ನಾರ್ಕೊಂಡಮ್ ಹಾರ್ನ್‌ಬಿಲ್

ನಾರ್ಕೊಂಡಮ್ ಹಾರ್ನ್‌ಬಿಲ್

ಭಾರತ ತನ್ನ ವನ್ಯಜೀವ ವೈವಿಧ್ಯಕ್ಕೆ ಹೆಸರುವಾಸಿ. ಇಲ್ಲಿನ ಅನೇಕ ಜೀವಿಗಳು ಪ್ರಪಂಚದಲ್ಲಿಯೆ ವಿಶಿಷ್ಟ ಬಗೆಯವು. ಈ ದೇಶದಲ್ಲಿ ೧೨೦೦ ಬಗೆಯ ಪಕ್ಷಿ ಪ್ರಬೇಧವಿದೆ. ಇದರಲ್ಲಿ ಹಲವು ಭಾರತ ಉಪಖಂಡಕ್ಕೆ ಮಾತ್ರ ಸೀಮಿತವಾಗಿರುವಂತಹುದು. ಪ್ರಪಂಚದಲ್ಲಿಯೆ ಅತ್ಯಂತ ಸುಂದರ ಪಕ್ಷಿ ಎಂದು ಕರೆಸಿಕೊಳ್ಳುವ ನವಿಲು, ಇಲ್ಲಿನ ಸಾಮಾನ್ಯ ಪಕ್ಷಿ. ಹಾಗೆಯೆ ಅತ್ಯಂತ ಅಪರೂಪದ ಪಕ್ಷಿಗಳು ಭಾರತದಲ್ಲಿ ಕಂಡು ಬರುತ್ತವೆ.

ನಮ್ಮ ದೇಶದ ದ್ವೀಪ ಸಮೂಹವಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ವೈವಿಧ್ಯಮಯ ಜೀವರಾಶಿಯನ್ನು ಹೊಂದಿದೆ. ಇಲ್ಲಿನ ಜೀವಿಗಳು ಭಾರತ ಮುಖ್ಯಪ್ರದೇಶಕ್ಕಿಂತ ಭಿನ್ನವಾದುದ್ದು. ಅಲ್ಲಿನ ಅನೇಕ ಹಕ್ಕಿಗಳು ಅಲ್ಲಿನ ಪರಿಸರಕ್ಕೆ ಸೀಮಿತವಾಗಿರುವಂತಹುದು. ಅಂತಹ ಒಂದು ಹಕ್ಕಿ ನಾರ್ಕೊಂಡಮ್ ಹಾರ್ನ್‌ಬಿಲ್.

ನಾರ್ಕೊಂಡಮ್ ಹಾರ್ನ್‌ಬಿಲ್ ಅಥವಾ ನಾರ್ಕೊಂಡಮ್ ಮಂಗಟ್ಟೆ , ನಾರ್ಕೊಂಡಮ್ ಎನ್ನುವ ದ್ವೀಪದಲ್ಲಿ ಕಂಡು ಬರುತ್ತದೆ. ಅಂಡಮಾನ್ ದ್ವೀಪ ಸಮೂಹದಲ್ಲಿಯೆ ಒಂದೆಂದು ಪರಿಗಣಿಸಲ್ಪಟ್ಟಿರುವ ನಾರ್ಕೊಂಡಮ್, ಪೋರ್ಟ್‌ಬ್ಲೇರ್ ನಿಂದ ಪೂರ್ವಕ್ಕೆ ೧೬೦ ಮೈಲಿ ದೂರದಲ್ಲಿದೆ. ಈ ಹೆಸರು ಸಂಸ್ಕೃತದಿಂದ ಬಂದಿದೆ ಎನ್ನಲಾಗಿದೆ (ನರಕ + ಕುಂಡಮ್ ) . ಈ ದ್ವೀಪ, ಜ್ವಾಲಾಮುಖಿ ದ್ವೀಪ (volcanic island) ಆದರೆ ಅನೇಕ ವರ್ಷಗಳಿಂದ ಇಲ್ಲಿ ಜ್ವಾಲಮುಖಿಯ ಕುರುಹುಗಳು ಇಲ್ಲದಿರುವುದರಿಂದ ಇದನ್ನು ನಿಷ್ಕ್ರಿಯವೆಂದು (inactive) ಪರಿಗಣಿಸಲಾಗಿದೆ. ೧೯೮೬ರವರೆಗೂ ಮ್ಯಾನ್ಮಾರ್ ಈ ದ್ವೀಪ ತನ್ನದೆಂದು ಹೇಳುತಿತ್ತು. ಆದರೆ ಭಾರತದೊಂದಿಗಿನ ಒಪ್ಪಂದದ ಪ್ರಕಾರ ಈ ದ್ವೀಪವನ್ನು ಕೈಬಿಟ್ಟಿತು. ನಾರ್ಕೊಂಡಮ್ ನ ಅತಿ ಎತ್ತರದ ಶಿಖರ ೭೧೦ ಮೀ ನಷ್ಟಿದೆ. ಈ ದ್ವೀಪದ ವ್ಯಾಪ್ತಿ ಸುಮಾರು ೬.೮ ಚ.ಕಿ.ಮೀ ನಷ್ಟಿದೆ.

ಭಾರತದಲ್ಲಿ ಸುಮಾರು ಹನ್ನೊಂದು ಬಗೆಯ ಮಂಗಟ್ಟೆಗಳು ಕಾಣಸಿಗುತ್ತವೆ. ಅದರಲ್ಲಿ ಅತ್ಯಂತ ಅಪರೂಪದ ಮಂಗಟ್ಟೆಯೆಂದರೆ ಅದು ನಾರ್ಕೊಂಡಮ್ ಮಂಗಟ್ಟೆ. ಈ ಪಕ್ಷಿಯ ಗಾತ್ರ ಸುಮಾರು 45 ಸೆಂ.ಮೀ. ನಷ್ಟಿರುತ್ತದೆ. ಹೆಣ್ಣು ಮತ್ತು ಗಂಡಿನ ಬಣ್ಣದಲ್ಲಿ ವ್ಯತ್ಯಾಸವಿರುತ್ತದೆ (Dimorphic). ಗಂಡಿಗೆ ತಲೆ ಮತ್ತು ಕುತ್ತಿಗೆ ಗಾಢ ಕೇಸರಿ ಬಣ್ಣದಿಂದ ಕೂಡಿರುತ್ತದೆ. ರೆಕ್ಕೆಗಳು ಗಾಢ ಹಸಿರು, ಕಪ್ಪು ದೇಹ ಮತ್ತು ಬಿಳಿ ಬಾಲ ಹೊಂದಿರುತ್ತದೆ. ಹೆಣ್ಣಿನ ದೇಹ ಸಂಪೂರ್ಣವಾಗಿ ಕಪ್ಪಗಿದ್ದು, ಬಿಳಿ ಬಾಲ ಹೊಂದಿರುತ್ತದೆ. ಗಂಡಿನ ಕಣ್ಣು ಕೆಂಪು ಬಣ್ಣದಾಗಿದ್ದರೆ, ಹೆಣ್ಣಿನ ಕಣ್ಣು ಕಂದು ಬಣ್ಣದಿಂದ ಕೂಡಿರುತ್ತದೆ ಮತ್ತು ಕಣ್ಣಿನ ಸುತ್ತ ಚರ್ಮ ನೀಲಿ ಬಣ್ಣವನ್ನು ಹೊಂದಿರುತ್ತದೆ. ಕೊಕ್ಕು ಹಳದಿ ಮತ್ತು ಕೆಂಪು ಮಿಶ್ರಿತವಾಗಿರುತ್ತದೆ. ಕಾಲುಗಳ ಬಣ್ಣ ಕಪ್ಪು. ಈ ಹಕ್ಕಿಯನ್ನು ಮೊದಲು ವರ್ಣಿಸಿದ ಜೀವವಿಜ್ಞಾನಿ ’ಅಲ್ಲನ್ ಆಕ್ಟೆವಿಯನ್ ಹ್ಯೂಮ್’.

ನಾರ್ಕೊಂಡಮ್ ದ್ವೀಪ ಜನವಸತಿ ರಹಿತವಾದ ದ್ವೀಪ. ಈ ಚಿಕ್ಕ ದ್ವೀಪಕ್ಕೆ ಮಾತ್ರ ಸೀಮಿತವಾಗಿರುವ ನಾರ್ಕೊಂಡಮ್ ಮಂಗಟ್ಟೆ, ಸಂಖ್ಯೆಯಲ್ಲಿ ಅಧಿಕವಾಗಿರಲಾರದು. ೨೦೦೦ದಲ್ಲಿ ನಡೆಸಿದ ಗಣತಿಯಂತೆ ಇಲ್ಲಿ ಸುಮಾರು ೪೩೪ ಹಕ್ಕಿಗಳಿರಬಹುದು ಎಂದು ಅಂದಾಜಿಸಲಾಗಿತ್ತು. ಅಂದರೆ ಪ್ರತಿ ಚದರ ಕಿ.ಮೀ.ಗೆ ಸುಮಾರು ೬೩ ಹಕ್ಕಿಗಳಷ್ಟು ಸಾಂದ್ರತೆಯನ್ನು ಹೊಂದಿದೆ. ೨೦೦೯ರಲ್ಲಿ ಈ ಹಕ್ಕಿಯನ್ನು ಅಪಾಯಕ್ಕೆ ಒಳಗಾಗಿರುವ ಜೀವಿ (endangered) ಎಂದು ವರ್ಗೀಕರಿಸಲಾಯಿತು.

ಈ ಹಕ್ಕಿಯನ್ನು ಕುರಿತು ಮೊದಲಬಾರಿಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಿದವರು ನಮ್ಮ ಕರ್ನಾಟಕದವರೆ ಆದ ಎಸ್.ಎ.ಹುಸೇನ್ ಅವರು. ೧೯೭೨ರಲ್ಲಿ ನಾರ್ಕೊಂಡಮ್ ದ್ವೀಪಕ್ಕೆ ತೆರಳಿ ಈ ಹಕ್ಕಿಯ ಬಗ್ಗೆ ವಿವರವಾದ ಅಧ್ಯಯನ ನಡೆಸಿದರು. ಅಷ್ಟೆ ಅಲ್ಲದೆ, ಹಿಂತಿರುಗವಾಗ ಒಂದು ಗಂಡು ಹಾಗು ಹೆಣ್ಣು ಹಕ್ಕಿ ಮತ್ತು ಮರಿಗಳನ್ನು ಬಂಧಿಸಿ ತಂದರು. ಗಂಡು ಹಕ್ಕಿ ಹಡಗಿನ ಪ್ರಯಾಣದಲ್ಲಿ ಮೃತ ಪಟ್ಟರೆ, ಹೆಣ್ಣು ಹಕ್ಕಿ ಚೆನೈನಲ್ಲಿ ತಪ್ಪಿಸಿಕೊಂಡಿತು. ಎರಡು ಮರಿಗಳು ಮಾತ್ರ ಆರು ವರ್ಷಗಳ ಕಾಲ ಬದುಕುಳಿದವು.

ದ್ವೀಪಗಳಲ್ಲಿ ವಾಸಿಸುವ ಜೀವಿಗಳು, ಅತ್ಯಂತ ಸೂಕ್ಷ್ಮವಾಗಿರುತ್ತವೆ, ಹಲವು ಸಹಸ್ರ, ಲಕ್ಷ ಅಥವಾ ಕೋಟಿ ವರ್ಷಗಳು ಇವು ಪ್ರತ್ಯೇಕವಾಗಿ ವಿಕಾಸ ಹೊಂದಿರುತ್ತವೆ. ಈ ಕಾರಣದಿಂದಾಗಿ ಇವು ತಮ್ಮ ಅಪಾಯವನ್ನು ಎಚ್ಚರಿಕೆಯಿಂದ ಎದುರಿಸಬೇಕಾದ ಸಾಮರ್ಥ್ಯವನ್ನೆ ಕಳೆದುಕೊಂಡು ಬಿಡುತ್ತವೆ. ಕಳೆದ ೫೦೦ ವರ್ಷಗಳಲ್ಲಿ ಈ ಧರೆಯಿಂದ ಕಣ್ಮರೆಯಾಗಿರುವ ಜೀವಿಗಳ ಪೈಕಿ ದ್ವೀಪವಾಸಿಗಳ ಪಾಲೆ ಅಧಿಕ.

ಇದಕ್ಕೆ ಕಾರಣ ಮನುಷ್ಯ!! ೫೦೦ ವರ್ಷಗಳ ಹಿಂದೆ ಮಾನವ ತನ್ನ ಪ್ರಪಂಚದ ಸುತ್ತೆಲ ಹಡಗಿನಲ್ಲಿ ಸಂಚಾರ ಮಾಡಲು ಶುರು ಮಾಡಿದ. ಈ ಸಮಯದಲ್ಲಿ ಅನೇಕ ವರ್ಷಗಳ ಕಾಲ ಅಥವಾ ಎಂದಿಗೂ ತನ್ನ ಸಂಪರ್ಕಕ್ಕೆ ಸಿಗದಿದ್ದ ದ್ವೀಪಗಳನ್ನು ನೆಲೆಯಾಗಿಸಿಕೊಂಡ. ಅವನೊಡನೆ ಇಲಿ, ಬೆಕ್ಕು, ನಾಯಿ, ಹೆಗ್ಗಣ, ಕುರಿ, ಮೇಕೆ, ಕಾಗೆ, ಹಂದಿ, ಮುಂಗಸಿ ಇನ್ನು ಮುಂತಾದ ಜೀವಿಗಳು ಸಹ ದ್ವೀಪಗಳಿಗೆ ಲಗ್ಗೆ ಇಟ್ಟವು. ಈ ಪ್ರಾಣಿಗಳು ಅಲ್ಲಿ ಕೋಟ್ಯಾಂತರ ವರ್ಷಗಳಿಂದ ಜೀವಿಸಿದ್ದ ಸಾಧು ಸ್ವಭಾವದ ಜೀವಿಗಳ ಮೇಲೆ ಆಕ್ರಮಣ ಮಾಡಿ, ಅವನ್ನು ಕಣ್ಮರೆಯಾಗಿಸಿದವು. ನಮಗೆಲ್ಲ ತಿಳಿದಂತೆ ಡೋಡೊ ಇದಕ್ಕೊಂದು ಸ್ಪಷ್ಟ ಉದಾಹರಣೆ.

೧೯೯೧ರಲ್ಲಿ ಈ ದ್ವೀಪಕ್ಕೆ ಭೇಟಿಯಿತ್ತ ಹುಸೇನ್ ರವರು ಅಲ್ಲಿ ಅನೇಕ ಬದಲಾವಣೆಯನ್ನು ಕಂಡರು. ಹಿಂದೆ ಅವರು ಭೇಟಿಕೊಟ್ಟಾಗ ಅಲ್ಲಿ ಚಿಕ್ಕದಾದ ಒಂದು ಪೊಲೀಸ್ ಔಟ್-ಪೋಸ್ಟ್ ಮಾತ್ರ ಇದ್ದಿತು. ಆದರೆ ೧೯೯೧ರ ಹೊತ್ತಿಗೆ ಅಲ್ಲಿದ್ದ ಪೊಲೀಸಿನವರು ತಮ್ಮ ಆಹಾರಕ್ಕೆಂದು ಅಲ್ಲಿ ತರಕಾರಿಯನ್ನು ಬೆಳೆಯುತ್ತಿದ್ದರು. ಇಷ್ಟುಮಾತ್ರ ಸಾಲದೆ, ಮಾಂಸಹಾರಕ್ಕಾಗಿ ಅಲ್ಲಿಗೆ ಕರೆಸಿಕೊಂಡಿದ್ದ ಆಡುಗಳ ಸಂಖ್ಯೆ ಸುಮಾರು ೪೦೦ರಷ್ಟು ಆಗಿತ್ತು. ಈ ಆಡುಗಳು ಅಲ್ಲಿದ್ದ ಸ್ವಾಭಾವಿಕ ಸಸ್ಯಗಳನ್ನು ಎಗ್ಗಿಲ್ಲದೆ ಮೇಯ್ದು ಹಾಕಿದ್ದವು. ಇದಲ್ಲದೆ ಆಡಿಗಾಗಿ ಮರಗಳಿಂದಲು ಸೊಪ್ಪನ್ನು ಕತ್ತರಿಸಲಾಗುತ್ತಿತ್ತು. ಸಾಮಾನ್ಯವಾಗಿ ಮಂಗಟ್ಟೆಗಳು ಅನೇಕ ಹಣ್ಣುಗಳನ್ನು ತಿನ್ನಲಾರದೆ ಹಾಗೆಯೆ ಚೆಲ್ಲಿ ಬಿಡುತ್ತವೆ. ಚೆಲ್ಲಿದ ಹಣ್ಣುಗಲಿಂದ ಬೀಜ ಮೊಳೆತು ಹೊಸಗಿಡ ಚಿಗುರುತ್ತವೆ. ಆದರೆ ನಾರ್ಕೊಂಡಮ್ ನಲ್ಲಿದ್ದ ಆಡುಗಳು ಈ ಹಣ್ಣುಗಳನ್ನು ತಿಂದುಬಿಡುತ್ತಿದ್ದರಿಂದ ಹೊಸಗಿಡ ಚಿಗುರುವುದು ಕಷ್ಟವಾಗುತಿತ್ತು. ಇದಲ್ಲದೆ ಮನುಷ್ಯನಿಂದಾಗಿ ಆಗಲೆ ಯುಪಟೋರಿಯಮ್ ನಂತಹ ಆಕ್ರಮಣಕಾರಿ ಸಸ್ಯಗಳು ದ್ವೀಪದಲ್ಲಿ ಮನೆ ಮಾಡಿದ್ದವು. ಇತ್ತೀಚಿಗೆ ಅಲ್ಲಿನ ಅರಣ್ಯ ಇಲಾಖೆ ಆಡುಗಳನೆಲ್ಲ ತರವುಗೊಳಿಸಲಾಗಿದೆ ಎಂದು ಹೇಳಿಕೊಂಡಿದೆಯಾದರು ಮತ್ತೆ ಆಡಿನ ಇರವು ಕೇಳಿಬಂದಿದೆ.

ಈಗ ಇಲ್ಲಿನ ಹೊಸ ಸಮಸ್ಯೆಯೆಂದರೆ, ಭಾರತೀಯ ತೀರ ಪಡೆ (Indian Coast Guard) ನಾರ್ಕೊಂಡಮ್ ನಲ್ಲಿ ರೆಡಾರ್ ಮತ್ತು ಡೀಸೆಲ್ ವಿದ್ಯುತ್ ಉತ್ಪಾದಕವನ್ನು(Diesel Power Generator) ಸ್ಥಾಪಿಸಿಬೇಕೆಂಬ ಯೋಜನೆಯನ್ನು ಹಾಕಿಕೊಂಡಿದೆ. ಇದಕ್ಕೆಂದು ಅಲ್ಲಿ ಎರಡು ಕಿ.ಮೀ. ಉದ್ದದ ರಸ್ತೆಯನ್ನು ನಿರ್ಮಿಸಬೇಕಾಗುತ್ತದೆ. ಇಷ್ಟನ್ನು ಮಾಡಬೇಕಾದರೆ ಅಲ್ಲಿ ನೂರಾರು ಮರಗಳನ್ನು ಕಡೆಯಬೇಕು ಮತ್ತು ಅಲ್ಲಿಗೆ ಬರುವ ಕೆಲಸಗಾರರ ಉರುವಲಿಗಾಗಿ ಇನ್ನಷ್ಟು ಮರಗಳು ಬಲಿಯಾಗುತ್ತವೆ. ನೂರಾರು ಜನ ಕೆಲಸಗಾರರು ಇಲ್ಲಿ ಬೀಡು ಬಿಟ್ಟರೆ, ಪರಿಸರ ಮಲಿನವಾಗಿ ದ್ವೀಪ ತನ್ನ ಶುಚಿತ್ವವನ್ನು ಕಳೆದು ಕೊಳ್ಳುತ್ತದೆ. ಕೇವಲ ಒಂದು ಪೊಲೀಸ್ ಔಟ್-ಪೋಸ್ಟ್ ನಿಂದಾಗಿಯೆ ಸಾಕಷ್ಚು ಹಾನಿಗೊಳಗಾದ ನಾರ್ಕೊಂಡಮ್ ಇನ್ನು ಇಂತಹ ದೊಡ್ಡ ಯೋಜನೆಯಿಂದ ಇನ್ನೆಷ್ಚು ಹಾನಿಗೊಳಗಾಗುತ್ತದೆಯೊ ಇದೆಲ್ಲದರ ಪರಿಣಾಮ ಅಲ್ಲಿನ ಜೀವ ಸಂಕುಲದ ಮೇಲಾಗುತ್ತದೆ. ಸದ್ಯಕ್ಕೆ ಈ ಯೋಜನೆ ಕೇಂದ್ರ ಪರಿಸರ ಸಚಿವರ ಅನುಮತಿಗಾಗಿ ಕಾಯುತ್ತಿದೆ.

ಒಮ್ಮೆ ಇಲ್ಲಿನ ಜೀವ ಸಂಕುಲಕ್ಕೆ ಕುತ್ತು ಬಂದರೆ ಅದರ ಮೇಲೆ ಸಂಪೂರ್ಣವಾಗಿ ಅವಲಂಬಿಸಿರುವ ನಾರ್ಕೊಂಡಮ್ ಮಂಗಟ್ಟೆ ನಿರ್ನಾಮವಾಗುವದರಲ್ಲಿ ಯಾವುದೆ ಸಂಶಯವಿಲ್ಲ.