ಸೂಯೆಜ್ ಕಾಲುವೆ

ಸೂಯೆಜ್ ಕಾಲುವೆ

ಕಳೆದ ಶತಮಾನದಲ್ಲಿ ಯುರೋಪಿನ ಮೆಡಿಟರೇನಿಯನ್ ಸಾಗರ ತೀರದ ದೇಶಗಳಿಂದ ಪೂರ್ವದ ಹಿಂದೂಮಹಾಸಾಗರ ತೀರದ ದೇಶಗಳಿಗೆ ಸಿದ್ದ ಸರಕುಗಳನ್ನು ಒಯ್ಯುತ್ತಿದ್ದ, ಅಲ್ಲಿಂದ ಕಚ್ಚಾ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಹಡಗುಗಳು ಆಫ್ರಿಕಾದ ತುದಿಯಲ್ಲಿರುವ ಗುಡ್‍ಹೋಪ್‍ ಭೂಶಿರವನ್ನು ಬಳಸಿಕೊಂಡು ಹೋಗಬೇಕಾಗುತ್ತಿತ್ತು. ಹಾಗಾಗಿ ಸಾರಿಗೆ, ಸರಕು ಸಾಗಾಟ ತಿಂಗಳುಗಟ್ಟಲೆ ವಿಳಂಬವಾಗುತ್ತಿತ್ತು.

ಈ ವಿಳಂಬವನ್ನು ಸಾಕಷ್ಟು ಕಡಿಮೆ ಮಾಡುವ ಉದ್ದೇಶದಿಂದ ಹುಟ್ಟಿಕೊಂಡದ್ದು, ಸಾಗರದ ಡೊಂಕು ತಿದ್ದುವ ಸೂಯೆಜ್ ಕಾಲುವೆ ಯೋಜನೆ. ಆಗಿನ ಈಜಿಪ್ಟ್ ಇಂಥ ಬೃಹತ್ ಯೋಜನೆಯನ್ನು ನೆರವೇರಿಸುವಷ್ಟು ಬಲವಾಗಿರಲಿಲ್ಲ. ಅದಕ್ಕೆಂದೇ ’ಆಗ್ಲೋ-ಫೆಂಚ್ ಮಾರಿ ಟೈಮ್ ಕೆನಾಲ್ ಕಂಪೆನಿ’ ಹುಟ್ಟಿಕೊಂಡಿತು. 

ಉತ್ತರದಲ್ಲಿ ಮೆಡಿಟರೇನಿಯನ್ ಇಂದ ದಕ್ಷಿಣದಲ್ಲಿ ಕೆಂಪು ಸಮುದ್ರದೊಂದಿಗೆ ಸಂಪರ್ಕ ಕಲ್ಪಿಸುವ ಈ ಕಾಲುವೆ ೧೭೩ ಕಿ.ಮೀ. ಅಷ್ಟು ಉದ್ದವಾಗಿದೆ. ಈಜಿಪ್ಟಿನ ಉಗ್ರ ಬಿಸಿಲಿನ, ಮರಳುಗಾಡಿನ, ಅಲ್ಲಲ್ಲಿ ಗಸಿಮಣ್ಣಿನ, ನೊರಜುಗಲ್ಲಿನ ಪ್ರದೇಶಗಳ ಮೇಲೆ, ಮಾರ್ಗದಲ್ಲಿ ಹಲವು ಸರೋವರಗಳ ಮೂಲಕ ಕಾಲುವೆ ಹಾದುಹೋಗುತ್ತದೆ. ಉತ್ತರದ ತುದಿಯಲ್ಲಿ ಸೈಯದ್ ಬಂದರು, ದಕ್ಷಿಣದ ತುದಿಯಲ್ಲಿ ಸೂಯೆಜ್ ಬಂದರುಗಳಿವೆ. ಕಾಲುವೆ ನಿರ್ಮಾಣದ ನಂತರ ಹಲವು ಹೊಸ ಊರುಗಳು ಹುಟ್ಟಿಕೊಂಡಿವೆ.

ಫ್ರೆಂಚ್ ಎಂಜಿನಿಯರ್ ಫರ್ಡಿನ್ಯಾಂಡ್ ಡಿ ಲೆಸೆಪ್ಸ್ ನೇತೃತ್ವದಲ್ಲಿ ಕಾಲುವೆ ನಿರ್ಮಾಣಗೊಂಡಿತು. ಬಲಾತ್ಕಾರದ ದುಡಿಮೆಗೆ ನೂಕಲ್ಪಟ್ಟ ಸಾವಿರಾರು ಬಡ ಕೂಲಿಯಾಳುಗಳು, ಕೈದಿಗಳು, ಬ್ರಿಟನಿನ ಹಾಗೂ ಫ್ರಾನ್ಸಿನ ತಂತ್ರಜ್ಞರು ನಿರ್ಮಾಣದಲ್ಲಿ ಭಾಗವಹಿಸಿದ್ದರು. 

ಕೆಂಪು ಸಮುದ್ರದ ಮಟ್ಟ ಮೆಡಿಟರೇನಿಯನ್ ಸಾಗರದ ಮಟ್ಟಕ್ಕಿಂತ ೩೦ ಅಡಿಗಳಷ್ಟು ಎತ್ತರದಲ್ಲಿರುವುದು ಎಂದು ತಿಳಿದಾಗ, ನೀರಿನ ಮಟ್ಟ ಬದಲಾವಣೆಯ ಕಟ್ಟೆಗಳನ್ನು ನಿರ್ಮಿಸಲಾಯಿತು. ಪ್ರಾರಂಭದಲ್ಲಿ ಕಾಲುವೆ ೮ ಮೀ. ಆಳ, ೨೨ ಮೀ. ಅಗಲವಾಗಿತ್ತು. ಮುಂದೆ ಕಾಲುವೆಯಲ್ಲಿ ಭಾರಿ ಟ್ಯಾಂಕರ್ ಹಡಗುಗಳೂ ಸಂಚರಿಸುವಂತೆ ಆಳ, ಅಗಲಗಳನ್ನು ಹೆಚ್ಚಿಸಲಾಯಿತು. 

೧೮೬೯ರಲ್ಲಿ ಕಾಲುವೆಯ ಉದ್ಘಾಟನೆಗಾಗಿ ಹಡಗು ಸಂಚಾರಕ್ಕೆ ತೆರೆಯಲಾಯಿತು. ಸೂಯೆಜ್ ಕಾಲುವೆಯ ನಿರ್ಮಾಣದಿಂದಾಗಿ ಹಡಗುಗಳ ಸಂಚಾರ ಮಾರ್ಗದಲ್ಲಿ ಸುಮಾರು ೧೧,೦೦೦ ಕಿ.ಮೀ., ಅಷ್ಟು ಕಡಿತವಾಯಿತು. ಕಳೆದ ಶತಮಾನದ ಈ ಮನುಷ್ಯ ಪ್ರಯತ್ನ ಸಾಧಾರಣವಾದುದೇನಲ್ಲ. ಇದರಿಂದ ಭಾರತದಂಥ ದೊಡ್ಡ ದೇಶವನ್ನು ವಸಾಹತಾಗಿ ಮಾಡಿಕೊಂಡಿದ್ದ ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ಹೆಚ್ಚು ಪ್ರಯೋಜನವಾಯಿತು. 

೧೯೫೦ರ ದಶಕದಲ್ಲಿ ಅಧ್ಯಕ್ಷ ಗಮಾಲ್ ಅಬ್ದುಲ್ ನಾಸೆರ್ ಸೂಯೆಜ್ ಕಾಲುವೆಯನ್ನು ರಾಷ್ಟ್ರೀಕರಣಗೊಳಿಸಿದಾಗ ಭಾರಿ ಕೋಲಾಹಲವುಂಟಾಯಿತು. ಆದರೆ ಸ್ವಲ್ಪ ಸಮಯದಲ್ಲಿಯೇ ಪರಿಸ್ಥಿತಿ ಹತೋಟಿಗೆ ಬಂದಿತು. 

Comments

Submitted by venkatesh Sun, 09/30/2012 - 15:14

ಸೂಯೆಝ್ ಕಾಲುವೆಯ ಸಂಕೀರ್ಣತೆ ಅದರ ರಾಜಕೀಯದಲ್ಲಿದೆ. ಬ್ರಿಟಿಷ್, ಫ್ರೆಂಚ್, ಇಸ್ರೇಲ್, ರಶ್ಯಾ, ಅಮೆರಿಕಾ, ಕೊನೆಯಲ್ಲಿ ಇಜಿಪ್ಟ್ ದೇಶದ ಪ್ರಜೆಗಳಪಾತ್ರ; ಇವೆಲ್ಲಾ ಇಂಟರ್ನೆಟ್ ನಲ್ಲಿ (ಇಂಗ್ಲೀಷ್ ಭಾಷೆಯಲ್ಲಿ) ಸಿಗುತ್ತವೆ. ಅವನ್ನೆಲ್ಲಾ ಕ್ರೋಢೀಕರಿಸಿ, ಬರೆಯಿರಿ. ಇಷ್ಟೇ ಬರವಣಿಗೆ ಸಾಲದು...