ಪುಸ್ತಕ ಪರಿಚಯ: ಹೊಸ ಪುಸ್ತಕ-ಗೂಬಜ್ಜಿಯ ಗೊರಕೆ-ಮಕ್ಕಳ ಸಾಹಿತ್ಯ, ಲೇಖಕರು ಶ್ರೀ ಎನ್ ಶ್ರೀನಿವಾಸ ಉಡುಪ

ಪುಸ್ತಕ ಪರಿಚಯ: ಹೊಸ ಪುಸ್ತಕ-ಗೂಬಜ್ಜಿಯ ಗೊರಕೆ-ಮಕ್ಕಳ ಸಾಹಿತ್ಯ, ಲೇಖಕರು ಶ್ರೀ ಎನ್ ಶ್ರೀನಿವಾಸ ಉಡುಪ

‘ಗೂಬಜ್ಜಿಯ ಗೊರಕೆ’ ಇತ್ತೀಚೆಗೆ ಪ್ರಕಟಗೊಂಡ ಎಸ್.ಶ್ರೀನಿವಾಸ ಉಡುಪರವರ ‘ಗೂಬಜ್ಜಿಯ ಗೊರಕೆ’ ಮಕ್ಕಳ ಸಾಹಿತ್ಯ ಕೃತಿ ಓದಿದೆ. ತುಂಬ ಇಷ್ಟವಾಯ್ತು. ಲೇಖಕರು ಮಕ್ಕಳ ಸಾಹಿತ್ಯ ಪ್ರಕಾರದಲ್ಲಿ ಈಗಾಗಲೇ ಹಲವಾರು ಪುಸ್ತಕಗಳನ್ನು ಬರೆದಿರುವವರು. ಇವರ ಕೃತಿಗಳಿಗೆ ಸಾಹಿತ್ಯ ಅಕಾಡೆಮಿ, ಪುಸ್ತಕ ಸೊಗಸು, ಶಿವರಾಮಕಾರಂತ ಪ್ರಶಸ್ತಿಗಳು ಲಭಿಸಿವೆ. ಪ್ರಜಾವಾಣಿ ದೀಪಾವಳಿ ವಿಶೇಷಾಂಕದ ಮಕ್ಕಳ ಕವಿತಾ ಸ್ಪರ್ಧೆಯಲ್ಲಿ ಹಲವಾರು ಬಾರಿ ಪ್ರಥಮ ಬಹುಮಾನ ಪಡೆದಿದ್ದಾರೆ. ‘ಗೂಬಜ್ಜಿಯಗೊರಕೆ’ ಮಕ್ಕಳ ಕಥಾ ಸಂಕಲನ ಪ್ರಾಥಮಿಕ ಶಾಲಾ ಹಂತದ ಮಕ್ಕಳಿಗಾಗಿ ರಚಿಸಿದ್ದಾರೆ. ಓದಿ ಮುಗಿಸಿದಾಗ ಬಿರಿದರಳಿದ ಸುಗಂಧ ಆಘ್ರಾಣಿಸಿದ ಆಹ್ಲಾದಕರ ಮುದ ಮನಸ್ಸಿಗಾಯಿತು. ಅದೇ ಪುಸ್ತಕದ ಬಗ್ಗೆ ಬರೆಯಲು ಪ್ರೇರೇಪಿಸಿತು. ಇದರಲ್ಲಿರುವ ಏಳು ಕತೆಗಳಲ್ಲಿ ಹೆಚ್ಚುನವುಗಳಲ್ಲಿ ಪ್ರಾಣಿಗಳೇ ಮುಖ್ಯ ಪಾತ್ರಧಾರರು. ಒಂದೆರಡು ಕತೆಗಳಲ್ಲಿ ವ್ಯಕ್ತಿಗಳು ಪ್ರಧಾನಪಾತ್ರವಾಗಿದ್ದರೂ ಪ್ರಾಣಿಗಳ ವಿಶೇಷ ಕೈವಾಡ ಆ ಕತೆಗಳಲ್ಲಿ ಇದ್ದೇ ಇದೆ. ಅದರಲ್ಲೂ ವಿಶೇಷವಾಗಿ ಕಾಡು ಪ್ರಾಣಿಗಳೆಂದರೆ ಅವುಗಳ ಬಗ್ಗೆ ಮಕ್ಕಳು ಕೇಳಿ, ಓದಿ ತಿಳಿಯಬೇಕಾದ್ದರಿಂದ ಅವುಗಳ ಕುರಿತು ಮಕ್ಕಳಲ್ಲಿ ವಿಶೇಷವಾದ ಕುತೂಹಲ ಇರುತ್ತದೆ. ಈ ಪುಟ್ಟ ಪುಸ್ತಕದ ಪುಟ ಪುಟಗಳಲ್ಲಿ ನಾವು ಹಲವಾರು ಕಾಡು ಪ್ರಾಣಿ ಪಕ್ಷಿಗಳನ್ನು ಭೇಟಿಯಾಗುತ್ತೇವೆ. ಇಲ್ಲಿನ ಕಾಡುಪ್ರಾಣಿಗಳಲ್ಲಿ ಮೊದಲಿನ ‘ಆಮೆಚಿಪ್ಪು’ ಕತೆಯ ದುರಾಸೆಯ ಕುತಂತ್ರಿ ಆಮೆಯ ಹೊರತಾಗಿ ಉಳಿದೆಲ್ಲ ಹತ್ತು ಹಲವಾರು ಪ್ರಾಣಿಗಳೂ ಪರಸ್ಪರ ಸಹಕರಿಸುತ್ತವೆ.‘ಅಂತೂ ಮನೆಗೆ ಬಂತು’ ಕತೆಯಲ್ಲಿ ತುಂಟ ಇರುವೆ ಮರಿ ಮನೆಯ ದಾರಿ ತಪ್ಪಿಸಿಕೊಂಡು ಪುನಃ ತನ್ನ ಮನೆ ಸೇರಲು ಹಲವಾರು ಪ್ರಾಣಿಗಳು ಸಹಕರಿಸುತ್ತವೆ. ಹಸಿರು ಅಂಗುಲ ಹುಳು, ಜೇಡ, ಜೀರುಂಡೆ, ಚಿಕ್ಕಾಡು, ಮಿಡತೆ, ಕಪ್ಪೆ ಹೀಗೆ ಈ ಪ್ರಾಣಿಗಳೆಲ್ಲ ಇರುವೆ ಮರೀನ ತಮ್ಮ ಬೆನ್ನ ಮೇಲೆ ಹೊತ್ತು ಅದರ ಮನೆ ಸೇರಿಸುತ್ತವೆ. ಪ್ರತಿಯೊಂದು ಪ್ರಾಣಿಯ ವಿಶಿಷ್ಟ ನಡಿಗೆ, ಅದರ ಸಾಮರ್ಥ್ಯ, ಸಾಮರ್ಥ್ಯದ ಇತಿಮಿತಿಯಲ್ಲಿಯೇ ಪರೋಪಕಾರದ ಅವುಗಳ ಗುಣ ಮನಸ್ಸಿಗೆ ಹಿತವಾದ ಭಾವ ಮೂಡಿಸುತ್ತದೆ.‘ನಂ ತಪ್ಪಲ್ಲ’ ಕತೆಯಲ್ಲಿ ನಾಯಕ ಎಡವಟ್ಟಣ್ಣನ ಒಡನಾಟದ ಪಾತ್ರಧಾರಿಗಳು ಹಕ್ಕಿ, ಕಾಡುಬೆಕ್ಕು, ಆನೆ, ಮೊಲ ಮುಂತಾದ ಪ್ರಾಣಿಗಳು. ತಿಳಿ ಹಾಸ್ಯದ ಸೂತ್ರವೇ,ಈ ಕತೆಯ ಜೀವಾಳ. ಮುಖದ ಮೇಲೆ ಮಂದಹಾಸ ಮೂಡಿಸುತ್ತಾ ಸಾಗುವ ಕತೆಯ ಓದು, ಕೊನೆಯಲ್ಲಿ ಪಕಪಕನೆ ನಗದಿದ್ದರೆ ಆಗದು ಎನಿಸುವಂತೆ ನಗೆಯ ಬಾಂಬ್ ಸಿಡಿಸುತ್ತದೆ. ಶೀರ್ಷಿಕೆಯ ಕತೆ ‘ಗೂಬಜ್ಜಿಯ ಗೊರಕೆ’ ಕೂಡ ಹಾಸ್ಯ ಪ್ರಧಾನ ಕತೆ. ನೀತಿ ನಿರೂಪಣೆಯ ಭಾರ ಈ ಕತೆಗಳಿಗಿಲ್ಲವಾದರೂ ಇಲ್ಲಿನ ಕತೆಗಳು ಮಗುವನ್ನು ಪ್ರಕೃತಿಯ ಮಡಿಲಿಗೆ, ಪರಿಸರದ ಅರಿವಿಗೆ, ಸರಳ ಸಹಜ ಸುಂದರ ಸಂತೃಪ್ತ ಜೀವನ ವಿಧಾನಕ್ಕೆ, ಪರಸ್ಪರ ಸಹಕಾರ ಸ್ನೇಹದ ಜೀವನ ಶೈಲಿಗೆ ಕರೆದೊಯ್ಯುತ್ತದೆ. ತುಂಬ ವಿಶಿಷ್ಟ ಎನಿಸುವುದು ಲೇಖಕರು ಬಳಸುವ ಭಾಷೆ ಚಿಕ್ಕವಾದ ಚೊಕ್ಕವಾದ ಲವಲವಿಕೆಯ ಶೈಲಿಯ ವಾಕ್ಯಗಳು. ಹಿರಿಯ ಸಾಹಿತಿಗಾರ ಶ್ರೀನಿವಾಸ ಉಡುಪರು ವಿಮರ್ಶೆ, ಕವನ, ಅನುವಾದ, ವಿಚಾರ ಸಾಹಿತ್ಯದಂತಹ ಗಹನವಾದ ವಿಷಯಗಳಲ್ಲಿ ಪರಿಣಿತ ಬರಹಗಾರರು. ಆದರೆ ಮಕ್ಕಳ ಸಾಹಿತ್ಯ ರಚನೆಗೆ ಅವರು ತೊಡಗಿದರೆಂದರೆ ಅವರದು ಮಗುಮನದೊಂದಿಗೆ ಮಿಡಿಯುವ ಸಹಜ ಅಭಿವ್ಯಕ್ತಿ. ಇಂದು ಮಕ್ಕಳು ಅಂತರ್ಜಾಲ, ದೂರದರ್ಶನದಲ್ಲಿ ಕಣ್ಣು ನೆಟ್ಟು ಕುಳಿತರೆಂದರೆ ಅವರಿಗೆ ಆಟಪಾಠ, ಹೊರಪ್ರಪಂಚದ ಅರಿವು, ಒಡನಾಟ, ಬಾಧವ್ಯ, ಸ್ನೇಹ ಯಾವುದೂ ಬೇಡ ಎಂದು ಎಲ್ಲರೂ ಆಕ್ಷೇಪಿಸುತ್ತಾರೆ. ಮಕ್ಕಳಮನಸ್ಸನ್ನು ಅರಳಿಸುವುದು, ಕಲ್ಪನೆಯನ್ನು ಕೊನರಿಸುವುದು ಪುಸ್ತಕಗಳ ಓದುವಿಕೆ. ಓದುವಿಕೆಯಯಲ್ಲಿ ಬುದ್ಧಿಭಾವಗಳು ವಿಕಸಿಸುತ್ತವೆ. ಮನಸ್ಸು ಮಾರ್ನುಡಿಯುತ್ತದೆ. ಕಲ್ಪನೆ ತನ್ನ ಕುಸುರಿ ಕೆಲಸ ಆರಂಭಿಸುತ್ತದೆ. ಮಕ್ಕಳ ಕಲ್ಪನಾ ವಿಲಾಸ ಅವರ ವ್ಯಕ್ತಿತ್ವ ವಿಕಸನದಲ್ಲಿ ಬಹಳ ಮುಖ್ಯ ಎಂದು ಮನಃಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ. ‘ಗೂಬಜ್ಜಿಯ ಗೊರಕೆ’ ಕನ್ನಡನಾಡಿನ ಮುದ್ದು ಮಕ್ಕಳ ಕೈಗೆ ಪೋಷಕರು, ಅಧ್ಯಾಪಕರು, ಹಿರಿಯರು ಹೆಮ್ಮೆಯಿಂದ ಕೊಡುವುದಾದಂತಹ ಅವರ ಕಲ್ಪನಾ ಶಕ್ತಿಗೆ ಚಾಲನೆ ಕೊಡುವಂತಹ ಒಂದು ಪುಸ್ತಕ. ನವಕರ್ನಾಟಕ ಪ್ರಕಾಶನದ ಈ ಪುಸ್ತಕದಲ್ಲಿ ಕಮಲಂ ಅರಸುರವರ ಚಿತ್ರಗಳು ಮುದ್ದಾಗಿ ಮೂಡಿಬಂದಿದೆ. ದೋಷರಹಿತ ಮುದ್ರಣ, ಉತ್ತಮ ಕಾಗದ, ಸೊಗಸಾದ ಮುಖಪುಟ, ಕೈಗೆ ಹಿಡಿಸುವ ಅಚ್ಚುಕಟ್ಟಾದ ಆಕಾರ, ಇವುಗಳಿಂದ ಪುಸ್ತಕ ‘ಕೈಗೆತ್ತಿಕೊಳ್ಳಿ' ಎಂದು ಕೂಗಿ ಕರೆಯುವಂತಿದೆ. ಇಷ್ಟಕ್ಕೂ ಲೇಖಕರು ಪುಸ್ತಕವನ್ನು ತಮ್ಮ ಮೊಮ್ಮಕ್ಕಳಿಗೆ ಮಾತ್ರವಲ್ಲದೆ ಕನ್ನಡದ ಎಲ್ಲ ಪುಟಾಣಿಗಳಿಗೂ ಅರ್ಪಿಸಿದ್ದಾರೆ. ಸರಿ, ಮತ್ತೇಕೆ ತಡ, ನಾಡಿನ ಮಕ್ಕಳಿಗೆ ಇಂತಹ ಸುಂದರ ಪುಸ್ತಕದ ಓದುವ ಸುಖ ಕಲ್ಪಿಸಿಕೊಡಲು ನಾವೆಲ್ಲ ಮುಂದಾಗೋಣ. ##########