅಗಲಿಕೆಯು ಮೊದಲಿಲ್ಲ
ಇನ್ನೇಕೆ ನಾ ಅಳಲಿ?
ಆ ನನ್ನ ಹಕ್ಕಿಗಳು ನನ್ನೊಡನಿರುವಾಗ,
ಮರೆಯಲ್ಲ ಮರೆಯಲ್ಲ ಈ ನಿಮ್ಮ ಸಂಗ
ತೊರೆಯಲ್ಲ ತೊರೆಯಲ್ಲ ಈ ನಿಮ್ಮ ಸಂಗ
ನಿಮ್ಮೊಡನೆ ನಾನು; ಸಂತೈಸಿ ನನ್ನ
ಓ ನನ್ನ ಹಕ್ಕಿಗಳೆ ಸಂತೈಸಿ ಎನ್ನ

ನಮಿಸುವೆನು ನಿಮ್ಮ ನಾ
ನಮಿಸುವೆನು ನಿಮ್ಮ
ಅದಕೇಳುವೆ ನಿಮಗೆ ಅನಂತ ನಮನ
ಅನಂತಾನಂತ ನಮನ