ನನ್ನ ಬಾಲ್ಯದ ನೆನಪುಗಳು - ನಾನ್ ಸ್ವಾಮಿ ಕಳ್ಳ !!!

ನನ್ನ ಬಾಲ್ಯದ ನೆನಪುಗಳು - ನಾನ್ ಸ್ವಾಮಿ ಕಳ್ಳ !!!

ನನ್ನ ಬಾಲ್ಯದ ನೆನಪುಗಳು -  ನಾನ್ ಸ್ವಾಮಿ ಕಳ್ಳ !!!

ಕಳೆದ ವಾರ ಬೆಳೆಗೆರೆ ಕೃಷ್ಣಶಾಸ್ತ್ರಿಗಳ ಅನುಭವ ಸಂಕಲನ ’ ಮರೆಯಲಾದಿತೆ   ’  ಓದುತ್ತಿದ್ದೆ. ಅದರಲ್ಲಿ ಒಂದು ಅಧ್ಯಾಯದಲ್ಲಿ     ಬಿಳಿತಲೆಯ ವೃದ್ದನೊಬ್ಬನನ್ನು ಗುರುತು ಹಿಡಿಯುತ್ತ ಪ್ರಶ್ನಿಸುವರು ’ನೀನು ಯಾರು’ ಎಂದು ಅದಕ್ಕವನು ಸಹಜವಾಗಿಯೆ ’ನಾನು ಸ್ವಾಮಿ ಕಳ್ನಿಂಗ’ ಎನ್ನುವನ್ನು , ಸ್ವಲ್ಪ ದರ್ಪದಿಂದಲೆ, ಅಲ್ಲಿ ಅವನು ತನ್ನ ಕಳ್ಳತನದ ವೃತ್ತಿಯನ್ನು ಅಷ್ಟು ಸಹಜವಾಗಿಯೆ ಒಪ್ಪಿಕೊಳ್ಳುವನು. ಅದನ್ನು ಓದುತ್ತಿರುವಾಗಲೆ ನನ್ನ ಮನ ನನ್ನ ಬಾಲ್ಯದ ಘಟನೆ ಒಂದಕ್ಕೆ ಜಾರಿತು.

ನಾನಾಗ ಚಿಕ್ಕ ಹುಡುಗ , ಬಹುಷ: ಎರಡನೆ ಅಥವ ಮೂರನೆ ತರಗತಿ ಓದುತ್ತಿದ್ದ ಕಾಲ. ನಮ್ಮ ಹಳ್ಳಿಗೆ ಹೋದಗಲೆಲ್ಲ ಅಲ್ಲಿಯದೆ ಓಡಾಟ. ಅಲ್ಲಿ ನಮ್ಮೆಲ್ಲರಿಗು ನಾಯಕನೆಂದರೆ ಅಲ್ಲಿಯವನೆ ಆದ ಅನಂತ.

ಆಗೆಲ್ಲ ವ್ಯವಸಾಯದ ಕೆಲಸವೆಂದರೆ ಈಗಿನಂತೆ ಯಂತ್ರಗಳ ಬಳಕೆ ಕಡಿಮೆ, ಬತ್ತವನ್ನು ಕೊಯಿಲು ಮಾಡಿದ ನಂತರ, ಅದನ್ನು ಪೈರಿನಿಂದ ಬತ್ತದ ಕಾಳುಗಳನ್ನು ಬೇರ್ಪಡಿಸಲು, ಕಣಕ್ಕೆ ಹಾಕುತ್ತಿದ್ದರು, ಅಲ್ಲಿ ಮೊದಲಿಗೆ, ಅದನ್ನು ಕಂತೆಗಳನ್ನಾಗಿ ಮಾಡಿ , ನೆಲಕ್ಕೆ ಹೊಡೆದು ಕಾಳುಗಳನ್ನು ಬೇರ್ಪಡಿಸುವ  ಕೆಲಸ, ನಂತರ ಮತ್ತು ಉಳಿದಿರುವ ಕಾಳುಗಳನ್ನು ಬೇರ್ಪಡಿಸಲು ಅದನ್ನು ಸಗಣಿಯಿಂದ ಸಾರಿಸಿದ ನೆಲದ ಕಣಕ್ಕೆ ಹಾಕಿ, ಎತ್ತುಗಳನ್ನು ಕಲ್ಲಿನ ಗುಂಡಿಗೆ ಕಟ್ಟಿ , ಆ ಬತ್ತದ ಮೇಲೆ ಓಡಿಸಿ, ಆ ಕಾಳನ್ನು ಸಂಗ್ರಹಿಸಿ, ಗಾಳಿಯಲ್ಲಿ ತೂರಿ ಶುದ್ದ ಬತ್ತವನ್ನು ಮೂಟೆಯಲ್ಲಿ ಕಟ್ಟಿಡುತ್ತಿದ್ದರು ಎಂಬ ನೆನಪು.  
ಆ ಸಮಯದಲ್ಲಿ ಬತ್ತದ ಮೂಟೆಗಳು, ರಾತ್ರಿಯಲ್ಲಿ ಕೆಲವೊಮ್ಮೆ ಕಣದಲ್ಲೆ ಇರುತ್ತಿತ್ತು. ಒಮ್ಮೆ ಅಂತದ ಸಂದರ್ಬದಲ್ಲಿ ಕಣದಲ್ಲಿಯೆ ಬತ್ತದ ಚೀಲಗಳು ಉಳಿದಿದ್ದವು, ಬೆಳಗ್ಗೆ , ರೈತ ಬಂದು ನೋಡುವಾಗ ಎಂತದೊ ಅನುಮಾನ ಅವನಿಗೆ, ಅಲ್ಲಿದ್ದ ಒಂದು ಮೂಟೆ ಬತ್ತ ಕಳುವಾಗಿದೆ ಎಂದು. ಅದಕ್ಕೆ ಪುಷ್ಟಿ ಕೊಡುವಂತೆ, ಕಣದಿಂದ ಬತ್ತದ ಕಾಳುಗಳು ಚೆಲ್ಲಾಡುತ್ತ ಯಾವುದೆ ದಾರಿ ಹಿಡಿದಿದ್ದನ್ನು ತೋರುತ್ತಿತ್ತು. ಅಲ್ಲಿ ಆಗಿದ್ದು ಇಷ್ಟೆ ರಾತ್ರಿ, ಮೂಟೆಯನ್ನು ಹೊತ್ತು ಹೋಗಿದ್ದ ಕಳ್ಳನಿಗೆ ಪಾಪ ಮೂಟೆಯಲ್ಲಿದ್ದ ತೂತು ಕಂಡಿರಲಿಲ್ಲ ಸರಿ ರಾತ್ರಿಯಲ್ಲಿ. ಅವನು ಹೋದ ದಾರಿಯಲ್ಲಿ ಉದ್ದಕ್ಕು ಬತ್ತದ ಕಾಳುಗಳು ಚೆಲ್ಲಿದ್ದು, ಊರಿನಲ್ಲಿದ್ದ  ಪತ್ತೆದಾರರಿಗೆ ಸುಲುಭವಾಗಿಯೆ ಅವನ ಮನೆಯನ್ನು ತೋರಿಸಿತ್ತು,

ಊರಿನ ಪಟೇಲರಿಗೆ, ಹಾಗು ಶಾನುಭೋಗರಿಗೆ ಸುದ್ದಿ ಹೋಗಿತ್ತು, ಅವರೆಲ್ಲ   ಕಳ್ಳನನ್ನು ಮಾಲು ಸಮೇತ ಹಿಡಿದು, ಊರ ಮುಂದಿನ, ಭಜನಾಮಂದಿರದಲ್ಲಿ ಕೂಡಿಹಾಕಿ, ಹುಣಸೆಯ ಕೋಲಿನಲ್ಲಿ ನಾಲಕ್ಕು ಬಿಗಿದು, ಕದ್ದ ತಪ್ಪಿಗೆ ಒಂದು ದಿನ ಉಪವಾಸ ಎಂದು ಹೇಳಿ ಹೋಗಿದ್ದರು. ಅದು ಹೇಗೊ ಆ ಸುದ್ದಿ ಊರಿನಲ್ಲಿ ಎಲ್ಲರಿಗು ಹಬ್ಬಿ ಎಲ್ಲರಿಗು ಕುತೂಹಲ.

ನಮ್ಮ ನಾಯಕ ಅನಂತನಿಗೆ ಸುದ್ದಿ ಮುಟ್ಟಿದ್ದೆ ತಡ ನಮ್ಮ ಮನೆಗೆ ಬಂದ,
'ಪಾರ್ಥ , ಹೋಗಿ ಅ ಕಳ್ಳನನ್ನು ನೋಡಿ ಬರೋಣ ಬಾ' ಎನ್ನುತ್ತ, ನನಗೊ ಎಂತದೊ ದಿಗಿಲು, ಕಳ್ಳ ಎಂದರೆ ಅದು ಹೇಗಿರುವನೊ, ನಮ್ಮನ್ನೇನು ಮಾಡುವನೊ ಇತ್ಯಾದಿ ಆತಂಕ. ಆದರೆ ಕುತೂಹಲ ಅದನ್ನೆಲ್ಲ ಮೀರಿಸಿ ಅನಂತನ ಜೊತೆ ಹೊರಟೆ. ಆಗಲೆ ಜನ  ಕಡಿಮೆಯಾಗಿತ್ತು, ಮಧ್ಯಾನದ ಸಮಯವಿರಬಹುದು, ನಾನು ಕುತೂಹಲದಿಂದ ಹೋದರೆ ಭಜನಾ ಮಂದಿರದ ಮುಂದಿನ ಬಾಗಿಲು ಹಾಕಿ ಬೀಗ ಹಾಕಿಬಿಟ್ಟಿದ್ದಾರೆ, ಒಳಗೆ ಕಳ್ಳ ನಿರುವ ಸಮಾಚಾರ ಗೊತ್ತಾಯಿತು, ಅನಂತ ಸುಮ್ಮನಿರುವನೆ, ಮೆತ್ತಗೆ  ಆ ಮನೆಯ ಹಿಂದಕ್ಕೆ ಹೊರಟ, ಹುಡುಕುತ್ತ ಜೊತೆಗೆ ನಾನು, ಅವನು ಹೇಗು ಹಿಂದೆ ಒಂದು ಕಿಟಕಿಯನ್ನು ಕಂಡುಹಿಡಿದ, ಒಳಗೆ ಬಗ್ಗಿ ನೋಡಲು, ನಾನು ಸಹ ಕಷ್ಟ ಪಟ್ಟು ಕಿಟಕಿ ಹತ್ತಿದೆ, ಒಳಗೆ ಬಗ್ಗಿ ನೋಡಿದರೆ, ನಿಜ , ಒಳಗೆ ನೆಲದ ಮೇಲೆ ಕಪ್ಪನೆಯ ವ್ಯಕ್ತಿಯೊಬ್ಬ ಕುಳಿತಿದ್ದಾನೆ, ಸುಮ್ಮನೆ, ನನಗೆ ಭಯ ಅನ್ನಿಸಿತು, ಆದರೆ ಅನಂತನಿಗೆ ಅದೆಲ್ಲ ಏನು ಇಲ್ಲ, ಅಷ್ಟಕ್ಕು ಕಳ್ಳ ಒಳಗಿರುವನಲ್ಲ ನಮ್ಮನೇನು ಮಾಡುತ್ತಾನೆ ಎನ್ನುವ ದೈರ್ಯ.
'ಲೇ ಕರಿಯ ಬಾರೊ ಇಲ್ಲಿ ' ಎಂದು ಕಿಟಕಿಯಲ್ಲಿ ಮುಖವಿಟ್ಟು ಕೂಗಿದ ಅನಂತ
ನಾನು ಕಿಟಕಿಯಿಂದ ಕೆಳಗೆ ದುಮುಕುವುದ ಎಂದು ಯೋಚಿಸುತ್ತಿರುವಾಗಲೆ . ಒಳಗೆ ಕುಳಿತಿದ್ದ ವ್ಯಕ್ತಿ ಎದ್ದು ನಿಂತು ನಾವಿರುವಡೆಗೆ ಬಂದವನು ನಗುತ್ತ , ನಿಕ್ಕರು ಬನೀನು ಹಾಕಿದ್ದ ಅ ವ್ಯಕ್ತಿ ತಲೆಗೆ ಟವೆಲ್ ಸುತ್ತಿದ್ದನು.
'ಏನ್ ಸ್ವಾಮೇರ?' ಎಂದ.
'ನಿನ್ನನ್ನು ಏನಕ್ಕೆ ಕೂಡಿಹಾಕಿದ್ದಾರೆ, ಕಳ್ಳತನ ಮಾಡಿದೆಯಂತೆ ಹೌದ?' ಅನಂತನ ಪ್ರಶ್ನೆ
'ಹೌದು ಸ್ವಾಮೇರ, ಬತ್ತ ಕದ್ದೆ ಅಂತ ಕೂಡಿಹಾಕಿದ್ದಾರೆ' ಎಂದ
'ಮತ್ತೆ ನಿನಗೆ ಹೋಡೆದರಂತೆ ಹೌದ?' ಅನಂತನ ಪ್ರಶ್ನೆ
'ಹೌದು ಸ್ವಾಮೇರ, ಕಳ್ಳತನ ಮಾಡಿದ್ನಲ್ಲ ಅದಕ್ಕೆ  ಪಟೇಲರು ಹೊಡೆದ್ರು, ಸಂಜೆ ಗಂಟ ಕೂಡಿಹಾಕಿದ್ದಾರೆ' ಎಂದ
'ನಿನಗೆ ನೋವಾಗಲಿಲ್ವ?'
'ಆಯ್ತು, ಏನ್ ಮಾಡೋದು, ಕದ್ದಿದ್ನಲ್ಲ ' ಎಂದ ಕಳ್ಳ ಕರಿಯ ನಿರಾಳವಾಗಿ
'ಮತ್ತೆ ನೀನು ಕದ್ದೆಯಲ್ಲ ಬತ್ತ ಅದೆಲ್ಲಿ ಹೋಯ್ತು'
'ಇಲ್ಲೆ ಇದೇ ನೋಡಿ,' ಎಂದವನು, ಒಳಗೆ ಹೋಗಿ, ಬತ್ತದ ಮೂಟೆಯನ್ನು ನೆಲದಲ್ಲೆ ಎಳೆಯುತ್ತ ನಮಗೆ ಕಾಣಿಸುವಂತೆ ಕಿಟಕಿ ಹತ್ತಿರ ತಂದ. ಹೀಗೆ ನಮ್ಮ ಮಾತು ಸ್ವಲ್ಪ ಕಾಲ ಸಾಗಿತು, ನಂತರ ಮನೆಗೆ ಬಂದೆವು

ನನಗೆ ಇಂದಿಗು ಮನದಲ್ಲಿ ನೆನೆಪಿರುವುದು, ಅವನು ತಾನು ಕಳ್ಳತನ ಮಾಡಿರುವುದನ್ನು ಹಾಗು ಸಿಕ್ಕಿಬಿದ್ದಿರುವದನ್ನು ಅತಿ ಸಹಜವಾಗಿಯೆ ಹೇಳಿದ್ದ. ಅಷ್ಟೆ ಅಲ್ಲ ತನ್ನ ಕಳ್ಳತನಕ್ಕೆ ಶಿಕ್ಷೆ ವಿದಿಸಿದ ಪಟೇಲರ ಮೇಲಾಗಲಿ ಅಥವ ಶಾನುಭೋಗರ ಮೇಲಾಗಲಿ ಅವನ ದ್ವನಿಯಲ್ಲಿ ಯಾವುದೆ ಕೋಪವಿರುವಂತೆ ನನಗೆ ಅನ್ನಿಸಲಿಲ್ಲ. ಅದೆಲ್ಲದಕ್ಕಿಂತ ವಿಷಯವೆಂದರೆ, ಅವನು ನಮ್ಮಿಬ್ಬರನ್ನು ಚಿಕ್ಕವರೆಂದು ಪರಿಗಣಿಸದೆ, ದೊಡ್ಡವರ ಜೊತೆ ಮಾತನಾಡುವಂತೆ ವರ್ತಿಸಿದ್ದ.  

ಕೇವಲ ಹೊಟ್ಟೆ ಪಾಡಿಗಾಗಿ , ಕಳ್ಳತನ ಮಾಡಿದ ಅವನ ನಡೆ ನುಡಿಯಲ್ಲಿನ ಸಹಜತೆ ಇಂದಿಗು ನನ್ನ ಮನದಲ್ಲಿ ನೆನಪಾಗಿ ಉಳಿದಿದೆ.  ಅವನ  ಅಸ್ವಷ್ಟ ಸ್ವರೂಪ ನನ್ನ ಮನದಲ್ಲಿ ನೆಲೆಯಾಗಿದೆ ಅವನ ಹೆಸರಂತು ನೆನಪಿಲ್ಲ

Rating
No votes yet

Comments

Submitted by gopaljsr Thu, 09/27/2012 - 09:05

ಸರ್, ಒಳ್ಳೆಯ ಪ್ರಸಂಗ .... ಈಗ ಎಷ್ಟೋ ಜನ ತಪ್ಪು ಮಾಡಿ ಸಿಕ್ಕಿ ಹಾಕಿಕೊಂಡರೂ.. ತನಿಖೆ ಆಗಬೇಕು ಎಂದು ಅನ್ನುತ್ತಿದ್ದಾರೆ?...:-))))

Submitted by Chikku123 Thu, 09/27/2012 - 11:17

:) :) :)
ಈಗೆಲ್ಲಿ ಸಿಕ್ತಾರೆ ಅಂಥಾ ಕಳ್ರು!!!!!!!! ಕುತ್ತಿಗೆ ಕುಯ್ದು ಓಡಿಹೋಗ್ತಾರೆ

Submitted by H A Patil Fri, 09/28/2012 - 14:05

ಪಾರ್ಥಸಾರಥಿಯವರೆ ವಂದನೆಗಳು
ನಿಮ್ಮ ಬರಹ ಚೆನ್ನಾಗಿದೆ, ಅದು ಹಳೆಯ ಕಾಲದ ಮೌಲ್ಯಗಳನ್ನು ತಪ್ಪು ಮಾಡಿದ್ದನ್ನು ಒಪ್ಪಿಕೊಳ್ಳುವ ಜನರ ಪರಿಚಯ ಮಾಎಡಿಸಿಕೊಡುತ್ತದೆ. ಆದರೆ ಈಗ ಒಪ್ಪಿಕೊಳ್ಳುವುದು ಬಿಡಿ ತಾವು ಮಾಡಿದ್ದೆ ಸರಿ ಎಂದು ಉದ್ಧಟ ವರ್ತನೆ ತೋರುವ ಈಗಿನ ಕಾಲವೆಲ್ಲಿ ? ಉತ್ತಮ ಬರಹ ನೀಡಿದ್ದಕ್ಕೆ ಧನ್ಯವ಻ದಗಳು.
ಧನ್ಯವ಻ದಗಳು.

Submitted by partha1059 Fri, 09/28/2012 - 14:44

In reply to by H A Patil

ತಮ್ಮೆಲ್ಲರ ಪ್ರತಿಕ್ರಿಯೆ ಹಾಗು ಮೆಚ್ಚುಗೆಗೆ ನಾನು ಕೃತಜ್ಞ.
ವಂದನೆಗಳೊಡನೆ - ಪಾರ್ಥಸಾರಥಿ

Submitted by venkatb83 Sat, 09/29/2012 - 17:06

ಅನುಭವದ‌ ಬರಹ‌ ನನಗೂ ಹಲವು ಇದೇ ತರಹ್ದ್ ಕೆಲವು ಘಟನೆಗಳನ್ನು ನೆನಪಿಸಿತು....
ಮಾಡಿದ ತಪ್ಪು ಒಪ್ಪಿಕೊಳ್ಳೋದ್ ಕಸ್ಟದ್ ಕೆಲ್ಸಾ.....

ಖ0ಡಿತ‌ ಅವನು ಕ್ಷಮೆಗೆ ಅರ್ಹ‌...

ಒಳಿತಾಗ್ಲಿ..

ನನ್ನಿ

\|/