ಸೆಪ್ಟೆಂಬರ್​ ಕ್ರಾಂತಿ!

Submitted by kahale basavaraju on Fri, 09/28/2012 - 12:50

ಹೈದ್ರಾಬಾದ್​ ಕರ್ನಾಟಕದ ಮಂದಿ ಇವತ್ತು ಕಾಲಂ 371ರ ಅನ್ವಯ ಮೀಸಲಾತಿ ಪಡೆಯೋ ಅವಕಾಶ ಸಿಕ್ತಿದೆ. ಅಂತಹದ್ದೊಂದು ವಿಶೇಷ ಮೀಸಲಾತಿ ಕೂಡ ಅವ್ರಿಗೆ ಜರೂರಿತ್ತು. ದೇಶದ ಸ್ವಾತಂತ್ರ್ಯಕ್ಕಾಗಿ, ನಾಡಿನ ಏಕೀಕರಣಕ್ಕಾಗಿ, ಭಾಷಾ ಮೀಸಲಾತಿಗಾಗಿ ಆ ನೆಲದ ಜನ ಸಾಕಷ್ಟು ಹೋರಾಡಿದ್ದಾರೆ. ಹಳೇ ಮೈಸೂರು ಪ್ರಾಂತ್ಯ, ಕೊಡಗು ಪ್ರಾಂತ್ಯ ಇನ್ನುಳಿದ ಪ್ರಾಂತ್ಯದ ಮಂದಿಗಿಂತ್ಲೂ ಹೆಚ್ಚಿನ ಸ್ವಾತಂತ್ರ್ಯದ ಕಿಚ್ಚು ಹೈದ್ರಾಬಾದ್​ ಕರ್ನಾಟಕದ ಮಂದಿಗೆ. ಹಳೇ ಮೈಸೂರು ಪ್ರಾಂತ್ಯದ ಮಂದಿಗೆ ಅರಸರಿಂದ ಹೇಳಿಕೊಳ್ಳುವಂತಹ ಉಪಟಲವೆಂದಿಗೂ ಇರ್ಲಿಲ್ಲ ಅಂತ್ಲೇ ಹೇಳ್ಬಹುದು. ಆದ್ರೆ ಹೈದ್ರಾಬಾದ್​ ಕರ್ನಾಟಕದ ಮಂದಿ ಸ್ವಾತಂತ್ರ್ಯಕ್ಕಾಗಿ ಪಟ್ಟಪಾಡು ಅಷ್ಟಿಷ್ಟಲ್ಲ. ಹಾಗಂತ ನಾನು ಅಖಂಡ ಕರ್ನಾಕಟವನ್ನು ವಿಭಾಗಿಸಿ ಮಾತಾಡುತ್ತಿಲ್ಲ. ನಾವೆಲ್ಲಾ ಎಂದೆಂದಿಗೂ ಒಂದೇ. ಒಂದು ಕಾಲಕ್ಕೆ ನಮ್ಮ ಕನ್ನಡಿಗ ಸೋದರರು ಪಟ್ಟಪಾಡಿನ ಬಗ್ಗೆ ಹೇಳುತ್ತಿದ್ದೇನೆ ಅಷ್ಟೇ.

1947 ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಬಂತು. ಆ ಸ್ವಾತಂತ್ರ್ಯ ಹೈದ್ರಾಬಾದ್ ಪ್ರಾಂತ್ಯಕ್ಕೆ ಬರ್ಲಿಲ್ಲ. ನಿರಂಕುಶ ಪ್ರಭುವಾಗಿದ್ದ ನಿಜಾಮ್, ಅವನ ಚೇಲಾಗಳಾದ ದೇಸಾಯಿಗಳು, ದೇಶಮುಖರು, ಪಟೇಲರು, ವಾಲೀಕಾರರ ಕಾಲ ಕೆಳಕ್ಕೆ ಸಿಕ್ಕಿ ಪ್ರಜೆಗಳು ನಲುಗಿ ಹೋಗುತ್ತಿದ್ದರು. ಆ ನೋವಿನ ನಡುವಿಂದ್ಲೇ ಕೆಲವು ವೀರರು ಹುಟ್ಟಿ ಬಂದ್ರು,

ಅಂತ ವೀರರನ್ನು ಹೈದ್ರಾಬಾದ್ ಪ್ರಾಂತ್ಯವಷ್ಟೇ ಅಲ್ಲ, ಹೈದ್ರಾಬಾದ್ ಕನರ್ಾಟಕದಲ್ಲೂ ಲೆಕ್ಕವಿಲ್ಲದಷ್ಟು ಮಂದಿ ವೀರರನ್ನು ಕಾಣಬಹುದು. ಈ ವೀರರು ತಮ್ಮ ಮಾತುಗಳಿಂದ, ಹಾಡುಗಳಿಂದ, ಶೌರ್ಯ ಸಾಹಸಗಳಿಂದ ಎಲ್ಲರನ್ನೂ ಹುರಿದುಂಬಿದುಸುತ್ತಿದ್ದರು.

ನಿಜಾಮನ ಆಡಳಿತದಲ್ಲಿದ್ದ ಹೈದ್ರಾಬಾದ್ ಸಂಸ್ಥಾನದಲ್ಲಿ ಕನರ್ಾಟಕದ ಸಾಕಷ್ಟು ಪ್ರದೇಶಗಳು ಸಿಕ್ಕಿ ನಲುಗುತ್ತಿದ್ವು. ಇವತ್ತಿನ ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳು ಸಂಪೂರ್ಣವಾಗಿ ನಿಜಾಮನ ಆಡಳಿತಕ್ಕೆ ಒಳಪಟ್ಟಿದ್ವು.

ಈ ಸಂಸ್ಥಾನದಲ್ಲಿ 20 ಲಕ್ಷ ಕನ್ನಡಿಗರೂ ಸೇರಿದ ಹಾಗೆ ಒಟ್ಟು ಒಂದೂವರೆ ಕೋಟಿಯಷ್ಟು ಜನರಿದ್ರು. ಈ ನೆಲದ ಕಾನೂನನ್ನ ನಿಜಾಮನೇ ನಿರ್ಧರಿಸುತ್ತಿದ್ದ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ ಈ ಭಾಗದ ಮಂದಿಗೆ ಸ್ವಾತಂತ್ರ್ಯ ಸಿಕ್ಕಿರ್ಲಿಲ್ಲ. ಇವರ ಸ್ವಾತಂತ್ರ್ಯ ಹೈದ್ರಾಬಾದ್ ನಿಜಾಮ ಮಿರ್ ಉಸ್ಮಾನ್ ಅಲಿಖಾನ್ ಬಹದ್ದೂರ್ ಕೈನಲ್ಲಿತ್ತು.

ಭಾರತ ಬ್ರಿಟಿಷರಿಂದ ಸ್ವತಂತ್ರವಾದ ಮೇಲೆ ಭಾಷಾವಾರು ಪ್ರಾಂತ್ಯಗಳನ್ನ ರಚನೆ ಮಾಡಿದ್ರು. ಆಗ ಮೈಸೂರು, ಬಾಂಬೆ ಪ್ರಾಂತ್ಯಗಳಿಗೆ ಸೇರಿದ್ದ ಕನ್ನಡದ ಮಂದಿ ನವಕನರ್ಾಟಕದ ಗಡಿಯೊಳಗೆ ಬರೋದಕ್ಕೆ ಸಾಧ್ಯವಾಯ್ತು. ಆದ್ರೆ ದೇಶಕ್ಕೆ ಸೆಡ್ಡು ಹೊಡದು ನಿಂತ ಹೈದ್ರಾಬಾದ್ ನಿಜಾಮ ಅಪ್ಪಟ ದೇಶದ್ರೋಹದ ಕೆಲಸ ಮಾಡಿದ್ದ. ಆತನ ದೌರ್ಜನ್ಯದ ಕೆಳಗೆ ನಲುಗಿದ ಮಂದಿ ಪಡೆದ ಪೂರ್ಣ ಸ್ವಾತಂತ್ರ್ಯ ಪಡೆಯೋಕೆ ಪ್ರಾಣವನ್ನೇ ಪಣಕ್ಕಿಟ್ಟು ಕಾದಾಟ ಮಾಡಬೇಕಾಯ್ತು.

ಸ್ವಾತಂತ್ರ್ಯ ಬಾರತದೊಡನೆ ಹಲವಾರು ಸಂಸ್ಥಾನಗಳು ವಿಲೀನಗೊಂಡಿದ್ದವು. ಆದ್ರೇ ಕಾಶ್ಮೀರ ಮತ್ತು ಹೈದ್ರಾಬಾದ್ ಸಂಸ್ಥಾನಗಳು ಅದನ್ನು ವಿರೋಧಿಸುವ ಮೂಲಕ ಸಂಸ್ಥಾನದ ಬಹುಜನರ ಅಭಿಪ್ರಾಯವನ್ನು ದಿಕ್ಕರಿಸಿದ್ದವು. ಅಲ್ದೇ ಹೈದ್ರಾಬಾದನ್ನು ಸ್ವಾತಂತ್ರ್ಯ ರಾಷ್ಟ್ರವೆಂದು ಸಂಸ್ಥಾನದ ನಿಜಾಮ ಮಿರ್ ಉಸ್ಮಾನ್ ಅಲಿಖಾನ್ ಬಹದ್ದೂರ್ ಘೋಷಿಸಿಕೊಂಡಿದ್ದ. ಇವನ ಘೋಷಣೆಯನ್ನು ಪಾಕಿಸ್ತಾನವೂ  ಪುರಸ್ಕರಿಸಿತ್ತು. ಭಾರತ ಒಡೆದರೆ ತಾನು ಲಾಭ ಮಾಡಿಕಬಹುದು ಅನ್ನೋದು ಖದೀಮ ಪಾಕಿಸ್ತಾನಿ ರಾಜಕಾರಣಿಗಳ ಹಂಬಲವಾಗಿತ್ತು.

ಹಾಗಾಗಿಯೇ ಭಾರತದ ತ್ರಿವರ್ಣ ಧ್ವಜ, ಗಾಂಧಿ ಟೋಪಿ, ವಂದೇ ಮಾತರಂ ಗೀತೆಗಳು ಹೈದ್ರಾಬಾದ್ ಸಂಸ್ಥಾನದಲ್ಲಿ ಬಹಿಷ್ಕೃತಗೊಂಡಿದ್ದವು. ಇಷ್ಟಕ್ಕೂ ಆ ಸಂಸ್ಥಾನಕ್ಕೆ ತನ್ನದೇ ಆದ ರೈಲ್ವೇ ವ್ಯವಸ್ಥೆ, ಅಂಚೆ ಮತ್ತು ನೋಟು ಮುದ್ರಣ ಸವಲತ್ತುಗಳನ್ನ ಬ್ರಿಟೀಷರು ಕೊಟ್ಟುಬಿಟ್ಟಿದ್ರು. ಬ್ರಿಟಿಷ್ ಆಡಳಿತಾವಧಿಯಲ್ಲಿ ಹೈದ್ರಾಬಾದ್ ಸಂಸ್ಥಾನ ಸ್ವಂತ ಸೇನೆ ಹೊಂದಿತ್ತು. ಆ ಸೇನೆಯನ್ನ ನಿಜಾಮ್ `ಸೋಲರಿಯದ ಅಲ್ಲಾಹುವಿನ ಸೈನಿಕರು' ಅಂತ ಕರೀತಿದ್ದ. ಈ ಸೇನೆಯಲ್ಲಿ ಮಹಿಳೆಯರೂ ಇರ್ತಿದ್ದ್ರು. ಈ ಸೈನಿಕ್ರು ಬ್ರಿಟಿಷ್ರಿಂದ ತರಬೇತಿ ಪಡೀತಿದ್ದ್ರು. ಆ ಕಾಲದ ಪ್ರಸಿದ್ಧ ಸಿಡ್ನಿ ಕಾಟನ್ ಬಂದೂಕುಗಳು ಸೇನಾ ಖಜಾನೆಯಲ್ಲಿತ್ತು.

ಹೈದ್ರಾಬಾದ್ ಪ್ರಾಂತ್ಯವನ್ನು ಭಾರತದೊಂದಿಗೆ ವಿಲೀನಗೊಳಿಸೋಕೆ ಹಲವಾರು ಕಡೆ ಅಹಿಂಸಾತ್ಮಾಕ ಹೋರಾಟ ಪ್ರಾರಂಭವಾಯ್ತು. ಇದರ ಮುಂದಾಳತ್ವವನ್ನು ಕಾಂಗ್ರೆಸ್ ಮುಖಂಡರಾದ ಸ್ವಾಮಿ ರಮಾನಂದ ತೀರ್ಥರು ವಹಿಸಿದ್ದರು. ಈ ವೇಳೆ ಚಳವಳಿಯನ್ನು ಹತ್ತಿಕ್ಕಲು ನಿಜಾಮ ತನ್ನ ಸೇನೆ ಮತ್ತು ಪೋಲಿಸರನ್ನು ಬಳಸಿದ. ನಿಜಾಮ ಈ ಕೃತ್ಯವನ್ನು ಒಬ್ಬ ರಾಜನಂತೆ ಮಾಡ್ಲಿಲ್ಲ.  ಆತ ಈ ಅಸಹ್ಯದ ಕೃತ್ಯವನ್ನು ಒಬ್ಬ ಪಕ್ಕಾ ಭಯೋತ್ಪಾದಕ ಮುಖಂಡನ ರೀತಿ ನಡೆಸಿದ್ದ. ಶತ್ರುಗಳನ್ನು ಮಟ್ಟಹಾಕಲು ಜಿಹಾದ್ ಹೆಸರಿನಲ್ಲಿ ಮುಸ್ಲೀಮರನ್ನು ಹಿಂದೂಗಳ ವಿರುದ್ಧ ಎತ್ತಿಕಟ್ಟಿದ.

ಖಾಸಿಂ ರಜವಿ ಅನ್ನೋ ಭಯೋತ್ಪಾದಕನ ನೇತೃತ್ವದಲ್ಲಿ ರಜಾಕಾರರ ಪಡೆ ನಿಮರ್ಾಣವಾಯ್ತು. ಈ ಮಂದಿ ಹೈದ್ರಾಬಾದ್ ಪ್ರಾಂತ್ಯದೆಲ್ಲೆಡೆ ಲಕ್ಷಾಂತರ ಮಂದಿ ಹಿಂದೂಗಳ ಮೇಲೆ ದಾಳಿ ಮಾಡಿ ಕೊಂದ್ರು. ಲೂಟಿ, ಅತ್ಯಾಚಾರ, ದೌರ್ಜನ್ಯಗಳು ನಿಜಾಮನ ಅಣತಿಯ ಮೇರೆಗೆ ಸಾಂಗವಾಗಿ ಜರುಗಿದವು.

ಅದ್ರಲ್ಲೂ ಖಾಸಿಂ ರಜವಿ ತನ್ನ ಭಯೋತ್ಪಾದಕ ತಂಡಕ್ಕೆ ಒಂದು ವಿಲಕ್ಷಣ ಆದೇಶ ಕೊಟ್ಟಿದ್ದ.

ಕಾಟೋ, ಲೂಟೋ ಔರ್ ಬಾಟೋ!

ಅಂದ್ರೆ ನಿಮ್ಮ ಎದುರಾಳಿಗಳನ್ನ ಸಿಕ್ಕಲ್ಲಿ ಕತ್ತರಿಸಿ. ಅವರ ಸೊತ್ತುಗಳನ್ನ ಲೂಟಿಮಾಡಿ ಮತ್ತು ನಮ್ಮ ಜನ್ರಿಗೆ ಅದನ್ನ ಹಂಚಿ ಅನ್ನುವ ಆದೇಶ ಕೊಟ್ಟಿದ್ದ. ಧರ್ಮದ ಉನ್ಮಾದದಲ್ಲಿ ಸಿಲುಕಿದ್ದ ರಜಾಕಾರರು ದರೋಡೆಕೋರೂ ನಾಚುವ ರೀತಿ ಲೂಟಿಗಿಳಿದ್ರು. ಆ ದಿನಗಳು ಅದೆಷ್ಟು ಭಯಾನಕವಾಗಿತ್ತು ಅಂದ್ರೆ ಇವತ್ತಿಗೂ ಆ ನೆನಪು ಊರನ್ನ ನಡುಗಿಸುತ್ತೆ.

ರಜಾಕಾರರ ದಾಳಿಗೆ ಸಿಕ್ಕಿ ನಲುಗಿದ ಹಲವಾರು ಗ್ರಾಮಗಳಲ್ಲಿ ಕೊಲೆ, ಸುಲಿಗೆ, ಅತ್ಯಾಚಾರಗಳು ಅವ್ಯಾಹತವಾಗಿ ನಡೆದವು. ಈ ವೇಳೆ ಕೆಲವು ಸುರಕ್ಷಿತ ಸ್ಥಳಗಳಲ್ಲಿ ಗ್ರಾಮದ ಮಂದಿ ತಂಗುತ್ತಿದ್ದರು. ಕೆಲ್ವರಂತೂ ಅಲ್ಲಿಂದ ಕಾಲ್ಕೀಳುತ್ತಿದ್ದರು. ಇನ್ನೂ ಕೆಲವ್ರು ರಜಾಕಾರರ ವಿರುದ್ಧ ಹೋರಾಡುತ್ತಿದ್ದರು. ಹಾಗೇ ವೀರಾವೇಶದಿಂದ ಹೋರಾಡಿದ್ದವ್ರಲ್ಲಿ ಹೈದ್ರಾಬಾದ್ ಕನರ್ಾಟಕದವ್ರು ಮೊದಲಿಗರೆಂದೇ ಹೇಳಬೇಕು...

ನಿಜಾಮ್ ಸಕರ್ಾರದ ಪೋಲಿಸರು ಕೂಡ ರಜಾಕಾರರಿಗೆ ಕಮ್ಮಿಯಿಲ್ಲದಂತೆ ದೌರ್ಜನ್ಯವೆಸಗುತ್ತಿದ್ದರು. ಅದ್ರಲ್ಲೂ ಮುಖ್ಯವಾಗಿ ನಿಜಾಮ್ ಹೊರಡಿಸಿದ್ದ `ಕೊಡಲಿ ಬರಾದ್' ಕಾನೂನು ಹೈದ್ರಬಾದ್ ಪ್ರಾಂತ್ಯದ ರೈತರ ಬಳಿಯಿದ್ದ ಕೊಡಲಿ, ಕುಡುಗೋಲುಗಳಂತ ಬೇಸಾಯಕ್ಕೆ ಅವಶ್ಯಕವಾದ ಸಾಧನಗಳನ್ನೂ ಕಿತ್ತುಕೊಳ್ಳೋಕೆ ಅವಕಾಶ ಮಾಡಿಕೊಡ್ತು.

ರಜಾಕಾರರ ಅಟ್ಟಹಾಸದ ದಾಳಿಗಳಿಗೆ ಕರುನಾಡಿನ ವೀರ ವನಿತೆಯರು ಅಟ್ಟಾಡಿಸಿಕೊಂಡು ಕಲ್ಲು ಹೊಡೆದು ಓಡಿಸಿರೋ ಘಟನೆಗಳು ಜರುಗಿದ್ದವು. ಇಂತಹದ್ದೊಂದು ಹೋರಾಟದ ಮುಂದಾಳುವಾಗಿದದ್ದು ಚಂದ್ರಶೇಖರ ಪಾಟೀಲರು. ಹೀಗೆ ರಜಾಕಾರರ ದಾಳಿಗೆ ಒಂದೊಂದು ಕಡೆ ಒಂದೊಂದು ರಕ್ಷಣಾತ್ಮಕ ಹೋರಾಟಗಳು ನಡೀತಿದ್ವು.

ಹೌದು ಹೈದ್ರಾಬಾದ್ ಕನರ್ಾಟಕದ ವಿಮೋಚನಾ ಚಳುವಳಿಯಲ್ಲಿ ಬಹುಮುಖ್ಯ ಸ್ಥಾನ ಹೊಂದಿರುವ ಗ್ರಾಮ ಗೋಟರ್ಾ. ಈಗಿನ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೋಟರ್ಾ ಗ್ರಾಮ ನಿಜಾಮ್ ಆಡಳಿತಾವಧಿಯಲ್ಲಿ ಚಿಟಗುಪ್ಪಾ ಜಿಲ್ಲೆಯ ದಬಲಗುಂಡಿ ತಾಲೂಕಿನಲ್ಲಿ ಸೇರಿತ್ತು. ಎಲ್ಲಾ ಕಡೆ ದಾಳಿ ನಡೆಸುವಂತೆ ಇಲ್ಲಿಯೂ ರಜಾಕಾರರು ದಾಳಿ ಮಾಡ್ತಿದ್ದ್ರು. ಆದ್ರೆ ಇಲ್ಲಿನ ಎಲ್ಲಾ ನಾಗರಿಕರೂ ರಜಾಕಾರರ ಕೈಗೆ ಸಿಗ್ತಿರ್ಲಿಲ್ಲ. ಯಾಕಂದ್ರೆ ಅಲ್ಲೊಂದು ಸುಭದ್ರ ಕೋಟೆಯಂತಹ ಮನೆಯಿತ್ತು.

ಅದುವೇ ಗೋಟರ್ಾದ ಮಹಾದೇವಪ್ಪ ಡುಮಣೆಯವರ ಮನೆ. ಈ ಐತಿಹಾಸಿಕ ಕೋಟೆಯಂತಿರೋ ಆ ಮನೆ ಹಲವಾರು ಬಾಗಿಲುಗಳನ್ನು ಹೊಂದಿತ್ತು. ಭತರ್ಿ ಸಾವಿರ ಮಂದಿ ಇರಬಹುದಾದ ಸಾಮಥ್ರ್ಯ ಹೊಂದಿತ್ತು.  ಮನೆಯಲ್ಲಿ ಹತ್ತಾರು ಕೋಣೆಗಳಿದ್ದವು. ಅದಕ್ಕೂ ಮಿಗಿಲಾಗಿ ರಜಾಕಾರರ ವಿರುದ್ಧ ಮನೆಯಲ್ಲಿದ್ದುಕೊಂಡೇ ಹೋರಾಡಬಹುದಾದ ಫಿರಂಗಿಗಳನ್ನು ಹೊಂದಿತ್ತು.

ಅಂತಹದ್ದೊಂದು ಭದ್ರ ಕೋಟೆಯಿದ್ದರೂ ಸಹ ಗೋಟರ್ಾದಲ್ಲೊಂದು ನರಮೇಧವಾಯ್ತು. ಅದರ ಕಥೆ ಹೇಳುವ ಸ್ಮಾರಕ ಊರ ಮುಂದಿದೆ. ಈ ದುರಂತ ಹೈದ್ರಾಬಾದ್ ವಿಮೋಚನಾ ಚಳುವಳಿಯಲ್ಲಿ ಬಹುಮುಖ್ಯ ಸ್ಥಾನವನ್ನು ಪಡೆದುಕೊಂಡಿದೆ. ಯಾಕಂದ್ರೆ ಇದು ಎರಡನೇ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಈ ದುರಂತ ಆ ಭಾಗದ ಮಂದಿಯ ಕಣ್ಣಲ್ಲಿ ಇಂದಿಗೂ ಜೀವಂತವಾಗಿ ಉಳಿದುಕೊಂಡಿದೆ.

ಅದು 1948ರ ಬಿರುಬೇಸಿಗೆಯ ದಿನ. ದುಡಿದು ಬಸವಳಿದು ಬಂದಿದ್ದ ಮಂದಿ ಇನ್ನೇನು ತುತ್ತಿಗೆ ಕೈಹಾಕುವ ಹೊತ್ತು. ಊರೇ ಬೆಚ್ಚಿಬೀಳುವಷ್ಟರ ಮಟ್ಟಿನ ಕುದುರೆಗಳ ಓಟದ ಸದ್ದು ಕೇಳಿಸ್ತು. ನಂತರ ನಡೆದದ್ದು ಅಕ್ಷರಶಃ ಮಾರಣಹೋಮ...

ಅಂತಹದ್ದೊಂದು ಹತ್ಯಾಕಾಂಡಕ್ಕೆ ಸಾಕ್ಷಿಯಾದದ್ದು ಗೋರ್ಟಾ ಗ್ರಾಮ ದೇವತೆ ಲಕ್ಷ್ಮಿ... ಅವತ್ತು ಸೂರ್ಯಗ್ರಹಣವಿತ್ತು. ಗ್ರಹಣದ ನಂತರ ಅಡುಗೆ ಮಾಡ್ಕೊಂಡು ಉಣ್ಣುವ ಆತುರದಲ್ಲಿದ್ದ ಮಂದಿಗೆ ಹಸಿವೇ ಮರೆಸುವಂತಹ ಸದ್ದು ಕೇಳಿಸ್ತು. ಅದು ರಜಾಕಾರರ ಕುದುರೆಗಳ ಖುರಪುಟದ ಸದ್ದು.

ಆ ಸದ್ದಿಗೆ ಹೆದ್ರಿ ಅದೆಷ್ಟೋ ಮಂದಿ ಮಹಾದೇವಪ್ಪ ಡುಮಣೆಯವರ ಮನೆ ಸೇರಿದ್ದರು. ಕೆಲವ್ರು ಮಾತ್ರ ಬೀದಿ, ಅಂಗಳಗಳಲ್ಲೇ ಉಳಿದಿದ್ದರು. ಉಳಿದಿದ್ದ ಮಂದಿಯಲ್ಲಿ ನಾತಪ್ಪ, ಕಾಶೆಪ್ಪ, ಸಿದ್ರಾಮಪ್ಪ, ಮಹಾರುದ್ರಪ್ಪ, ವಿಠಲರಾಯ, ನರಸಪ್ಪ ಹೀಗೆ ಹಲವಾರು ಮಂದಿಯನ್ನು ಹಿಡಿದು ಲಕ್ಷ್ಮೀ ದೇಗುಲದ ಮುಂದೆ ಕತ್ತರಿಸಲಾಯ್ತು.

ಈ ಮಹಾದುರಂತ ನಡೆದ ತಕ್ಷಣವೇ ದೆಹಲಿಯ ನಾಯಕರು ಹತ್ಯಾಕಾಂಡದತ್ತ ಗಮನ ಹರಿಸಿದ್ದ್ರು... ಗೋರ್ಟಾ ಹತ್ಯಾಕಾಂಡದಲ್ಲಿ ಹುತಾತ್ಮರಾದವ್ರ ಸ್ಮಾರಕವನ್ನೂ ಇಂದಿಗೂ ಕಾಣಬಹುದಾಗಿದೆ. ಈ ಹತ್ಯಾಕಾಂಡಕ್ಕಿಂತ್ಲೂ ಚಿರಪರಿಚಿತ ಹಾಗೂ ಸಾಕ್ಷ್ಯವಾಗಿ ಉಳಿದಿದ್ದ ಒಬ್ಬ ವ್ಯಕ್ತಿ ಹೈದ್ರಾಬಾದ್ ವಿಮೋಚನಾ ಚಳುವಳಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು.

ಹುಮ್ನಾಬಾದ್ನ ಬಸವೇಶ್ವರ ಗುಡಿ. ಯುವತಿಯೊಬ್ಬಳು ಈ ದೇಗುಲಕ್ಕೆ ಹೋಗಿ ವಾಪಾಸಾಗುತ್ತಿದ್ದಳು. ಇದೇ ವೇಳೆಗೆ ಬಂದ ರಜಾಕಾರರ ಗುಂಪು ಅವಳನ್ನು ಹಾಡಹಗಲೇ ಅತ್ಯಾಚಾರ ಮಾಡಲು ಮುಂದಾಯ್ತು. ಈ ವೇಳೆ ಒಬ್ಬ ಯುವಕ ಜೀವದ ಹಂಗು ತೊರೆದು ಆ ಹೆಣ್ಣುನ್ನು ರಕ್ಷಿಸಿದ್ದ. ಆಕೆಯ ಸಹಾಯಕ್ಕೆ ಬಂದ ಯುವಕನನ್ನು ರಜಾಕಾರರ ತಂಡ ಸಾಯುವಂತೆ ಥಳಿಸಿತ್ತು. ಅದೃಷ್ಟವಶಾತ್ ಆ ಯುವಕ ಉಳಿದುಕೊಂಡ. ನಂತರ ಸ್ವಾತಂತ್ರ್ಯ ಭಾರತದ ಸಂಸತ್ಗೆ ಬೀದರ್ ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಆಯ್ಕೆಯಾದರು. ಅವ್ರೇ ರಾಮಚಂದ್ರ ವೀರಪ್ಪ.

ಕೆ. ಎಂ. ಮುನ್ಸಿಯವರ ವರದಿ ಸಿಕ್ಕ ಕೂಡ್ಲೇ ನೆಹ್ರು ಸಕರ್ಾರ ಕಾರ್ಯಪ್ರವೃತವಾಯ್ತು. ಈ ವೇಳೆ ನೆಹರು ಸಶಸ್ತ್ರ ಕ್ರಮ ಕೈಗೊಳ್ಳಲು ಹಿಂದುಮುಂದು ನೋಡ್ತಿದ್ದಾಗ ಸದರ್ಾರ್ ಪಟೇಲ್ ಮುಲಾಜಿಲ್ಲದೇ ನುಗ್ಗಿ ಅಂತ ಗುಡುಗಿದ್ದ್ರು. ಪಟೇಲ್ರ ಆದೇಶದಂತೆ ಭಾರತೀಯ ಸೇನೆ ಹೈದ್ರಾಬಾದ್ಗೆ ಲಗ್ಗೆಯಿಡ್ತು. ಹೈದ್ರಾಬಾದ್ ಸೇನೆಯ ಮುಖ್ಯಸ್ಥ ಎಲ್ಎದ್ರೂಸ್ ಶರಣಾದ. ಈ ಮೂಲಕ ಹೈದ್ರಾಬಾದ್ ಪ್ರಾಂತ್ಯ ಭಾರತದ ಒಕ್ಕೂಟಕ್ಕೆ ಸೇರುವ ಮೂಲಕ ನಿಜಾಮನ ಮತ್ತು ರಜಾಕಾರರ ದೌರ್ಜನ್ಯದಿಂದ ಬಳಲುತ್ತಿದ್ದ ಮಂದಿಗೆ ವಿಮೋಚನೆಯಾಯ್ತು.

ಸರ್ದಾರ್​ ಪಟೇಲರ ಗಟ್ಟಿತನದಿಂದ ಕನ್ನಡ ಮಾತಾಡುವ ಮಂದಿ ಒಂದೇ ಕಡೆ ಸೇರಿ ಬಾಳುವ ಹಾಗಾಯ್ತು. ಆ ಕಾರಣಕ್ಕೆ ಸದರ್ಾರ್ ಪಟೇಲ್ಗೆ ಇಲ್ಲಿನ ಜನ್ರ ವಿಶೇಷ ಗೌರವ ಸಿಕ್ಕಿದೆ. ದೇಶ ಸ್ವತಂತ್ರವಾದ ಮೇಲೂ ಕನ್ನಡಿಗರು ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುವ ಹಾಗಾಗಿದ್ದು ಇತಿಹಾಸದ ವ್ಯಂಗ್ಯವೇ ಇರಬಹುದು. ಆದ್ರೆ ಆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕನ್ನಡಿಗರ ಕೆಚ್ಚೆದೆಯನ್ನ ಮೆಚ್ಚದೆ ಇರೋಕೆ ಸಾಧ್ಯವೇ ಇಲ್ಲ...
 
(ಕೃಪೆ-ಚಿತ್ರ ಮತ್ತು ಒಂದಷ್ಟು ಮಾಹಿತಿ ಅಂತರ್ಜಾಲದ್ದು)